ಹುಡುಕುವ ಮನಸ್ಸಿದ್ದರೆ ಸಿಕ್ಕೀತು ಚಿನ್ನ… ಪಿ.ಸಾಯಿನಾಥ್

ವಾರದ ಸಂದರ್ಶನ: ಪಿ.ಸಾಯಿನಾಥ್ ಹಿರಿಯ ಪತ್ರಕರ್ತ, ‘ಪರಿ’ ಯೋಜನೆಯ ಸಂಸ್ಥಾಪಕ ಸಂಪಾದಕ

ಡಿ.ಎಂ.ಘನಶ್ಯಾಮ

ಭಾರತದಲ್ಲಿ ಅಭಿವೃದ್ಧಿ ಪತ್ರಿಕೋದ್ಯಮದ ಹೊಸ ಮಾದರಿ ಹುಟ್ಟು ಹಾಕಿದ ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಈಚೆಗೆ ಬೆಂಗಳೂರಿಗೆ ಬಂದಿದ್ದರು. ಈ ಸಂದರ್ಭ ‘ಪ್ರಜಾವಾಣಿ’ಗೆ ವಿಶೇಷ ಸಂದರ್ಶನ ನೀಡಿದ ಅವರು, ಕರ್ನಾಟಕದೊಂದಿಗಿನ ತಮ್ಮ ಒಡನಾಟ, ಸ್ಥಳೀಯ ಪತ್ರಿಕೋದ್ಯಮದ ಬಗ್ಗೆ ಹಲವು ಅಪರೂಪದ ಮಾಹಿತಿ ಹಂಚಿಕೊಂಡರು.

‘ಕೋಲಾರ ಚಿನ್ನದ ಗಣಿಗಳು (ಕೆಜಿಎಫ್) ಈ ದೇಶದ ಜಾತ್ಯತೀತ ಸಮಾಜದ ಅತ್ಯುತ್ಕೃಷ್ಟ ಮಾದರಿ’ ಎಂಬುದು ಅವರ ಖಚಿತ ನಂಬಿಕೆ. ‘ಚಿನ್ನದ ಗಣಿಗಳನ್ನು ಖಾಸಗಿಯವರಿಗೆ ಒಪ್ಪಿಸುವ ಮೂಲಕ ಸರ್ಕಾರ ಈ ದೇಶದ ಜನರಿಗೆ ದೊಡ್ಡ ಮೋಸ ಮಾಡುತ್ತಿದೆ’ ಎಂಬ ಸಿಟ್ಟು ಅವರು ಆಡುವ ಪ್ರತಿ ಪದದಲ್ಲಿಯೂ ವ್ಯಕ್ತವಾಗುತ್ತಿತ್ತು.

‘ಈ ದೇಶಕ್ಕೆ 9 ಶತಕೋಟಿ ಡಾಲರ್ (₹60,600 ಕೋಟಿ) ಮೌಲ್ಯದಷ್ಟು ಸಂಪತ್ತು ಕೊಟ್ಟಿರುವ ಕೆಜಿಎಫ್‌ ಗಣಿಗಳು ಇನ್ನು ಕೆಲವೇ  ತಿಂಗಳುಗಳಲ್ಲಿ ಖಾಸಗಿಯವರ ಪಾಲಾಗುತ್ತವೆ. ಗಣಿ ಕಾರ್ಮಿಕರ ಭವಿಷ್ಯ ಅಯೋಮಯವಾಗುತ್ತದೆ’ ಎಂಬ ಭವಿಷ್ಯವನ್ನೂ ಅವರು ನುಡಿದರು. ದೇಶದ ಪತ್ರಿಕೋದ್ಯಮದ ಸ್ಥಿತಿಗತಿ, ಹೊಸ ತಲೆಮಾರಿನ ಪತ್ರಕರ್ತರ ಎದುರು ಇರುವ ಸವಾಲುಗಳ ಬಗ್ಗೆಯೂ ಅವರ ಮಾತಿನಲ್ಲಿ ಇಣುಕು ನೋಟ ಇತ್ತು.

