ಸ್ವರಾಜ್ ಇಂಡಿಯಾ ಕರ್ನಾಟಕ ಪ್ರಣಾಳಿಕೆ–2018

                                                         

                                                                      ಕರ್ನಾಟಕ ವಿಧಾನಸಭಾ ಚುನಾವಣೆ-2018
                                                                            ಸ್ವರಾಜ್ ಇಂಡಿಯಾ ಕರ್ನಾಟಕ
                                                                                       ಪ್ರಣಾಳಿಕೆ

ಪ್ರಣಾಳಿಕೆಯ ಪಿಡಿಎಫ್ ಪ್ರತಿ ಇಲ್ಲಿದೆ: http://karnataka.swarajindia.org/content.html?dc=pg_caf

ಮೊದಲ ಮಾತು:
ಸ್ವರಾಜ್ ಇಂಡಿಯಾವು 2018 ಮೇನಲ್ಲಿ ನಡೆಯುವ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬೆರಳೆಣಿಕೆ ಸ್ಥಾನಗಳಿಗಷ್ಟೆ ಸ್ಪರ್ಧಿಸುತ್ತಿದೆ. ಹೀಗಿರುವಾಗ ನಾವು ಅಧಿಕಾರಕ್ಕೆ ಬಂದರೆ ಅದು ಇದು ಮಾಡುತ್ತೇವೆ ಎಂದು ಹೇಳುವುದು ಸುಮ್ಮನೆ ಮಾತಾಗುತ್ತದೆ. ಆದ್ದರಿಂದ ಈ ಪ್ರಣಾಳಿಕೆಯಲ್ಲಿ ಮನುಷ್ಯ ತನ್ನ ಜೀವನವನ್ನು ಸಹ್ಯ ಮಾಡಿಕೊಳ್ಳಲು ಒಂದು ಸಮಗ್ರ ಸಾವಯವ ನೋಟದಲ್ಲಿ, ಇರುವ ಸಾಧ್ಯತೆಗಳನ್ನು ಹುಡುಕುವ ಪ್ರಯತ್ನ ಮಾಡಲಾಗಿದೆ. ಇದು ಸಂವಾದಕ್ಕೆ ಮುಕ್ತವಾಗಿದೆ. ಹಾಗೇ ಇದರೊಡನೆ, ಮಂಜುನಾಥ್ ಎಚ್. ಅವರು ಬರೆದಿರುವ `ಮಣ್ಣಿನ ಒಡಲು ಜೀವ ವೈವಿಧ್ಯತೆಯ ಕಡಲು’ ಪುಸ್ತಿಕೆಯನ್ನು ಸ್ವರಾಜ್ ಇಂಡಿಯಾ ತನ್ನ ಸಹ-ಪಠ್ಯ ಎಂದು ಕೃತಜ್ಞತೆಯಿಂದ ಸ್ವೀಕರಿಸಿದೆ. ಹಾಗೆ ಉದ್ಯೋಗಕ್ಕಾಗಿ ಯುವಜನರು ಆಂದೋಲನ ಪ್ರಕಟಿಸಿರುವ `ಯುವಜನರ ಪ್ರಣಾಳಿಕೆ ಕರ್ನಾಟಕ 2018’ ಅನ್ನು ಸ್ವರಾಜ್ ಇಂಡಿಯಾ ತನ್ನ ಸಹ-ಪ್ರಣಾಳಿಕೆ ಎಂದು ಕೃತಜ್ಞತೆಯಿಂದ ಸ್ವೀಕರಿಸಿ ತನ್ನ ಪ್ರಣಾಳಿಕೆಯ ಭಾಗ ಎಂದೇ ಪರಿಗಣಿಸುತ್ತದೆ.
ಸ್ವರಾಜ್ ಇಂಡಿಯಾವು ತನ್ನ ಪ್ರಣಾಳಿಕೆಯ ಪರಿಕಲ್ಪನೆಗೆ ಅನುಗುಣವಾಗಿ ಕೆಲಸ ಮಾಡುತ್ತದೆ. ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಸ್ವರಾಜ್ ಇಂಡಿಯಾಕ್ಕೂ ಬೀಳುವ ಪ್ರತಿ ಓಟೂ ಈ ವಿಚಾರಕ್ಕೆ ಸಮ್ಮತಿ ಎಂದು ಭಾವಿಸುತ್ತದೆ. ಸ್ವರಾಜ್ ಇಂಡಿಯಾದಿಂದ ಗೆದ್ದ ಅಭ್ಯರ್ಥಿಗಳು ಈ ವಿಚಾರದ ಪರವಾಗಿ ನೀತಿ, ಶಾಸನ, ಕಾರ್ಯಕ್ರಮ ರೂಪುಗೊಳ್ಳುವುದಕ್ಕಾಗಿ ಶಾಸನ ಸಭೆಯಲ್ಲಿ ಶ್ರಮಿಸುತ್ತಾರೆ.
ಜೊತೆಗೆ ಈ ಅರಿವಿನಲ್ಲಿ ಮುಂದೆ ಜಿಲ್ಲಾಮಟ್ಟದಲ್ಲಿ ಕಾರ್ಯಕ್ರಮ ರೂಪಿಸಲು- ಜಿಲ್ಲೆಯ ಅಧ್ಯಯನ, ಜಿಲ್ಲಾ ಕಮ್ಮಟ, ಜಿಲ್ಲಾ ಸಂವಾದ, ಜಿಲ್ಲಾ ಅಗತ್ಯಕ್ಕನುಗುಣ ಸ್ಥಳೀಯ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹಾರಗಳಿಗಾಗಿ ಹುಡುಕಾಟ- ಹೀಗೆ ಇದು ಸ್ವರಾಜ್ ಇಂಡಿಯಾದ ಮುಂದಿನ ನಡೆಯಾಗಿರುತ್ತದೆ.
ದೇವನೂರ ಮಹಾದೇವ                                                                                   ಚಾಮರಸ ಮಾಲಿ ಪಾಟೀಲ್
ಸದಸ್ಯರು                                                                                                                 ಅಧ್ಯಕ್ಷರು
ರಾಷ್ಟ್ರೀಯ ಸಂಸದೀಯ ಮಂಡಳಿ ಸ್ವರಾಜ್ ಇಂಡಿಯಾ                                          ಸ್ವರಾಜ್ ಇಂಡಿಯಾ ಕರ್ನಾಟಕ

ಗಮನಿಸಿ: ಈ ಪುಸ್ತಿಕೆಗೆ copyright ಹಕ್ಕು ಇರುವುದಿಲ್ಲ. ಯಾರೇ ಅಭಿರುಚಿ ಉಳ್ಳ ವ್ಯಕ್ತಿ/ಸಂಘ ಸಂಸ್ಥೆ ಸಂಘಟನೆಗಳು ಯಥಾವತ್ತಾಗಿ ತಂತಮ್ಮ ಹೆಸರಿನಲ್ಲಿಯೇ ಪ್ರಕಟಿಸಿ ಪ್ರಚುರಪಡಿಸಬಹುದು.

                                                  ಕೆಲವರಿಗೆ ಅಲ್ಲ; ಸಮುದಾಯಕ್ಕೆ ಎಲ್ಲಾ

                                                          ಸಮುದಾಯ ರಾಜಕಾರಣಕ್ಕಾಗಿ
                                                                    ಸ್ವರಾಜ್ ಇಂಡಿಯಾ, ಕರ್ನಾಟಕ

[ಇಲ್ಲಿನ ಬರವಣಿಗೆಯು ಸಹ-ಅನುಭೂತಿಯ ಸಮುದಾಯದ ಚಿಂತಕರ ಹಾಗೂ ಬದುಕಿನ ಅನುಭವದ ಪಕ್ವತೆ ಉಳ್ಳವರ ವಿವೇಕ, ವಿವೇಚನೆಗಳನ್ನು ಕೃತಜ್ಞತೆಗಳಿಂದ ಸ್ವೀಕರಿಸಿ ರೂಪು ಪಡೆದಿದೆ.]

ಧರೆಹೊತ್ತಿ ಉರಿಯುತಿದೆ ಚುನಾವಣೆ ಬಿಸಿ ಏರುತಿದೆ
1
ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ (ಮೇ 2018) ಈಗ ನಮ್ಮ ಮುಂದಿದೆ. ಚುನಾವಣೆಯ ಬಿಸಿ ಏರುತ್ತಿದೆ. ಜೊತೆಗೆ ಭೂಮಿಗೂ ಜ್ವರ ಬಂದಂತೆ ವಾತಾವರಣದ ಬಿಸಿಯೂ ಏರುತ್ತಿದೆ. ಭುವಿಗೆ ತಂಪು ನೀಡುವ ಮಳೆಯ ಪ್ರಮಾಣ ಕಮ್ಮಿ ಏನೂ ಆಗಿಲ್ಲ. ಈ ಹಿಂದೆ ಎಷ್ಟು ಮಳೆ ಬೀಳುತ್ತಿತ್ತೋ ಹೆಚ್ಚೂಕಮ್ಮಿ ಈಗಲೂ ಅಷ್ಟೇ ಬೀಳುತ್ತಿದೆ. ಆದರೆ ಅದು ಲೆಕ್ಕಾಚಾರ ತಪ್ಪಿ ಎಲ್ಲೋ ಸುರಿಯುತ್ತದೆ, ಯಾವಯಾವಾಗಲೋ ಸುರಿಯುತ್ತದೆ. ಸಮತೋಲನ ತಪ್ಪಿ ತಲೆ ಕೆಟ್ಟಂತೆ ಅತಿ ಕಮ್ಮಿ ಸುರಿಯುತ್ತದೆ ಅಥವಾ ಅತಿ ಹೆಚ್ಚು ಸುರಿಯುತ್ತದೆ. ಮಳೆ ಇಲ್ಲದ ದಿನಗಳಲ್ಲಿ ನೆಲ ಜಾಸ್ತಿ ಬಿಸಿಯಾಗಿರುತ್ತದೆ. ಗಾಳಿಯಲ್ಲಿ ತೇವಾಂಶ ಇರುವುದಿಲ್ಲ. ಸಾಧಾರಣ ಮಳೆಯಾದಾಗ ನೀರು ನೆಲದೊಳಕ್ಕೆ ಇಂಗದೆ, ಸಹಜವಾಗಿ ಹರಿಯದೆ ಆರಿ ಹೋಗುತ್ತದೆ. ತೀರ ದೊಡ್ಡ ಮಳೆಯಾದಾಗ ಅದು ಮಹಾಪೂರ ಸೃಷ್ಟಿಸಿ ಸಮುದ್ರಕ್ಕೆ ಸೇರಿ ಹೋಗುತ್ತದೆ. ಅಂತರ್ಜಲ ಪಾತಾಳಕ್ಕೆ ಹೋಗುತ್ತಿದೆ. ನೀರಿನ ಅಭಾವ ಹೆಚ್ಚಾದಂತೆಲ್ಲ ಕೊಳವೆಬಾವಿಗಳನ್ನು ಆಳವಾಗಿ ಕೊರೆಯುತ್ತ ಹೋದಂತೆ ಅದರಲ್ಲಿ ವಿಷದ ಕೆಮಿಕಲ್ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದ ಸಂದು ನೋವು, ಮೂಳೆ ಸವೆತ ಜಡತ್ವ, ಇಲ್ಲಸಲ್ಲದ ಕಾಯಿಲೆಗಳು ಬರುತ್ತಿವೆ. ಕಾಡಿನ ಪ್ರಾಣಿಗಳು ನೀರು ಹುಡುಕುತ್ತ ಹೊಲಕ್ಕೆ, ಹಳ್ಳಿಗಳಿಗೆ ನುಗ್ಗುತ್ತಿವೆ. ಅಷ್ಟೇ ಅಲ್ಲ, ಈ ಏರುವ ಬಿಸಿಗೆ ವೈರಾಣುಗಳು, ಸೂಕ್ಷ್ಮಾಣುಗಳು ರೂಪಾಂತರ ಪಡೆದುಕೊಂಡು ಆಘಾತಕಾರಿಯಾಗಿ ಅವತರಿಸುತ್ತಿವೆ. ಹೊಸ ಹೊಸ ಖಾಯಿಲೆಗಳನ್ನು ತರುತ್ತಿವೆ. ಔಷಧ ವಿಜ್ಞಾನಕ್ಕೆ ಸವಾಲೊಡ್ಡುತ್ತಿವೆ. ಈ ಬಿಸಿ ಏರುವಿಕೆಯ ಕಾರಣವಾಗಿ ಅತಿಯಾದ ಮಳೆಯ ಪ್ರವಾಹ ಹಾಗೂ ಅತಿ ಕಡಿಮೆ ಮಳೆಗಾಲ ಸಂಭವಿಸುತ್ತಿದೆ. ಹಿಮಗಡ್ಡೆಗಳು ಕರಗುತ್ತಿವೆ. ಸೈಕ್ಲೋನುಗಳು ಅಪ್ಪಳಿಸುತ್ತಿವೆ. ಜೊತೆಗೆ ಮರುಭೂಮಿ ದಿನೇ ದಿನೇ ಹೆಚ್ಚುತ್ತಿದೆ. ಇದು ಇಂದಿನ ದಿನಗಳ ದಿನಚರಿಯಾಗಿದೆ. ಇದು ಭೂಮಿಯ ಡೈರಿ!
ಇದನ್ನು `ಪ್ರಕೃತಿ ವಿಕೋಪ’ ಎಂದು ಕರೆಯುತ್ತಿದ್ದೇವೆ. ನಿಜ, ಪ್ರಕೃತಿ ಕೋಪಗೊಂಡಿದೆ. ಆದರೆ ಇದಕ್ಕೆ ಕಾರಣ ಪ್ರಕೃತಿಯಲ್ಲ. ಇದಕ್ಕೆ ಕಾರಣ- ಹವಾಮಾನ ವೈಪರೀತ್ಯ. ಈ ಹವಾಮಾನ ವೈಪರೀತ್ಯಕ್ಕೆ ಜಗತ್ತಿನ `ಮುಂದುವರೆದ’ ಹಾಗೂ `ಮುಂದುವರಿಯುತ್ತಿದ್ದೇವೆ’ ಎಂದು ಅಂದುಕೊಳ್ಳುತ್ತಿರುವ ದೇಶಗಳ ಐಷಾರಾಮಿ ಜೀವನದ ವಿಸರ್ಜನೆ(luxury shit]ಗಳೇ ಕಾರಣವಾಗಿವೆ. ಐಷಾರಾಮಿ ಜೀವನದ ವಿಸರ್ಜನೆಗಳಾದ ಇಂಗಾಲದ ಡೈಆಕ್ಸೈಡ್, ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆಯಲ್ಲಿ ಬಳಸುವ ಸಾರಜನಕದ ಆಕ್ಸೈಡುಗಳು, ಇವೇ ಮುಂತಾಗಿ, ಜೊತೆಗೆ ಆಧುನಿಕ ಕೈಗಾರಿಕಾ ಉತ್ಪನ್ನಗಳ ವಿಸರ್ಜನೆ ಮತ್ತು ಡೀಸೆಲ್ ಪೆಟ್ರೋಲ್ ಉರಿಸುವ ವಾಹನಗಳ ಅತಿ ಹೆಚ್ಚಳ ಎಲ್ಲವೂ ಜೊತೆಗೂಡಿಕೊಂಡು ಇಂತವುಗಳೆಲ್ಲದರÀ ಕೂಡಾವಳಿಯಾಗಿಯೇ ಹವಾಮಾನ ವೈಪರೀತ್ಯ ಉಲ್ಬಣಗೊಂಡಿದೆ. ನಗುವಿನ ಅನಿಲ (Laughing Gas) ನೈಟ್ರಸ್ ಆಕ್ಸೈಡ್ (N2O) ಅತಿಯಾಗಿ ಬೆಳೆದು ವಿಷಕಾರಿ ಮೃತವಲಯ ಉಂಟಾಗುತ್ತಿದೆ. ಈ ಪಾಚೀಕರಣವನ್ನು ಸಾರಜನಕದ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಇದು ಜಾಗತಿಕ ಬಿಸಿಯೇರುವಿಕೆಗೆ ಇಂಗಾಲದ ಡೈಆಕ್ಸೈಡ್‍ಗಿಂತಲೂ ಹೆಚ್ಚು ಅಪಾಯಕಾರಿಯೆಂದು ಭಾವಿಸಲಾಗಿದೆ. ನಗುವ ಅನಿಲದ ನಗು ಸಾಯುತ್ತಿದೆ. ಐಷಾರಾಮಿ ವಿಸರ್ಜನೆಯು ಭೂಮಿಗೆ ಜ್ವರ ಬರಿಸಿದೆ. ಧರೆ ಹತ್ತಿ ಉರಿಯುತ್ತಿದೆ. ಒಟ್ಟಿನಲ್ಲಿ ಆಧುನಿಕ ಯುಗದ “ಅಭಿವೃದ್ಧಿ” ಮನುಷ್ಯ ತನ್ನ ಲೋಲುಪತೆಗಾಗಿ ಭೂಮಿಯನ್ನು ಉರಿಸುತ್ತಿದ್ದಾನೆ. ಖಾಯಿಲೆ, ಕ್ಷಾಮ ಮತ್ತು ಪ್ರವಾಹಗಳನ್ನು ಮನುಷ್ಯ ತನ್ನ ಕೈಯಾರ ತಂದುಕೊಂಡಿದ್ದಾನೆ. ಆಳ್ವಿಕೆ ನಡೆಸುತ್ತಿರುವ ವಿವೇಕಹೀನರ ಅಧಃಪತನದ ರಾಜಕಾರಣವೇ ಇದಕ್ಕೆಲ್ಲಾ ಬಹುತೇಕ ಕಾರಣವೆನ್ನಬಹುದು. ಈ ಕಾರಣಕರ್ತರಿಗೆ- `ಇದಕ್ಕೆಲ್ಲಾ ನೀವು ಕಾರಣ’ ಎಂದು ಕೂಗಿ ಹೇಳುವುದೇ ಸಮುದಾಯ ರಾಜಕಾರಣದ ಮೊದಲ ಕೆಲಸವಾಗಬೇಕಾಗಿದೆ.

ಮಾಯಬಜಾರ್:
ಈ ‘ಅಭಿವೃದ್ಧಿಯ’ ಹುಸಿ ಮಾಯಾಬಜಾರ್ ವಹಿವಾಟು ಇಂದು ಜಗತ್ತನ್ನು ಆಳುತ್ತಿದೆ. ಜಗತ್ತನ್ನು ಉದ್ಧಾರ ಮಾಡಲು ಅವತರಿಸಿದ್ದೇವೆಂದು ನಂಬಿಸುವ ಕಾರ್ಪೋರೇಟ್ ಕಂಪನಿಗಳು ತಮ್ಮ ದರೋಡೆಯನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗಲು ತಮ್ಮ ಹಿತಕ್ಕನುಗುಣವಾಗಿ ಸರ್ಕಾರಗಳನ್ನು ತರುತ್ತವೆ; ಸರ್ಕಾರಗಳನ್ನು ಬೀಳಿಸುತ್ತವೆ. ಎಲ್ಲವನ್ನೂ ತನ್ನ ಮುಷ್ಟಿಗೆ ತಂದುಕೊಳ್ಳುತ್ತವೆ. ಜನರ ಸಮಸ್ಯೆಗಳಿಗೆ ಮುಖಾಮುಖಿಯಾಗಲು ತ್ರಾಣವಿಲ್ಲದ ಆಳ್ವಿಕೆಗಳು ಜಾತಿ ಮತ ಪಂಥಗಳ ಭಿನ್ನತೆಯನ್ನು ಎತ್ತಿಕಟ್ಟುತ್ತಾ ದ್ವೇಷ, ಸುಳ್ಳು, ಭ್ರಮೆಗಳನ್ನು ಬಿತ್ತುತ್ತ ತನ್ನ ಅವಧಿ ಮುಗಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಈ `ಅಭಿವೃದ್ಧಿ’ ಎಂಬ ಮೋಹಕ ನುಡಿಗಟ್ಟು ಮಾಡಿದಷ್ಟು ವಂಚನೆಯನ್ನು ಬೇರೆ ಯಾವುದೂ ಮಾಡಿಲ್ಲವೇನೋ. ಸಾರ್ವಜನಿಕ ಸಂಪತ್ತನ್ನು ಲೂಟಿಗೆ ತೆರೆದಿಡಲಾಗಿದೆ. ಇದೇ `ಅಭಿವೃದ್ಧಿ’ ಅನ್ನಿಸಿಕೊಂಡುಬಿಟ್ಟಿದೆ. ದೇಶಪ್ರೇಮದ ಜಪ ಮಾಡುತ್ತಾ ದೇಶವನ್ನೇ ಖಾಸಗಿ ಕಂಪನಿಗಳಿಗೆ ಮಾರುವುದೂ ಅಭಿವೃದ್ಧಿ ಅನ್ನಿಸಿಕೊಂಡುಬಿಟ್ಟಿದೆ. ಈ ರೀತಿಯ ಅಭಿವೃದ್ಧಿಯಿಂದಾಗಿ ಬಂಡವಾಳಿಗರ ಬಂಡವಾಳ ಮಾತ್ರ ಹೆಚ್ಚುತ್ತಿದೆ. ಇದೂ ಅಭಿವೃದ್ಧಿ ಅನ್ನಿಸಿಕೊಂಡುಬಿಟ್ಟಿದೆ. ಇದರ ಜೊತೆಗೆ ನಿರುದ್ಯೋಗವೂ ಹೆಚ್ಚುತ್ತಿದೆ. ಇರುವ ಉದ್ಯೋಗಗಳನ್ನು ಕಡಿತ ಮಾಡಲಾಗುತ್ತಿದೆ. ಖಾಯಂ ಹುದ್ದೆಗಳನ್ನು ಖಾಲಿ ಬಿಡಲಾಗುತ್ತಿದೆ. ಗ್ಯಾರಂಟಿ ಇಲ್ಲದ ಅರೆಬರೆ ಉದ್ಯೋಗ, ಅರೆಕಾಲಿಕ ಉದ್ಯೋಗ, ಗುತ್ತಿಗೆ ಕೆಲಸ ಇತ್ಯಾದಿಗಳಿಗೆ ಉತ್ತೇಜನ ನೀಡುತ್ತಾ ಯುವಜನರ ಬದುಕನ್ನು ವ್ಯವಸ್ಥಿತವಾಗಿ ಅತಂತ್ರಗೊಳಿಸಲಾಗುತ್ತಿದೆ. ಸಮುದಾಯ ದಿನದಿನಕ್ಕೆ ಹೆಚ್ಚುಹೆಚ್ಚು ಅಸಹಾಯಕವಾಗುತ್ತಿದೆ. ಅಸಹಾಯಕವಾಗಿ ಬದುಕು ದೂಡುವುದು ಸಹಜ ಅಂತಾಗಿಬಿಟ್ಟಿದೆ. ಜನರನ್ನು ಕಿತ್ತು ತಿನ್ನುವ ಜ್ವಲಂತ ಸಮಸ್ಯೆಗಳಿಂದ ಜನರನ್ನು ವಿಮುಖಗೊಳಿಸಿ, ದಿಕ್ಕು ತಪ್ಪಿಸಿ ಆಳ್ವಿಕೆ ಮಾಡುವ ಸಂಚೂ ಇರಬಹುದು. ಕೊನೆಗೂ ಈ ಅಭಿವೃದ್ಧಿ ಮಾದರಿಯಲ್ಲಿ ಸಿಕ್ಕಿದ್ದೇನು? ಕೆಲವೇ ಜನರ ಕೈಗೆ ಸಂಪತ್ತಿನ ವಶವಾಗುವ ಪ್ರಕ್ರಿಯೆಯೇ ಅಭಿವೃದ್ಧಿ ಎನ್ನಿಸಿಕೊಂಡುಬಿಟ್ಟಿದೆ. ಈಗೀಗ ತಮ್ಮ ಲೂಟಿ ಸಂಪತ್ತಿನೊಡನೆ ದೇಶ ಬಿಟ್ಟು ಪರಾರಿಯಾಗುವ ಕೋಟ್ಯಾಧೀಶ್ವರರ ಸಂಖ್ಯೆಯೂ ದಿನೇ ದಿನೇ ಹೆಚ್ಚಳವಾಗುತ್ತಿದೆ. ಈ ಹೆಚ್ಚಳವೂ ಅಭಿವೃದ್ಧಿಯಾಗಿಬಿಟ್ಟಿದೆ! ಬುದ್ಧಿಮತ್ತೆಯು- ಹೊಟ್ಟೆಗಲ್ಲ, ಬಟ್ಟೆಗಲ್ಲ, ಜನಸಮುದಾಯವನ್ನು ಸುಲಿಗೆ ಮಾಡುವುದಕ್ಕಾಗಿ, ವಶೀಕರಣದ ಆಕರ್ಷಕ ಬಲೆ ಹೆಣೆಯುವುದಕ್ಕೆ ತಾನು ಕಲಿತ ಬುದ್ಧಿಯನ್ನು ಖರ್ಚುಮಾಡುತ್ತಿದೆ. ಅದಕ್ಕಾಗಿ ಅಪಾರ ಹಣವನ್ನೂ ವಿನಿಯೋಗಿಸುತ್ತಿದೆ. ಜೊತೆಗೆ ಹೃದಯ ಹೀನತೆಯೇ `ಚಾಣಾಕ್ಷ’ತನವಾಗಿಬಿಟ್ಟಿದೆ. ಈ `ಅಭಿವೃದ್ಧಿ’ ಎಂಬ ದಾಹವು ಎಷ್ಟು ಅನಾಹುತಗಳನ್ನು ಉಂಟುಮಾಡುತ್ತಿದೆ ಎಂದರೆ ಬಾಯಾರಿಕೆಗೆ ಕುಡಿಯಲು ನೀರೂ ಸಿಗದಂತೆ ಮಾಡುತ್ತಿದೆ. ಉಸಿರಾಡಲು ಒಳ್ಳೆಯ ಗಾಳಿಗಾಗಿ ಹಾತೊರೆಯುವಂತೆಯೂ ಮಾಡಿಬಿಟ್ಟಿದೆ.
ಈ ಪರಿಸ್ಥಿತಿಯಲ್ಲಿ ಎಚ್ಚರಗೊಳ್ಳುವ ಕ್ರಿಯೆಯೇ ನಮ್ಮ ಮೊದಲ ಕೆಲಸವಾಗಬೇಕಾಗಿದೆ. ಉಳಿಗಾಲಕ್ಕಾಗಿ ಅಭಿವೃದ್ಧಿ ಎಂದರೆ- ಉದ್ಯೋಗ ಮತ್ತು ಸ್ವಾವಲಂಬನೆ ಎಂದಾಗಬೇಕು. ಹಾಗೂ ಅಭಿವೃದ್ಧಿಯೆಂದರೆ- ಸಮಾನತೆ ಮತ್ತು ಸಂಪತ್ತ್ತಭಿವೃದ್ಧಿಯು ಒಂದೇ ರಥದ ಎರಡು ಚಕ್ರಗಳು ಎಂದು ಪರಿಭಾವಿಸಿ ಸಮತೋಲನದಲ್ಲಿ ಚಲಿಸುವುದು ಆಗಬೇಕು. ಆಗಲೇ ನಡಿಗೆ. ಈ ರೀತಿ ಆದಾಗಲೇ ಮುನ್ನಡೆ ಎಂಬುದನ್ನು ಮೊದಲು ಮನಗಾಣಬೇಕಾಗಿದೆ.
ನೀರ್ಗುಳ್ಳೆ ಜಿಡಿಪಿ: ಇದರೊಡನೆ ಇಂದು ದಿನನಿತ್ಯ ಕೇಳಿಬರುವ ಜಿ.ಡಿ.ಪಿ (ಆಂತರಿಕ ಒಟ್ಟು ಉತ್ಪಾದನೆ) ಬಗ್ಗೆಯೂ ನಾವು ಗಮನಹರಿಸಬೇಕಾಗಿದೆ. ಜನರ ಆರೋಗ್ಯ, ಶಿಕ್ಷಣ, ವಸತಿ, ನೆಮ್ಮದಿ ಇವ್ಯಾವುದನ್ನೂ ಕಣ್ಣೆತ್ತೂ ನೋಡದ ಜಿಡಿಪಿ ಹೆಚ್ಚಳದ ಬೆನ್ನು ಹತ್ತಿ ಹೊರಟಿದ್ದೇವೆ. ಒಂದು ಉದಾಹರಣೆಯ ಮೂಲಕ ಇದರ ಬರ್ಬರತೆಯನ್ನು ಕಾಣಿಸಬಹುದು- ಹಣದುಬ್ಬರದ ದರವು ಕಡಿಮೆಯಾಗಿ, ಸರಕುಗಳ ಬೆಲೆ ಕಮ್ಮಿಯಾದರೆ ಬೆಲೆ ಕಮ್ಮಿಯಾಯ್ತು ಅಂತ ಸಂಭ್ರಮಿಸುತ್ತೇವೆ. ಆಗ ಕೃಷಿ ಉತ್ಪನ್ನಗಳ ಬೆಲೆಯೂ ಸಿಕ್ಕಾಪಟ್ಟೆ ಸಸ್ತಾ ಆಗುತ್ತದೆ. ಆಹಾರ ಬೆಳೆಗಳ ಬೆಲೆ ಕಡಿಮೆ ಆದುದಕ್ಕೆ ಸಂಭ್ರಮಿಸುತ್ತೇವೆ. ಆದರೆ ನಾವು ಸಂಭ್ರಮಿಸುವುದು ಏನನ್ನು? ರೈತರ ದುಡಿಮೆಗೆ ಬೆಲೆ ಇಲ್ಲದಂತಾದುದನ್ನು ನಾವು ಸಂಭ್ರಮಿಸಿದಂತಾಗುವುದಿಲ್ಲವೆ? ರೈತ ಬೆಲೆ ಇಲ್ಲದೆ ಆತ್ಮಹತ್ಯೆ ಮಾಡಿಕೊಂಡರೆ, ದುಡಿಯುವವನ ಕೂಲಿ ಕನಿಷ್ಟವಾದರೆ ಹಣವಂತರ ಹಣ ಹೆಚ್ಚಳವಾಗುತ್ತದೆ. ಈ ಜಿಡಿಪಿಯು ಆಸ್ಪತ್ರೆಗೆ ಸೇರಿದರೂ ಹೆಚ್ಚುತ್ತದೆ. ಸತ್ತರೂ ಅದರಿಂದ ಕೆಲವರಿಗೆ ಕೆಲಸ ಸಿಕ್ಕಿ ಜಿಡಿಪಿ ಹೆಚ್ಚಾಯ್ತು ಎಂದು ಲೆಕ್ಕ ಹಾಕುತ್ತೇವೆ. ಇದು ಕ್ರೌರ್ಯದ ಪರಮಾವಧಿ. ಈ ಹಣದಿಂದ ಹಣಮಾಡುವ ಜೂಜಾಟದ ಷೇರುಪೇಟೆಯ ಹಣಕಾಸು ಕ್ಷೇತ್ರದ ವಹಿವಾಟನ್ನು- ನೀರಿನ ಮೇಲಿನ ಗುಳ್ಳೆಯೆಂದು ಕರೆಯುತ್ತಾರೆ. ಇದು ನಶ್ವರ ಆರ್ಥಿಕತೆ. ಭಾರತವು ಕೂಡ ಈ ಜೂಜಾಟದ ನಶ್ವರ ಆರ್ಥಿಕತೆಗೆ ಬಿದ್ದಿದೆ. ನಶ್ವರ ಆರ್ಥಿಕತೆಯ ಸೂತ್ರ ತಪ್ಪಿದರೆ, ಆರು ಇರುವ ಜಿ.ಡಿ.ಪಿ. ಕಣ್ಮುಚ್ಚಿ ತೆಗೆಯುವುದರೊಳಗಾಗಿ ಮೂರು ಆಗಿಬಿಡಲೂಬಹುದು! ಎಷ್ಟೋ ದೇಶಗಳು ದಿವಾಳಿ ಪರಿಸ್ಥಿತಿಗೆ ತಲುಪಲು ಈ ನಶ್ವರ ಆರ್ಥಿಕತೆಯೇ ಮುಖ್ಯಕಾರಣವಾಗಿದೆ. ಇಲ್ಲಿ ಭಾರತ ಎಚ್ಚರ ವಹಿಸಬೇಕಾಗಿದೆ. ಜನಸಂಖ್ಯಾ ಬಾಹುಳ್ಯದ ಭಾರತವು ಸ್ವಾವಲಂಬಿಯಾದ ತಾಳಿಕೆಯ, ಬಾಳಿಕೆಯ ಆರ್ಥಿಕತೆಯ ಕಡೆಗೆ ದೃಢವಾದ ಹೆಜ್ಜೆಗಳನ್ನು ಇಡಬೇಕಾಗಿದೆ; ಭಾರತವು ತನ್ನ ಆರ್ಥಿಕತೆಯನ್ನು ವಾಸ್ತವದ ಮೇಲೆ ಅವಲಂಬಿತವಾಗಿಸಬೇಕಾಗಿದೆ. ಅಂದರೆ ಉತ್ಪಾದನಾ ಕ್ಷೇತ್ರ ಕೈಗಾರಿಕೆಗೆ ಆದ್ಯತೆ ನೀಡಬೇಕಾಗಿದೆ. ಕೈಗಾರಿಕಾ ಕ್ಷೇತ್ರಕ್ಕೆ ಜೈವಿಕ ಇಂಧನ ಹಾಗೂ ಸೋಲಾರ್ ವಿದ್ಯುತ್, ಮಳೆ ನೀರು ಸಂಗ್ರಹ ಕಡ್ಡಾಯವಾಗಬೇಕಾಗಿದೆ. ಅಷ್ಟೇ ಅಲ್ಲ, ಕೃಷಿವಲಯದ ಉತ್ಪನ್ನಗಳ ಮೌಲ್ಯ ವರ್ಧಿತವಾಗಿಸುವ ಗೃಹ ಕೈಗಾರಿಕೆಯನ್ನು ಆಧಾರಮಾಡಿಕೊಂಡು ಭಾರತದ ಸ್ವಾವಲಂಬಿ ಆರ್ಥಿಕತೆಯನ್ನು ಗಟ್ಟಿಗೊಳಿಸಬೇಕಾಗಿದೆ.

