ಸಾವಿಲ್ಲದ ನಮೂನೆಯ ಸಾಸಿವೆ-ನಾಗೇಶ್ ಹೆಗಡೆ

ಅದೊಂಥರಾ ನಾಟಕ ಅನ್ನಿ. ‘ಕುಲಾಂತರಿ ಸಾಸಿವೆಯನ್ನು ಬೇಗ ಹೊಲಕ್ಕಿಳಿಸಿ’ ಎಂದು ಕಳೆದ ವಾರ ಆರು ಕೃಷಿ ಸಂಘಟನೆಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದವು. ‘ನಾವು ಬೆಳೆಯುತ್ತಿರುವ ಸಾಸಿವೆ ಎಣ್ಣೆ ದೇಶಕ್ಕೆ ಸಾಕಾಗ್ತಾ ಇಲ್ಲ; ವಿದೇಶದಿಂದ ಹೆಚ್ಚು ಹೆಚ್ಚು ಎಣ್ಣೆಯನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಕುಲಾಂತರಿ ಸಾಸಿವೆಯನ್ನು ಬೆಳೆದರೆ ದೇಶ ಸ್ವಾವಲಂಬಿ ಆಗುತ್ತದೆ’ ಎಂದು ಹೇಳಿಕೆ ನೀಡಿದವು. ಐದು ದಿನಗಳ ನಂತರ ಅದಕ್ಕೆ ತದ್ವಿರುದ್ಧವಾದ ಘೋಷಣೆಗಳು ಇನ್ನೊಂದು ಬಗೆಯ ರೈತ ಸಂಘಟನೆಗಳಿಂದ ಕೇಳಿ ಬಂದವು. ಹೈದರಾಬಾದ್‌ನಲ್ಲಿ ನಡೆದ 3ನೇ ಅಖಿಲ ಭಾರತ ಕಿಸಾನ್ ಸ್ವರಾಜ್ ಸಮ್ಮೇಳನದಲ್ಲಿ ‘ಕುಲಾಂತರಿ ಬಂದರೆ ದೇಶದ ಬರ್‌ಬಾದಿ; ನಮಗೆ ಬೇಕಿದೆ ರೈತರ ಆಜಾದಿ’ ಎಂಬ ಘೋಷಣೆ ಕೇಳಿಬಂತು. ಈ ಎರಡು ಹಕ್ಕೊತ್ತಾಯಗಳ ವ್ಯತ್ಯಾಸ ಯಾರಿಗಾದರೂ ಗೊತ್ತಾಗುವಷ್ಟಿತ್ತು.

ಕುಲಾಂತರಿ ಸಾಸಿವೆ ಬೆಳೆಯಲು ಅನುಮತಿ ಬೇಕೆಂದು ದಿಲ್ಲಿಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸಂಘಟನೆಗಳೆಲ್ಲ ಇಸ್ತ್ರಿ ಬಟ್ಟೆಯ ನೇತಾರೈತರದ್ದು. ಮಾಜಿ ಸಂಸದರದ್ದು, ಇತರ ಗಣ್ಯರದ್ದು. ಇತ್ತ ಹೈದರಾಬಾದ್‌ನಲ್ಲಿ ಸಭೆ ಸೇರಿದ್ದವರೆಲ್ಲ ಮಣ್ಣಿನ ಮಕ್ಕಳು. ತಾವು ಜತನವಾಗಿ ಕಾಪಾಡಿಕೊಂಡು ಬಂದ ನಾಟಿ ಬೀಜಗಳನ್ನು ಪ್ರದರ್ಶಿಸಲೆಂದು ದೇಶದ ನಾನಾ ಭಾಗಗಳಿಂದ ಬಂದ ಒರಟು ಬಟ್ಟೆಯ ರೈತರು. ತಲೆಗೆ ಎಣ್ಣೆ ಕಾಣದ ಆದಿವಾಸಿ ಬಡಮಹಿಳೆಯರು. ‘ದೇಸೀ ಬೀಜ ರಕ್ಷಿಸಿ, ದೇಶ ರಕ್ಷಿಸಿ’ ಎಂದು ತಮ್ಮದೇ ಶೈಲಿಯಲ್ಲಿ ಹಾಡು, ಹಸೆ, ಬೀಜ, ರಂಗೋಲಿಗಳ ಮೂಲಕ ಬಿನ್ನವಿಸಿದವರು. ದೇಶಕ್ಕೆ ದೇಶವೇ ಬಿಸಿಲ ಬೇಗೆಯಲ್ಲಿ ತತ್ತರಿಸುತ್ತಿರುವಾಗ ಈ ಸಾಸಿವೆಗೆ ಬಿಸಿ ಕೊಟ್ಟು ಒಗ್ಗರಣೆಗೆ ಇಟ್ಟವರಾರು? ಕುಲಾಂತರಿ ಸಾಸಿವೆ ಕಳೆದ ಐದಾರು ವರ್ಷಗಳಿಂದ ಹೊಲಕ್ಕೆ ನುಗ್ಗಲು ಯತ್ನಿಸುತ್ತಲೇ ಇದೆ.

