ಸುರಿವಷ್ಟು ಮಳೆ ನೀರಿಗೆ ಬೊಗಸೆಯೊಡ್ಡುವುದೇ ಪರಿಹಾರ-ಎನ್.ಜೆ.ದೇವರಾಜರೆಡ್ಡಿ

ಎನ್.ಜೆ.ದೇವರಾಜರೆಡ್ಡಿ, ಜಲ ತಜ್ಞರು

ಈ ವರ್ಷವೂ ಬರಗಾಲದ ಮುನ್ಸೂಚನೆ ಕಾಣುತ್ತಿದೆ. ಮುಕ್ಕಾಲು ಪಾಲು ಮುಂಗಾರು ಹಂಗಾಮು ಮುಗಿಯುತ್ತಿದ್ದರೂ, ಯಾವ ಜಲಾಯಶವೂ ಭರ್ತಿಯಾಗಿಲ್ಲ. ಜಲಾಶಯ ಆಶ್ರಿತ ಪಟ್ಟಣ, ನಗರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಕೊಳವೆಬಾವಿಗಳಲ್ಲಿ ನೀರಿಲ್ಲ. ಮಲೆನಾಡಿನಲ್ಲೇ ಅಂತರ್ಜಲ ಬರಿದಾಗಿದೆ. ಮುಂದೆ ಬರುವಂಥ ಮಳೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ವಿಧಾನಗಳ ಕುರಿತು ಮೂರು ದಶಕಗಳಿಂದ ಜಲಸಂರಕ್ಷಣಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಜಲತಜ್ಞ ಡಾ.ಎನ್.ಜೆ.­ ದೇವರಾಜರೆಡ್ಡಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

* ಮಳೆಗಾಲದ ಸ್ವರೂಪ ಬದಲಾಗುತ್ತಿದೆ. ಯಾವ ಭರವಸೆಯೊಂದಿಗೆ ಮಳೆ ಸಂಗ್ರಹ ವಿಧಾನ ಅಳವಡಿಸಿಕೊಳ್ಳಬೇಕು?
ಇದೊಂದು ಸಾಮಾನ್ಯ ಪ್ರಶ್ನೆ. ಮಳೆ ಬಗೆಗಿನ ನಿರ್ಲಕ್ಷ್ಯವೇ ಇಂಥ ಪ್ರಶ್ನೆಗೆ ಕಾರಣ. ಒಮ್ಮೆ ದಶಕದ ಮಳೆ ಪ್ರಮಾಣ ಅವಲೋಕಿಸಿ. ವ್ಯತ್ಯಾಸವಾಗಿರುವುದು ಮಳೆ ಬೀಳುವ ಕಾಲದಲ್ಲೇ ಹೊರತು, ಪ್ರಮಾಣದಲ್ಲಿ ಅಲ್ಲ ಎಂಬುದು ಗೊತ್ತಾಗುತ್ತದೆ. ಉದಾಹರಣೆಗೆ, ಚಿತ್ರದುರ್ಗ ನಗರದ ಮಳೆ ಪ್ರಮಾಣ ಸರಾಸರಿ 550 ಮಿ.ಮೀ. 10 ವರ್ಷಗಳಲ್ಲಿ ಸರಾಸರಿ 400 ಮಿ.ಮೀ.ಗಿಂತ ಕಡಿಮೆ ಮಳೆಯಾಗಿಲ್ಲ. ಹಾಗಾದರೆ ಇಷ್ಟು ಮಳೆ ಯಾವಾಗ ಬಂತು. ನಿಜ, ಯಾವ್ಯಾವಾಗಲೋ ಬಂದಿದೆ. ಈ ಚಿಕ್ಕ ಚಿಕ್ಕ, ಅಕಾಲಿಕ ಮಳೆಗೇ ಬೊಗಸೆಯೊಡ್ಡಿದರೆ ಸಾಕು, ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

