ಹೆಣ್ಣಾಗುವುದು ಹೇಗೆ? – ರವೀಂದ್ರ ಭಟ್ಟ

ಛೇ, ಇದೆಂಥಾ ಪ್ರಶ್ನೆ? ಹುಟ್ಟಿನಿಂದಲೇ ಅದನ್ನು ಗುರುತಿಸಲಾಗುತ್ತದೆ. ಕೆಲವರು ಹೆಣ್ಣಾಗುತ್ತಾರೆ. ಇನ್ನು ಕೆಲವರು ಗಂಡಾಗುತ್ತಾರೆ. ಅದರಲ್ಲಿ ಪ್ರಶ್ನೆ ಎಲ್ಲಿಂದ ಬಂತು ಎಂದು ಯಾರಾದರೂ ಕೇಳಬಹುದು. ಆದರೆ ಅದು ಹಾಗಲ್ಲ. ಹುಟ್ಟಿನಿಂದಲೇ ಯಾರೂ ಹೆಣ್ಣೂ ಆಗುವುದಿಲ್ಲ, ಗಂಡೂ ಆಗುವುದಿಲ್ಲ. ಲಿಂಗದಿಂದ ಹೆಣ್ಣು–ಗಂಡನ್ನು ಅಳೆಯಲಾಗದು. ಚಡ್ಡಿ ಹಾಕಿದರೆ ಗಂಡು, ಲಂಗ ಹಾಕಿದರೆ ಹೆಣ್ಣು ಎನ್ನಲಾಗದು. ಮೀಸೆ ಬಂದರೆ ಗಂಡು, ಮೊಲೆ ಇದ್ದರೆ ಹೆಣ್ಣು ಎಂದು ಹೇಳಲಾಗದು. ಈಗಿನ ಆಧುನಿಕ ಯುಗದಲ್ಲಿ ಯಾರು ಬೇಕಾದರೂ ಲಿಂಗವನ್ನು ಬದಲಾಯಿಸಿಕೊಳ್ಳಬಹುದು. ಅವರೆಲ್ಲಾ ಹೆಣ್ಣಾಗಲು ಸಾಧ್ಯವಿಲ್ಲ. ಇದೆಲ್ಲ ಹೋಗಲಿ, ಇಲ್ಲಿ ಇನ್ನೊಂದು ಮೂಲಭೂತ ಪ್ರಶ್ನೆ ಇದೆ – ಹೆಣ್ಣೂ ಹೆಣ್ಣಾಗುವುದು ಹೇಗೆ?
ಈಗ ನಾವು ಒಂದು ಸಂದಿಗ್ಧ ಕಾಲದಲ್ಲಿದ್ದೇವೆ. ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯದ್ದೇ ನಿತ್ಯದ ಸಮಾಚಾರ. ಇದಕ್ಕೆಲ್ಲಾ ‘ಹೆಣ್ಣು ಹೆಣ್ಣಾಗದೇ ಇರುವುದು, ಗಂಡು ಗಂಡಾಗದೇ ಇರುವುದು ಕಾರಣ’ ಎಂದು ಅನುಭವಿಗಳು ಹೇಳುತ್ತಾರೆ. ಹಾಗಾದರೆ ಮತ್ತೆ ಅದೇ ಪ್ರಶ್ನೆ – ಹೆಣ್ಣಾಗುವುದು ಎಂದರೆ ಏನು? ಪ್ರಶ್ನೆ ಸುಲಭ. ಉತ್ತರ ಕಷ್ಟ.ಎಲ್ಲ ಹೆಣ್ಣಿನಲ್ಲಿಯೂ ಒಂದಿಷ್ಟು ಗಂಡುತನ ಎನ್ನುವುದು ಇದ್ದೇ ಇರುತ್ತದೆ. ಎಲ್ಲ ಗಂಡಿನಲ್ಲೂ ಒಂದಿಷ್ಟು ಹೆಣ್ಣುತನ ಇದ್ದೇ ಇರುತ್ತದೆ. ಗಂಡಿನಲ್ಲಿ ಇರುವ ಹೆಣ್ಣುತನವನ್ನು ಜಾಗೃತಗೊಳಿಸುವ ಕೆಲಸ ಈಗ ಜರೂರು ಆಗಬೇಕಿದೆ. ಮಕ್ಕಳು ಹೆಣ್ಣೂ ಅಲ್ಲ; ಗಂಡೂ ಅಲ್ಲ. ಅವರನ್ನು ಶಿಶುವಾಗಿದ್ದಾಗಿನಿಂದ ನಾವು ಹೆಣ್ಣಾಗಿ ಬೆಳೆಸಿದರೆ ಅವರು ಹೆಣ್ಣಾಗುತ್ತಾರೆ. ಗಂಡಾಗಿ ಬೆಳೆಸಿದರೆ ಗಂಡಾಗುತ್ತಾರೆ. ಹಾಗಾದರೆ ಹೆಣ್ಣಾಗುವುದು ಹೇಗೆ?
