ಸುದೇಶ ದೊಡ್ಡಪಾಳ್ಯರ ಬರಹ- ಕೆರೆಗೆ ಜೀವ ತುಂಬಿದ ಹೋರಾಟ!

                     ಕೆರೆಗೆ ಜೀವ ತುಂಬಿದ ಹೋರಾಟ!

                               

                                 ಆಜಾದಪುರದ ಕೆರೆಯಲ್ಲಿ ನೀರು ಕಂಡು ಪುಳಕಗೊಂಡ ಚಂದಮ್ಮ ಗೋಳಾ

ಚಂದಮ್ಮ ಗೋಳಾ ಆ ಊರಿನ ಮನೆ ಮಗಳಲ್ಲ. ಸೊಸೆ, ಸಹೋದರಿಯಂತೂ ಅಲ್ಲವೇ ಅಲ್ಲ. ಆದರೂ ಆಜಾದಪುರದ ಜನರಿಗೆ ಚಂದಮ್ಮ ಎಂದರೆ ಅಕ್ಕರೆ, ಗೌರವ. ತಮ್ಮೆಲ್ಲರ ಕಷ್ಟ, ಸುಖಗಳ ಸಂದರ್ಭದಲ್ಲಿ ಮುಂದೆ ನಿಂತು ಓಡಾಡುವ, ಹೋರಾಡುವ ಅಕ್ಕ ಎನ್ನುವ ಭಾವನೆ.

ಆ ಊರಿನ ಜನರನ್ನು ‘ನಿಮ್ಮ ಗ್ರಾಮ ಪಂಚಾಯ್ತಿ ಸದಸ್ಯ ಯಾರು?’ ಎಂದು ಕೇಳಿದರೆ ನೆನಪಿಸಿಕೊಳ್ಳಲು ಯೋಚಿಸುತ್ತಾ ನಿಲ್ಲುತ್ತಾರೆ. ಅದೇ, ಚಂದಮ್ಮ ಎಂದರೆ ‘ಅವರು ನಮ್ಮಕ್ಕ. ನಮ್ಮೂರಿನ ಕೆರೆಗೆ ಜೀವಕೊಟ್ಟ ಮಹಿಳೆ’ ಎಂದು ಅಭಿಮಾನದಿಂದ ಮಾತನಾಡುತ್ತಾರೆ. ಆಜಾದಪುರದಲ್ಲಿ ಚಂದಮ್ಮನಿಗೆ ಎಷ್ಟು ಜನಪ್ರಿಯತೆ ಇದೆ ಎಂದರೆ, ಊರಲ್ಲಿ ನಿಂತು ಚಿಟಿಕೆ ಹೊಡೆದರೂ ಸಾಕು, ನೂರಾರು ಮಂದಿ ಬಂದು ಅವರ ಸುತ್ತ ನಿಲ್ಲುತ್ತಾರೆ. ಇದು ಅವರಿಗೆ ಸಹಜವಾಗಿ ಬಂದಿರುವ ನಾಯಕತ್ವದ ಕಲೆ. ಅದನ್ನು ವರ್ಣಿಸುವುದೇ ಕಷ್ಟ.
ಗುಲ್ಬರ್ಗ ವಿಶ್ವವಿದ್ಯಾಲಯದ ಸೆರಗಿನಲ್ಲಿ ಆಜಾದಪುರವಿದೆ. ಆ ಊರಿನ ಹೆಚ್ಚಿನವರು ಕಟ್ಟಡ ಕಾರ್ಮಿಕರು. ಪ್ರತಿದಿನ ಕಲಬುರ್ಗಿಗೆ ಬಂದು ಕೂಲಿಗೆ ಕರೆಯುವ ಧಣಿಗಳಿಗಾಗಿ ಆಸೆಗಣ್ಣಿನಿಂದ ನಿಲ್ಲುವುದೇ ಅವರ ಕೆಲಸ. ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡರೆ ಅಂದು ಮನೆಯಲ್ಲಿ ಒಲೆ ಉರಿಯುವುದಿಲ್ಲ.