*ಕರ್ನಾಟಕದೊಂದಿಗಿನ ನಿಮ್ಮ ಒಡನಾಟದ ಬಗ್ಗೆ ಹೇಳಿ?
ನನ್ನ ತಾಯಿಯ ಪೂರ್ವಜರು ಬಳ್ಳಾರಿಗೆ ಸೇರಿದವರು. ನನ್ನ ಅಜ್ಜಿಗೆ ಕನ್ನಡ– ತುಳು ಬರುತ್ತಿತ್ತು. ಮಂಡ್ಯ, ಕೊಡಗು, ದಕ್ಷಿಣ ಕನ್ನಡ, ತುಮಕೂರು, ಕೋಲಾರ, ಕಲಬುರ್ಗಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ನಾನು ಕೆಲಸ ಮಾಡಿದ್ದೇನೆ. ಅನೇಕರ ಬದುಕು ಬಿಂಬಿಸುವ ಸ್ಟೋರಿಗಳನ್ನು ಬರೆದಿದ್ದೇನೆ. ಆದರೆ ಕೆಜಿಎಫ್‌ನಲ್ಲಿ ಮಾಡಿದ ಕೆಲಸ ಸದಾ ನೆನಪಿರುತ್ತೆ.

* ಕೆಜಿಎಫ್‌ನಲ್ಲಿ ಅಂಥ ವಿಶೇಷ ಏನು ಕಂಡಿರಿ?
ನಾನು ಕೆಜಿಎಫ್‌ ಗಣಿಗಳ ಬಗ್ಗೆ 2001ರಲ್ಲಿ ಸರಣಿ ಲೇಖನಗಳನ್ನು ಬರೆದೆ. 2014ರಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯ ಪ್ರಕಟಿಸಿದ ‘20ನೇ ಶತಮಾನದ ಅತ್ಯುತ್ತಮ ತನಿಖಾ ವರದಿಗಳು’ ಸಂಗ್ರಹದಲ್ಲಿ (ಸಂಪಾದಕಿ: ಅನಿಯಾ ಸ್ಟಿಗ್ಲಿಟ್ಸ್‌) ಕೆಜಿಎಫ್‌ನ ಎರಡು ವರದಿಗಳು ದಾಖಲಾಗಿವೆ. ಕೆಜಿಎಫ್‌ ಈ ದೇಶದ ಜಾತ್ಯತೀತ ಬದುಕಿನ ಅತ್ಯುತ್ಕೃಷ್ಟ ಮಾದರಿ.

* ಜಾತ್ಯತೀತ ಬದುಕಿನ ‘ಕೆಜಿಎಫ್ ಮಾದರಿ’ ಎಂದರೇನು?
ಕೆಜಿಎಫ್‌ನ ಕಾರ್ಮಿಕರು ಧರ್ಮ– ಜಾತಿಗಿಂತ ಬದುಕು ಮುಖ್ಯ ಎಂದುಕೊಂಡಿದ್ದಾರೆ. ಪ್ರತಿ ವರ್ಷ ಮೇ ತಿಂಗಳ ಮೊದಲ ವಾರವನ್ನು ಅಲ್ಲಿ 7 ದಿನಗಳ ಹಬ್ಬದಂತೆ ಆಚರಿಸುತ್ತಾರೆ. ಎಲ್ಲ ಧರ್ಮ– ಜಾತಿಗಳಿಗೆ ಸೇರಿದವರೂ ಮನೆಗಳಲ್ಲಿ ಸಿಹಿ ಮಾಡಿ ಸಂಭ್ರಮಿಸುತ್ತಾರೆ.

ಇದಕ್ಕಿಂತಲೂ ಮುಖ್ಯವಾದ ಮತ್ತೊಂದು ಅಂಶವನ್ನು ಅಲ್ಲಿ ನಾನು ಗಮನಿಸಿದೆ. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ಕಾರ್ಮಿಕರು ನಿವೃತ್ತರಾಗುವಾಗ ಅವರ ಮಕ್ಕಳಿಗೆ ಕೆಲಸ ಕೊಡುವ ಸಂಪ್ರದಾಯ ಇದೆ. ಕೆಜಿಎಫ್‌ನ ಬಿಜಿಎಂಎಲ್ ಸಹ ಇದಕ್ಕೆ ಹೊರತಲ್ಲ.

