ಕಲೆಯಲ್ಲಿ ಸಮಾಜಕ್ಕೆ ಗುರುಗಳು ನೀವು… -ದೇವನೂರ ಮಹಾದೇವ

(ಕುಪ್ಪೆ ನಾಗರಾಜ ಅವರು ಸಂಪಾದಿಸಿರುವ 2018ರಲ್ಲಿ ಮೈಸೂರಿನ ಪ್ರೇಮಾ ಪ್ರಕಾಶನದಿಂದ ಪ್ರಕಟವಾದ “ಹಾಡೇ ಬದುಕು” ಎಂಬ ಪುಸ್ತಕದಲ್ಲಿ ದಾಖಲಾದ ದೇವನೂರ ಮಹಾದೇವ ಅವರ ಬರಹ. 2000 ನೆಯ ಇಸವಿಯಲ್ಲಿ ಮೈಸೂರು ಜಿಲ್ಲೆ, ಆನಂದೂರು ಕೊಪ್ಪಲಿನ ಯಾಚೇಗೌಡನಹಳ್ಳಿಯಲ್ಲಿ ನಡೆದ ಜಿಲ್ಲಾಮಟ್ಟದ “ದೊಂಬಿದಾಸರ ಕ್ಷೇಮಾಭಿವೃದ್ಧಿ ಯುವಕ ಸಂಘ”ದ ಉದ್ಘಾಟನಾ ಸಮಾರಂಭದಲ್ಲಿ ಮಹಾದೇವ ಅವರು ಆಡಿದ ಮಾತುಗಳ ಅಕ್ಷರ ರೂಪ. ಹುಡುಕಿ ಕಳುಹಿಸಿದ ವಿ.ಎಲ್.ನರಸಿಂಹಮೂರ್ತಿ ಅವರಿಗೆ ಧನ್ಯವಾದಗಳು.)
ಬಹಳ ಹಿಂದೆ ಚಂದಮಾಮದಲ್ಲಿ ಒಂದು ಕಥೆ ಓದಿದ್ದೆ.
ಒಬ್ಬ ದೊಡ್ಡ ವಹಿವಾಟಿನ ಗೌಡ ಇರ್ತಾನೆ. ಆತನಿಗೆ ನಾಲ್ಕು ಜನ ಮಕ್ಕಳು ಎಲ್ಲರಿಗೂ ಮದುವೆಯಾಗಿರುತ್ತೆ. ನಾಲ್ಕುಜನ ಸೊಸೆಯರಿರ್ತಾರೆ. ಏನಾಗುತ್ತೆ ಅಂದ್ರೆ, ದೊಡ್ಡ ವಹಿವಾಟು, ಭೂಮಿ ಕಾಸು ಜಾಸ್ತಿ ಇರ್ತದೆ ಮತ್ತು ಗೌಡನಿಗೆ ವಯಸ್ಸಾಗಿರುತ್ತೆ. ಮುಂದೆ ಯಾವ ತರ ಪಾಲು ಕೊಡೋದು ತನ್ನ ಮಕ್ಕಳಿಗೆ ಅಂತ ಯೋಚ್ನೆ ಆಗ್ತಿರ್ತದೆ. ಗಂಡ ಹೆಂಡತಿ ಕುಳಿತು ಯೋಚ್ನೆ ಮಾಡ್ತಾರೆ. ಗೌಡ ಒಂದು ಉಪಾಯ ಮಾಡ್ತಾನೆ. ನಾಲ್ಕು ಜನ ಸೊಸೆಯರನ್ನು ಕರೆಸಿ “ನೋಡ್ರಮ್ಮ ನಾನು ನಿಮ್ಗೆಲ್ಲಾ ಒಂದು ಹಿಡಿ ಭತ್ತ ಕೊಡುತ್ತೀನಿ ನೀವು ಏನ್ಮಾಡ್ಬೇಕು ಅಂದ್ರೆ ಒಂದು ವರ್ಷ ಆದ ಮೇಲೆ ಆ ಭತ್ತನಾ ನನಗೆ ವಾಪಾಸ್ಸು ಕೊಡ್ಬೇಕು’ ಅಂತಾನೆ.
