ಸಿದ್ದರಾಮಯ್ಯ‘ಮರುಹುಟ್ಟು’ಪಡೆಯಲಿ-ದೇವನೂರ ಮಹಾದೇವ-ಕನ್ನಡಪ್ರಭ ಸಂದರ್ಶನ

ಸಂದರ್ಶನ- ಪಿ. ಓಂಕಾರ್, ಮೈಸೂರು 

IMG_1234
            *ಅಧಿಕಾರದ ಗೋಜಲಿಗೆ ಬೀಳದೆ ಇಂದೇ ಕೊನೆಯ ದಿನವೆಂದು ಕೆಲಸ ಮಾಡಿ:ದೇಮ ಸಲಹೆ

ಮೂರು ವರ್ಷ ಪೂರೈಸಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಗ್ಗೆ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಸಮರ್ಥಕರು ‘ಉತ್ತಮ ಆಡಳಿತ’ಎಂದರೆ, ಟೀಕಾಕಾರರು ಕೆಟ್ಟ ಆಡಳಿತಕ್ಕೆ ನಿದರ್ಶನಗಳನ್ನು ನೀಡಿದ್ದಾರೆ. ನೀತಿ-ನಿರ್ಧಾರ-ನಿಲುವುಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿದವರು ಅನೇಕ. ಸಿದ್ದರಾಮಯ್ಯಬಗ್ಗೆ ತಮ್ಮ ಎಂದಿನ ವಿಶ್ವಾಸವನ್ನು ಉಳಿಸಿಕೊಂಡೆ, ಅವರು ವಹಿಸಬೇಕಾದ ಮುನ್ನೆಚ್ಚರಗಳನ್ನು ಗುರುತಿಸಿದ್ದಾರೆ ಸ್ನೇಹಿತರೂ ಆದ ಸಾಹಿತಿ ದೇವನೂರ ಮಹಾದೇವ.‘‘ಸಿದ್ದರಾಮಯ್ಯ ವರ್ಚಸ್ಸು ಮಸುಕಾಗುತ್ತಿದೆ.ಈ ಕ್ಷಣದಲ್ಲೆ ಅವರು ಮರುಹುಟ್ಟು ಪಡೆಯಬೇಕು.ಇದು ಅಧಿಕಾರದ ಕೊನೆಯ ದಿನ ಎಂದುಕೊಂಡೆ ನೆನಪಿನಲ್ಲುಳಿಯುವಂತ ಕೆಲಸ ಮಾಡಬೇಕು’’ಎಂದು ‘ಕನ್ನಡಪ್ರಭ’ಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಆಶಿಸಿದ್ದಾರೆ.

*ಸಿದ್ದರಾಮಯ್ಯಆಡಳಿತದ ಬಗ್ಗೆ ಆರಂಭದಲ್ಲಿ ದೊಡ್ಡ ನಿರೀಕ್ಷೆಗಳಿದ್ದವು. ಮುಖ್ಯಮಂತ್ರಿಯಾಗಿ ಮೂರು ವರ್ಷ ಪೂರೈಸಿದ್ದಾರೆ. ಈಗೇನನ್ನಿಸುತ್ತೆ?
-ಅಧಿಕಾರ ವಹಿಸಿಕೊಂಡ ಮೊದಲ ದಿನವೇ ದೊಡ್ಡ ಭರವಸೆಯನ್ನು ನಾಡಿಗೆ ಕೊಟ್ಟರು ಮತ್ತು ಮುಖ್ಯಮಂತ್ರಿಯಾಗಿ ಯಾವ ದಿಕ್ಕಿನಲ್ಲಿ ನಡೆಯುತ್ತೇನೆ ಎನ್ನುವ ಸೂಚನೆಯನ್ನೂ ನೀಡಿದರು. ಆರಂಭದ ಎರಡೂವರೆ ವರ್ಷದವರೆಗೂ ಈ ದಿಕ್ಕಿನಲ್ಲೇ ಅವರ ಚಲನೆ ಇತ್ತು. ತದನಂತರ ಯಾಕೋ ಆ ವರ್ಚಸ್ಸು ಮಸುಕಾಗುತ್ತಿದೆ ಎನ್ನಿಸುತ್ತಿದೆ. ಆ ಕಾರಣಕ್ಕಾಗಿ ಅವರು ಈ ಕ್ಷಣದಲ್ಲೇ ಮರು ಹುಟ್ಟು ಪಡೆಯಬೇಕಾಗುತ್ತದೆ. ಅವರೊಳಗೆ ಸತ್ವ ಇರುವುದರಿಂದ ಇದು ಸಾಧ್ಯ ಆಗಲಿ ಎಂದು ಆಸೆ ಪಡುತ್ತೇನೆ.

