ಮನಸಿದ್ದರೆ ನೀರ ದಾರಿ-ರೂಪ ಹಾಸನ

[ಹಾಸನದ ಹಸಿರುಭೂಮಿ ಪ್ರತಿಷ್ಠಾನ ಹುಟ್ಟಿಕೊಂಡ ಬಗೆ ಮತ್ತು ಕಳೆದ ಒಂದು ವರ್ಷದಿಂದ ಮಾಡುತ್ತಿರುವ ಜಲಸಂವರ್ಧನೆ ಮತ್ತು ಹಸುರೀಕರಣದ ಕೆಲಸಗಳ ವಿವರವನ್ನೊಳಗೊಂಡ ರೂಪ ಹಾಸನ ಅವರ ಲೇಖನ ಮೇ 2018ರ ‘ಹೊಸಮನುಷ್ಯ’ ಮಾಸಿಕದಲ್ಲಿ ಪ್ರಕಟಗೊಂಡಿದ್ದು, ನಮ್ಮ ಮರು ಓದಿಗಾಗಿ ಇಲ್ಲಿದೆ. ]


ಕಳೆದ ವರ್ಷದ ಮೇ ತಿಂಗಳಲ್ಲಿ ಹಾಸನದ ಬಳಿಯ ದೊಡ್ಡಕೊಂಡಗೊಳ ಗ್ರಾಮವನ್ನು ನಮ್ಮ ಕೆರೆ ಪುನಶ್ಚೇತನದ ಕಾರ್ಯಕ್ಕೆ ವೈಜ್ಞಾನಿಕ ಅಧ್ಯಯನದ ಮೂಲಕ ಆರಿಸಿಕೊಂಡು ಯಂತ್ರಗಳಿಂದ ಕೆಲಸ ಪ್ರಾರಂಭಿಸಿ 7-8 ದಿನಗಳಾಗಿತ್ತಷ್ಟೇ. ಒಂದು ಮುಸ್ಸಂಜೆ ಅಲ್ಲಿಯ ಗ್ರಾಮಪಂಚಾಯಿತಿ ಸದಸ್ಯ, ಕೆರೆ ಕೆಲಸದ ಮೇಲ್ವಿಜಾರಣೆ ಹೊತ್ತಿದ್ದ ಯುವಕ ವಾಸು ವಾಟ್ಸ್‍ಆಪ್ ಮೂಲಕ ಪುಟ್ಟದೊಂದು ವಿಡಿಯೋ ಕಳಿಸಿದರು. ಅದನ್ನು ನೋಡಿ ನಮಗೆ ಸಂಭ್ರಮಾಶ್ಚರ್ಯ. ಕಳೆದ ಹದಿನೈದು ವರ್ಷಗಳಿಂದ ಒಣಗಿ ನಿಂತಿದ್ದ ಕೆರೆಯ ಮಧ್ಯಭಾಗದಲ್ಲಿ ವೃತ್ತಾಕಾರವಾಗಿ ನೀರು ಉಕ್ಕುತ್ತಿರುವ ದೃಶ್ಯ! ಅದು ಸುತ್ತ ತೆರೆಗಳನ್ನೆಬ್ಬಿಸಿ ಹರಡುತ್ತಿತ್ತು. ‘ಹೀಗೇ ಕೆರೆಯಿಂದ ನೀರು ಉಕ್ತಾನೇ ಇದೆ ಮೇಡಂ. ಇನ್ನೂ 3-4 ಅಡಿ ಬಗ್ದಿದ್ದೀವಷ್ಟೆ.’ ಅಂದಾಗ ನಮ್ಮ ಕನಸು ಇಷ್ಟು ಬೇಗ ಸಾಕಾರವಾಗಿದ್ದನ್ನು ನೋಡಿ ಸಂತೋಷ ಇಮ್ಮಡಿಸಿತು.