* ಅತಿಥಿಯಂತಾಗುತ್ತಿರುವ ‘ತುಂತುರು ಮಳೆ’ಯಿಂದ ಎಷ್ಟು ನೀರು ಸಂಗ್ರಹವಾಗುತ್ತದೆ ಹೇಳಿ?
ಈ ವರ್ಷ ಮುಂಗಾರು ಕ್ಷೀಣಿಸಿದ್ದರೂ ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ 150 ಮಿ.ಮೀ. ಮಳೆಯಾಗಿದೆ. ಇದು ಆಶ್ಚರ್ಯ ಅಲ್ವಾ? ಅಷ್ಟೇ ಅಲ್ಲ, 10 ನಿಮಿಷದಲ್ಲಿ 5 ಮಿ.ಮೀವರೆಗೂ ಮಳೆ ಬಂದಿರುವ ಉದಾಹರಣೆ ಇದೆ. ಜೂನ್ ತಿಂಗಳಲ್ಲಿ ಒಂದು ದಿನ 15 ನಿಮಿಷದಲ್ಲಿ 36 ಮಿ.ಮೀ. ಮಳೆಯಾಯಿತು. ಅಂದು ನಮ್ಮ ಮನೆಯ ಸಂಪ್‌ನಲ್ಲಿ ಮೂರೂವರೆ ಸಾವಿರ ಲೀಟರ್ ಮಳೆ ನೀರು ಸಂಗ್ರಹವಾಗಿತ್ತು. ಮೂವರು ಸದಸ್ಯರ ನಮ್ಮ ಕುಟುಂಬಕ್ಕೆ ಎರಡು ತಿಂಗಳ ಖರ್ಚಿಗೆ ಇಷ್ಟು ನೀರು ಸಾಕಾಗುತ್ತದೆ. ಮಳೆ ನೀರನ್ನು ಜೋಪಾನವಾಗಿ ಕಾಪಿಟ್ಟುಕೊಂಡು ಮಿತವಾಗಿ ಬಳಸಬೇಕು.

* ಈ ವರ್ಷ ಅರ್ಧ ಮಳೆಗಾಲ ಮುಗಿದಿದೆ. ಮುಂಬರುವ ಮಳೆ ನೀರನ್ನು ನಗರ, ಪಟ್ಟಣ ಪ್ರದೇಶದವರು ಹೇಗೆ ಸಂಗ್ರಹಿಸಿಡಬಹುದು?
ಮಳೆಗಾಲ ಮರೆತು, ಮಳೆ ನೀರು ಸಂಗ್ರಹಕ್ಕೆ ನಮ್ಮ ಮನೆಗಳ ಜಲಸಂಗ್ರಹಾಗಾರಗಳನ್ನು ಸದಾ ಅಣಿಯಾಗಿಸಿಟ್ಟಿರಬೇಕು. ಇದೇನು ಬ್ರಹ್ಮ ವಿದ್ಯೆಯಲ್ಲ. ಮನೆಯ ಚಾವಣಿಯಿಂದ ನೀರು ಹೊರ ಹೋಗಲು ಜೋಡಿಸಿರುವ ಕೊಳವೆಗಳನ್ನು ಮನೆಯ ತೊಟ್ಟಿಗೆ ಜೋಡಿಸಿದರೆ ಸಾಕು. ಸ್ವಲ್ಪ ಹಣ ವ್ಯಯಿಸಿ ಕೊಳವೆಗೆ ಶೋಧಕ (ಫಿಲ್ಟರ್) ಅಳವಡಿಸಿಕೊಂಡರೆ ಈ ಮಳೆಗಾಲವಿಡೀ ಈ  ನೀರಿನಲ್ಲೇ ಜೀವನ ಸಾಗಿಸಬಹುದು. ಸಂಪ್ ತುಂಬಿದರೆ, ಅದೇ ನೀರನ್ನು ಕೊಳವೆಬಾವಿಗೆ ಬಿಡಬಹುದು. ಈ ವಿಧಾನವನ್ನು ಶಾಶ್ವತಗಾಗಿ ಅಳವಡಿಸಬಹುದು.