ಒಮ್ಮೆ ಮರಳಿಗೆ ಬರ ಬಂದು ಕಟ್ಟಡ ನಿರ್ಮಾಣ ಕೆಲಸಕ್ಕೆ ಗ್ರಹಣ ಹಿಡಿಯಿತು. ಆ ಊರಿನ ಕೂಲಿ ಕಾರ್ಮಿಕರೆಲ್ಲರೂ ಕಂಗಾಲಾಗಿ ಕುಳಿತಿದ್ದರು. ಅಲ್ಲಿಗೆ ಚಂದಮ್ಮ ಹೋದರು. ದುಡಿಯುವ ಕೈಗಳು ಖಾಲಿ ಇರುವುದು ಯಾವುದೇ ಮನೆ, ಊರು, ದೇಶಕ್ಕೆ ಒಳಿತಲ್ಲ ಎನ್ನುವುದು ಇವರ ತಿಳಿವಳಿಕೆ. ಹಸಿದ ಹೊಟ್ಟೆಗೆ ದಾರಿ ಏನು? ಎನ್ನುವ ಚಿಂತೆ ಕಾಡಿತು. ಇವರಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಕಣ್ಮುಂದೆ ಬಂದಿತು. ಆಗ ಗುಂಪಿನಲ್ಲಿದ್ದ ಒಬ್ಬರು ತಮ್ಮೂರಿನ ಕೆರೆಯನ್ನು ನೆನಪಿಸಿದರು. ಚಂದಮ್ಮ ಅಲ್ಲಿಗೆ ಹೊರಟು ನಿಂತರು. ಒಂದಿಷ್ಟು ಮಂದಿ ಅವರನ್ನೇ ಹಿಂಬಾಲಿಸಿದರು.

‘ಕೆರೆ ಎಲ್ಲಿ?’ ಚಂದಮ್ಮ ಕೇಳಿದರು. ‘ಇದೇ’ ಎಂದು ಕೈ ತೋರಿಸಿದರು. ಕಸಕಡ್ಡಿಗಳಿಂದ ತುಂಬಿ ಹೋಗಿದ್ದ ಅದು ಹಿಂದೊಮ್ಮೆ ಕೆರೆಯಾಗಿದ್ದಕ್ಕೆ ಯಾವುದೇ ಕುರುಹುಗಳೇ ಇರಲಿಲ್ಲ. ನಲವತ್ತು ವರ್ಷಗಳ ಹಳೆಯದಾದ ಎರಡೂವರೆ ಎಕರೆಯಷ್ಟು ವಿಸ್ತಾರವಾದ ಕೆರೆಯನ್ನು ನೋಡಿದ ಚಂದಮ್ಮ ‘ಇನ್ನು ಖಾಲಿ ಕೈಗಳಿಗೆ ನೂರುದಿನ ಬಿಡುವಿಲ್ಲದ ಕೆಲಸ. ಪಾತ್ರೆಗಳ ತುಂಬ ದವಸ, ಧಾನ್ಯ’ ಎಂದು ಸ್ವಗತದಂತೆ ಹೇಳಿಕೊಂಡರು.

‘ನರೇಗಾದಲ್ಲಿ ಕೆಲಸ ಕೇಳಲು ಹತ್ತು ಮಂದಿ ನನ್ನೊಂದಿಗೆ ಕುಸನೂರು ಗ್ರಾಮ ಪಂಚಾಯ್ತಿಗೆ ಬನ್ನಿ’ ಎಂದು ಚಂದಮ್ಮ ತಿಳಿಸಿದರು. ಅಲ್ಲಿಗೆ ಬಂದವರು ನೂರು ಮಂದಿ!