ಹಾಸನದಂತಹಾ ಅರೆಮಲೆನಾಡಿನಲ್ಲೂ ಕಳೆದೆರಡು ಮೂರು ವರ್ಷದಿಂದ ಬರ ಆವರಿಸಿ ಕುಡಿಯುವ ನೀರಿಗೂ ತತ್ವಾರವಾಗಿರುವಾಗ, 2017ರ ಜನವರಿಯಲ್ಲಿ ಕೇಂದ್ರ ಬರ ಅಧ್ಯಯನ ತಂಡ ರಾಜ್ಯದ 16 ಜಿಲ್ಲೆಗಳನ್ನು ಶಾಶ್ವತ ಬರಪೀಡಿತ ಜಿಲ್ಲೆಗಳೆಂದು ಘೋಷಿಸಿದ ಪಟ್ಟಿಯಲ್ಲಿ ಹಾಸನ ಜಿಲ್ಲೆಯೂ ಸೇರ್ಪಡೆಗೊಂಡಿದ್ದನ್ನು ಕಂಡಾಗ, ಈ ಜಲಕ್ಷಾಮವನ್ನು ಎದುರಿಸುವುದು ಹೇಗೆಂದು ತಳಮಳಿಸಿದ ನಾವೊಂದಿಷ್ಟು ಪರಿಸರ ಕಾಳಜಿಯುಳ್ಳ ಸಮಾನಮನಸ್ಕರು, ನಿರಂತರವಾಗಿ ಚರ್ಚಿಸಲಾರಂಭಿಸಿದ್ದೆವು. ಹಾಗೆ ಪರಿಸರ ಸಂಬಂಧಿತ ಕೆಲಸ, ಚಟುವಟಿಕೆ, ಬರವಣಿಗೆ, ನ್ಯಾಯಾಲಯ ಹೋರಾಟಗಳಲ್ಲಿ ನಮ್ಮಲ್ಲನೇಕರು ವೈಯಕ್ತಿಕ ನೆಲೆಯಲ್ಲಿ, ಸಂಸ್ಥೆಗಳ ಮೂಲಕ ಅಲ್ಲಿಲ್ಲಿ ತೊಡಗಿಸಿಕೊಂಡಿದ್ದೆವು. ಆದರೆ ಸಮುದಾಯವನ್ನು ಒಟ್ಟು ಸೇರಿಸಿ ಕೆಲಸ ಮಾಡಲು ಅನೇಕ ಬಾರಿ ಪ್ರಯತ್ನಿಸಿ ವಿಫಲರಾಗಿದ್ದೆವು. ಬರದ ಬೇಗೆ ತಾಳದೇ, ಕೃಷಿಸಾಲ ತೀರಿಸಲಾಗದೇ, ತೆಂಗಿನ ಮರಗಳು ಬಿಸಿಲಿಗೆ ಸುಟ್ಟು ಕರಕಲಾದಾಗ, ರೈತರು ನಿತ್ಯ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ಕಾಣುವಾಗ, ನಾವೆಲ್ಲಾ ರೈತರ ಬೆಂಬಲಕ್ಕೆ ಏನೂ ಮಾಡಲಾಗುತ್ತಿಲ್ಲ ಎಂಬ ಅಪರಾಧಿ ಭಾವದ ಒಳಒತ್ತಡ ರಚನಾತ್ಮಕ ಕೆಲಸಕ್ಕೆ ನಮ್ಮನ್ನು ಒಗ್ಗೂಡಿಸಿತು.

ಬಿದರೆ ಕಲ್ಲುಬಾವಿ 
ಕೊಂಚ ಶ್ರಮವಾದರೂ ಕೆರೆ, ಕಲ್ಯಾಣಿಗಳ ಪುನಶ್ಚೇತನ, ಮಳೆ ನೀರಿನ ಸಮರ್ಪಕ ಸಂಗ್ರಹಣೆಗೆ ಅಣಿಯಾಗುವ ಶಾಶ್ವತವಾದ ಕೆಲಸಗಳೇ ಮುಖ್ಯವೆಂದು ಪರಿಸರವಿಜ್ಞಾನ ಲೇಖಕರಾದ ನಾಗೇಶ್ ಹೆಗಡೆ, ಕೆರೆ ಪುನಶ್ಚೇತನ ತಜ್ಞರಾದ ಶಿವಾನಂದ ಕಳವೆ, ಜಲತಜ್ಞ ಶ್ರೀಪಡ್ರೆ, ಹಿರಿಯ ಭೂ ಮತ್ತು ಅಂತರ್ಜಲ ವಿಜ್ಞಾನಿ ಎಸ್.