ಇಂಥದ್ದೊಂದು ಪ್ರಶ್ನೆಯನ್ನು ಪ್ರಸಿದ್ಧ ಯಕ್ಷಗಾನ ಕಲಾವಿದ ಮಂಟಪ ಪ್ರಭಾಕರ ಉಪಾಧ್ಯ ಅವರಿಗೆ ಕೇಳಿದರೆ – ‘ಹೆಣ್ಣಾಗಲು ನಾವು ಮೊದಲು ಗಂಡಾಗಿರಬೇಕು’ ಎಂದು ಉತ್ತರಿಸುತ್ತಾರೆ. ಗಂಡಾಗಿದ್ದರೆ ಮಾತ್ರ ಹೆಣ್ಣಾಗಲು ಸಾಧ್ಯ ಎಂದೂ ಅವರು ಹೇಳುತ್ತಾರೆ. ಈ ಪ್ರಶ್ನೆಯನ್ನು ಮಂಟಪ ಅವರಿಗೆ ಕೇಳಿದ್ದು ಯಾಕೆ ಎಂದರೆ, ಅವರು ಕಳೆದ 40 ವರ್ಷದಿಂದ ಹಗಲು ಗಂಡಾಗಿಯೂ ರಾತ್ರಿ ಹೆಣ್ಣಾಗಿಯೂ ರೂಪಾಂತರಗೊಂಡವರು. ವರ್ಷ 60 ದಾಟಿದರೂ ಈಗಲೂ ರಾತ್ರಿ ಅವರು ರಂಗದ ಮೇಲೆ ನವ ಯೌವನೆಯ ಹಾಗೆ ಮಿಂಚುತ್ತಾರೆ. ಹೀಗೆ ಹೆಣ್ಣಾಗಲು ಅವರಿಗೆ ಸಾಧ್ಯವಾಗಿದ್ದು ಹೇಗೆ? ಅವರ ಮಾತುಗಳಲ್ಲಿಯೇ ಕೇಳಬೇಕು ಅದನ್ನು.
‘‘ಹೆಣ್ಣು ಎನ್ನುವುದು ಒಂದು ಮನಃಸ್ಥಿತಿ. ಅದು ಭಾವಕ್ಕೆ ಸಂಬಂಧಿಸಿದ್ದು. ಕೇವಲ ವಸ್ತ್ರವನ್ನು ಬದಲಾಯಿಸಿಕೊಂಡರೆ, ವೇಷ ತೊಟ್ಟುಕೊಂಡರೆ ಅದು ಹೆಣ್ಣು ವೇಷವಾಗುತ್ತದೆಯೇ ವಿನಾ ಹೆಣ್ಣಾಗುವುದಿಲ್ಲ. ಕೇವಲ ಹೆಣ್ಣು ವೇಷವಾದರೆ ಅಲ್ಲಿ ಸೌಂದರ್ಯವೇ ಪ್ರಮುಖವಾಗುತ್ತದೆ. ಆಗ ವಯಸ್ಸು ಮುಖ್ಯವಾಗುತ್ತದೆ. ಹೆಚ್ಚೆಂದರೆ 30–35 ವರ್ಷದ ಪ್ರಾಯದವರೆಗೆ ಹೆಣ್ಣು ವೇಷ ಮಾಡಬಹುದು. ನಮ್ಮ ಸಿನಿಮಾ ನಾಯಕಿಯರು ಇದ್ದಾರಲ್ಲ ಹಾಗೆ. ಒಂದಿಷ್ಟು ವರ್ಷ ಮೆರೆದ ನಂತರ ಅವರು ಮಾಯವಾಗಿ ಬಿಡುತ್ತಾರೆ. ಆಮೇಲೆ ಪ್ರೇಕ್ಷಕರು ‘ಅಯ್ಯೊ ಅವರಿಗೆ ವಯಸ್ಸಾಯಿತು. ಮುಖದ ಮೇಲೆ ಗೆರೆಗಳು ಕಾಣುತ್ತಿವೆ’ ಎಂದು ತಿರಸ್ಕರಿಸಲು ಆರಂಭಿಸುತ್ತಾರೆ. ಆದರೆ ರಂಗದಲ್ಲಿಯೇ ಹೆಣ್ಣೇ ಆಗಲು ಕಲಿತುಬಿಟ್ಟರೆ 80 ವರ್ಷವಾದರೂ ಹೆಣ್ಣಿನ ಪಾತ್ರವನ್ನು ಮಾಡಬಹುದು. ಆಗ ಮುಖದ ಮೇಲಿನ ಸುಕ್ಕು ಕಾಣುವುದಿಲ್ಲ. ಬೆನ್ನು ಬಾಗಿದ್ದೂ ಗಮನಕ್ಕೆ ಬರುವುದಿಲ್ಲ. ನಾನೂ ಮೊದ ಮೊದಲು ಹೆಣ್ಣು ವೇಷ ಮಾಡುತ್ತಿದ್ದೆ. ಒಯ್ಯಾರ, ಒನಪು, ಶೃಂಗಾರ ಎಲ್ಲಾ ಇತ್ತು. ಅದೇ ನನಗೆ ತಾರಾಮೌಲ್ಯವನ್ನೂ ತಂದುಕೊಟ್ಟಿತ್ತು. ಹೆಣ್ಣಾಗುವುದಕ್ಕೆ ವೇಷವೂ ಮುಖ್ಯ. ಆದರೆ ಅಷ್ಟೆ ಸಾಕಾಗುವುದಿಲ್ಲ. ಒಂದು ದಿನ ನನಗೆ ಅನ್ನಿಸಿತು. ಇದು ನಾನು ಮಾಡುವ ಕೆಲಸ ಅಲ್ಲ. ಇಷ್ಟೇ ಮಾಡುವುದಕ್ಕೆ ನಾನು ಬೇಡ ಎಂದು. ಅದಕ್ಕೇ ನಾನು ವೇಷ ಮಾಡುವುದನ್ನು ಬಿಟ್ಟುಬಿಟ್ಟೆ. ಆಗ ನನಗೆ ಶತಾವಧಾನಿ ಆರ್. ಗಣೇಶ್ ಸಿಕ್ಕರು. ಅವರು ನನಗೆ ಹೆಣ್ಣಾಗುವುದನ್ನು ಕಲಿಸಿದರು. ಅದರ ಫಲವಾಗಿಯೇ ‘ಏಕ ವ್ಯಕ್ತಿ ಯಕ್ಷಗಾನ’ ಎಂಬ ಹೊಸ ಪ್ರಕಾರ ಹೊರಬಂತು.
                                                                                          mantapa
‘ರಂಗದ ಮೇಲೆ ನೀವು ಹೆಣ್ಣು ವೇಷ ಹಾಕಿದರೆ ಸಾಲದು. ಹೆಣ್ಣೇ ಆಗಬೇಕು. ಅಂದರೆ ನೀವು ರಾಧೆಯ ಪಾತ್ರ ಮಾಡಿದರೆ ರಾಧೆಯೇ ಆಗಬೇಕು, ದ್ರೌಪದಿಯಾದರೆ ದ್ರೌಪದಿ, ಅಂಬೆ, ಪ್ರಭಾವತಿ, ಸೀತೆ, ಚಂದ್ರಮತಿ – ಹೀಗೆ ಯಾವುದೇ ಆದರೂ ಆಯಾ ಆಯಾ ಪಾತ್ರವೇ ಆಗಬೇಕು. ಅಂದಾಗ ಮಾತ್ರ ನೀವು 80 ವರ್ಷವಾದರೂ ಹೆಣ್ಣಿನ ಪಾತ್ರ ಮಾಡಬಹುದು. ಇದಕ್ಕೆ ಒಂದಿಷ್ಟು ಸಿದ್ಧತೆ ಬೇಕು. ಅನುಭವ ಬೇಕು. ನಿಮಗೆ ಗಂಡಿನ ಅನುಭವ ಇದ್ದರೆ ರಂಗದಲ್ಲಿ ಹೆಣ್ಣಿನ ಅನುಭವವನ್ನು ಪ್ರದರ್ಶಿಸುವುದು ಕಷ್ಟವಲ್ಲ’ ಎಂದರು. ನಾನು ಅಂದಿನಿಂದ ಹೆಣ್ಣಾಗುವುದನ್ನು ಕಲಿಯತೊಡಗಿದೆ. ಜೊತೆಗೆ ಗಂಡಾಗುವುದನ್ನೂ ಕೂಡ.
