ಪುನರಾಭಿವೃದ್ದಿಗೆ ಹೆಣ್ಣು ಸಾಕು,ಗಂಡು ಅನಿರೀಕ್ಷಿತ ಭವಿಷ್ಯಕ್ಕೆ ಮಾತ್ರ -ಕೆ. ಎನ್. ಗಣೇಶಯ್ಯ

male female
ಒಂದು ವಿಚಿತ್ರ ಪ್ರಪಂಚವನ್ನು ಕಲ್ಪಿಸಿಕೊಳ್ಳೋಣ: ಹೆಣ್ಣು ಮತ್ತು ಗಂಡು, ಎರಡೂ ಲಿಂಗಗಳಿಲ್ಲದ ಪ್ರಪಂಚ. ಈ ಪ್ರಪಂಚದಲ್ಲಿ ಪ್ರೇಮವಿಲ್ಲ, ಸಲ್ಲಾಪವಿಲ್ಲ, ಕಾಮವಿಲ್ಲ, ಸಂಭೋಗವಿಲ್ಲ. ಆದ್ದರಿಂದ ತಾಜ್‍ಮಹಲ್ಲೂ ಇಲ್ಲ ಶಕುಂತಲೆಗೆ ದೂರ್ವಾಸನ ಶಾಪವೂ ಇರುವುದಿಲ್ಲ. ಅಲ್ಲಿನ ಜನರಿಗೆ ಕೆಲವು ರೀತಿಯ ಸುದ್ದಿಗಳೂ ಇರುವುದಿಲ್ಲ:`ನಿನ್ನೆ ರಾತ್ರಿ ದೆಹಲಿಯಲ್ಲಿ ಸಮೂಹ ಅತ್ಯಾಚಾರ’; `ಐದು ವರ್ಷದ ಬಾಲಿಕೆಯ ಮೇಲೆ ಹಿರಿಯರೊಬ್ಬರ ಬಲಾತ್ಕಾರ’.ಹೆಣ್ಣು-ಗಂಡು ಇಲ್ಲದ ಪ್ರಪಂಚದಲ್ಲಿ ಅಂತಹ ಸುದ್ದಿಗಳಿಗೆ ಬರವಷ್ಟೆ ಅಲ್ಲದೆ, ಅಲ್ಲಿನ ಚರಿತ್ರೆಯೂ ಭಿನ್ನವಾಗಿರುತ್ತದೆ. ಸೀತೆಯ ಅಪಹರಣವಾಗಲಿ, ದ್ರೌಪದಿಯ ಮಾನಭಂಗವಾಗಲಿ, ಹೆಲೆನ್‍ಗಾಗಿ ಯುದ್ದವಾಗಲಿ ನಡೆಯಲು ಸಾಧ್ಯವಿಲ್ಲ. ಅಪಹರಣ ಮಾಡುವ ಗಂಡುಗಳಾಗಲಿ ಅಪಹರಣಕ್ಕೊಳಗಾಗುವ ಹೆಣ್ಣುಗಳಾಗಲಿ ಅಲ್ಲಿರುವುದಿಲ್ಲ. ಹಾಗೆಂದೆ ಅಲ್ಲಿ ರಾಮಾಯಣ, ಮಹಾಭಾರತ ನಡೆಯದು. ತನ್ನ ತಳುಕಿನ ಆಟ ನಡೆಸಲು ಕ್ಲಿಯೋಪಾತ್ರಳೂ ಅಲ್ಲಿರುವುದಿಲ್ಲ, ಅವಳ ಸೌಂದರ್ಯಕ್ಕೆ ಸೋಲುವ `ದುರ್ಬಲ’ ಗಂಡಸರೂ ಇರುವುದಿಲ್ಲ. ಕವಿಗಳಿಗೆ ಅದೊಂದು ನೀರಸ ಲೋಕ!!