ಜಿತೇಂದ್ರಕುಮಾರ್ ಮುಂತಾದವರೊಂದಿಗಿನ ನಿರಂತರ ಚರ್ಚೆಯಿಂದ ಮನದಟ್ಟಾಗಿತ್ತು. ಅಧ್ಯಯನದೊಂದಿಗೇ ನಮ್ಮ ಸುತ್ತಮುತ್ತಲ ಕೆರೆ, ಕಟ್ಟೆ, ಕಲ್ಯಾಣಿಗಳ ಕ್ಷೇತ್ರಾಧ್ಯಯನವೂ ಸಾಗಿತ್ತು. ಹಾಸನ ಜಿಲ್ಲೆಯಾದ್ಯಂತ ಹೊಯ್ಸಳರ ಕಾಲದ ಪಾಳು ಬಿದ್ದ, ಒಣಗಿದ ಅನೇಕ ಕಲ್ಯಾಣಿಗಳಿರುವುದು, ಅವು ಹೂಳು ತುಂಬಿ ತಿಪ್ಪೆಗುಂಡಿಗಳಾಗಿರುವುದು ತಿಳಿದು ಬಂತು. ಆದರೆ ಕೆಲಸ ಪ್ರಾರಂಭಿಸಲು ಬೇಕಾದ ಸಾರ್ವಜನಿಕ ಒತ್ತಡವನ್ನು ನಿರ್ಮಾಣ ಮಾಡಿದ್ದು ಮಾತ್ರ ಮಹಾರಾಷ್ಟ್ರದಲ್ಲಿ ಅಮೀರ್‍ಖಾನ್ ನೇತೃತ್ವದ ಪಾನಿ ಫೌಂಡೇಶನ್ ಕೆಲಸಗಳ ‘ದಿ ಬ್ಯಾಟಲ್ ಎಗೆನೆಷ್ಟ್ ಡ್ರಾಟ್’ [The Battle against Drought] ]ಸಾಕ್ಷ್ಯಚಿತ್ರ. ಅದನ್ನು ಆಸಕ್ತರೆಲ್ಲಾ ಒಗ್ಗೂಡಿ 2017ರ ಏಪ್ರಿಲ್ 19ರಂದು ವೀಕ್ಷಿಸಿದ ನಂತರ, ಅನೇಕ ಸಾಧ್ಯತೆಗಳನ್ನು ಅದು ನಮ್ಮ ಮುಂದೆ ತೆರೆಯಿತು. ಎಲ್ಲರೂ ಸೇರಿ ಮುಂದೇನು ಮಾಡಬಹುದೆಂಬ ಹಲವು ಸುತ್ತಿನ ಚರ್ಚೆಗಳಾದವು. ಕೆರೆ, ಕಲ್ಯಾಣಿಗಳ ಪುನಶ್ಚೇತನ, ಅರಣ್ಯೀಕರಣ ಪ್ರಮುಖವಾಗಿಟ್ಟುಕೊಂಡು ಪರಿಸರ ಸಂಬಂಧಿತ ಚಟುವಟಿಕೆಯಲ್ಲಿ ನಿರಂತರ ಸಂಘಟಿತವಾಗಿ ತೊಡಗಿಕೊಳ್ಳಲು ‘ಹಸಿರುಭೂಮಿ ಪ್ರತಿಷ್ಠಾನ’ ಸ್ಥಾಪನೆಯಾಯ್ತು. ಮೇ 1ರಿಂದ ನೀರಿನ ಕೆಲಸಕ್ಕೆ ಸಂಕಲ್ಪ ತೊಟ್ಟು ನಮ್ಮ ನಮ್ಮಲ್ಲೇ ನಮಗೆ ಸಾಧ್ಯವಿರುವ ಕೆಲಸಗಳನ್ನು ಹಂಚಿಕೊಂಡು, ಸಲಹಾ ಸಮಿತಿ, ತರಬೇತಿ ಸಮಿತಿ, ತಾಂತ್ರಿಕ ಸಮಿತಿ, ಸಾಂಸ್ಕೃತಿಕ ಸಮಿತಿ, ಹಣಕಾಸು ಸಮಿತಿ…..ಇತ್ಯಾದಿ ವಿಭಾಗಿಸಿಕೊಂಡು ಹೆಚ್ಚೆ ಮುಂದಿಟ್ಟೆವು. ಹಾಸನದ ಕ್ರಿಯಾಶೀಲ ಉಪವಿಭಾಗಾಧಿಕಾರಿಗಳಾದ ಡಾ.ಎಚ್.ಎಲ್.ನಾಗರಾಜ್ ಅವರು ವಿಶೇಷ ಆಸಕ್ತಿಯಿಂದ ಈ ಕೆಲಸದ ನೇತೃತ್ವ ವಹಿಸಿದ್ದರಿಂದಾಗಿ ಇದೊಂದು ಸರ್ಕಾರಿ ಹಾಗೂ ಸಾರ್ವಜನಿಕ ಸಹಭಾಗಿತ್ವದ ಚಟುವಟಿಕೆಯಾಗಿ ಮುಂದುವರೆಯಿತು. ಶ್ರಮದಾನ ಹಾಗೂ ಯಂತ್ರಗಳ ನೆರವು, ಎರಡೂ ರೀತಿಯಲ್ಲೂ ಕೆಲಸಗಳು ನಿರಂತರ ಸಾಗಿವೆ.

ಹೊನ್ನಾವರ ಕಲ್ಯಾಣಿ 


ಈಗ ನೀರಿನ ಕೆಲಸಗಳು ಹಾಸನದಲ್ಲಿ ಪ್ರಾರಂಭವಾಗಿ ಒಂದು ವರ್ಷವಾಯ್ತು. ಹಿಂದೆ ತಿರುಗಿ ನೋಡಿದರೆ ನಿಜಕ್ಕೂ ಜನರ ಸಂಘಟಿತ ಪ್ರಯತ್ನಕ್ಕೆ ಎಷ್ಟೆಲ್ಲಾ ಶಕ್ತಿಯಿದೆ ಎಂಬುದಕ್ಕೆ ಉದಾಹರಣೆಯಾಗಿ ಜಿಲ್ಲೆಯ 5 ಕೆರೆ, 35 ಕಲ್ಯಾಣಿಗಳು ಹಸಿರುಭೂಮಿ ಪ್ರತಿಷ್ಠಾನದಿಂದ ನೇರವಾಗಿ ಮತ್ತು ಜನಸಮುದಾಯಕ್ಕೆ ಪ್ರೇರಣೆ ನೀಡಿ ಮಾಡಿಸಿದ್ದರಿಂದ ಪುನಶ್ಚೇತನಗೊಂಡು ನಳನಳಿಸುತ್ತಿವೆ. ನಾವು ಮೊದಲ ದಿನ ಪುನಶ್ಚೇತನಕ್ಕೆ ಕೈಗೆತ್ತಿಕೊಂಡ ದೊಡ್ಡಕೊಂಡಗೊಳದ ಒಣಗಿದ್ದ ಮೂರು ಕಲ್ಯಾಣಿಗಳಲ್ಲೂ ಮೊದಲ ದಿನವೇ ನೀರು ಕಾಣಿಸಿಕೊಂಡಿತ್ತು. ಅದೇ ಊರಿನ ಒಣಗಿದ ಒಂದು ಕೆರೆ, ತಿರುಪತಿಹಳ್ಳಿಯ ಒಂದು ಕೆರೆ, ಒಂದು ಗೋಕಟ್ಟೆಗಳನ್ನು ನಾವೊಂದಿಷ್ಟು ದುಡ್ಡು ಹಾಕಿ, ಸಾರ್ವಜನಿಕರಿಂದ ಚಂದಾ ಹಣವೆತ್ತಿ ಸುಮಾರು ಎಂಟು ಲಕ್ಷಗಳನ್ನು ಖರ್ಚುಮಾಡಿ ಪುನಶ್ಚೇತನ ಮಾಡಿದ್ದು, ಈ ವರ್ಷದ ಬಿರುಬೇಸಗೆಯಲ್ಲೂ ಅದರಲ್ಲಿ ತುಂಬಿರುವ ನೀರು, ನಾವು ಮಾಡಿದ ಕೆಲಸಕ್ಕೆ ಧನಾತ್ಮಕ ಮಾದರಿಯಾಗಿದೆ. ಅವುಗಳ ಸುತ್ತಮುತ್ತಲ ಐದು ಕಿಲೋ ಮೀಟರ್ ವ್ಯಾಪ್ತಿಯ ಒಣಗಿ ನಿಂತಿದ್ದ ಕೊಳವೆ ಬಾವಿಗಳು ತಾವಾಗಿಯೇ ಪುನಶ್ಚೇತನಗೊಂಡಿವೆ! ಕೆರೆ ಕಲ್ಯಾಣಿಗಳಲ್ಲಿ ದಿನವೊಂದಕ್ಕೆ ಸುಮಾರು 400-500 ಜಾನುವಾರುಗಳು ನೀರು ಕುಡಿಯುತ್ತಿವೆ. ವಿವಿಧ ಪಕ್ಷಿಗಳೂ ಅಲ್ಲಿ ಸಂಸಾರ ಹೂಡಿವೆ. ಗ್ರಾಮಸ್ಥರು 15,000 ಮೀನಿನ ಮರಿಗಳನ್ನು ಕೆರೆಗೆ ಬಿಟ್ಟು ಮೀನುಸಾಕಣೆ ಪ್ರಾರಂಭಿಸಿದ್ದಾರೆ. ಗಿಡ, ಗಂಟಿ, ಬಳ್ಳಿ, ಹುಳು, ಹುಪ್ಪಟೆ, ಕಪ್ಪೆ, ಹಾವು, ಮೀನು, ಜಲಚರ, ಪಕ್ಷಿ……ಹೀಗೆ ಸತ್ತು ಹೋಗಿದ್ದ ಇಡೀ ಪರಿಸರ ವ್ಯವಸ್ಥೆ ನಿಧಾನಕ್ಕೆ ಸಮಸ್ಥಿತಿಗೆ ವಾಪಸಾಗಿರುವುದನ್ನು, ಅಲ್ಲಿ ಜೀವಗಳ ಮಿಡಿತವನ್ನೂ ಕಾಣುವಾಗ ನಿಜಕ್ಕೂ ನಮ್ಮ ಶ್ರಮ ಸಾರ್ಥಕ ಎಂದೆನಿಸುತ್ತದೆ. ಅದೇ ಹೂಳೆತ್ತಿಲ್ಲದ ಕೆರೆ, ಕಲ್ಯಾಣಿಗಳಲ್ಲಿ ಮಳೆ ಬಂದ ನಂತರ ಒಂದೆರಡು ತಿಂಗಳು ನೀರು ನಿಂತಿದ್ದು, ಈಗ ಮತ್ತೆ ಒಣಗಿ ಬರಗುಟ್ಟುತ್ತಿದೆ. ಹೂಳೆತ್ತಿ ಪುನಶ್ಚೇತನಗೊಳಿಸಿದ ಅನೇಕ ಕೆರೆ ಕಲ್ಯಾಣಿಗಳಲ್ಲಿ ಅಂತರ್ಜಲ ಉತ್ಪತ್ತಿಯಾಗಿ, ಮೇಲಿನ ನೀರೂ ಆರದೆ ಜೀವಜಲಕ್ಕೆ ಜೀವ ನೀಡುತ್ತಿರುವುದು ಸಂತಸದ ವಿಷಯವಾಗಿದೆ. ಜೊತೆಗೆ ನಮಗೆ ನೀರಿನ ನಿಜವಾದ ಪಾಠವನ್ನೂ ಕಲಿಸುತ್ತಿದೆ.