ಹಗಲು ಗಂಡಾಗುವುದನ್ನೂ ರಾತ್ರಿ ರಂಗದ ಮೇಲೆ ಹೆಣ್ಣಾಗುವುದನ್ನೂ ಕಲಿತೆ. ಹಗಲಿನಲ್ಲಿ ನಾನು ಪರಿಪೂರ್ಣ ಗಂಡಾಗಿದ್ದರೆ ಮಾತ್ರ ರಾತ್ರಿ ಹೆಣ್ಣಾಗುವುದು ಸಾಧ್ಯ ಎನ್ನುವುದು ನನಗೆ ಅನುಭವದಿಂದ ಗೊತ್ತಾಗತೊಡಗಿತು. ನಾನು ಪೂತನಿಯ ಪಾತ್ರ ಮಾಡಿದಾಗ ಇದು ಅನುಭವಕ್ಕೆ ಬಂತು. ಪೂತನಿ ರಾಕ್ಷಸಿ. ಆ ಪಾತ್ರ ಮಾಡುವ ನಾನು ಗಂಡು. ಕೃಷ್ಣನನ್ನು ಕೊಲ್ಲುವುದಕ್ಕಾಗಿ ವಿಷದ ಮೊಲೆಯನ್ನು ಕೃಷ್ಣನಿಗೆ ಕೊಟ್ಟಾಗ ಪೂತನಿ ರಾಕ್ಷಸಿಯಾಗಿ ಉಳಿಯುವುದಿಲ್ಲ. ಆಕೆ ಮೊಲೆ ಹಾಲು ಕುಡಿಸುವ ತಾಯಿ ಆಗುತ್ತಾಳೆ. ಇದನ್ನು ರಂಗದಲ್ಲಿ ಅಭಿನಯಿಸುವಾಗ ನಾನು ಸೋಲುತ್ತಿದ್ದೆ. ಆದರೆ ಗಂಡಾಗಿ ನನಗೆ ಸಂಪೂರ್ಣ ತೃಪ್ತಿಕೊಟ್ಟ ಕೆಲಸವನ್ನು ನೆನಪಿಸಿಕೊಂಡೆ. ಆ ತೃಪ್ತಿಯ ಭಾವವನ್ನೇ ಇಲ್ಲಿಯೂ ಅನುಭವಿಸತೊಡಗಿದೆ. ಆಗ ನಾನು ತಾಯಿಯಾಗಿದ್ದೆ. ಇದೊಂದು ತರಹ ವಿದ್ಯುತ್ ಶಾಕ್ ಇದ್ದ ಹಾಗೆ. ತಂತಿಯನ್ನು ಮುಟ್ಟಿದರೆ ಶಾಕ್ ಹೊಡೆಯುತ್ತದೆ. ನೀವು ಯಾವ ಕಡೆ ಮುಟ್ಟಿದರೂ ಶಾಕ್ ಹೊಡೆಯುತ್ತದೆ. ಹಾಗೆಯೇ ಇದು. ಗಂಡಾಗಿ ಅನುಭವಿಸಿದ ತೃಪ್ತಿಯ ಭಾವವನ್ನೇ ಹೆಣ್ಣಿನ ಅಭಿನಯಕ್ಕೂ ಬಳಸಬಹುದು. ಹುಡುಗನೊಬ್ಬ ಮೀಸೆ ಬಂದಾಗ ಗಂಡಾಗಿ ಅನುಭವಿಸುವ ಸುಖಕ್ಕೂ ಋತುಮತಿಯಾದಾಗ ಹೆಣ್ಣೊಬ್ಬಳು ಅನುಭವಿಸುವ ಸುಖಕ್ಕೂ ವ್ಯತ್ಯಾಸ ಇಲ್ಲ. ಅನುಭವ ಬೇರೆ ಬೇರೆ ಇರಬಹುದು. ಆದರೆ ಸುಖ ಒಂದೇ. ಅದನ್ನು ತಿಳಿದುಕೊಳ್ಳುವ ಮನಸ್ಸು ಬೇಕು ಅಷ್ಟೆ. ಹೀಗೆ ಸುಖವನ್ನು ಅನುಭವಿಸುವಂತೆ ನಾವು ನಮ್ಮ ಮಕ್ಕಳನ್ನು ಬೆಳೆಸಬೇಕು.
