ಜೀತ ಬಿಡುಗಡೆಯಲ್ಲಿ ಬಿದ್ದ ಕನಸು- ದೇವನೂರ ಮಹಾದೇವ
[ಶೋಷಿತ, (ಸಂಚಿಕೆ-03, ಪುಟ: 08, ಫೆಬ್ರುವರಿ, 1976) ಪತ್ರಿಕೆಯ ಸಂಪಾದಕರು: -ಇಂದೂಧರ ಹೊನ್ನಾಪುರ ಅವರಾಗಿದ್ದು, ದೇವನೂರ ಮಹಾದೇವ ಅವರ ” ಜೀತ ಬಿಡುಗಡೆಯಲ್ಲಿ ಬಿದ್ದ ಕನಸು” ಲೇಖನವು ಅಲ್ಲ ಮೊದಲ ಬಾರಿ ಪ್ರಕಟವಾಗಿತ್ತು. ಇದನ್ನು ಹುಡುಕಿ ನಮಗೆ ಕಳಿಸಿದ ಆರ್.ಶ್ರೀಧರ ಅವರಿಗೆ ಧನ್ಯವಾದಗಳು]
ಭಾಗ 1
ಒಂದು ಹೋಬಳಿಯಂಥ ಊರು ಅದು. ಆ ಊರಲ್ಲಿ ಇತ್ತೀಚೆಗೆ ಜೀತಗಾರರ ಬಿಡುಗಡೆಯಾಗಿತ್ತು. ಒಂದು ಬಹಿರಂಗ ಸಭೆ ಮಾಡಿ ಆ ಊರಿನ ಜೀತಗಾರರನ್ನೆಲ್ಲ ಒಟ್ಟು ಸೇರಿಸಿ ಅವರಿಗೆಲ್ಲ ಬಿಡುಗಡೆಯಾಗಿದೆ ಎಂದು ಸಾರಲಾಯ್ತು. ಜೀತಗಾರರು ತಮ್ಮ ಸವೆದುಹೋದ ತಲೆಯನ್ನು ಸವರಿಕೊಂಡು, ಮನೆಯಿದ್ದವರು ತಂತಮ್ಮ ಮನೆಗೊ ಅಥವಾ ಮನೆಯಿಲ್ಲದವರು ಮಾಮೂಲು ಮಲಗುವ ಛಾವಡಿಯಲ್ಲೋ ಉಪಸ್ಥಿತರಾಗಿದ್ದರು. ಛಾವಡಿಯಲ್ಲಿ ಸೇರಿದ್ದ ಕೆಲವರು ಪದ ಹೇಳುತ್ತಿದ್ದರು. ಕೆಲವರು ಹರಟುತ್ತಿದ್ದರು. ಕೆಲವರು ಮಲಗಿದ್ದರು. ಕೆಲವರು ಮಲಗಲು ರೆಡಿಯಾಗುತ್ತಿದ್ದರು. ಕೆಲವರು ಅವರವರ ಒಡೆಯರಿಗೆ ತಮ್ಮ ಜೀತ ಬಿಡುಗಡೆಯಿಂದ ಉಂಟಾದ ನಷ್ಟ ಎಷ್ಟು ಎಂದು ಎಣಿಸಿ ಎಣಿಸಿ ಖುಷಿಪಡುತ್ತಿದ್ದರು! ತಾವು ಒಡೆಯರಿಂದ ಪಡೆದ ಇನ್ನೂರು ಮುನ್ನೂರಕ್ಕೆ ಹುಟ್ಟಿದಾರಾಭ್ಯ ಜೀತ ಮಾಡುತ್ತಾ ಬಂದಿದ್ದರೂ ಕೂಡ, ಈಗ ಬಿಡುಗಡೆಯಾಗಿರುವುದು ತಮ್ಮ ಒಡೆಯರಿಗೆ ನಷ್ಟ ಎಂದೇ ಅವರು ಎಣಿಸುತ್ತಿದ್ದರು. ಅವರ ತಲೆಯೊಳಗಿನ ಈ ಭಾಗದ ಮೆದುಳನ್ನು ಕತ್ತರಿಸಿ ಹೊರಹಾಕಬೇಕಿತ್ತು. ಹೇಗೆಂದು ತಿಳಿಯದೆ ಏನೂ ತೋಚದೆ ನಾನಿದ್ದೆ.