ವಾಲ್ಟರ್‌ ಬೆಂಜಮಿನ್‌ ಎಂಬಾತನಿಗೆ ಇಬ್ಬರು ಮಕ್ಕಳಿದ್ದಾರೆ. ಅವರಿಬ್ಬರಿಗೂ ಗಣಿಯಲ್ಲಿ ಕೆಲಸ ಬೇಕಿದೆ. ಆನ್ಬಳಗನ್ ಎಂಬ ಕಾರ್ಮಿಕನ ಮಗನಿಗೆ ಬೇರೆ ಕೆಲಸ ಸಿಕ್ಕಿದೆ. ಆತ ಬೇರೆ ಊರಿಗೆ ಹೋಗಿದ್ದಾನೆ. ಇದನ್ನು ಗಮನಿಸಿದ ವಾಲ್ಟರ್ ಬೆಂಜಮಿನ್ ತನ್ನ ಮಗ ರಾಬರ್ಟ್‌ ಡೇವಿಡ್‌ಗೆ ಕೆಲಸ ಕೊಡಿಸುವಂತೆ ವಾಲ್ಟರ್‌ಗೆ ವಿನಂತಿಸುತ್ತಾನೆ.

ಮಾರನೇ ದಿನ ‘ರಾಬರ್ಟ್‌ ಡೇವಿಡ್‌ ಸನ್‌ ಆಫ್ ಆನ್ಬಳಗನ್’ ಎಂದು ಗಣಿ ದಾಖಲೆಗಳಲ್ಲಿ ನಮೂದಾಗುತ್ತದೆ. ಮಾತ್ರವಲ್ಲ ಕೆಲಸವೂ ಸಿಗುತ್ತದೆ. ಕಾರಣ ಯಾವುದೇ ಇರಲಿ, ಯಾರದೋ ಮಗನನ್ನು ತನ್ನ ಮಗ ಎಂದು ಒಪ್ಪಿಕೊಳ್ಳುವ, ಅಪ್ಪನ ಗೆಳೆಯನನ್ನು ತನ್ನ ಅಪ್ಪ ಎಂದು ಒಪ್ಪಿಕೊಳ್ಳುವ ವಿಶಾಲ ಹೃದಯ ಅಲ್ಲಿನ ಕಾರ್ಮಿಕರಿಗೆ ಇದೆ. ಇದು ನಮ್ಮ ದೇಶದಲ್ಲಿ ಎಲ್ಲಿಯೂ ಕಂಡು ಬರದ ಅಪರೂಪದ ಸಂಗತಿ.

ಕೆಜಿಎಫ್‌ನ ಕಾರ್ಮಿಕರು ತಮ್ಮನ್ನು ತಾವು ಕಾರ್ಮಿಕ ಸಮುದಾಯ ಎಂದು ಗುರುತಿಸಿಕೊಳ್ಳುತ್ತಾರೆಯೇ ವಿನಃ, ಜಾತಿ– ಧರ್ಮದ ಆಧಾರದ ಮೇಲೆ ಅಸ್ತಿತ್ವ ಕಂಡುಕೊಳ್ಳುವುದಿಲ್ಲ. ಈ ಕಾರಣಕ್ಕೆ ಕೆಜಿಎಫ್‌ ನನಗೆ ತುಂಬಾ ಇಷ್ಟ. ನಾನು ಇದನ್ನೇ ‘ಕೆಜಿಎಫ್‌ನ ಜಾತ್ಯತೀತ ಮಾದರಿ’ ಎನ್ನುತ್ತೇನೆ.