‘ನಾವು ಹತ್ತಾರು ಬಾರಿ ಡಂಗೂರ ಹೊಡೆಸಿದರೂ ಯಾರೂ ಕೆಲಸ ಮಾಡಲು ಮುಂದೆ ಬಂದಿಲ್ಲ’–ಇದು ಗ್ರಾಮ ಪಂಚಾಯ್ತಿಯ ಪಿಡಿಒ ಮತ್ತು ಅಧ್ಯಕ್ಷರ ಸಬೂಬು. ‘ನಿಮ್ಮ ಕಥೆ ಕೇಳಲು ನಾವು ಬಂದಿಲ್ಲ. ಮೊದಲು ಅರ್ಜಿ ಕೊಡಿ’ ಎಂದು ಕೈ ಚಾಚಿದರು. ‘ಆಯ್ತು’ ಎಂದವರು ಹದಿನೈದು ದಿನವಾದರೂ ಅವರಿಂದ ಏನೂ ಉತ್ತರ ಬರಲೇ ಇಲ್ಲ. ಮತ್ತೆ ಚಂದಮ್ಮ ನೂರಾರು ಮಂದಿಯೊಂದಿಗೆ ಗ್ರಾಮ ಪಂಚಾಯ್ತಿ ಕಚೇರಿ ಮುಂದೆ ಹಾಜರಾದರು. ಅವರ ಕೈಯಲ್ಲಿ ‘ಬೀಗ’ ಸಹ ಇತ್ತು. ಹೋರಾಟ ತೀವ್ರಗೊಂಡಿತು. ಪಿಡಿಒ, ಅಧ್ಯಕ್ಷರು ಮಣಿದರು.
ಮುನ್ನೂರು ಮಹಿಳೆಯರು ನೂರು ದಿನ ಬೆವರು ಬಸಿದರು. ಪಾಳುಬಿದ್ದಿದ್ದ ಸ್ಥಳ ಮತ್ತೆ ಕೆರೆಯ ಸ್ವರೂಪ ಪಡೆಯಿತು. ಕೊನೆಯ ದಿನ ಎಲ್ಲರೂ ಏರಿ ಮೇಲೆ ನಿಂತು ಕೆರೆಯನ್ನು ನೋಡಿ ಕಣ್‌ ತುಂಬಿಕೊಳ್ಳುತ್ತಿದ್ದರು. ಪಕ್ಕದಲ್ಲಿ ನಿಂತಿದ್ದ ಚಂದಮ್ಮ ಸೀರೆ ಸೆರಗಿನಿಂದ ಬೆವರು ಒರೆಸಿಕೊಳ್ಳುತ್ತಿದ್ದರು.

ನಾನು ಇಷ್ಟಕ್ಕೇ ಚಂದಮ್ಮನ ಕೆರೆ ಕನಸು ಸಾಕಾರಗೊಂಡಿತು ಎಂದು ಭಾವಿಸಿದ್ದೆ. ಆದರೆ ಇವರ ಕನಸು ಇನ್ನೂ ಪೂರ್ಣಗೊಂಡಿಲ್ಲ. ಕೆರೆಗೆ ಕಟ್ಟೆ ಕಟ್ಟಿಸಬೇಕು. ಏರಿ ಮೇಲೆ ಬಗೆ ಬಗೆಯ ಹಣ್ಣಿನ ಸಸಿಗಳನ್ನು ನೆಡಬೇಕು. ಪಕ್ಷಿಗಳ ಕಲರವ ಅಲ್ಲಿ ಮನೆ ಮಾಡಬೇಕು. ಜಾನುವಾರುಗಳು ಬಂದು ನೀರು ಕುಡಿದು ದಾಹ ಇಂಗಿಸಿಕೊಳ್ಳಬೇಕು. ಅದೇ ನೀರನ್ನು ಬಳಸಿಕೊಂಡು ಮಹಿಳೆಯರು ನರ್ಸರಿ ಮಾಡಿ ಹಣ ಗಳಿಸಬೇಕು. ಇಷ್ಟಕ್ಕೆ ಅವರ ಕನಸಿನ ನೇಯ್ಗೆ ನಿಲ್ಲುವುದಿಲ್ಲ.

ಯುವತಿಯರು, ಮಹಿಳೆಯರು ಮಲ ವಿಸರ್ಜನೆಗೆ ಬಯಲಿಗೆ ಹೋಗುವುದನ್ನು ಚಂದಮ್ಮ ನೋಡಿದರು. ತುಂಬಾ ಕಸಿವಿಸಿ ಅನಿಸಿತು. ಮತ್ತೆ ಸೀರೆ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಹೋರಾಟದ ಹಾದಿ ಹಿಡಿದರು. ಜನರನ್ನು ಕಟ್ಟಿಕೊಂಡು ಕಚೇರಿಗಳನ್ನು ಸುತ್ತಿದರು. ನಾಲ್ಕು ತಿಂಗಳ ಅವಧಿಯಲ್ಲಿ ಇನ್ನೂರಿಪ್ಪತ್ತೈದು ಮನೆಗಳಲ್ಲಿ ಶೌಚಾಲಯಗಳು ನಿರ್ಮಾಣವಾದವು!