ಒಂದು ವರ್ಷ ಆಗುತ್ತೆ. ಮೊದಲನೇ ಸೊಸೆನ ಕೇಳ್ತಾನೆ, ಅವಳು ಹೇಳ್ತಾಳೆ ”ಮನೇಲಿ ಇಷ್ಟೊಂದು ಭತ್ತ ತುಂಬಿದೆ ನೀವು ಸುಮ್ನೆ ಹೇಳುತ್ತೀರಿ ಅಂತ ಎಸೆದು ಬಿಟ್ಟೆ” ಅಂತ ಹೇಳ್ತಾಳೆ. ಎರಡನೇ ಸೊಸೆನ ಕೇಳ್ತಾನೆ, ಅದಕ್ಕೆ ಅವಳು “ಮಾವ ಚನ್ನಾಗಿತ್ತಲ್ಲ ಅದಕ್ಕೆ ಅದನ್ನು ಅಡಿಗೆ ಮಾಡ್ತ ತಿಂದುಬಿಟ್ಟೆ” ಅಂತ ಹೇಳ್ತಾಳೆ. ಮೂರನೇ ಸೊಸೆಗೆ ಕೇಳ್ತಾನೆ, ಅವಳು ಹೇಳ್ತಾಳೆ. “ಅದನ್ನು ನಾನು ಜೋಪಾನವಾಗಿ ಒಂದು ಪೆಟ್ಟಿಲಿ ಇಟ್ಟಿದ್ದೀನಿ” ಎಂದು ಅದನ್ನು ತಂದು ಮಾವನಿಗೆ ಒಪ್ಪಿಸುತ್ತಾಳೆ. ಕೊನೆಗೆ ನಾಲ್ಕನೆೇ ಸೊಸೆ ಕೇಳ್ತಾನೆ. ಅವಳು ಹೇಳುತ್ತಾಳೆ, “ಮಾವ ಒಂದು ದಿನ ಟೈಮ್ ಕೊಡಿ ಅಂತ ಹೇಳ್ಬಿಟ್ಟು, ಅವಳ ತವರಿಗೆ ಗಾಡಿ ಕಟ್ಟಿಕೊಂಡು ಹೋಗಿ ಒಂದು ಗಾಡಿಯಲ್ಲಿ ಹುಲ್ಲು ಇನ್ನೊಂದು ಗಾಡಿಯಲ್ಲಿ ಭತ್ತ ಎಲ್ಲಾನು ತತ್ತಾಳೆ. “ನೋಡಿ ಮಾವ ನೀವು ಕೊಟ್ಟ ಭತ್ತನಾ ನನ್ನ ತವರಿನಲ್ಲಿ ಬೆಳೆದು ಇಟೋಂದು ಆಯ್ತು, ಭತ್ತ ಹುಲ್ಲು ಎಲ್ಲಾನು ತಂದಿದ್ದೀನಿ, ತಕ್ಕಳಿ” ಅಂತಾಳೆ. ಮಾವ ಏನ್ಮಾಡುತ್ತಾನೆ. ಬತ್ತಾನ ಯಾರು ಕೆಲಸ ಮಾಡ್ತಾ ಮಾಡ್ತಾ ತಿಂದು ಬುಟ್ಟಳೋ ಆಕೆಗೆ ವಿಶೇಷವಾಗಿ ಅಡಿಗೆ ಮಾಡೋ ಕೆಲ್ಸಾ ಕೊಡ್ತಾನೆ. ಯಾರು ಎಸ್ದು ಬಿಟ್ಳೋ ಅವಳಿಗೆ ಮನೆ ಕಸಗುಡಿಸೋದು, ವಪ್ಪವಾರಣ ಮಾಡೋದು ಈ ಕೆಲಸ ಕೊಡ್ತಾನೆ. ಯಾರು ವಡವೆ ವಸ್ತ್ರ ಕಾಪಾಡಿಡೋದು, ಒಂದು ಹಿಡಿಕೊಟ್ರೆ ಒಂದು ಹಿಡಿಕೊಟ್ಲಲ್ಲಾ ಅವಳಿಗೆ ವಡವೆ ವಸ್ತ್ರಗಳನ್ನು ಮನೆ ಜೋಪಾನ ಮಾಡೊ ಕೆಲಸ ಕೊಡ್ತಾನೆ. ಯಾರು ಹಿಡಿಕೊಟ್ರೆ ಅದನ್ನು ಹೆಚ್ಚಗೆ ಮಾಡುದ್ಲೋ ಅವಳಿಗೆ ಇಡೀ ಮನೆಯ ಜಮೀನಿನ ಉಸ್ತುವಾರಿ ಕೊಟ್ಟ. ಇದನ್ನೆಲ್ಲಾ ನೋಡಿ ಅವನು ಒಂದು ಮಾತೇಳ್ತಾನೆ. ”ನೋಡಿ ಮಕ್ಕಳಾ ಇದರಲ್ಲಿ ಯಾವುದೇ ಒಂದು ಕೆಲಸ ಮೇಲು ಅಲ್ಲಾ, ಯಾವುದು ಕೀಳು ಅಲ್ಲಾ, ಇವು ಒಂದಕ್ಕೊಂದು ಪೂರಕ, ಇವೆಲ್ಲಾ ಸೇರಿದ್ರೇನೆ ಜೀವನ, ಇವೆಲ್ಲಾ ಸೇರಿದ್ರೇನೇ ಒಂದು ಕುಟುಂಬ” ಅಂತಾನೆ.
ಆದರೆ ದುರದೃಷ್ಟವಶಾತ್ ಏನಾಗದೆ ಅಂದ್ರೆ, ಇದರಲ್ಲೇ ಮೇಲು-ಕೀಳು ಅಂತ ನನ್ನ ಕೆಲ್ಸ ಹೆಚ್ಚು ನಾನು ಮೇಲು ನಿನ್ನ ಕೆಲ್ಸ ಕೀಳು ನೀನು ಕೀಳು ಹಿಂಗಾಯ್ತು. ದನಕಾಯಕ್ಕೆ ಅಂತ ಹೋದ ಅವನು ಗೊಲ್ಲ ಆದ. ನೀನು ಕುರಿ ಚೆನ್ನಾಗಿ ಕಾಯ್ತಿ ಕಣಪ್ಪ ಅಂತ ಕಳುಹಿಸಿದರೆ ಆ ಮಗ ಕುರುಬ ಆಗುಬುಟ್ಟಾ. ನೀನು ಮಡಕೆ ಚೆನ್ನಾಗಿ ಮಾಡ್ತೀಯ ಕಣಪ್ಪ ಅಂದ್ರೆ ಅವನು ಕುಂಬಾರ ಆಗುಬುಟ್ಟಾ. ನೀನು ಚಪ್ಪಲಿ ಚೆನ್ನಾಗಿ ಮಾಡ್ತಿ ಮಗನೇ ಅಂತ ಕಳಿಸಿದರೆ ಅವನು ಮಾದಿಗ ಆಗುಬುಟ್ಟಾ. ಹಿಂಗೆ ಒಂದೇ ಕುಟುಂಬ ಮೂರಾಬಟ್ಟೆ ಆಯ್ತು. ಹೀಗೆ ಒಂದೊಂದು ವೃತ್ತಿ ಹಿಡಿದವರು ತಾನು ಮೇಲು ತಾನು ಕೀಳು ಅಂತ ಒಬ್ಬರನ್ನೊಬ್ಬರು ದ್ವೇಷ ಮಾಡೋಕೇ ಶುರು ಮಾಡಿದರು.