ನೀರುಕ್ಕಿಸುವ ಈ ಮಾದರಿ ಜಿಲ್ಲೆಯಾದ್ಯಂತ ಪ್ರಚಾರ ಪಡೆದು ತನ್ನಷ್ಟಕ್ಕೇ ಅಲ್ಲಲ್ಲಿ ಕೆರೆ, ಕಲ್ಯಾಣಿಗಳ ಹೂಳೆತ್ತಿ ಪುನಶ್ಚೇತನಗೊಳಿಸಿಕೊಳ್ಳುವ ಕೆಲಸಗಳೂ ವ್ಯಾಪಕವಾಗಿ ನಡೆಯುತ್ತಿದೆ. ಹಲವು ಕಡೆಗಳಲ್ಲಿ ತಕ್ಷಣಕ್ಕೇ ನೀರು ಕಾಣಿಸಿಕೊಂಡಿದೆ. ಕೆಲವದರಲ್ಲಿ, 2-3 ದಿನಗಳ ನಂತರ, ಅಥವಾ ಮಳೆ ಬಂದ ನಂತರ ನೀರು ತುಂಬಿಕೊಂಡಿದೆ. ಮಳೆಯೇ ಇಲ್ಲದ ಕೆಲವೆಡೆ ನೀರು ಬಂದಿಲ್ಲದಿರುವುದೂ ಇದೆ. ಒಟ್ಟಾರೆ ನೀರಿನ ಮೂಲಗಳನ್ನು ಹೂಳೆತ್ತಿ, ಮುಚ್ಚಿರುವ ಅವುಗಳ ಕಣ್ಣು ತೆಗೆದು ಸ್ವಚ್ಛ ಮಾಡಿಟ್ಟುಕೊಂಡರೆ, ಮಳೆ ಬಂದಾಗ ತುಂಬಿಕೊಳ್ಳುವ ನೀರು, ವರ್ಷಗಳು ಕಳೆದರೂ ಆರುವುದಿಲ್ಲ ಎಂಬ ಅರಿವು ನಿಧಾನವಾಗಿ ಜನರಲ್ಲಿ ಮೂಡುತ್ತಿದೆ,
ಕಾಲೇಜಿನ ಎನ್‍ಎಸ್‍ಎಸ್ ಕ್ಯಾಂಪ್‍ಗಳನ್ನು ಕಲ್ಯಾಣಿ ಇರುವ ಊರುಗಳನ್ನೇ ಹುಡುಕಿ ಆಯೋಜಿಸುವಂತೆಯೂ ನೋಡಿಕೊಳ್ಳಲಾಗುತ್ತಿದೆ. ತನ್ಮೂಲಕ ಕಾರ್ಯಕರ್ತರ ವಾಸ್ತವ್ಯದ ಒಂದು ವಾರದಲ್ಲಿ ಶ್ರಮದಾನದ ಮೂಲಕವೇ ಮುಚ್ಚಿದ್ದ ಜಲಮೂಲಗಳನ್ನು ಹುಡುಕಿ ಪುನಶ್ಚೇತನಗೊಳಿಸುವ ಕೆಲಸಗಳು ನಡೆಯುತ್ತಿವೆ. ಕೆಲವು ಗ್ರಾಮಸ್ಥರು ತಾವಾಗಿಯೇ, ನಮ್ಮೂರಿನ ಕಲ್ಯಾಣಿ ಪುನಶ್ಚೇತನಕೆ ಬನ್ನಿ ಎಂದು ಆಹ್ವಾನಿಸುತ್ತಿದ್ದಾರೆ. ಪ್ರತಿ ವಾರವೂ ಒಂದು ಕಲ್ಯಾಣಿಯನ್ನು ಮೊದಲೇ ಹುಡುಕಿ, ಊರಿನ ಜನರಿಗೆ ಜಾಗೃತಿ ಮೂಡಿಸಿ, ನಾಡಿನಾದ್ಯಂತವಿರುವ ನೀರಿನ ಸಂಕಷ್ಟ, ನೀರಿನ ಸಂರಕ್ಷಣೆಯ ಮಾದರಿಗಳು, ಹಸಿರುಭೂಮಿ ವತಿಯಿಂದ ನಾವು ಇದುವರೆಗೆ ಮಾಡಿದ ಕೆಲಸಗಳನ್ನೊಳಗೊಂಡ ಸಾಕ್ಷ್ಯಚಿತ್ರ ಪ್ರದರ್ಶನವನ್ನು ಮೊದಲೇ ಮಾಡುವ ಮೂಲಕ ಗ್ರಾಮಸ್ಥರಲ್ಲಿ ತಮ್ಮ ಹಳ್ಳಿಯಲ್ಲಿ ಬೀಳುವ ಮಳೆ ನೀರನ್ನು ತಮ್ಮ ಊರಲ್ಲೇ ಹಿಡಿದಿಡುವ ಮಹತ್ವದ ಕುರಿತು ಕೆಲಸದ ಮೂಲಕವೇ ಜಾಗೃತಿ ಮೂಡಿಸುತ್ತಿದ್ದೇವೆ.