ಬರೀ ಸೌಂದರ್ಯದ ದೃಷ್ಟಿಯಿಂದ ಹೆಣ್ಣಾಗುವುದು ಎಂದರೆ ಅದು ಬಹಳ ಕಾಲ ಬಾಳುವುದಿಲ್ಲ. ಅದು ಕೇವಲ ವಿಕೃತಿ. ರಂಗದಲ್ಲಿ ಹೆಣ್ಣಾಗಬೇಕು ಎನ್ನುವ ಕಾರಣಕ್ಕಾಗಿ ಹಗಲು ಹೊತ್ತಿನಲ್ಲಿಯೂ ಅದನ್ನೇ ಧ್ಯಾನಿಸಿದರೆ ಅದು ಅಶ್ಲೀಲವಾಗುತ್ತದೆ. ರಂಗದ ಆಚೆಯೂ ಹೆಣ್ಣಿನ ಭ್ರಮೆಯಲ್ಲಿಯೇ ಇದ್ದರೆ ಅದು ವಿಕೃತಿ. ರಂಗದಲ್ಲಿ ಪ್ರಕೃತಿಯಾಗಬೇಕು ಎಂದಾದರೆ ಹಗಲು ಗಂಡಾಗಿಯೇ ಇರಬೇಕು. ನನ್ನ ಪತ್ನಿಗೆ ನಾನು ಪರಿಪೂರ್ಣ ಗಂಡಾಗಿರಬೇಕು. ಎಂದೂ ಕೂಡ ಅವಳಿಗೆ ‘ನಾನು ಇನ್ನೊಬ್ಬ ಹೆಣ್ಣೊಬ್ಬಳ ಜೊತೆಗೆ ಮಲಗಿದ್ದೇನೆ’ ಎಂದು ಅನ್ನಿಸಬಾರದು. ಹಾಗೆ ಅನ್ನಿಸಿದರೆ ನಾನು ರಾತ್ರಿ ರಂಗದಲ್ಲಿ ಹೆಣ್ಣಾಗಿಲ್ಲ ಎಂದೇ ಅರ್ಥ. ನನ್ನೊಳಗಿನ ಹೆಣ್ಣುತನ ರಂಗದಲ್ಲಿಯೇ ಕರಗಿ ಹೋಗಬೇಕು. ರಂಗದಲ್ಲಿ ಸುಂದರ ಹೆಣ್ಣಾಗುವುದು ಗಂಡಿಗೆ ಸುಲಭ. ಯಾಕೆಂದರೆ ಆತನಿಗೆ ತನ್ನ ಕನಸಿನ ಹೆಣ್ಣು ಹೇಗಿರಬೇಕು ಎಂದು ಗೊತ್ತು. ಅದಕ್ಕೇ ಆತ ಒಳ್ಳೆಯ ಹೆಣ್ಣಾಗಬಲ್ಲ. ರಂಗದಲ್ಲಿ ಓರ್ವ ಹೆಣ್ಣು ಹೆಣ್ಣಿನ ಪಾತ್ರ ಮಾಡುವುದಕ್ಕಿಂತ ಚೆನ್ನಾಗಿ ಗಂಡು ಅದನ್ನು ಮಾಡಬಲ್ಲ. ಕೇವಲ ವೇಷದ ಸೌಂದರ್ಯದಿಂದ ತೃಪ್ತರಾಗುವುದು ಬೇರೆ. ಭಾವದಿಂದ ತೃಪ್ತರಾಗುವುದು ಬೇರೆ. ಭಾವದಿಂದ ತೃಪ್ತರಾಗುವುದಕ್ಕೂ ವೇಷ ಬೇಕು. ಆದರೆ ಅಷ್ಟೇ ಸಾಲದು. ಅಭ್ಯಾಸ, ಅನುಭವ ಎಲ್ಲ ಬೇಕು.
