ಕೆ.ಎಸ್.ಪುಟ್ಟಣ್ಣಯ್ಯ ನುಡಿ ನಮನ-ದೇವನೂರ ಮಹಾದೇವ

[7.4.2018ರಂದು ಮಂಡ್ಯದಲ್ಲಿ ನಡೆದ ಕೆ.ಎಸ್.ಪುಟ್ಟಣ್ಣಯ್ಯ ನುಡಿ ನಮನ ಕಾರ್ಯಕ್ರಮದಲ್ಲಿ ದೇವನೂರ ಮಹಾದೇವ ಅವರು ಆಡಿದ ಮಾತುಗಳ ಬರಹ ರೂಪ.]

ಪುಟ್ಟಣ್ಣಯ್ಯ ಇಲ್ಲ ಎಂದುಕೊಳ್ಳುವುದಕ್ಕೆ ನನ್ನ ಮನಸ್ಸು ಕಷ್ಟಪಡುತ್ತಿದೆ. ಶ್ರದ್ಧಾಂಜಲಿ ಸಭೆಗಳಲ್ಲಿ ಭಾಗವಹಿಸುವುದೆಂದರೆ ಹೆಚ್ಚು ಕಸಿವಿಸಿಯಾಗುತ್ತೆ. ಇರಲಿ, ನಾನು ಮಂಡ್ಯ ಜಿಲ್ಲೆಯ ಸಭೆ, ಸಮಾರಂಭ, ಭಾಷಣ ಇತ್ಯಾದಿಗಳಲ್ಲಿ ಭಾಗವಹಿಸಿದಷ್ಟು ಬೇರೆ ಯಾವ ಜಿಲ್ಲೆಯಲ್ಲೂ ಭಾಗವಹಿಸಿಲ್ಲ. ಇದಕ್ಕೆ ಕಾರಣ- ಪುಟ್ಟಣ್ಣಯ್ಯನವರೊಡನೆ ನನಗಿದ್ದ ಭಾವನಾತ್ಮಕ ಸಂಬಂಧ. ಆಗಾಗ ಬರುತ್ತಿದ್ದ ಚುನಾವಣೆಗಳೂ ಕಾರಣ ಇರಬಹುದು. ಈಗಲೂ ಚುನಾವಣೆ ಬಂದಿದೆ. ಪುಟ್ಟಣ್ಣಯ್ಯ ಸ್ಪರ್ಧಿಸುತ್ತಿದ್ದಾಗಲಿನ ಚುನಾವಣೆಗೂ ಈಗ ನಮ್ಮ ಮುಂದಿರುವ ಚುನಾವಣೆಗೂ ಏನು ವ್ಯತ್ಯಾಸ? ನನ್ನನ್ನೇ ಕೇಳಿಕೊಳ್ಳುತ್ತಿರುವೆ. ಪುಟ್ಟಣ್ಣಯ್ಯ ಚುನಾವಣೆಗೆ ಸ್ಪರ್ಧಿಸಿದ್ದರೆ ನಾನೊಬ್ಬ ಮಾತ್ರ ಪ್ರಚಾರ ಮಾಡಲು ಬರುತ್ತಿದ್ದೆ. ಈಗ? ನನ್ನ ಪತ್ನಿ ಸುಮಿತ್ರಾ ಕೂಡ ತಾನೂ ಒಂದು ಸಲ ಪ್ರಚಾರಕ್ಕೆ ಬರುತ್ತೇನೆ ಎಂದು ಹೇಳುತ್ತಿದ್ದಾರೆ. ಸುಮಿತ್ರಾರ ತಂದೆಯವರು ಪಾಂಡವಪುರ ತಾಲ್ಲೂಕಿನ ತಾಳಶಾಸನದವರು. ಹಾಗೇ ನನ್ನ ದೊಡ್ಡಮಗಳು ಉಜ್ವಲಾಳು ಬರಬಹುದು. ಚಿಕ್ಕಮಗಳು ಮಿತಾಳು ಒಮ್ಮೆ ಬರುತ್ತೇನೆ ಅಂದಿದ್ದಾಳೆ. ಇದನ್ನು ಕೇಳಿ ಮಿತಾಳ ಮಗಳು ರುಹಾನಿ ತಾನೂ ಕೂಡ ಕುಣಿಯುತ್ತ ಬರುತ್ತೇನೆ ಅಂತಿದ್ದಾಳೆ. ಈ ವಿದ್ಯಮಾನ ನಮ್ಮ ಮನೆಯಲ್ಲಿ ಮಾತ್ರವಲ್ಲ, ಮೇಲುಕೋಟೆ ವಿಧಾನ ಸಭಾಕ್ಷೇತ್ರದ ಮನೆ-ಮನಗಳಲ್ಲಿ ಸಂಭವಿಸುತ್ತಿದೆ. ಇದು ಪಕ್ಷಾತೀತವಾಗಿ ಸಂಭವಿಸುತ್ತಿದೆ.
