A K 47 ಸುಬ್ಬಯ್ಯ! -ದೇವನೂರ ಮಹಾದೇವ

 

ಕೆಲವು ಲೋಹಗಳು ಇರುತ್ತವಂತೆ. ಇವುಗಳನ್ನು ಜ್ವಾಲಾಮುಖಿಯ ಲಾವಾದಿಂದಲೂ ಕೂಡ ಕರಗಿಸಲಾಗುವುದಿಲ್ಲವಂತೆ. ಜ್ವಾಲಾಮುಖಿಯ ಲಾವಾದ ಶಾಖ ಹೆಚ್ಚೆಂದರೆ 1200 ಡಿಗ್ರಿ ಸೆಲ್ಸಿಯಸ್. ಆದರೆ ನಿಯೋಬಿಯುಮ್ ಲೋಹದ ಮೆಲ್ಟಿಂಗ್ ಪಾಯಿಂಟ್ 2477 ಡಿಗ್ರಿ ಸೆಲ್ಸಿಯಸ್! ಬಹುಶಃ ಇಂಥಹುದೇ ಲೋಹದ ಕ್ಯಾಟಗರಿಗೆ ಸೇರಿದವರು ಎ.ಕೆ.ಸುಬ್ಬಯ್ಯ. ಇವರನ್ನು ಎ.ಕೆ. 47 ಸುಬ್ಬಯ್ಯ ಅಂತ ಕೆ.ಎಸ್.ಪುಟ್ಟಣ್ಣಯ್ಯ ಕರೆಯುತ್ತಿದ್ದರು. ಎ.ಕೆ ಅಂದರೆ ನಿಜವಾದ ಅರ್ಥದಲ್ಲಿ ಆದಿ ಕರ್ನಾಟಕ ಸುಬ್ಬಯ್ಯ. ಇವರು ನರಕದಲ್ಲಿದ್ದರೂ ಹಾಗೆ ಇರುತ್ತಾರೆ. ಸ್ವರ್ಗದಲ್ಲಿ ಇದ್ದಾಗಲೂ ಹಾಗೇ ಇರುತ್ತಾರೆ. ಭೂಮಿಯ ಮೇಲೆ ಇರುವಾಗಲೂ ಹಾಗೇ ಇರುತ್ತಾರೆ. ಇವರಿಗೆ ಈ ಸತ್ವ ಎಲ್ಲಿಂದ ಬಂತು? ಇದು ಯಕ್ಷ ಪ್ರಶ್ನೆ. ಉತ್ತರಿಸುವುದು ಕಷ್ಟ.
ಆದರೂ ಅಂದಾಜಿಸುತ್ತೇನೆ- ಚಂದಮಾಮದ ಜಾಹೀರಾತಲ್ಲಿ ಪ್ರಕಟವಾಗುತ್ತಿದ್ದ ಗಾಂಧಿ ಹೇಳಿಕೆಯೊಂದು ನನಗೆ ಆಗಾಗ ನೆನಪಾಗುತ್ತಿರುತ್ತದೆ. “ಮನುಷ್ಯ ತನ್ನನ್ನು ವಂಚಿಸಿಕೊಂಡಷ್ಟು ಬೇರೆ ಯಾರನ್ನೂ ವಂಚಿಸಿರಲಾರ”. ಇದನ್ನು ಮಲಗುವಾಗ ನೆನಸಿಕೊಂಡರೆ ಆ ರಾತ್ರಿ ನಾನು ನಿದ್ದೆ ಬರದೆ ಒದ್ದಾಡುತ್ತೇನೆ. ನನ್ನ ಬಗ್ಗೇನೆ ಬೆಚ್ಚುತ್ತೇನೆ. ಬಹುಶಃ ಸುಬ್ಬಯ್ಯ ತನ್ನನ್ನು ತಾನು ಹೆಚ್ಚು ವಂಚಿಸಿಕೊಂಡಿಲ್ಲ ಅನ್ನಿಸುತ್ತದೆ. ಹಾಗಾಗೇ ಆ ಲೋಹದ ಸತ್ವ ಇವರೊಳಗೆ ಬೆರೆತಿರಬೇಕು! ಒಂದಿಷ್ಟು ಸ್ಯಾಂಪಲ್ ನೋಡಿ: “ಗಾಂಧೀಜಿಯನ್ನು ಹತ್ಯೆ ಮಾಡಿದ ಪಕ್ಷದಲ್ಲಿ ಹೇಗಿದ್ದೀರಿ?” ಎಂದು ರಮೇಶ್ ಬಂದಗದ್ದೆ ಪ್ರಶ್ನಿಸಿದ್ದಕ್ಕೆ ಸುಬ್ಬಯ್ಯ- “ಉತ್ತರಿಸಲಾಗದೆ ಅಪರಾಧಿ ಸ್ಥಾನದಲ್ಲಿರುತ್ತೇನೆ” ಎನ್ನುತ್ತಾರೆ. ಈತ ಸರಳ, ನೇರ, ಪ್ರಾಮಾಣಿಕ ಅನ್ನಿಸುತ್ತದೆ. ಇನ್ನೊಂದು ಕಡೆ “ನನ್ನನ್ನು ವಿಮರ್ಶಿಸುವವರಿಗೆ ನಾನೇನೂ ಹಾನಿ ಮಾಡುವುದಿಲ್ಲ, ನನ್ನನ್ನು ವಿಮರ್ಶಿಸುವವರ ಹಕ್ಕಿಗಾಗಿ ನಾನೇ ಬೇಕಾದರೆ ಹೋರಾಡುತ್ತೇನೆ” ಅಂತಾರೆ. ತಾನು ನಂಬುವ ಮೌಲ್ಯಕ್ಕೆ ಈತ ಬದ್ಧ ಅನ್ನಿಸುತ್ತದೆ. ಹಾಗೇ ಬಿಎಸ್‍ಪಿ ಪಕ್ಷದಲ್ಲಿ ಸುಬ್ಬಯ್ಯ ನಾಯಕತ್ವಕ್ಕೆ, ದಲಿತರು ಕಿರುಕುಳ ಕೊಡತೊಡಗಿದಾಗ ಕಾನ್ಶಿರಾಂರವರು, ಅಂಥವರನ್ನು ಹೊಸಕಿ ಹಾಕಿ ಅಥವಾ ಹೊರಹಾಕಿ ಎಂದು ಸಲಹೆ ನೀಡಿದಾಗ ಸುಬ್ಬಯ್ಯ ಧೀರೋದ್ಧಾತ ನಿಲುವಿಗೆ ಬರುತ್ತಾರೆ – “ನಾನು ಯಾವ ಸಮುದಾಯದ ಸ್ವಾವಲಂಬಿ ಬದುಕಿಗೆ ಹಂಬಲಿಸುತ್ತೇನೊ, ಅವರು ಅಸಹಕಾರ ತೋರಿದರೂ ಅವರನ್ನೆ ಹೊಸಕಿಹಾಕುವುದು, ಹೊರಹಾಕುವುದು ನನ್ನಂತಹ ಮನಸ್ಥಿತಿಯುಳ್ಳವನಿಂದ ಸಾಧ್ಯವಿಲ್ಲ” ಎಂದು ತಾವೇ ಪಕ್ಷಕ್ಕೆ ರಾಜಿನಾಮೆ ಕೊಟ್ಟು ಹೊರಬರುತ್ತಾರೆ. ತಾನು ನಂಬಿದ ತತ್ವಕ್ಕೆ ಬದ್ಧನಾದವನು ಮಾತ್ರ ಇದನ್ನು ಮಾಡಲು ಸಾಧ್ಯ. ಮುಂದೆ ಇವರು ಕಾಂಗ್ರೆಸ್‍ಗೆ ಸೇರಿದಾಗ – “ಕಾಂಗ್ರೆಸ್ ನನ್ನ ಹಾದಿಗೆ ಬರಬೇಕಷ್ಟೇ ಹೊರತು ನಾನು ಕಾಂಗ್ರೆಸ್ ದಾರಿಗೆ ಹೋಗುವವನಲ್ಲ” ಅನ್ನುತ್ತಾರೆ. ಅಹಂ ಅನ್ನಿಸುವಷ್ಟು ಆತ್ಮವಿಶ್ವಾಸಿ ಹಾಗೂ ಕೆಲವು ಕಡೆ ಒರಟ ಅನ್ನಿಸುತ್ತದೆ. ಜೊತೆಗೆ ಇವರು ಮುಗ್ಧರೂ ಕೂಡ. ಒಂದು ಸಂದರ್ಭದಲ್ಲಿ ಹೆಚ್.