ಈ ಕಲ್ಪನೆಯನ್ನು ಅತಿರೇಕಕ್ಕೆ ಒಯ್ಯುವ ಬದಲಾಗಿ ಅಂತಹ ಲೋಕದ ಸಾಧ್ಯಾಸಾದ್ಯತೆಗಳನ್ನು ಪರಿಗಣಿಸೋಣ: ವಿಕಾಸವಾದದ ಪ್ರಕಾರ ಯಾವುದೆ ಪ್ರಭೇದಕ್ಕೆ ಹೆಣ್ಣು ಮತ್ತು ಗಂಡು ಎರಡೂ ಲಿಂಗಗಳ ಅವಶ್ಯಕತೆ ಇರುವುದು ಮೂಲತಃ ಪುನರಾಭಿವೃದ್ದಿಗಾಗಿ ನಡೆಯಬೇಕಿರುವ ಸಂಭೋಗಕ್ಕೆ ಮಾತ್ರ. ಆದರೆ,ಸಂಭೋಗ ನಡೆದ ಮರುಕ್ಷಣವೆ ಪುನರಾಭಿವೃದ್ದಿಗೆ ಗಂಡಿನ ಅವಶ್ಯಕತೆ ಇರದು. ಕಾರಣ ಹೆಣ್ಣು ಗರ್ಭ ಧರಿಸಲು ಬೇಕಾದ ಕೆಲವೆ ವೀರ್ಯಾಣುಗಳನ್ನು ಕೊಟ್ಟ ಮರುಕ್ಷಣವೆ ಅವನ ಕೆಲಸ ಮುಗಿಯುತ್ತದೆ. ಆ ತಕ್ಷಣ, ಅವನು ಸತ್ತರೂ ಪ್ರಭೇದಕ್ಕೆ ಯಾವ ನಷ್ಟವೂ ಇಲ್ಲ!! ಒಂದು ರೀತಿಯಲ್ಲಿ ಅ ತಕ್ಷಣವೇ ಗಂಡು ಸತ್ತರೆ ಪ್ರಭೇದಕ್ಕೆ ಒಳ್ಳೆಯದು ಕೂಡ. ಏಕೆಂದರೆ, ಅವನು ಮುಂದೆ ಬದುಕಲು ಉಪಯೋಗಿಸುವ ಎಲ್ಲ ಆಹಾರ ಸಂಪತ್ತೂ ಉಳಿಯುವುದರಿಂದ ಅದನ್ನು ಅವನದೆ ಮಕ್ಕಳು ಪಡೆದು ಆರೋಗ್ಯವಂತರಾಗಿ ಬೆಳೆಯಬಹುದು. ಆದರೆ ಹೆಣ್ಣು, ತಾನು ಗರ್ಭ ಧರಿಸಿದ ಮಗುವನ್ನು (ಮಕ್ಕಳನ್ನು) ತನ್ನೊಳಗೆ ಸಾಕಿ ಸಲಹುವ ಜವಾಬ್ದಾರಿ ಮುಗಿಯುವವರೆಗೆ ಬದುಕಿದ್ದರೆ ಮಾತ್ರ ಪುನರಾಭಿವೃದ್ದಿ ಸಂಪೂರ್ಣ. ಹಾಗಾಗಿ ಪುನರಾಭಿವೃದ್ದಿಯು ಪ್ರಮುಖವಾಗಿ ಹೆಣ್ಣಿನ ಜವಾಬ್ದಾರಿಯಾಗಿದ್ದು, ಗಂಡು ಮೂಲತಃ ಸಂಭೋಗಕ್ಕಾಗಿ ಮಾತ್ರ ಅವಶ್ಯಕ ಅಷ್ಟೆ. ಬಹುಷಃ ಇದೇ ಕಾರಣಕ್ಕೆ ಕೆಲವು `ಭಕ್ಷಕ-ಕೀಟ’ಗಳಲ್ಲಿ ಸಂಭೋಗ ನಡೆಯುತ್ತಿದ್ದಂತೆಯೆ, ಹೆಣ್ಣು ಗಂಡನ್ನು ತಿಂದುಹಾಕುತ್ತಾಳೆ-ಅವನ ಅವಶ್ಯಕತೆ ಇನ್ನು ಬೇಕಿಲ್ಲವೆನ್ನುವಂತೆ. ಈ ಹಿನ್ನೆಲೆಯಲ್ಲಿ ಉದ್ಭವಿಸುವ ಪ್ರಶ್ನೆ ಎಂದರೆ, ಗಂಡಿನ ಪ್ರಾಮುಖ್ಯತೆ ಕೇವಲ ವೀರ್ಯದಾನ ಮಾತ್ರವೆ ಆಗಿದ್ದಲ್ಲಿ, ಆ ಕ್ರಿಯೆಯನ್ನು ವಿಕಾಸವು ಬೇರೆ ರೀತಿಯಲ್ಲಿ ರೂಪಿಸಲಾಗುತ್ತಿರಲಿಲ್ಲವೆ? ಸಂಭೋಗವೇ ಇಲ್ಲದಂತೆ ಪುನರಾಭಿವೃದ್ದಿ ಆಗಲು ಸಾಧ್ಯವಿಲ್ಲವೆ?