ಯಾಚೇನಹಳ್ಳಿ ಕಲ್ಯಾಣಿ 
ಇದರೊಂದಿಗೇ ಹಾಸನದ ಮೂರು ಮುಖ್ಯ ಕೆರೆಗಳಾದ ಚನ್ನಪಟ್ಟಣಕೆರೆ, ಹುಣಸಿನಕೆರೆ, ಸತ್ಯಮಂಗಲ ಕೆರೆಗಳನ್ನೂ ವಿವಿಧ ಕಟ್ಟಡ, ದಾರಿ, ಚರಂಡಿ, ಕಾಮಗಾರಿಗಳಿಗಾಗಿ ಒತ್ತುವರಿ ಮಾಡಿಕೊಳ್ಳಲಾಗಿದ್ದು, ಅದರ ಅಳತೆ, ಪುನಶ್ಚೇತನಕ್ಕೆ ಬೇಕಾದ ಅಂದಾಜುವೆಚ್ಚ, ಬೇಲಿ ನಿರ್ಮಾಣ…ಇತ್ಯಾದಿಗಳನ್ನು ಮಾಡಿಸಿ, ಮಾದರಿಯೆಂಬಂತೆ ಅಭಿವೃದ್ಧಿಪಡಿಸಲು, ಮುಖ್ಯಮಂತ್ರಿಗಳ ಮೇಲೆ ಒತ್ತಡವನ್ನೂ ಹೇರಲಾಗಿತ್ತು. ಈ ಬಾರಿಯ ಬಜೆಟ್‍ನಲ್ಲಿ ಈ ಕೆಲಸಗಳಿಗೆ 20 ಕೋಟಿಗಳನ್ನು ಮೀಸಲಿರಿಸಲಾಗಿದೆ. ಇದಲ್ಲದೇ ಖಾಸಗಿ ಸಂಘಸಂಸ್ಥೆಯವರೂ, ಆಸ್ಪತ್ರೆಯ ಮುಖ್ಯಸ್ಥರೂ ತಾವೇ ವೈಯಕ್ತಿಕವಾಗಿ ಕೆರೆಗಳನ್ನು ಪುನಶ್ಚೇತನ ಮಾಡಿಸುವುದಾಗಿ ಮುಂದೆ ಬರುತ್ತಿದ್ದಾರೆ. ಅದರಲ್ಲಿ ಪ್ರಮುಖವಾಗಿ ಹೆಚ್‍ಪಿಸಿಎಲ್ ಕಂಪನಿಯವರು ನಗರಕ್ಕೆ ಹೊಂದಿಕೊಂಡಂತಿರುವ ಗವೇನಹಳ್ಳಿ ಕೆರೆಯ ನಾಲ್ಕೆಕರೆಯನ್ನು ತಮ್ಮ ಸಿಎಸ್‍ಆರ್ ನಿಧಿಯಿಂದ ಪುನಶ್ಚೇತನಗೊಳಿಸಿದ್ದಾರೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯವರು 3-4 ವರ್ಷದ ಹಿಂದೆ ಅಧ್ಯಯನ ಮಾಡಿ ಹಾಸನ ಜಿಲ್ಲಾದ್ಯಂತವಿರುವ 253 ಕಲ್ಯಾಣಿಗಳನ್ನು ಗುರುತಿಸಿ ಜಿಲ್ಲಾಪಂಚಾಯಿತಿಗೆ ಕೊಟ್ಟಿದ್ದ ವರದಿ ನಮಗೆ ದಿಕ್ಸೂಚಿಯಾಗಿದೆ. ಜೊತೆಗೆ ಈ ಸಂಸ್ಥೆ ನಮ್ಮ ಧನಾತ್ಮಕ ಕೆಲಸಗಳನ್ನು ಗುರುತಿಸಿ ತಾವು ಶಾಂತಿಗ್ರಾಮದ ತೆಪ್ಪದ ಕಲ್ಯಾಣಿಯ ಸಂಪೂರ್ಣ ಪುನಶ್ಚೇತನ ಹಾಗೂ ಸೌಂದರ್ಯೀಕರಣಕ್ಕೆ ಬೇಕಾದ ಧನಸಹಾಯ ನೀಡುವುದಾಗಿ ಮುಂದೆ ಬಂದಿದೆ.