ಡಿ.ದೇವೇಗೌಡರು ಇವರ ನೆರವನ್ನು ಬಯಸಿ ಸುಬ್ಬಯ್ಯನವರ ಕೈಹಿಡಿದುಕೊಂಡು “ಇದು ನಿಮ್ಮ ಕೈಯಲ್ಲ, ಪಾದ ಅಂದುಕೊಳ್ಳಿ” ಅಂದ ಲೋಕರೂಢಿ ಮಾತನ್ನು ಅಕ್ಷರಶಃ ಸತ್ಯ ಎಂದು ನಂಬಿ ಬಿಡುತ್ತಾರೆ. ಕೆಲಸವಾದ ಮೇಲೆ ಹೆಚ್.ಡಿ.ದೇವೇಗೌಡ ಅವರು ಇವರನ್ನು ಉಪೇಕ್ಷೆ ಮಾಡಿದಾಗ ಅರ್ಥ ಮಾಡಿಕೊಳ್ಳಲಾಗದೆ ಪೆಚ್ಚಾಗುತ್ತಾರೆ. ಅದಕ್ಕೇ ಹೇಳಿದೆ, ಮುಗ್ಧ ಕೂಡ ಅಂತ. ಈ ಮುಗ್ಧತೆಯನ್ನು ಪ್ರೀತಿಸೋಣ, ಗೌರವಿಸೋಣ.
ಏಕೆಂದರೆ – ಇಂದು ವಿಧ್ವಂಸಕ ಧರ್ಮ ತಾಂಡವವಾಡುತ್ತಿದೆ. ವಂಚನೆ, ದ್ರೋಹಗಳು ಲೋಕವನ್ನು ಆಳುತ್ತಿವೆ. ಇತ್ತೀಚೆಗೆ ಪ್ರಧಾನಿ ಮೋದಿಯವರು ಮೈಸೂರಿಗೆ ಬಂದಿದ್ದಾಗ ಅವರ ಭಾಷಣ ಕೇಳಿದೆ. ಅವರು ಆರ್ಭಟಿಸಿಕೊಂಡು ಅಭಿನಯಿಸುತ್ತಾ ತನ್ನ ವಿರೋಧಿಗಳ ಕುರಿತು ಹೇಳುತ್ತಿದ್ದರು – “ಅವರೆಲ್ಲಾ ಸುಳ್ಳು ಹೇಳ್ತಾರೆ.. ಸುಳ್ಳು ಹೇಳೋಕೆ ನಾಚಿಕೆ ಆಗಲ್ವಾ” ಅಂತ! ಮೋದಿಯವರ ಮಾತು ಕೇಳಿ ಸುಳ್ಳು ಕೂಡ ನಾಚಿಕೊಂಡು ಬಿಟ್ಟಿತು. ನನಗೆ ಜೀವನದ ಬಗ್ಗೆಯೇ ಜಿಗುಪ್ಸೆ ಬಂತು. ಅವರ ವೈಖರಿ ನನಗೆ ಯಾವ ರೀತಿ ಕಂಡಿತೆಂದರೆ – ಸುಳ್ಳಿನ ಗುತ್ತಿಗೆದಾರರು ತಮ್ಮ ಸುಳ್ಳಿನ ಆಸ್ತಿಯಲ್ಲಿ ಅಲ್ಪಸ್ವಲ್ಪವನ್ನು ಬೇರೆಯವರು ಬಳಸಿಕೊಂಡರೆ ತಮ್ಮ ಮಾಲು ಕಳ್ಳತನವಾಯ್ತೆಂದು ಕಿರುಚಾಡುತ್ತಿರುವಂತೆ ಕಂಡಿತು. ಇಂದಿನ ರಾಜಕಾರಣವು ಬ್ಲ್ಯಾಕ್‍ಮೇಲ್, ಆಪರೇಷನ್, ಸುಪಾರಿ ರಾಜಕಾರಣವಾಗಿಬಿಟ್ಟಿದೆ. ಹೆಚ್ಚು ಕಮ್ಮಿ ಅಂಡರ್‍ವರ್ಲ್ಡ್ ರಾಜಕಾರಣ ಅನ್ನಬಹುದು. ಈ ಮಲಿನ ರಾಜಕಾರಣವು ಸ್ವಚ್ಛ ಭಾರತವನ್ನು ಕಟ್ಟಲಾರದು. ಅದಕ್ಕಾಗಿ – ‘ಉದ್ಯೋಗಕ್ಕಾಗಿ ಯುವಜನರು’ ಪ್ರಣಾಳಿಕೆಯನ್ನು ಆಳ್ವಿಕೆ ಮಾಡುತ್ತಿರುವವರು ಹಾಗೆ ಆಳ್ವಿಕೆ ಮಾಡಬೇಕೆನ್ನುವವರು ಗಂಭೀರವಾಗಿ ಪರಿಗಣಿಸಿ, ನಾಡು ಕಟ್ಟುವ ರಾಜಕಾರಣದ ಕಡೆ ಹೆಜ್ಜೆ ಇಡಬೇಕಾಗಿದೆ. ಹಾಗೇನೇ ಚುನಾವಣಾ ಪದ್ಧತಿಯಲ್ಲಿ “ನೇಪಾಳ ಮಾದರಿ” ಪರಿಶೀಲಿಸಿ ಪಡೆದ ಒಟ್ಟು ಮತಗಳ ಪ್ರಮಾಣದ ಮೇಲೆಯೂ ಬಹುತ್ವ, ಪಾರ್ಟಿಸಿಪೇಟರಿ ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ಪ್ರಾತಿನಿಧ್ಯ ನೀಡುವುದರ ಬಗ್ಗೆ ಪರಿಶೀಲಿಸುವುದು ಸೂಕ್ತವೇನೋ. ಯಾಕೆಂದರೆ ಪ್ರಜಾಪ್ರಭುತ್ವ ಡೇಂಜರ್  ಜೋನ್‍ನಲ್ಲಿದೆ. ಮೊದಲ ಹೆಜ್ಜೆಯಾಗಿ ಈ ಸಲಹೆಯನ್ನು ಪರಿಶೀಲಿಸಬಹುದೇ? ಹೆಚ್ಚು ಕಮ್ಮಿ ಕೆಳಮನೆಯಂತೆಯೇ ಅಪ್ಪರ್ ಹೌಸ್ ಕೂಡ ಇದೆ. ಯಾವ ಸಮುದಾಯಕ್ಕೆ ಕೆಳಮನೆಯಲ್ಲಿ ಸೂಕ್ತ ಪ್ರಾತಿನಿಧ್ಯವಿಲ್ಲವೋ ಅದಕ್ಕಾಗಿ ಮೇಲ್ಮನೆ ಇದ್ದರೆ ಅದನ್ನು ಅರ್ಥ ಮಾಡಿಕೊಳ್ಳಬಹುದು. ಹಾಗೆ ವಿವಿಧ ಕ್ಷೇತ್ರಗಳ ತಜ್ಞರ ಭಾಗವಹಿಸುವಿಕೆ ಇದ್ದರೆ ಅದನ್ನು ಅರ್ಥ ಮಾಡಿಕೊಳ್ಳಬಹುದಿತ್ತು. ಇಲ್ಲದಿದ್ದರೆ ಇದು ಯಾಕೆ ಬೇಕು? ವಿಸರ್ಜಿಸುವುದೇ ಸೂಕ್ತ. ಇಲ್ಲಿಂದಲೇ ಚುನಾವಣಾ ಪದ್ಧತಿ ಸುಧಾರಣೆ ಕಡೆಗೆ ಹೆಜ್ಜೆ ಇಡಬಹುದು.
ಕೊನೆಯದಾಗಿ, ನಮ್ಮ ಸರ್ವೋದಯ ಕರ್ನಾಟಕ ಪಕ್ಷದಲ್ಲಿ ಸುಬ್ಬಯ್ಯ ಖಾಯಂ ಅತಿಥಿಗಳಾಗಿದ್ದರು. ಸಭೆಗಳಲ್ಲಿ ಅವರಿಗೆ ನಾನು – ನಾಡಿನ ನಾಯಕ ಸುಬ್ಬಯ್ಯನವರೇ ಎಂದು ಮಾತು ಆರಂಭಿಸುತ್ತಿದ್ದೆ. ನಾಡಿನ ನಾಯಕ ಸುಬ್ಬಯ್ಯ ನಮಸ್ಕಾರ.