ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ಪ್ರಥಮ ರಾಜ್ಯ ಸಮ್ಮೇಳನ-ಕರಪತ್ರ
[ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ಪ್ರಥಮ ರಾಜ್ಯ ಸಮ್ಮೇಳನ-ಕರಪತ್ರ. ಇದನ್ನು ಹುಡುಕಿ ನಮಗೆ ಕಳುಹಿಸಿ ಕೊಟ್ಟ ಆರ್.ಶ್ರೀಧರ್ ಅವರಿಗೆ ಧನ್ಯವಾದಗಳು.
ಫೋಟೋ: ಕೋಲಾರದಲ್ಲಿ ಫೆಬ್ರವರಿ 13 ಮತ್ತು 14, 1983 ರಂದು ನಡೆದ ದಲಿತ ವಿದ್ಯಾರ್ಥಿ ಒಕ್ಕೂಟದ ಪ್ರಥಮ ರಾಜ್ಯ ಸಮ್ಮೇಳನದಲ್ಲಿ- ಸವಿತಾ ಅಂಬೇಡ್ಕರ್, ದೇವನೂರ ಮಹಾದೇವ, ರಾಮದಾಸ್ ಅಠವಲೆ, ಬಿ.ಕೃಷ್ಣಪ್ಪ.]
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರ ಧಾರೆ ಇಂದು ಲಕ್ಷೋಪಲಕ್ಷ ಶಾಖೆಗಳಾಗಿ ಎಚ್ಚೆತ್ತ ದಲಿತರ ಗುಂಡಿಗೆಗಳಲ್ಲಿ ಮಾನವೀಯ ನೆತ್ತರನ್ನು ತುಂಬುತ್ತಿದೆ. ದಲಿತ ವಿಮೋಚನೆಯ ಮಹಾನ್ ಸೂರ್ಯವಾಗಿ ಬಲಿಯುತ್ತಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖ್ಯ ಅಂಗವಾಗಿ ಮೈದಳೆಯುತ್ತಿರುವಂತದ್ದು- ದಲಿತ ವಿದ್ಯಾರ್ಥಿ ಒಕ್ಕೂಟ. ಮಾನಸಿಕ- ದೈಹಿಕ ಹಿಂಸೆಗಳನ್ನೇ ಉಂಡು, ಅವಮಾನಗಳನ್ನು ನುಂಗಿ ಹಸಿವು, ಅತ್ಯಾಚಾರಗಳ ತುಳಿತದಲ್ಲಿ ಅರೆಜೀವವಾಗಿರುವ ದಲಿತರ ನಡುವೆ ಆಲೋಚನೆಗಳ ಹೋರಾಟದ ಕಿಚ್ಚು ಹೊತ್ತಿಸಬೇಕಾದ ಹೊಣೆಗಾರಿಕೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿರುವುದು ಎಚ್ಚೆತ್ತ ದಲಿತ ಪ್ರಜ್ಞೆಗೆ ಸಾಕ್ಷಿ.
ನಮ್ಮ ನಿಸ್ಸಾಹಯಕ ರಕ್ತ ಬಂಧುಗಳ ಮೇಲಿನ ದಿನನಿತ್ಯದ ಹತ್ಯಾಕಾಂಡಗಳು ಹಾಗೂ ಅಬಲೆಯರಾದ ನಮ್ಮಕ್ಕ ತಂಗಿಯರ ಮೇಲಿನ ಅತ್ಯಾಚಾರಗಳ ಸರಮಾಲೆಯ ವಿರುದ್ಧ ನಾವು ಪ್ರತಿಯೊಬ್ಬರೂ ಬಂದೂಕಿನಲ್ಲಿ ಲೋಡು ಮಾಡಿದ ಬುಲೆಟ್ಟುಗಳಂತೆ ಪ್ರತಿಭಟನೆಗೆ ಸಿದ್ಧರಾಗಬೇಕಾದ ಅತ್ಯವಸರವಿದೆ. ಭೂಮಾಲೀಕರ ಹೊಲ ಗದ್ದೆಗಳಲ್ಲಿ ಇನ್ನೂ ಜೀತದಾಳುಗಳಾಗಿಯೋ ನಮ್ಮ ಹೆತ್ತವರು ಕೆಂಬೆವರು ಸುರಿಸುತ್ತಿದ್ದಾರೆಂಬ- ಎದೆ, ಮೆದುಳುಗಳನ್ನು ಹಿಂಡುವ ನೆನಪು, ದಲಿತ ವಿದ್ಯಾರ್ಥಿ ಒಕ್ಕೂಟದಂತಹ ಬಲಿಷ್ಠ ಯುವ ಸಂಘಟನೆದು ಬೇರುಗಳಾಗಬೇಕಿದೆ. ಇಂಥ ನೂರಾರು ನೋವುಗಳ ನಡುವೆ ಪ್ರತಿಕ್ಷಣ ಬವಣೆ ಪಡುವ ದಲಿತ ವಿದ್ಯಾರ್ಥಿಯಿಂದು ವ್ಯಾಸಂಗಕ್ಕೆ ತಕ್ಕ ಕನಿಷ್ಠ ಅನುಕೂಲತೆಗಳಿಂದಲೂ ವಂಚಿತನಾಗಿದ್ದಾನೆ. ಅವನಿಗೆ ಸಲ್ಲಬೇಕಾದ ಸಂವಿಧಾನ ಬದ್ಧ ಹಕ್ಕುಗಳಿಗಾಗಿ ಕೂಡ ನಾವಿಂದು ದಲಿತ ವಿದ್ಯಾರ್ಥಿ ಒಕ್ಕೂಟದ ಮೂಲಕವೇ ಹೋರಾಡಿ ಪಡೆಯಬೇಕಿದೆ.
ರಾಜ್ಯಾದ್ಯಂತ ಕಾಲೇಜುಗಳಲ್ಲಿ 40000 ಕ್ಕೂ ಹೆಚ್ಚು ದಲಿತ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆಂದರೆ ದಲಿತ ವರ್ಗದಲ್ಲಿನ ಅರಿವಿನ ದಾಹವನ್ನಿದು ತೋರಿಸುತ್ತದೆ. ಆದರೆ ದಲಿತೋದ್ಧಾರದ ಘೋಷಣೆಗಳನ್ನು ಕೂಗುವ ವಂಚಕ ಸರ್ಕಾರಗಳು ವಿದ್ಯಾರ್ಥಿ ನಿಲಯಗಳಿಗಾಗಿ ಸ್ವಂತ ಕಟ್ಟಡ ಕಟ್ಟಿಸಿ ಕೊಡದೆ ಬಾಡಿಗೆ ಕಟ್ಟಡಗಳಲ್ಲಿಯೇ ಕಾಲ ನೂಕುತ್ತಿದೆ. ಇದರಿಂದಾಗಿ ಕಟ್ಟಡಗಳ ಮಾಲೀಕರು ಲಕ್ಷಾಂತರ ರೂ.ಗಳನ್ನು ಕೊಳ್ಳೆ ಹೊಡೆಯುವಂತಾಗಿದೆ. ಅನೇಕ ಜಿಲ್ಲಾ ಕೇಂದ್ರಗಳಲ್ಲೂ ದಲಿತ ವಿದ್ಯಾರ್ಥಿಗಳಿಗೆ ಸರ್ಕಾರ ಹಾಸ್ಟೆಲ್ ಕಟ್ಟಿಸಿಕೊಟ್ಟಿಲ್ಲ. ದಲಿತ ವಿದ್ಯಾರ್ಥಿನಿಯರಂತೂ ನಾನಾ ಬಗೆಯ ಅಮಾನವೀಯ ಹಿಂಸೆಗಳನ್ನು ಅನುಭವಿಸುತ್ತಿದ್ದಾರೆ. ಇಲ್ಲಿ ಒದಗಿಸುತ್ತಿರುವ ಆಹಾರ ಎಷ್ಟೊಂದು ಕೀಳು ಮಟ್ಟದ್ದಾಗಿದೆಯೆಂದರೆ ಪ್ರತಿ ವರ್ಷವೂ ನೂರಾರು ವಿದ್ಯಾರ್ಥಿಗಳು ಕರುಳುಬೇನೆ ಮುತ್ತಿತರ ಖಾಯಿಲೆಗಳಿಂದಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ.