* ಮರು ಹುಟ್ಟು ಅಂದರೆ ಹೇಗೆ?
– ಹೇಗೋ ಅಧಿಕಾರಾವಧಿಯನ್ನು ಪೂರ್ಣ ಮಾಡಬೇಕು ಅಂತ ಆ ಗೋಜಲಿಗೆ ಸಿಕ್ಕಿ ಹಾಕಿಕೊಂಡರೆ, ಅದು ದಿನೇ ದಿನೇ ದುರ್ಬಲಗೊಳಿಸುತ್ತಾ ಹೋಗುತ್ತದೆ ಮತ್ತು ಈ ಉಸಾಬರಿಯಲ್ಲೇ ಸುಸ್ತಾಗಬೇಕಾಗುತ್ತದೆ. ಬದಲಾಗಿ, ಇವತ್ತೆ ನನ್ನ ಅಧಿಕಾರದ ಕೊನೆಯ ದಿನ ಅಂತ ನಿರ್ಧರಿಸಿಕೊಂಡು ಕೆಲಸ ಮಾಡಿದರೆ- ಸಿದ್ದರಾಮಯ್ಯ ಮೂಲತಃ ಸಮಾಜ ಮುಖಿಯಾದ್ದರಿಂದ-ನೆನಪಿನಲ್ಲಿ ಉಳಿಯುವಂತ ಸಾಧನೆ ಅವರದಾಗಬಹುದು.

* ಮೂರು ವರ್ಷ ಪೂರೈಸಿದ್ದಾರಷ್ಟೆ ಎಂದು ಒಂದು ಕಡೆ ಹೇಳಿದ್ದೀರಿ?
-ಅದು ಹಾಗಲ್ಲ. ಕೇಳಿಸಿಕೊಂಡ ಪತ್ರಕರ್ತನ ಗ್ರಹಿಕೆಯ ಸಮಸ್ಯೆಯಿಂದ ಈ ಅರ್ಥ ಹೊಮ್ಮಿದೆ. ಮೂರು ವರ್ಷದ ಅಧಿಕಾರಾವಧಿಯಲ್ಲಿ ಸಿದ್ದರಾಮಯ್ಯ ಏನೂ ಮಾಡಿಲ್ಲ ಎಂದು ಅವರ ವೈರಿಗಳೂ ಹೇಳಲಾರರು.

* ಸಿದ್ದರಾಮಯ್ಯಅವರನ್ನು ಸುತ್ತಲಿದ್ದವರು ದಿಕ್ಕು ತಪ್ಪಿಸಿದರು ಎಂಬ ಆರೋಪವಿದೆ. ಇನ್ನಾದರೂ ಹೇಗೆ ಎಚ್ಚರ ವಹಿಸಬೇಕೆನ್ನುತ್ತೀರಿ?
– ಅವರಿಗೆ ದಿನದಲ್ಲಿ ಒಂದು ಗಂಟೆಯಾದರೂ ಏಕಾಂತ ಅಗತ್ಯ ಇದೆ ಅನ್ನಿಸುತ್ತೆ. ತನ್ನ ಸುತ್ತಮುತ್ತ ವಿಮರ್ಶೆ ಮಾಡುವವರು ಇದ್ದರೆ ಮಾತ್ರ ಅದರಲ್ಲಿ ತನ್ನ ಹಿತ ಮತ್ತು ಮುಖ್ಯಮಂತ್ರಿಯಾಗಿ ನಾಡಿನ ಹಿತ  ಅಡಗಿರುತ್ತದೆ ಎನ್ನುವ ಅರಿವನ್ನು ಪಡೆದುಕೊಳ್ಳುವ ಅಗತ್ಯ ತುರ್ತಾಗಿದೆ.