ಈಗ: ಈಗ ಚುನಾವಣೆ ನಮ್ಮ ಮುಂದಿದೆ. ಸ್ವರಾಜ್ ಇಂಡಿಯಾ ವಿಷನ್ (http://swarajindia.org/content/Vision%20Swaraj%20English.pdf) ಅರಿತು ಕೊಂಡಂತೆ – `ಚುನಾವಣೆ ಎನ್ನುವುದು ಹಣ ಚೆಲ್ಲಿ ಓಟುಗಳನ್ನು ಸಂಗ್ರಹಿಸುವ, ಮತ್ತೆ ಅದನ್ನೇ `ಮೇವಾಗಿ’ ಬಳಸಿಕೊಂಡು ಹಣ ಮಾಡಿಕೊಳ್ಳುವ, ಆ ಹಣವನ್ನು ಅಧಿಕಾರವನ್ನಾಗಿಸಿಕೊಳ್ಳುವ, ಆ ಅಧಿಕಾರವನ್ನು ಬಳಸಿಕೊಂಡು ಮತ್ತೆ ಹಣ ಮಾಡಿಕೊಳ್ಳುವುದಕ್ಕೆ ಬೇಕಾದಂತಹ ಯಂತ್ರವಷ್ಟೇ ಆಗಿಬಿಟ್ಟಿದೆ. ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿಬಿಟ್ಟಿದೆ. ಅಷ್ಟೇ ಅಲ್ಲ, ವ್ಯವಸ್ಥೆಯೇ ಸಾಂಸ್ಥೀಕರಣಗೊಂಡ ಭ್ರಷ್ಟ ವ್ಯವಸ್ಥೆಯಾಗಿಬಿಟ್ಟಿದೆ. ಇಂದು ನಮಗೆ ಪ್ರಜಾಸತ್ತೆಯು ಒಳ್ಳೆಯ ಆಡಳಿತದ ಭರವಸೆಯ ಭ್ರಮೆಯನ್ನಷ್ಟೆ ಕೊಡುತ್ತಿದೆಯೇ ಹೊರತು ನಿಜವಾದ ಸ್ವಯಂ-ಆಡಳಿತವನ್ನಲ್ಲ.’ ಒಟ್ಟಿನಲ್ಲಿ ಜನಪ್ರತಿನಿಧಿಗಳು ಜನರನ್ನು ಪ್ರತಿನಿಧಿಸುತ್ತಿಲ್ಲ! ಇಂದು `ಹಣದಿಂದ ಹಣಕ್ಕಾಗಿ ಹಣಪ್ರತಿನಿಧಿ’ ಆಗಿರುವವರು ಆಯ್ಕೆಯಾಗುತ್ತಿದ್ದಾರೆ. ಈಗ `ಜನರಿಂದ ಜನಕ್ಕಾಗಿ ಜನಪ್ರತಿನಿಧಿ’ಗಳನ್ನು ಆಯ್ಕೆ ಮಾಡಬೇಕಾಗಿದೆ.
ಸ್ವರಾಜ್ ಇಂಡಿಯಾಕ್ಕೆ ರಾಜಕೀಯವೆಂದರೆ- ಚುನಾವಣೆಯ ಜೊತೆಗೆ ಹೋರಾಟ, ರಚನಾತ್ಮಕ ಕೆಲಸ, ಚಿಂತನೆಗಳ ಸೃಷ್ಟಿ ಹಾಗೂ ಮನುಷ್ಯನ ಅಂತರಂಗ-ಬಹಿರಂಗದ ಐಕ್ಯತೆಯೂ ಕೂಡ. ಇದೆಲ್ಲಾ ಕೂಡಿಯೇ ರಾಜಕಾರಣ ಎಂದು ಸ್ವರಾಜ್ ಇಂಡಿಯಾ ಪರಿಭಾವಿಸಿದೆ. ಈ ತಿಳಿವಿನೊಡನೆ ಸ್ವರಾಜ್ ಇಂಡಿಯಾವು ತನ್ನ ಆಲೋಚನೆ, ಕಾರ್ಯಕ್ರಮಗಳನ್ನು ರೂಪಿಸುತ್ತದೆ.

ಉದಾಹರಣೆಗೆ: ಉದಾಹರಣೆಗಳ ಮೂಲಕ ಸ್ವರಾಜ್ ಇಂಡಿಯಾದ ನಾಲ್ಕಾರು ಕಾರ್ಯಕ್ರಮಗಳನ್ನು ಮುಂದಿಟ್ಟು ಪ್ರಣಾಳಿಕೆಯ ನಡಿಗೆಯನ್ನು ಮನದಟ್ಟು ಮಾಡಲು ಪ್ರಯತ್ನಿಸಲಾಗಿದೆ.
1. ಬಿದಿರು: ಬಿದಿರು ಗುಡ್ಡದಲ್ಲಿದ್ದರೆ ನೀರನ್ನು ಹಿಡಿದಿಡುತ್ತದೆ. ಅಂತರ್ಜಲ ಮಟ್ಟ ಹೆಚ್ಚಿಸುತ್ತದೆ. ತಗ್ಗಿನಲ್ಲಿ ಬೆಳೆಸಿದರೆ ಕೊಳೆತ ನೀರನ್ನು ಸೋಸುತ್ತದೆ. ಜಲಜೀವಿಗಳಿಗೆ ತನ್ನ ಬೇರಿನಲ್ಲಿ ಆಸರೆ ನೀಡುತ್ತದೆ. ತನ್ನ ಪೊದೆಮೆಳೆಗಳಲ್ಲಿ ಇತರ ಜೀವಿಗಳಿಗೂ ಆಸರೆ ನೀಡುತ್ತದೆ. ಬಿದಿರನ್ನು ವ್ಯಾಪಕವಾಗಿ ಬೆಳೆಸಿ ಅದನ್ನು ಹೆಚ್ಚಾಗಿ ಪೀಠೋಪಕರಣಕ್ಕೆ ಬಳಸಿದರೆ ಮರದ ಬಳಕೆ ಕಡಿಮೆಯಾಗುತ್ತದೆ. ಹಾಗೂ ಬೀದಿಬದಿಯ ವ್ಯಾಪಾರಿಗಳು ಬಿದಿರಿನ ಟೇಬಲ್ ಮೇಲೆ ದವಸ ಧಾನ್ಯ ತರಕಾರಿ ಇಟ್ಟು ವ್ಯಾಪಾರ ಮಾಡಿದರೆ ಆಹಾರ ಪದಾರ್ಥಗಳ ಸ್ವಚ್ಛತೆಯನ್ನು ಕಾಪಾಡಬಹುದು. ವ್ಯಾಪಾರಕ್ಕಾಗಿ ಬಿದಿರಿನಿಂದ ಸುಲಭವಾದ ತಳ್ಳುಗಾಡಿಯನ್ನೂ ಮಾಡಬಹುದು. ಈ ಪ್ರಕ್ರಿಯೆ ಉದ್ಯೋಗವನ್ನೂ ಸೃಷ್ಟಿಸುತ್ತದೆ.
2. ಬೈಸಿಕಲ್ ಪಥ: ದಟ್ಟಣೆಯ ನಗರಗಳಲ್ಲಿ ಏಕಮುಖ ಸಂಚಾರದ ಬೈಸಿಕಲ್ ಪಥವನ್ನು ಕಡ್ಡಾಯವಾಗಿ ನಿರ್ಮಿಸಬೇಕು. ಬೈಸಿಕಲ್ ಸವಾರಿಗೆ ಉತ್ತೇಜನ ನೀಡಬೇಕು. ಬೈಸಿಕಲ್ ಅನ್ನು ವೇಗಗೊಳಿಸುವುದಕ್ಕೆ ಬೇಕಾದ ತಾಂತ್ರಿಕ ಸಂಶೋಧನೆಯೂ ಆಗಬೇಕು. ಇದರಿಂದ ಇಂಧನ ಬಳಕೆ ಕಡಿಮೆಯಾಗುತ್ತದೆ. ಇಂಗಾಲದ ಡೈ ಅಕ್ಸೈಡ್ ವಾತಾವರಣಕ್ಕೆ ಸೇರ್ಪಡೆಯಾಗುವುದು ಸ್ವಲ್ಪವಾದರೂ ಕಡಿಮೆಯಾಗುತ್ತದೆ. ಜೊತೆಗೆ ರಸ್ತೆಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಜನದಟ್ಟಣೆಯ ನಗರಗಳಲ್ಲಿ ಆಸ್ಪತ್ರೆಗಳಿಗೆ ರಕ್ತವನ್ನು ವೇಗವಾಗಿ ಒಯ್ಯಲೂ ಉಪಕರಿಸುತ್ತದೆ. ಸೈಕಲ್ ಸವಾರಿ ಆರೋಗ್ಯಕ್ಕೂ ಒಳ್ಳೆಯದು.
3. ಬೆಲ್ಲದ ಬಳಕೆಗೆ ಉತ್ತೇಜನ : ನೀರನ್ನು ಹೆಚ್ಚು ಕೇಳುವ ಕಬ್ಬು ಬೆಳೆಯುವುದನ್ನು ಅದಷ್ಟು ಮಿತಿಗೊಳಿಸಿಕೊಳ್ಳಬೇಕು. ದೇಶದೊಳಗಿನ ಅಗತ್ಯಕ್ಕೆ ಬೆಲ್ಲ ತಯಾರಿಕೆಗೆ ಉತ್ತೇಜನ ನೀಡಬೇಕು. ಅದರಲ್ಲೂ ನೈಸರ್ಗಿಕ ಬೆಲ್ಲಕ್ಕೆ ಆದ್ಯತೆ ಕೊಡಬೇಕು. ಇದರಿಂದ ಕೆಮಿಕಲ್ ಬಳಕೆ ಕಮ್ಮಿಯಾಗುತ್ತದೆ. ಜೊತೆಗೆ ಗ್ರಾಮೀಣ ಉದ್ಯೋಗ ವೃದ್ಧಿಯಾಗುತ್ತದೆ. ಬೆಲ್ಲದಿಂದ ತಯಾರಿಸುವ ಸಿಹಿ ಪದಾರ್ಥಗಳಿಗೆ ಕಡಿಮೆ ತೆರಿಗೆ ಹಾಕಿ, ಸಕ್ಕರೆ ಬಳಸುವ ಸಿಹಿ ಪದಾರ್ಥಗಳಿಗೆ ಹೆಚ್ಚು ತೆರಿಗೆ ವಿಧಿಸಬೇಕು. ಮುಖ್ಯವಾಗಿ ಸಿಹಿ ತಿಂಡಿ ಪಾನೀಯಗಳಲ್ಲಿ ವ್ಯಾಪಕವಾಗಿ ಬಳಸುವ ಕಾಯಿಲೆ ಕಸಾಲೆಗಳನ್ನು ತರುವ ಕೃತಕ ಸಿಹಿ ಸ್ಯಾಕ್‍ರಿನ್ ಮುಂತಾದವುಗಳನ್ನು ನಿಷೇಧಿಸಬೇಕು. ಇದರಿಂದ ಮಾರಕ ಕಾಯಿಲೆ ಕಸಾಲೆಗಳನ್ನು ತಡೆಗಟ್ಟಿದಂತೂ ಆಗುತ್ತದೆ. ಹಾಗೂ ಕಡಲೆಬೀಜ, ಹುರುಳಿಕಾಳು, ಎಳ್ಳು, ಕಿರುಧಾನ್ಯ ಇತ್ಯಾದಿ ಒಣಭೂಮಿ ಬೇಸಾಯದ ಧಾನ್ಯಗಳನ್ನು ಬಳಸಿ ತಯಾರಿಸಿದ ಬೆಲ್ಲದ ಮಿಠಾಯಿಗಳನ್ನು ಶಾಲಾ ಮಕ್ಕಳಿಗೆ ವಿತರಿಸಬೇಕು. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿದಂತೂ ಆಗುತ್ತದೆ. ಒಣಭೂಮಿ ಬೇಸಾಯದ ಬೆಳೆಗಾರರಿಗೆ ಉತ್ತೇಜಿಸಿದಂತೂ ಆಗುತ್ತದೆ. ಒಂದಿಷ್ಟು ಉದ್ಯೋಗವೂ ಸೃಷ್ಟಿಯಾಗುತ್ತದೆ, ಹೀಗೆ…
4. ನರಳುವ ಮರಗಳು: ನಗರಗಳ ರಸ್ತೆಯ ಫುಟ್‍ಪಾತ್ ಸಿಮೆಂಟ್ ಹಾಸುಗಳ ನಡುವೆ ಆಹಾರವಿಲ್ಲದೆ ದಯನೀಯವಾಗಿ ನರಳುತ್ತ ನಿಂತ ವೃಕ್ಷಗಳಿಗೆ ದಯಾಮರಣ ನೀಡಬೇಕು. ಮೊದಲು ಹತ್ತು ವೃಕ್ಷಗಳನ್ನು ನೆಟ್ಟು ಒಂದು ವೃಕ್ಷವನ್ನು ತೆಗೆಯಬೇಕು. ಇದರಿಂದ ಸಣ್ಣ ಮಳೆಗಾಳಿಗೂ ಫುಟ್‍ಪಾತ್‍ವಾಸಿ ದುರ್ಬಲ ಮರಗಳು ಬಿದ್ದು ಉಂಟಾಗುವ ಅವಘಡಗಳನ್ನು ತಪ್ಪಿಸಿದಂತೂ ಆಗುತ್ತದೆ.
5. ಫುಟ್‍ಪಾತ್ ಗುಡಿಗಳು: ನಗರಗಳ ಫುಟ್‍ಪಾತ್ ರಸ್ತೆಗಳಲ್ಲಿ ಗುಡಿ ಕಟ್ಟಿಸಿ ದೇವರನ್ನು ಅಬ್ಬೇಪಾರಿ ಮಾಡಲಾಗಿದೆ. ಇದರಿಂದ ಇಂಧನ ಬಳಸದೆ ವಾಯುಮಾಲಿನ್ಯ ಉಂಟುಮಾಡದೆ ಫುಟ್‍ಪಾತ್ ಬಳಸುವ ಕಾಲುನಡಿಗೆಯ ಪಾದಚಾರಿಗಳಿಗೆ ಕಿರುಕುಳವಾಗುವುದರಿಂದ ಫುಟ್‍ಪಾತ್ ಗುಡಿಗಳನ್ನು ಸ್ಥಳಾಂತರಿಸಬೇಕು.
6. ಸಸ್ಯದೇವತೆ ಪೂಜೆ: ನಗರಗಳ ಪಾರ್ಕ್‍ಗಳಲ್ಲಿ `ಸಸ್ಯ ದೇವತೆ’ ಪೂಜೆಗೊಳಗಾಗಬೇಕು. ಪಾರ್ಕ್‍ಗಳಲ್ಲಿ ಇರುವ ಯಾವುದೇ ಕಾಂಕ್ರಿಟ್ ಕಟ್ಟಡಗಳನ್ನು ಇಲ್ಲದಂತಾಗಿಸಬೇಕು, ಉಸಿರಾಡುವಂತಾಗಬೇಕು. ನಾವು ಸುಸಂಸ್ಕøತ ನಾಗರೀಕರಾಗಬೇಕು.

ಹೀಗೆ ಸಮಗ್ರ ದೃಷ್ಟಿಯೊಡನೆ ಕಾರ್ಯಕ್ರಮಗಳನ್ನು ಕಂಡುಕೊಂಡು ರೂಪಿಸುವುದು ನಮ್ಮ ಮುಂದಿದೆ. ಸ್ವರಾಜ್ ಇಂಡಿಯಾವು ಎಲ್ಲಾ ಕ್ಷೇತ್ರಗಳ ಪ್ರತಿಭಾವಂತರಿಂದ ವಿನೂತನ ಆಲೋಚನೆಗಳನ್ನು ಸ್ವಾಗತಿಸುತ್ತದೆ, ಅದನ್ನು ಒಳಗೊಂಡು ಮುಂದುವರಿಯುತ್ತದೆ.

                                                                       ಮೊದಲಿಗೆ, ಒಂದು ಕತೆ:
ಒಂದು ಊರಲ್ಲಿ ನಮ್ಮ ಹೆಚ್.ಎಸ್.ದೊರೆಸ್ವಾಮಿಯವರಂತೆ ಶತಾಯುಷಿಯಾಗಿದ್ದ ಹಳ್ಳಿಯವನೊಬ್ಬ ತನ್ನ ಜಮೀನಿನಲ್ಲಿ ಒಂದು ಗುಂಡಿ ತೋಡುತ್ತಿರುತ್ತಾನೆ, ಪಕ್ಕದಲ್ಲಿ ಒಂದು ತೆಂಗಿನ ಸಸಿ ಇರುತ್ತೆ. ಮಾರುವೇಷದಲ್ಲಿ ಊರೂರ ಮೇಲೆ ಪ್ರಯಾಣಿಸುತ್ತಿದ್ದ ರಾಜ ಕುದುರೆಯಿಂದ ಇಳಿದು ಕುತೂಹಲದಿಂದ ನಗುತ್ತ `ಏನಯ್ಯ ಮುದುಕ! (ನಮ್ಮ ದೊರೆಸ್ವಾಮಿಯವರನ್ನು ಮುದುಕ ಎನ್ನಲಾಗದು, ಇರಲಿ) ಈ ವಯಸ್ಸಲ್ಲೂ ಕಷ್ಟಪಡುತ್ತ ತೆಂಗಿನ ಗಿಡವನ್ನು ನೆಡುತ್ತಿದ್ದೀಯಲ್ಲಾ!! ಇದರ ಫಲವನ್ನು ನೀನು ಉಣ್ಣುತ್ತೀಯಾ?’ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಆ ಹಣ್ಣಣ್ಣು ಮುದುಕ- `ಸ್ವಾಮಿ, ನಾನು ಉಣ್ಣುತ್ತಿರುವುದು ನಾನು ಬೆಳೆದದ್ದನ್ನಲ್ಲ. ಈಗ ನಾನು ಗಿಡ ನೆಟ್ಟು ಬೆಳೆಸುತ್ತಿರುವುದೂ ನನಗಾಗಿ ಅಲ್ಲ… ನಾಳಿನವರಿಗಾಗಿ’ ಅನ್ನುತ್ತಾನೆ. ರಾಜ ಆ ವೃದ್ಧನ ಕಾಲಿಗೆ ನಮಸ್ಕರಿಸುತ್ತಾನೆ.
ನಾಳೆ ಅನ್ನುವುದು ಹಿಂದೆ ಕನಸಾಗಿತ್ತು. ಇಂದು ದುಃಸ್ವಪ್ನವಾಗಿದೆ. ನಾಳೆಗಾಗಿ, ನಾಳಿನ ಜನಾಂಗಕ್ಕಾಗಿ ಇಂದಿನ ಮನುಷ್ಯ ಏನನ್ನೂ ಉಳಿಸುವಂತೆ ಕಾಣುತ್ತಿಲ್ಲ. ತಾನೇ ತಿಂದು ಮುಕ್ಕುತ್ತಿದ್ದಾನೆ. ಅಗತ್ಯಕ್ಕನುಗುಣವಾಗಿ ದಿನಕ್ಕೊಂದು ಚಿನ್ನದ ಮೊಟ್ಟೆ ಇಡುತ್ತಿದ್ದ ಕೋಳಿಯನ್ನು ದುರಾಸೆಗೆ ಕೊಂದ ಕತೆಯಂತೆ ಇಂದು ಅರಣ್ಯ, ಗಣಿ, ಜಲ ಸಂಪತ್ತನ್ನು ಧ್ವಂಸಿಸುವುದು ನಡೆದಿದೆ. ಸಮುದಾಯದ ಸ್ವತ್ತಾದ ಸಾರ್ವಜನಿಕ ಸಂಸ್ಥೆ, ಸಾರ್ವಜನಿಕ ಸಂಪತ್ತನ್ನು ಖಾಸಗಿಗೆ ಮಾರಿಕೊಂಡು ಪ್ರಭುತ್ವಗಳು ಸರ್ಕಾರ ನಡೆಸುತ್ತಿವೆ. ಇದು ಮನೆ ಮಾರಿಕೊಂಡು ಜೀವನ ಸಾಗಿಸಿದಂತೆ. ದೇಶಪ್ರೇಮ ಜಪಿಸುತ್ತ ದೇಶ ಮಾರುವ ಕ್ರಿಯೆ ಇದು. ಇದೇ ನಿಜವಾದ ದೇಶದ್ರೋಹ, ಇದೇ ಜನದ್ರೋಹ. ಇರುವುದನ್ನು ಉಳಿಸಿಕೊಂಡು ಮುಂದಿನದನ್ನು ಕಟ್ಟಬೇಕಾದ ಎಚ್ಚರ, ಈ ಇಚ್ಛಾಶಕ್ತಿಯ ದೇಶಪ್ರೇಮ ಇಂದು ಬೇಕಾಗಿದೆ.

                                                                        ಬರ ಮುಕ್ತ ಕರ್ನಾಟಕದತ್ತ…
ಇಂದು ಬಿಜೆಪಿ ಪದೇ ಪದೇ ಹೇಳುತ್ತಿದೆ- `ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ’ ಅಂತ. ಪ್ರತಿಕ್ರಿಯಾತ್ಮಾಕವಾಗಿ ಕಾಂಗ್ರೆಸ್ ಕೂಡ `ಬಿಜೆಪಿ ಮುಕ್ತ ಮಾಡುತ್ತೇವೆ’ ಎಂದು ಆಗಾಗ ಹೇಳುತ್ತಿದೆ. ‘ಯಾರಾರು ಮುಕ್ತವಾಗಲಿ ತನಗೂ ಅಧಿಕಾರದಲ್ಲಿ ಪಾಲು ಸಿಕ್ಕರೆ ಸಾಕು’ ಎಂದು ಜೆಡಿಎಸ್ ಎಡಬಿಡಂಗಿಯಾಗಿದ್ದು ಹೆಚ್ಚು ಸಂಖ್ಯೆ ಪಡೆದವರೊಡನೆ ಕೂಡಿಕೆಯ ಅಧಿಕಾರ ಮಾಡುವ ಅವಕಾಶಕ್ಕಾಗಿ ಕಾದು ಕುಳಿತಿದೆ. ಇದೆಲ್ಲಾ ಏನು? ಯಾರು ಯಾರನ್ನು ಮುಕ್ತ ಮಾಡುತ್ತಾರೆ? ಇವರು ಮುಕ್ತ ಮಾಡುವುದಾದರೂ ಏನನ್ನು? ತಾನು ನಿಂತಿರುವ ಕೊಂಬೆಯನ್ನೆ ಕತ್ತರಿಸುವವನಂತೆ, ಜನತಂತ್ರ ವ್ಯವಸ್ಥೆಯನ್ನೆ ಇವರು ಕತ್ತರಿಸಲು ಹೊರಟಿದ್ದಾರೆ. ಇದು ಕುರುಡು ರಾಜಕಾರಣ.
ಈ ಕುರುಡು ರಾಜಕಾರಣವು ಹೂ ಹಣ್ಣು ಚಿಗುರಿಸುವ ವಸಂತಕಾಲವನ್ನು ಬಿರುಬೇಸಿಗೆ ಮಾಡಿಬಿಟ್ಟಿದೆ. ಸಮುದಾಯ ರಾಜಕಾರಣದ ಸ್ವರಾಜ್ ಇಂಡಿಯಾವು ಬರಮುಕ್ತ ಕರ್ನಾಟಕ ಮಾಡಲು ಹಾಗೂ ವಸಂತಕಾಲವನ್ನು ಮತ್ತೆ ಆಹ್ಲಾದಕರ ಮಾಡುವ ದಿಕ್ಕಲ್ಲಿ ತನ್ನ ಹೆಜ್ಜೆಗಳನ್ನಿಡುತ್ತದೆ.
ಇದಕ್ಕೆ `ಜಲ ಸಾಕ್ಷರತೆ’ ಮೊದಲ ಪಾಠ. ಈ ಬಗ್ಗೆ ಅನುಭವ ಉಳ್ಳವರ ಹಾಗೂ ವಿಜ್ಞಾನಿಗಳ ಸಮ್ಮಿಲನದ ಒಂದು ವಿಶಾಲ ವೇದಿಕೆಯನ್ನು ರೂಪಿಸಬೇಕಾಗಿದೆ. ಪಠ್ಯಗಳನ್ನು ರಚಿಸಬೇಕಾಗಿದೆ. ಜಲ ಸಾಕ್ಷರತೆ ಬಗ್ಗೆ ಸಮುದಾಯದಲ್ಲಿ ಅರಿವು, ಪ್ರಚಾರ, ಹೋರಾಟ, ರಚನಾತ್ಮಕ ಕೆಲಸ ಕೂಡಿ ನಡೆಯಬೇಕಾಗಿದೆ.

ನದಿ
ದಿನ ಕಳೆದಂತೆ ನದಿಗಳ ಮೂಲವೇ ಬತ್ತಿ ಹೋಗುತ್ತಿದೆ. ನಾವು ಪರಸ್ಪರ ನೀರಿಗಾಗಿ ಜಗಳ ಮಾಡುತ್ತಿದ್ದೇವೆ. ಮೊದಲು ನಾವು ಜಗಳ ನಿಲ್ಲಿಸಬೇಕಾಗಿದೆ. ದಿನದಿನವೂ ಕ್ಷೀಣವಾಗುತ್ತ ರೋದಿಸುತ್ತಿರುವ ನದಿಯ ಆರ್ತನಾದ ಆಲಿಸಬೇಕಾಗಿದೆ. ವಿದಾಯ ಹೇಳುತ್ತಿರುವ ನದಿಗಳಿಗೆ ಮರುಜೀವ ಕೊಡಬೇಕಾಗಿದೆ.

