ಕಾವೇರಿ ಜಲವಿವಾದದ ಸಂದರ್ಭದಲ್ಲಿ- ಕೆ. ರಾಮದಾಸ್

[ಕೆ. ರಾಮದಾಸ್ ಅವರು -‘ಕುವೆಂಪು- 90’ (ಸಾಂಸ್ಕೃತಿಕ ನೆನಪು, ಶೂದ್ರ ವಿಶೇಷಾಂಕ, ಪುಟ: 69-71, ಸಂಚಿಕೆ: 08-09, ಸಂಪುಟ: 23, ಫೆಬ್ರವರಿ-ಮಾರ್ಚ್, 1995) ಕೃತಿಯಲ್ಲಿ ಬರೆದ ಒಂದು ವಿವರ.
 ಸಂಪಾದಕರು: ಶೂದ್ರ ಶ್ರೀನಿವಾಸ್. ಇದನ್ನು ಹುಡುಕಿ ನಮಗೆ ಕಳಿಸಿದ ಆರ್.ಶ್ರೀಧರ ಅವರಿಗೆ ಧನ್ಯವಾದಗಳು]
“ಕಾವೇರಿ ಜಲವಿವಾದದ ಸಂದರ್ಭದಲ್ಲಿ ಮೈಸೂರು ಜಿಲ್ಲೆಯ ಗಡಿ ಪ್ರದೇಶದ ತಾಲ್ಲೂಕುಗಳಲ್ಲಿ ಭಯಂಕರ ಹಿಂಸಾಚಾರ ತಾಂಡವವಾಡಿತ್ತು. ದೇವನೂರ ಮಹಾದೇವ, ಬಿ.ಎನ್‌. ಶ್ರೀರಾಮ್‌ ಮತ್ತು ನಾನು ಜಿಲ್ಲಾಧಿಕಾರಿಯಾಗಿದ್ದ ಸಿದ್ದಯ್ಯನವರ ಮನೆಗೆ ಹೋಗಿದ್ದಾಗ, ಶಾಂತಿ ಕಾಪಾಡುವಂತೆ ಕುವೆಂಪು ಮುಂತಾದ ಹಿರಿಯರಿಂದ ಜನರಿಗೆ ತಿಳಿವಳಿಕೆ ಹೇಳಿಸಿದರೆ ಸ್ವಲ್ಪ ಅನುಕೂಲವಾಗಬಹುದೆಂದು ಸೂಚಿಸಿದರು.
ನಾವು ಯು.ಆರ್‌. ಅನಂತಮೂರ್ತಿಯವರ ಜೊತೆ ಸಮಾಲೋಚಿಸಿ ಒಂದು ಶಾಂತಿಪಾಲನೆಯ ಮನವಿ ತಯಾರಿಸಿಕೊಂಡು ಕುವೆಂಪು ಅವರ ಸಹಿ ಪಡೆಯಲು ಅವರ ಮನೆಗೆ ಹೋದೆವು. ಕುವೆಂಪು ಆರೋಗ್ಯ ಸರಿ ಇರಲಿಲ್ಲ. ತಾರಿಣಿಯವರ ಮೂಲಕ ಪರಿಸ್ಥಿತಿ ವಿವರಿಸಿ, ಕುವೆಂಪು ಅವರಿಗೆ ಮನವಿಯನ್ನು ಓದಿ ಹೇಳಿದೆವು. ಅವರು ಸಹಿ ಮಾಡಲು ಪೆನ್ನು ಹಿಡಿದರೂ ನಿಯಂತ್ರಣ ತಪ್ಪುತ್ತಿದ್ದ ಅಕ್ಷರಗಳು ಚೆದುರುತ್ತಿದ್ದವು. ತಾರಿಣಿಯವರು ‘ಕಾ ಕೊಂಬು ಕು’ ಎಂದು ‘ರಾಮಾಯಣ ದರ್ಶನಂ’ ಮಹಾಕಾವ್ಯ ಬರೆದ ತಂದೆಯವರಿಗೆ ಕೈಹಿಡಿದು ತಿದ್ದಿ ಕಾಗುಣಿತದ ಪಾಠ ಮಾಡಿದರು. ಇದು ನಮ್ಮ ಪಾಲಿಗೆ ಹೃದಯಸ್ಪರ್ಶಿಯಾದ ದೃಶ್ಯವಾಗಿತ್ತು…
ಕುವೆಂಪು ಸಾಂಸ್ಕೃತಿಕ ಕ್ರಾಂತಿಯ ವೈಚಾರಿಕ ಪ್ರಣಾಳಿಕೆಯನ್ನು ಯುವಜನರ ಮುಂದಿಟ್ಟು, ನಿರಂಕುಶಮತಿಗಳಾಗಲು ಕರೆಕೊಟ್ಟು ಬಹಳ ಕಾಲವಾಯಿತು. ಮಾನಸ ಗಂಗೋತ್ರಿಯ ಆವರಣದಲ್ಲಿ ಕುವೆಂಪು ವಿಚಾರಕ್ರಾಂತಿ ಪಲ್ಲವಿಸಬೇಕಾಗಿತ್ತು. ವಿಶ್ವಮಾನವ ಸಂದೇಶ ಅನುರಣನಗೊಳ್ಳಬೇಕಾಗಿತ್ತು. ಉದಯರವಿ ಸಾಂಸ್ಕೃತಿಕ ಯಾತ್ರಾಸ್ಥಳವಾಯಿತು. ಕನ್ನಡ ಅಧ್ಯಯನ ಸಂಸ್ಥೆ ಕುವೆಂಪು ಭಜನಾಮಂದಿರವಾಯಿತು, ಕುವೆಂಪು ಟ್ರಸ್ಟ್ ಕುವೆಂಫು ಮಠವಾಯಿತು. ಕುವೆಂಪು ಶಿಷ್ಯವರ್ಗಕ್ಕೆ ಸೇರಿದ ಅನೇಕರು ಕುವೆಂಪು ಪುರೋಹಿತಶಾಹಿಯಂತೆ ವರ್ತಿಸಿ, ಅವರ ವಿಚಾರ ಕ್ರಾಂತಿಯ ಸಂವಹನಕ್ಕೆ ಚಪ್ಪಡಿ ಎಳೆದರು. ಅವರ ಆರಾಧನೆಯ ಮೂಲಕ ಜಂಗಮಸ್ವರೂಪಿಯಾದ ಕುವೆಂಪು ಅವರ ಜೀವಿತಕಾಲದಲ್ಲೆ ಸ್ಥಾವರವಾಗಿಬಿಟ್ಟರು.”