ಕಿಡಿಗೇಡಿ ಕಣ್ ನೋಟ -ದೇವನೂರ ಮಹಾದೇವ

[ಕೃಪೆ: -‘ಶೋಷಿತ’ (ಸಂಚಿಕೆ: 02, ಪುಟ: 04, ಡಿಸೆಂಬರ್ 21, 1975) ಸಂಪಾದಕರು: ಇಂದೂಧರ ಹೊನ್ನಾಪುರ.  ಇದನ್ನು ಹುಡುಕಿ ನಮಗೆ ಕಳಿಸಿದ ಆರ್.ಶ್ರೀಧರ ಅವರಿಗೆ ಧನ್ಯವಾದಗಳು]
ಯಾವುದೋ ಒಂದು ದಿನ ಯಾವುದೋ ಒಂದು ಕೆಲಸದ ನಿಮಿತ್ತವಾಗಿ ಕೋರ್ಟಿಗೆ ಹೋಗಬೇಕಿತ್ತು. ಕೋರ್ಟಿನ ಕಾಂಪೌಂಡಿಗೆ ಸೇರಿದಂತೆ ಕೆಲವು ನೆರಳಿನ ಮರಗಳಿವೆ. ಆ ಮರಗಳ ನೆರಳಲ್ಲಿ ಸುಮಾರು ಇಪ್ಪತ್ತು, ಮೂವತ್ತು ಜನ ರೌಂಡಾಗಿ ಕುಳಿತಿದ್ದರು. ಅವರು ದೂರದ ಹಳ್ಳಿಯಿಂದ ಬಂದ ರೈತರು ಎಂಬುವುದನ್ನು ಅವರ ವೇಷ ಭಾಷೆ ತಿಳಿಸುತ್ತಿತ್ತು. ಒಂದು ಬಗೆಯ ಆಕರ್ಷಣೆ ಆಗಿ ಅವರ ಬಳಿ ಹೋಗಿ ಸುಮ್ಮನೆ ನಿಂತೆ.
ಅವರೆಲ್ಲ ಯಾವುದೊ ಒಂದು ಭೂಮಿ ವ್ಯಾಜ್ಯ ಸಲುವಾಗಿ ಕೋರ್ಟಿಗೆ ಅಲೆದೂ ಅಲೆದೂ ಸುಸ್ತಾಗಿದ್ದಂಥ ರೈತರಾಗಿದ್ದರು. ಅವರಲ್ಲಿ ಎಷ್ಟೇ ಕಷ್ಟ ಪಟ್ಟು ಹೀರಿದರೂ ಒಂದು ಹನಿ ರಕ್ತವೂ ಬಾರದೇನೊ ಎಂಬಂತೆ ಒಣಗಿ ಹೋಗಿದ್ದರು. ಬಹಳ ಕೆಟ್ಟದಾಗಿ, ಎರಡು ಒಳಕೆನ್ನೆಗಳನ್ನು ಒಂದಕ್ಕೊಂದು ಅಂಟಿಸಿ ಕೊಂಡು ಬೀಡಿ ಹೊಗೆ ಎಳೆಯುತ್ತ ಬಿಡುತ್ತ, ಬಡಬಡ ಮಾತಾಡುತ್ತಿದ್ದರು. ಮಾತಿನ ಮಧ್ಯೆ ಒಬ್ಬೊಬ್ಬ ತನ್ನ ಒಣಕಲು ದೇಹಕ್ಕೆ ರೋಷ ತುಂಬಿಕೊಂಡು ಕಣ್ಣಲ್ಲಿ ಬೆಂಕಿ ಉರಿಸುತ್ತ, ಎದ್ದು ನಿಲ್ಲುತ್ತಿದ್ದರೆ ಇನ್ನೊಬ್ಬ ಬಂದು ಅವನನ್ನು ಜಗ್ಗಿ ಎಳೆದು ಕೂರಿಸುತ್ತಿದ್ದುನು. ಇದು ಹೀಗೇ ನಡೆಯುತ್ತಿತ್ತು.
ಏನಪ್ಪ ಸಮಾಚಾರ ಎಂಬುದು ಬಹಳ ಹೊತ್ತಾದ ಮೇಲೆ ನನಗೆ ತಿಳಿಯುತ್ತ ಬಂತು. ಅಣ್ಣ-ತಮ್ಮಂದಿರ ನಡುವೆ ಪಾಲಾಗಿರುವ ಆಸ್ತಿಯಲ್ಲಿ ಮೋಸ ನಡೆದಿದ್ದು ಅದಕ್ಕಾಗಿ ಅಣ್ಣ ತಮ್ಮಂದಿರಲ್ಲಿ ಒಮ್ಮತ ಹೋಗಿ ಹೊಡೆದಾಟ ಆಗಿ ಇವರಿಗೆ ತಕ್ಕಂತೆ ಊರು ಎರಡು ಹೋಳಾಗಿ ಆರೇಳು ವರ್ಷಗಳಿಂದ ಕೋರ್ಟಿಗೆ ಅಲೆದೂ ಏನೂ ಬಗೆಹರಿದಿರಲಿಲ್ಲ. ಈಗ ಅವರ ಹಾಲಿ ಆಸ್ತಿಯನ್ನೆಲ್ಲ ಮಾರಿದರೂ ಅವರ ಕೋರ್ಟು ವ್ಯವಹಾರದ ಸಾಲ ತೀರದಷ್ಟಾಗಿತ್ತಂತೆ! ಅದಕ್ಕಾಗೊ ಅಥವಾ ಬೇಸತ್ತೋ ಏನೊ ಊರ ಜನರು ಇಬ್ಬರಲ್ಲು ರಾಜಿ ಮಾಡಿಯಾರು ಈ ಸಮಸ್ಯೆಯನ್ನು ಬಗೆಹರಿಸಲು ಕೂಡಿದ್ದರು. ಈ ಕೂಡಿಕೆಯಲ್ಲಿ ಒಂದು ವಿಶಿಷ್ಟತೆ ಎಂದರೆ -ಯಾರು ತಪ್ಪಿತಸ್ಥನೊ ಅವನು ತಪ್ಪಿತಸ್ಥ ಎಂಬುದು ನೋಡಿದರೇ ತಿಳಿಯುತ್ತಿತ್ತು, ಆದರೆ ಕೋರ್ಟಿನಲ್ಲಾಗಿದ್ದರೆ ವಾದ ಪ್ರತಿವಾದಗಳ ನಡುವೆ ತಿಳಿಯುವುದು ಕಷ್ಟವಾಗುತ್ತಿತ್ತು. ಮತ್ತು ತಪ್ಪಿತಸ್ಥನೇ ಮಾತು ಮಾತಿಗೂ ಕೋರ್ಟಿನಲ್ಲೆ ತೀರ್ಮಾನವಾಗಲಿ ಎಂದು ಚಡಪಡಿಸುತ್ತಿದ್ದನು. ಮತ್ತು ಕೋರ್ಟಿನಲ್ಲಿ ಗೆಲ್ಲುವ ಭರವಸೆಯನ್ನು ಅವನು ಹೊಂದಿರುವಂತೆ ಮಾತಾಡುತ್ತಿದ್ದನು.
ಇಲ್ಲಿ ಎಲ್ಲಿ ತಪ್ಪಿದೆ? ಜನರಲ್ಲಿ? ಅಥವಾ ಕೋರ್ಟಿನಲ್ಲಿ? ಅಥವಾ ಆಸ್ತಿಯಲ್ಲಿ? ಅಥವಾ?