ಯಕ್ಷಗಾನದಲ್ಲಿ ಬಣ್ಣದ ವೇಷಗಳು ಪರದೆಯ ಮರೆಯಲ್ಲಿ ನಿಂತು ಒಮ್ಮೆ ಭಾಗಶಃ ಕಿರೀಟ ತೋರಿಸಿ, ಮತ್ತೆ ಮರೆಮಾಚಿ, ಮಗದೊಮ್ಮೆ ಮೀಸೆಯ ತುಸು ಭಾಗ ತೋರಿಸಿ, ಮತ್ತೆ ಮರೆಯಾಗಿ ಪ್ರೇಕ್ಷಕರನ್ನು ಕೆಣಕುವ ಹಾಗೆ, ಈ ಹೊಸ ಸಾಸಿವೆ ಕೂಡ ಆಗಾಗ ಸುದ್ದಿಯಾಗಲು ಯತ್ನಿಸುತ್ತ, ನೇಪಥ್ಯಕ್ಕೆ ದೂಡಿಸಿಕೊಳ್ಳುತ್ತ ಮತ್ತೆ ಇದೀಗ ರಂಗಕ್ಕೆ ಬರಲು ಹವಣಿಸುತ್ತಿದೆ. ಎರಡು ತಿಂಗಳ ಹಿಂದೆ, ಇನ್ನೇನು ಅದರ ಕೃಷಿಗೆ ಅನುಮತಿ ಕೊಡುತ್ತೇವೆಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಪ್ರಕಾಶ್ ಜಾವಡೇಕರ್ ಸೂಚನೆ ನೀಡಿದ್ದೇ ತಡ, ದೇಶದಾದ್ಯಂತ ಕುಲಾಂತರಿ ವಿರೋಧಿ ಸಂಘಟನೆಗಳು (ಎಂದಿನಂತೆ) ಭಾರೀ ಗಲಾಟೆ ಎಬ್ಬಿಸಿದವು. ಜಾವಡೇಕರ್ ಮತ್ತೆ ಅಷ್ಟೇ ಅವಸರದಲ್ಲಿ ಅದನ್ನು ಅದುಮಿಟ್ಟರು. ಈಗ ರಾಷ್ಟ್ರೀಯ ಪ್ರೊಗ್ರೆಸಿವ್ ಕಿಸಾನ್ ಸಮಿತಿ ಹೆಸರಿನಲ್ಲಿ ನೇತಾರೈತರು ಅದೆಲ್ಲಿಂದಲೊ 1,38,313 ರೈತರ ಸಹಿ ಸಂಗ್ರಹಣೆ ಮಾಡಿ ಕುಲಾಂತರಿ ಸಾಸಿವೆ ಕೃಷಿಕರಿಗೆ ಶೀಘ್ರ ಬೇಕೆಂದು ಒತ್ತಾಯಿಸಿದ್ದಾರೆ.