ಮುಂಗಾರು- ಹಿಂಗಾರು, ಜೊತೆಗೆ, ವಾಯುಭಾರ ಕುಸಿತ ಅಡ್ಡ ಮಳೆ… ಹೀಗೆ ಒಂದು ವರ್ಷದಲ್ಲಿ ಆರೇಳು ತಿಂಗಳು ಮಳೆ ಬರುತ್ತದೆ. ಆ ಮಳೆ ನೀರನ್ನು ಸಂಗ್ರಹಿಸಿಟ್ಟುಕೊಂಡರೆ ಸಾಕಲ್ಲವೇ? ಮಳೆ ನೀರು ಅವಲಂಬಿಸಿದರೆ, ಕೊಳವೆಬಾವಿಗೆ ವಿಶ್ರಾಂತಿ ಕೊಡಬಹುದು. ಇಂಥ ಪ್ರಯತ್ನಗಳು ಸಾಮೂಹಿಕವಾಗಿ ನಡೆಯಬೇಕು.

* ಸಾಮೂಹಿಕ ಪ್ರಯತ್ನ ಎಂದರೇನು? ಅದು ಈಗ ಸಾಧ್ಯವಾಗುತ್ತದೆಯೇ?
ಕೆಲವು ಮನೆಗಳಲ್ಲಿ 40 ಸಾವಿರದಿಂದ 1 ಲಕ್ಷ ಲೀಟರ್ ನೀರು ಸಂಗ್ರಹಿಸುವ ಸಾಮರ್ಥ್ಯದ ಟ್ಯಾಂಕ್‌ ಮಾಡಿಸಿದ್ದಾರೆ. ಇವರೆಲ್ಲ ವರ್ಷ ಪೂರ್ತಿ ಮಳೆ ನೀರನ್ನೇ ಬಳಸುತ್ತಾರೆ. ಇದು ಸಾಮಾನ್ಯ ವರ್ಗದವರಿಗೆ ಸ್ವಲ್ಪ ದುಬಾರಿ ವಿಧಾನ. ಆದರೆ, ಬಡಾವಣೆಗಳಲ್ಲಿ, ಅಕ್ಕ ಪಕ್ಕದ ಮನೆಯವರು ಒಗ್ಗಟ್ಟಿನಿಂದ ಒಂದು ಕಡೆ ಜಲಸಂಗ್ರಹಾಗಾರ (ಟ್ಯಾಂಕ್) ಮಾಡಿಕೊಂಡು ತಮ್ಮ ಮನೆಯ ಚಾವಣಿ ನೀರನ್ನು ತುಂಬಿಸಿಟ್ಟು ಬಳಸಬಹುದು. ಆ ಪ್ರದೇಶಗಳಲ್ಲಿ ತೆರೆದ ಬಾವಿಗಳಿದ್ದರೆ, ಅವುಗಳಿಗೆ ಮಳೆ ನೀರು ತುಂಬಿಸಬಹುದು. ಇತ್ತೀಚೆಗೆ ತಾರಸಿ ಮೇಲೆ ಪ್ಲಾಸ್ಟಿಕ್ ಶೀಟ್ ಹೊದಿಸಿ, ಮಳೆ ನೀರು ಸಂಗ್ರಹಿಸುವ ಹೊಸ ವಿಧಾನ ಚಾಲ್ತಿಯಲ್ಲಿದೆ.