* ನದಿಗೆ ತನ್ನದೇ ಗಡಿ, ತನ್ನದೇ ಲಯ, ತನ್ನದೇ ಸಹಜ ವಲಯವಿರುತ್ತದೆ ಎಂಬುದನ್ನು ಮೊದಲು ನಾವು ಅರ್ಥ ಮಾಡಿಕೊಳ್ಳಬೇಕು. ಅಳಿವಿನ ಅಂಚಿನಲ್ಲಿರುವ ಪ್ರಾಣಿ, ಪಕ್ಷಿ ಹಾಗೂ ಅರಣ್ಯಗಳನ್ನು ರಕ್ಷಿತ ಎಂದು ಪರಿಗಣಿಸಿರುವಂತೆಯೇ ನದಿ ಪ್ರದೇಶವನ್ನೂ ಸಂರಕ್ಷಿತ ಮೀಸಲು ಪ್ರದೇಶ ಎಂದು ಘೋಷಿಸಬೇಕು. ಇತ್ತೀಚೆಗೆ, ಮನುಷ್ಯನಿಗಿರುವ ಎಲ್ಲಾ ಹಕ್ಕುಗಳು ನದಿಗಳಿಗೂ ಇರಬೇಕು ಎಂಬ ಉನ್ನತ ಚಿಂತನೆ ಬೆಳೆಯುತ್ತಿದ್ದು, https://en.wikipedia.org/wiki/Law_of_the_Rights_of_Mother_Earth   ಇದು ಮನುಷ್ಯನ ಉಳಿವಿಗೇ ಅತ್ಯಗತ್ಯವಾಗಿದೆ.
*ನಿತ್ಯ ಹರಿಯುತ್ತಿದ್ದ (ಪೆರಿನಿಯಲ್) ನದಿಗಳು ಆಗಾಗ ಹರಿಯುವ (ಸೀಜನಲ್) ನದಿಗಳಾಗಿ ಕ್ಷೀಣಿಸುತ್ತಿವೆ. ಆಗಾಗ ಹರಿಯುವ ಸೀಜನಲ್ ನದಿಗಳು ದಿನ ಕಳೆದಂತೆ ಬತ್ತಿ ಹೋಗುತ್ತಲಿವೆ. ಹೀಗೆ ಮುಂದುವರಿದರೆ ಜೀವ ಸಂಕುಲದ ಕತೆಯೂ ಕೊನೆಗೊಳ್ಳುವುದನ್ನು ತಡೆಯಲಾಗುವುದಿಲ್ಲ. ಇದನ್ನು ಸದಾ ನೆನಪಿಟ್ಟುಕೊಂಡು ಕಾರ್ಯತತ್ಪರವಾಗಬೇಕಾಗಿದೆ. ಬೆಂಗಳೂರು ಅರ್ಕಾವತಿ ನದಿ ಸಾವಿಗೆ ನೀಲಿಗಿರಿ ಮರಗಳಿಗೆ ಸರ್ಕಾರದ ಅವಿವೇಕದ ಉತ್ತೇಜನವೇ ಪ್ರಮುಖ ಕಾರಣ ಎಂಬುದನ್ನು ಯಾವತ್ತೂ ಮರೆಯಬಾರದು.
*ನದಿ ಒತ್ತುವರಿಗಳನ್ನು ತೆರವುಗೊಳಿಸಬೇಕು. ನದಿವಲಯ ಒತ್ತುವರಿಯನ್ನು ಕೊಲೆಯತ್ನ [Attempt to Murder) ) ಕೇಸ್‍ನಂತೆಯೇ ಪರಿಗಣಿಸಿ ಶಿಕ್ಷಾರ್ಹ ಅಪರಾಧವಾಗಿಸಬೇಕು.
* ನದಿವಲಯದಲ್ಲಿ ಕಾಂಕ್ರಿಟ್ ಕಾಡು ಪಸರಿಸದಂತೆ ತಡೆಯಬೇಕು. ನಗರಗಳ ಕೈಗಾರಿಕಾ ತ್ಯಾಜ್ಯ ಹಾಗೂ ಚರಂಡಿ ನೀರು ಸೇರದಂತೆಯೂ ತಡೆಯಬೇಕು. ಮರಳು ಗಣಿಗಾರಿಕೆ ತಡೆಯಬೇಕು. ನದಿಯ ಹಿನ್ನೀರು ಪ್ರದೇಶ Riverback habitat) ಹಾಗೂ ನದಿ ಇಕ್ಕೆಲಗಳ ಜೊತೆಗೆ ನದಿವಲಯದ ಜನವಸತಿ ಪ್ರದೇಶದ ಸ್ವಚ್ಛತೆಗೂ ಗಮನ ಕೊಡಬೇಕು.
*ಮಹಾರಾಷ್ಟ್ರದಲ್ಲಿ ಯಶವಂತರಾವ್ ಚೌಹಾಣ್ ಅಕಾಡೆಮಿ ಕೇಂದ್ರ ((https://www.yashada.org/) ) ರೂಪಿಸುತ್ತಿರುವ ಜಲ ಸಾಕ್ಷರತಾ ಮಾದರಿಯಲ್ಲಿ ನದಿ ಪಾತ್ರದ ಜನ ಸಮುದಾಯದ ತರಬೇತಿ ಮಾದರಿಯನ್ನು ಕರ್ನಾಟಕದಲ್ಲೂ ಜಾರಿಗೆ ತರಬೇಕು.

ಕೆರೆ
ಕರ್ನಾಟಕವನ್ನು ಕೆರೆಗಳ ತವರು ಅನ್ನಬಹುದು. ಅನೇಕಾನೇಕ ಊರುಗಳಲ್ಲಿ ನಮ್ಮ ಕೆರೆಗಳಿಗೆ `ಸೂಳೆ ಕೆರೆ’ ಎಂಬ ಹೆಸರಿದೆ. ಆ ಹೆಂಗರಳು ಹೆಣ್ಣುಮಕ್ಕಳು ತಮ್ಮ ಊರು ತಂಪಾಗಿರಲೆಂದು ಅರ್ಪಿಸಿದ ಈ ದೈವಿ ಕೆರೆಗಳನ್ನೂ ಉಳಿಸಿಕೊಳ್ಳಲಾಗದ ನಾವು, ನುಂಗಿ ನೊಣೆಯುವ ಭೂತಗಳಂತಾಗಿದ್ದೇವೆ. ನಮಗೆ ಕೆರೆಗಳನ್ನು ಹೊಸತಾಗಿ ಕಟ್ಟುವ ಸಾಮಥ್ರ್ಯ ಇಲ್ಲದಿದ್ದರೂ ಪರವಾಗಿಲ್ಲ, ಉಳಿದಿರುವ ಕೆರೆಗಳನ್ನಾದರೂ ಉಳಿಸಿಕೊಳ್ಳಬೇಕಾಗಿದೆ.
*ಕೆರೆಗಳ ಅನ್ನನಾಳದಂತಿರುವ, ಕೆರೆಗಳಿಗೆ ನೀರು ಹರಿಯುವ ಸೆಲೆ ಜಾಡಿನ ಒತ್ತುವರಿಯನ್ನು ಕೊಲೆ ಯತ್ನ [Attempt to Murder)ದಷ್ಟೇ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಜಾಡನ್ನು ಪುನರ್ ರೂಪಿಸಬೇಕಾಗಿದೆ. ಅಕ್ಕತಂಗಿಯರ ಕೆರೆಗಳೆಂದು ಕರೆಸಿಕೊಂಡು ಒಂದು ಕೆರೆ ನೀರು ತುಂಬಿದ ಮೇಲೆ ಇನ್ನೊಂದು ಕೆರೆಗೆ ನೀರು ಹರಿಯುವ ಅದರ ಹಾದಿಯನ್ನು ಕೊಳವೆಗಳ ಮುಖಾಂತರವಾದರೂ ಸಂಪರ್ಕ ಕಲ್ಪಿಸಬೇಕಾಗಿದೆ.
*ಉದ್ದೇಶಪೂರ್ವಕವಾಗಿ ಕೆರೆಗಳು ಬತ್ತಿ ಹೋಗುವಂತೆ ಮಾಡುತ್ತಿರುವ ದುಷ್ಟ ಸಂಚುಗಳನ್ನು ತಡೆಗಟ್ಟಬೇಕಾಗಿದೆ. ಸಮುದಾಯವನ್ನು ಎಚ್ಚರಗೊಳಿಸಬೇಕಾಗಿದೆ. ಪ್ರತಿಭಟಿಸಬೇಕಾಗಿದೆ. ಸಮುದಾಯದ ಸಹಭಾಗಿತ್ವದಲ್ಲಿ ಕೆರೆ ಜೀವ ಉಳಿಸಬೇಕಾಗಿದೆ.
* ಈಗ ನದಿಗಳಿಂದ ನೀರು ಹರಿಸಿ ಕೆರೆ ತುಂಬಿಸಲಾಗುತ್ತಿದೆ. ಇದು ಕೆರೆ ಎಂಬ ರೋಗಿಯನ್ನು ICUನಲ್ಲಿಟ್ಟು ಪ್ರಾಣ ಉಳಿಸಿದಂತೆ. ಇದು ತಾತ್ಕಾಲಿಕ ಆಗಬೇಕು. ನೈಸರ್ಗಿಕವಾಗಿ ಸಾವಯವವಾಗಿ ಕೆರೆಗಳು ಉಸಿರಾಡುವಂತಾಗಬೇಕು.

ಅಂತರ್ಜಲ
ಕರ್ನಾಟಕದ ಹೆಚ್ಚಿನ ಭೂ ಭಾಗವು ಅಗ್ನಿಶಿಲೆ ಮತ್ತು ರೂಪಾಂತರ ಶಿಲೆಗಳಾಗಿರುವುದರಿಂದ ಅಂತರ್ಜಲ ಸಂಗ್ರಹಣೆ ಮತ್ತು ಒಳಹರಿವಿಗೆ ಪೂರಕವಾಗಿಲ್ಲ ಎಂಬುದನ್ನು ಮೊದಲು ಮನಗಾಣಬೇಕಾಗಿದೆ. ಭೂಮಿಯ ಆಳ ಆಳಕ್ಕೆ ಬೋರ್‍ವೆಲ್ ಕೊರೆದು ನೀರು ಹೊರತೆಗೆದು ಗೆಬರಿಕೊಳ್ಳುತ್ತಿರುವುದರಿಂದಾಗಿ 30ಕ್ಕೂ ಹೆಚ್ಚು ತಾಲ್ಲೂಕುಗಳ ಅಂತರ್ಜಲ ಕುಡಿಯಲು ಯೋಗ್ಯವಾಗಿಲ್ಲ. ಈ ನೀರು ಕುಡಿದರೆ ಖಾಯಿಲೆಗಳನ್ನು ನಮ್ಮೊಳಕ್ಕೆ ನಾವೇ ಸ್ವಾಗತಿಸಿದಂತಾಗುತ್ತದೆ.
ಎಚ್ಚರವಿರಲಿ, ಅಂತರ್ಜಲದ ಅತಿಯಾದ ಬಳಕೆ ಕೆರೆಗಳ ಬತ್ತುವಿಕೆಗೆ ಕಾರಣವಾಗುತ್ತದೆ. ಅಂತರ್ಜಲಕ್ಕೂ ಹಾಗೂ ಭೂ ಮೇಲ್‍ಮೈ ಜಲಕ್ಕೂ ಸಾವಯವ ಒಳ ಸಂಬಂಧವಿದೆ. ಒಂದು ಇನ್ನೊಂದಕ್ಕೆ ಒತ್ತಾಸೆ. ಒಂದು ಹಾಳಾದರೆ ಮತ್ತೊಂದು ಹಾಳಾಗುತ್ತದೆ. ಕೊನೆಗೆ ನದಿಯೂ ಕೂಡ. ನೆನಪಿರಲಿ, ಜಲದ ದೇಹ ಹಾಗೂ ಅದರೊಳಗಿನ ಜೀವವನ್ನು ಇಡಿಯಾಗಿ ಗ್ರಹಿಸಬೇಕಾಗಿದೆ.

ಅರಣ್ಯ
ಜಲದ ಜೀವಾಳ ಅರಣ್ಯವೇ ಆಗಿದೆ. ಉದಾಹರಣೆಗೆ ದಟ್ಟ ಕಾಡಿನ ಪಶ್ಚಿಮಘಟ್ಟವು ದಖನ್ ಪ್ರಸ್ಥಭೂಮಿಯ ಜಲಗೋಪುರ ಅನ್ನಿಸಿಕೊಂಡಿರುವುದನ್ನು ಗಮನಿಸಬೇಕು. ನಮಗೆ ನೀರು ಬೇಕೆಂದರೆ ನೀರಿನ ಸಹವರ್ತಿ ಅರಣ್ಯವನ್ನು ಕಾಪಾಡಿಕೊಳ್ಳುವುದೂ ಅನಿವಾರ್ಯವಾಗುತ್ತದೆ. ಆದರೆ ಇಂದು ಅರಣ್ಯವೇ ಅರಣ್ಯರೋದನ ಮಾಡುತ್ತಿವೆ. ತುರ್ತಾಗಿ ಪ್ರಕೃತಿ ಪರಿಸರದ ಸಾವಯವ ಸಂಬಂಧ ಕಾಪಾಡಿಕೊಳ್ಳಬೇಕಾಗಿದೆ. ಪ್ರಕೃತಿ ಪರಿಸರ ಸಮತೋಲನಕ್ಕೆ ಭೂ ಪ್ರದೇಶದ ಶೇಕಡ 33 ರಷ್ಟು ಅರಣ್ಯವಿರಬೇಕಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಶೇಕಡ 19 ರಷ್ಟು ಅರಣ್ಯ ಪ್ರದೇಶವಿದೆ ಎಂದು 2015ರ ಸರ್ವೆ ಹೇಳುತ್ತದೆ. ಇದು ಕಾಗದದ ಮೇಲಿನ ಸರ್ಕಾರಿ ದಾಖಲೆ. ಇರಲಿ, ಇದರಲ್ಲಿ 1780 ಚದರ ಕಿಲೋಮೀಟರ್ ದಟ್ಟ ಕಾಡು, ಸುಮಾರು 20 ಸಾವಿರ ಚದರ ಕಿಲೋಮೀಟರ್ ಮಧ್ಯಮ ದಟ್ಟಗಾಡು, ಸುಮಾರು 14 ಸಾವಿರ ಕಿಲೊಮೀಟರ್ ವಿರಳ ಅರಣ್ಯ ಪ್ರದೇಶವೆಂದು ಗುರುತಿಸಲಾಗಿದೆ.
ನಮ್ಮ ಅರಣ್ಯ ಪರಿಸ್ಥಿತಿಯು ಇಷ್ಟೊಂದು ದಯನೀಯವಾಗಿದ್ದರೂ ಅರಣ್ಯಕ್ಕೆ ಮತ್ತೊಂದು ಆಪತ್ತು ಇಣುಕಿ ನೋಡುತ್ತಿದೆ. ಈಗ ಕೇಂದ್ರ ಸರ್ಕಾರವು 1988ರ ರಾಷ್ಟ್ರೀಯ ಅರಣ್ಯ ನೀತಿಯನ್ನು ತಿದ್ದುಪಡಿ ಮಾಡುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಇದರಲ್ಲಿ ಅರಣ್ಯಕ್ಕೆ ಖಾಸಗಿ ಪ್ರವೇಶದ ಪ್ರಸ್ತಾಪವೂ ಇದೆ. ತಲೆಯನ್ನು ಮಾತ್ರ ಒಳಗಿಡಲು ಅವಕಾಶ ಪಡೆದ ಒಂಟೆ ಇಡೀ ಟೆಂಟನ್ನೇ ಆವರಿಸಿಕೊಳ್ಳುವ ಕಥೆಯಂತೆ ಇದು. ಮುಂದಕ್ಕೆ ಒಂದು ಹೆಜ್ಜೆ ಇಡುವಂತೆ ಭ್ರಮೆ ಹುಟ್ಟಿಸಿ ಎರಡು ಹೆಜ್ಜೆ ಹಿಂದಕ್ಕೆ ಹೋಗುವ ವಂಚನೆ. ಖಾಸಗಿ ಬಂಡವಾಳಶಾಹಿಯು ಕಾಡಿಗೆ ಕೈ ಹಾಕುವುದೆಂದರೆ ತೋಳಕ್ಕೆ ಕುರಿ ಕಾಯುವ ಕೆಲಸ ವಹಿಸಿಕೊಟ್ಟಂತೆ. ಯಾವಾಗ ಈಶಾನ್ಯ (North East) ರಾಜ್ಯಗಳಲ್ಲಿ ಜನ ಸಮುದಾಯದ ಒಡೆತನದಲ್ಲಿದ್ದ ಸಂವೃದ್ಧಿ ಸಂಪನ್ನ ಅರಣ್ಯಕ್ಕೆ ಯಾವಾಗ ಕೈಗಾರಿಕಾ ದೃಷ್ಟಿಕೋನ ಎಂಟ್ರಿ ಕೊಡ್ತೋ ಆಗಿನಿಂದ ಅರಣ್ಯದ ನಾಶ ಆರಂಭವಾಯಿತು. ಹಾಗೇ ಯಾವಾಗ ವಾಣಿಜ್ಯ ಬೆಳೆಗೆ ಆ ಅರಣ್ಯ ತೆರೆದುಕೊಂಡಿತೊ ಆಗಿನಿಂದ ಅರಣ್ಯ ನಾಶ ಆರಂಭವಾಯಿತು. ಈಗಾಗಲೇ ಶೇಕಡ 20ರಷ್ಟು ಅರಣ್ಯ ನಾಶವಾಗಿದೆ. ಈ ಹಿನ್ನೆಲೆಯಲ್ಲಿ, ಅರಣ್ಯವನ್ನು ಕ್ಷಯಿಸುವಂತೆ ಮಾಡುವ ಕೈಗಾರಿಕಾ ಮತ್ತು ವಾಣಿಜ್ಯಬೆಳೆ ಚಟುವಟಿಕೆಯನ್ನು ಅರಣ್ಯಕ್ಕೆ ಸೋಕಿಸಬಾರದು.
ಈಗ ಗಣಿ ದರೋಡೆಕೋರರು ಅರಣ್ಯ ನಾಶ ಮಾಡಿದ್ದಕ್ಕೆ ಪರಿಹಾರ ರೂಪವಾಗಿ ವಿವಿಧ ಗಣಿ ಕಂಪನಿಗಳಿಂದ ಸರಕಾರ ಈಗಾಗಲೇ 50 ಸಾವಿರ ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಕಾಡನ್ನು ಬೆಳೆಸುವ ಹೆಸರಿನಲ್ಲಿ ಖಾಸಗಿ ಕಂಪನಿಗಳಿಗೆ ಅರಣ್ಯ ಬೆಳೆಸುವುದಕ್ಕೆ ಅವಕಾಶ ನೀಡಿ, ಅರಣ್ಯ ಗರ್ಭಕ್ಕೆ ಖಾಸಗಿ ಹಸ್ತಕ್ಷೇಪಕ್ಕೆ ಅವಕಾಶ ನೀಡುವ ಹುನ್ನಾರವೂ ಈಗಿನ ಹೊಸದಾಗಿ ಪ್ರಸ್ತಾಪಿಸಿರುವ ಅರಣ್ಯ ನೀತಿಯಲ್ಲಿ ಕಾಣಿಸುತ್ತಿದೆ. ಆ ಮೊತ್ತವನ್ನು ಗ್ರಾಮೀಣ ಸಹಕಾರಿ ವ್ಯವಸ್ಥೆಯಲ್ಲಿ ಅರಣ್ಯ ಬೆಳೆಸುವುದಕ್ಕೆ ನೀಡಬೇಕು. ಗ್ರಾಮವಾಸಿಗಳಿಗೆ ಅರಣ್ಯ ಬೆಳೆಸುವ ತರಬೇತಿ ನೀಡಬೇಕು. ಅರಣ್ಯ ಇಲಾಖೆಯ `ತಜ್ಞ’ರಿಗಿಂತ ಉತ್ತಮವಾದ ಗ್ರಾಮೀಣ ಅರಣ್ಯ ತಜ್ಞರನ್ನು ಅವರ ಪರಂಪರಾಗತ ಜ್ಞಾನದ ಆಧಾರದಲ್ಲಿ ಸೃಷ್ಟಿ ಮಾಡಬೇಕು. ಅರಣ್ಯ ಹಿನ್ನೆಲೆಯ ಮೂಲನಿವಾಸಿಗಳಿಗೆ ಮಾರ್ಗದರ್ಶಿ ಹುದ್ದೆ ನೀಡಬೇಕು. ಅಲ್ಲಿ ಉದ್ಯೋಗ ಸೃಷ್ಟಿ ಇದೆ; ಅಲ್ಲಿ ಮಣ್ಣಿನ ಮಕ್ಕಳಿಗೆ ಬೇಕಾದ ಗಿಡಮೂಲಿಕೆ, ಹುಲ್ಲುಮೇವು, ಅಂಟವಾಳ, ಜೇನುಸಂಗ್ರಹ, ನೆಲ್ಲಿ, ಅಳಲೆ ಮುಂತಾದ ಉಪಯುಕ್ತ ಉಪ ಉತ್ಪನ್ನಗಳ ಸಂಗ್ರಹಕ್ಕೆ ಅವಕಾಶಗಳಿವೆ; ಪಂಚಾಯಿತಿಗೆ ಹೊಸ ಆದಾಯಮೂಲದ ಸಾಧ್ಯತೆಯಿದೆ. ಮಣ್ಣಿನ ರಕ್ಷಣೆ, ನೀರಿನ ಸೆಲೆಯ ಪುನರುತ್ಥಾನ, ಪಶುಪಕ್ಷಿಗಳಿಗೆ ಆಸರೆ, ಕುಶಲ ಕಲೆಗಳಿಗೆ ಬೇಕಾದ ಕಚ್ಚಾ ಸಂಪನ್ಮೂಲಗಳ ಸೃಷ್ಟಿ, ಋತುಮಾನ ಸಮತೋಲನ ಇವೆಲ್ಲ ಸಾಧ್ಯವಿದೆ.
ರೈತರು ಮತ್ತು ಮೂಲನಿವಾಸಿಗಳು ಅರಣ್ಯ ಬೆಳೆಸುವ/ರಕ್ಷಿಸುವ ಕೆಲಸ ಮಾಡುತ್ತಲೇ ಜಾಗತಿಕ ತಾಪಮಾನ ತಗ್ಗಿಸುವ ಮಹತ್ಕಾರ್ಯವನ್ನು ಅದರ ಅರಿವಿಲ್ಲದೆ ಮಾಡುತ್ತಿರುತ್ತಾರೆ. ವಾತಾವರಣದಲ್ಲಿರುವ ಕಾರ್ಬನ್‍ನನ್ನು ಗಿಡಮರಗಳ ಕಾಂಡಗಳಲ್ಲಿ ಸೆರೆ ಹಿಡಿಯುವ ಪುಣ್ಯದ ಕೆಲಸ ಅದು. ಪ್ಯಾರಿಸ್ ಒಪ್ಪಂದದ ಸಂದರ್ಭದಲ್ಲಿ ತಾನು 300 ಕೋಟಿ ಟನ್ ಕಾರ್ಬನ್‍ನನ್ನು ಗಿಡಮರಗಳ ರೂಪದಲ್ಲಿ ಸೆರೆ ಹಿಡಿಯುತ್ತೇನೆಂದು ಭಾರತ ವಚನ ನೀಡಿದೆ. ಅದನ್ನು ನಿಭಾಯಿಸುವ ಹೊಣೆಯನ್ನು ರೈತ ಸಮುದಾಯಕ್ಕೆ ಒಪ್ಪಿಸಬೇಕೆ ವಿನಾ ಅರಣ್ಯಾಧಿಕಾರಿಗಳಿಗೆ, ಲಾಭಕೋರ ಖಾಸಗಿ ಕಂಪನಿಗಳಿಗೆ ವಹಿಸಬಾರದು.

• ರೈತನೊಬ್ಬ ತನ್ನ ಸ್ವಂತದ ಜಮೀನಿನಲ್ಲೇ ಗಿಡ ಬೆಳೆದರೂ ಅದು ವಿಶ್ವಕಲ್ಯಾಣದ ಕೆಲಸವೆಂದೇ ಪರಿಗಣಿಸಬೇಕು.
• ಶತಾಯಗತಾಯ, ಪ್ರಸ್ತಾಪಿತ 2018ರ ರಾಷ್ಟ್ರೀಯ ಅರಣ್ಯ ನೀತಿಯನ್ನು ಜಾರಿಗೆ ಬರದಂತೆ ತಡೆಗಟ್ಟಬೇಕಾಗಿದೆ.
• ಅರಣ್ಯದ ಹೆಸರಿನಲ್ಲಿ ಅನ್ಯದೇಶಿ ಮರಗಳ ಪ್ಲ್ಯಾಂಟೇಷನ್ ನೆಡುತೋಪು ಮಾಡುವುದನ್ನು ಅರಣ್ಯ ಇಲಾಖೆ ಮೊದಲು ನಿಲ್ಲಿಸಬೇಕಾಗಿದೆ. ಅರಣ್ಯ ನಿರ್ಮಾಣದಲ್ಲಿ ಸಹಜ ವೈಶಿಷ್ಟ್ಯಪೂರ್ಣ ದೇಶೀಯ ತಳಿಗಳಿಗೆ ಆದ್ಯತೆ ಕೊಡಬೇಕಾಗಿದೆ..
• ಅರಣ್ಯದ ಆಕ್ರಂದನ ಎಷ್ಟಾಗಿದೆ ಎಂದರೆ ಅರಣ್ಯ ನಾಶವಾಗುತ್ತ ಅಲ್ಲಿನ ಜೀವಿಗಳು ಕುಡಿಯಲೂ ನೀರಿಲ್ಲದೆ ತತ್ತರಿಸುತ್ತ ನಾಡಿಗೆ ನುಗ್ಗುತ್ತಿವೆ. ಅರಣ್ಯದಲ್ಲಿ ನೀರಿನ ಹೊಂಡಗಳನ್ನು ಯಥೇಚ್ಛವಾಗಿ ನಿರ್ಮಿಸಬೇಕು. ಸಣ್ಣಪುಟ್ಟ ಹಳ್ಳಕೊಳ್ಳದ ಭೂ ರಚನೆಯನ್ನು ಕಾಪಾಡಿಕೊಳ್ಳಬೇಕು.
• ಇದುವರೆಗೂ ಅರಣ್ಯವನ್ನು ಕಾಪಾಡಿಕೊಂಡು ಬಂದ ಭಾರತದ ಮೂಲನಿವಾಸಿಗಳು ಇಂದಿನ ಆಧುನಿಕ ಅರಣ್ಯದಲ್ಲೂ ಬದುಕಲಾಗದೆ, ನಾಡಿನಲ್ಲೂ ಬದುಕಲಾಗದೆ ಜರ್ಜರಿತರಾಗುತ್ತಿದ್ದಾರೆ. ಆದಿವಾಸಿಗಳನ್ನು ಇತ್ತೀಚೆಗೆ `ವನವಾಸಿ’ಗಳೆಂದು ಕರೆಯಲಾಗುತ್ತಿದೆ. ಇದು ನಮ್ಮ ಪೂರ್ವಿಕರಿಗೆ ಎಸಗಿದ ಘೋರ ಅನ್ಯಾಯ! ಮೂಲ ನಿವಾಸಿಗಳನ್ನು `ವನವಾಸಿ’ ಗಳೆಂದು ನೋಡುವುದು ವಿದೇಶಿ ದೃಷ್ಟಿಕೋನ. ಈ ವಿದೇಶಿ ಅನಾಗರಿಕ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕಾಗಿದೆ. ವಿರಳ ಅರಣ್ಯ ಪ್ರದೇಶವನ್ನು ದಟ್ಟವಾಗಿಸುವ ಕಾಯಕಕ್ಕೂ ಕೂಡ ಮೂಲನಿವಾಸಿಗಳನ್ನು ಮಾರ್ಗದರ್ಶಿಗಳನ್ನಾಗಿಸಬೇಕಾಗಿದೆ.
• ಸರ್ಕಾರಿ ಭೂಮಿಯನ್ನು ಅರಣ್ಯ ಹಿನ್ನೆಲೆಯ ಮೂಲನಿವಾಸಿ ಕುಟುಂಬಗಳಿಗೆ ಗುತ್ತಿಗೆಗೆ ಕೊಟ್ಟು ಜೊತೆಗೆ ಜೀವನಾಂಶವನ್ನು ನೀಡಿ ಮೂಲನಿವಾಸಿ ಹಾಗೂ ಸರ್ಕಾರದ ಸಹಭಾಗಿತ್ವದಲ್ಲಿ ಮರಗಿಡಗಳನ್ನು ಬೆಳೆಸುವ ಪಾಲಿಸುವ ಹೊಣೆಗಾರಿಕೆ ನೀಡಬೇಕು.
• ಯಾವ ಕಾರಣಕ್ಕೂ ದಟ್ಟ ಅರಣ್ಯ ಪ್ರದೇಶಕ್ಕೆ ಮನುಷ್ಯ ಹಸ್ತಕ್ಷೇಪ ಕೂಡದು, ಅದರಲ್ಲೂ ಕಾರ್ಪೋರೇಟ್ ಕುಟುಂಬಗಳ ನೆರಳೂ ಸೋಕಬಾರದು.