ವಿಚಿತ್ರವೆಂದರೆ ಅಂತಹ ಸಂಭೋಗರಹಿತ, ಏಕಲಿಂಗ ಪುನರಾಭಿವೃದ್ದಿ ಸಾಧ್ಯ! ಅಂತಹ ನೂರಾರು ಜೀವಿಗಳು ವಿಕಾಸಗೊಂಡಿವೆ ಕೂಡ. ಕಶೇರುಕಗಳಲ್ಲಿಯೇ ಸುಮಾರು 70 ಪ್ರಭೇದಗಳಲ್ಲಿ ಗಂಡಿಲ್ಲದೆಯೆ ಬರೀ ಹೆಣ್ಣುಗಳೆ ಪುನರಾಭಿವೃದ್ದಿ ಮಾಡುವುದನ್ನು ಗುರುತಿಸಲಾಗಿದೆ. ಓತಿಕ್ಯಾತ ಜಾತಿಗೆ ಸೇರಿದ ಕೆಲವು ಪ್ರಭೇದಗಳಲ್ಲಿ, ಜೇನು ದುಂಬಿಗಳಲ್ಲಿ, ಸಸ್ಯಗಳ ರಸ ಹೀರಿ ಬದುಕುವ ಕರಿಹೇನು ಅಥವ ಅಫಿಡ್ ಎಂಬ ಕೀಟಗಳಲ್ಲಿ, ಗಂಡಿಲ್ಲದೆ ಪುನರಾಭಿವೃದ್ದಿ ಅವಿರತವಾಗಿ ನಡೆಯುತ್ತದೆ. ಇದು ಬ್ಯಾಕ್ಟೀರಿಯದಂತಹ ಸೂಕ್ಷ್ಮ ಜೀವಿಗಳಲ್ಲಿ ಕಂಡು ಬರುವ ಲಿಂಗರಹಿತ, ಕೋಶ-ದ್ವಿಭಜನೆಯಿಂದಾಗುವ ಪುನರಾಭಿವೃದ್ದಿಯ ಹಾಗಲ್ಲ. ಈ ಪ್ರಭೇದಗಳಲ್ಲಿ ನಿರ್ಧಿಷ್ಟವಾದ ಹೆಣ್ಣು ಲಿಂಗವಿದೆ. ಆದರೆ ಗಂಡು ಲಿಂಗವಿಲ್ಲ. ಸಾಮಾನ್ಯವಾಗಿ ಎಲ್ಲ ಕೀಟ ಪ್ರಭೇದಗಳಲ್ಲೂ ಹೆಣ್ಣು ಕೀಟಗಳು ಮೊಟ್ಟೆ ಇಡುತ್ತವೆ. ಆ ಮೊಟ್ಟೆಗಳಿಂದ ಹುಳುಗಳು ಹೊರಬಂದು, ಹೆಣ್ಣು ಮತ್ತು ಗಂಡು ಎರಡೂ ರೀತಿಯ ಕೀಟಗಳಾಗಿ ಬೆಳೆಯುತ್ತವೆ. ಆದರೆ ಅಲಸಂದೆ, ಅವರೆ ಇತ್ಯಾದಿ ಸಸ್ಯಗಳ ತುದಿಯಲ್ಲಿ ಎಲೆಗಳ ಸುತ್ತ, ಗುಂಪುಗಳಲ್ಲಿ ಜೀವಿಸುವ ಅಫಿಡ್ ಎಂಬ ಕೀಟ ಪ್ರಭೇದಗಳು ಇದಕ್ಕೆ ಅಪವಾದ. ಚಿಗುರೆಲೆಗಳು ಸಮೃದ್ದಿಯಾಗಿ ಬೆಳೆಯುವ ಸಮಯದಲ್ಲಿ ಅವುಗಳ ಮೇಲೆ ಬದುಕುವ ಅಫಿಡ್‍ಗಳ ಗುಂಪಲ್ಲಿ ಕಾಣಸಿಗುವುದು ಬರೀ ಹೆಣ್ಣುಗಳೆ. ರೆಕ್ಕೆ ಇಲ್ಲದ ಈ ಹೆಣ್ಣು ಕೀಟಗಳು ಸಂಭೋಗಕ್ರಿಯೆಯೆ ಇಲ್ಲದೆ, ಮೊಟ್ಟೆಗಳ ಬದಲಿಗೆ ತಮ್ಮೊಳಗೆಯೆ ನೂರಾರು ಮರಿಗಳನ್ನು ಬೆಳೆಸಿ ಮರಿ ಹಾಕುತ್ತವೆ. ಆ ಎಲ್ಲ ಮರಿ ಅಫಿಡ್‍ಗಳೂ ಹೆಣ್ಣು ಕೀಟಗಳೆ: ತಾಯಿಯ ಹಾಗೆಯೆ, ಅವೂ ಕೂಡ ಸಂಭೋಗವಿಲ್ಲದೆಯೆ ತಮ್ಮಂತದೆ ಹೆಣ್ಣು ಅಫಿಡ್‍ಗಳಿಗೆ ಜನ್ಮ ನೀಡುತ್ತವೆ. ಹೀಗೆ ಅವುಗಳದ್ದು ಸಂಪೂರ್ಣ ಹೆಣ್ಣುಗಳ ಪ್ರಪಂಚ- ಚಂದಮಾಮ ಕಥೆಗಳ ಕಲ್ಪನಾ ಲೋಕದಂತೆ: ಸಮುದ್ರದಲ್ಲಿ ಎಲ್ಲೋ ದೂರದ ದ್ವೀಪದಲ್ಲಿ ಒಂದು ದೇಶ. ಆ ದೇಶದಲ್ಲಿ ಬರೀ ಹೆಂಗಸರು, ಅಲ್ಲೊಬ್ಬ ರಾಣಿ, ಅಲ್ಲಿ ಹೆಂಗಸರದೆ ಆಡಳಿತ, ದರ್ಬಾರು.. ಯಾವ ಗಂಡಸನ್ನೂ ಒಳಗೆ ಬಿಟ್ಟುಕೊಡರು.. .. ಹೀಗೆ. ಅಫಿಡ್‍ಗಳಲ್ಲಿನ ಇಂತಹ`ಸಂಪೂರ್ಣ ಹೆಣ್ಣುಗಳ ಸಂಸಾರ’ ಕೆಲವು ಹೆಬ್ಬಾವುಗಳಲ್ಲೂ, ಓತಿಕ್ಯಾತಗಳಲ್ಲೂ, ಕಾಣಬಹುದು. ಆದರೆ ಬರೀ ಹೆಣ್ಣುಗಳಿಂದಲೇ ತುಂಬಿದ ಸಂಭೋಗರಹಿತ ಪುನರಾಭಿವೃದ್ದಿಯಿಂದ ಯಾವ ಲಾಭ? ವಿಚಿತ್ರವೆಂದರೆ ಗಂಡಿನ ಅವಶ್ಯಕತೆ ಇಲ್ಲದ ಅಂತಹ ಪುನರಾಭಿವೃದ್ದಿಯೇ ನಿಜಕ್ಕೂ ಉತ್ತಮವಾದ ಕ್ರಮ ಎಂದು ವಿಜ್ಞಾನಿಗಳು ವಾದಿಸುತ್ತಾರೆ. ಮಕ್ಕಳ ಭಾಗ್ಯವನ್ನೇ ಕದಿಯುವ ಗಂಡು, ಇಡೀ ಪ್ರಭೇದಕ್ಕೇ ದುಬಾರಿಯಾದ ಲಿಂಗವೆಂದು ತೋರಿಸಲಾಗಿದೆ. ಈ ವಾದದ ತಿರುಳನ್ನು ತಿಳಿಯಲು ಎರಡು ಜಾತಿಯ ಜೀವಿಗಳನ್ನು ಊಹಿಸಿಕೊಳ್ಳೋಣ.
ಅ-ಜಾತಿ: ಇದರಲ್ಲಿ ಹೆಣ್ಣು ಮತ್ತು ಗಂಡುಗಳು ಎರಡೂ ಇದ್ದು, ಸಂಭೋಗ ನಡೆಸಿ ಪುನರಾಭಿವೃದ್ದಿಯನ್ನು ಕೈಗೊಳ್ಳುತ್ತವೆ. ಗಂಡು ಮತ್ತು ಹೆಣ್ಣಿನ ಒಂದು ಜೋಡಿ ಒಂದು ಪೀಳಿಗೆಯಲ್ಲಿ 10 ಮಕ್ಕಳಿಗೆ ಜನ್ಮ ಕೊಡುತ್ತಾರೆ ಎಂದುಕೊಳ್ಳೋಣ. ಆ ಹತ್ತು ಮಕ್ಕಳೂ ಹುಟ್ಟುವುದು ಹೆಣ್ಣಿಗೆ ಮಾತ್ರ ಎನ್ನುವುದನ್ನು ಗಮನಿಸಬೇಕು.
ಇ-ಜಾತಿ: ಇದರಲ್ಲಿ ಎಲ್ಲರೂ ಹೆಣ್ಣುಗಳೇ. ಇದು ಅಫಿಡ್ ರೀತಿಯಲ್ಲಿ ಸಂಭೋಗವಿಲ್ಲದೆ ಪುನರಾಭಿವೃದ್ದಿ ನಡೆಸುವ ಜಾತಿ. ಹಾಗಾಗಿ, ಅ-ಜಾತಿಯ ಗಂಡು ಹೆಣ್ಣಿನ ಒಂದು ಜೋಡಿಯ ಬದಲಾಗಿ ಇಲ್ಲಿ ಎರಡೂ ಹೆಣ್ಣುಗಳೆ ಇರುತ್ತವೆ. ಅವೆರಡೂ ಹೆಣ್ಣುಗಳು ಒಟ್ಟಿಗೆ 20 ಮಕ್ಕಳಿಗೆ ಜನ್ಮ ಕೊಡಬಲ್ಲರು. ಅಂದರೆ ಅ-ಜಾತಿಗಿಂತ ಇ-ಜಾತಿಯಲ್ಲಿ ಪ್ರತಿ ಜೋಡಿಗೆ 10 ಮಕ್ಕಳು ಹೆಚ್ಚಿಗೆ ಹುಟ್ಟುತ್ತಾರೆ ಎಂದಾಯಿತು.ಇದರಿಂದ ಪ್ರತಿ ಪೀಳಿಗೆಯಲ್ಲೂ ಇ-ಜಾತಿಯಲ್ಲಿ ಅ-ಜಾತಿಯ ಎರಡರಷ್ಟು ಮಕ್ಕಳು ಹುಟ್ಟುತ್ತವೆ-ಅವೆಲ್ಲವೂ ಹೆಣ್ಣುಗಳೇ. ಇದು ಹೀಗೆಯೇ ಮುಂದುವರಿದರೆ, ಗಂಡುಗಳೆ ಇಲ್ಲದ ಇ-ಜಾತಿಯು ಕಾಲಕ್ರಮೇಣ ಅ-ಜಾತಿಯನ್ನು ಹಿಂದಿಕ್ಕಿ ಸಮೃದ್ದಿಯಾಗಿ ಬೆಳೆದು ಹರಡುತ್ತದೆ. ಅ-ಜಾತಿ ಕ್ರಮೇಣ ನಶಿಸಿಹೋಗುತ್ತದೆ. ಹೀಗೆ, ಅ-ಜಾತಿಯಲ್ಲಿರುವ ದಂಡದ ಗಂಡುಗಳು ಪ್ರಭೇದದ ಉಳಿವಿಗೇ ಸಂಚಕಾರ ತರುತ್ತವೆ. ಮಕ್ಕಳಿಗೆ ಜನ್ಮ ನೀಡದೆ, ಅವರ ಊಟವನ್ನೂ ಕಸಿದು ತಿನ್ನುವ ಗಂಡುಗಳು ಪುನರಾಭಿವೃದ್ದಿಗೇ ಮಾರಕ, ಅನವಶ್ಯಕ.
ಈ ವಾದದಂತೆ, ಬರೀ ಹೆಣ್ಣುಗಳಿಂದ ತುಂಬಿದ ಇ-ಜಾತಿಯಂತಹ ಪ್ರಭೇದಗಳೆ ಪ್ರಪಂಚದಾಧ್ಯಂತ ಕಾಣಬೇಕಿತ್ತು. ಆಗ ನಾವೆಲ್ಲರೂ ಹೆಣ್ಣು-ಗಂಡು ಎಂಬ ಲಿಂಗಗಳ ಪರಿಕಲ್ಪನೆಯೇ ಇಲ್ಲದ ಸಮಾಜದಲ್ಲಿ ಜೀವಿಸುವ ಮಾನವ(ವಿ)ರಾಗುತ್ತಿದ್ದೆವು. ನಮ್ಮ ಸಮುದಾಯವು ಮದುವೆ, ವರದಕ್ಷಿಣೆ ಇಲ್ಲದ, ಸತಿಯೊಡನೆ ಸಹಗಮನ, ಬಲಾತ್ಕಾರ, ಹೆಣ್ಣಿನ ಶೋಷಣೆ ಇಂತಹ ಅಭಾಸ ಘಟನೆಗಳೆ ಜರುಗದ, ಶಾಂತಿಯುತ ನಾಗರಿಕತೆಯಾಗುತ್ತಿತ್ತು. ಮಾನವನ ಚರಿತ್ರೆಯೇ ಬದಲಾಗುತ್ತಿತ್ತು. ವಾಲ್ಮೀಕಿಗೆ ವಸ್ತುವೆ ಇರುತ್ತಿರಲಿಲ್ಲ; ಗಂಡು ವಾಲ್ಮೀಕಿಯೇ ಇರುತ್ತಿರಲಿಲ್ಲ. ಅಥವ ಲಿಂಗರಹಿತ ವಾಲ್ಮೀಕಿ ಇದ್ದಿದ್ದರೆ, `ಆಕೆ’, ಬೇರೆ ಯಾವುದೋ ವಸ್ತುವಿನ ಸುತ್ತ ತನ್ನ ರಾಮಾಯಣ (ಸೀತಾಯಣ?) ವನ್ನು ರಚಿಸಬೇಕಿತ್ತು.. . . ಕಾಳಿದಾಸ(ಸಿ) ಕಲ್ಪನೆ ಆಗ ಅದೆಷ್ಟು ಸಪ್ಪೆಯಾಗುತ್ತಿತ್ತು?