ಈ ಬೆದರು ಬೊಂಬೆಯಾಟದ ಸೂತ್ರಧಾರ ಎಲ್ಲೆಲ್ಲಿದೆ? ನಾವೂ ನೇಪಥ್ಯದಲ್ಲಿ ತುಸು ಇಣುಕಿ ನೋಡೋಣ: ಮಣ್ಣಿನಲ್ಲಿರುವ ‘ಬಿಟಿ’ ಹೆಸರಿನ ಏಕಾಣುಜೀವಿಯ ತಳಿಸೂತ್ರವನ್ನು ಕಿತ್ತು ವಿಜ್ಞಾನಿಗಳು ಹತ್ತಿ ಬೀಜದ ತಳಿಸೂತ್ರಕ್ಕೆ ಜೋಡಿಸಿದರು. ನಮ್ಮ ಕೋಲಾರದ ಮಣ್ಣಿನಲ್ಲೂ ಅದೇ ಏಕಾಣುಜೀವಿ ಇರುತ್ತದಾದರೂ ಜರ್ಮನಿಯ ಥುರಿಂಜೆನ್ ಎಂಬ ಪಟ್ಟಣದಲ್ಲಿದ್ದ ಪ್ರಯೋಗಶಾಲೆ ಬಳಿಯ ಮಣ್ಣಿನಲ್ಲಿದ್ದ ಜೀವಿಯನ್ನು ಎತ್ತಿದ್ದರಿಂದ ಅದಕ್ಕೆ ಬ್ಯಾಸಿಲಸ್ ಥುರಿಂಜೆನ್ಸಿಸ್ (ಬಿಟಿ) ಹೆಸರು ಬಂತು. ಇದರ ವಿಷಗುಣಗಳು ಹತ್ತಿ ಗಿಡದ ಕಾಂಡ, ಎಲೆ, ಹೂವು, ಕಾಯಿಗಳಲ್ಲೆಲ್ಲ ಸೇರಿಕೊಂಡವು. ಈ ಹೊಸ ತಳಿಯ ರಸವನ್ನು ಹೀರಿದರೆ ಕೀಟಗಳು ತಾವಾಗಿ ಸಾಯುತ್ತವೆ, ಬೇರೆ ವಿಷ ಸಿಂಪಡನೆ ಬೇಕಾಗಿಯೇ ಇಲ್ಲವೆಂದು ವಿಜ್ಞಾನಿಗಳು ಹೇಳಿದರು. ಸರಿ, ಮೊನ್ಸಾಂಟೊ ಕಂಪನಿ ಈ ತಂತ್ರಜ್ಞಾನದ ಪೇಟೆಂಟ್ ಹಕ್ಕನ್ನು ಖರೀದಿಸಿತು.

ಅಮೆರಿಕದಲ್ಲಿ ಇದೇ ತಂತ್ರವನ್ನು ಬಳಸಿ ಜೋಳ, ಸೋಯಾ, ಸಾಸಿವೆ ಬೆಳೆಗಳನ್ನೂ ಕುಲಾಂತರಗೊಳಿಸಿತು. ಅದು ಅಪಾಯಕಾರಿ ತಂತ್ರಜ್ಞಾನ ಎಂದು ಐರೋಪ್ಯ ದೇಶಗಳು ಹೇಳಿದ್ದರಿಂದ ಭಾರತಕ್ಕೂ ಅದು ಬೇಡವೆಂದು ಇಲ್ಲಿನ ‘ಕುಲಾಂತರಿ ವಿರೋಧಿ’ ಸಂಘಟನೆಗಳು ವಾದಿಸಿದವು. ಆದರೆ ಮೊನ್ಸಾಂಟೊ ಕಂಪನಿಯ ಪ್ರಭಾವಲಯ ದೊಡ್ಡದಿತ್ತು. ‘ಹತ್ತಿಯೇನೂ ಆಹಾರ ಬೆಳೆ ಅಲ್ಲವಲ್ಲ? ಬೇಕಿದ್ದರೆ ತಜ್ಞರ ಸಮಿತಿಯೇ ಪರಿಶೀಲಿಸಿ ಸಮ್ಮತಿ ನೀಡಲಿ’ ಎಂದು ಹೇಳಿ ಆ ಕಂಪನಿ ತನ್ನ ತಾಳಕ್ಕೆ ಕುಣಿಯುವವರನ್ನೆಲ್ಲ ಸಮಿತಿಗೆ ಸೇರಿಸಿತು. ಆ ಸಮಿತಿಯ ಹೆಸರು ‘ಜಿಇಎಸಿ’. ಬಿಟಿ ಹತ್ತಿಯ ಭರಾಟೆ ಕತೆ ನಮಗೆ ಗೊತ್ತೇ ಇದೆ.  ಹಾವೇರಿಯ ರೈತರು ಬಿಟಿ ಹತ್ತಿಯ ಹೊಲಕ್ಕೆ ಬೆಂಕಿ ಇಟ್ಟು ಪ್ರತಿಭಟನೆ ಮಾಡಿದರೂ ಕ್ಯಾರೇ ಅನ್ನದೆ ಆ ಹತ್ತಿಯ ಬೆಳೆಗೆ ಜಿಇಎಸಿ ಅನುಮತಿ ನೀಡಿತು. ಹತ್ತು ವರ್ಷಗಳಲ್ಲಿ ದೇಶದ ಹತ್ತಿ ಉತ್ಪಾದನೆ ಇಮ್ಮಡಿ, ಮುಮ್ಮಡಿ ಆಗಿದ್ದು ನಿಜ.

ಆದರೆ ಎಕರೆವಾರು ಉತ್ಪಾದನೆ ಅಷ್ಟೇನೂ ಹೆಚ್ಚಾಗಲಿಲ್ಲ. ಭರ್ಜರಿ ಪ್ರಚಾರ ಕೊಟ್ಟು, ಹತ್ತಿ ಬೀಜಕ್ಕಾಗಿ ಜನರು ಕ್ಯೂ ನಿಲ್ಲುವಂತೆ ಮಾಡಿದ್ದರಿಂದ (ಕ್ಯೂ ಇದ್ದಲ್ಲಿ ಜನರು ಮುಗಿಬೀಳುತ್ತಾರೆ ತಾನೆ?) ಪಾಳು ಭೂಮಿಗೂ ಹತ್ತಿ ಬಂತು; ಜೋಳ, ಮೆಣಸು ಬೆಳೆಯುವಲ್ಲೂ ಹತ್ತಿ ಅರಳಿತು. ಅದರ ಪರಿಣಾಮವಾಗಿ ಬಿಟಿಗಿಂತ ಶ್ರೇಷ್ಠ ತಳಿಗುಣಗಳಿರುವ ನಾಟಿ ಬೀಜಗಳೆಲ್ಲ ನಾಪತ್ತೆಯಾದವು. ಬಿಟಿ ಹತ್ತಿಗೂ ಕೀಟಬಾಧೆ ಬರತೊಡಗಿತು.  ಉತ್ಸಾಹದಿಂದ ಬಿಟಿ ಬಿತ್ತನೆ ಮಾಡಲು ಹೋಗಿ ಸಾರಿದ್ವಾರ್ ಹಾನಿ ಮಾಡಿಕೊಂಡ ಸಾಲುಸಾಲು ರೈತರು ಜೀವ ಕಳೆದುಕೊಂಡರು. ಬಿಟಿ ಹತ್ತಿಯ ಅಬ್ಬರದ ದಿನಗಳಲ್ಲೇ ವಿಜ್ಞಾನಿಗಳು ಪೈಪೋಟಿಯಲ್ಲಿ ಭತ್ತ, ಬದನೆ, ಕೋಸು, ಬಟಾಟೆ, ಸಾಸಿವೆ ಹೀಗೆ ನಾನಾ ಸಸ್ಯಗಳ ಮೇಲೆ ಕುಲಾಂತರಿ ತಂತ್ರದ ಪ್ರಯೋಗಕ್ಕೆ ಇಳಿದರು. ತಮ್ಮ ಹೊಸ ಬೀಜಗಳೊಂದಿಗೆ ಜಿಇಎಸಿಯ ಎದುರು ಅನುಮತಿಗಾಗಿ ಕ್ಯೂ ನಿಂತರು.