ಕೃಷಿ
(ಅ)
ಭಾರತದ ಕೃಷಿ ಬೇಯುತ್ತಿದೆ. ರೈತ ಭಾರತದ ಬೆನ್ನೆಲುಬು ಎಂಬ ಮಾತಿದೆ. ಆದರೆ ಈಗ ರೈತನಿಗೆ ಬೆನ್ನೆಲುಬೇ ಇಲ್ಲದಂತಾಗಿಬಿಟ್ಟಿದೆ. ಕೃಷಿ ಜೊತೆಗೆ ರೈತರೂ ದಿನನಿತ್ಯ ಬೇಯುತ್ತಿದ್ದಾರೆ.
ರೈತ ಸಮೂಹ ಇಂದು ಸಾಲಮನ್ನಾ ಎಂದು ಕೂಗುತ್ತಿದೆ. ತಾನು ಬೆಳೆದುದಕ್ಕೆ ವೈಜ್ಞಾನಿಕ ಬೆಲೆ ಬೇಕು ಎಂದು ಕೇಳುತ್ತಿದೆ. ಸ್ವಾಮಿನಾಥನ್ ಆಯೋಗದ ವರದಿ ಜಾರಿಗೂ ಒತ್ತಾಯಿಸುತ್ತಿದೆ. ಆದರೆ ಇದೆಲ್ಲವೂ ಅರಣ್ಯರೋದನವಾಗಿದೆ.
ಈ ಕೃಷಿ ಸಂಕಷ್ಟವನ್ನು ಅರ್ಥಮಾಡಿಕೊಳ್ಳಲು ಎಲ್ಲಿಂದ ಆರಂಭಿಸೋಣ? ಇಂಗ್ಲೆಂಡ್‍ನ ಕಾರ್ಮಿಕ ಪಕ್ಷ ((Labour party) ತನ್ನ ಪ್ರಣಾಳಿಕೆಯಲ್ಲಿ ಒಂದು ಪ್ರಸ್ತಾಪವನ್ನು ಮುಂದಿಟ್ಟಿದೆ- “We will work with other WTO members to end the dumping of State subsidized goods on our markets’ ಎಂದಿದೆ. ರಾಷ್ಟ್ರ ಸಬ್ಸಿಡಿಯ ರಫ್ತು ನಿಲ್ಲಿಸಬೇಕೆಂಬುದೇ ಆ ಪ್ರಸ್ತಾಪ. ಇದಕ್ಕೆ ಭಾರತವೂ ಜೊತೆಗೂಡಬೇಕಾಗಿದೆ. ಬಲಾಢ್ಯ ಮುಂದುವರೆದ ದೇಶಗಳು ಹಿಂದುಳಿದ ದೇಶಗಳನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಹೇಳಿದಂತೆ ಕೇಳಿಸುವುದಕ್ಕಾಗಿ ತಾನು ರಫ್ತು ಮಾಡುವ ಪದಾರ್ಥಗಳಿಗೆ ಯದ್ವಾತದ್ವಾ ಸಬ್ಸಿಡಿ ನೀಡಿ ರಫ್ತು ಮಾಡುತ್ತ ಸ್ಥಳೀಯ ಪದಾರ್ಥಗಳಿಗೆ ಮಾರ್ಕೆಟ್ ಇಲ್ಲದಂತಾಗುವ ಪರಿಸ್ಥಿತಿಯನ್ನು ಉಂಟುಮಾಡುತ್ತಿದೆ. ಇದರಿಂದ ಸ್ಥಳೀಯ ವೈವಿಧ್ಯ, ಬೆಳವಣಿಗೆ, ಉದ್ಯೋಗ ಕುಂಠಿತವಾಗುತ್ತಿವೆ ಹಾಗೂ ಸ್ಥಳೀಯ ಜ್ಞಾನಸಂಪತ್ತು ಮರೆವಿಗೆ ಸರಿಯುತ್ತಿದೆ. ಇಂದು ನಮ್ಮ ಬೀಜಕ್ಕೆ ನಾವೇ ಹುಡುಕಾಡಬೇಕಾಗಿದೆ. ಇದು ಘೋರ ದುರಂತ. ಇದು ನೆಲಬಾಂಬ್ ಇಟ್ಟು ಧ್ವಂಸ ಮಾಡಿದಂತೆ. ಯಾವುದೇ ರಾಷ್ಟ್ರದ ಸಬ್ಸಿಡಿ ರಫ್ತಿನ ವಿರುದ್ಧ ನ್ಯಾಯದ ದನಿ ಎತ್ತಬೇಕಾಗಿದೆ.
ಹೀಗೆಯೇ ಆಮದು-ರಫ್ತು ನೀತಿಯೂ ಕೂಡ. ಇದೂ ನಮ್ಮ ಕೃಷಿ ಸಂಕಷ್ಟಕ್ಕೆ ನೇರ ಕಾರಣವಾಗಿದೆ. ಉದಾಹರಣೆಗೆ ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಚೈನಾ ಪ್ರವಾಸಕ್ಕೆ ಮುನ್ನ ಚೈನಾವನ್ನು ಸಂಪ್ರೀತಗೊಳಿಸಲು ರೇಷ್ಮೆ ಆಮದು ಸುಂಕವನ್ನು ಕಡಿಮೆ ಮಾಡಿಬಿಟ್ಟರು. ಅದರಿಂದಾಗಿ ಭಾರತದ ರೇಷ್ಮೆ ವಹಿವಾಟು ಬೆಲೆ ಇಲ್ಲದಂತಾಗಿ ಕುಸಿಯಿತು. ಎಷ್ಟೋ ಜನ ರೈತರು ತಮ್ಮ ರೇಷ್ಮೆ ಬೆಳೆಯನ್ನು ಟ್ರಾಕ್ಟರ್ ಬಳಸಿ ನಾಶ ಮಾಡಿಬಿಟ್ಟರು. ಆತ್ಮಹತ್ಯೆಗಳೂ ಆದವು. ಹಿಂದಿನ ಕಾಲದಲ್ಲಿ ನಮ್ಮ ಚಕ್ರವರ್ತಿಗಳು ಚೈನಾದ ಚಕ್ರವರ್ತಿಗೆ ನೆನಪಿನ ಕಾಣಿಕೆ ನೀಡಲು ರೇಷ್ಮೆ ವಸ್ತ್ರಗಳನ್ನು ಕೊಂಡೊಯ್ಯುತ್ತಿದ್ದರು. ಇಂದಿನ ಪ್ರಧಾನಿ ರೇಷ್ಮೆ ವಸ್ತ್ರದ ಬದಲು ರೇಷ್ಮೆ ಬೆಳೆದು ಬದುಕುತ್ತಿದ್ದ ರೈತರ ತಲೆ ಕತ್ತರಿಸಿ ಬೇರೆ ದೇಶದ ಮರ್ಜಿಗೆ ಕಾಣಿಕೆ ಕೊಟ್ಟಂತಾಗಿಲ್ಲವೆ ಇದು? ಜಾಗತಿಕ ಆಮದು-ರಫ್ತು ನೀತಿಯು ಇಲ್ಲಿನ ಸ್ಥಳೀಯ ಬದುಕಿನಲ್ಲಿ ಏರುಪೇರು ಸಾವು, ನೋವು, ಹಸಿವು ನಿರುದ್ಯೋಗಕ್ಕೆ ನೇರ ಕಾರಣವಾಗುವುದರಿಂದ ಇದನ್ನು ಹೀಗಲ್ಲದೆ ಬೇರೆ ಯಾವ ರೀತಿ ನೋಡಲು ಸಾಧ್ಯ?
ವಿಶ್ವ ವಾಣಿಜ್ಯ ಒಪ್ಪಂದದ ಪ್ರಕಾರ, ಮುಂದುವರಿದ ದೇಶಗಳ ಆಮದು ಸುಂಕ ಕಡಿಮೆ ಇರಬೇಕು. ಆದರೆ ಬಲಾಢ್ಯ ದೇಶಗಳು, ಯದ್ವಾತದ್ವಾ ಸುಂಕ ವಿಧಿಸುತ್ತವೆ. ಉದಾಹರಣೆಗೆ ಅಮೇರಿಕಾ ದೇಶವು ಸಕ್ಕರೆಯನ್ನು ಆಮದು ಮಾಡಿಕೊಳ್ಳಬೇಕಾದರೆ ತನ್ನ ದೇಶದೊಳಗಿನ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಉದ್ಯಮಕ್ಕೆ ಧಕ್ಕೆಯಾಗದಂತೆ ಶೇಕಡ 224 ಆಮದು ಸುಂಕ ವಿಧಿಸುತ್ತದೆ. ಆದರೆ ಭಾರತವು ಸಕ್ಕರೆಯನ್ನು ಅಮೇರಿಕಾದಿಂದ ತರಿಸಿಕೊಳ್ಳಬೇಕಾಗಿ ಬಂದಾಗ ಭಾರತದ ಆಮದು ಸುಂಕ ಅಮೇರಿಕಾದ ಅರ್ಧದಷ್ಟೂ ಇರುವುದಿಲ್ಲ. ಹೀಗಿರುವಾಗ ಭಾರತದ ಕಬ್ಬು ಬೆಳೆಗಾರರಿಗೆ ಬೆಲೆ ಸಿಗುವುದು ಹೇಗೆ ತಾನೇ ಸಾಧ್ಯ? ಬಲಾಢ್ಯ ರಾಷ್ಟ್ರಗಳು, ವಿಶ್ವ ವಾಣಿಜ್ಯನಿಯಮಗಳನ್ನು ತುಳಿದುಕೊಂಡು ಓಡಾಡುತ್ತಿವೆ. ಭಾರತದಂಥಹ ರಾಷ್ಟ್ರಗಳು ವಿಶ್ವ ವಾಣಿಜ್ಯನಿಯಮಗಳನ್ನು ತಲೆ ಮೇಲೆ ಹೊತ್ತುಕೊಂಡು ಅನುಸರಿಸುತ್ತಿವೆ. ಬಲಾಢ್ಯ ದೇಶಗಳಿಗೆ ಅಡಿಯಾಳಾಗುವ ಸ್ವಯಂ ಇಚ್ಛಿತ ಗುಲಾಮಗಿರಿಯಿಂದ ಭಾರತ ಹೊರಬರುವವರೆಗೂ ನಮ್ಮ ಕೃಷಿ ಚೇತರಿಸಿಕೊಳ್ಳುವುದು ಕಷ್ಟವೆನಿಸುತ್ತದೆ.
ಜೊತೆಗೆ ಈ ಬಲಾಢ್ಯ ದೇಶಗಳು, ಶೂನ್ಯ ವಾಣಿಜ್ಯ ಸುಂಕದಡಿ “ಕನಿಷ್ಠ ಅಭಿವೃದ್ಧಿ ಹೊಂದಿದ ದೇಶಗಳ (Least developed Countries -LDC)” ನಡುವೆ ನಮ್ಮಂತಹ ದೇಶಗಳ ದ್ವಿಪಕ್ಷೀಯ ವಾಣಿಜ್ಯ ಒಪ್ಪಂದವೇನಾದರೂ ಇದ್ದಲ್ಲಿ ಈ ಕನಿಷ್ಠ ಅಭಿವೃದ್ಧಿ ಹೊಂದಿದ ದೇಶಗಳ (Least developed Countries -LDC) ಮೂಲಕ ಯಾವುದೇ ಸುಂಕ ಕಟ್ಟದೆ ಸಬ್ಸಿಡಿ ಪೋಷಿತ ತಮ್ಮ ಕೃಷಿ ಉತ್ಪನ್ನಗಳನ್ನು ನಮ್ಮಂತಹ ದೇಶಕ್ಕೆ ಡಂಪಿಂಗ್ (Dumping) ಅಂದರೆ ಎಸೆದು ಹೋಗುತ್ತವೆ. ಇದನ್ನು ಕಳ್ಳತನ ಅನ್ನಬೇಕೇ? ಅಥವಾ ದರೋಡೆ ಅನ್ನಬೇಕೇ? ಈ ಡಂಪಿಂಗ್‍ನಿಂದಾಗಿ ಸ್ಥಳೀಯ ಉತ್ಪನ್ನಗಳು ದುಬಾರಿಯಾಗಿ ವಿದೇಶಿ ಉತ್ಪನ್ನಗಳು ಅಗ್ಗವಾಗುತ್ತದೆ. ಇದರಿಂದ ದೇಸಿಯ ಉತ್ಪನ್ನಗಳು ಮಾರಾಟವಾಗದೆ ದೇಶೀಯ ಉತ್ಪಾದನಾ ಕ್ಷೇತ್ರ ಕ್ಷೀಣವಾಗತೊಡಗುತ್ತದೆ. ಇಲ್ಲಿನ ಉದ್ಯೋಗಗಳ ಮೇಲೆ ಬಾಂಬ್ ಇಟ್ಟಂತಾಗಿ ಇಲ್ಲಿನ ಉದ್ಯೋಗಗಳು ಧ್ವಂಸಗೊಳ್ಳುತ್ತವೆ. ಅವಲಂಬಿ ಜೀವನ ನಮ್ಮದಾಗಿಬಿಡುತ್ತದೆ. ಆಹಾರಕ್ಕೂ ನಾವು ವಿದೇಶಿ ಆಹಾರ ಪದಾರ್ಥಗಳಿಗೆ ಅವಲಂಬಿತರಾಗಬೇಕಾಗುತ್ತದೆ. “Future wars are fought not with guns but with grains’– ಎಂಬ ಡಾ.ಎಂ.ಎಸ್. ಸ್ವಾಮಿನಾಥನ್ ಅವರ ಮಾತುಗಳು ನಿಜವೆನ್ನಿಸುತ್ತಿದೆ. ಯುದ್ಧ ಆರಂಭವಾಗಿದೆ.

(ಆ)
ತಂಪು ಭೂಮಿ: ಹೀಗೆ ಅಸಹಾಯಕವಾದ ಭಾರತದ ಕೃಷಿಯು ಜೀವ ಉಳಿಸಿಕೊಳ್ಳಲು ಇರಬಹುದಾದ ಅಷ್ಟು ಇಷ್ಟು ದಾರಿಗಳನ್ನೂ ಹುಡುಕಬೇಕಾಗಿದೆ. ಈ ದಿಕ್ಕಲ್ಲಿ ಒಂದು ಪ್ರಮುಖ ಸಾಧ್ಯತೆ- ನೈಸರ್ಗಿಕ ಕೃಷಿ. ಈ ಬಗ್ಗೆ ಹೆಚ್.ಮಂಜುನಾಥ್ ಅವರು ಬರೆದಿರುವ `ಮಣ್ಣಿನ ಒಡಲು ಜೀವ ವೈವಿಧ್ಯತೆಯ ಕಡಲು’ ಪುಸ್ತಿಕೆಯನ್ನು ಸ್ವರಾಜ್ ಇಂಡಿಯಾವು ಸಹ-ಪಠ್ಯವಾಗಿ ಕೃತಜ್ಞತೆಯಿಂದ ಸ್ವೀಕರಿಸುತ್ತದೆ. ಈ ಪುಸ್ತಿಕೆಯು ಕೂಡ ನಮ್ಮ ಪ್ರಣಾಳಿಕೆಯ ಭಾಗವಾಗಿದೆ.
ಜೊತೆಗೆ, ಪೂರಕವಾದ ಕಾರ್ಯಕ್ರಮಗಳಿವು:
*ಬಿದ್ದ ಮಳೆನೀರನ್ನು ಹಿಡಿದಿಟ್ಟುಕೊಳ್ಳುವ ವ್ಯವಸ್ಥೆ ಪ್ರತಿಮನೆಯಲ್ಲೂ, ಪ್ರತಿ ಗ್ರಾಮದಲ್ಲೂ, ಪ್ರತಿ ಹೊಲ ಹಳ್ಳಗಳಲ್ಲೂ, ಪ್ರತಿ ಗೋಮಾಳದಲ್ಲೂ ಕ್ರಮಬದ್ಧವಾಗಿ ಜಾರಿಗೆ ಬರಬೇಕು.
* ಮಳೆನೀರನ್ನೇ ವರ್ಷವಿಡೀ ಬಳಸಲು ಬೇಕಾದ ಮಾದರಿಯು ಎಲ್ಲಾ ಪಂಚಾಯ್ತಿ ಕಚೇರಿಯಲ್ಲೂ ಇರಬೇಕು. ಪ್ರತಿ ಜಿಲ್ಲೆಯ, ತಾಲ್ಲೂಕಿನ ಸರಕಾರಿ ಅಧಿಕಾರಿಗಳ ನಿವಾಸ, ಕಚೇರಿಗಳಲ್ಲಿ ಮಳೆನೀರನ್ನೇ ಬಳಸುವಂತಾಗಬೇಕು.
*ಬಳಸಿದ ನೀರನ್ನು ಪ್ರತಿ ಊರಲ್ಲೂ ಸಂಸ್ಕರಿಸಿ ಮತ್ತೆ ಬಳಸುವ ವ್ಯವಸ್ಥೆ ಇರಬೇಕು. ನೀರಿನ ಅಧಿಕ ಲವಣಾಂಶವನ್ನು ಬೇರ್ಪಡಿಸುವ ಘಟಕಗಳನ್ನು ಊರವರೇ ನಿರ್ವಹಿಸುವಂತಾಗಬೇಕು.
*ಅದಕ್ಕೆ ಬೇಕಾದ ವಿದ್ಯುತ್ ಶಕ್ತಿಯು ಆದಷ್ಟೂ ಜೈವಿಕ ಇಂಧನ(Biomass based energy) ಮೂಲಕವೇ ಸಿಗುವಂತಿರಬೇಕು.
*ಕೊಳವೆಬಾವಿಗಳು ಸಾಮೂಹಿಕ ಆಸ್ತಿಯೆಂದು ಪರಿಗಣಿಸಬೇಕು. ಕಡ್ಡಾಯವಾಗಿ ಜಲ ಮರು ಪೂರಣ ವ್ಯವಸ್ಥೆ ಮಾಡಬೇಕು.
*ತೋಟಗಾರಿಕೆ ಬೆಳೆಗಳಿಗೆ ಮತ್ತು ಕಿರುಧಾನ್ಯಗಳಿಗೆ ಆದ್ಯತೆ ಸಿಗಬೇಕು. ಬೆಳೆ ಬದಲಾವಣೆ, ಹನಿ ನೀರಾವರಿ ವ್ಯವಸ್ಥೆ ಬರಬೇಕು. ಪ್ರತಿ ಕೆರೆ/ಹೊಂಡದಲ್ಲೂ ಮೀನುಗಾರಿಕೆಗೆ ಉತ್ತೇಜನ ಸಿಗಬೇಕು.

ಹಸಿರು ಭೂಮಿ:

ಇಷ್ಟೇ ಅಲ್ಲ, ಭೂಮಿಯನ್ನು ಹಸಿರು ಭೂಮಿಯಾಗಿಸಬೇಕಾಗಿದೆ. ಊರು, ನಗರ ಬಡಾವಣೆಗಳಲ್ಲಿ ಮರಗಿಡಗಳನ್ನು ನೆಟ್ಟು ಬೆಳೆಸುವ ಪ್ರವೃತ್ತಿ ಹೆಚ್ಚಿಸಬೇಕಾಗಿದೆ. ಇದು ಶಾಲಾ ಕಾಲೇಜಿನ ಕಾರ್ಯಕ್ರಮವಾಗಬೇಕು. ನಗರಸಭೆ ಮತ್ತು ಗ್ರಾಮ ಪಂಚಾಯಿತಿಗಳಿಗೆ ಇದು ಆದ್ಯತೆಯ ಕೆಲಸವಾಗಬೇಕು. ಯುವಜನತೆ, ಮಹಿಳೆಯರು ಹಾಗೂ ಸಂಘ ಸಂಸ್ಥೆಗಳು ಜೊತೆಗೂಡಿ ಸಮುದಾಯದ ಆಂದೋಲನವಾಗಬೇಕು.
ನಾಡನ್ನು ಉಳಿಸುವ, ನಾಡು ಉಸಿರಾಡುವಂತೆ ಮಾಡುವ ಜಲ ಸಂರಕ್ಷಣೆ, ಅಂತರ್ಜಲ ಮರುಪೂರಣ, ನದಿ ಕೆರೆ ಕಟ್ಟೆ ಕಲ್ಯಾಣಿಗಳಿಗೆ ಪುನಶ್ಚೇತನ ಹಾಗೂ ಮರಗಿಡಗಳನ್ನು ನೆಟ್ಟು ಸಾಕಿ ಸಲಹುವ ಮಹಾ-ಆತ್ಮರು ನಮ್ಮ ನಡುವೆಯೂ ಇದ್ದಾರೆ. ಡಾ. ರಾಜೇಂದ್ರಸಿಂಗ್ ನೇತೃತ್ವದ “ತರುಣ್ ಭಾರತ್ ಸಂಘ’’ದ (http://tarunbharatsangh.in/) ಮಾದರಿ, ಮಹಾರಾಷ್ಟ್ರದ ವಿಲಾಸ್‍ರಾವ್ ಸೋಲಂಕಿ ಸ್ಥಾಪಿತ `ಪಾನಿ ಪಂಚಾಯ್ತಿ’ (http://www.panipanchayat.org/) ಅಮೀರ್‍ಖಾನ್‍ರವರ `ಪಾನಿ ಫೌಂಡೇಷನ್’ (https://www.paanifoundation.in/) ಕಾರ್ಯಕ್ರಮ, ರಾಜಸ್ತಾನದ ಲಕ್ಷ್ಮಣ ಸಿಂಗ್ ಅವರ `ಬರ-ನೆರೆ’ ಸಮತೋಲಿಸುವ ಪ್ರಯೋಗ, ಹಾಗೇ ನಮ್ಮಲ್ಲಿನ ಹಾಸನ ಜಿಲ್ಲೆಯ `ಹಸಿರುಭೂಮಿ ಪ್ರತಿಷ್ಠಾನ’ದ ಕೆರೆ ಕಲ್ಯಾಣಿ ಉಳಿಸುವುದರ ಜೊತೆಗೆ ಸಸಿ ನೆಟ್ಟು ಭೂಮಿಯನ್ನು ಹಸಿರು ಮಾಡುತ್ತಿರುವ ಕ್ರಿಯಾಶೀಲತೆ. ಈ ಕಾರ್ಯಕ್ಕೆ ವಿದ್ಯಾರ್ಥಿ, ಯುವಜನತೆ, ಮಹಿಳೆಯರು, ನಾಗರೀಕರು, ಸಂಘ ಸಂಸ್ಥೆಗಳು, ಅಧಿಕಾರಿಗಳು, ಜನಪ್ರತಿನಿಧಿಗಳೂ ಜೊತೆಗೂಡಿರುವ ವಿಶೇಷತೆ. ಇದರೊಡನೆ ಒಂಟಿ ಸಾಧಕರೂ ಇದ್ದಾರೆ. ತನ್ನ ಮಡಿಲಲ್ಲಿ ಮರಗಿಡಗಳ ಬೀಜಗಳನ್ನಿಟ್ಟುಕೊಂಡು ತಳ ನೋಡಿ ನೆಡುವ ತುಳಸಿ ತಾಯಿ, ಸಾಲುಮರದ ತಿಮ್ಮಕ್ಕ, ಕುರಿ ಸಾಕಿ ಕುರಿ ಮಾರಿ ಬಂದ ಹಣದಲ್ಲಿ ಕೆರೆ ಕಟ್ಟೆ ಕಟ್ಟಿದ ಕಾಮೇಗೌಡರು, ಕತ್ತಲ ಕುಗ್ರಾಮಗಳಿಗೆ ಸೌರ ವಿದ್ಯುತ್ ಬೆಳಕನಿತ್ತ ಹರಿಶ್ ಹಂದೆ ಅವರು, ಹಾಗೇ ಗುಲ್ಬರ್ಗಾದ ಅಜಾದ್‍ನಗರದಲ್ಲಿ ಕೆರೆ ಬಗೆದು ನೀರು ಉಕ್ಕಿಸಿದ ಅಂಗನವಾಡಿ ಕಾರ್ಯಕರ್ತೆ ಚಂದಮ್ಮಗೋಳ ಅವರು ಹೀಗೆ ಹೀಗೆ… ಇಂಥ ಹಲವು ಮಾದರಿಗಳು ನಮ್ಮ ಮುಂದಿವೆ.
(ಇ)
ಮಾತಾಡಬೇಕಾಗಿದೆ: ಈಗ ರೈತರು, ಕೃಷಿ ಕಾರ್ಮಿಕರು ದುಡಿಯುವ ವರ್ಗವು ಮಾತಾಡಬೇಕಾಗಿದೆ. ದೇಶದ ಆಗುಹೋಗುಗಳ ಹಿನ್ನೆಲೆಯಲ್ಲಿ ಮಾತಾಡಬೇಕಾಗಿದೆ. ಅಂದರೆ ಸ್ವಕೇಂದ್ರೀತ ಟ್ರೇಡ್ ಯೂನಿಯನ್ ನುಡಿಗಟ್ಟನ್ನು ಬಿಟ್ಟು ಮಾತಾಡಬೇಕಾಗಿದೆ.
*ರೈತರ ಸಾಲ, ಜನಸಾಮಾನ್ಯರ ಸಾಲ ಮರುಪಾವತಿಯಾಗದಿದ್ದರೆ ಆ ಸುಸ್ತಿದಾರರ ಹೆಸರು ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ. ಆಸ್ತಿ ಹರಾಜಾಗುತ್ತದೆ. ಅದೇ ಕಾರ್ಪೋರೇಟ್ ಕುಟುಂಬಗಳ ಸಹಸ್ರಕೋಟಿ ಸಾಲ ಮರುಪಾವತಿಯಾಗದಿದ್ದರೆ ಗೌಪ್ಯತೆಯನ್ನು ಕಾಪಾಡಲಾಗುತ್ತದೆ. ಇದು RBIಕಾಯ್ದೆ 45E ಪ್ರಕಾರವಂತೆ! ಇದು 1934ರ ಬ್ರಿಟಿಷ್ ಕಾನೂನು. ಸ್ವಾತಂತ್ರ್ಯಪೂರ್ವದ ಆ ಕಾಲದ ಕಂಪನಿ ಕಾನೂನು. ಬ್ರಿಟಿಷ್ ಬಿಳಿ ದೊರೆಗಳು ತಮ್ಮ ಬ್ಯಾಂಕ್ ದಗಾವನ್ನು ಜನಸಾಮಾನ್ಯರಿಂದ ಮುಚ್ಚಿಡಲು ಮಾಡಿಕೊಂಡಿದ್ದ ಕಾನೂನು. ಗುಲಾಮಿ ಕಾನೂನು. ಭಾರತ ಸ್ವಾತಂತ್ರ್ಯ ಪಡೆದ ಮೇಲೂ ಈ ಗುಲಾಮಿ ಕಾನೂನು ಅಸ್ತಿತ್ವದಲ್ಲಿದ್ದರೆ ಕಾರ್ಪೋರೇಟ್ ಬಂಡವಾಳಿಗರೇ ದೊರೆಗಳು, ನಮ್ಮ ಪ್ರಧಾನಿ ಸೇರಿದಂತೆ ಜನಪ್ರತಿನಿಧಿಗಳು ಗುಲಾಮರು ಅಂತಾಗುವುದಿಲ್ಲವೇ? ಇದನ್ನು ಸಹಿಸಲಾಗದು.
ಈಗ ರೈತರೊಡನೆ ಜನ ಸಮುದಾಯವು ದನಿಗೂಡಿಸಿ ಕೇಳಬೇಕಾಗಿದೆ- `ಕಾರ್ಪೋರೇಟ್ ಕುಳಗಳ ಸುಸ್ತಿ ಸಾಲವನ್ನೂ ಸಾರ್ವಜನಿಕವಾಗಿ ಪತ್ರಿಕೆಗಳಲ್ಲಿ ಪ್ರಕಟಿಸಿ’
* ರೈತರ ಸಾಲ ಮನ್ನಾ ಮಾಡಿದರೆ ಅದು ಸಾಲ ಶಿಸ್ತನ್ನು ಕುಸಿಯುವಂತೆ ಮಾಡುತ್ತದೆ ಎಂದು ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಗೌರ್ನರ್ ಹೇಳುತ್ತಾರೆ. ಎನ್‍ಡಿಎ ಕೇಂದ್ರ ಸರ್ಕಾರವು ರೈತರ ಸಾಲ ಮನ್ನಾ ಬಿಲ್‍ಕುಲ್ ಸಾಧ್ಯವಿಲ್ಲ ಎಂದು ಹೇಳುತ್ತಿದೆ. ಆದರೆ ಕಾರ್ಪೋರೇಟ್ ಕಂಪನಿಗಳಿಗೆ ಸಾಲಮನ್ನಾ ತೆರೆಮರೆಯಲ್ಲಿ ನಡೆಯುತ್ತಲೇ ಇದೆ. ಉದಾಹರಣೆಗೆ 2015ರ `ಕ್ರೆಡಿಟ್ ಸ್ಸುಇಸ್’ ಸಂಸ್ಥೆಯ ವರದಿ ಪ್ರಕಾರ- ಅಂಬಾನಿ ಕುಟುಂಬದ ರಿಲಿಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ RIL ಕಂಪನಿಯಿಂದ ವಸೂಲಾಗದೆ ಬಾಕಿ ಉಳಿಸಿಕೊಂಡಿರುವ ಸಾಲ 1 ಲಕ್ಷ 25 ಸಾವಿರ ಕೋಟಿ ಚಿಲ್ಲರೆ. ಅಂಬಾನಿ ಸಹೋದರ ಅದಾನಿ ಅವರದು, ಒಂದು ಲಕ್ಷ ಕೋಟಿ ಎನ್‍ಪಿಎ (Non performing Asset) ಆಗಲು ಕೊಂಚವೇ ಕಮ್ಮಿ! ಅನಿಲ್ ಅಗರ್‍ವಾಲರ ವೇದಾಂತ ಗ್ರೂಪ್‍ನಿಂದ ವಸೂಲಾಗದೆ ಬಾಕಿ ಉಳಿಸಿಕೊಂಡಿರುವ ಸಾಲ 1 ಲಕ್ಷ 3 ಸಾವಿರ ಕೋಟಿ. ಹೀಗೇನೆ ಎಸ್.ಆರ್.ಗ್ರೂಪ್ 1 ಲಕ್ಷ 1 ಸಾವಿರ ಕೋಟಿ… ಹೀಗೆ ಮುಂದುವರಿಯುತ್ತದೆ. ದೊಡ್ಡ ಬಂಡವಾಳಿಗರು ಬಾಕಿ ಉಳಿಸಿಕೊಂಡಿರುವ ಸಾಲವನ್ನು ಗೌಪ್ಯವಾಗಿ ಕೈಬಿಟ್ಟು ಚುಕ್ತಾ ಮಾಡಲಾಗುತ್ತಿದೆ. 2015-16ರ ಆರ್ಥಿಕ ವರ್ಷಗಳಲ್ಲಿ ಕಾರ್ಪೋರೇಟ್ ಕುಳಗಳ ಕೈ ಬಿಡಲಾದ ಸಾಲದ ಬಾಬ್ತು 6 ಲಕ್ಷ ಚಿಲ್ಲರೆ ಕೋಟಿ! ಇದು `ಕೈ ಬಿಡಲಾದ ರಾಜಸ್ವ (Revenue forgone) ಅಂತೆ. ನೋಡಿ, ಅಸಹಾಯಕ ರೈತರ ಸಾಲ ಮನ್ನಾ ಮಾಡಿದರೆ ಬ್ಯಾಂಕ್ ಮುಳುಗುತ್ತದಂತೆ. ಆದರೆ ಅದೇ ಬಂಡವಾಳಿಗರ ಸಾಲಮನ್ನಾ ಮಾಡಿದರೆ ಬ್ಯಾಂಕ್ ಮುಳುಗುವುದಿಲ್ಲವೆ? ಏನಿದು ಈ ಗೋಲ್‍ಮಾಲ್? ಇದೊಂದು ರೀತಿ ಅಧಿಕಾರಿ, ರಾಜಕಾರಣಿ, ಕಾರ್ಪೋರೇಟ್ ಕುಳಗಳ ಸಹಭಾಗಿತ್ವದ ನುಂಗಾಟದಂತಿದೆ.
ಕೇಳಬೇಕಾಗಿದೆ: ಈ ಹಿನ್ನೆಲೆಯಲ್ಲಿ ರೈತರು ಕೃಷಿ ಕಾರ್ಮಿಕರು ಕೇಳಬೇಕಾಗಿದೆ- `ಕೇವಲ ನೂರು ಸಂಖ್ಯೆಯ ಕಾರ್ಪೋರೇಟ್ ಕುಟುಂಬಗಳಿಗೆ `ಕೈಬಿಡುವ ರಾಜಸ್ವ’ದ ಎರಡರಷ್ಟನ್ನಾದರೂ ತಮ್ಮ ಜೀವನ ನಿರ್ವಹಣೆಗಾಗಿ ಹಾಗೂ ದೇಶದ ನೂರು ಕೋಟಿ ಜನರಿಗೆ ಅನ್ನ ನೀಡಲು ಸಾಲದ ಸುಳಿಗೆ ಸಿಲುಕಿಕೊಂಡಿರುವ ಲಕ್ಷಾಂತರ ಸಂಖ್ಯೆಯಲ್ಲಿರುವ ರೈತಾಪಿ ಕೃಷಿ ಕಾರ್ಮಿಕರಿಗೂ ನೀಡಬೇಕು.’
ಬೆರಳೆಣಿಕೆಯ ಉಳ್ಳವರಿಗೆ ಕೊಡುವ ರಿಯಾಯ್ತಿಯ ಎರಡರಷ್ಟನ್ನಾದರೂ ಲಕ್ಷಾಂತರ ಸಂಖ್ಯೆಯಲ್ಲಿರುವ ಇಲ್ಲದವರಿಗೆ ಯಾಕೆ ಕೊಡಬಾರದು?- ಪ್ರಶ್ನಿಸಬೇಕಾಗಿದೆ.
*ಇದರೊಡನೆ ಕಾರ್ಪೋರೇಟ್ ಕಂಪನಿಗಳಿಗೆ ಸರ್ಕಾರವು ವಾರ್ಷಿಕವಾಗಿ ಸರಾಸರಿ ಕನಿಷ್ಠ 5 ಲಕ್ಷ ಚಿಲ್ಲರೆ ಕೋಟಿ ತೆರಿಗೆ ವಿನಾಯಿತಿ ನೀಡುತ್ತಿದೆ. ಇದನ್ನು ಉತ್ತೇಜಿತ ಕಾಣಿಕೆಯಂತೆ ಪರಿಗಣಿಸಲಾಗಿದೆ.
ರೈತಾಪಿ ಕೃಷಿ ಕಾರ್ಮಿಕ ದುಡಿಯುವ ವರ್ಗವೂ ಕೇಳಬೇಕಾದುದು ಹೀಗೆ- “ನಾವು ನಮ್ಮ ಜೀವನ ನಿರ್ವಹಣೆಗಾಗಿ ಹಾಗೂ ಕೃಷಿ ಪೂರಕ ಲಕ್ಷಾಂತರ ಜನರ ಉದ್ಯೋಗ ಸೃಷ್ಟಿಸುವುದಕ್ಕಾಗಿ ಸಾಲಗಾರರಾಗಿದ್ದೇವೆ, ಸಾಲ ತೀರಿಸಲಾಗದೆ ಸುಸ್ತಿದಾರರಾಗಿದ್ದೇವೆ. ಬೆರಳೆಣಿಕೆಯ ಬಂಡವಾಳಿಗರಿಗೆ ನೀಡುವ ತೆರಿಗೆ ವಿನಾಯ್ತಿಯ ಎರಡರಷ್ಟನ್ನಾದರೂ ಲಕ್ಷಾಂತರ ಸಂಖ್ಯೆಯಲ್ಲಿರುವ ಬಂಡವಾಳ ಇಲ್ಲದ ನಮಗೂ ನೀಡಿ, ಉತ್ತೇಜನ ಕೊಡಿ.’’
ಬೆರಳೆಣಿಕೆಯ ಉಳ್ಳವರಿಗೆ ಕೊಡುವ ರಿಯಾಯ್ತಿಯ ಎರಡರಷ್ಟನ್ನಾದರೂ ಲಕ್ಷಾಂತರ ಜನಸಂಖ್ಯೆಯ ಇಲ್ಲದವರಿಗೆ ಯಾಕೆ ಕೊಡಬಾರದು? ಪ್ರಶ್ನಿಸಬೇಕಾಗಿದೆ.
*ಮತ್ತು ಕೃಷಿಕರು ಕೇಳಬೇಕು- 1. ಕೃಷಿ ಹೆಸರಿನಲ್ಲಿ ಸಾಲವನ್ನು ಕೃಷಿಕರಲ್ಲದ ಬಹುರಾಷ್ಟ್ರೀಯ ಕಂಪನಿಗಳಿಗೆ ಟ್ರಾಕ್ಟರ್, ಕೃಷಿ ಉಪಕರಣ, ಬೀಜ, ಗೊಬ್ಬರ ಇತ್ಯಾದಿ ಹೆಸರಲ್ಲಿ ನೀಡುತ್ತ್ತಿರುವ ವಂಚನೆಯ ಜಾಲ ನಿಲ್ಲಿಸಬೇಕು. 2. ಹಾಗೆಯೇ `ಪ್ರಧಾನಮಂತ್ರಿ ಫಸಲ್ ವಿಮಾ’ಗೆ ರೈತರ ಹೆಸರಿನಲ್ಲಿ ಬಂಡವಾಳಿಗರ ಬಂಡವಾಳಕ್ಕೆ ಹಣ ಹರಿದುಹೋಗುವ ದ್ರೋಹ ಜರುಗುತ್ತಿದೆ. ಇದು ನಿಲ್ಲಿಸಬೇಕು.
ಈಗ ಕೇಳಬೇಕಾಗಿದೆ ನಾವು– ಯಾರು ಪ್ರಭುಗಳು? ನಾವು ಕೇಳಬೇಕಾಗಿದೆ. ಹಿಂದೆ ಪ್ರಜಾಪ್ರತಿನಿಧಿಗಳು ಜನಸೇವಕರು ಎಂಬ ನುಡಿ ಚಾಲ್ತಿಯಲ್ಲಿತ್ತು. ಪ್ರಜೆಗಳೇ ಪ್ರಭುಗಳು ಎಂಬ ನುಡಿಯೂ ಚಾಲ್ತಿಯಲ್ಲಿತ್ತು. ಇಂದು? ಬಂಡವಾಳಿಗರೇ ಪ್ರಭುಗಳಾಗಿದ್ದಾರೆ. ಜನಪ್ರತಿನಿಧಿಗಳು ಬಂಡವಾಳಿಗರ ಪಾದ ಸೇವಕರಾಗಿದ್ದಾರೆ. ನಾವು ಕೇಳಬೇಕು– ಯಾರು ಪ್ರಭುಗಳು? ಎಲ್ಲರೂ ಕೇಳಬೇಕು- ಯಾರಿಗಾಗಿ ಆಳ್ವಿಕೆ ನಡೆಯುತ್ತಿದೆ? ಕೆಲವರಿಗಾಗೊ ಅಥವಾ ಸಮುದಾಯಕ್ಕಾಗೊ?