*ಆದರೆ ಇಂದು ಕೆಜಿಎಫ್ ಎನ್ನುವುದು ಅಪರಾಧಿಗಳ ಸ್ವರ್ಗ ಎನಿಸಿದೆ. ರೌಡಿ ಶೀಟರ್‌ಗಳ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಹೆಚ್ಚಾಗಿದೆಯಲ್ಲಾ?
ಇದರಲ್ಲಿ ಜನರ ತಪ್ಪು ಏನಿದೆ ಎಂದು ನಾನು ಕೇಳುತ್ತೇನೆ. ಏಕಾಏಕಿ ಗಣಿ ನಿಲ್ಲಿಸಿ, ಅಲ್ಲಿದ್ದ ಸಾವಿರಾರು ಜನರ ಕೆಲಸ ಕಿತ್ತುಕೊಂಡರೆ, ಕೆಲಸವಿಲ್ಲದ ಜನ ಏನು ಮಾಡಬಲ್ಲರು? ಅಲ್ಲಿ ಅಪರಾಧದ ಪ್ರಮಾಣ ಹೆಚ್ಚಾಗಿರುವುದನ್ನು ಕೇಳಿ ನನಗಂತೂ ಅಚ್ಚರಿಯಾಗಲಿಲ್ಲ. ಖಾಸಗಿಯವರಿಗೆ ಗಣಿಗಳನ್ನು ಒಪ್ಪಿಸುವ ಆತುರದಲ್ಲಿ ಸರ್ಕಾರಗಳು ಜನರ ಬದುಕನ್ನೇ ಕಿತ್ತುಕೊಂಡಿವೆ. ಸರ್ಕಾರದ ಮಟ್ಟದಲ್ಲಿ, ಅಧಿಕಾರಿಗಳ ಮಟ್ಟದಲ್ಲಿ ಟೇಬಲ್ ಕೆಳಗೆ– ಮೇಲೆ ಹಣ ಚೆಲ್ಲಬಲ್ಲವರಿಗೆ ಗಣಿ  ಪರಭಾರೆಯಾಗಲಿದೆ.

ಗಣಿಯಲ್ಲಿ ನೂರಾರು ವರ್ಷಗಳಿಂದ ಕೆಲಸ ಮಾಡಿದ ಕೆಲಸಗಾರರ ಕುಟುಂಬಗಳು ಬೀದಿಗೆ ಬೀಳುತ್ತವೆ. ಕೆಜಿಎಫ್‌ನ ಕಾರ್ಮಿಕರು ಈ ದೇಶಕ್ಕೆ ಸಾವಿರಾರು ಕೋಟಿ ರೂಪಾಯಿಯಷ್ಟು  ಸಂಪತ್ತು ಕೊಟ್ಟಿದ್ದಾರೆ ಎಂಬುದನ್ನು ಬಹುದಿನದ ಲೆಕ್ಕಾಚಾರದ ನಂತರ ಅರಿತುಕೊಂಡಿದ್ದೇನೆ. ದೇಶಕ್ಕೆ ಸಂಪತ್ತು ಕೊಟ್ಟ ಅವರಿಗೆ ನಾವು ಕೊಟ್ಟಿರುವ ಪ್ರತಿಫಲವಾದರೂ ಏನು?

ಕೆಜಿಎಫ್ ಗಣಿಗಳು ಮಾತ್ರವಲ್ಲ, ಈ ದೇಶದ ಬಹುತೇಕ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಇದೇ ರೀತಿ ಪರಭಾರೆಯಾಗಿವೆ. ವಿಎಸ್‌ಎನ್‌ಎಲ್ (ವಿದೇಶ ಸಂಚಾರ ನಿಗಮ ಲಿಮಿಟೆಡ್) ಹೆಸರು ನೀವು ಕೇಳಿರಬಹುದು. ಈ ಕಂಪೆನಿಯನ್ನು ಭಾರತ ಸರ್ಕಾರ ಟಾಟಾಗಳಿಗೆ ಕೇವಲ 1800 ಕೋಟಿ ರೂಪಾಯಿಗೆ ಮಾರಾಟ ಮಾಡಿತು.

ಮಾರಾಟವಾದ ಸಂದರ್ಭದಲ್ಲಿ ಆ ಕಂಪೆನಿಗೆ 3600 ಕೋಟಿ ರೂಪಾಯಿ ನಗದು ಮೀಸಲು ಬ್ಯಾಂಕ್‌ಗಳಲ್ಲಿ ಇತ್ತು. ದೇಶದ ಅನೇಕ ನಗರಗಳ ಅತಿಮುಖ್ಯ ಸ್ಥಳಗಳಲ್ಲಿ ಕಂಪೆನಿಗೆ ಸಾಕಷ್ಟು ಸ್ಥಿರಾಸ್ತಿಯೂ ಇತ್ತು. ಕಂಪೆನಿಯೊಂದಿಗೆ ಈ ಆಸ್ತಿಯೂ ಟಾಟಾಗಳ ಪಾಲಾಯಿತು.

ಈಗ ಬಿಎಸ್‌ಎನ್‌ಎಲ್‌ (ಭಾರತ ಸಂಚಾರ ನಿಗಮ ಲಿಮಿಟೆಡ್) ಕಥೆ ಏನಾಗುತ್ತಿದೆ. ಕೇಂದ್ರದಲ್ಲಿ ಯಾವ ಸರ್ಕಾರ ಅಧಿಕಾರದಲ್ಲಿದ್ದರೂ ಬಿಎಸ್‌ಎನ್‌ಎಲ್‌ ಅನ್ನು ಕೊಲ್ಲುವ ಪ್ರಯತ್ನದಲ್ಲಿ ವ್ಯತ್ಯಾಸವಾಗಿಲ್ಲ. ಇಂದಿಗೂ ನಿಮ್ಮ ಮೊಬೈಲ್‌ಗಳಿಗೆ ಗ್ರಾಮೀಣ ಪ್ರದೇಶದಲ್ಲಿ ಬಿಎಸ್‌ಎನ್‌ಎಲ್‌ ಸಿಗ್ನಲ್ ಮಾತ್ರ ಸಿಗುತ್ತದೆ.

ಖಾಸಗಿ ಕಾರ್ಪೊರೇಟ್‌ ಕಂಪೆನಿಗಳು ಬಿಎಸ್‌ಎನ್‌ಎಲ್‌ ಟವರ್‌ಗಳನ್ನು ಬಳಸುತ್ತಿವೆ. ಆದರೆ ಆದಾಯ ಮಾತ್ರ ಬಿಎಸ್‌ಎನ್‌ಎಲ್‌ಗೆ ಸಿಗುತ್ತಿಲ್ಲ. ಬಿಎಸ್‌ಎನ್‌ಎಲ್‌ನ ಆತ್ಮವನ್ನು ಕೊಂದು, ದೇಹವನ್ನು ಕಾರ್ಪೊರೇಟ್‌ ಕಂಪೆನಿಗಳಿಗೆ ಮಾರಲು ಕೇಂದ್ರ ಸರ್ಕಾರ ಎಂದೋ ನಿರ್ಧರಿಸಿ ಆಗಿದೆ. ಕೆಜಿಎಫ್‌ ಚಿನ್ನದ ಗಣಿಗಳ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ.

* ಕೆಜಿಎಫ್‌ ಗಣಿಗಳಲ್ಲಿ ನಿಜಕ್ಕೂ ಚಿನ್ನವಿದೆಯೇ?
ಐಐಟಿಯ ಅತಿ ಬುದ್ಧಿವಂತ ಎಂಜಿನಿಯರ್‌ಗಳು ಈ ಸಂಗತಿಯನ್ನು ಹಲವು ಬಾರಿ ಹೇಳಿದ್ದಾರೆ. ಅಲ್ಲಿ ಚಿನ್ನ ಇದೆ, ನೀವು ಬಂಡವಾಳ ಹೂಡಿ ಹುಡುಕಬೇಕು. ಅಲ್ಲಿ ನಿಜವಾಗಿಯೂ ಚಿನ್ನ ಇಲ್ಲ ಎಂದಾದರೆ ಖಾಸಗಿ ಕಂಪೆನಿಗಳೇಕೆ ಗಣಿಗಳನ್ನು ಪಡೆಯಲು ಅಷ್ಟೊಂದು ಹಾತೊರೆಯುತ್ತವೆ? ಅವರಿಗೆ ಚಿನ್ನ ಸಿಗಲು ಹೇಗೆ ಸಾಧ್ಯ?

*ಚಿನ್ನದ ಗಣಿಗಳ ಭವಿಷ್ಯ ಏನಾದೀತು?
ಕರ್ನಾಟಕದ ಜನರಿಗೆ ಭಾರತ ಸರ್ಕಾರ ಮಾಡುತ್ತಿರುವ ಅತಿದೊಡ್ಡ ಮೋಸಕ್ಕೆ ಕೆಜಿಎಫ್‌ ಸಾಕ್ಷಿ. ಹಲವು ವರ್ಷಗಳಿಂದ ಅಲ್ಲಿನ ಕಾರ್ಮಿಕರು ಗಣಿಗಳನ್ನು ಉಳಿಸಿಕೊಳ್ಳಲು ಹೋರಾಡಿದರು. ವಿಧಾನಸಭೆಯಲ್ಲಿ ಹಲವು ಬಾರಿ ಅವರ ಪರ ನಿರ್ಣಯಗಳು ಮಂಡನೆಯಾದವು. ಆದರೆ ಎಲ್ಲ ಹಂತದಲ್ಲಿಯೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅವರ ಹೋರಾಟವನ್ನು ಹತ್ತಿಕ್ಕುತ್ತಿದೆ. ‘ಗಣಿಯಲ್ಲಿ ಚಿನ್ನವಿಲ್ಲ, ಮುಚ್ಚಬೇಕು’ ಎಂದು ಹೇಳುತ್ತಿದೆ.

ಐಐಟಿಯಂಥ ಪ್ರತಿಷ್ಠಿತ ಸಂಸ್ಥೆಗಳ ತಜ್ಞರು ಹೇಳುವ ಮಾತನ್ನು ನಂಬಲೂ ಭಾರತ ಸರ್ಕಾರ ಸಿದ್ಧವಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಈ ವಿಚಾರ ಪ್ರಸ್ತಾಪವಾದಾಗಲೂ ಕೇಂದ್ರ ಸರ್ಕಾರ ಸರಿಯಾಗಿ ವಾದಿಸಲಿಲ್ಲ. ಗಣಿಗಳನ್ನು ಮತ್ತೆ ಆರಂಭಿಸುವ ಭ್ರಮೆ ಹುಟ್ಟಿಸಿ, ಪ್ರಕರಣವನ್ನು ಮುಚ್ಚಿ ಹಾಕಿತು.

ಪ್ರತಿ ಹಂತದಲ್ಲಿಯೂ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಕೈಚಳಕ ತೋರುತ್ತಿದ್ದಾರೆ. ಹೆಚ್ಚೇಕೆ ಇನ್ನು ಕೆಲವು ತಿಂಗಳು ಕಾಯಿರಿ. ಕೆಜಿಎಫ್‌ ಚಿನ್ನದ ಗಣಿಗಳು ಒಂದು ದೊಡ್ಡ ಬಹುರಾಷ್ಟ್ರೀಯ ಕಂಪೆನಿಯ ಪಾಲಾಗುವುದನ್ನು ನೋಡುತ್ತೀರಿ. ಈ ಮಾತನ್ನು ನಾನು ಅತ್ಯಂತ ಖಚಿತವಾಗಿ ಹೇಳುತ್ತಿದ್ದೇನೆ.

*ಪತ್ರಿಕೋದ್ಯಮದ ಇಂದಿನ ಸ್ಥಿತಿ ಬಗ್ಗೆ ನಿಮ್ಮ ಅಭಿಪ್ರಾಯವೇನು?
2009ರಲ್ಲಿ ನಾನು ‘ಕಾಸಿಗಾಗಿ ಸುದ್ದಿ’ ಕುರಿತು ಸ್ಟೋರಿ ಮಾಡಿದೆ. ನಾನು ಪಿ.ಸಾಯಿನಾಥ್, ದಿ ಹಿಂದೂನಂಥ ಬಹುದೊಡ್ಡ ರಾಷ್ಟ್ರೀಯ ಪತ್ರಿಕೆಯಲ್ಲಿ ಗ್ರಾಮೀಣ ವಿದ್ಯಮಾನಗಳ ಸಂಪಾದಕ ಎಂಬ ‘ವಿಮೆ’ ನನಗಿತ್ತು. ಇದೊಂದೇ ಕಾರಣದಿಂದ ಬದುಕಿ ಉಳಿದೆ. ಮತ್ತೊಮ್ಮೆ ಒತ್ತಿ ಹೇಳುತ್ತೇನೆ, ಪ್ರಭಾವಿ ಪತ್ರಕರ್ತ ಎಂಬ ವಿಮೆ ಇದ್ದ ಕಾರಣಕ್ಕೆ ನನ್ನ ಜೀವ ಉಳಿಯಿತು.

ಇದೇ ಸ್ಟೋರಿಯನ್ನು ಭಾರತೀಯ ಭಾಷೆಯ, ಪ್ರಭಾವಿಯಲ್ಲದ ಸಾಮಾನ್ಯ ಪತ್ರಕರ್ತ ಮಾಡಿದ್ದರೆ ಇಷ್ಟು ಹೊತ್ತಿಗೆ ಕೊಲೆಯಾಗಿರುತ್ತಿದ್ದ. ನನಗಿದ್ದ ವರ್ಗ– ಜಾತಿ– ಪ್ರತಿಷ್ಠೆಯ ವಿಮೆ ನನ್ನ ಜೀವ ಉಳಿಸಿತು.

ನಮ್ಮ ದೇಶದಲ್ಲಿ 1992ರಿಂದ ಈವರೆಗೆ 25 ಪತ್ರಕರ್ತರ ಕೊಲೆ ಆಗಿದೆ. ಅವರಲ್ಲಿ ಬಹುತೇಕ ಮಂದಿ ಸಣ್ಣ ಊರುಗಳ ಸಣ್ಣ ಪತ್ರಕರ್ತರೇ ಆಗಿದ್ದಾರೆ. ಇಂಗ್ಲಿಷ್ ಅಥವಾ ರಾಷ್ಟ್ರೀಯ ಮಾಧ್ಯಮಗಳ ಪತ್ರಕರ್ತರಿಗೆ ಇಂಥ ಪರಿಸ್ಥಿತಿ ಬರುವುದು ಅಪರೂಪ. ಅವರಿಗಿರುವ ಅವಕಾಶಗಳು ಅವರನ್ನು ಕಾಪಾಡುತ್ತವೆ.

20 ವರ್ಷಗಳ ಹಿಂದೆ ಪತ್ರಕರ್ತರಿಗೆ ಸಿಗುತ್ತಿದ್ದ ಗೌರವ– ಮರ್ಯಾದೆ ಇಂದು ಸಿಗುತ್ತಿಲ್ಲ. ಇದಕ್ಕೆ ಏನು ಕಾರಣ ಅನ್ನುವುದು ನಿಮಗೂ ಗೊತ್ತು ನನಗೂ ಗೊತ್ತು.

*ಹೊಸ ತಲೆಮಾರಿನ ಪತ್ರಕರ್ತರ ಬಗ್ಗೆ ನಿಮ್ಮ ಅಭಿಪ್ರಾಯ.
ಹೊಸ ತಲೆಮಾರಿನ ಪತ್ರಕರ್ತರು ಔಪಚಾರಿಕ ಶಿಕ್ಷಣದಲ್ಲಿ, ಡಿಗ್ರಿಗಳ ಲೆಕ್ಕದಲ್ಲಿ ಹೆಚ್ಚು ವಿದ್ಯಾವಂತರು. ತಾಂತ್ರಿಕ ಕೌಶಲಗಳೂ ಉನ್ನತ ಮಟ್ಟದಲ್ಲಿವೆ. ಬುದ್ಧಿವಂತ ಮಕ್ಕಳ ಪ್ರತಿಭೆ ಕೆಟ್ಟ ಶಿಕ್ಷಣ ಪದ್ಧತಿಯಿಂದಾಗಿ ಉಪಯೋಗಕ್ಕೆ ಬಾರದಂತೆ ಆಗಿದೆ.

ನಮ್ಮ ವಿಶ್ವವಿದ್ಯಾಲಯಗಳು ಪತ್ರಿಕೋದ್ಯಮದ ಪಠ್ಯಕ್ರಮದಲ್ಲಿ ಬದಲಾವಣೆ ತರಬೇಕಾದ ಜರೂರು ಇದೆ. ಮಾಧ್ಯಮದಲ್ಲಿ ಕೆಲಸ ಮಾಡುವವರು ಡಾ. ಬಿ.ಆರ್.ಅಂಬೇಡ್ಕರ್, ಮಹಾತ್ಮಗಾಂಧಿಯೂ ಪತ್ರಕರ್ತರಾಗಿದ್ದವರು ಎಂಬುದನ್ನು ತಿಳಿದುಕೊಳ್ಳಬೇಕು. ಅಂಥವರ ಬರಹಗಳನ್ನು ಓದಿರಬೇಕು.