ಗಂಡು ಹೆಣ್ಣಿನ ಪಾತ್ರ ಮಾಡಿದಾಗ ಒಂದಿಷ್ಟು ಎಚ್ಚರ ಇರುತ್ತದೆ. ಅದು ಒಂದು ತರಹ ಕನ್ನಡತಿ ಜಯಲಲಿತಾ ತಮಿಳುನಾಡಿನ ಮುಖ್ಯಮಂತ್ರಿ ಆದ ಹಾಗೆ. ಜಯಲಲಿತಾ ಕನ್ನಡಿಗಳಾಗಿದ್ದರಿಂದ ಯಾವಾಗಲೂ ಅವಳು ಹೆಚ್ಚು ಹೆಚ್ಚು ತಮಿಳರಂತೆ ನಡೆದುಕೊಳ್ಳುತ್ತಿದ್ದಳು. ಇದೂ ಹಾಗೆಯೇ. ರಂಗದಲ್ಲಿ ಗಂಡು ಹೆಣ್ಣಾದರೆ ಪರಿಪೂರ್ಣ ಹೆಣ್ಣಾಗುವತ್ತಲೇ ಗಮನ ಇರುತ್ತದೆ. ಆಗ ಪ್ರೇಕ್ಷಕರೂ ಹೆಣ್ಣಾಗುತ್ತಾರೆ. ಅವರಲ್ಲಿರುವ ಹೆಣ್ಣುತನವೂ ಜಾಗೃತವಾಗುತ್ತದೆ. ಆಟ ನೋಡಲು ಬಂದ ಮಹಿಳೆಯರೂ ಹೆಣ್ಣಾಗುತ್ತಾರೆ. ನಾನು ರಂಗದಲ್ಲಿ ಹೆಣ್ಣಾಗಿದ್ದೇನೆ ಎನ್ನುವುದಕ್ಕೆ ಏನು ಪ್ರಮಾಣ ಎಂದರೆ, ಪ್ರೇಕ್ಷಕರು ಹೆಣ್ಣಾಗಿ ನನ್ನ ಭಾವನೆಗೆ ಸ್ಪಂದಿಸುವುದೇ ಪ್ರಮಾಣ. ಯಾರಲ್ಲಿ ಗಂಡಸುತನ ಇದೆಯೋ ಅವರು ಹೆಣ್ಣಾಗಿರುತ್ತಾರೆ. ಯಾರಲ್ಲಿ ಹೆಣ್ಣುತನ ಇರುತ್ತದೋ ಅವರು ಗಂಡಸಾಗಿರುತ್ತಾರೆ. ಹೆಣ್ಣಿಗೂ ಗಂಡಿಗೂ ಬಹುತೇಕ ಎಲ್ಲ ಅನುಭವಗಳೂ ಸಾಮಾನ್ಯ, ಸಂವೇದನೆ ಒಂದೇ. ಇದೆಲ್ಲ ಅಲೌಕಿಕ, ಅಧ್ಯಾತ್ಮ ಎಂದು ಭಾವಿಸುವುದು ಬೇಡ. ಎಲ್ಲವೂ ಲೌಕಿಕ. ಅದರಲ್ಲಿಯೇ ಅಧ್ಯಾತ್ಮ ಇದೆ ಅಷ್ಟೆ. ಹಾಗಾದರೆ ನಾನು ಹೆಣ್ಣಾಗುವುದಕ್ಕೆ ಹೊರಟಿದ್ದು ಯಾಕೆ? ಹೆಣ್ಣಿನ ಅಭಿವ್ಯಕ್ತಿಯಲ್ಲಿ ಸಾಧ್ಯತೆಗಳು ಜಾಸ್ತಿ. ವೈವಿಧ್ಯ ಹೆಚ್ಚು. ವಿಸ್ತಾರ ಜಾಸ್ತಿ. ಗಂಡಿನ ಅಭಿನಯ ಸುಲಭ. ಗಂಡಿಗೆ ಸಿಟ್ಟು ಬಂದಿದೆ ಎಂದು ಎಷ್ಟು ರೀತಿಯಲ್ಲಿ ತೋರಿಸಬಹುದು. ಗಂಡಿನ ಸಿಟ್ಟಿನ ಅಭಿವ್ಯಕ್ತಿಗೆ ಹೆಚ್ಚು ದಾರಿಗಳಿಲ್ಲ. ಆದರೆ ಹೆಣ್ಣಿನ ಸಿಟ್ಟು ಹಾಗಲ್ಲ. ಅವಳ ಸಿಟ್ಟು ಊಟ ಬಡಿಸುವಾಗ ವ್ಯಕ್ತವಾಗುತ್ತದೆ. ನಡೆಯುವಾಗ ವ್ಯಕ್ತವಾಗುತ್ತದೆ. ಬಟ್ಟೆ ತೊಳೆಯುವಾಗ, ಪಾತ್ರೆ ತೊಳೆಯುವಾಗ ವ್ಯಕ್ತವಾಗುತ್ತದೆ. ಹೆಚ್ಚು ಹೆಚ್ಚು ಗಂಡನ ಸೇವೆ ಮಾಡಿಯೂ ಆಕೆ ತನ್ನ ಸಿಟ್ಟು ವ್ಯಕ್ತಪಡಿಸಿಯಾಳು. ಜಡೆಯನ್ನು ಹಿಂದಕ್ಕೆ ನೂಕುವಾಗ, ಹೆಜ್ಜೆ ಇಡುವಾಗ – ಎಲ್ಲ ಚಟುವಟಿಕೆಯಲ್ಲಿಯೂ ಸಿಟ್ಟು ತೋರಿಸುತ್ತಾಳೆ ಅವಳು. ಅವಳ ನಗೆ ಕೂಡ ಅಷ್ಟೆ. ಅವಳ ನಗೆಯಲ್ಲಿ ಎಷ್ಟೊಂದು ವಿಧ ಇದೆ. ಎಷ್ಟೊಂದು ವಿಸ್ತಾರ ಇದೆ. ದುಃಖದಲ್ಲಿಯೂ ಆಕೆ ನಗಬಲ್ಲಳು. ಬೇಸರಕ್ಕೂ ನಗಬಲ್ಲಳು. ಅಸಹನೆಗೂ ನಗಬಲ್ಲಳು. ಇದೆಲ್ಲಾ ಗಂಡಿಗೆ ಅಸಾಧ್ಯ. ಶೃಂಗಾರ ಕೂಡ ಹಾಗೆ. ಗಂಡಿನ ಶೃಂಗಾರ ಎಂದರೆ ಅದು ಕಾರ್ಯೋನ್ಮುಖ. ಹೆಣ್ಣಿನದ್ದು ಹಾಗಲ್ಲ. ಹೆಣ್ಣಿನ ಶೃಂಗಾರ ಬೇಗ ಮುಗಿಯುವುದಿಲ್ಲ. ಅದರಲ್ಲಿ ಒಂದು ಧನ್ಯತೆಯ ಭಾವ ಇದೆ. ಹೆಣ್ಣಿನ ಗಾಢತೆ ಎಂದಿಗೂ ವಿಸ್ತಾರ. ಅವಳ ತಾಳ್ಮೆಯನ್ನು ಎಲ್ಲ ಗಂಡಸರೂ ಕಲಿಯಬೇಕು.
‘ಒಂದು ದಿನ ದೇಹ ಕೊಟ್ಟೆ’ ಎಂಬ ಕಾರಣಕ್ಕೆ ತನ್ನ ಇಡೀ ಜೀವಮಾನವನ್ನು ಗಂಡು ಇಲ್ಲದೇ ಕಳೆಯಬಲ್ಲ ಶಕ್ತಿ ಆಕೆಗೆ ಇದೆ. ಗಂಡನ್ನು ಕಳೆದುಕೊಂಡ ಹೆಣ್ಣು ಬದುಕಬಲ್ಲಳು. ಯಾರ ಹಂಗಿಲ್ಲದೆ ಕೂಡ ಅವಳು ಬಾಳು ಕಟ್ಟಬಲ್ಲಳು. ಆದರೆ ಗಂಡಿಗೆ ಅದು ಅಸಾಧ್ಯ. ಹೆಣ್ಣು ಅಸಹಾಯಕಳು, ಅಬಲೆ ಎಂದು ಎಲ್ಲ ಗಂಡಸರೂ ಹೇಳುತ್ತಾರೆ. ಆದರೆ ಹೆಣ್ಣಿಲ್ಲದೆ ಅವರಿಗೆ ಬಾಳಲು ಅಸಾಧ್ಯ. ಹೆಣ್ಣಿಗೆ ಅವರು ಅವಲಂಬಿತರು. ಅವಳಲ್ಲಿರುವ ಅಚ್ಚುಕಟ್ಟು ಗಂಡಿನಲ್ಲಿ ಬರುವುದು ಕಷ್ಟ. ನಿಮ್ಮ ಸಂಬಳ 5 ಸಾವಿರ ರೂಪಾಯಿ ಎಂದರೆ ಆಕೆ 4500ಕ್ಕೇ ಇಡೀ ಸಂಸಾರವನ್ನು ತೂಗಿಸಬಲ್ಲಳು. ಇವೆಲ್ಲ ಗಂಡಸಾಗಿ ನಾನು ಹಗಲಿನಲ್ಲಿ ಕಂಡುಕೊಂಡ ಸತ್ಯ. ಇದೇ ನಾನು ರಾತ್ರಿ ಹೆಣ್ಣಾಗಲು ಸಹಾಯ ಮಾಡಿದವು.