ಕೊನೆಗೆ ಅವರೊಡನೆ ಮಾತನಾಡಿದೆ. ಅವರು ತುಂಬಾ ಉಲ್ಲಸಿತರಾಗಿದ್ದರು. ಇವರ ನಾಳೆಗೇನು? ನಾನು ಯೋಚಿಸುತ್ತಿದ್ದೆ. ಅವರು ಅದರ ಬಗ್ಗೆ ಯೋಚಿಸುತ್ತಿದ್ದಂತೆ ಕಾಣುತ್ತಿರಲಿಲ್ಲ. ಅಷ್ಟು ಉತ್ಕಟವಾಗಿ ಅವರು ಆ ಬಿಡುಗಡೆಯ ಕ್ಷಣದಲ್ಲಿ ಇದ್ದರು. ಅದನ್ನು ಕಂಡು ನನಗೆ ಅನ್ನಿಸಿತು ‘ಜೀತಪದ್ಧತಿ ರದ್ದು- ಆದರೆ ನಾಳೆಗೆ ಏನು?’ ಈ ಪ್ರಶ್ನೆ ಇದ್ದೇ ಇದೆ. ಇಂಥಾ ಪ್ರಶ್ನೆಗಳು ನೂರು ಇರಲಿ, ನೂರೇ ಬರಲಿ ಆದರೆ ಜೀತಪದ್ಧತಿ ರದ್ದಾಗಲಿ. ನಾವು ಜೀತ ಮಾಡುವಾಗಲೂ ಕತ್ತಲಲ್ಲಿ ಇದ್ದೆವು. ಈಗ ಜೀತ ರದ್ದಾದಾಗಲೂ ದಿಕ್ಕಿಲ್ಲದೆ ಕತ್ತಲಲ್ಲೇ ಇರಬೇಕಾಗಬಹುದು. ಈ ಎರಡು ಕತ್ತಲುಗಳಲ್ಲಿ ಎರಡನೆಯ ಕತ್ತಲೆಯೇ ಇರಲಿ.
********
ಭಾಗ – 2
ಕೆಲ ದಿನಗಳಾದ ಮೇಲೆ ಅದೇ ಊರಿನ ಅದೇ ಸ್ಥಳಕ್ಕೆ ಹೋದೆ. ಜೀತ ಬಿಡುಗಡೆ ದಿನ ನಾನು ಕಂಡಿದ್ದ ಉಲ್ಲಾಸಕ್ಕೆ ಮಂಕು ಬಡಿದಿತ್ತು. ಎಲ್ಲರೂ ನಿಸ್ಸಾರರಾಗಿದ್ದರು. ಮೊದಲಿನಷ್ಟು ಜನರೂ ಸೇರಿರಲಿಲ್ಲ. ಉಳಿದವರೆಲ್ಲಾ ಎಲ್ಲಿ ಹೋದರು? ಎಂದು ಕೇಳಿದೆ. ಹೊಟ್ಟೆಯಾಪ್ತಿಗೆ ಕಾಫಿ ತೋಟದ ಕಡೆಗೆ ದೇಶಾಂತರ ಹೋಗವರೆ ಎಂದು ತಿಳಿದುಬಂತು. ಯಾಕೆ ಇಲ್ಲಿ ಕೆಲಸ ಸಿಗುತ್ತಿಲ್ಲವಾ? ಎಂದು ಕೇಳಿದೆ. ನನ್ನ ಪ್ರಶ್ನೆ ಕೇಳಿ ಅವರು ತಳಮಳಿಸತೊಡಗಿದರು. ಆಮೇಲೆ ತಿಳಿದುಬಂತು, ಜೀತ ಬಿಡುಗಡೆಯಾದ ದಿನದಿಂದ ಯಾರನ್ನೂ ಕೆಲಸಕ್ಕೆ ಕರೆಯುತ್ತಿರಲಿಲ್ಲ. ತಮ್ಮ ಹಂಗು ತೊರೆದು ಜೀತದಿಂದ ಬಿಡುಗಡೆಯಾದವರು ಹೇಗೆ ಬದುಕುವರೋ ನೋಡುವ ಎಂಬ ಒಡೆಯರ ಕಿಚ್ಚಿಗೆ ಮಾಜಿ ಜೀತಗಾರರು ತತ್ತರಿಸಿದ್ದರು. ಈ ಜಿದ್ದು ಯಾಕೆಂದು ಅರ್ಥಮಾಡಿಕೊಳ್ಳಲು ಬಹಳ ಕಷ್ಟಪಟ್ಟೆ. ದಲಿತರ ಬಗ್ಗೆ ಈ ಜಿದ್ದು ಅಸಹನೆ ರಕ್ತಗತವಾಗಿರುವುದಕ್ಕೆ ಕಾರಣವೇನೆಂದು ಬಹಳ ಯೋಚಿಸಿದೆ. ಈ ಜಾತೀಯ ದೇಹದಲ್ಲಿ ಹಾಲಿ ಇರುವ ರಕ್ತವನ್ನು ಸಂಪೂರ್ಣ ಹೊರತೆಗೆದು ಹೊಸರಕ್ತ ಕೊಟ್ಟರೆ ಈ ಜಿದ್ದು ಅಸಹನೆ ಹೋಗುವುದೇ? ನಾ ಅರಿಯೆ.
ಜೀತಪದ್ಧತಿ ರದ್ದಾದ ಕೂಡಲೇ ಸೇಡಿನ ಭೂಮಾಲೀಕರು ಒಂದು ಕೆಲಸ ಮಾಡಿದ್ದರು, ಅದೇನೆಂದರೆ ಅವರೆಲ್ಲ ಸೇರಿ ಸಹಕಾರ ಸಂಘದಿಂದ ಮಾರಿಹಲುಬೆ, ಟ್ರಾಕ್ಟರ್ ಇತ್ಯಾದಿ ತಂದು ಜೀತಗಾರರಿಗೆ ಕೂಲಿ ಸಿಗದಂತೆ ಮಾಡಿದ್ದರು. ಜೀತದಿಂದ ಬಿಡುಗಡೆಯಾದವರಿಗೆ ಕೂಲಿಯಾದರೂ ಸಿಗುತ್ತಲ್ಲ ಎಂಬ ನನ್ನ ಎಣಿಕೆ ಉಲ್ಟಾ ಆಗಿತ್ತು. ಮಾರಿಹಲುಬೆ ಟ್ರಾಕ್ಟರು ಇತ್ಯಾದಿ ಬಂದು ಕೆಲಸಗಾರರ ಕೈಕಾಲುಗಳಿಗೆ ಕೆಲಸ ಸಿಗದಂತೆ ಮಾಡಿ ಅವರನ್ನು ಕಂಗೆಡಿಸಿತ್ತು. ಟ್ರಾಕ್ಟರ್ನಂಥ ಮಿಷನ್ನುಗಳು ಬರುವುದೆಂದರೆ ಕೆಲಸಗಾರರ ಕೈಕಾಲುಗಳನ್ನು ಕತ್ತರಿಸಿದಂತೆಯೇ ಎಂಬುದನ್ನು ಕಣ್ಣಾರೆ ಕಂಡೆ. ಕೆಲಸಗಾರರ ಜೀವ ಇರುವ ಹೊಟ್ಟೆಯ ಮೇಲೆ ಈ ಜೀವರಹಿತ ಮಿಷನ್ನು ಕ್ರೂರವಾಗಿ ಹರಿದಿತ್ತು. ಭೂ ಒಡೆಯರು ಗಹಗಹಿಸಿ ನಗುತ್ತಿದ್ದರು.
********
ಭಾಗ 3
ರಾತ್ರಿ ಬಹಳ ಹೊತ್ತಿನವರೆಗೆ ನನಗೆ ನಿದ್ರೆ ಬರಲಿಲ್ಲ. ಬೆಳಗಿನ ಜಾವದಲ್ಲಿ ಒಂದು ಕನಸು ಬಿತ್ತು. ಅದೇನೆಂದರೆ ಜೀತದಾಳುಗಳು ಕೆಲಸಗಾರರು ಸೇರಿ ಭೂಮಾಲೀಕರ ಹಾಲಿ ಭೂಮಿಯನ್ನು ಆಕ್ರಮಿಸಿಕೊಂಡಿದ್ದರು. ತಮ್ಮನ್ನೆಲ್ಲಾ ಬೀದಿಪಾಲು ಮಾಡಿದ ಅಮಾನುಷ ಟ್ರಾಕ್ಟರ್, ಮಾರಿಹಲುಬೆ ಇತ್ಯಾದಿ ಮಿಷನ್ನುಗಳನ್ನು ಪುಡಿಪುಡಿ ಮಾಡಿ ಸದೆಬಡಿಯುತ್ತಿದ್ದರು. ಎಚ್ಚರವಾದ ಮೇಲೆ ಅನ್ನಿಸಿತು- ಉಳಿಯಬೇಕಾದರೆ ಈ ಕನಸು ನನಸಾಗಬೇಕು.