* ಮಳೆ ನೀರು ಸಂಗ್ರಹಿಸುವ ಸಮುದಾಯದ ಪ್ರಯತ್ನಗಳು ಹೇಗಿರಬೇಕು? ಎಂಥ ಸಿದ್ಧತೆ ಮತ್ತು ಎಚ್ಚರಿಕೆ ಬೇಕು?
ರಾಜ್ಯದ ವಿವಿಧೆಡೆ ಕಲ್ಯಾಣಿ, ಪುಷ್ಕರಣಿ, ಬಾವಿ, ಹೊಂಡ, ಕೆರೆಗಳ ಹೂಳೆತ್ತುವ ಕೆಲಸ ನಡೆಯುತ್ತಿದೆ. ಇದರ ಜತೆ ಜತೆಗೆ ಹೂಳೆತ್ತಿದ ಜಲಸಂಗ್ರಹಾಗಾರಕ್ಕೆ ಮಳೆ ನೀರು ಹರಿವ ದಾರಿಗಳನ್ನೂ ಸುಗಮಗೊಳಿಸ­ಬೇಕು. ರಸ್ತೆಗಳಲ್ಲಿ ಹರಿವ ಮಳೆ ನೀರನ್ನೂ ಜಲಸಂಗ್ರಹಾಗಾರಗಳಿಗೆ ತಿರುಗಿಸಬೇಕು. ಆದರೆ, ಒಂದು ಎಚ್ಚರಿಕೆ; ಸ್ವಚ್ಛಗೊಂಡ ಕಲ್ಯಾಣಿಗಳಿಗೆ ಕಲುಷಿತ ನೀರು ಸೇರದಂತೆ ನೋಡಬೇಕು. ಇತ್ತೀಚೆಗೆ ಮಳೆ ನೀರು ಸಾಗಿಸುವ ಕಾಲುವೆಗಳು ಚರಂಡಿಗಳಾಗಿದ್ದು, ಸುತ್ತಲಿನ ಕೈಗಾರಿಕಾ ತ್ಯಾಜ್ಯಗಳು, ಆಸ್ಪತ್ರೆ, ಒಳಚರಂಡಿ ನೀರು ಮಿಶ್ರವಾಗುತ್ತಿರುವ ಬಗ್ಗೆ ಕೇಳಿದ್ದೇವೆ. ಅಂಥ ನೀರಿಗೆ ಕಡಿವಾಣ ಹಾಕಿ. ಇಲ್ಲದಿದ್ದರೆ, ಸ್ವಚ್ಛಗೊಂಡ ಕಲ್ಯಾಣಿ ಕಲುಷಿತವಾಗಿ ಅಂತರ್ಜಲವೂ ಮಲಿನವಾಗುತ್ತದೆ.

* ಮನೆ ಬಳಕೆಗೆ ಮಳೆ ನೀರು ಸಂಗ್ರಹ ಸರಿ. ಆದರೆ, ಅಕಾಲದ ಮಳೆ ನಂಬಿ ಕೃಷಿ ಮಾಡುವುದು ಹೇಗೆ? 
‘ಭರಣಿ ಮಳೆ ಬಂದ್ರೆ ಧರಣಿ ಆಳೋ ಯೋಗ.. ಹಸ್ತದ ಮಳೆ ಭಾಷೆ ಕೊಟ್ಟ ಮಳೆ ಬಂದೇ ಬರುತ್ತದೆ.. ಎಂಬ ನಾಣ್ನುಡಿಗಳು ಅರ್ಥ ಕಳೆದುಕೊಳ್ಳುತ್ತಿವೆ. ಯಾವ ಮಳೆಯೇ ಸುರಿಯಲಿ, ಅದನ್ನು ಸಂಗ್ರಹಿಸಿಟ್ಟುಕೊಂಡು ಆ ನೀರಿಂದಲೇ ಕೃಷಿ ಮಾಡಬೇಕು. ಯಾವ ಬೆಳೆಗೆ, ಎಷ್ಟು ಅವಧಿಗೆ, ಎಷ್ಟು ಲೀಟರ್ ನೀರು ಸಂಗ್ರಹಿಸಬೇಕು ಎಂಬ ‘ನೀರಿನ ಲೆಕ್ಕಾಚಾರ’ ಮಾಡಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಕೆರೆ, ಹೊಂಡ ಅಥವಾ ಬಾವಿಯನ್ನು ಕಡ್ಡಾಯವಾಗಿ ಮಾಡಿಕೊಳ್ಳಬೇಕು. ಮಳೆ ನೀರು ಆವಿಯಾಗದಂತೆ ರಕ್ಷಿಸಬೇಕು.

ಉದಾಹರಣೆಗೆ 4 ಎಕರೆ ಅಡಿಕೆ ತೋಟಕ್ಕೆ ¼ ಎಕರೆ ಕೆರೆ ಕಡ್ಡಾಯವಾಗಿ ಬೇಕು. ಅದರಲ್ಲಿ 30 ಲಕ್ಷ ದಿಂದ 40 ಲಕ್ಷ ಲೀಟರ್ ಮಳೆ ನೀರು ಸಂಗ್ರಹ
ವಾಗುವಂತಿರಬೇಕು. ಕೆರೆಗೆ ಮಳೆ ನೀರು ಹರಿಯುವಂತೆ ದಾರಿ ಮಾಡಬೇಕು. ಹೆಚ್ಚಾದ ನೀರು ಕೊಳವೆಬಾವಿಗೆ ಮರುಪೂರಣವಾಗಬೇಕು. ಒಟ್ಟಾರೆ, ಜಮೀನಿನ ಮೇಲೆ ಸುರಿಯುವ ಮಳೆಯ ಒಂದು ಹನಿ ನೀರೂ ಹೊರಗೆ ಹರಿಯಬಾರದು. ಇಂಥ ಪ್ರಯತ್ನಗಳು ರಾಜ್ಯದಲ್ಲಿ ಸಾಕಷ್ಟು ನಡೆಯುತ್ತಿವೆ.

ದೊಡ್ಡ ಕೆರೆ, ಹೊಂಡಗಳಲ್ಲಿನ ನೀರು ಆವಿಯಾಗದಂತೆ ಮೇಲ್ಭಾಗದಲ್ಲಿ ನೆರಳು ಪರದೆ ಹಾಕಿರುವ ಉದಾಹರಣೆಗಳಿವೆ. ಕೆರೆಗಳ ತಳಭಾಗಕ್ಕೆ ‘ಜಿಯೋ ಮೆಂಬ್ರೇನ್ ಹಾಳೆ’ ಹರವಿ, ಮಳೆ ನೀರು ನಿಲ್ಲಿಸಿಕೊಂಡು ಬಳಸುತ್ತಿದ್ದಾರೆ. ಕೆರೆಯ ನೀರಿನ ಮೇಲೆ ತೈಲ ಸಿಂಪಡಿಸಿ, ತೇಲುವ ಚೆಂಡುಗಳನ್ನು ಬಿಟ್ಟು ಆವಿ ರಕ್ಷಿಸುವ ಆಧುನಿಕ ಪ್ರಯತ್ನಗಳು ಸಹ ನಡೆಯುತ್ತಿವೆ.

* ಪ್ರಸ್ತುತ ಮುಕ್ಕಾಲು ಮುಂಗಾರು ಹಂಗಾಮು ಮುಗಿದಿದೆ. ಈಗ ಕೆರೆ, ಹೊಂಡ ಮಾಡಿ ಮಳೆ ನೀರು ಸಂಗ್ರಹಿಸಲು ಸಾಧ್ಯವೇ? ಇವೆಲ್ಲ ಬಹಳ ದುಬಾರಿ ಎನ್ನಿಸುವುದಿಲ್ಲವೇ?
ಬೃಹತ್ ಯಂತ್ರಗಳಿಂದ ನಾಲ್ಕು ದಿನಗಳಲ್ಲಿ 40 ಲಕ್ಷ ಲೀಟರ್ ನೀರು ಹಿಡಿಯುವ ಕೆರೆ ನಿರ್ಮಾಣ ಮಾಡಬಹುದು. ಈ ವರ್ಷ ಅಡಿಕೆ ಬೆಳೆ ಉಳಿಸಿಕೊಳ್ಳಲು ಮಾಡಿರುವ ಖರ್ಚಿನ ಶೇ 10ರಷ್ಟನ್ನು ವ್ಯಯಿಸಿದರೆ, ಭವಿಷ್ಯದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಮಾತ್ರವಲ್ಲ, ಈ ಬಾರಿ ಬೇಸಿಗೆಯಲ್ಲಿ ಬೆಳೆ ರಕ್ಷಣೆಗಾಗಿ ಪರದಾಡಿದಂತಹ ಪರಿಸ್ಥಿತಿ ಉದ್ಭವಿಸುವುದಿಲ್ಲ. ನಿಜ, ಇದು ದೊಡ್ಡ ಕೃಷಿಕರಿಗೆ ಸರಿ ಹೋಗುತ್ತದೆ. ಸಣ್ಣ ಕೃಷಿಕರು, ಮಳೆಯಾಶ್ರಿತ ಕೃಷಿಕರು ಸ್ವಲ್ಪ ವಿಧಾನ ಬದಲಿಸಿ­ಕೊಳ್ಳಬೇಕಾಗುತ್ತದೆ. ಇಂಥ ಕೃಷಿಕರು ಸರ್ಕಾರದ ಕೃಷಿ ಭಾಗ್ಯ ಯೋಜನೆಯಡಿ ನಿಗದಿಪಡಿಸಿರುವ ಗರಿಷ್ಠ ಅಳತೆಯ ಕೃಷಿ ಹೊಂಡ ಮಾಡಿಕೊಳ್ಳಬಹುದು. ಆ ಹೊಂಡದಲ್ಲಿ 13 ಲಕ್ಷ ಲೀಟರ್ ನೀರು ಸಂಗ್ರಹವಾಗುತ್ತದೆ. ವರ್ಷದ ಎರಡು ಬೆಳೆಗೆ ಈ ನೀರು ಸಾಕಾಗುತ್ತದೆ, ಹೀಗೆ ಹೇಳಿದಾಗ, ‘ನಮ್ಮಲ್ಲಿ ಮಳೆ ಎಲ್ಲಿ ಬರುತ್ತೆ?’ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮೊದಲೇ ಹೇಳಿದಂತೆ ಇದು ಅಕಾಲಿಕ ಮಳೆಗಳ ಕಾಲ. ಮೊನ್ನೆ ಮೊಳಕಾಲ್ಮುರು ತಾಲ್ಲೂಕು ರಾಜಾಪುರದಲ್ಲಿ ಒಂದೇ ದಿನ 108 ಮಿ.ಮೀ. ಮಳೆ ಬಂತು. ಆ ಭಾಗದ ಕೃಷಿ ಹೊಂಡ, ಚೆಕ್ ಡ್ಯಾಂ ಎಲ್ಲ ಭರ್ತಿಯಾದವು. ಅಂಥ ಒಂದೇ ಒಂದು ಮಳೆ ಬಂದರೆ ಸಾಕಲ್ಲವೇ?
ತೋಟಗಾರಿಕೆ ಬೆಳೆಗಳಲ್ಲಿ ಇತ್ತೀಚೆಗೆ ಪಾಲಿಹೌಸ್ ಕೃಷಿ ಹೆಚ್ಚು ಪ್ರಚಾರದಲ್ಲಿದೆ. ಸರಾಸರಿ 450 ಮಿ.ಮೀ. ಮಳೆ ಬೀಳುವ ಪ್ರದೇಶದಲ್ಲಿ 1 ಎಕರೆ ಪಾಲಿ ಹಾಸ್ ಮೇಲೆ ಒಂದು ವರ್ಷಕ್ಕೆ ಬೀಳುವ ಮಳೆ ನೀರನ್ನು ಸಂಗ್ರಹಿಸಿದರೆ, ಅದು 20 ಲಕ್ಷ ಲೀಟರ್ ಆಗುತ್ತದೆ. ಆಗ ಕೊಳವೆಬಾವಿ ನೆರವಿಲ್ಲದೇ ಎರಡು ಬೆಳೆ ತೆಗೆಯಬಹುದು. ತೆಲಂಗಾಣ, ಬೆಂಗಳೂರು ಸುತ್ತ ಈ ಪ್ರಯೋಗ ಯಶಸ್ವಿಯಾಗಿದೆ.

* ಈಗಾಗಲೇ ಕೊಳವೆಬಾವಿಗೆ ಜಲಮರುಪೂರಣ ಮಾಡಿಸಿರುವವರು, ಮಳೆ ಕೊರತೆಯಿಂದಾಗ, ಮರುಪೂರಣವಾಗುತ್ತಿಲ್ಲ ಎನ್ನುತ್ತಿದ್ದಾರಲ್ಲಾ?
15 ವರ್ಷಗಳ ಹಿಂದೆ ಯಶಸ್ವಿಯಾದವರ ಜಲಮರು ಪೂರಣ ಕೊಳವೆಬಾವಿಗಳಲ್ಲಿ ನೀರು ಇಂಗುತ್ತಿಲ್ಲ ಎಂಬ ವಿಚಾರ ಕೇಳಿದ್ದೇನೆ. ಅದಕ್ಕೆ ಮುಖ್ಯ ಕಾರಣ ನಿರ್ವಹಣೆ ಕೊರತೆ. ಪ್ರತಿ ಮಳೆಗಾಲಕ್ಕೆ ಮುನ್ನ ಜಲ­ಮರುಪೂರಣ ಕೊಳವೆಬಾವಿ­ಗಳನ್ನು ಪರಿಶೀಲಿಸಿ, ಮಳೆ ನೀರು ಹರಿಯುವ ದಾರಿ ಸರಿಪಡಿಸಬೇಕು. ಹೂಳು, ಕಸ ಕಡ್ಡಿ (ಸಿಲ್ಟಟ್ರಾಪ್) ತೆಗೆಯಬೇಕು. ಆಗಷ್ಟೇ ಜಲಮರು ಪೂರಣ ಸರಾಗವಾಗಿಯಾಗುತ್ತದೆ.

* ಅಲ್ಲಲ್ಲಿ ಅಲ್ಪಸ್ವಲ್ಪ ಮಳೆಯಾಗುತ್ತಿದೆ. ಕೊಳವೆಬಾವಿ ಕೊರೆಸುವ ಪ್ರಯತ್ನಗಳು ನಡೆಯುತ್ತಿವೆ. ನೀರು ಲಭ್ಯವಾಗುತ್ತದೆಯೇ? 
ಸಾವಿರಾರು ವರ್ಷಗಳ ಅಂತರ್ಜಲ ಬರಿದು ಮಾಡಿದ್ದೇವೆ. ಒಂದು ಉತ್ತಮ ಮಳೆಯಿಂದ ಎಲ್ಲವೂ ಸರಿ ಹೋಗುವುದು ಅಸಾಧ್ಯ. ಹಾಗೆಯೇ, ಅಂತರ್ಜಲದ ಬಗ್ಗೆ ಜಲತಜ್ಞರೇ ಖಾತರಿ ನೀಡದಂತಹ ಪರಿಸ್ಥಿತಿ ಇದೆ. ಅಂತರ್ಜಲ ಪತ್ತೆಗಾಗಿ ನಡೆದ ಎಲ್ಲ ಆಧುನಿಕ ಪ್ರಯತ್ನಗಳು (ಇಸ್ರೋ ತಂತ್ರಜ್ಞಾನವೂ ಸೇರಿದಂತೆ) ಯಶಸ್ವಿಯಾಗಿಲ್ಲ. ಹೀಗಿದ್ದಾಗ ಕೊಳವೆಬಾವಿ ಹೇಗೆ ಯಶಸ್ವಿಯಾಗಲು ಸಾಧ್ಯ? ಅದನ್ನು ಮರೆತು, ದೂರದ ಜಲಾಶಯ ಮಟ್ಟ ನೋಡುವುದನ್ನು ಬಿಟ್ಟು, ಸುರಿಯುವ ತುಂತುರು ಮಳೆ ನೀರನ್ನು ಜತನದಿಂದ ಹಿಡಿದಿಟ್ಟುಕೊಳ್ಳುವ ಬಗ್ಗೆ ಯೋಚಿಸುವುದು ಒಳ್ಳೆಯದು.

