‘ಸುಪ್ರೀಂಕೋರ್ಟ್ ಕುರುಡು ಆದೇಶ’-ದೇವನೂರ ಮಹದೇವ

23 Sep, 2016

ಮೈಸೂರು: ‘ಕಾವೇರಿ ವಿಚಾರದಲ್ಲಿ ಸುಪ್ರೀಂಕೋರ್ಟ್ ಕುರುಡು ಆದೇಶ ನೀಡಿದೆ. ಅದೊಂದು ರೀತಿಯ ರೊಬೊಟ್ ನ್ಯಾಯದಂತಾಗಿದೆ’ ಎಂದು ಸಾಹಿತಿ ದೇವನೂರ ಮಹದೇವ ಇಲ್ಲಿ ಗುರುವಾರ ಆರೋಪಿಸಿದರು. ಆಲ್‌ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಜೇಷನ್ (ಎಐಡಿವೈಒ) ಏರ್ಪಡಿಸಿದ್ದ 4ನೇ ರಾಜ್ಯಮಟ್ಟದ ಯುವಜನ ಸಮ್ಮೇಳನದಲ್ಲಿ ಮಾತನಾಡಿದರು.
‘ಪ್ರಾಥಮಿಕ ಶಾಲೆಯ ಮಕ್ಕಳು ತಪ್ಪು ಮಾಡಿದರೆ ಬೆಂಚಿನ ಮೇಲೆ ನಿಲ್ಲಿಸಬಹುದು. ನ್ಯಾಯಮೂರ್ತಿಗಳೇ ತಪ್ಪು ಆದೇಶ ನೀಡಿದರೆ ಯಾರಿಗೆ ದೂರುವುದು. ಇವರಿಗೆ ಯಾರು, ಹೇಗೆ ಹೇಳಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಆದೇಶವು ಅಹಂ ಹಾಗೂ ನಂಬರ್‌ ಗೇಮ್‌ನಂತೆ ಕಾಣುತ್ತಿದೆ. ನ್ಯಾಯಾಲಯಕ್ಕೆ ಕಣ್ಣಿಲ್ಲವೇ’ ಎಂದು ಪ್ರಶ್ನಿಸಿದರು.

ನ್ಯಾಯಕ್ಕೆ ಎರಡು ನಾಲಿಗೆ:  ‘ಈ ಹಿಂದೆ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ಪೀಠವು ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ಸ್ಥಾಪನೆ ಕೋರಿ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರಲಿಲ್ಲ. ಈಗ ತಮಿಳುನಾಡು ಕೇಳದೇ ಇದ್ದರೂ ಇಬ್ಬರು ನ್ಯಾಯಮೂರ್ತಿಗಳ ಪೀಠ ನದಿ ನೀರಿನ ನಿರ್ವಹಣಾ ಮಂಡಳಿ ಸ್ಥಾಪನೆಗೆ ಆದೇಶಿಸಿದೆ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಏನಿದರ ಮರ್ಮ? ಇದು ಉದ್ಧಟತನದ ಪರಮಾವಧಿ. ಈ ಆದೇಶದಿಂದ ನ್ಯಾಯಕ್ಕೆ ಎರಡು ನಾಲಿಗೆ ಇದೆಯೇ ಎಂಬ ಅನುಮಾನ ಬರುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಪ್ರೀಂ ಕೋರ್ಟ್ ನೇಮಿಸಿದ ಮೇಲುಸ್ತುವಾರಿ ಸಮಿತಿ 3 ಸಾವಿರ ಕ್ಯುಸೆಕ್ ನೀರು ಹರಿಸಲು ನಿರ್ದೇಶಿಸಿತು. ನ್ಯಾಯಮೂರ್ತಿಗಳಿಗೆ ತಾವೇ ನೇಮಿಸಿದ ಸಮಿತಿ ಕುರಿತು ನಂಬಿಕೆ ಇರದಿದ್ದರೆ ಸತ್ಯಶೋಧನಾ ಸಮಿತಿಯೊಂದನ್ನು ಜಲಾಶಯಗಳಿಗೆ ಕಳುಹಿಸಿ ವಾಸ್ತವ ತಿಳಿದುಕೊಂಡು ಆದೇಶ ನೀಡಬೇಕಿತ್ತು. ಆದರೆ, ಈಗ ವಾಸ್ತವ ಪರಿಸ್ಥಿತಿಯನ್ನು ಅರಿಯದೇ ನ್ಯಾಯಾಲಯ ಆದೇಶ ನೀಡಿದೆ. ಇನ್ನಾದರೂ ನ್ಯಾಯಾಲಯ ತನ್ನ ಗೌರವ ಉಳಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ನ್ಯಾಯಾಂಗ ಸಂಸತ್ತಿನ ತಲೆ ಬೋಳಿಸುತ್ತಿದೆ: ‘ನ್ಯಾಯಾಧೀಶರ ಕುರಿತು ಮಾತನಾಡಿ ಪ್ರಯೋಜನವಿಲ್ಲ. ಜನರ ಹಿತ ಕಾಯುವುದು ಸಂಸತ್ತಿನ ಜವಾಬ್ದಾರಿ. ಸಂಸತ್ತು     ತನ್ನ ಜುಟ್ಟನ್ನು ನ್ಯಾಯಾಲಯಕ್ಕೆ ಕೊಟ್ಟು ತಲೆ ಬೋಳಿಸಿಕೊಳ್ಳುತ್ತಿದೆ’ ಎಂದು ಕಟುವಾಗಿ ಟೀಕಿಸಿದರು.

‘ಸಂಸತ್ತು ತನ್ನ ಕರ್ತವ್ಯ ಮರೆತು ಮಲಗಿರುವುದರಿಂದಲೇ ಸಮಸ್ಯೆ ಬಿಗಡಾಯಿಸಿದೆ. ಬೆಳೆ ಬೆಳೆಯುವುದಕ್ಕೆ ನೀರು ಕೇಳುತ್ತಿಲ್ಲ. ಕುಡಿಯುವುದಕ್ಕೆ ಮಹಾದಾಯಿ, ಕಾವೇರಿ ನೀರು ಕೇಳುತ್ತಿದ್ದೇವೆ. ಒಂದು ವೇಳೆ ಸಂಸತ್ತು ಎನ್ನುವುದು ಇದ್ದಿದ್ದರೆ ಸಮಸ್ಯೆ ಇಷ್ಟೊತ್ತಿಗೆ ಬಗೆಹರಿಯಬೇಕಿತ್ತು’ ಎಂದರು.

ಪ್ರಧಾನಿ ಮಧ್ಯ ಪ್ರವೇಶಿಸಬೇಕು:  ‘ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಚೆನ್ನೈನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಯಿತು. ಆಗ ಅವರು ಕರ್ನಾಟಕದಿಂದ 5 ಟಿಎಂಸಿ ಅಡಿ ನೀರು ಸೇರಿದಂತೆ ಇತರ ರಾಜ್ಯಗಳಿಂದ ನೀರನ್ನು ಕೊಟ್ಟರು. ಹಾಗೆಯೇ, ಇಂದಿನ ಪ್ರಧಾನಿ ನರೇಂದ್ರ ಮೋದಿ ವಿವೇಕ, ವಿವೇಚನೆ ಹಾಗೂ ಮಾನವೀಯತೆ ತೋರಿಸಬೇಕು’ ಎಂದರು.

ಉಳಿಗಾಲವಿಲ್ಲ: ‘ಉರಿಯುವ ಮನೆಯಲ್ಲಿ ಗಳ ಹಿರಿಯುವ ಕೆಲಸ’ವನ್ನು ಯಾರೂ ಮಾಡಬಾರದು. ನೀರು ಈಗ ಬೆಂಕಿಯಾಗಿದೆ. ರಾಜ್ಯ ಹೊತ್ತಿ ಉರಿಯುತ್ತಿದೆ. ಕುಡಿಯುವ ನೀರಿನ ವಿಚಾರದಲ್ಲಿ ಎಲ್ಲಾ ಪಕ್ಷಗಳೂ ಒಂದೇ ನಿಲುವು ತಳೆಯಬೇಕು. ಇಲ್ಲದಿದ್ದರೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.