ಅದಕ್ಕೇ ನನಗೆ ರಂಗದಲ್ಲಿ ಅಲ್ಲದೆ ಬೇರೆಲ್ಲಿಯೂ ಹೆಣ್ಣಾಗುವುದಕ್ಕೆ ಸಾಧ್ಯವೇ ಇಲ್ಲ. ಹೆಣ್ಣಿನ ವೇಷ ಹಾಕಿಕೊಂಡು ಹೀಗೆಯೇ ಬೀದಿಯಲ್ಲಿ ಒಂದು ಸುತ್ತು ಹಾಕಿಕೊಂಡು ಬಾ ಎಂದರೆ ನನ್ನ ಕೈಲಾಗದು. ಯಾಕೆಂದರೆ ನಾನು ನಿಜವಾಗಿಯೂ ಹೆಣ್ಣಲ್ಲ. ಕೆಲವೊಮ್ಮೆ ನಾನು ಹೆಣ್ಣಿನ ವೇಷ ಹಾಕುತ್ತಾ ಚೌಕಿಯಲ್ಲಿ ಇರುವಾಗ ಕೆಲವರು ಥಟ್ಟನೆ ಬಂದು ಸರಕ್ಕನೆ ವಾಪಸು ಹೋಗುತ್ತಾರೆ. ‘ನೀವು ವೇಷ ಹಾಕಿಕೊಳ್ಳುವಾಗ ನಾವು ಗಂಡಸರು ಬಂದರೆ ನಿಮಗೆ ನಾಚಿಕೆಯಾಗುವುದಿಲ್ಲವೇ?’ ಎಂದು ನನ್ನ ಕೇಳುತ್ತಾರೆ. ನಾನು ಗಂಡಸೇ ಆಗಿರುವಾಗ ನಾಚಿಕೆಯ ಪ್ರಶ್ನೆಯೇ ಇಲ್ಲ ಎಂದು ನಾನು ಉತ್ತರಿಸುತ್ತೇನೆ. ನಿಜ ಜೀವನದಲ್ಲಿಯೂ ಹೆಣ್ಣಿನ ಭ್ರಮೆಯಲ್ಲಿಯೇ ಇದ್ದರೆ ಶಿಖಂಡಿ ಅವತಾರವಾಗುತ್ತದೆ. ಹೆಣ್ಣಾಗುವುದಿಲ್ಲ. ಗಂಡೂ ಆಗುವುದಿಲ್ಲ.
ನಾನು ರಂಗದಲ್ಲಿ ರಾಧೆಯೂ ಹೌದು. ದ್ರೌಪದಿಯೂ ಹೌದು. ರುಕ್ಮಿಣಿಯೂ ಹೌದು. ಪೂತನಿಯೂ ಹೌದು. ಆದರೆ ನಿಜ ಜೀವನದಲ್ಲಿ ನಾನೊಬ್ಬ ಗಂಡು. ರಂಗದಲ್ಲಿ ನಾನು ಹೆಣ್ಣಾಗಿದ್ದಾಗ ನನ್ನ ಮೋಹಿಸಿದವರು ಸಾಕಷ್ಟು ಮಂದಿ ಇದ್ದಾರೆ. ರಂಗದಿಂದ ಕೆಳಕ್ಕೆ ಇಳಿದಾಗ ಮುತ್ತು ಕೊಟ್ಟವರೂ ಇದ್ದಾರೆ. ಆಗೆಲ್ಲ ನಾನು ತಮಾಷೆ ಮಾಡಿ ಕೈ ತೊಳೆದುಕೊಳ್ಳುತ್ತೇನೆ. ತಾಳ್ಮೆ, ಸಂಯಮ, ಧಾರಾಳ ಎಲ್ಲವೂ ಹೆಣ್ಣಿಗೆ ಜಾಸ್ತಿ. ಅದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಬೇಕು. ಹೆಣ್ಣಿನ ಸೂಕ್ಷ್ಮಗಳನ್ನು ತಿಳಿದಷ್ಟೂ ಬದುಕಿನ ವಿಸ್ತಾರ ಹೆಚ್ಚಾಗುತ್ತದೆ. ಅಪ್ಪ ಎನ್ನಿಸಿಕೊಳ್ಳಲು ಒಂದು ಕ್ಷಣ ಸಾಕು. ಅಮ್ಮ ಎನ್ನಿಸಿಕೊಳ್ಳಲು 9 ತಿಂಗಳು ಬೇಕು. ಇದನ್ನು ನಮ್ಮ ಮಕ್ಕಳಿಗೆ ಕಲಿಸಬೇಕು. ನಮ್ಮ ಮಕ್ಕಳಿಗೆ ನಾವು ಹೆಣ್ಣಾಗುವುದನ್ನು ಕಲಿಸದೇ ಇದ್ದರೆ ಅವರು ಹೆಣ್ಣೂ ಆಗುವುದಿಲ್ಲ. ಗಂಡೂ ಆಗುವುದಿಲ್ಲ’’.
*