ಇವುಗಳ ಮಧ್ಯೆ ದಲಿತ ಪುಡಾರಿಗಳು ನುಸುಳಿ ನಾಜೂಕಾಗಿ ಖಾಸಗಿ ವಿದ್ಯಾಸಂಸ್ಥೆ, ಹಾಸ್ಟೆಲುಗಳ ನೆಪದಲ್ಲಿ ಸರ್ಕಾರಿ ಖಜಾನೆಯನ್ನು ಜೇಬಿಗೆ ತುಂಬಿಸಿಕೊಳ್ಳುತ್ತ- ಅಮಾಯಕ ದಲಿತ ವಿದ್ಯಾರ್ಥಿಗಳನ್ನು ಸುಲಿಯುತ್ತಿದ್ದಾರೆ. ಜೊತೆಗೆ ಸಮಾಜ ಕಲ್ಯಾಣ ಇಲಾಖೆಯ ಬಹುತೇಕ ಅಧಿಕಾರಿಗಳು ಭ್ರಷರಾಗಿ ಈ ಇಲಾಖೆಯನ್ನೇ ದಲಿತ ವಿರೋಧಿ ಇಲಾಖೆಯೆಂದು ಕರೆಯಬಹುದಾಗಿದೆ. ಇದಲ್ಲದೆ ಕ್ಯಾಪಿಟೇಷನ್ ಪೀಡೆಯಿಂದಾಗಿ ಉನ್ನತ ವ್ಯಾಸಂಗವೆಂಬುದು ದಲಿತರ ಪಾಲಿನ ಗಗನ ಕುಸುಮವಾಗುತ್ತಿದೆ. ವಿಶ್ವವಿದ್ಯಾನಿಲಯಗಳಲ್ಲೂ ದಲಿತ ವಿದ್ಯಾರ್ಥಿಗಳ ಬಗ್ಗೆ ಅಸ್ಪೃಶ್ಯತೆಯನ್ನು ಆಚರಿಸಲಾಗುತ್ತಿದೆ.
ಈ ಎಲ್ಲಾ ಸಮಸ್ಯೆಗಳ ವಿರುದ್ಧ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟವೊಂದೇ ಏಕೈಕ ದಾರಿಯೆಂಬುದು ಇದುವರೆಗಿನ ಅನುಭವ ನಮಗೆ ಕಲಿಸಿರುವ ಪಾಠವಾಗಿದೆ. ದಲಿತರ ಸಮಗ್ರ ವಿಮೋಚನೆಗಾಗಿ ಗಂಭೀರ ಚರ್ಚೆ ನಡೆಸುವ ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟದ ಪ್ರಥಮ ರಾಜ್ಯ ಸಮ್ಮೇಳನ- ದಲಿತ ಹೋರಾಟಗಳ ಐತಿಹಾಸಿಕ ನೆಲವಾದ ಕೋಲಾರದಲ್ಲಿ ಫೆಬ್ರವರಿ 13 ಮತ್ತು 14 ರಂದು ನಡೆಯಲಿದೆ. ಕರ್ನಾಟಕದಾದ್ಯಂತ ಇರುವ ಎಲ್ಲಾ ದಲಿತ ವಿದ್ಯಾರ್ಥಿಗಳೂ, ದಲಿತ ನೌಕರರೂ ಮತ್ತು ಯುವಕರು ಈ ಸಮ್ಮೇಳನದಲ್ಲಿ ಭಾಗವಹಿಸಿ ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಬೇಕೆಂದು ಕೋರಲಾಗಿದೆ.
ವ್ಯವಸ್ಥೆ: ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟ

