ಯಾರು ನರಮಾಂಸ ಭಕ್ಷಕರು?
[ದೇವನೂರ ಮಹಾದೇವ ಅವರು ನಾಲ್ಕು ದಶಕದ ಹಿಂದೆ ಕೋಲಾರದ ಬಹಿರಂಗ ಸಭೆಯಲ್ಲಿ ಹೇಳಿದ್ದ ಚಂದಮಾಮ ಕಥೆಯು, 2.11.1995ರ ಕೋಲಾರದ ದೈನಿಕ ಪತ್ರಿಕೆಯಲ್ಲಿ ವರದಿಯಾಗಿ ಪ್ರಕಟವಾಗಿತ್ತು. ಅಸಮರ್ಪಕವಾಗಿದ್ದ ವರದಿಯನ್ನು ಅವರ ಆಶಯಕ್ಕೆ ಅನುಸಾರವಾಗಿ ತಿದ್ದಿ ನೀಡಿದ್ದಾರೆ. ನಮ್ಮ ಓದಿಗಾಗಿ ಇಲ್ಲಿದೆ. ]
“ಚಕ್ರವರ್ತಿಯೊಬ್ಬನಿಗೆ ಇಡೀ ಭೂಮಂಡಲವನ್ನೆಲ್ಲಾ ಗೆದ್ದು ತನ್ನ ಚಕ್ರಾಧಿಪತ್ಯ ಸ್ಥಾಪಿಸಬೇಕೆಂಬ ಬಯಕೆ. ಅದರಂತೆ ತನ್ನ ಪಕ್ಕದ ರಾಜ್ಯದ ಮೇಲೆ ದಂಡೆತ್ತಿ ಹೋದ.
ಘೋರ ಯುದ್ಧ ನಡೆದು ಲಕ್ಷಾಂತರ ಸೈನಿಕರು ಮಡಿದರು. ಚಕ್ರವರ್ತಿ ತಾನು ಹಮ್ಮಿನಲ್ಲಿ ಯುದ್ಧಭೂಮಿಯಲ್ಲಿ ಹೊಡೆದುರುಳಿಸಿದ ಸೈನಿಕರ ಶವಗಳತ್ತ ನೋಟ ಬೀರಿದ.
ಅವನಿಗೆ ದಿಗ್ಭ್ರಮೆಯಾಗುವ ದೃಶ್ಯ ಕಂಡಿತು. ಆ ನಾಡಿನ ಆಹಾರವಿಲ್ಲದೇ ಹಸಿದಿದ್ದ ವ್ಯಕ್ತಿಯೊಬ್ಬ ಹೆಣವೊಂದನ್ನು ಕಿತ್ತು ಗಬಗಬ ತಿನ್ನುತ್ತಿದ್ದ.
ಚಕ್ರವರ್ತಿಯನ್ನು ಕಂಡು ಭಯಗೊಂಡ ಅವನು ‘ದೊರೆಯೇ, ಹಸಿವನ್ನು ತಾಳಲಾರದೆ ನೀನು ಹೊಡೆದುರುಳಿಸಿದ ಸೈನಿಕನ ಹೆಣವನ್ನು ತಿನ್ನುತ್ತಿದ್ದೇನೆ.
ಇದು ನಿನ್ನ ಆಹಾರ. ನಿನ್ನ ಅಪ್ಪಣೆಯಿಲ್ಲದೆ ನಾನು ತಿನ್ನುತ್ತಿರುವುದಕ್ಕೆ ಕ್ಷಮಿಸು’ ಎಂದ. ಅದಕ್ಕೆ ಚಕ್ರವರ್ತಿ ‘ಇಲ್ಲ ನಾನು ನರಮಾಂಸ ಭಕ್ಷಕನಲ್ಲ’ ಎಂದ.
ಆಗ ಇವನು ಹೇಳುತ್ತಾನೆ: ‘ನೀನು ನರಮಾಂಸ ಭಕ್ಷಕನಲ್ಲದಿದ್ದರೆ ಇಷ್ಟೆಲ್ಲಾ ಮನುಷ್ಯರನ್ನು ಏಕೆ ಕೊಂದೆ. ನಾನು ಹಸಿವಾದಾಗ ಮಾತ್ರ
ಅನಿವಾರ್ಯವಾದರೆ ಕೊಲ್ಲುತ್ತೇನೆ’ ಎಂದ. ಚಕ್ರವರ್ತಿಗೆ ಮುಂದೇನು ಮಾತನಾಡಬೇಕೆಂದು ತೋಚದೆ
ಬಾಯಿ ಕಟ್ಟಿತು, ತಲೆತಗ್ಗಿಸಿ ನಿಂತ. ಚಕ್ರವರ್ತಿಗೆ ತಾನೇ ನರಭಕ್ಷಕ, ಕೊಲೆಗಾರ ಅನ್ನಿಸಿರಬೇಕು. ಹಸಿವಿನಿಂದ ತತ್ತರಿಸುತ್ತಿದ್ದವನ ಎದುರು ಮಂಡಿಯೂರಿ ಕೂತ.