ಎಲ್ಲ ತಂತ್ರಗಳೂ ಸೋತಾಗ ಮಳೆ ನೀರು ಗೆಲ್ಲಿಸಿತು…
ಬೀದರ್ ಜಿಲ್ಲೆಯ ಭಾಲ್ಕಿಯ ಗುರುಕುಲದಲ್ಲಿ ವರ್ಷದ ಹಿಂದೆ ನೀರಿನ ಸಮಸ್ಯೆ ವ್ಯಾಪಕವಾಗಿತ್ತು. 5 ಸಾವಿರ ಮಕ್ಕಳಿಗೆ ನಿತ್ಯ, 5 ಲಕ್ಷ ಲೀಟರ್ ಬೇಕಿತ್ತು. ಇಸ್ರೊ ತಂತ್ರಜ್ಞಾನ ಬಳಸಿ 1000 ಅಡಿ ಆಳದ ಕೊಳವೆ ಬಾವಿಗಳನ್ನು ಕೊರೆಸಿದರು. ಪ್ರಯೋಜ­ನವಾಗಲಿಲ್ಲ. ನಂತರ ಗುರುಕುಲ ವ್ಯಾಪ್ತಿಯಲ್ಲಿ ಮಳೆ ನೀರು ಸಂಗ್ರಹ, ಇಂಗು ಗುಂಡಿ ರಚನೆಗಳನ್ನು ಮಾಡಿಸಿದ ಪರಿಣಾಮ, ವರ್ಷದ ಅವಧಿಯಲ್ಲಿ ಸುರಿದ 800 ಮಿ.ಮೀನಷ್ಟು ಮಳೆ ನೀರು ದೀರ್ಘ ಕಾಲದ ಸಮಸ್ಯೆಗೆ ಪರಿಹಾರ ನೀಡಿದೆ. ಇಲ್ಲಿ ಎಲ್ಲ ತಂತ್ರಜ್ಞಾನಗಳೂ ಸೋತಾಗ ಮಳೆ ನೀರು ಸಂಗ್ರಹ ಗೆದ್ದಿತು.

ಕೊಪ್ಪಳ ಸಮೀಪದ ಗಿಣಿಗೇರದಲ್ಲಿರುವ 120 ಎಕರೆಯ ಮೆದು ಕಬ್ಬಿಣ ತಯಾರಿಕೆ ಕಾರ್ಖಾನೆಯವರು 20 ಎಕರೆಯಲ್ಲಿ ಎರಡು ಬೃಹತ್ ಕೆರೆ ಮಾಡಿಸಿದ್ದಾರೆ. ಕಾರ್ಖಾನೆ ಕೆಲಸಕ್ಕೆ ಮಳೆ ನೀರನ್ನೇ ಬಳಸುತ್ತಿದ್ದಾರೆ.

ಧಾರವಾಡ ಸಮೀಪದ ದೇವರ ಹುಬ್ಬಳ್ಳಿಯ ಸಿದ್ದಾರೂಢ ಮಠ, ಕಲಘಟಗಿ ತಾಲ್ಲೂಕಿನ ಮುಳ್ಳಳ್ಳಿಮಠದವರು ಮಳೆ ನೀರು ಸಂಗ್ರಹಿಸಿ ಅದನ್ನು ‘ಆರೂಢ ತೀರ್ಥ’, ‘ಶಿವತೀರ್ಥ’, ಬಸವ ತೀರ್ಥ ಎಂದೆಲ್ಲ ಬಳಸುತ್ತಿದ್ದಾರೆ.

(ಮಳೆ ನೀರು ಸಂಗ್ರಹ ಕುರಿತ ಹೆಚ್ಚಿನ ಮಾಹಿತಿಗೆ : 9448125498)

  ಚಿತ್ರಗಳು: ಭವಾನಿಮಂಜು