ಈ ಭಾಗದ ಸಾವಿರಾರು ಕಡುಬಡ ಕಟುಂಬಗಳು ಕೆಲಸವಿಲ್ಲ ಎನ್ನುವ ಕಾರಣಕ್ಕಾಗಿ ಮಹಾನಗರಗಳಿಗೆ ವಲಸೆ ಹೋಗುತ್ತವೆ. ಅದನ್ನು ತಪ್ಪಿಸಲು ‘ನರೇಗಾ’ ನೆರವಾಗಬಲ್ಲದು. ಆದರೆ ಪಿಡಿಒ, ಅಧ್ಯಕ್ಷರು, ಗುತ್ತಿಗೆದಾರರು, ಪ್ರಭಾವಿಗಳು ‘ನರೇಗಾ’ ಯಾವಾಗಲೂ ತಮಗಾಗಿಯೇ ಇರುವ ಸಮೃದ್ಧ ಹುಲ್ಲುಗಾವಲು ಎಂದುಕೊಳ್ಳುತ್ತಾರೆ. ಆಜಾದಪುರದ ನಿದರ್ಶನವನ್ನೇ ನೋಡಿ. ಪಿಡಿಒ, ಅಧ್ಯಕ್ಷರು ‘ಇಲ್ಲಿನ ಜನರು ನಗರದಲ್ಲಿ ಕಟ್ಟಡ ಕೆಲಸಕ್ಕೆ ಹೋಗುತ್ತಾರೆ. ನಾವು ಕೊಡುವ ಕೂಲಿಗೆ ಯಾರೂ ಬರುವುದಿಲ್ಲ’ ಎಂದು ನೆಪಹೇಳುತ್ತಾ ಜನರು ತಮ್ಮತ್ತ ಸುಳಿಯದಂತೆ ನೋಡಿಕೊಂಡರು.

ಆಜಾದಪುರ ಗುಲ್ಬರ್ಗ ವಿಶ್ವವಿದ್ಯಾಲಯದ ಸಮೀಪವೇ ಇದೆ. ಆದರೂ, ಅಲ್ಲಿನ ಪ್ರಾಧ್ಯಾಪಕರು, ವಿದ್ವಾಂಸರು, ವಿದ್ಯಾರ್ಥಿಗಳು, ಸಮಾಜ ಕಾರ್ಯ ಅಧ್ಯಯನ ವಿಭಾಗದವರಿಗೆ ಚಂದಮ್ಮನ ಕೆಲಸ ಒಂದು ಅಧ್ಯಯನ ವಸ್ತು ಎನ್ನುವುದೇ ಅವರಿಗೆ ಗೊತ್ತಾಗಲಿಲ್ಲ!
ನನಗೆ ಆಶ್ಚರ್ಯ ಆಗುವುದೇ ಇಲ್ಲಿ. ಈ ಚಂದಮ್ಮ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸಕ್ರಿಯ ಕಾರ್ಯಕರ್ತೆ ಹಾಗೂ ಅಂಗನವಾಡಿಯ ಸಹಾಯಕಿ. ನೆಲೆಸಿರುವುದು ಕಲಬುರ್ಗಿಯ ರಾಮ್‌ಜೀ ಎನ್ನುವ ಪುಟ್ಟ ಕೊಳೆಗೇರಿಯಲ್ಲಿ. ಇವರು ಗಾಂಧೀಜಿಯನ್ನು ಓದಿಕೊಂಡಿರಲು ಸಾಧ್ಯವಿಲ್ಲ. ಇನ್ಯಾವುದಾದರು ಉಪನ್ಯಾಸಗಳನ್ನು ಕೇಳಿ ಪ್ರೇರಿತರಾಗಿರುವ ಸಾಧ್ಯತೆಯೂ ಇಲ್ಲ. ಆದರೂ ಇಂಥ ವ್ಯಕ್ತಿತ್ವ ರೂಪುಗೊಂಡ ಬಗೆ ನನ್ನನ್ನು ಚಕಿತಗೊಳಿಸುತ್ತದೆ.