ಈ ನೀರಿನ ಕೆಲಸಗಳನ್ನು ಪ್ರತಿ ತಾಲ್ಲೂಕಿಗೂ ವಿಸ್ತರಿಸುವ ಪ್ರಯತ್ನಗಳು ನಿರಂತರವಾಗಿ ಸಾಗಿದ್ದು, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಇಂದಿರಾ ಪ್ರಿಯದರ್ಶಿನಿ ರಾಷ್ಟ್ರೀಯ ಪರಿಸರ ಪ್ರಶಸ್ತಿ ವಿಜೇತ ಹಾಗೂ ನಮ್ಮ ಟ್ರಸ್ಟಿಗಳಲ್ಲಿ ಒಬ್ಬರಾದ ಚ.ನಾ.ಅಶೋಕ್ ಅವರ ನೇತೃತ್ವದಲ್ಲಿ ಮೊದಲಿಂದಲೂ ನಡೆಯುತ್ತಾ ಬಂದಿದೆ. ಕಳೆದ ತಿಂಗಳಿನಿಂದ ಅರಕಲಗೂಡು ತಾಲ್ಲೂಕಿನಲ್ಲಿ ಖ್ಯಾತ ಸಂಗೀತ ವಿದೂಷಿಗಳಾದ ಆರ್.ಕೆ.ಪದ್ಮನಾಭ ಅವರ ನೇತೃತ್ವದಲ್ಲಿ, ಅವರ ಅಭಿಮಾನಿಗಳ ತಂಡದಿಂದ ಕಲ್ಯಾಣಿಗಳ ಪುನಶ್ಚೇತನ ಕೆಲಸಗಳು ಅವಿರತ ನಡೆಯುತ್ತಿವೆ. ಹಾಸನ ತಾಲ್ಲೂಕಿನ ಕೆಲಸಗಳನ್ನು ಮಾಡಲು ಹಸಿರುಭೂಮಿ ಬಳಗವೆಂಬ ಯುವ ತಂಡವನ್ನು, ಪ್ರತಿ ಭಾನುವಾರದಂದು ನಿಗದಿಯಾದ ಕಲ್ಯಾಣಿಯ ಪುನಶ್ಚೇತನಕ್ಕೆ ಬಸ್ ವ್ಯವಸ್ಥೆ ಮಾಡಿ ಕರೆದೊಯ್ಯಲಾಗುತ್ತಿದೆ. ತಿಂಡಿ ವ್ಯವಸ್ಥೆಯನ್ನು ಗ್ರಾಮಸ್ಥರು ಉತ್ಸಾಹದಿಂದ ಮಾಡಿಸುತ್ತಿದ್ದಾರೆ. ಇತರ ಪ್ರತೀ ತಾಲ್ಲೂಕಿನಲ್ಲೂ ಒಂದು, ಎರಡು ಕಲ್ಯಾಣಿ, ಕೆರೆಗಳು ಪುನಶ್ಚೇತನಗೊಂಡಿದ್ದರೂ ಅಲ್ಲಿ ಈ ಕೆಲಸಗಳು ಇನ್ನೂ ವ್ಯಾಪಕತೆಯನ್ನು ಪಡೆದಿಲ್ಲ. ಅಲ್ಲಿಯೂ ಈ ಕೆಲಸಗಳನ್ನು ಕೈಗೆತ್ತಿಕೊಳ್ಳುವ ಒಳ್ಳೆಯ ತಂಡ ನಿರ್ಮಾಣ ಮಾಡುವ ಪ್ರಯತ್ನಗಳು ಪ್ರತಿಷ್ಠಾನದಿಂದ ನಡೆಯುತ್ತಲೇ ಇವೆ.

ತಿರುಪತಿಹಳ್ಳಿ ಕೆರೆ ಬಿರುಬೇಸಗೆಯಲ್ಲೂ ತುಂಬಿರುವುದು. 


ಕಾಲೇಜಿನ ಪರಿಸರಪ್ರಿಯ ಯುವಜನರ ನೆರವಿನೊಂದಿಗೆ ದೊಡ್ಡ ಕಟ್ಟಡಗಳ ಮೇಲೆ ಬೀಳುವ ಮಳೆನೀರು ಕೊಯ್ಲು ಕುರಿತು ಬೃಹತ್ ಜಾಗೃತಿ ಜಾಥಾ ಹಮ್ಮಿಕೊಂಡಿದ್ದು, ಹಸಿರುಭೂಮಿ ವಿದ್ಯಾರ್ಥಿ ಬಳಗವನ್ನು ಹುಟ್ಟು ಹಾಕಿದ್ದು, ಹುಣಸಿನಕೆರೆ ಉಳಿಸಿ, ಜಾಗೃತಿ ಆಂದೋಲನ ರೂಪಿಸಿದ್ದು, ಜಿಲ್ಲೆಯಾದ್ಯಂತ ಗಿಡ ನೆಡೋಣ, ಉಸಿರು ಉಳಿಸಿಕೊಳ್ಳೋಣ ಆಂದೋಲನ ರೂಪಿಸಿ ಹೋದವರ್ಷ 5000 ಗಿಡ ನೆಡುವ, ನೆಡಿಸುವ ಕಾರ್ಯವಾಗಿದ್ದು, ಈ ವರ್ಷ 10000 ಗಿಡ ನೆಡಿಸುವ ಕೆಲಸ ಜಿಲ್ಲಾದ್ಯಂತ ವ್ಯಾಪಕವಾಗಿ ನಡೆಯುತ್ತಿದೆ. ಗಿಡ ನೆಡುವುದಷ್ಟೇ ಅಲ್ಲ. ನೆಟ್ಟದ್ದನ್ನು ಪ್ರೀತಿಯಿಂದ ನೋಡಿಕೊಳ್ಳುವ ಮತ್ತು ಉಳಿಸಿಕೊಳ್ಳುವ ಕೆಲಸಗಳೂ ಅಷ್ಟೇ ಚೆನ್ನಾಗಿ ನಡೆಯುತ್ತಿದೆ. ಅರಣ್ಯ ಇಲಾಖೆ ಜೊತೆಗೂಡಿ ಬೀಜದುಂಡೆ ತಯಾರಿಸಿದ್ದು, ಆಯ್ದ ನೂರು ಮಕ್ಕಳಿಗೆ ‘ಮಗು-ಪರಿಸರ ಕಾರ್ಯಾಗಾರ ಏರ್ಪಡಿಸಿ ಅವರಲ್ಲಿ ಪರಿಸರದ ಆಳ ಪ್ರೀತಿ ಹುಟ್ಟಿಸಿದ್ದು, ರಾಜಾಸ್ಥಾನದ ಜಲತಜ್ಞ ರಾಜೇಂದ್ರಸಿಂಗ್ ಅವರನ್ನು ಹಾಸನಕ್ಕೆ ಕರೆಸಿ, ಅವರ ನೀರಿನ ಅನುಭವ ಕಥನ ಕೇಳಿದ್ದು, ದೊಡ್ಡಕೊಂಡಗೊಳವನ್ನು ಮಾದರಿ ಗ್ರಾಮವನ್ನಾಗಿ ರೂಪಿಸಿ ಅಲ್ಲಿ ರಚನಾತ್ಮಕ ಕೆಲಸವಾಗುವಂತಾಗಲು ಗ್ರಾಮಸ್ವರಾಜ್ ಸಮಿತಿ ಸ್ಥಾಪನೆ ಮಾಡಿ ನಿರಂತರ ಸಾಂಸ್ಕೃತಿಕ  ಕಾರ್ಯಕ್ರಮಗಳ, ಆಟೋಟಗಳ, ಇಲಾಖೆಗಳ ಯೋಜನೆ ಕುರಿತ ಮಾಹಿತಿ ಕಾರ್ಯಕ್ರಮ ಆಯೋಜನೆ, ರಾಜ್ಯೋತ್ಸವ, ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿ, ಹಿರಿಯ ಅಧಿಕಾರಿಗಳನ್ನೂ, ಸಾಲುಮರದ ತಿಮ್ಮಕ್ಕನನ್ನು ಕರೆದು ಕಾರ್ಯಕ್ರಮ ರೂಪಿಸಿದ್ದು……, ಹೀಗೆ ಒಂದು ವರ್ಷವಿಡೀ ನೀರನ್ನು ಕೇಂದ್ರೀಕರಿಸಿ ಪರಿಸರದ ಅನೇಕ ಚಟುವಟಿಕೆಗಳು ಹಾಸನ ಜಿಲ್ಲಾದ್ಯಂತ ಎಡಬಿಡದೇ ನಡೆದಿವೆ. ವಿಸ್ತರಿಸಿಕೊಂಡು ನಡೆಯುತ್ತಿವೆ.
ಈಗ ಜನರು ನೀರಿನ ಸಂರಕ್ಷಣೆಗಾಗಿ ಸರ್ಕಾರವನ್ನು ಪಕ್ಕಕ್ಕಿಟ್ಟು ತಾವೇ ತಮ್ಮ ನೀರಿನ ಮೂಲಗಳನ್ನು ಹೂಳೆತ್ತಿ ಪುನಶ್ಚೇತನಗೊಳಿಸಿಕೊಳ್ಳುವ ವಾತಾವರಣ ನಿರ್ಮಾಣವಾಗುತ್ತಿದೆ. ಜನಾಂದೋಲನದ ಮೂಲಕ ಜಲಮಾದರಿಯನ್ನು ನಿರ್ಮಿಸಲು ಹಾಸನ ಜಿಲ್ಲೆಯಾದ್ಯಂತ ಇಂದು ಅವಿರತ ಪ್ರಯತ್ನಗಳು ನಡೆಯುತ್ತಿರುವುದು ಹಸಿರುಭೂಮಿ ಪ್ರತಿಷ್ಠಾನದ ತಂಡಕ್ಕೆ ಸಂತಸ ತಂದಿದೆ. ಈ ಪ್ರಯತ್ನಗಳು ಜಿಲ್ಲಾದ್ಯಂತ ಇನ್ನಷ್ಟು ವ್ಯಾಪಕವಾಗಿ ಪಸರಿಸಿ, ಜನರು ಸ್ವಯಂ ನೀರಿನ ದಾರಿಗಳನ್ನೂ, ತನ್ಮೂಲಕ ನೆಮ್ಮದಿಯನ್ನು ಕಂಡುಕೊಳ್ಳುವ ಮೂಲಕ ಹಾಸನ ಜಿಲ್ಲೆಯನ್ನು ಸಂಪೂರ್ಣ ಬರ ಮುಕ್ತಗೊಳಿಸಬೇಕೆಂಬುದು ನಮ್ಮ ಆಶಯವಾಗಿದೆ.