ಆದರೆ ವಿಕಾಸದ ಹಾದಿಯಲ್ಲಿ ಹೀಗಾಗಿಲ್ಲ. ಅದೃಷ್ಟವೋ ದುರದೃಷ್ಟವೋ, ಜೀವ ಪ್ರಪಂಚದಲ್ಲಿ ಅಫಿಡ್‍ನಂತಹ ಪ್ರಭೇದಗಳು ಕೆಲವು ಮಾತ್ರವೆ ಕಾಣಸಿಗುತ್ತವೆ. ಮಿಕ್ಕೆಲ್ಲ ಪ್ರಾಣಿ-ಜೀವಕೋಟಿಯು ಹೆಣ್ಣು-ಗಂಡುಗಳ ಲಿಂಗ ಬೇದವಿರುವ ಪ್ರಭೇದಗಳಿಂದಲೇ ತುಂಬಿಕೊಂಡಿದೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳನ್ನು ಕೆಲವು ಪ್ರಶ್ನೆಗಳು ಕಾಡುವುದು ಸಹಜ: ಗಂಡು ಅಷ್ಟು ದುಬಾರಿಯಾದರೂ ಅದು ವಿಕಾಸಗೊಳ್ಳಲು ಕಾರಣವೇನು? ಎಲ್ಲ ಪ್ರಭೇದಗಳೂ ಅಫಿಡ್‍ಗಳ ರೀತಿಯಲ್ಲಿ ಬರೀ ಹೆಣ್ಣುಗಳಿಂದ ಯಾಕೆ ತುಂಬಿಕೊಂಡಿಲ್ಲ? ಸಂಭೋಗಕ್ರಿಯೆ ಏಕೆ ವಿಕಾಸಗೊಂಡಿದೆ? ಇವಕ್ಕೆ ಉತ್ತರವೂ ಅಫಿಡ್‍ಗಳ ಜೀವನ ಕ್ರಮದಲ್ಲಿಯೇ ಅಡಗಿದೆ. ರೆಕ್ಕೆಗಳಿಲ್ಲದ ಹೆಣ್ಣು ಅಫಿಡ್‍ಗಳು, ಚಿಗುರೆಲೆಗಳು ಅನಾಯಾಸವಾಗಿ ಸಿಗುವವರೆಗೆ, ಬರೀ ಹೆಣ್ಣು ಮಕ್ಕಳನ್ನೇ ಹೆರುತ್ತ ಸಾಗುತ್ತವೆ. ಆದರೆ ಒಮ್ಮೆ ಆಹಾರದ ಕೊರತೆ ಪ್ರಾರಂಭವಾದಂತೆ, ತಮ್ಮ ಜೀವನ ಕ್ರಮವನ್ನೇ ಬದಲಾಯಿಸುತ್ತವೆ. ಹಸಿರು ಒಣಗುತ್ತಿದ್ದಂತೆ, ಈ ಅಫಿಡ್‍ಗಳು ರೆಕ್ಕೆಭರಿತ, ಹೆಣ್ಣು ಮತ್ತು ಗಂಡುಗಳೆರಡನ್ನೂ ಹೆರಲು ಪ್ರಾರಂಭಿಸುತ್ತವೆ. ಹಾಗೆ ಹುಟ್ಟಿದ ಗಂಡು-ಹೆಣ್ಣು ಅಫಿಡ್‍ಗಳು ತಮ್ಮ ತಾಯಿ ನೆಲೆಸಿದ್ದ ಸಸ್ಯವನ್ನು ತೊರೆದು, ಬೇರೆಲ್ಲೋ ದೂರ ಹಾರಿ, ನೆಲೆಯಾಗತೊಡಗುತ್ತವೆ. ಅಲ್ಲಿ ತಾವು ತೊರೆದು ಬಂದಂತದೇ ಸಸ್ಯ, ತಮಗೆ ಒಗ್ಗುವ ಆಹಾರ ಸಿಗುತ್ತದೆ ಎಂಬ ಖಚಿತತೆ ಇರುವುದಿಲ್ಲ. ಹಾಗಾಗಿ ಅವುಗಳಿಗೆ ಹುಟ್ಟುವ ಮಕ್ಕಳು ಅನಿರೀಕ್ಷಿತ ಮತ್ತು ಭಿನ್ನವಾದ ವ್ಯವಸ್ಥೆಗಳಿಗೆ ಒಗ್ಗಿಕೊಳ್ಳಬೇಕಾಗುತ್ತದೆ. ಈ ಸ್ಥಿತಿಯಲ್ಲಿ ಹುಟ್ಟುವ ಮಕ್ಕಳ ವಂಶಧಾತುಗಳು ತಾಯಿಗಿಂತ ಭಿನ್ನವೂ ವೈವಿಧ್ಯಮಯವೂ ಆಗಿದ್ದರೆ ಹೊಸ ಸ್ಥಿತಿಗತಿಗಳಿಗೆ ಒಗ್ಗಿಕೊಳ್ಳುವ ಸಾದ್ಯತೆ ಹೆಚ್ಚುತ್ತದೆ; ಪ್ರಭೇದವು ಅಳಿಯದೆ ಉಳಿದು ಬೆಳೆಯುತ್ತದೆ. ಅಂತಹ ವೈವಿಧ್ಯಮಯವಾದ ಪೀಳಿಗೆಯನ್ನು ಹೆರಬೇಕೆಂದರೆ ಅವು ಬೇರೆ ಗುಂಪಿನ ಹೆಣ್ಣು-ಗಂಡುಗಳೊಡನೆ ಸಂಭೋಗದಲ್ಲಿ ತೊಡಗಿಕೊಳ್ಳಬೇಕು. ಅಂತಹ ವಿವಿಧ ಜಾತಿಗಳ ಅಥವ ಗುಂಪುಗಳ ನಡುವಿನ ಸಂಯೋಗದಿಂದ ವಂಶಧಾತುಗಳು ವಿವಿಧ ರೀತಿಯಲ್ಲಿ ಬೆರೆತು, ನೂರಾರು, ಸಾವಿರಾರು ರೀತಿಯ, ವೈವಿಧ್ಯಮಯ ಮಕ್ಕಳು ಹುಟ್ಟಲು ಸಾಧ್ಯ. ಈ ಕಾರಣಕ್ಕಾಗಿಯೆ, ರೆಕ್ಕೆ ಹೊತ್ತು ತಮ್ಮ ಮೂಲ ಸಸ್ಯದಿಂದ ಬೇರೆಡೆಗೆ ಹಾರಿದ ಹೆಣ್ಣು-ಗಂಡು ಅಫಿಡ್‍ಗಳು ಇತರೆ ಸಸ್ಯಗಳಿಂದ ಹಾಗೆಯೇ ಹಾರಿ ಬಂದಿರುವ ಅಫಿಡ್‍ಗಳೊಡನೆ ಸಂಭೋಗ ನಡೆಸಿ, ಪುನರಾಭಿವೃದ್ದಿಯಲ್ಲಿ ತೊಡಗುತ್ತವೆ. ಪರಿಣಾಮವಾಗಿ, ಹಲವಾರು ಕಡೆಗಳಿಂದ ಬಂದ ಅನುವಂಶಿಕ ಧಾತುಗಳು ಸಾವಿರಾರು ರೀತಿಯ ಸಂಯೋಜನೆಗಳಲ್ಲಿ ಬೆರೆಯುವುದರಿಂದ, ಅವುಗಳಿಗೆ ಹುಟ್ಟುವ ಮಕ್ಕಳೂ ಅನುವಂಶಿಕವಾಗಿ ಅಷ್ಟೆ ವೈವಿಧ್ಯಮಯವಾಗಿದ್ದು, ಅವುಗಳಲ್ಲಿ ಬಹುಪಾಲು ಮಕ್ಕಳು ಅನಿರೀಕ್ಷಿತ ಹಾಗೂ ವಿವಿಧ ರೀತಿಯ ಸಸ್ಯಗಳಿಗೆ, ಸ್ಥಿತಿಗಳಿಗೆ ಒಗ್ಗಿಕೊಳ್ಳಲು ಶಕ್ತ-ಸಿದ್ದವಾಗಿರುತ್ತವೆ.