*ದೇವರಾಜ ಅರಸು ನಂತರ ಸಿದ್ದರಾಮಯ್ಯ ಎನ್ನುವ ಮಾತಿದೆ. ಈ ಹೊತ್ತಿನಲ್ಲಿ ನಿಜ ಎನ್ನಿಸುತ್ತಾ?
– ಮೊದಲೇ ಹೇಳಿದಂತೆ,ಸಿದ್ದರಾಮಯ್ಯಅವರಿಗೆ ಆ ಸತ್ವ ಇದೆ. ಆದರೆ,ಅವರೊಳಗಿನ ಅಳಕು ಅದಾಗಲು ಬಿಡುತ್ತಿಲ್ಲ. ಉದಾಹರಣೆಗೆ, ಅರಸು ಅವರ ಕ್ಯಾಬಿನೆಟ್‌ನಲ್ಲಿದ್ದ ಘಟಾನುಘಟಿ ಸಚಿವರನ್ನು ನೆನಪು ಮಾಡಿಕೊಳ್ಳಿ. ಎನ್.ರಾಚಯ್ಯ, ಬಿ.ಬಸವಲಿಂಗಪ್ಪ, ಸಿದ್ದವೀರಪ್ಪ, ಕೆ.ಎಚ್.ಪಾಟೀಲ್, ಎಲ್.ಜಿ.ಹಾವನೂರ್,ಕೆ.ಎಚ್.ರಂಗನಾಥ್. ಅರಸು ಅವರಿಗೆ ಸಮಬಲರು; ಪ್ರತಿಸ್ಪರ್ಧಿಗಳಾಗುವಂತಿದ್ದವರೆಲ್ಲ ಸಂಪುಟದಲ್ಲಿದ್ದರು. ಪರ್ಯಾಯ ಶಕ್ತಿ ಕೇಂದ್ರ ಆಗಬಹುದಾದ ವ್ಯಕ್ತಿತ್ವ ಹೊಂದಿದ್ದ ಇವರನ್ನೆಲ್ಲ ಸಂಪುಟಕ್ಕೆ ಸೇರಿಸಿಕೊಳ್ಳುವ ವಿಷಯದಲ್ಲಿ ಅರಸು ಅವರಿಗೆ ಅಧೈರ್ಯ ಇರಲಿಲ್ಲ. ಇದರಿಂದ,ಮುಖ್ಯಮಂತ್ರಿಯ ಸಾಮರ್ಥ್ಯ ವೃದ್ಧಿಸಿತು.ಜೊತೆಗೆ, ಎಲ್ಲರೂ ಸಮರ್ಥರಿದ್ದುದರಿಂದ ಅವರವರ ಕೆಲಸ ಕಾರ್ಯಗಳು ಪ್ರಭಾವಶಾಲಿಯಾಗಿದ್ದವು. ಹೀಗಿದ್ದಾಗ, ಒಟ್ಟಾರೆ ನಾಡಿನ ಹಿತದ ಕೆಲಸ ಕಾರ್ಯಗಳು ತಮ್ಮಷ್ಟಕ್ಕೆ ಚೆನ್ನಾಗಿ ನಡೆದುಕೊಂಡು ಹೋಗುತ್ತವೆ. ಅರಸು ಅವರ ಈ ಧೈರ್ಯವನ್ನು ಸಿದ್ದರಾಮಯ್ಯ ತಮ್ಮ ಮೊದಲ ಸಂಪುಟ ರಚನೆ ಸಂದರ್ಭವೇ ತೋರಿಸಿದ್ದರೆ ಇವತ್ತು ಅರಸು ಅವರನ್ನೇ ಮೀರಿಸುತ್ತಿದ್ದರೇನೋ.

* ಸಿದ್ದರಾಮಯ್ಯಅವರನ್ನು ಅಹಿಂದ ನಾಯಕ ಎನ್ನಲಾಗುತ್ತೆ. ಅಹಿಂದ ಪರವಾಗೇನಿಲ್ಲ ಎನ್ನುವವರೂ ಇದ್ದಾರೆ?
– ಅವರೊಳಗೆ ಅಹಿಂದ ಭಾವನೆ ಇದ್ದರೂ,‘ಅಹಿಂದ’ದೊಳಗಿನ ಬಹುಸಂಖ್ಯಾತ ಸಮುದಾಯ ಸುತ್ತುವರಿದು,ಅವರನ್ನು ಅಹಿಂದ ನಾಯಕನನ್ನಾಗಲು ಬಿಡುವುದಿಲ್ಲ. ಅಹಿಂದ ಸಮುದಾಯದಲ್ಲೆ ಸಂಖ್ಯಾ ಬಲದಲ್ಲಿ ಕಡಿಮೆಯಿರುವ ಸಮುದಾಯದಿಂದ ಬಂದ ಅರಸು, ಬಂಗಾರಪ್ಪ ಅವರನ್ನು ಸುತ್ತುವರಿದವರಲ್ಲಿ ಅವರ ಜಾತಿಯವರ ಸಂಖ್ಯೆ ಎದ್ದು ಕಾಣುವಂತಿರಲಿಲ್ಲವಾದ್ದರಿಂದ ಅವರು ಅಹಿಂದ ನಾಯಕರಾದರು ಮತ್ತು ಆ ಸಮುದಾಯಕ್ಕೆ ಎಷ್ಟೋ ಕೆಲಸ ಮಾಡಿದರು. ಇನ್ನೊಂದು ಗಮನಿಸಬೇಕಾದ ಸಂಗತಿ. ಅಹಿಂದ ನಾಯಕತ್ವವನ್ನು
ನಿರ್ಧರಿಸುವುದು ಮತ್ತು ಅಭಿಪ್ರಾಯ ರೂಪಿಸುವುದು ಆ ಸಮುದಾಯದ ನೌಕರಶಾಹಿ. ಸಂಖ್ಯಾಬಲದಲ್ಲಿ ಹೆಚ್ಚಿರುವ ಸಮುದಾಯದಿಂದ ಬಂದರೂ ಅಹಿಂದ ನಾಯಕನಾಗಬೇಕೆಂದರೆ, ಆತ ಉಳಿದ ಅಹಿಂದ ನೌಕರಶಾಹಿಯನ್ನು ತೃಪ್ತಿಪಡಿಸಬೇಕಾಗುತ್ತೆ. ಇದರೊಳಗಿನ ತೊಡಕನ್ನು ನಾವು ಅರ್ಥಮಾಡಿಕೊಳ್ಳಬೇಕು.