                                                                                       ಹೋಬಳಿ ಪ್ರಕಾಶಿಸಲಿ
ಬೆಳಕಿನತ್ತ ಧಾವಿಸಿ ರೆಕ್ಕೆ ಸುಟ್ಟುಕೊಳ್ಳುವ ಪತಂಗದಂತೆ ಇಂದು ಸ್ಮಾರ್ಟ್ ಸಿಟಿ ಕಡೆಗೆ ಭಾರತ ಧಾವಿಸುತ್ತಿದೆ. ಈ ಮಾರ್ಗದಲ್ಲೆ ಭಾರತದ ಉದ್ಧಾರವಿದೆ ಎಂದು ಆಳುವ ಸರ್ಕಾರಗಳು ಭಾವಿಸಿ ಕಾರ್ಯತತ್ಪರವಾಗುತ್ತಿದೆ. ಸಿಟಿಯು ಇಂಜಿನ್ ಇದ್ದಂತೆ, ಉಳಿದೆಲ್ಲವೂ ಅದಕ್ಕೆ ಬೋಗಿಗಳು ಎಂಬಂತೆ ಯೋಜನೆಗಳು ರೂಪಿತಗೊಳ್ಳುತ್ತಿವೆ. ಇದು ಎಲ್ಲಿಗೆ ಕರೆದೊಯ್ಯುತ್ತದೆ? ವಿರಳ ಜನಸಂಖ್ಯೆಯ ವಿದೇಶಗಳಲ್ಲಾದರೆ ಸ್ವಲ್ಪವಾದರೂ ಅರ್ಥ ಮಾಡಿಕೊಳ್ಳ್ಳಬಹುದಿತ್ತು. ಆದರೆ ಅಲ್ಲೂ ಕೂಡ ಸಿಟಿಯು ಜಗಜಗಿಸುವಂತೆ ಮೇಲ್ನೋಟಕ್ಕೆ ಕಂಡರೂ ಅದರ ಗರ್ಭದೊಳಗೆ ಅಪರಾಧ ಜಗತ್ತು ಹಾಗೂ ಕೊಳೆಗೇರಿ ಆ ಸಿಟಿಯ ಶಿಶುಗಳಾಗಿವೆ. ಇದೊಂದು ಕುರುಡಾಟ (Blind Game). ಇದನ್ನು ಭಾರತ ಅನುಸರಿಸುವುದೆಂದರೆ? ನೂರು ಕೋಟಿಗೂ ಮಿಗಿಲು ಜನಸಂಖ್ಯೆ ಇರುವ ದೇಶವೊಂದು ಕನಸು ಮನಸಿನಲ್ಲೂ ನೆನಸಿಕೊಳ್ಳಬಾರದ ಯೋಜನೆ ಇದು. ಈ ಪತಂಗ ದುರಂತವನ್ನು ನಾವು ತಪ್ಪಿಸಿಕೊಳ್ಳಬೇಕಾದರೆ ಸ್ಪಷ್ಟ್ಯಾತ್ಮಕವಾಗಿ ಆಲೋಚಿಸಬೇಕಾಗಿದೆ.
ಇಂದು ಕೃಷಿಕ್ಷೇತ್ರ ಉದ್ಯೋಗ ಸೃಷ್ಟಿಯ ಕ್ಷೇತ್ರವಾಗದೆ, ಗ್ರಾಮೀಣ ದುಡಿಮೆಗಾರರನ್ನು ನಗರಗಳಿಗೆ ದಬ್ಬುವ ಕ್ಷೇತ್ರವಾಗಿದೆ. ಇದಕ್ಕೆ ಪೂರಕವಾದ ಆರ್ಥಿಕ ಸಿದ್ಧಾಂತಗಳನ್ನೂ ಚಾಲೂ ಮಾಡಲಾಗುತ್ತಿದೆ- “ಸಣ್ಣ ಭೂ ಹಿಡುವಳಿಗಳು ಆರ್ಥಿಕವಾಗಿ ಲಾಭದಾಯಕವಲ್ಲ, ಹಾಗಾಗಿ ಕೃಷಿ ಅವಲಂಬಿತ ಜನರ ಹಿತದ ದೃಷ್ಟಿಯಿಂದಲೇ ಸಣ್ಣ ರೈತರು ಕೃಷಿಯನ್ನು ತೊರೆದು ಕೃಷಿಯೇತರ ಉದ್ಯೋಗಗಳನ್ನು ಹುಡುಕಿಕೊಳ್ಳುವುದೇ ಕ್ಷೇಮಕರ’’ ಎಂಬ ಈ ಪ್ರತಿಪಾದನೆ ನಡೆಯುತ್ತಿದೆ. ಗುತ್ತಿಗೆ ಕೃಷಿ (Contract farming), , ಭೂಗೇಣಿ (land leasing) ಎಂಬ ಮೋಹಕ ಮಾತುಗಳೂ ಓಡಾಡುತ್ತಿವೆ. ಈ ಸಂಚು ಹೇಗಿದೆ ಎಂದರೆ ಸಣ್ಣ ಹಿಡುವಳಿಗಾರರು ಅಸಹಾಯಕರಾಗಿ ಸ್ವಯಂ ತಾವೇ ತಮ್ಮ ಹಿಡುವಳಿಯನ್ನು ಕಾರ್ಪೋರೇಟ್ ಬಂಡವಾಳಿಗರ ಪದತಲಕ್ಕೆ ಅರ್ಪಿಸಬೇಕು- ಹೀಗಿದೆ ಸಂಚು. ಆದರೆ ಸಣ್ಣ ಸಣ್ಣ ಹಿಡುವಳಿಗಳೇ ಭಾರತಕ್ಕೆ ಔಚಿತ್ಯಪೂರ್ಣ ಎಂದು ನಾವು ಮನಗಾಣಬೇಕು. ಸಣ್ಣ ಸಣ್ಣ ಹಿಡುವಳಿಗಳಲ್ಲೆ ಜೀವನ ಕಟ್ಟಿಕೊಳ್ಳುವ ಉಪಾಯಗಳನ್ನು ಕಂಡುಕೊಳ್ಳಬೇಕು. ನಾವು ನೆನಪಿಟ್ಟುಕೊಳ್ಳಬೇಕು- ಭಾರತಕ್ಕೆ ಯಾವ ದೇಶವೂ ಮಾದರಿಯಲ್ಲ. ಇಸ್ರೇಲ್‍ಗೆ ನೀರಿಲ್ಲ; ಜಪಾನ್‍ಗೆ ಭೂಮಿಯಿಲ್ಲ; ಅಮೆರಿಕಾಕ್ಕೆ ಬಿಸಿಲಿಲ್ಲ, ಜನಸಂಖ್ಯೆ ದಟ್ಟಣೆಯೂ ಇಲ್ಲ. ಭಾರತ ಎಲ್ಲವನ್ನೂ ಪಡೆದು ಹುಟ್ಟಿದೆ. ಯಾವ ದೇಶವನ್ನೂ ಅನುಕರಣೆ ಮಾಡದೆ ನಮ್ಮ ಅನನ್ಯತೆಗೆ ಅನುಗುಣವಾಗಿ ಜೀವನ ಕಟ್ಟಿಕೊಳ್ಳುವುದೇ ಭಾರತದ ನಡಿಗೆಯಾಗಬೇಕಿದೆ.

ಹಳ್ಳಿಗಳಲ್ಲೆ ಅರಣ್ಯ ಕೃಷಿ:
ಬೀಳುಭೂಮಿಯಿಂದಲೇ ಆರಂಭಿಸೋಣ. ನಾನಾ ಕಾರಣಗಳಿಗೆ ಬೀಳುಭೂಮಿ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ಅಂದಾಜು ಶೇ.7 ರಷ್ಟು ಬೀಳುಭೂಮಿ ಇದೆ ಎಂದು ಅಂಕಿ ಅಂಶ ಹೇಳುತ್ತದೆ. ಇಲ್ಲಿ ಮಾಡಬೇಕಾದ ಮೊದಲ ಕೆಲಸ ಬೀಳುಭೂಮಿಯಲ್ಲಿ ಅರಣ್ಯ ಕೃಷಿಗೆ ಉತ್ತೇಜನ ನೀಡಬೇಕಾಗಿದೆ.
* ಮೊದಲು ಬೀಳುಭೂಮಿಯಲ್ಲಿ ನೀರು ಇಂಗುವ ಭೂ ರಚನೆಯನ್ನು ರಚಿಸುವುದು ರೈತ ಹಾಗೂ ಸರ್ಕಾರದ ಸಹಭಾಗಿ ಕೆಲಸವಾಗಬೇಕಾಗಿದೆ. ಜೊತೆಗೆ ಬೀಳುಭೂಮಿಯ ಅರಣ್ಯ ಕೃಷಿಕರಿಗೆ ಜೀವನ ನಿರ್ವಹಣೆಗೆ ಗೌರವ ಧನ ನೀಡಿ ಗೌರವಿಸಬೇಕಾಗಿದೆ. ಹಾಗೆಯೇ ಹೊಲ, ಗದ್ದೆಗಳಲ್ಲಿ ಮರಗಿಡಗಳನ್ನು ಬೆಳೆಸಲು ಕೂಡ ಸಾರ್ವಜನಿಕ ಕಾಣಿಕೆಯೆಂದು ಮರಕ್ಕಿಷ್ಟು ಎಂದು ಗೌರವಧನ ಕೊಡಬೇಕಾಗಿದೆ. ಯಾಕೆಂದರೆ ನಾಡಿನಲ್ಲಿ ಅರಣ್ಯ ಕೃಷಿ, ಮರಗಿಡಗಳನ್ನು ಬೆಳೆಯುವಾತ ಆತನಿಗಾಗಿ ಮಾತ್ರ ಬೆಳೆಯುತ್ತಿಲ್ಲ. ಬದಲಿಗೆ ಭೂಮಿಗೆ ನೀರು ಇಂಗುವಂತಾಗಲು ಹಾಗೂ ವಾತಾವರಣದಲ್ಲಿ ಒಳ್ಳೆಯ ಗಾಳಿ ಸಿಗುವಂತಾಗಲು ಸಮುದಾಯಕ್ಕಾಗಿ ಬೆಳೆಯುತ್ತಿದ್ದಾನೆ ಎಂಬ ಕೃತಜ್ಞತೆ ಸಮಾಜಕ್ಕೆ ಸರ್ಕಾರಕ್ಕೆ ಬರಬೇಕಾಗಿದೆ.
*ಬೀಳುಭೂಮಿಯ ಅರಣ್ಯ ರೂಪಿಸುವಾಗ ಪರ್ಯಾಯ ಇಂಧನಕ್ಕೆ ಬಳಸಬಹುದಾದ ಸಿಮುರುಬ, ಜತ್ರೋಪ, ಹೊಂಗೆ ಇತ್ಯಾದಿ, ಹಾಗೇ ಔಷಧಿಗುಣದ ರಕ್ತ ಚಂದನ, ಅರಿಶಿನ ಬಳ್ಳಿ (Coccinum Fenestatum), , ಎಲೆಗಳ್ಳಿ, ಬೇವು ಇತ್ಯಾದಿ ಮತ್ತು ಹಣ್ಣು ನೀಡುವ ಹುಣಸೆ, ಬೇಲ ಇತ್ಯಾದಿ ಮರಗಿಡಗಳಿಗೆ ಆದ್ಯತೆ ಕೊಡಬೇಕು. ಜೊತೆಗೆ ಜಾನುವಾರುಗಳಿಗೆ ಆಹಾರವಾಗಬಹುದಾದ ಮರಗಿಡ ಪೊದೆ ಬೆಳೆಯುವುದನ್ನೂ ಉತ್ತೇಜಿಸಬೇಕು.
* ರೈತರು ಸರ್ಕಾರದ ಸಂಪೂರ್ಣ ನೆರವಿನೊಡನೆ ಹುಲ್ಲುಗಾವಲು ಹಾಗೂ ಮೇವಿನ ಮರಗಿಡಗಳನ್ನು ನೆಟ್ಟು `ಶುಲ್ಕ ಗೋಮಾಳ’ವನ್ನು ರೂಪಿಸುವುದಕ್ಕೆ ಉತ್ತೇಜಿಸಬೇಕು. ಇದು ರೈತರಿಗೆ ಆದಾಯದ ಮೂಲವಾಗಬೇಕು.
*ಬೀಳುಭೂಮಿಯಲ್ಲಿ ರೈತ+ಸರ್ಕಾರ+ಕೈಗಾರಿಕಾ ಪ್ರತಿನಿಧಿಗಳು ಜಂಟಿ MOU ಒಪ್ಪಂದ ಮಾಡಿಕೊಂಡು ಕೈಗಾರಿಕಾ ಉದ್ದೇಶಿತ ಮರಗಿಡಗಳನ್ನು ಬೆಳೆಯಲೂ ಅವಕಾಶ ಇರಬೇಕು. ಇಂಥಹ ರೈತರಿಗೆ ಜೀವನ ನಿರ್ವಹಣೆಗಾಗಿ ಮಾಸಾಶನ ನೀಡುವುದೂ ಒಪ್ಪಂದದ ಭಾಗವಾಗಬೇಕು.
*ಸರ್ಕಾರವೂ ತನ್ನ ವಶದಲ್ಲಿರುವ ಹಾಗೂ ಸರ್ಕಾರಿ ಭೂಮಿ ಒತ್ತುವರಿಯನ್ನು ತನ್ನ ವಶಕ್ಕೆ ಪಡೆದುಕೊಂಡು ಅದನ್ನು ಮೂಲನಿವಾಸಿಗಳಿಗೆ ನೀಡಿ ಅರಣ್ಯ ಕೃಷಿಗೆ ಉತ್ತೇಜಿಸಬೇಕು. ಅರಣ್ಯ ಕೃಷಿ ಮಾಡುವ ಮೂಲನಿವಾಸಿಗಳಿಗೆ ಅರಣ್ಯ ಉತ್ಪನ್ನದಲ್ಲಿ ಪಾಲು ಇರಬೇಕು. ಹಾಗೂ ಜೀವನ ನಿರ್ವಹಣೆಗೆ ಮಾಸಾಶನವನ್ನು ನೀಡಬೇಕು.

ಸಣ್ಣ ಹೋಬಳಿ; ಪುಟ್ಟಪುಟಾಣಿ ಆರ್ಥಿಕತೆ
ಹೋಬಳಿಯ ಕೇಂದ್ರದಲ್ಲಿ ಪುಟ್ಟಪುಟಾಣಿ ಕುಟೀರಗಳ ಕೈಗಾರಿಕಾ ವಲಯವನ್ನು ಸ್ಥಾಪಿಸಬೇಕಾಗಿದೆ. ಕೈಹಿಡಿದು ನಡೆಸುವ ಕಣ್ಣಳತೆಯ ಪುಟ್ಟಪುಟಾಣಿ ಹೋಬಳಿ ಕೈಗಾರಿಕಾ ಚಟುವಟಿಕೆ ಕ್ರಿಯಾಶೀಲವಾಗಬೇಕಾಗಿದೆ. ಮೊದಲನೆಯದಾಗಿ ರೈತರು ಬೆಳೆದು ಬೆಲೆ ಇಲ್ಲದೆ ರಸ್ತೆಗೆ ಬಿಸಾಕುವ ಏಳುಬೀಳು ಬೆಳೆಗಳಾದ ಟೊಮೊಟೊ, ಈರುಳ್ಳಿ ಮುಂತಾದವುಗಳನ್ನು ಪೇಸ್ಟ್ ಮಾಡಿ- ಮೌಲ್ಯವರ್ಧಿತಗೊಳಿಸಿ ಮಾರಾಟ ಮಾಡುವ ವ್ಯವಸ್ಥೆ ಆಗಬೇಕು. ಆಲೂಗೆಡ್ಡೆ ಥರದ ಗೆಡ್ಡೆ ಗೆಣಸುಗಳು ಹಾಗೇ ಹಣ್ಣು ಹಂಪಲುಗಳನ್ನು ಮೌಲ್ಯವರ್ಧಿತಗೊಳಿಸಿ ಮಾರಾಟ ಮಾಡುವ ವ್ಯವಸ್ಥೆಯಾಗಬೇಕು. ಸ್ವಚ್ಛತೆ, ಗುಣಮಟ್ಟಕ್ಕೆ ವಿಶೇಷ ಅಸ್ತೆ ತೋರಿಸಬೇಕು.
*ದವಸಧಾನ್ಯಗಳನ್ನು ಶುದ್ಧೀಕರಿಸಿ ಹಿಟ್ಟು ಮಾಡಿ ಪ್ಯಾಕೆಟ್ ಮೂಲಕ ಮಾರಾಟ.
*ಸುತ್ತಮುತ್ತ ಧಾರಾಳ ಸಿಗುವ ಬೇವಿನಸೊಪ್ಪು, ನುಗ್ಗೆ, ಗರಿಕೆ, ಚಕ್ರಮುನಿ, ಅಮೃತಬಳ್ಳಿ, ನಿತ್ಯಪುಷ್ಪ, ಸೀಗೆಪುಡಿ ಇಂಥವುಗಳನ್ನು ಪೌಡರ್ ಮಾಡಿ ಪ್ಯಾಕೆಟ್ ಮಾಡಿ ಮಾರಾಟ ಚಟುವಟಿಕೆ.
*ಹೋಬಳಿಗೊಂದು ವಾರದ ಸಂತೆ ಇರಬೇಕು. ಆ ಸಂತೆಯ ಮಾಳದಲ್ಲಿ ನೆರಳು ನೀಡುವ ಮರಗಿಡಗಳನ್ನು ನೆಟ್ಟು ತಂಪಾಗಿರಿಸಬೇಕು. ಅಲ್ಲೇ ಶೌಚಾಲಯ ಹಾಗೂ ಗೋಬರ್ ಗ್ಯಾಸ್ ವ್ಯವಸ್ಥೆಯನ್ನೂ ಮಾಡಬೇಕು.
*ಸ್ಥಳೀಯ ಅಗತ್ಯಕ್ಕನುಗುಣ ಬೀಜ ಶೇಖರಣಾ ಕೋಠಿ ಸ್ಥಾಪನೆ- ಮಾರಾಟ
*ಸ್ಥಳೀಯ ಅಗತ್ಯಕ್ಕನುಗುಣವಾಗಿ ಮರಗಿಡ, ಹಣ್ಣು ಹಂಪಲುಗಳ ಸಸಿ ನರ್ಸರಿಗೂ ಉತ್ತೇಜಿಸಬೇಕು.
*ಜೈವಿಕ ಇಂಧನ ಹಾಗೂ ಸೋಲಾರ್ ವಿದ್ಯುತ್ ವ್ಯಾಪಕಗೊಳಿಸುವುದು. ವಿದ್ಯುತ್ ಮಾರಾಟದ ಉದ್ಯೋಗ ಚಟುವಟಿಕೆಗೂ ಉತ್ತೇಜನ ನೀಡಬೇಕು.

* ಎಣ್ಣೆಗಾಣ ಸ್ಥಾಪಿಸಿ ಶುದ್ಧೀಕರಿಸಿದ ಎಣ್ಣೆಯನ್ನು ಪ್ಯಾಕೆಟ್‍ನಲ್ಲಿ ಮಾರಾಟ
*ಕಲಾತ್ಮಕವಾಗಿಸಿದ ಕುಂಬಾರಿಕೆ ಮತ್ತು ಬಿದಿರು ಉತ್ಪನ್ನಗಳಿಗೆ ಮಾರುಕಟ್ಟೆ ರೂಪಿಸುವುದು.

ಮಹಿಳಾ ಸಾರಥ್ಯ
ಈ ಎಲ್ಲಾ ಕೆಲಸಗಳಲ್ಲೂ ಮಹಿಳೆಯರದೇ ನಿರ್ಣಾಯಕ ಪಾತ್ರ ಎಂಬಷ್ಟು ಸಹಭಾಗಿತ್ವ ಇರುವಂತೆ ನೋಡಿಕೊಳ್ಳಬೇಕು. ಭೂಮಿ ಮೇಲೆ ಬಂಡವಾಳಿಗರ ಹದ್ದಿನ ಕಣ್ಣು ಬಿದ್ದಿರುವುದರಿಂದ ಮಹಿಳೆಯರನ್ನು ಒಳಗೊಂಡ ಜಂಟೀ ಭೂ ಖಾತೆ ಆಗಬೇಕು. ಆಯಾ ಗ್ರಾಮದ ಸರ್ವ ಜನಾಂಗದ ಭಾಗವಹಿಸುವಿಕೆಗೂ ಸಮಪಾಲು ಇರಬೇಕು. ಜೊತೆಗೆ ತೆಲಂಗಾಣದ ಮಹಿಳಾ ಸಾರಥ್ಯದ `ಬೆಳಕು ಯೋಜನೆ’ Velagu Yojane (www.serp.ap.gov.in) ಹಾಗೂ ಕೇರಳದ ಕುಟುಂಬಶ್ರೀ (http://www.kudumbashree.org/) ಯೋಜನೆಗಳ ಮಾದರಿಗಳನ್ನು ಕೂಡಿಸಿ ಕರ್ನಾಟಕವೂ ತನ್ನ ಮಣ್ಣಿಗೆ ಅನುಗುಣ ಯೋಜನೆಯನ್ನು ರೂಪಿಸಿಕೊಳ್ಳಬೇಕು.