ಹೀಗೆ,ಹುಟ್ಟುವ ಮಕ್ಕಳು ಅನಿರೀಕ್ಷಿತವಾದ ಭವಿಷ್ಯಕ್ಕೆ ಹೊಂದಿಕೊಳ್ಳಲು ಅವಶ್ಯಕವಾದ ಅನುವಂಶಿಕ ವೈವಿಧ್ಯತೆಯನ್ನು ಸೃಜಿಸಲೆಂದೆ ಎರಡೂ ಲಿಂಗಗಳು, ಅದರಲ್ಲೂ ಗಂಡು ವಿಕಾಸ ಹೊಂದಲು ಮೂಲ ಕಾರಣವಾಗಿದೆ. ಅಂದರೆ ಗಂಡು ಮೂಲತಃ ಸಂಭೋಗಕ್ಕಾಗಿ ಮಾತ್ರ ವಿಕಾಸಗೊಂಡ ಕಾಮಯಂತ್ರವಷ್ಟೆ. ಪ್ರಪಂಚ ಸದಾ ಬದಲಾಗುತ್ತಲೇ ಇರುತ್ತದೆ- ಎಲ್ಲ ಸ್ಥರಗಳಲ್ಲೂ. ಅದರ ಜೊತೆಗೆ, ಎಲ್ಲ ಪ್ರಭೇದಗಳ ವಸ್ತುಸ್ಥಿತಿಯು ಬದಲಾಗುತ್ತಲೆ ಇರುತ್ತದೆ- ಅನಿರೀಕ್ಷಿತ ದಿಕ್ಕುಗಳಲ್ಲಿ ಮತ್ತು ವಿಧಗಳಲ್ಲಿ. ಅಂತಹ ಬದಲಾವಣೆಗಳಿಗೆ ಒಗ್ಗಿ ಬದುಕುವುದು ಎಲ್ಲ ಜೀವಿಗಳು ಸದಾ ಎದುರಿಸುವ ಸವಾಲು. ಅದಕ್ಕೆಂದೆ ಎಲ್ಲ ಜೀವಿಗಳಲ್ಲಿ ಸಂಭೋಗ ಕ್ರಿಯೆ, ಮತ್ತು ಅದಕ್ಕಾಗಿ ಗಂಡು, ವಿಕಾಸಗೊಂಡಿವೆ. ಅನಿರೀಕ್ಷಿತ ಭವಿಷ್ಯದ ಸವಾಲನ್ನು ಎದುರಿಸಲೆಂದೆ ಹುಟ್ಟಿದ ಗಂಡು, ಮಾನವ ಸಮಾಜದಲ್ಲಿ ತನಗೆ ವಿಕಾಸ ಹಚ್ಚಿದ ಕರ್ತವ್ಯ- ಸಂಭೋಗವನ್ನು, ತನ್ನ ಕೋಶ ಕೋಶಗಳಲ್ಲೂ ಅತಿಯಾಗಿ ತುಂಬಿಕೊಂಡಿರುವುದರಿಂದಲೆ ನಾವು ದಿನನಿತ್ಯ ಅಸಹ್ಯಭರಿತ ಸುದ್ದಿಗಳನ್ನು ಓದಬೇಕಾದ ದುಸ್ಥಿತಿ ಒದಗಿರುವುದು. ಅವನಲ್ಲಡಗಿರುವ ಈ ಪ್ರಾಣಿಗುಣದ ನಿಯಂತ್ರಣಕ್ಕೆಂದೆ ನಾವು ಕೆಲವು ಕಟ್ಟುಪಾಡುಗಳ ಸಂಸ್ಕೃತಿಯನ್ನು ಸೃಷ್ಟಿಸಿಕೊಂಡಿರುವುದು. ಆ ಸಂಸ್ಕೃತಿಯನ್ನು ತನ್ನ ನಡತೆಯಲ್ಲಿ ಅಳವಡಿಸಿಕೊಳ್ಳಲಾಗದ ದುರ್ಬಲ `ಗಂಡು’ ಹಲವು ಅಭಾಸಗಳಿಗೆ ಕಾರಣವಾಗುತ್ತಾನೆ. ಅನಿರೀಕ್ಷತೆಯ ಭವಿಷ್ಯದ ಸವಾಲು ಇಲ್ಲದಿದ್ದಲ್ಲಿ ಈ ಪ್ರಪಂಚ ಕೇವಲ ಹೆಣ್ಣುಗಳಿಂದಲೇ ತುಂಬಿದ ನೀರಸ ಲೋಕವಾಗುತ್ತಿತ್ತು. ಹಾಗಾಗಿ ಅನಿರೀಕ್ಷತೆಯೇ ಈ ಲೋಕದ ಪ್ರೇಮಕ್ಕೆ, ಕಾಮಕ್ಕೆ, ಗಂಡಿಗೆ ಮೂಲ ಕಾರಣವಾಗಿದೆ.