* ಈ ಗಳಿಗೆಯಲ್ಲಿ ಸಿದ್ದರಾಮಯ್ಯ ಯಾವುದಕ್ಕೆ ಪ್ರಾಮುಖ್ಯತೆ ನೀಡಬೇಕೆನ್ನುತ್ತೀರಿ?
– ಕುಡಿಯುವ ನೀರು,ಉಸಿರಾಡ್ತಿರೋ ಗಾಳಿ ಎಲ್ಲ ವಿಷವಾಗಿದೆ. ಎಷ್ಟೋ ಕಡೆ ಕುಡಿಯಲು ನೀರೇ ಇಲ್ಲ. ಇಂಥ ಸಂದರ್ಭದಲ್ಲಿ ನಾವು ತಿಂಗಳು ತಿಂಗಳು ಎಷ್ಟೆಷ್ಟೋ ಮಹಾತ್ಮರ ದಿನಾಚರಣೆ ಅಂತ ಮಾಡ್ತಿದ್ದೇವೆ. ಇದಕ್ಕೆಲ್ಲ ರಜಾ ನೀಡುತ್ತಿರುವುದರಿಂದ ಅವೆಲ್ಲ ‘ಮಜಾತ್ಮರ’ ದಿನಾಚರಣೆ ಆಗ್ತಿವೆ. ಇದಕ್ಕೆ ಬದಲು,ಮಹಾತ್ಮರ ದಿನಾಚರಣೆಗಳಲ್ಲಿ ಅವರ ಹೆಸರಿನಲ್ಲಿ ಒಂದು ದಿನ ಹೆಚ್ಚು ಕೆಲಸ ಮಾಡುವಂತಾಗಬೇಕು. ಇದು ನಿಜವಾದ ನೆನಪಿಸಿಕೊಳ್ಳುವಿಕೆ. ಅದೆಲ್ಲ ಕಷ್ಟ ಎನ್ನುವುದಾದರೆ, ಮಹಾತ್ಮರ ಹೆಸರಿನಲ್ಲಿ ಮರಗಿಡಗಳನ್ನು ನೆಡುವ, ಅಂತರ್ಜಲ ಹೆಚ್ಚಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಕೊನೆಯ ಪಕ್ಷ, ಇದು ಬಸವಣ್ಣನ ಮರ, ಅಂಬೇಡ್ಕರ್ ವೃಕ್ಷ, ಕನಕದಾಸರ ಮರ, ಭಗೀರಥ ಅಂತರ್ಜಲ ಹೆಚ್ಚಿಸುವ ಕಾರ್ಯಕ್ರಮ ಅಂತ ಮಹಾತ್ಮರು ನೆನಪಾದರೆ ಎಷ್ಟೊಂದು ಅರ್ಥಪೂರ್ಣವಲ್ಲವೇ? ಇನ್ನೊಂದು ಮುಖ್ಯ ಸಂಗತಿ.ನಮ್ಮ ಮಕ್ಕಳಿಗೆ ನಾವು ತಾರತಮ್ಯದ,ಪಂಕ್ತಿಬೇಧ ಶಿಕ್ಷಣವನ್ನು ನೀಡುತ್ತಿದ್ದೇವೆ. ನಾಳೆ ಆ ಮಕ್ಕಳು ದೊಡ್ಡವರಾದ ಮೇಲೆ ತಾರತಮ್ಯವನ್ನೇ ವೌಲ್ಯ ಮಾಡಿಕೊಂಡರೆ ಅವರದ್ದೇನು ತಪ್ಪಿದೆ ಅದರಲ್ಲಿ? ಆದ್ದರಿಂದ, ಕನಿಷ್ಠ ಪ್ರಾಥಮಿಕ ಶಿಕ್ಷಣದಲ್ಲಾದರೂ ‘ಸಮಾನ ಶಿಕ್ಷಣ ’ಪದ್ಧತಿಯನ್ನು ಅನುಷ್ಠಾನಗೊಳಿಸುವ ವಿವೇಕ,ವಿವೇಚನೆ ಮತ್ತು ಧೈರ್ಯವನ್ನು ಸಿದ್ದರಾಮಯ್ಯ ಅವರು ಪ್ರದರ್ಶಿಸಬೇಕು.