ಇದರೊಡನೆ
• “ನಮ್ಮ ಹೋಬಳಿಯ ನೀರು ನಮ್ಮ ಹೋಬಳಿಯಲ್ಲಿ ಇಂಗಿ ತಂಪಾಗಿಸಲಿ’- ಇದಕ್ಕಾಗಿ ಕಾರ್ಯ ಚಟುವಟಿಕೆ ರೂಪಿಸಬೇಕು. ಇದು ಇಂದಿನ ಮಂತ್ರವಾಗಬೇಕು- “ಜಲವನ್ನು ನಾವು ರಕ್ಷಿಸಿದರೆ ಜಲ ನಮ್ಮನ್ನು ರಕ್ಷಿಸುತ್ತದೆ’’
• “ಸಸ್ಯ ದೇವತೆ’’ ಪೂಜೆ ಆರಂಭಿಸಬೇಕು. “ನಮ್ಮ ಹೋಬಳಿಯ ಧರೆಯ ಮೂರನೆ ಒಂದು ಭಾಗ ಹಸಿರಾಗಲಿ’’- ಇದಕ್ಕಾಗಿ ಮರಗಿಡ ನೆಟ್ಟು ಸಲುಹಿ ನಮ್ಮ ಒಳ್ಳೆಯ ಗಾಳಿಯ ಉಸಿರಾಟಕ್ಕಾಗಿ ಹಾಗೂ ಅಂತರ್ಜಲ ಪೂರಣೆಗಾಗಿ ವಾತಾವರಣ ಸೃಷ್ಟಿಸಿಕೊಳ್ಳಬೇಕು. ಇದು ಇಂದಿನ ಮಂತ್ರವಾಗಬೇಕು- “ಮರಗಿಡಗಳನ್ನು ನಾವು ರಕ್ಷಿಸಿದರೆ, ಮರಗಿಡಗಳು ನಮ್ಮನ್ನು ರಕ್ಷಿಸುತ್ತವೆ’’
• ಉದ್ಯೋಗ ಖಾತರಿ ಯೋಜನೆಗೆ ಹಣಕಾಸು ಕಡಿತಗೊಳಿಸಲಾಗಿದೆ. ಇದು ಕ್ರೌರ್ಯ. ಉದ್ಯೋಗ ಖಾತರಿ ಯೋಜನೆಗೆ ಹಣಕಾಸು ನೆರವು ದ್ವಿಗುಣಗೊಳಿಸಬೇಕು. ಈ ಯೋಜನೆಯಲ್ಲಿ ಅಂತರ್ಜಲ ಹಾಗೂ ಭೂಮಿ ಹಸಿರುಮಯ ಮಾಡಲು ಆದ್ಯತೆ ನೀಡಬೇಕು.
• ಹೊರಗಿನಿಂದ ಏನನ್ನೂ ಹೆಚ್ಚಾಗಿ ಬಯಸದ ನೈಸರ್ಗಿಕ ಕೃಷಿಗೇ ಆದ್ಯತೆ ನೀಡಬೇಕು. ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ ಎಂಬಂತೆ ಮತ್ತೆ ರೈತರನ್ನು ಸಾಲದ ಸುಳಿಗೆ ಸಿಲುಕಿಸಿ ರೈತರ ಆತ್ಮಹತ್ಯೆ ಕಡೆಗೆ ತಳ್ಳುವ ವ್ಯಾಪಾರೀಕರಣದ ಸಾವಯವ ಕೃಷಿಯ ವ್ಯಾಪಾರಿ ಸಂಚನ್ನು ತಿರಸ್ಕರಿಸಬೇಕು.
• ಏಕ ಬೆಳೆಪದ್ಧತಿ ಬದಲು ಬಹು ಬೆಳೆಪದ್ಧತಿ ಅನುಸರಿಸುವುದು. ಬೆಳೆಗೆ ಆಧಾರವಾಗಿರುವ ಮಣ್ಣು ಕಾಪಾಡಿಕೊಳ್ಳಲು ವರ್ಷಕ್ಕೆ ಒಂದು ಸಲ ಮಾತ್ರ ನೀರಾವರಿ ಬೆಳೆ ಬೆಳೆಯಬೇಕು. ನೀರನ್ನು ಮುಕ್ಕುವ ಬತ್ತ, ಕಬ್ಬು ಇತ್ಯಾದಿ ಬೆಳೆಗಳನ್ನು ಆದಷ್ಟು ಮಿತಿಗೊಳಿಸಿಕೊಳ್ಳಬೇಕು. ಜೊತೆಜೊತೆಗೆ ನೀರನ್ನು ಮಿತವಾಗಿ ಬಳಸಿ ಬೆಳೆಯುವ ಬತ್ತ, ಕಬ್ಬುಗಳಿಗೆ ಉತ್ತೇಜನ ನೀಡಬೇಕು. ಈ ರೀತಿ ಬೆಳೆದ ಬೆಳೆಗಳಿಗೆ ಹೆಚ್ಚು ಬೆಂಬಲ ಬೆಲೆ ನೀಡಬೇಕು.

• ಸ್ಥಳೀಯ ಜ್ಞಾನ ಸಂಪತ್ತನ್ನು ಹುಡುಕೀಹುಡುಕಿ ನೀರೆರೆದು ಬೆಳೆಸಬೇಕು. ಉದಾಹರಣೆಗೆ- ಹೆಬ್ಬೇವು. ಈ ಉಪಯುಕ್ತ ಸಸ್ಯವನ್ನು ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ, ಪಿರಿಯಾಪಟ್ಟಣದ ಕಡೆ ರೈತರು ಉಳಿಸಿ ಬೆಳೆಸಿ ಅದರ ಉಪಯುಕ್ತತೆಯನ್ನು ಪರಿಚಯಿಸಿದ ಮೇಲೆಯೇ ಈಗ ಅರಣ್ಯ ಇಲಾಖೆಯು ಆ ರೈತರಿಂದ ಬೀಜ ತರಿಸಿಕೊಂಡು ಸಸಿ ಮಾಡಿ ಉತ್ತೇಜಿಸುತ್ತಿದೆ. ಇಂಥವು ಆದಿವಾಸಿಗಳಲ್ಲಿ, ಹಳ್ಳಿಗರಲ್ಲಿ ಎಷ್ಟೆಷ್ಟು ಇದೆಯೊ!

• ಇದೇ ರೀತಿ ಎಲ್ಲ ಕ್ಷೇತ್ರಗಳಲ್ಲೂ ಸ್ಥಳೀಯವಾಗಿ ಹುಡುಕಾಟ ನಡೆಸಬೇಕು. ಗ್ರಾಮಾಂತರ ದೇಶಗಳಲ್ಲಿ ಎತ್ತಗೂ ಸೇರದಂತೆ ಇರುವ ಅನುತ್ತೀರ್ಣ ವಿದ್ಯಾರ್ಥಿಗಳನ್ನು ವಿಶೇಷ ಪ್ರತಿಭೆ ಉಳ್ಳವರು ಎಂದೇ ಪರಿಗಣಿಸಬೇಕು. ಹಾಡು, ಕುಣಿತ, ಚಿತ್ರಕಲೆ, ಅಭಿನಯ ಇತ್ಯಾದಿಗಳೇ ಅವರ ಅಭಿವ್ಯಕ್ತಿ ಮಾಧ್ಯಮವಾಗಿರಬಹುದು. ಕೆಲವರೊಳಗೆ ತಂತ್ರಜ್ಞಾನ ಸಹಜವಾದ ಸ್ವಭಾವವಾಗಿರಬಹುದು. ಇಂತಹ ಸ್ಥಳೀಯ ಪ್ರತಿಭೆಗಳು ಅರಳಿ ಕ್ರಿಯಾಶೀಲವಾಗುವ ವಾತಾವರಣ ಉಂಟು ಮಾಡಬೇಕು.

• ಮಹಾತ್ಮರ ಸ್ಮರಣೀಯ ರಜಾ ದಿನಗಳಲ್ಲಿ ರಜೆ ಪಡೆಯುವ ವಿದ್ಯಾರ್ಥಿ- ನೌಕರ ವರ್ಗವು (ಮುಖ್ಯ ಕಾರ್ಯದರ್ಶಿಯೂ ಸೇರಿದಂತೆ) ತಂತಮ್ಮ ಹತ್ತಿರದ ಹೋಬಳಿಗಳಲ್ಲಿ ಆಯಾ ಮಹಾತ್ಮರ ಚಿಂತನೆಗಳ ಪ್ರಚಾರದೊಡನೆ ಶ್ರಮದಾನವನ್ನೂ ಒಳಗೊಂಡಂತಹ ಕಾರ್ಯಕ್ರಮ ರೂಪಿಸಿ ಭಾಗವಹಿಸುವಂತಾಗಬೇಕು ಹಾಗೂ ವಿದ್ಯಾವಂತರಾದವರು ಆ ಮಹಾತ್ಮರ ನಡೆ-ನುಡಿಗಳನ್ನು ತಮ್ಮೊಳಗೂ ಧರಿಸಿಕೊಂಡು ಹೋಬಳಿ ಮಟ್ಟದಲ್ಲಿ ಕ್ರಿಯಶೀಲವಾಗಿಸಿ ಅರ್ಥಪೂರ್ಣವಾಗಿ ಮಹಾತ್ಮರ ನೆನಪಿನ ದಿನವನ್ನಾಗಿಸಬೇಕು.

ಹೋಬಳಿ ಪ್ರಕಾಶಿಸುವಂತಾಗಲು- ಹೋಬಳಿ ವ್ಯಾಪ್ತಿಯಲ್ಲೇ ಸ್ಥಳೀಯವಾಗೇ ಆರ್ಥಿಕತೆ ಚಿಗುರೊಡೆಯಬೇಕು. ಈ ದಿಕ್ಕಲ್ಲಿ ಪರ್ಯಾಯ ಆರ್ಥಿಕ ತಜ್ಞರು, ಆಹಾರ ತಜ್ಞರು, ಜಲ ತಜ್ಞರು, ಅರಣ್ಯ ತಜ್ಞರು, ಸಮುದಾಯ ಹಿತದ ಅರಿವಿನವರು- ಸ್ಥಳೀಯವಾಗಿಯೇ ಅಧ್ಯಯನ ನಡೆಸಿ ಸ್ಥಳೀಯತೆಗೆ ಸಹಜವಾದ ಕಾರ್ಯಚಟುವಟಿಕೆಗಳನ್ನು ಕಂಡುಕೊಳ್ಳಬೇಕು. ಅನುಭವ ಮತ್ತು ಜ್ಞಾನ ಮೇಳೈಸಿ ಹೊಸ ಹುಟ್ಟಿಗೆ ಕಾರಣವಾಗಬೇಕು.

• ಬಡವರಿಗೂ ಬಲ್ಲಿದರಿಗೂ ಒಂದೇ ತೆರಿಗೆ ಎಂಬ ವಿವೇಚನೆ ಇಲ್ಲದ GST ತೆರಿಗೆ ಚಾಲ್ತಿಗೆ ಬಂದಿದೆ. ರಾಜ್ಯಗಳಿಗೆ ತೆರಿಗೆ ಹಾಕುವ ಅವಕಾಶಗಳನ್ನು ಕಿತ್ತುಕೊಂಡಿರುವ ಈ ಹೊಸ ತೆರಿಗೆ GST ಯು ರಾಜ್ಯದ ಜನಕಲ್ಯಾಣ ಕಾರ್ಯಚಟುವಟಿಕೆಗೆ ಸಂಪನ್ಮೂಲ ಕೊರತೆ ಉಂಟಾಗುವಂತೆ ಮಾಡಿದೆ.GST ತೆರಿಗೆಗೆ ಮಾನವತೆಯ ಸ್ಪರ್ಶವಾಗಬೇಕಾಗಿದೆ. ಕೈ ಕೆಲಸದ ಉತ್ಪಾದನೆಗೂ, ಕೆಲಸ ಮಾಡುವ ಕೈಗಳನ್ನು ಕತ್ತರಿಸಿದ ಯಂತ್ರದ ಉತ್ಪಾದನೆಗೂ ಒಂದೇ ತೆರಿಗೆ! ತಾಳಿಕೆಯ ಬಾಳಿಕೆಯ ಬಾಳ್ವೆಯ ಉದ್ಯೋಗ ಸೃಷ್ಟಿಸುವ ಕೈ ಕೆಲಸದ ಉತ್ಪಾದನೆಗಳಿಗೆ ಶೇಕಡ 0-1 ತೆರಿಗೆ ವಿಧಿಸುವಂತಾಗಬೇಕು. ಹಾಗೇ ಯಾವುದೇ ಹೋಬಳಿ ಗೃಹ ಕೈಗಾರಿಕೆ ಉತ್ಪನ್ನಗಳಿಗೆ ಶೇಕಡ 3ರಷ್ಟು ತೆರಿಗೆ ವಿಧಿಸುವಂತಾಗಬೇಕು.

• ನೀರಾ, ಅಕ್ಕಿ ಬೋಜ, ವೈನ್, ಹೆಂಡ ಇತ್ಯಾದಿ ಆರೋಗ್ಯಕ್ಕೆ ಅಷ್ಟಾಗಿ ಹಾನಿಕರವಲ್ಲದ ಸ್ಥಳೀಯ ಅರೆ-ನಿಶೆ ಪಾನಿಯಗಳಿಗೆ ಅವಕಾಶ ನೀಡಿ ಮದ್ಯಪಾನ ನಿಷೇಧ ಆಗಬೇಕು.
ಇಂಥವು, ಇಷ್ಟೇ ಅಲ್ಲ. ಆದರೆ ಇವನ್ನು ಕೇಳುವವರು ಯಾರು? ಇವನ್ನು ಮಾಡುವವರು ಯಾರು? ಆಳ್ವಿಕೆ ಮಾಡುತ್ತಿರುವವರಿಗೆ ಹೇಳಿದರೆ ಕೋಣನ ಮುಂದೆ ಕಿನ್ನರಿ ಬಾರಿಸದಂತಾಗುತ್ತದೆ. ಹಾಗಾಗಿ ಹಣತೆಯ ಬೆಳಕಿನಂತೆ ಸ್ವರಾಜ್ ಇಂಡಿಯಾವನ್ನು ಜನ ಸಮುದಾಯದ ಮುಂದೆ ಇಡುತ್ತಿದ್ದೇವೆ. ಈ ನುಡಿಗಳು ನಡೆಯಾಗಲು ಮೊದಲು ಜಾಗೃತಿ ಉಂಟುಮಾಡಬೇಕು. ಆಮೇಲೆ ಸಂಘಟಿತವಾಗಬೇಕು. ತದನಂತರ ಹೋರಾಡಬೇಕು. ಅಷ್ಟೇ ಅಲ್ಲ ರಚನಾತ್ಮಕ ಕೆಲಸಗಳನ್ನೂ ಕೈಗೆತ್ತಿಕೊಳ್ಳಬೇಕು. ಜೊತೆಗೆ ಈಡೇರಿಕೆಗಾಗಿ ರಾಜಕಾರಣವನ್ನು ಮಾಡಬೇಕು. ಇದೇ ಸ್ವರಾಜ್ ಇಂಡಿಯಾ.

ಉದ್ಯೋಗ ಸಂಕಷ್ಟ
ಮೊದಲು, ಉದ್ಯೋಗವು ವ್ಯಕ್ತಿಗತ ಸಮಸ್ಯೆ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಉದ್ಯೋಗ ಸಮಸ್ಯೆಯು ಸಾಮಾಜಿಕ, ಆರ್ಥಿಕ, ರಾಜಕೀಯ ಸಮಸ್ಯೆಗಳಿಂದ ಉಂಟಾದ ಉತ್ಪನ್ನ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಇದೊಂದು ಸಾಮೂಹಿಕ ಮತ್ತು ಸಮುದಾಯಿಕ ಸನ್ನಿವೇಶವಾಗಿದೆ.
ಇಂದು ಉದ್ಯೋಗ ಸಂಕಷ್ಟದಲ್ಲಿದೆ. ಹೊರಗುತ್ತಿಗೆ, ಗುತ್ತಿಗೆ, ಅರೆಕಾಲಿಕ, ಅಕಾಲಿಕ ಇಂಥ ಸೂತ್ರವಿಲ್ಲದ ಪಟಗಳಂತಿರುವ ಕೆಲಸಗಳು ಹೆಚ್ಚುತ್ತಿದೆ. ಅನಿಶ್ಚಿತತೆ, ಧಾವಂತ, ಆತಂಕ, ಅಸುರಕ್ಷತೆ- ಈ ಕೆಲಸಗಳ ಉತ್ಪನ್ನವಾಗಿದೆ. ಮೊದಲು, ಉದ್ಯೋಗವು ವ್ಯಕ್ತಿಗತ ಸಮಸ್ಯೆ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಉದ್ಯೋಗ ಸಮಸ್ಯೆಯು ಸಾಮಾಜಿಕ, ಆರ್ಥಿಕ, ರಾಜಕೀಯ ಸಮಸ್ಯೆಗಳಿಂದ ಉಂಟಾದ ಉತ್ಪನ್ನ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಇದೊಂದು ಸಾಮೂಹಿಕ ಮತ್ತು ಸಮುದಾಯಿಕ ಸನ್ನಿವೇಶವಾಗಿದೆ.
ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಲಿಯು (Ecosoc) ಇಂಥಹ ಬುಡವಿಲ್ಲದ ಅರೆಬರೆ ಕೆಲಸಗಳನ್ನು Under employment ಅಂದರೆ ಅಸಮರ್ಪಕ ಕೆಲಸ/ಉದ್ಯೋಗ ಎಂದು ಗುರುತಿಸಿದೆ. ಹಾಗಾದರೆ ಕೆಲಸ/ಉದ್ಯೋಗ ಅಂದರೇನು? ಅಂತಾರಾಷ್ಟ್ರೀಯ ಕಾರ್ಮಿಕ ಒಕ್ಕೂಟದ (ILO) ವಿಭಾಗವು ಕೆಲಸ/ಉದ್ಯೋಗವನ್ನುDecent work ಎನ್ನುತ್ತದೆ. ಅಂದರೆ ಘನತೆಯ ಕೆಲಸ (Decent work). ಈ ಘನತೆಯ ಕೆಲಸದ ಲಕ್ಷಣವನ್ನು ಅದು ಹೀಗೆ ವಿವರಿಸುತ್ತದೆ: ಈ ಲಕ್ಷಣದ ಪ್ರಕಾರ ಕೆಲಸವು (1) ಆದಾಯ ತರುವುದರ ಜೊತೆಗೆ ಕಾರ್ಯಸ್ಥಳದಲ್ಲಿ ಭದ್ರತೆಯನ್ನು ನೀಡಬೇಕು. (2) ಉದ್ಯೋಗಿಯ ಕುಟುಂಬಕ್ಕೆ ಸಾಮಾಜಿಕ ಸುರಕ್ಷತೆ ಇರಬೇಕು. (3) ವೈಯಕ್ತಿಕ ಬೆಳವಣಿಗೆಗೆ ಉತ್ತಮ ಅವಕಾಶವಿರಬೇಕು. (4) ಸಾಮಾಜಿಕ ಸಂಘಟನೆ ಹಾಗೂ ಒಗ್ಗೂಡುವಿಕೆ ಅವಕಾಶವಿರಬೇಕು. (5) ತಮ್ಮ ಬದುಕನ್ನು ಬಾಧಿಸುವಂತಹ ನಿರ್ಧಾರಗಳ ಬಗ್ಗೆ ತಂತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು, ಸಂಘಟಿತರಾಗಲು ಮತ್ತು ಭಾಗಿಗಳಾಗಲು ಮುಕ್ತ ಅವಕಾಶ ಇರಬೇಕು (6) ಅವಕಾಶಗಳಲ್ಲಿ ಸಮಾನತೆ ಕಲ್ಪಿಸಬೇಕು (7) ಹೆಣ್ಣು ಗಂಡಿನ ನಡುವೆ ತಾರತಮ್ಯ ಇರಬಾರದು. ಇದು ಘನತೆಯ ಕೆಲಸದ ಲಕ್ಷಣ. ಈ ಹಿನ್ನೆಲೆಯಲ್ಲಿ- 1. ಕೆಲಸ/ಉದ್ಯೋಗ 2. ಘನತೆಯಿಲ್ಲದ ಅಸಮರ್ಪಕ ಕೆಲಸ/ಉದ್ಯೋಗ 3. ನಿರುದ್ಯೋಗ- ಹೀಗೆ ಮೂರು ಕೆಟಗರಿಗಳನ್ನಾಗಿ ವಿಂಗಡಿಸಿ ಮುಖಾಮುಖಿಯಾಗಬೇಕಾಗಿದೆ.
ಒಂದು ಉದಾಹರಣೆ ನೀಡಿ ಹೇಳುವುದಾದರೆ- ಭಾರತವು Skill ಇಂಡಿಯಾ ಅಂದರೆ ಕೌಶಲ್ಯ ಇಂಡಿಯಾ ಎಂಬ ಕಾರ್ಯಕ್ರಮವನ್ನು ಸಂಭ್ರಮದಿಂದ ಬಿಂಬಿಸುತ್ತಿದೆ. ಇದೇ ಭಾರತದ ಕನಸು ಎಂಬಂತೆ ಸ್ವಪ್ನ ಬಿತ್ತುತ್ತಿದೆ. ಈ ಕೌಶಲ್ಯ ಅಂದರೆ ಏನು? ಕೌಶಲ್ಯ ಎಂದರೆ ಸರ್ಕಾರಿ ವೆಚ್ಚದಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಅಗತ್ಯವಿರುವ ಕುಶಲಿಗಳನ್ನು ತಯಾರುಮಾಡುವ ತರಬೇತಿಗಳಾಗಿವೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಅಲ್ಪವೇತನಕ್ಕೆ ಹೊರಗುತ್ತಿಗೆ ಕೆಲಸಗಾರರನ್ನು ತಯಾರಿಸುವ ಕುಶಲ ಕೇಂದ್ರಗಳಾಗಿವೆ. ಯಾವುದೇ ಸೇವಾಭದ್ರತೆಯನ್ನು ಹೊಂದಿಲ್ಲದ ಹಾಗೂ ಶಾಸನಬದ್ಧವಾಗಿ ದೊರಕಬೇಕಾದ ಎಲ್ಲಾ ಸೌಲಭ್ಯಗಳಿಂದ ವಂಚಿಸಲ್ಪಟ್ಟ ಕೆಲಸಗಾರರನ್ನು ಹುಟ್ಟುಹಾಕುವುದೇ ಈ Skill India. ಗುಜರಾತ್‍ನಲ್ಲಿ ಕಮ್ಮಿ ಸಂಬಳದ ಅಸಂಘಟಿತ ಕಾರ್ಮಿಕರ ಸಂಖ್ಯೆ ವಿಪರೀತವಾಗಿದೆ. ಶೇಕಡ 90% ಕ್ಕೂ ಮಿಗಿಲು. ಇದೇ ಗುಜರಾತ್ ಮಾದರಿ. ಈ ದುರಂತ ಮಾದರಿಯನ್ನುSkill India. ಎಂದು ಭಾರತದ ಉದ್ದಕ್ಕೂ ಬಿತ್ತಲಾಗುತ್ತಿದೆ.
ಇದು ಎಲ್ಲಿಗೆ ಕರೆದೊಯ್ಯುತ್ತಿದೆ? ಘನತೆಯ ಕೆಲಸ/ಉದ್ಯೋಗ ಇಲ್ಲದ ಕಾರಣವಾಗಿಯೂ ಬಹುತೇಕ ಅಪರಾಧಗಳು ಸಂಭವಿಸುತ್ತಿವೆ. ಉದ್ಯೋಗವಿಲ್ಲದ ಕಾರಣವಾಗಿ ಉಂಟಾದ ಬಡತನ, ಹಸಿವು ಕಾರಣಗಳಿಂದಲೂ ಭಿಕ್ಷಾಟನೆ, ವೇಶ್ಯಾವಾಟಿಕೆ, ಅಪ್ರಾಪ್ತ ಹೆಣ್ಣು ಮಕ್ಕಳ ದುರ್ಬಳಕೆ, ಮಾನವ ಸಾಗಾಣಿಕೆ, ಜಾತಿ/ಕೋಮು ದ್ವೇಷ, ಡ್ರಗ್ಸ್ ದಂಧೆಗೆ ದುರ್ಬಳಕೆ ಇತ್ಯಾದಿ ಇತ್ಯಾದಿಗಳು ಹೆಚ್ಚಲೂ ಕಾರಣವಾಗಿವೆ. ಇವುಗಳನ್ನೆಲ್ಲಾ ನಾವು ಪ್ರಕರಣ, ಘಟನೆಗಳು ಎಂದು ನೋಡಿ ಪ್ರತಿಕ್ರಿಯಿಸುತ್ತಿದ್ದೇವೆ. ಆದರೆ ಇಂಥವು ಘನತೆಯ ಕೆಲಸ/ಉದ್ಯೋಗ ಇಲ್ಲದಿದ್ದರಿಂದಲೂ ಉಂಟಾಗುತ್ತಿವೆ. ಹಾಗಾಗಿ ಇಡೀ ಭಾರತವೇ ಘನತೆಯ ಕೆಲಸ/ಉದ್ಯೋಗಕ್ಕಾಗಿ ದನಿ ಎತ್ತಬೇಕಾಗಿದೆ.
ಈ ದಿಕ್ಕಲ್ಲಿ ಇತ್ತೀಚೆಗೆ ಕರ್ನಾಟಕದಲ್ಲಿ ಒಂದು ದೊಡ್ಡ ಭರವಸೆ- ಯುವಜನತೆಯು ತಮ್ಮ ಭವಿಷ್ಯಕ್ಕಾಗಿ ರೂಪಿಸಿದ ಯುವಜನರ ಪ್ರಣಾಳಿಕೆ, ಕರ್ನಾಟಕ 2018- ಇದನ್ನು ಸ್ವರಾಜ್ ಇಂಡಿಯಾವು ತನ್ನದೇ ಸಹ-ಪ್ರಣಾಳಿಕೆ ಎಂದು ಪರಿಗಣಿಸಿದೆ. ನಾಡನ್ನು ಬದುಕಿಸಬಲ್ಲ ಈ ಆಂದೋಲನದ ಜೊತೆಗೇ ಸ್ವರಾಜ್ ಇಂಡಿಯಾ ಇರುತ್ತದೆ.

ವಿದ್ಯೆ/ಶಿಕ್ಷಣ
ಒಂದು ಉಪಮೆ ಮೂಲಕ ಇಂದಿನ ಶಿಕ್ಷಣ ಪದ್ಧತಿಯ ಬಗ್ಗೆ ಹೇಳುವುದಾದರೆ- ಇಂದಿನ ಶಿಕ್ಷಣವು ಅದರಲ್ಲೂ ಕಾನ್ವೆಂಟ್ ಶಿಕ್ಷಣವು ಹೆಚ್ಚುಕಮ್ಮಿ ಬ್ರಾಯಲರ್ [Broiler) ಕೋಳಿ ಸಾಕಾಣಿಕೆಯ ಕೇಂದ್ರಗಳಂತೆ ಇವೆ. ಜೀವನ ಅನುಭವಕ್ಕೆ ವಿಮುಖತೆಗೊಳಿಸುವುದೇ ಇಂದಿನ ಶಿಕ್ಷಣ ಪದ್ಧತಿಯ ಲಕ್ಷಣವಾಗಿದೆ. CET, NET ಕಡೆಗಿನ ಓಟವಷ್ಟೆ ಶಿಕ್ಷಣವಾಗಿ ಬಿಟ್ಟಿದೆ. ವಿದ್ಯಾ ಕಲಿಕೆಗಿಂತ ಹೆಚ್ಚಾಗಿ, ಆರು ವಾರಗಳಲ್ಲಿ ಸೈಜ್‍ಗೆ ಬರಬೇಕು ಎಂಬ ಗುರಿ ಇಟ್ಟುಕೊಂಡು ಬ್ರಾಯಲರ್ ಕೋಳಿ ಸಾಕಿದಂತೆ- ವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತಿದೆ.
ಹೀಗೆ ತಯಾರಾದ ಮೇಲೆ- ಹೀಗೆ ತಯಾರಾದವರು ಉದ್ಯೋಗ ಹೇಗೆ ಮಾಡಬೇಕಾಗಿ ಬರುತ್ತದೆಂದರೆ, ಕೂಡಿ ಹಾಕಿದ ಮೊಟ್ಟೆ ಕೋಳಿಗಳ (Layers) ಪಾತ್ರ ವಹಿಸಬೇಕಾಗುತ್ತದೆ. ಮೊಟ್ಟೆ ಇಡುವುದಷ್ಟೆ ಕೆಲಸ. ಇಂದು ಹೆಚ್ಚುತ್ತಿರುವ, ಕಂಪ್ಯೂಟರ್ ಮುಂದೆ ಹಗಲೂ ರಾತ್ರಿ ಕೂತು ಮಾಡುವ ಕೆಲಸಗಳಂತು ಅವು ರಕ್ತ ಹೀರದೆ ನರವನ್ನೆ ಹೀರುವ ಕೆಲಸಗಳಾಗಿ ಬಿಟ್ಟಿವೆ. ನರ ದೌರ್ಬಲ್ಯ ಬಳುವಳಿಯಾಗಿ ಬರುತ್ತದೆ. ಜೊತೆಗೆ ಕಣ್ಣುಗಳ ದ್ರವವನ್ನೂ ಒಣಗಿಸಿಬಿಡುತ್ತದೆ. ಇಂದಿನ ಒತ್ತಡದ ಕೆಲಸಗಳು ನಲವತ್ತು-ಐವತ್ತು ವರ್ಷ ತುಂಬುವುದರೊಳಗೆ ದೇಹದ ಚೈತನ್ಯವನ್ನು ಹೀರಿಬಿಡುತ್ತವೆ, ಜೀವನ ವಿಮುಖತೆಯ ಬಿಳುಚಿಕೊಂಡ ಬದುಕನ್ನಾಗಿಸಿಬಿಡುತ್ತದೆ. ಇದರಿಂದ ಹೊಸ ಹೊಸ ಮಾನಸಿಕ ದೈಹಿಕ ಸಮಸ್ಯೆಗಳು ಉಂಟಾಗುತ್ತಿವೆ. ಇದಕ್ಕೆ ಮದ್ದು ಸಮಾಜಮುಖಿ ಶಿಕ್ಷಣ ರೂಪಿಸಬೇಕಾಗಿರುವುದೇ ಆಗಿದೆ.
ಹಾಗೇ ಭಾರತವು, ತನ್ನೊಳಗಿನಿಂದಲೇ ಯಾವ ಶಿಕ್ಷಣ ಪದ್ಧತಿ ತನಗೆ ಬೇಕು ಎಂದು ಕೇಳಿಕೊಳ್ಳಬೇಕಾಗಿದೆ. ಯಾವ ರೀತಿ ಸಮಾಜವನ್ನು ನಾವು ರೂಪಿಸಬೇಕೆಂದಿರುತ್ತೇವೆಯೊ ಅದಕ್ಕೆ ತಕ್ಕಂತೆ ಶಿಕ್ಷಣ ಇರಬೇಕಾಗುತ್ತದೆ. ಭಾರತಕ್ಕೆ ತಕ್ಕಂತಹ ಶಿಕ್ಷಣ ಯಾವುದು? 1963-64ರಲ್ಲಿ ಕೊಠಾರಿ ಶಿಕ್ಷಣ ಆಯೋಗದ ವರದಿಯ ನುಡಿಗಳು ಹೀಗಿವೆ- “ಸಮಾನ ಶಿಕ್ಷಣ ಅನುಷ್ಠಾನ ಮಾಡದಿದ್ದರೆ ಶಿಕ್ಷಣವೇ ಸಾಮಾಜಿಕ ಪ್ರತ್ಯೇಕತೆ ಮತ್ತು ವರ್ಗಗಳನ್ನು ಹೆಚ್ಚಿಸಿ ಮತ್ತಷ್ಟು ಕಂದರ ಉಂಟುಮಾಡುತ್ತದೆ’’ ಈ ನುಡಿಗಳ ಸಂಕಟವನ್ನು ನಾವು ಕೇಳಿಸಿಕೊಳ್ಳಬೇಕಾಗಿದೆ. ಶಿಕ್ಷಣದ ಹೆಸರಿನಲ್ಲೂ ಭಾರತದ ಆಳ್ವಿಕೆ, ನ್ಯಾಯಾಲಯಗಳು ಛಿದ್ರಗೊಂಡ ಭಾರತವನ್ನು ಮತ್ತಷ್ಟೂ ಛಿದ್ರಗೊಳಿಸುತ್ತಿವೆ. ಇದೊಂದು ದೊಡ್ಡ ದುರಂತ.

ಈ ದುರಂತದಿಂದ ಬಚಾವಾಗಲು ಮೊದಲ ಹೆಜ್ಜೆ: ಮಕ್ಕಳ ಮನಸ್ಸು ರೂಪಿತವಾಗುವ ಅಂಗನವಾಡಿಯಿಂದ ಕನಿಷ್ಠ 4ನೇ ತರಗತಿಯವರೆಗಾದರೂ ಎಷ್ಟೇ ಕಷ್ಟವಾದರೂ ಎಷ್ಟೇ ಖರ್ಚಾದರೂ ನೆರೆಹೊರೆಯ ಸಾರ್ವಜನಿಕ ಶಿಕ್ಷಣ ಪದ್ಧತಿಯನ್ನೆ ಅಳವಡಿಸಿಕೊಳ್ಳಬೇಕು. ಭಾರತದ ಸಂದರ್ಭದಲ್ಲಿ ಖಾಸಗಿಯವರು ಕಾಲಿಟ್ಟ ಕಡೆ ಸಾರ್ವಜನಿಕವು ಕ್ಷಯಿಸುವುದರಿಂದ ಖಾಸಗಿಯವರಿಗೆ ಅವಕಾಶವಿರಬಾರದು. ಸರ್ಕಾರವೇ ಸಂಪೂರ್ಣ ಜವಾಬ್ದಾರಿ ಹೊರಬೇಕು. ಹೀಗಾದಾಗ ಮಾತ್ರವೇ ಸಾರ್ವಜನಿಕ ಶಾಲೆಗಳ ಗುಣಮಟ್ಟ ತಂತಾನೇ ಹೆಚ್ಚುವುದೂ ಕೂಡ. ಈ ನಡೆಯಿಂದಾಗಿ ಭಾರತವು ಐಕ್ಯತೆಯ ಕಡೆಗೆ ಮೊದಲ ಹೆಜ್ಜೆ ಇಟ್ಟಂತಾಗುತ್ತದೆ. ಜಾತಿ, ಮತ, ವರ್ಗಗಳ ಭಾರತಕ್ಕೆ ಸಮಾನ ಶಿಕ್ಷಣವೇ ಶಿಕ್ಷಣದ ಮೊದಲ ಪಾಠವಾಗಿದೆ.
ಇದಕ್ಕಾಗಿ, ಶಿಕ್ಷಣಕ್ಕೆ GDP ಯ ಶೇಕಡ 6 ರಷ್ಟನ್ನು ವೆಚ್ಚ ಮಾಡಬೇಕು. ಈ ವೆಚ್ಚವು ಸರ್ಕಾರದ ಶಾಲಾ, ಕಾಲೇಜುಗಳ ಅಭಿವೃದ್ಧಿಗಾಗಿ ಹೆಚ್ಚು ವಿನಿಯೋಗಿಸಬೇಕು. ಆಗ ಮಾತ್ರವೇ ಇಲ್ಲಿ ಶಿಕ್ಷಣಕ್ಕೆ ಆದ್ಯತೆ ಸಿಕ್ಕಂತಾಗುತ್ತದೆ. ಜೊತೆಗೆ ಮೂಲ(Fundamental) ಶಾಸ್ತ್ರ/ವಿಜ್ಞಾನಕ್ಕೆ ಹೆಚ್ಚು ಒತ್ತು ನೀಡಬೇಕು. ಇದಾಗದಿದ್ದರೆ ನಮ್ಮ ಶಿಕ್ಷಣವು ಜ್ಞಾನಿ/ವಿಜ್ಞಾನಿಗಳನ್ನು ಹುಟ್ಟುಹಾಕದೆ ಕೆಲಸಗಾರರನ್ನು ಹುಟ್ಟುಹಾಕಿದಂತಾಗುತ್ತದೆ. ಹೀಗಾಗಿರುವುದರಿಂದಲೇ ನಮ್ಮ ಸಂಶೋಧನಾ ಕ್ಷೇತ್ರವು ಸ್ಪರ್ಧಾತ್ಮಕವಾಗಿಲ್ಲ. ಸಂಶೋಧನಾ ಕ್ಷೇತ್ರವನ್ನು ದುರಸ್ತಿ ಮಾಡಿ ಹೆಚ್ಚು ಆದ್ಯತೆ ನೀಡಬೇಕು.

`ಆರೋಗ್ಯ ಕ್ಷೇತ್ರ’ದ ಆರೋಗ್ಯ
(ಅ)
ಯಾವುದೇ ಒಂದು ಆಳ್ವಿಕೆಯು ತನ್ನ ಪ್ರಜೆಗಳನ್ನು ಮನುಷ್ಯರು ಎಂದು ನೋಡುತ್ತಿದೆಯೋ ಅಥವಾ ಇಲ್ಲವೊ ಎಂಬುದಕ್ಕೆ ಆ ಆಳ್ವಿಕೆಯು ತನ್ನ ಪ್ರಜೆಗಳ ಆರೋಗ್ಯಕ್ಕಾಗಿ ಎಷ್ಟು ವೆಚ್ಚ ಮಾಡುತ್ತದೆ ಎಂಬುದೇ ಅಳತೆಗೋಲು. ತನ್ನ ಪ್ರಜೆಗಳ ಆರೋಗ್ಯದ ಬಗ್ಗೆ ಸರಿಸಮಾನವಾಗಿ ಪರಿಗಣಿಸುವ ಇಂಗ್ಲೆಂಡ್ ಮತ್ತು ಅಮೆರಿಕಾಗಳ ಆರೋಗ್ಯ ವೆಚ್ಚವನ್ನು ಹೋಲಿಕೆ ಮಾಡುವುದಾದರೆ- ಇಂಗ್ಲೆಂಡ್ ತನ್ನ ಆಂತರಿಕ ಒಟ್ಟು ಉತ್ಪನ್ನ GDP ಯಲ್ಲಿ 9.9 ರಷ್ಟನ್ನು ಆರೋಗ್ಯ ಕ್ಷೇತ್ರ ವೆಚ್ಚ ಮಾಡುತ್ತದೆ. ಇಂಗ್ಲೆಂಡ್‍ನಲ್ಲಿ ಬಹುತೇಕ ಸರ್ಕಾರವೇ ಆಸ್ಪತ್ರೆಗಳನ್ನು ನಿರ್ವಹಿಸುತ್ತಿದೆ. ಅದೇ ಅಮೆರಿಕಾವು ತನ್ನ ಆಂತರಿಕ ಒಟ್ಟು ಉತ್ಪನ್ನ GDPಯಲ್ಲಿ ಶೇಕಡಾ 16.6 ರಷ್ಟನ್ನು ಆರೋಗ್ಯ ಕ್ಷೇತ್ರ ವೆಚ್ಚ ಮಾಡುತ್ತಿದೆ. ಆದರೆ ಅಮೆರಿಕಾದ ಆರೋಗ್ಯ ವೆಚ್ಚದೊಳಗೆ ಆಡಳಿತಾತ್ಮಕ ಖರ್ಚು, Pharmaceuticals and devices,  ವೈಯಕ್ತಿಕ ಸೇವೆ, ಸರ್ಜರಿ, ತಪಾಸಣೆ ಹೀಗೆ ಆರೋಗ್ಯ ಸಂಬಂಧಿ ವ್ಯವಹಾರಗಳಿಗೆ ಹೆಚ್ಚು ಹಣ ವೆಚ್ಚವಾಗುತ್ತದೆ.
ಇಲ್ಲಿ ನಾವು ಗಮನಿಸಬೇಕಾದ್ದೇನೆಂದರೆ- ಇಂಗ್ಲೆಂಡ್‍ನ ಆರೋಗ್ಯಕ್ಕಾಗಿ ವೆಚ್ಚವು ಅಮೇರಿಕಾಕ್ಕೆ ಹೋಲಿಸಿದರೆ ಅದು ಕಡಿಮೆ ಇದೆ. ಆರೋಗ್ಯ ಕ್ಷೇತ್ರವನ್ನು ಸರ್ಕಾರವೇ ನಿಭಾಯಿಸುತ್ತಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಅದೇ ಅಮೆರಿಕಾದಲ್ಲಿ ಆರೋಗ್ಯ ಕ್ಷೇತ್ರವನ್ನು ಖಾಸಗಿ ಕಾರ್ಪೊರೇಟ್ ವೈದ್ಯಕೀಯ ವಲಯಗಳು ತಮ್ಮ ಹಿಡಿತದಲ್ಲಿಟ್ಟುಕೊಂಡಿರುವುದರಿಂದ ಅಮೆರಿಕಾವು ಆರೋಗ್ಯಕ್ಕಾಗಿ ಮಾಡುವ ವೆಚ್ಚವನ್ನು ಬಹುತೇಕ ಖಾಸಗಿ ಕಾರ್ಪೊರೇಟ್ ವಹಿವಾಟೇ ತಿಂದು ಹಾಕುತ್ತದೆ. ಭಾರತದ ಆರೋಗ್ಯ ಕ್ಷೇತ್ರವೂ ಇದನ್ನೇ ಅನುಕರಣೆ ಮಾಡುತ್ತಿದೆ. ಮೇಲ್ನೋಟಕ್ಕೆ ಸರ್ಕಾರವು ಜನರ ಆರೋಗ್ಯದ ಕಾಳಜಿಗಾಗಿ ವೆಚ್ಚ ಮಾಡುತ್ತಿದೆ ಎಂದು ಕಂಡರೂ ಅದು ಒಳಗೊಳಗೆ ಖಾಸಗಿ ಕಾರ್ಪೊರೇಟ್‍ಗಳ ವೈದ್ಯಕೀಯ ವಹಿವಾಟಿಗೂ ಹರಿದುಹೋಗುವಂತಹ ರಚನೆಯನ್ನು ವ್ಯವಸ್ಥಿತವಾಗಿ ಹೆಣೆಯಲಾಗಿದೆ.
ಇನ್ನೂ ದುರಂತವೆಂದರೆ, ಭಾರತವು ತನ್ನ ಆಂತರಿಕ ಒಟ್ಟು ಉತ್ಪನ್ನದ ಶೇಕಡ 1.3ನ್ನು ಮಾತ್ರ ತನ್ನ ಜನರ ಆರೋಗ್ಯಕ್ಕಾಗಿ ವೆಚ್ಚ ಮಾಡುತ್ತಿದೆ. ಕೇವಲ ಶೇಕಡ 1.3 ರಷ್ಟು ಮಾತ್ರ! ಇದೊಂದು ರೀತಿ ಭಿಕ್ಷೆ ಕೊಟ್ಟಂತೆ ಇದೆ. ಇಂಥದರಲ್ಲೂ ಖಾಸಗಿ ಕಾರ್ಪೊರೇಟ್ ವಹಿವಾಟಿಗೆ ಹಣ ಹರಿದು ಹೋಗುತ್ತಿದೆ. ಈಗ ಭಾರತ ಆಳ್ವಿಕೆಯನ್ನು ಮಾನವೀಯಗೊಳಿಸುವುದು ಹೇಗೆ ಎಂಬುದೇ ಇಂದಿನ ದೊಡ್ಡ ಸವಾಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ಕ್ಷೇತ್ರಕ್ಕೆ ಆಂತರಿಕ ಒಟ್ಟು ಉತ್ಪನ್ನದಲ್ಲಿ ಶೇಕಡ 15ರಷ್ಟನ್ನು ವೆಚ್ಚ ಮಾಡಬೇಕೆಂದು ಹೇಳುತ್ತದೆ. ಸದ್ಯಕ್ಕಂತು ಭಾರತಕ್ಕೆ ಇದು ಕನಸಿನ ಮಾತು. ನಮ್ಮಂತೆಯೇ ಜನ ಸಾಂದ್ರತೆ ಉಳ್ಳ ಚೈನಾ ದೇಶವು ತನ್ನ ಆಂತರಿಕ ಒಟ್ಟು ಉತ್ಪನ್ನದಲ್ಲಿ ಶೇಕಡ 5.4 ರಷ್ಟನ್ನು ತನ್ನ ಜನರ ಆರೋಗ್ಯಕ್ಕಾಗಿ ವೆಚ್ಚ ಮಾಡುತ್ತಿದೆ.
ಮೊದಲಿಗೆ, ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ ಹಾಗೂ “ಮುನ್ನೆಚ್ಚರಿಕೆ ಆರೋಗ್ಯ ಹಾಗೂ ಸಾಮಾಜಿಕ ಸ್ವಾಸ್ಥ್ಯ ಸಂರಕ್ಷಣೆ (Preventive and Social Medicine)’ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವುದು ಜನ ಸಮುದಾಯದ ಆರೋಗ್ಯವನ್ನು ಕಾಪಾಡಬಹುದೇ ಹೊರತು ಕಾರ್ಪೋರೇಟ್ ಸಂಸ್ಥೆಗಳಿಗೆ ಕೊಡುವ `ವಿಮೆ’ ಮೊತ್ತದಿಂದಲ್ಲ ಎಂಬುದನ್ನು ಮನಗಾಣಬೇಕಾಗಿದೆ. ಈ ಅರಿವಿನೊಡನೆ ಕಾರ್ಯಪ್ರವೃತ್ತರಾಗಬೇಕಿದೆ.
ಈ ದಿಕ್ಕಿನಲ್ಲಿ ಮೊಟ್ಟಮೊದಲನೆಯದಾಗಿ ಸರ್ಕಾರಿ ಆಸ್ಪತ್ರೆ/ಆರೋಗ್ಯ ಕೇಂದ್ರಗಳನ್ನು ಹಸ್ತಾಂತರಿಸುವ ಎಲ್ಲಾ ಒಪ್ಪಂದ/ಯೋಜನೆಗಳನ್ನು ರದ್ದು ಮಾಡಬೇಕು. ಈವರೆಗೆ ಹಸ್ತಾಂತರಗೊಂಡಿರುವುದನ್ನು ವಾಪಸ್ಸು ಪಡೆದು ಸರ್ಕಾರವೇ ನಿರ್ವಹಿಸಬೇಕು. ಜೊತೆಗೆ ಭಾರತದಲ್ಲಿ ಖಾಸಗಿ ಆಸ್ಪತ್ರೆಗಳು ಲಕ್ಷಾಂತರ ಕೋಟ್ಯಾಂತರ ರೂಪಾಯಿಗಳನ್ನು ರೋಗಪತ್ತೆ, ಆಪರೇಷನ್ ಉಪಕರಣಗಳ ಮೇಲೆ (ಸಾಲ ಸೋಲ ಮಾಡಿಯೂ ಇರಬಹುದು) ವಿನಿಯೋಗಿಸಿವೆ. ಹೀಗಿರುವಾಗ ಆ ಸಾಲಸೋಲದ ಬಡ್ಡಿ ತೀರಿಸುವುದಕ್ಕಾಗಿ ಹಾಗೂ ದುಬಾರಿ ವೆಚ್ಚದ ವೈದ್ಯ, ಆಡಳಿತಾತ್ಮಕ ನಿರ್ವಹಣೆಗಾಗಿ- ಯಾರೇ ರೋಗಿ ಖಾಸಗಿ ಆಸ್ಪತ್ರೆ ಒಳಕ್ಕೆ ಬಂದರೂ ಮಿಕ ಸಿಕ್ಕಿದಂತೆ ಶಕ್ತ್ಯಾನುಸಾರ ಅನಾವಶ್ಯಕ ಪರೀಕ್ಷೆಗಳು, ಅನಾವಶ್ಯಕ ಆಪರೇಷನ್‍ಗಳು ಜರುಗಲೂಬಹುದು. ಕೋಟ್ಯಾಂತರ ಸಾಲ ಮಾಡಿ ಓದಿ ಕೆಲಸ ಪಡೆದವನು ಅದನ್ನು ತೀರಿಸಲು ಲಂಚ ಹೊಡೆಯುವ ಕ್ರಿಯೆಯಂತೆ ಇದು ಕೂಡ. ಇದು ಇಡೀ ವ್ಯವಸ್ಥೆಯೇ ಭ್ರಷ್ಟಗೊಂಡಿರುವುದರ ಪರಿಣಾಮ. ಇದನ್ನೂ ಅರ್ಥ ಮಾಡಿಕೊಂಡು ಈ ಜಟಿಲ ಸಮಸ್ಯೆಗೂ ಮುಖಾಮುಖಿಯಾಗಬೇಕಾಗಿದೆ.
ಈಗ, ಭಾರತದ ಅಮಾನವೀಯವಾದ ಆರೋಗ್ಯ ಕ್ಷೇತ್ರವನ್ನು ಮಾನವೀಯಗೊಳಿಸಬೇಕಾಗಿದೆ. ಅದಕ್ಕಾಗಿ ಇಷ್ಟನ್ನಾದರೂ ಕೇಳಲೇಬೇಕಾಗಿದೆ.
1. ಭಾರತವು ತನ್ನ ಆಂತರಿಕ ಒಟ್ಟು ಉತ್ಪನ್ನ GDP ಯಲ್ಲಿ ಕನಿಷ್ಠ 5 ರಷ್ಟನ್ನಾದರೂ ವೆಚ್ಚ ಮಾಡಬೇಕು.
2. ಈ ವೆಚ್ಚವು ಸರ್ಕಾರಿ ಆರೋಗ್ಯ ಕ್ಷೇತ್ರವನ್ನು ಸಮರ್ಥ ಹಾಗೂ ಸುವ್ಯವಸ್ಥೆ ಮಾಡುವುದಕ್ಕಾಗಿ ಮಾತ್ರವೇ ವೆಚ್ಚವಾಗಬೇಕು.
3. ಮುಖ್ಯವಾಗಿ ಹೋಬಳಿ ಕೇಂದ್ರದಲ್ಲಿ ಒಂದು ವ್ಯವಸಿತವಾದ ವಿಶಾಲವಾದ ಪ್ರಾಥಮಿಕ ಆಸ್ಪತ್ರೆ ಆವರಣ ರೂಪಿಸಬೇಕು. ವೈದ್ಯ ಹಾಗೂ ಸಿಬ್ಬಂದಿ ವರ್ಗದ ವಾಸಸ್ಥಳವೂ ಆಸ್ಪತ್ರೆಯ ಆವರಣದಲ್ಲೇ ಬೇಕು.
ಇದಿಷ್ಟನ್ನಾದರೂ ಜನಸಮುದಾಯ ಕೇಳಲೇಬೇಕಾಗಿದೆ.
(ಆ)
ಇದ್ದುದರಲ್ಲೆ ಒಂದಿಷ್ಟು ಕಾರ್ಯಕ್ರಮ
1. ಬಹಳ ಮುಖ್ಯವಾಗಿ ಔಷಧ ಮತ್ತು ಲಸಿಕೆ ತಯಾರಿಕಾ ಕೇಂದ್ರವನ್ನು ಸ್ಥಾಪಿಸಬೇಕು. ಜನರಿಕ್ ಔಷಧಿ ಉತ್ಪಾದನೆ ಹಾಗೂ ಅದನ್ನು ಹೆಚ್ಚಾಗಿ ಬಳಸುವಂತಾಗಲು ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ ಸಂಶೋಧನೆಗೆ ಆದ್ಯತೆ ನೀಡಬೇಕು.
2. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಾದರೂ ಕಲುಷಿತ ನೀರಿನಿಂದಾಗಿ ಬರುವ ನಾನಾ ಖಾಯಿಲೆ ಕಸಾಲೆಗಳು ಕಮ್ಮಿಯಾಗುತ್ತದೆ. ಹಳ್ಳಿಯಿಂದ ದಿಳ್ಳಿವರೆಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು.
3. ವಿವಾದಾತ್ಮಕವಾಗಿರುವ ಪ್ಲಾಸ್ಟಿಕ್ ಬಾಟಲ್ ಕುಡಿಯುವ ನೀರನ್ನು ನಿಷೇಧಿಸಬೇಕು.
4. ಹಳ್ಳಿ ನಗರ ಎನ್ನದೆ ಚರಂಡಿ ವ್ಯವಸ್ಥೆ ಇರಬೇಕು. ಅವನ್ನು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು.
5. ಭಾರತದ ಸಹಜ ಸಹವಾಸಿಯಾದ ತ್ಯಾಜ್ಯಗಳಿಂದ ವಿದ್ಯುತ್ ಉತ್ಪಾದನೆ ಹಾಗೂ ಗೊಬ್ಬರ ತಯಾರಿಸುವ ವ್ಯವಸ್ಥೆಯಾಗಬೇಕು. ತುಂಬಾ ತುರ್ತಾಗಿ. ಹಾಗೇ ತ್ಯಾಜ್ಯವನ್ನು ಸೃಷ್ಟಿಸುತ್ತಿರುವ ನಗರಗಳ ಬೆಳವಣಿಗೆಯನ್ನು ಮಿತಿಗೊಳಿಸಬೇಕು. ತುಂಬಾ ತುರ್ತಾಗಿ. ಗ್ರಾಮ ಪಂಚಾಯಿತಿಯ ಮೇಲ್ವಿಚಾರಣೆಯಲ್ಲಿ ಹಳ್ಳಿಗಳ ನಾಕಾ ದಿಕ್ಕಲ್ಲೂ ಸುಸಜ್ಜಿತ ತಿಪ್ಪೆ ಗುಂಡಿಗಳ ವ್ಯವಸ್ಥೆ ಆಗಬೇಕು ತುಂಬ ತುರ್ತಾಗಿ. ಅಲ್ಲಿನ ತ್ಯಾಜ್ಯಗಳನ್ನು ಗೊಬ್ಬರ ಹಾಗೂ ವಿದ್ಯುತ್ ಆಗಿ ಪರಿವರ್ತಿಸುವ ವ್ಯವಸ್ಥೆ ಆಗಬೇಕು. ತುಂಬಾ ತುರ್ತಾಗಿ.

(ಇ)
1. ಮೂಲನಿವಾಸಿ ಹಾಗೂ ನಾಟಿ ವೈದ್ಯ ಸಾಂಪ್ರದಾಯಿಕ ಆರೋಗ್ಯ ಜನಜ್ಞಾನದ ಔಷಧಿಗಳ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ಪರೀಕ್ಷೆಗೊಳಪಡಿಸಿ ಗುಣಾತ್ಮಕವಾದುದನ್ನು ಪ್ರಚುರಗೊಳಿಸಬೇಕು.
2. ಆಹಾರವೇ ಔಷಧವಾಗುವ ಗುಣ ಪಡೆದ ಆಹಾರ ವೈವಿಧ್ಯಗಳನ್ನು ಉತ್ತೇಜಿಸಬೇಕು.
3. ಪರ್ಯಾಯ ಆರೋಗ್ಯಶಾಸ್ತ್ರಗಳಾದ ಆಯುರ್ವೇದ, ಯುನಾನಿ, ಸಿದ್ಧ ಪದ್ಧತಿಗಳ ಸಂಶೋಧನೆಗೆ ಉತ್ತೇಜನ ನೀಡಿ, ಪ್ರಚುರಪಡಿಸಬೇಕು.
4. ಹಾಗೇ ಕೆಲವು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವ ಆಕ್ಯುಫ್ರೆಶರ್, ಅಕ್ಯುಪಂಚರ್, ಧ್ಯಾನ, ಪ್ರಾಣಾಯಾಮಗಳಿಗೂ ಉತ್ತೇಜನ ನೀಡಬೇಕು.
– ಹೀಗೆ

ಪ್ರಕಟಣೆ ಸಂಬಂಧಿ
ಪುಸ್ತಕ ಪ್ರಕಟಣೆ: ಕರ್ನಾಟಕದಲ್ಲಿ ಪುಸ್ತಕ ಪ್ರಕಟಣೆಯ ಹಿಂದೆ ಒಂದು ಸಾಹಸ ಯಶೋಗಾಥೆಯೆ ಇದೆ. ಪುಸ್ತಕಗಳನ್ನು ಪ್ರಕಟಿಸಿ, ಆ ಪುಸ್ತಕಗಳ ಮೂಟೆಯನ್ನು ಪ್ರಕಾಶಕರು/ಲೇಖಕರು ತಮ್ಮ ಬೆನ್ನ ಮೇಲೆ ಹೊತ್ತು ಮನೆಮನೆಗೆ ಮಾರಾಟ ಮಾಡುತ್ತಿದ್ದ ಇತಿಹಾಸವಿದೆ. ಈ ಪುಸ್ತಕ ಸಂಸ್ಕೃತಿಯನ್ನು ಗೌರವಿಸಬೇಕು. ಅದಕ್ಕಾಗಿ ಪುಸ್ತಕಗಳನ್ನು ಸರ್ಕಾರ/ಗ್ರಂಥಾಲಯ/ಶಾಲಾ ಕಾಲೇಜುಗಳು ನೇರವಾಗಿ ಲೇಖಕ/ಪ್ರಕಾಶಕರಿಂದಲೇ ಕೊಂಡುಕೊಳ್ಳುವುದು ಕಡ್ಡಾಯವಾಗಬೇಕು. ಈಗಿನ E-tender ಮೂಲಕ ಪುಸ್ತಕ ಕೊಳ್ಳುವ ವ್ಯವಹಾರವು ಪುಸ್ತಕ ಪ್ರಕಟಣೆಯ ಸಂಸ್ಕೃತಿಗೆ ವ್ಯತಿರಿಕ್ತವಾದುದರಿಂದ ಅದನ್ನು ಕೈ ಬಿಡಬೇಕು.
ಪತ್ರಿಕಾ ಉತ್ತೇಜನ: ಜಿಲ್ಲಾಮಟ್ಟದ ಪತ್ರಿಕೆಗಳಿಗೆ ಹೆಚ್ಚು ಉತ್ತೇಜನ ನೀಡಬೇಕು. ಎಷ್ಟೋ ಜಿಲ್ಲಾಮಟ್ಟದ ಪತ್ರಿಕೆಗಳು ರಾಜ್ಯಮಟ್ಟದ ಪತ್ರಿಕೆಗಳ ಸಮಕ್ಕೆ ಪ್ರಸರಣ ಸಂಖ್ಯೆ ಹೊಂದಿದ್ದರೂ ಜಿಲ್ಲಾ ಪತ್ರಿಕೆ ಎಂಬ ಕಾರಣಕ್ಕೆ ಜಾಹಿರಾತು ಮೊದಲಾಗಿ ಉತ್ತೇಜನ ಸಿಗುತ್ತಿಲ್ಲ. ಇದು ಅಕ್ಷಮ್ಯ. ಜಿಲ್ಲಾಮಟ್ಟದ ಪತ್ರಿಕೆಗಳಿಗೆ ಅದರ ಪ್ರಸರಣ ಸಂಖ್ಯೆಯು ರಾಜ್ಯಮಟ್ಟದ ಪತ್ರಿಕೆಯ ಪ್ರಸರಣ ಸಂಖ್ಯೆಯ ಶೇಕಡ 25 ರಷ್ಟು ಇದ್ದರೂ ರಾಜ್ಯಮಟ್ಟದ ಪತ್ರಿಕೆಗಳಿಗೆ ಕೊಡುವಷ್ಟೇ ಜಾಹಿರಾತು ಮುಂತಾಗಿ ಉತ್ತೇಜನ ಜಿಲ್ಲಾಮಟ್ಟದ ಪತ್ರಿಕೆಗಳಿಗೂ ಸಿಗುವಂತಾಗಬೇಕು.

ಗ್ರಂಥಾಲಯ: ಎಲ್ಲಾ ಶಾಲಾ ಆವರಣದಲ್ಲೂ ಪ್ರತ್ಯೇಕವಾದ ಗಾಳಿ ಬೆಳಕಿನ ಸಾರ್ವಜನಿಕ ಗ್ರಂಥಾಲಯ ಕೇಂದ್ರ ಸ್ಥಾಪಿತವಾಗಬೇಕು.

ಪಠ್ಯ ರಚನೆ: ಶಾಲಾ ಪಠ್ಯಗಳಲ್ಲಿ ಭಾರತೀಯ ಸಂಸ್ಕøತಿಯ ಸಹನೆ- ಪ್ರೀತಿ- ಸಹಬಾಳ್ವೆ ಮೌಲ್ಯದ ಪಾಠಗಳಿರಬೇಕು. ಆಯಾಯ ವಿಷಯ ತಜ್ಞರಿಂದಲೇ ಪಠ್ಯಗಳ ರಚನೆ ಹಾಗೂ ಪರಿಶೀಲನೆಯಾಗಬೇಕು. ರಾಜಕೀಯ ಹಸ್ತಕ್ಷೇಪ ಕೂಡದು.

ಒಳ್ಳೆಯ ಆಳ್ವಿಕೆಗಾಗಿ
ಒಂದು ಸಮಾಜದ ಗತಿಯು ಸ್ಥೂಲವಾಗಿ- ಹಿಂಚಲನೆ- ಯಥಾಸ್ಥಿತಿ- ಮುಂಚಲನೆಗಳ ನಡುವೆ ಕಲೆಸಿಕೊಂಡಿರುತ್ತದೆ. ಉದಾಹರಣೆಗೆ ಭಾರತವು ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಭಾರತದ ಸಮಾಜಕ್ಕೆ ಹಿಂಚಲನೆಯ ಸೆಳೆತವೂ ಇತ್ತು. ಜೊತೆಗೆ ಯಥಾಸ್ಥಿತಿಯನ್ನೂ ಬಯಸುತ್ತಿತ್ತು. ಆದರೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಮುಂಚಲನೆಯ ಕನಸುಗಳಿದ್ದವು. ಇಚ್ಛಾಶಕ್ತಿಯೂ ಇತ್ತು. ಹಾಗಾಗಿ ಸ್ವಾತಂತ್ರ್ಯ ಪಡೆದ ತದನಂತರದ ಆಳ್ವಿಕೆಯು ಕೆಲಕಾಲ ಮುಂಚಲನೆಯ ದಿಕ್ಕಿಗೆ ಹೆಜ್ಜೆಗಳನ್ನು ಇಡುತ್ತಿತ್ತು. ಕಾಲಾನಂತರ ಮತ್ತೆ ಯಥಾಸ್ಥಿತಿಯ ನಿರ್ವಹಣೆ ಮಾಡುವುದೇ ಆಳ್ವಿಕೆಯ ಸ್ವಭಾವವಾಗಿಬಿಟ್ಟಿತು. ಆದರೀಗ? ಉಲ್ಟಾ ಆಗಿದೆ. ಇಂದಿನ ಆಳ್ವಿಕೆಯು ಯಥಾಸ್ಥಿತಿಯ ಜಡ ಸಮಾಜಕ್ಕಿಂತ ತಾನೇ ಹಿಂದುಹಿಂದಕ್ಕೆ ಹೋಗುತ್ತಿದೆ. ಭೂತವನ್ನು ವರ್ತಮಾನದಲ್ಲಿ ಸ್ಥಾಪಿಸಲು ಹವಣಿಸುತ್ತಿದೆ. ವ್ಯವಸ್ಥೆ ವಿರೋಧಿ ದನಿಗಳನ್ನು ದೇಶದ್ರೋಹಿ, ಧರ್ಮದ್ರೋಹಿ ಎಂದು ಕರೆಯುತ್ತಿರುವುದು ಕೂಡ ಹಿಂಚಲನೆಯ ಲಕ್ಷಣವೇ ಆಗಿದೆ. ವ್ಯವಸ್ಥೆ ವಿರೋಧಿ ಅಭಿವ್ಯಕ್ತಿಯು ಹಿಂಚಲನೆಗೆ ದೇಶದ್ರೋಹಿ ಕ್ರಿಯೆಯಾಗಿ ಕಂಡರೆ, ಯಥಾಸ್ಥಿತಿಗೆ ಸಮಾಜ ಕಂಟಕವಾಗಿ ಕಾಣುತ್ತದೆ. ಆದರೆ ಅದೇ ಮುಂಚಲನೆಯು, ವ್ಯವಸ್ಥೆ ವಿರೋಧಿ ಅಭಿವ್ಯಕ್ತಿಗಳನ್ನು ತನ್ನ ನಡಿಗೆಗೆ ಸುಳಿವುಗಳು ಎಂಬಂತೆ ನೋಡುತ್ತದೆ- ಈ ನೋಟ ಒಂದು ಒಳ್ಳೆಯ ಆಳ್ವಿಕೆಗೆ ಬೇಕು.

ಸಾರ್ವಜನಿಕ ಸಂಪತ್ತು: ಒಂದು ಆಳ್ವಿಕೆಯು ಸಾರ್ವಜನಿಕ ಸಂಪತ್ತನ್ನು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಯನ್ನು ಮಾರಿಕೊಂಡು ಕಾಲಾವಧಿ ಮುಗಿಸುವ ಜೀವನ ಸಾಗಿಸುವಂತಾಗಬಾರದು. ಎಷ್ಟೇ ಕಷ್ಟ ಎದುರಾದರೂ ಸಾರ್ವಜನಿಕ ಆಸ್ತಿ ಸಂಪತ್ತನ್ನು ಉಳಿಸಿಕೊಳ್ಳುವುದಕ್ಕೆ ಬದ್ಧವಾಗಿರಬೇಕು. ಮನೆ ಮಾರಿ ವೆಚ್ಚ ಮಾಡಿ ಆ ತನ್ನ ಮನೆಗೇನೇ ಕಾವಲುಗಾರನಂತಾಗುವ ಪರಿಸ್ಥಿತಿಯನ್ನು ತಂದುಕೊಳ್ಳಬಾರದು.

ಲೋಕಾಯುಕ್ತ: ಒಂದು ಒಳ್ಳೆ ಆಳ್ವಿಕೆಯು ತಾನು ಭ್ರಷ್ಟಗೊಳ್ಳದಂತಾಗಲು ತನ್ನ ಮೇಲೆ ತಾನೇ ಸ್ವಯಂ ನಿಯಂತ್ರಣ ಹೇರಿಕೊಳ್ಳುವ ವಿವೇಕ ತೋರಿಸಬೇಕಾಗುತ್ತದೆ. ಇದರಲ್ಲಿ ಲೋಕಾಯುಕ್ತ ಪ್ರಮುಖವಾದುದು. ಅದಕ್ಕಾಗಿ ರಾಜ್ಯದಲ್ಲಿ ಹಾಲಿ ಇರುವ ಎ.ಸಿ.ಬಿ. (A.C.B) ಸ್ಥಾಪನೆ ಆದೇಶವನ್ನು ಹಿಂಪಡೆಯಬೇಕು. ಲೋಕಾಯುಕ್ತ ಪೊಲೀಸ್ ವಿಭಾಗವನ್ನು ಸ್ವತಂತ್ರ ತನಿಖಾ ಸಂಸ್ಥೆಯಾಗಿಸಬೇಕು. ಹಾಗೂ RTI ಕಾರ್ಯಕರ್ತರು ನಿರ್ಬಿಢೆಯಿಂದ ಕೆಲಸ ಮಾಡುವ ವಾತಾವರಣ ಉಂಟುಮಾಡಬೇಕು. ಹಾಗೂ ಬೇನಾಮಿ ಆಸ್ತಿ ಪತ್ತೆ ಮಾಡಿ ದಾಖಲೆ ನೀಡುವ ವ್ಯಕ್ತಿ/ಸಂಘ ಸಂಸ್ಥೆಗಳಿಗೆ ಉತ್ತೇಜನ ಹಾಗೂ ರಕ್ಷಣೆ ನೀಡಬೇಕು. ಪತ್ತೆ ಮಾಡಲ್ಪಟ್ಟ ಆಸ್ತಿಯ ಮೌಲ್ಯದ ಶೇಕಡ 10 ರಷ್ಟು ಗೌರವಧನವನ್ನು ನೀಡಬೇಕು. ಪ್ರಾಸ್ತಾವಿತ ಕಾನೂನು ಜಾರಿಗೆ ಬರಬೇಕು.
ಆಹಾರ: ಆಹಾರದ ಹಕ್ಕು ಮಾತ್ರವಲ್ಲ; ಆಹಾರದ ಆಯ್ಕೆಯೂ ಹಕ್ಕಾಗಬೇಕು. ಒಂದು ಒಳ್ಳೆಯ ಆಳ್ವಿಕೆಯ ಸಾಮಥ್ರ್ಯ ಅದರ `ಆಹಾರ ಸಾರ್ವಭೌಮತ್ವ (Food Sovereignty))’ ದಲ್ಲಿರುತ್ತದೆ.

ಸಹಭಾಗಿ ಪ್ರಜಾಪ್ರಭುತ್ವ: ರಾಜಕಾರಣ/ಆಡಳಿತದ ನಿರ್ಣಾಯಕ ಭಾಗವಹಿಸುವಿಕೆಯಲ್ಲಿ ಮೂಲನಿವಾಸಿಗಳು ಬಾಯಿಲ್ಲದವರಾಗಿದ್ದಾರೆ, ಅವರನ್ನು ಒಂದು ಜೀವ ಎಂದು ನೋಡದೆ ಅಸ್ತ್ರ ಎಂಬಂತೆ ಬಳಸಿಕೊಳ್ಳಲಾಗುತ್ತಿದೆ. ಅವರ ಇಂದಿನ ಜೀವನ ಸ್ಥಿತಿ ಕಾಡಿನ ಒಳಗೂ ಇಲ್ಲ ಹೊರಗೂ ಇಲ್ಲ ಎಂಬಂತಾಗಿಬಿಟ್ಟಿದೆ. ಅಲೆಮಾರಿಗಳು ಅಲೆಯುತ್ತಲೇ ಇದ್ದಾರೆ. ಅಲ್ಪಸಂಖ್ಯಾತರಲ್ಲಿ ಕ್ರಿಶ್ಚಿಯನ್ನರು ಅದರಲ್ಲೂ ಮುಸ್ಲಿಮರಂತೂ ರಾಜಕಾರಣ/ಆಡಳಿತದ ಭಾಗವಹಿಸುವಿಕೆಯಲ್ಲಿ ಕಾಣಿಸದಿರುವಂತೆ ವ್ಯವಸ್ಥಿತವಾಗಿ ಸಂಚು ರೂಪಿಸಲಾಗುತ್ತಿದೆ. ಕೋಮುವಾದಿ ಪಕ್ಷದ ಆಳ್ವಿಕೆಯಲ್ಲಿ ಅಲ್ಪಸಂಖ್ಯಾತರ ಪ್ರಾತಿನಿಧ್ಯ ಇಲ್ಲವೇ ಇಲ್ಲ ಎನ್ನಬಹುದು. ಹಾಗೂ ಜಾತಿಪದ್ಧತಿಯಿಂದ ಹೊರಗಿಟ್ಟಿದ್ದ ದಲಿತ ಸಮುದಾಯವನ್ನು ಒಳಗೊಳ್ಳದಿರುವ ಹುನ್ನಾರವೂ ಜರುಗುತ್ತಿದೆ. ಮಹಿಳೆಯರು ಒಳಗಿದ್ದೂ ಹೊರಗಿನವರಾಗಿದ್ದಾರೆ. ಕಳೆದ ಹದಿನಾರು ವರ್ಷಗಳಿಂದಲೂ 33% ಮಹಿಳಾ ಮೀಸಲಾತಿ ನೆನೆಗುದಿಗೆ ಬಿದ್ದಿರುವುದೇ ಇದಕ್ಕೆ ಸಾಕ್ಷಿ. ಬಹುಸಂಖ್ಯಾತ ಸಮುದಾಯದ ಭಾಗವಹಿಸುವಿಕೆ ಇಲ್ಲದ ಪ್ರಜಾಪ್ರಭುತ್ವ ಇದು. ಭಾರತದ ಪ್ರಜಾಪ್ರಭುತ್ವಕ್ಕೆ ಲಕ್ವ ಹೊಡೆದಿದೆ.
ಈಗಲಾದರೂ ಆರೋಗ್ಯಕರ ಪ್ರಜಾಪ್ರಭುತ್ವದ ದಿಕ್ಕಿಗೆ ಹೆಜ್ಜೆಗಳನ್ನಿಡಬೇಕಾಗಿದೆ. ಮೊದಲ ಹೆಜ್ಜೆಯಾಗಿ ಕೆಳಮನೆಯಲ್ಲಿ ಯಾರಿಗೆ ಪ್ರಾತಿನಿಧ್ಯ ಇಲ್ಲವೋ ಆ ಸಮುದಾಯಗಳಿಗೆ ಮೇಲ್ಮನೆಯಲ್ಲಿ ಆ ಸಮುದಾಯಗಳ ಸಂಖ್ಯಾನುಗುಣ ಪ್ರಾತಿನಿಧ್ಯದ ಅವಕಾಶ ಕಲ್ಪಿಸಿ ಸ್ವಲ್ಪವಾದರೂ ಪ್ರಜಾಪ್ರಭುತ್ವವನ್ನು ಗುಣಮುಖವಾಗಿಸಬೇಕಾಗಿದೆ. ಅವಕಾಶ ವಂಚಿತರು- ಉದ್ಯೋಗಾವಕಾಶ, ರಾಜಕೀಯ ಪ್ರಾತಿನಿಧ್ಯ ಹೀಗೆ ಅವಕಾಶ ಪಡೆಯುವಂತಾಗುವುದು ಪ್ರಜಾಪ್ರಭುತ್ವದ ಉಳಿವಿಗಾಗಿ ಅಗತ್ಯವಿದೆ.

ಒಕ್ಕೂಟ ವ್ಯವಸ್ಥೆ: ಭಾರತದ ಪ್ರಜಾಪ್ರಭುತ್ವದ ಅಂತರ್ಗತ ರಚನೆಯು ಅದರ ಒಕ್ಕೂಟ ವ್ಯವಸ್ಥೆಯಲ್ಲಿದೆ. ಇಂದು ಒಕ್ಕೂಟ ವ್ಯವಸ್ಥೆಯು ನಾಮಮಾತ್ರವಾಗಿದೆ. ಪ್ರಜಾಪ್ರಭುತ್ವಕ್ಕೆ ಒಳೇಟು ಎಂದೇ ಇದನ್ನು ಪರಿಗಣಿಸಬೇಕು. ಒಕ್ಕೂಟ ವ್ಯವಸ್ಥೆಯನ್ನು ಪುನರ್ ರೂಪಿಸಬೇಕಿದೆ. ದೇಶ ಎಂದರೆ ರಾಜ್ಯಗಳ ಒಕ್ಕೂಟ; ಹಾಗೇ ರಾಜ್ಯ ಎಂದರೆ ಜಿಲ್ಲೆಗಳ ಒಕ್ಕೂಟ ಎಂದು ಪರಿಗಣಿಸಿ ಜಿಲ್ಲಾ ಆಳ್ವಿಕೆಗೆ ಹೆಚ್ಚು ಬಲ ತುಂಬುವುದರಲ್ಲೆ ಒಕ್ಕೂಟ ವ್ಯವಸ್ಥೆಯ ಪ್ರಾಣವಿದೆ. ರಾಜ್ಯಗಳನ್ನು ಆಡಳಿತಕ್ಕೆ ಅನುಗುಣವಾಗಿ ಸಣ್ಣಸಣ್ಣ ರಾಜ್ಯಗಳನ್ನಾಗಿಸಬೇಕು. ಹಾಗೇ ಜಿಲ್ಲೆಗಳನ್ನೂ ಕೂಡ ಬೆಳೆಗಳಿಗೆ ಅನುಗುಣವಾಗಿ ಸಣ್ಣಸಣ್ಣ ಜಿಲ್ಲೆಗಳನ್ನಾಗಿಸಬೇಕು. ಕಾಲಿಲ್ಲದ ಇಂದಿನ ಜಿಲ್ಲಾ ಪಂಚಾಯತ್‍ಗೆ ಅಧಿಕಾರ, ಆದಾಯ ಮೂಲ, ಹೊಣೆಗಾರಿಕೆ ನೀಡಬೇಕಾಗಿದೆ.

ತೆರಿಗೆ: ಒಕ್ಕೂಟ ವ್ಯವಸ್ಥೆಯ ಅಸ್ತಿತ್ವವು ಇದೆಯೋ ಇಲ್ಲವೋ ಎಂಬುದು ಅದರ ತೆರಿಗೆ ಸ್ವರೂಪದಲ್ಲಿ ವ್ಯಕ್ತವಾಗುತ್ತದೆ. ಈಗ ಜಾರಿಗೆ ಬಂದಿರುವ ತೆರಿಗೆ ನೀತಿ GSTಯು ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತದೆ. ಜನಹಿತಕಾರ್ಯಗಳನ್ನು ರಾಜ್ಯಗಳು ಮಾಡದಂತೆ ಅಸಹಾಯಕವನ್ನಾಗಿಸುತ್ತದೆ. ರಾಜ್ಯಗಳು ಅಲ್ಪಸ್ವಲ್ಪವಾದರೂ ಮಾಡುತ್ತಿದ್ದ ಜನಹಿತ ಕಾರ್ಯಕ್ರಮಗಳನ್ನು ಮಾಡಲು ಅವಕಾಶ ಇಲ್ಲದಂತೆ ಮಾಡಿಬಿಡುತ್ತದೆ. ಜಾಗತಿಕ ಖಾಸಗಿ/ಕಾರ್ಪೋರೇಟ್ ಜಗತ್ತಿನ ವ್ಯಾಪಾರದ ಸಂಚಾಗಿಯೇ ಇದನ್ನು ನೋಡಬೇಕಾಗಿದೆ. ಬಲಾಢ್ಯ ದೇಶಗಳು 1. ಆಮದು-ರಫ್ತು ನೀತಿಯಲ್ಲಿ ದಬಾವಣೆ ಮಾಡುತ್ತ 2. ತನ್ನ ರಫ್ತಿಗೆ ಸಬ್ಸಿಡಿ ನೀಡುತ್ತ 3. ಸುಂಕ ಕಟ್ಟದೆ ಮೋಸದ Dumping ಮಾಡುತ್ತಾ- ಹೀಗೆಲ್ಲ ಭಾರತದಂಥಹ ಮುಂದುವರಿಯುತ್ತಿರುವ ದೇಶಗಳ ಬೆಳೆ, ಉದ್ಯೋಗ, ಬಹುತ್ವವನ್ನೆಲ್ಲ ಸರ್ವನಾಶ ಮಾಡಿಬಿಡುತ್ತಿದೆ. ಬಲಾಢ್ಯ ದೇಶಗಳಿಗೆ ನಮ್ಮಂತಹ ದೇಶಗಳು ಅವಲಂಬಿತರಾಗಿ ಬಿಡುವ ಈ ಪರಿಸ್ಥಿತಿಯು ದೇಶದೊಳಗೆ ಅನಿಶ್ಚಿತ ಕೆಲಸಗಳನ್ನು ಹುಟ್ಟುಹಾಕುತ್ತ ಈ ದಿಕ್ಕೆಟ್ಟ ಅನಿಶ್ಚಿತ ಸ್ಥಿತಿಯಿಂದಾಗಿ ಪ್ರತಿರೋಧವೂ ಇಲ್ಲದಂತಾಗಿ ಜನಸಮುದಾಯವು ಜಾಗತಿಕ ಖಾಸಗಿ/ಕಾರ್ಪೋರೇಟ್ ಕಂಪನಿಗಳಿಗೆ ಜೀತದಾಳಾಗಿ ದುಡಿಯುವಂತಾಗಿಸುವ ಸಂಚಿನ ಬಲೆ ಇದಾಗಿದೆ. ಯಾವುದೇ ಅವಲಂಬಿ ಬದುಕು ಮನುಷ್ಯನ ಚೈತನ್ಯವನ್ನೆ ತಿಂದು ಹಾಕಿಬಿಡುತ್ತದೆ. ಈ ಅರಿವು ಒಳ್ಳೆಯ ಆಳ್ವಿಕೆಗೆ ಇರಬೇಕಾಗಿರುತ್ತದೆ. ಒಕ್ಕೂಟ ವ್ಯವಸ್ಥೆಗೆ ಪೂರಕವಾದ ತೆರಿಗೆಯ ಮಧ್ಯಮ ಮಾರ್ಗವೊಂದನ್ನು ಕಂಡುಕೊಳ್ಳಬೇಕಾಗಿದೆ.

ನೀತಿ ನಿರೂಪಣೆ: ದುರಂತವೆಂದರೆ, ಎಲ್ಲಾ ಕ್ಷೇತ್ರಗಳಲ್ಲು ಸರ್ಕಾರಗಳ ನೀತಿ ನಿರೂಪಣೆಗಳನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಖಾಸಗಿ/ಕಾರ್ಪೋರೇಟ್ ಬಂಡವಾಳಶಾಹಿಗಳೇ ರೂಪಿಸುತ್ತಿದ್ದಾರೆ. ಇದು ಘೋರ ದುರಂತ. ಇದು ಕುರಿ ಸಾಕಾಣಿಕೆಯನ್ನು ವ್ಯವಸ್ಥಿತಗೊಳಿಸಲು ತೋಳಗಳ ಕೈಗೆ ನೀತಿ ನಿರೂಪಣೆ ಮಾಡಲು ವಹಿಸಿದಂತೆ! ವಾಜಪೇಯಿ ಸರ್ಕಾರವಿದ್ದಾಗ ಶಿಕ್ಷಣ ನೀತಿ ನಿರೂಪಣೆಗೆ `ಬಿರ್ಲಾ ಅಂಬಾನಿ ಸಮಿತಿ’ ಮಾಡಿ ವಹಿಸಲಾಗಿತ್ತು. ಶಿಕ್ಷಣಕ್ಕೂ ಇವರಿಗೂ ಏನು ಸಂಬಂಧ? ಆಯಾ ಕ್ಷೇತ್ರದ ತಜ್ಞರ ನೇತೃತ್ವದಲ್ಲಿ ನಾಗರೀಕರು/ಜನಪ್ರತಿನಿಧಿಗಳನ್ನು ಒಳಗೊಂಡು ನೀತಿ ನಿರೂಪಣಾ ಸಮಿತಿ ರೂಪಿಸಬೇಕು. ಅನುಷ್ಠಾನಕ್ಕೆ ಮೊದಲು ಆಯಾಯ ಕ್ಷೇತ್ರದ ಸಂಶೋಧಕ ಜ್ಞಾನಿಗಳ `ಜ್ಞಾನ ಸಂಸತ್’ ಸ್ಥಾಪಿಸಿ- ನೀತಿ ನಿಯಮಗಳನ್ನು ಪರಿಶೀಲಿಸಿ ಶಾಸನ ಸಭೆಯಲ್ಲಿಟ್ಟು ಸಾರ್ವಜನಿಕ ಚರ್ಚೆಗೆ ಒಳಪಡಿಸಿ ಅಖೈರುಗೊಳಿಸಬೇಕು.

ತ್ಯಾಜ್ಯ ನಿರ್ವಹಣೆ: ಹಳ್ಳಿದಿಳ್ಳಿ ಎನ್ನದೆ ಭೌತಿಕ ತ್ಯಾಜ್ಯ ಭಾರತದ ಸಹಜ ವಾತಾವರಣವಾಗಿಬಿಟ್ಟಿದೆ. ತ್ಯಾಜ್ಯವನ್ನು ಒಳಗೇ ಇಟ್ಟುಕೊಂಡಿದ್ದೇವೆ. ತ್ಯಾಜ್ಯ ನಿರ್ವಹಣೆಯನ್ನು ಆದ್ಯತಾ ಕೆಲಸವಾಗಿಸಿ ವಿದ್ಯುತ್ ಹಾಗೂ ಗೊಬ್ಬರವಾಗಿ ಪರಿವರ್ತಿಸುವ ವ್ಯವಸ್ಥೆಯಾಗಬೇಕು. ಹಾಗೇ ಭಾರತೀಯರು ತಮ್ಮ ಮನಸಿನೊಳಗೆ ಜಾತಿ ಭೇದ ತಾರತಮ್ಯದ ಮನೋಮಲ ತ್ಯಾಜ್ಯವನ್ನು ವಿಸರ್ಜಿಸದೆ ತಮ್ಮೊಳಗೆ ಇಟ್ಟುಕೊಂಡಿದ್ದಾರೆ. ಇದನ್ನೂ ವಿಸರ್ಜಿಸಬೇಕಾಗಿದೆ. ಭಾರತೀಯರು ಜಾತಿ ತಾರತಮ್ಯದ ಮನೋಮಲವನ್ನು ವಿಸರ್ಜಿಸಿ ಶುಚಿಗೊಂಡರೆ ಆಗ ಅಲ್ಲಿ ಶ್ರೇಣಿ ಇರುವುದಿಲ್ಲ. ಶ್ರೇಣೀಕೃತವಾಗಿ ಒಬ್ಬರ ಮೇಲೆ ಒಬ್ಬರು ನಿಲ್ಲುವ ಭಾರವೂ ಇರುವುದಿಲ್ಲ. ಬದಲಾಗಿ ಒಂದೇ ನೆಲದಲ್ಲಿ ಅಕ್ಕಪಕ್ಕ ನಿಲ್ಲುವಂತಾಗುತ್ತದೆ. ಆಗ ಜಾತಿ ವೈವಿಧ್ಯತೆಗಳಿಗೆ ಸಾಂಸ್ಕೃತಿಕ  ಸ್ವರೂಪ ಪ್ರಾಪ್ತಿಯಾಗಿ ಅದೇ ಆಕರ್ಷಣೆ ಆಗಿಬಿಡಲೂಬಹುದು. ಈ ದಿಕ್ಕಲ್ಲಿ ಒಂದು ಸಣ್ಣ ಹೆಜ್ಜೆ: ಖಾಸಗಿಯಾಗಿ ಆಗಲಿ/ಸರ್ಕಾರವೇ ಆಗಲಿ ನಿವೇಶನ, ಮನೆ ಹಂಚುವಾಗ ಜಾತಿಮತಗಳು ಮಿಳಿತವಾಗುವಂತೆ ರೋಸ್ಟರ್ ಪದ್ಧತಿ ಜಾರಿಗೆ ತರಬೇಕು, ಇಂಥವು.

ಒಂದು ಅಳತೆಗೋಲು: ಒಂದು ಒಳ್ಳೆಯ ಆಳ್ವಿಕೆಗೆ ಅಳತೆಗೋಲು ಯಾವುದೆಂದರೆ- ಭಿಕ್ಷುಕರು ಇಲ್ಲದಿರುವುದು ಹಾಗೂ ಅಂಗವಿಕಲರು ತಮ್ಮ ಕೊರತೆಯಿಂದ ನರಳದೆ ಅವರವರಿಗೆ ಸೂಕ್ತವಾದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜೀವನ ಸಾಗಿಸುತ್ತ ತಾವು ಹೊರೆ ಎಂಬ ಭಾವನೆ ಇಲ್ಲದೆ ಕ್ರಿಯಾಶೀಲರಾಗಿ ಬದುಕುವುದೇ ಆಗಿದೆ.

ಭಾರತ ಉಳಿಸಲು: ನಾಳಿನ ಭಾರತಕ್ಕೆ ಆರೋಗ್ಯ ಮನಸ್ಸು ರೂಪಿಸಲೋಸುಗ, ಮೊದಲ ಹೆಜ್ಜೆಯಾಗಿ ಅಂಗನವಾಡಿಯಿಂದ ನಾಲ್ಕನೆ ತರಗತಿಯವರೆಗಾದರೂ- ಖಾಸಗಿ ಸ್ಪರ್ಧೆ ಇಲ್ಲದ, ಸಮಾನ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಾಗಬೇಕು. ನಾಳಿನ ಜನಾಂಗಕ್ಕೂ ಉಳಿಯುವಂತಾಗಲು ನದಿ ಸಂಬಂಧೀ, ಗಣಿಗಾರಿಕೆ ಸಂಬಂಧೀ, ಅರಣ್ಯ ಸಂಬಂಧೀ- ವಲಯಗಳಿಗೆ ಖಾಸಗಿ/ಕಾರ್ಪೋರೇಟ್‍ಗಳ ಪ್ರವೇಶ ನಿಷೇಧವಾಗಬೇಕು.

ಸಂಸ್ಕೃತಿ 
ಭಾರತದ ಸಂತ ಪರಂಪರೆಯ ಒಳಗಣ್ಣಿನ ನೋಟದಲ್ಲಿ ಸಂಸ್ಕೃತಿಯನ್ನು ನೋಡುವುದಾದರೆ, ಆ ನೋಟಕ್ಕೆ- ಛಿದ್ರತೆ, ತಾರತಮ್ಯಗಳೇ ದೆವ್ವವಾಗಿ ಕಾಣಿಸುತ್ತದೆ. ಐಕ್ಯತೆ, ಕೂಡಿಸುವುದೇ ದೈವವಾಗಿ ಕಾಣಿಸುತ್ತದೆ. ದೈವವನ್ನು, ಹಣ- ಅಧಿಕಾರಕ್ಕಾಗಿ ಬಳಸಿಕೊಂಡರೆ ಅದು `ಅಧಮ ಧರ್ಮ’ ಆಗುತ್ತದೆ. ಹಾಗೇ ತಮ್ಮಷ್ಟಕ್ಕೆ ತಾವೇ ಆಚರಣೆ ಮಾಡಿಕೊಂಡರೆ ಅದು `ಮಧ್ಯಮ ಧರ್ಮ’ ಆಗುತ್ತದೆ. ತನ್ನೊಳಗೆ ದೈವ ಕಂಡುಕೊಳ್ಳುವ ಪ್ರಕ್ರಿಯೆಯು `ಉನ್ನತ ಧರ್ಮ’ ಆಗುತ್ತದೆ- ಈ ದಿಕ್ಕಲ್ಲಿ ನಾವು ಚಲಿಸಬೇಕಾಗಿದೆ. ಧರ್ಮಗಳಿಗೂ ಆಧ್ಯಾತ್ಮಿಕತೆಯ ಚುಚ್ಚುಮದ್ದು ನೀಡಬೇಕಾಗಿದೆ. ಯಾಕೆಂದರೆ ಆಧ್ಯಾತ್ಮಕತೆಯ ಪ್ರಾಣ ಇಲ್ಲದ ಧರ್ಮ ಉಸಿರಿಲ್ಲದ ಹೆಣದಂತಿರುತ್ತದೆ. ಧರ್ಮಕ್ಕೆ ಸಹನೆ-ಪ್ರೀತಿ-ಸಹಬಾಳ್ವೆಯ ಚುಚ್ಚುಮದ್ದು ನೀಡಬೇಕಾಗಿದೆ.
ಆದರೆ ಇಂದಿನ ಯುಗವು ವ್ಯಾಪಾರಿ/ಮಧ್ಯವರ್ತಿ/ಜಾಹಿರಾತು ಯುಗವಾಗಿದೆ. ವ್ಯಾಪಾರಿ ದ್ರೋಹ ಹಾಗೂ ದಳ್ಳಾಳಿಯ ಮೋಡಿ ಮಾತು ಎಲ್ಲಾ ಕ್ಷೇತ್ರಗಳಲ್ಲೂ ಆವರಿಸಿಕೊಂಡುಬಿಟ್ಟಿದೆ. ರಾಜಕಾರಣದಲ್ಲೂ ರಾರಾಜಿಸುತ್ತಿದೆ. ಜೊತೆಗೆ ಇದು ದೇವರನ್ನೂ ಬಿಟ್ಟಿಲ್ಲ. ನಮಗೀಗ, 12ನೇ ಶತಮಾನದ ವಚನಕಾರ ಯುಗದ ಬಸವಣ್ಣ ನಡೆದು ನುಡಿದ ನುಡಿಗಳು ನಮ್ಮ ಕೈ ಹಿಡಿದು ನಡೆಸಬಹುದು.

ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?
ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ
ನಿಮ್ಮನೆತ್ತಬಲ್ಲರು ಕೂಡಲಸಂಗಮದೇವಾ?