ಇದು ಭಾರತಕ್ಕೆ ತಗುಲಿದ ಶಾಪ. ಯಾರು ಮೇಲು ಅಲ್ಲ, ಯಾರು ಕೀಳು ಅಲ್ಲ. ಎಲ್ಲರೂ ಒಬ್ಬರಿಗೊಬ್ಬರು ಪೂರಕ ಅನ್ನೋತರ ಇದ್ದಿದ್ದರೆ ಇಡೀ ಜಗತ್ತಿನಲ್ಲಿ ಭಾರತದ ಮಟ್ಟಕ್ಕೆ ಯಾವ ದೇಶನೂ ಬರಕಾಗ್ತಿರಲಿಲ್ಲವೇನೋ! ಅಷ್ಟೊಂದು ಪ್ರತಿಭೆ ಇದೆ. ಈಗ ದೊಂಬಿದಾಸರನ್ನು ರಾಗ ಚೆನ್ನಾಗಿ ಹಾಡ್ಕಳ್ಳಿ ಅಂತ ಹೇಳಿದರೆ ತಾವೇ ಜನಾಂಗ ಆಗೋದ್ರು. ತುಂಬಾ ಚೆನ್ನಾಗಿ ಹಾಡೆಳ್ತಾರೆ. ನಾಟಕ ಮಾಡ್ತಾರೆ ಅಂದ್ರೆ, ಅದೇ ಒಂದು ಜನಾಂಗ ಆಗೋಯ್ತು. ಅಂಗೇ ಆಗಿರೋದು. ಎಲ್ಲಾ ಒಂದೇ ಮನೆಯವರಾಗಿ ಕುಂತಿದ್ದೀವಿ. ಇದು ಮೇಲು ಕೀಳು, ಇದು ಶಾಪ, ಭಾರತಕ್ಕೆ ಇದೊಂದು ಕಳಂಕ, ಇದೊಂದು ಶಾಪ ಇದು ತೊಡಿಬೇಕು ಅಂತ ಅಂಬೇಡ್ಕರ್, ಲೋಹಿಯಾ, ಗಾಂಧಿ ಕೂಡಾ ಹೇಳಿದ್ರು.
ಈಗ ಬಂದು ನೀವು ನೋಡಿರಬಹುದು. ಗಂಗೋತ್ರಿಯಲ್ಲಿ ಟೆಂಟು ಹಾಕಿ ವಾಸಿಸೋ ಒಂದಿಷ್ಟು ಜನ ಇದ್ದಾರೆ. ಕೂದಲು ಮಾರೋರು, ಬಾಚಣಿಗೆ ಮಾರೋರು ಟೆಂಟು ಕಟ್ಟಿಕೊಂಡಿರುತ್ತಾರೆ. ಮತ್ತೇ ಹೊಂಟೋಯ್ತರೇ. ಕರಿಮಣಿ ಮಾರೋರು ಬತ್ತರೇ. ಅವರು ನೋಡಿದರೆ ನನಗೇನಸುತ್ತೆಂದರೆ ಒಂದು ಕಾಲದಲ್ಲಿ ಅವರೇ ಮುಂದುವರೆದ ಜನಾಂಗ. ಆರ್ಯರು ಅಂತ, ನೋಡಿ ಅವರು ಬೆಳ್ಳಗೆ ಇರ್ತಾರೆ ಮತ್ತು ಗಟ್ಟಿಮುಟ್ಟಾಗಿ ಕೆಲಸ ಮಾಡ್ತಾ ಗಟ್ಟಿಮುಟ್ಟಾಗಿ ಇರ್ತಾರೆ. ವ್ಯಾಪಾರ, ವಲಸೆ ಪ್ರವೃತ್ತಿ ಅದಕ್ಕೆ ಒಂದು ಕಾಲದಲ್ಲಿ ಅವರೇ ಮುಂದುವರೆದ ಜನಾಂಗ ಇರಬೇಕು. ನಾಗರಿಕತೆಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹರಡುತ್ತಿದ್ದ ಜನಾಂಗ. ಆದರೆ ಕಾಲದ ಚಲನೆಯೊಟ್ಟಿಗೆ ಅವರು ಸೇರಿಕೊಳ್ಳಲಿಲ್ಲ. ಹಂಗೆ ಉಳಕಂಬುಟ್ರು, ಅದರಿಂದ ಏನಾಯಿತೆಂದರೆ ಈಗ ಒಂದು ಹೊಸ ಹೆಣಾನ ಮಂಜುಗಡ್ಡೆಗೆ ಹಾಕಿಬುಟ್ರೆ ಹಂಗೆ ಇರ್ತಾವಲ್ಲಾ ಹಂಗೇ ಹಂಗಾಗಬುಟ್ಟವರೆ. ಈಗ ಆಫ್ರಿಕಾದಲ್ಲಿ ಹಾಡುಗಾರರಿದ್ದಾರೆ. ಜನಪದ ಹಾಡುಗಾರರು. ಹಾಡುಗಾರಿಕೆ ಲಯ ತಕ್ಕೊಂಡು ಅಮೆರಿಕಾದ ಕಪ್ಪು ಜನಾಂಗದವರು ಆ ಲಯವನ್ನು ಈ ಕಾಲಮಾನಕ್ಕೆ ಹೊಂದಿಸಿ ಹಾಡುವುದರಿಂದ ಇಡೀ ಅಮೆರಿಕಾದಲ್ಲಿ ಕಪ್ಪುಜನಾಂಗದ ಹಾಡುಗಾರರು ಎಂದರೆ ಹುಚ್ಚೆದ್ದು ಕುಣಿಯುತ್ತಾರೆ. ತಾವೇನು ಮಾಡಬೇಕೆಂದರೆ ಇದೇ ಲಯಗಳನ್ನು, ಇದೇ ಪ್ರತಿಭೆಯನ್ನು ತಗೊಂಡು ಈ ಕಾಲಮಾನಕ್ಕೆ ಜೋಡಿಸಬೇಕು. ಜೋಡಿಸದೇ ಇದ್ದರೆ ಏನಾಗ್ತದೆ ಎಂದರೆ ಹಳೇ ಪಳಿಯುಳಿಕೆ ಅಂಗೆ ಉಳಿಯಬೇಕಾಗುತ್ತದೆ. ಪ್ರತಿಭೆ ಅದು ಒಂದೇ, ಇದು ಒಂದೇನೆ. ಈ ಕಾಲಮಾನದ ಓಟದ ಜೊತೆಗೆ ಈ ಪ್ರತಿಭೆಯನ್ನು ಸೇರಿಸಿ ಜೋಡಿಸಬೇಕು ಎಂಬ ಕಡೆಗೆ ನೋಡುವುದು ಇಂದಿನ ಸವಾಲು.
ಒಂದು ರೀತಿಯಲ್ಲಿ ಇಡೀ ಊರನ್ನೇ ಗೆದ್ದವರು ನೀವು, ಬ್ಯಾರೇ ಜಾತಿಯವರಿಗೆ ಒಬ್ರು ಕಂಡರೆ ಒಬ್ರಿಗೆ ಆಗಲ್ಲ. ನಿಮ್ಮನ್ನು ಎಲ್ಲರೂ ಗೌರವಿಸುತ್ತಾರೆ. ಇದನ್ನು ಅದೃಷ್ಟ ಅಂದ್ಕೋಬೇಕು. ಹುಡುಗಾಟದ ಮಾತಲ್ಲ, ಸಾಮಾನ್ಯ ಸಂಗತಿಯಲ್ಲ, ಎಲ್ಲರಿಗೂ ಸಿಗುವಂತದಲ್ಲ. ಅಂತ ಅಪರೂಪವಾದಂತ ಗುಣ ಮತ್ತು ಅದೃಷ್ಟ ತಮಗಿದೆ. ಏನು ಮಾಡಬೇಕು ಅಂತಂತಂದ್ರೆ ಇದೇ ಪ್ರತಿಭೆಯನ್ನು ಉದಾಹರಣೆಗೆ ಇದೇ ಪ್ರತಿಭೆಗಳನ್ನು ಮತ್ತೆ ಹೊಸದಾಗಿ ಅಳವಡಿಸಿ ಸಮುದಾಯವೇ ಚಾಲ್ತಿ ಹಾಡುಗಾರರಾಗಲು, ಕಲಾವಿದರಾಗಲು ಸಾಧ್ಯವಿಲ್ಲವೇ?