ಪಕ್ಷಾತೀತವಾಗಿ ಎಂದು ಹೇಳಲೂ ಕಾರಣವಿದೆ. ಇತ್ತೀಚೆಗೆ ಮೈಸೂರಿನ ರಮ್ಯ ಹೊಟೇಲಿನಲ್ಲಿ ಕಾಫಿ ಕುಡಿಯುತ್ತಿರುವಾಗ, ನಾಕಾರು ಮಧ್ಯ ವಯಸ್ಕರು ಬಂದು ನನ್ನನ್ನು ಪರಿಚಯ ಮಾಡಿಕೊಂಡರು. ಅವರು ಪಾಂಡವಪುರ ಹತ್ತಿರದ ಚಿನಕುರುಳಿ ಕಡೆಯವರು ಎಂದು ಗೊತ್ತಾದಾಗ ನಾನು ಚುರುಕಾಗಿ ಈ ಸಲ ಹೇಗಿದೆ ಚುನಾವಣೆ ಎಂದು ಕೇಳಿದೆ. ಅವರ ಮಾತು ಕೇಳಿ ಮೂಕನಾದೆ. ಅವರು ಈ ಹಿಂದೆ ಬೇರೆ ಪಕ್ಷಕ್ಕೆ ಓಡಾಡಿದವರು. ಅವರು ಹೇಳಿದರು- `ನಾವು ಇದುವರೆಗೂ ಪುಟ್ಟಣ್ಣಯ್ಯನವರಿಗೆ ಓಟು ಕೊಟ್ಟವರಲ್ಲ. ಈಗ ಅವರಿಲ್ಲ. ಅವರಿಲ್ಲದೆ ನಮ್ಮ ಕ್ಷೇತ್ರ ಒಂದು ಥರಾ ಖಾಲಿ ಹೊಡೀತಾ ಇದೆ. ಅವರು ಹೋದ ಮೇಲೆ ಅವರ ನೆನಪು ಹೆಚ್ಚಾಗ್ತ ಇದೆ. ನಾವು ರಾಜ್ಯದ ಯಾವ ಮೂಲೆಗೆ ಹೋಗಲಿ, ಪಾಂಡವಪುರದವರು ಎಂದಾಕ್ಷಣ, ಓ ನೀವು ಪುಟ್ಟಣ್ಣಯ್ಯನವರ ಕಡೆಯವರ? ಅಂತ ಉಪಚರಿಸುತ್ತಿದ್ದರು. ಇದಕ್ಕೆ ಬೆಲೆ ಕಟ್ಟಕ್ಕೆ ಆಗುತ್ತ? ಅದಕ್ಕೆ ಈ ಸಲ ದರ್ಶನ್ ಪುಟ್ಟಣ್ಣಯ್ಯಗೆ ಓಟು ಕೊಟ್ಟು ಋಣ ತೀರಿಸಬೇಕು ಅನ್ನಿಸ್ತಾ ಇದೆ’ ಅಂದರು! ಮಂಡ್ಯದ ಮಣ್ಣಲ್ಲಿ ಈ ಗುಣ ಇರಬೇಕು ಅನ್ನಿಸಿತು. ತಕ್ಷಣ ಕಷ್ಟಸುಖಗಳಿಗೆ ಸ್ಪಂದಿಸುವ ಪುಟ್ಟಣ್ಣಯ್ಯನವರ ತುಡಿತ ಕಣ್ಮುಂದೆ ಬಂತು. ಪುಟ್ಟಣ್ಣಯ್ಯನವರು ದುದ್ದ ಹೋಬಳಿಗೆ ಕುಡಿಯುವ ನೀರನ್ನು ತರಲು ಏಳು ಕೆರೆ ನೀರನ್ನು ಕುಡಿದಿದ್ದಾರೆ, ಕಣ್ಣೀರು