ಇಂಥ ಒಳ್ಳೆಯ ಕೆಲಸ ಮಾಡಲು, ಕಳಕಳಿ ಇಟ್ಟುಕೊಳ್ಳಲು ಕಾಲೇಜು ಪದವಿಗಳಾಗಲಿ, ಮತ್ತೊಂದು ಕೋರ್ಸ್‌ಗಳ ಅವಶ್ಯಕತೆಯೇ ಇಲ್ಲ ಎನ್ನುವುದು ಇವರನ್ನು ನೋಡಿದಾಗ ಅನಿಸುತ್ತದೆ. ಈ ದಲಿತ ಮಹಿಳೆಗೆ ಹೋರಾಟ ಮಾಡುವುದು ಸಹಜವಾಗಿ ಅಡಕವಾಗಿರುವ ಗುಣ. ಏಕೆಂದರೆ ವೈಯಕ್ತಿಕ ಬದುಕು ಹಿತವಾಗಿಯೇನು ಇರಲಿಲ್ಲ. ಇವರ ಹೋರಾಟದ ಮನೋಭಾವ ಕುಟುಂಬಕ್ಕೂ ಇಷ್ಟವಾಗಲಿಲ್ಲ. ಆದರೂ ಅದ್ಯಾವುದನ್ನೂ ನೆನಪು ಇಟ್ಟುಕೊಂಡಿಲ್ಲ. ಸಮಾಜದ ಕೆಲಸದಲ್ಲೇ ತೃಪ್ತಿಕಂಡುಕೊಂಡಿದ್ದಾರೆ.

‘ಬಡತನವನ್ನೇ ಉಸಿರಾಡುವ ನಿಮಗೆ ಏಕೆ ಇಂಥ ಉಸಾಬರಿ?’ ಅಂತ ಕೇಳಿದೆ. ಅದಕ್ಕೆ ಅವರು ‘ಬದುಕು ಅಂದ್ರೆ ಏನು? ಇಡೀ ಊರಿನ ಕಷ್ಟಕ್ಕೆ ಸ್ಪಂದಿಸುವುದೇ ಬದುಕು. ಅದು ಎಲ್ಲರೂ ಮಾಡಬೇಕು. ಅದರಲ್ಲಿ ವಿಶೇಷವೇನಿದೆ’ ಎಂದು ನನ್ನನ್ನು ಮರು ಪ್ರಶ್ನಿಸಿ ಮೌನವಾದರು.

ಮೊನ್ನೆ ಮೊದಲ ಮಳೆ ಬಿದ್ದಿತು. ಕೆರೆ ನೋಡಲು ಹೋದೆ. ಕೆರೆಗೆ ನೀರು ಹರಿದಿತ್ತು! ನಾಲ್ಕಾರು ಹಕ್ಕಿಗಳು ನೀರಿನಲ್ಲಿ ತೇಲುತ್ತಿದ್ದವು.
ಚಂದಮ್ಮನಂಥವರು ಸಮಾಜಕ್ಕೆ ಮುಖ್ಯವಷ್ಟೇ ಅಲ್ಲ, ಅನಿವಾರ್ಯ ಕೂಡ. ಪ್ರಶಸ್ತಿ ಪುರಸ್ಕಾರಗಳ ಅರಿವೇ ಇಲ್ಲದೆ, ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳದೇ ಸಮಾಜದ ಒಳಿತಿಗೆ ಸಹಜವಾಗಿ ಅರ್ಪಿಸಿಕೊಳ್ಳುವುದು ಎಂಥ ಅದ್ಭುತ ಸಂಸ್ಕೃತಿ! ಇಂಥ ಸಂಸ್ಕೃತಿ ಪ್ರತಿಹಳ್ಳಿಯಲ್ಲೂ ಆರಂಭವಾದರೆ ಏನೆಲ್ಲ ಬದಲಾವಣೆ ತರಬಹುದಲ್ಲವೇ?

ಸುದೇಶ ದೊಡ್ಡಪಾಳ್ಯ