ಒಂದಷ್ಟು ಜನ ಹಾರ್ಮೋನಿಯಂ ಭಾರ್ಸತಾರಪ್ಪ ಅವ್ರು ಹಾರ್ಮೋನಿಯಂ ಮೇಷ್ಟ್ರಾಗಕ್ಕಾಗಲ್ವಾ? ಕರ್ನಾಟಕ ಹಿಂದೂಸ್ಥಾನಿ ಸಂಗೀತ ಕಲಿತ ಒಬ್ಬ ಸುಗಮ ಸಂಗೀತ ಹಿನ್ನೆಲೆ ಇರೋರು ನೀವು ಗುರುಗಳಾಗಬೋದು.
ಇಡೀ ಸಮಾಜಕ್ಕೆ ಗುರುಗಳಾಗಬೋದು, ಇಂತಹ ಭಾವನೆ ಇರಬೇಕೆ ಹೊರತು ಬೇರೆ ತರ ಹೋದ್ರೆ ನಮ್ಮನ್ನು ನಾವೇ ನಷ್ಟ ಮಾಡಿಕೊಳ್ತಿವಿ.
ಇಂತಹ ಪರಿಸ್ಥಿತಿಯಲ್ಲಿ ವಿದ್ವಾಂಸರುಗಳು ಏನು ಮಾಡ್ಬೇಕು? ಎತ್ತ ಮಾಡ್ಬೇಕು? ಅಂತ ಹೇಳಿ ಈ ಪ್ರತಿಭೆಯನ್ನು ಏನು ಮಾಡ್ಬೇಕು? ಯಾವ ಚಾನೆಲ್‌ನಲ್ಲಿ ಬಳಸಬೇಕೋ, ಹೇಗೆ ಬಳಸಬೇಕೋ ಅಂತ ಆಲೋಚನೆ ಮಾಡ್ಬೇಕು.
ಯಾವುದೇ ಒಂದು ವೃತ್ತಿ ಮಾಡ್ತಿರುವಾಗ ಆ ವೃತ್ತಿ ತಪ್ಪಿಸುವ ವ್ಯವಸ್ಥೆ ಬಂದುಬಿಟ್ರೆ ಅಂಗವಿಕಲತೆ ಉಂಟಾಗುತ್ತದೆ. ಅಂಗವಿಕಲತೆ ಅಂದರೆ ಕಣ್ಣು, ಕೈಕಾಲು ಕಳಕಂಡಂಗೆ. ಇಲ್ಲೂ ದೊಂಬಿದಾಸ ಕಲಾವಿದ ವೃತ್ತಿಗೆ ಸಂಚಕಾರ ಬಂದಿದೆ. ಹಾಗಾಗಿ ಇದು ಅಂಗವಿಕಲತೆಯೇ. ಸರ್ಕಾರಕ್ಕೆ ಈ ಪರಿಕಲ್ಪನೆ ಮನದಟ್ಟು ಮಾಡಿಕೊಡಬೇಕು.
ಈ ಪ್ರತಿಭೆಯನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದು ನಮ್ಮ ಮುಂದೆ ಇದೆ. ಅದಕ್ಕಾಗಿ ನಾನಾ ದಿಕ್ಕು ಹುಡುಕಬೇಕಾಗಿದೆ.
ಇನ್ನೊಂದು ಅಂದರೆ ಒಂದು ಲಕ್ಷದೊಳಗಿರುವಂತ ಕಲಾವಿದ ಅವಿದ್ಯಾವಂತ ಬಡತನದ ಜನಸಂಖ್ಯೆ ಯಾವ ಯಾವ ಜನಾಂಗ ಇದಾವೇ ಅವರನ್ನು ಒಟ್ಟಾಗಿ ಕೂಡಿಸುವ ಪ್ರಯೋಗಗಳ ಮಾಡಿ ಕಲೆ ಮುಖಾಂತರವೇ ಈ ಸಮಾಜವನ್ನು ಗೆಲ್ಲುವಂತ ಕೆಲಸ ಆಗ್ಲಿ ಅಂತ ಹೇಳಿ ಆಸೆಪಡುವೆ.