ಹಾಕಿದ್ದಾರೆ. ದುದ್ದ ಕುಡಿಯುವ ನೀರಿಗಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಬೇಕಿತ್ತು. ಆ ಟೈಮಲ್ಲೆ ಅವರ ಮಾವನವರು ತೀರಿಕೊಂಡುಬಿಟ್ಟರು. ಶವಸಂಸ್ಕಾರಕ್ಕೂ ಪುಟ್ಟಣ್ಣಯ್ಯನವರಿಗೆ ಹೋಗಲಾಗಲಿಲ್ಲ. ಪುಟ್ಟಣ್ಣಯ್ಯ ವೈಯಕ್ತಿಕ ದುಃಖವನ್ನು ಜನಹಿತಕ್ಕಾಗಿ ಮರೆಯುತ್ತಿದ್ದರು. ಇದೆಲ್ಲಾ ಜನಸಮುದಾಯಕ್ಕೆ ಗೊತ್ತಿರುವುದರಿಂದಲೇ ದರ್ಶನ್‍ಗೆ ಓಟು ಕೊಟ್ಟು ಋಣ ತೀರಿಸಬೇಕು ಎಂಬ ಮಾತು ಬಂತು ಅನ್ನಿಸುತ್ತದೆ. ಹೇಳಿದರೆ ಇಂಥವು ಸುಮಾರು ಇವೆ. ತುಂಬಾ ಭಾವನಾತ್ಮಕವಾಗಿ ಬಿಡುತ್ತದೆ. ಇಷ್ಟು ಸಾಕು.

ಪುಟ್ಟಣ್ಣಯ್ಯ ಸಾಮಾನ್ಯವಾಗಿ ಸಭೆಗಳಲ್ಲಿ ನಗಿಸುತ್ತಿದ್ದರು. ನೆಗಕ್ಕೆ ಕಾಸು ಕೊಡಬೇಕಾ ನೆಗಿ ಅಂತಿದ್ದರು. ಪುಟ್ಟಣ್ಣಯ್ಯಗೆ ಒಂದ್ಸಲ ಹೇಳಿದೆ- `ಪುಟ್ಟಣ್ಣಯ್ಯ, ಸಾಮಾನ್ಯವಾಗಿ ಎಂಎಲ್‍ಎ ಮಕ್ಕಳು, ಮಿನಿಸ್ಟರ್ ಮಕ್ಕಳು, ದೊಡ್ಡ ದೊಡ್ಡ ಅಧಿಕಾರಿಗಳ ಮಕ್ಕಳು ಉಡಾಳರಾಗಿರುತ್ತಾರೆ; ಅಪ್ಪಂದಿರು ಅವರವರ ರೀತಿಯಲ್ಲಿ ಜವಾಬ್ದಾರಿಯಾಗಿರುತ್ತಾರೆ. ನಿಮ್ಮ ಕೇಸಲ್ಲಿ ಉಲ್ಟಾ!’ ಅಂದೆ. ಏನು ಹಾಗಂದರೆ ಅಂದರು. `ಅದೇ ನೀವು ಉಡಾಳರು, ನಿಮ್ಮ ಮಕ್ಕಳು ಜವಾಬ್ದಾರಿ ಉಳ್ಳವರು’ ಅಂದೆ. ಪುಟ್ಟಣ್ಣಯ್ಯ ನಕ್ಕಿದ್ದರು. ಅವರ ಮನೇಲೂ ಅದನ್ನು ಅಭಿನಯಿಸಿ ಹೇಳಿಕೊಂಡು ಮನೆ ಮಂದಿಯನ್ನೂ ನಗಿಸಿದ್ದರು.

ಈಗ ದರ್ಶನ್ ರಾಜಕಾರಣ ಮಾಡಲು ಹೊರಟಿದ್ದಾರೆ. ಅಪ್ಪನಿಗೂ ಮಗನಿಗೂ ಇರುವ ಒಂದು ವ್ಯತ್ಯಾಸ ಹೇಳುವೆ- ಸ್ವರಾಜ್ ಇಂಡಿಯಾ ಒಳನೋಟ (ವಿಷನ್) ಪುಸ್ತಕವನ್ನು ಪುಟ್ಟಣ್ಣಯ್ಯರಿಂದ ಓದಿಸಲು ನಾನು ಹರಸಾಹಸ ಪಟ್ಟೆ. ಪ್ರಶ್ನೆ ಕೇಳ್ತೇನೆ ಅಂದೆ. ಅದ್ಕೇನು ಈಗ್ಲೆ ಕೇಳಿ ಅಂದರು! ಇನ್ನೇನು ಮಾತು ಅಂತ ಸುಮ್ಮನಾದೆ! ದರ್ಶನ್‍ಗೆ ಕೂಡ ಸ್ವರಾಜ್ ಇಂಡಿಯಾ ಒಳನೋಟ ಪುಸ್ತಕ ಓದಬೇಕಪ್ಪ ಅಂದೆ. ಆಗ್ಲೆ ಓದಿದ್ದೀನಿ ಅಂಕಲ್ ಅಂದರು. ಹೊಸ ಕಾಲಕ್ಕೆ ಒಬ್ಬ ಹೊಸ ನಾಯಕ ಹುಟ್ಟಿದ ಅನ್ನಿಸಿತು. ಈ ಕಾರಣಕ್ಕೇ ಇರಬೇಕು, ಕ್ಷೇತ್ರದಲ್ಲಿ ದರ್ಶನ್ ಬೆಂಬಲಕ್ಕೆ ಯುವಜನತೆಯು ಚಿಲುಮೆಯಂತೆ ಉಕ್ಕುತ್ತಿದೆ. ಈ ಯುವಜನತೆಯ ಜತೆಗೆ, ಮಂಡ್ಯ ಜಿಲ್ಲೆಯಲ್ಲಿ ಪ್ರಬುದ್ಧವಾದ ತಾಳ್ಮೆಯ ರೈತ ನಾಯಕತ್ವ ಇದೆ. ಇದಕ್ಕೆ ದಲಿತ ಸಂಘರ್ಷ ಸಮಿತಿಯೂ ಕೂಡಿಕೊಂಡಿದೆ. ಜನಶಕ್ತಿ ತನ್ನದೇ ಚುನಾವಣೆ ಅಂದುಕೊಂಡಿದೆ. ಈ ರೀತಿ ಪ್ರವಾಹದಂತೆ ಜನಬೆಂಬಲವನ್ನು ಈ ಹಿಂದೆ ನಾನು ಕಂಡಿಲ್ಲ. ಜೊತೆಗೆ ಈಗ ದರ್ಶನ್ ಸ್ವರಾಜ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಈಗ ಮೇಲುಕೋಟೆ ಕ್ಷೇತ್ರದಲ್ಲಿ ಆಗುತ್ತಿರುವಂತೆಯೇ ದರ್ಶನ್ ನಾಯಕತ್ವದಲ್ಲಿ ರಾಜ್ಯದಾದ್ಯಂತ ಯುವಜನತೆಯ ಅಲೆ ಹಬ್ಬುವಂತಾಗಲೂಬಹುದು. ಈಗ ದರ್ಶನ್ ವೇಗವರ್ಧಕವಾಗಬೇಕಾಗಿದೆ. ರಾಜ್ಯವು ದರ್ಶನ್‍ರಂತವರ ಯುವನಾಯಕತ್ವಕ್ಕಾಗಿ ಕಾಯುತ್ತಿದೆ. ದರ್ಶನ್ ಮೇಲೆ ನನಗೆ ನಂಬಿಕೆ ಬಂತು, ಯಾಕೆಂದರೆ ನೆನ್ನೆ ತಾನೇ ಮಂಡ್ಯದ ಪ್ರೆಸ್‍ಮೀಟ್‍ಗೆ ಮೊದಲು ಪ್ರೆಸ್‍ಕ್ಲಬ್ ಪಕ್ಕದ ಬೀದಿಬದಿಯ ಸಣ್ಣ ಹೋಟೆಲ್‍ನಲ್ಲಿ ದರ್ಶನ್ ತಿಂಡಿ ತಿನ್ನುತ್ತಿದ್ದರು. ಆಗ ದರ್ಶನ್ ಕೂಡ ಅವರಪ್ಪನಂತೆಯೇ ಅನ್ನಿಸಿಬಿಟ್ಟಿತು. ಇದನ್ನು ಕಂಡಾಗ, ರಾಜ್ಯಕ್ಕೆ ಜನಸಾಮಾನ್ಯರ ನಾಯಕನೊಬ್ಬ ಸಿಕ್ಕಿದ ಅನ್ನಿಸಿತು. ಹೆಮ್ಮೆಯಾಯಿತು. ಇವರೊಡನೆ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸಿ ಸಂಪತ್ತಿಗೆ ಸವಾಲ್ ಎಸೆದಿರುವ ಲಿಂಗೇಗೌಡರೂ ಇದ್ದಾರೆ. ಈ ಇಬ್ಬರೂ ಆಯ್ಕೆಯಾದರೆ ಅದು ನಾಡಿಗೆ ಮಂಡ್ಯ ಜಿಲ್ಲೆಯ ಕೊಡುಗೆಯಾಗುತ್ತದೆ. ಅದು ನಿಮ್ಮೆಲ್ಲರದೂ ಆಗುತ್ತದೆ.

ಕೊನೆಯದಾಗಿ, ಪುಟ್ಟಣ್ಣಯ್ಯ ಸಾಮಾನ್ಯವಾಗಿ ಎಲ್ಲಾ ಮೀಟಿಂಗ್‍ಗಳಿಗೂ ಲೇಟಾಗಿ ಬರುತ್ತಿದ್ದರು. `ಯಾಕ್ರಿ ಲೇಟು?’ ಅಂದ್ರೆ `ಅಯ್ಯೋ ಊರ್ಕಡೆ ಒಂದು ಗಂಡ ಹೆಂಡ್ತಿ ವ್ಯಾಜ್ಯ… ಪರಿಹರಿಸಿ ಬಂದೆ’ ಅಂತಿದ್ದರು. ಅಥವಾ `ಒಂದು ಸಾವಾಯ್ತು. ಹೂ ಹಾರ ಹಾಕ್ಬಂದೆ, ಏನ್ ತಾನೇ ಮಾಡಕ್ಕಾದ್ದು?’ ಅಂತಿದ್ದರು. ಇಂಥ ಸಂದರ್ಭಗಳಲ್ಲಿ ಅವರ ಮನಸ್ಸಲ್ಲೊಂದು ತಮಿಳ್ ಹಾಡು ಗುಣುಗುತ್ತಿತ್ತು. ಒಂದು ಸಲ ಅದನ್ನು ಜೋರಾಗೂ ಹಾಡಿದ್ದರು. ಅದೇ- `ಪೋನಾಲ್ ಪೋಗಟ್ಟಂ ಪೋಡಾ… ಇಂದ ಭೂಮಿಯಲ್ ನಿಲಯಾಯ್ ವಾಳ್ದವನ್ ಯಾರ್‍ಡಾ?’ ಅಂತ. ಜೀವನ ಕ್ಷಣಿಕ ಎಂದು ಹೇಳುವ ಹಾಡು. ಜೀವನ ಕ್ಷಣಿಕ ಎಂಬ ಅರಿವು ಪುಟ್ಟಣ್ಣಯ್ಯಗೆ ಇತ್ತು. ಹಾಗಾಗೇ ಅವರು ಯಾರನ್ನೇ ಕಂಡರೂ ಊಟ ಮಾಡ್ಕಂಡು ಹೋಗಿ ಅಂತಿದ್ರು. ಕುಡಿಬೇಡಿ, ಜಗಳಾಡಬೇಡಿ ಅಂತ ಕೈ ಮುಗಿದು ಕೇಳುತ್ತಿದ್ದರು. ತನ್ನನ್ನು ವಿರೋಧಿಸಿದವರ ಬಗ್ಗೂ ಮಚ್ಚರ ಇಟ್ಟುಕೊಳ್ಳುತ್ತಿರಲಿಲ್ಲ. ತಲೆ ಹೊಡೆದಾದರೂ ಹಣ ಆಸ್ತಿ ಸಂಪತ್ತು ಸಂಗ್ರಹಿಸಿ ಜನರನ್ನು ಅಸಹಾಯಕರನ್ನಾಗಿಸಿ ದೀನರನ್ನಾಗಿಸುವ ರಾಜಕಾರಣ ಇವರಾದಾಗಿರಲಿಲ್ಲ. `ಕೆ.ಆರ್.ಎಸ್. ಅಣೆಕಟ್ಟೆಗೆ ಡೈನಮೆಟ್ ಇಟ್ಟರೂ ಸರಿಯೇ, ಎಲ್ಲಾ ಕೊಚ್ಚುಕೊಂಡು ಹೋದರೂ ಸರಿಯೇ… ನಾನು ನನ್ನ ಬಂಧು ಬಳಗ ಉಳಿದರೆ ಸಾಕು’ ಎಂಬ ಮನೋಭಾವದ ಇಂದಿನ ರಾಜಕಾರಣದಲ್ಲಿ ಪುಟ್ಟಣ್ಣಯ್ಯ ಮನುಷ್ಯತ್ವದ ಸಾಕಾರಮೂರ್ತಿಯಾಗಿದ್ದರು. ಇಂತಹ ಮೌಲ್ಯಗಳನ್ನು ನಾವು ಉಳಿಸಿಕೊಳ್ಳಬೇಕಾಗಿದೆ. ಈಗ ಇದಕ್ಕೆ ಉಳಿದಿರುವ ದಾರಿ ಒಂದೇ. ಮುಂಬರುವ ಚುನಾವಣೆಯಲ್ಲಿ ಜೀವನ ಕ್ಷಣಿಕ ಎಂಬ ಅರಿವಿನಲ್ಲಿ ಮನುಷ್ಯತ್ವಕ್ಕೆ ಸಮಾನತೆ ಸಹಬಾಳ್ವೆಗೆ ಮತ ನೀಡಬೇಕು. ಹಣ ಹೆಂಡ, ಜಾತಿ ಮತ ಆಮಿಷಗಳಿಗೆ ಮತದಾರ ಒಳಗಾಗಬಾರದು. ಆಗ ಮಾತ್ರವೇ ಕರ್ನಾಟಕ ಉಳಿಯುತ್ತದೆ. ಆಗ ಮಾತ್ರವೇ ನಾವೂ ನೀವೂ ಉಳಿಯುತ್ತೇವೆ.