ದಿಲ್ಲಿಯ ದೀಪಕ್ ಪೆಂತಾಲ್ ಹೆಸರಿನ ಖ್ಯಾತ ವಿಜ್ಞಾನಿಯೂ ದಿಲ್ಲಿ ವಿವಿಯ ಕ್ಯಾಂಪಸ್ಸಿನಲ್ಲಿ ಕುಲಾಂತರಿ ಜೀವಿಗಳ ಅದ್ಧೂರಿ ಪ್ರಯೋಗಾಲಯ ಆರಂಭಿಸಿದರು. 2002ರಲ್ಲಿ ‘ಧಾರಾ ಮಸ್ಟರ್ಡ್ ಹೈಬ್ರಿಡ್ 11’ (ಡಿಎಮ್‌ಎಚ್ 11) ಹೆಸರಿನ ಹೊಸ ಸಾಸಿವೆ ತಳಿಯನ್ನು ಸೃಷ್ಟಿಸಿದರು. ಧಾರಾ ಎಂದರೆ ಮದರ್ ಡೇರಿಯ ತೈಲದ ಬ್ರಾಂಡಿನ ಹೆಸರು. ಅದಕ್ಕಾಗಿ ಡೇರಿ ಅಭಿವೃದ್ಧಿ ಮಂಡಲಿಯ ಭಾರೀ ಧನಸಹಾಯವನ್ನೂ ಪಡೆದರು. ಈ ವಿಜ್ಞಾನಿ ಮುಂದೆ ದಿಲ್ಲಿ ವಿವಿಯ ಕುಲಪತಿಯಾಗಿ ನಿವೃತ್ತಿಯಾಗಿ ಅಲ್ಲೇ ಅದೇ ಲ್ಯಾಬಿನ ನಿರ್ದೇಶಕರಾಗಿದ್ದಾರೆ. ಅವರಿಗೆ ಮೊನ್ಸಾಂಟೊ ಬೆಂಬಲವೂ ಇಲ್ಲ; ಅವರು ಸಾಸಿವೆಯಲ್ಲಿ ತೂರಿಸಿದ್ದು ಬಿಟಿ ಏಕಾಣುಜೀವಿಯ ತಳಿಸೂತ್ರವೂ ಅಲ್ಲ. ಬ್ಯಾಸಿಲಸ್ ಅಮೈಲೊ ಲಿಕ್ವಿಫೇಸಿಯನ್ಸ್ (ಬಿಎ) ಎಂಬ ಮಣ್ಣು ಜೀವಿ. ಇದರ ವಿಶೇಷ ಗುಣ ಏನೆಂದರೆ, ದಂಟು, ಎಲೆ, ಹೂಕಾಯಿಗಳ ತುಂಬ ಇದರ ತಳಿಗುಣವನ್ನು ಸೇರಿಸಿಕೊಂಡ ಸಾಸಿವೆ ಸಸ್ಯಕ್ಕೆ ಎಷ್ಟೇ ಕಳೆನಾಶಕ ವಿಷವನ್ನು ಸುರಿದರೂ ಸಾಸಿವೆ ಸಾಯುವುದಿಲ್ಲ.

ಅದು ಸಾವಿಲ್ಲದ ಸಾಸಿವೆಯಾಗುತ್ತದೆ. ಬದಲಿಗೆ ಅದರ ಸುತ್ತ ಬೆಳೆದಿರುವ ಕಳೆಸಸ್ಯಗಳು ಸುಟ್ಟು ಹೋಗುತ್ತವೆ. ಅಂದರೆ, ಸಾಸಿವೆಯ ಸಾಲಿನಗುಂಟ ಆಸಿಡ್ ಸುರಿದ ಹಾಗೆ ಕಳೆನಾಶಕ ಗ್ಲುಫೊಸಿನೇಟ್ ವಿಷವನ್ನು ಸುರಿಯುತ್ತ ಹೋದರೆ ಕೆಲಸ ಮುಗಿಯಿತು. ಇಲ್ಲಿ ಮೊನ್ಸಾಂಟೊ ಕಂಪನಿಯ ಪಾತ್ರ ಏನೂ ಇಲ್ಲ ನಿಜ. ಆದರೆ ಅಷ್ಟೇ ಕುಖ್ಯಾತಿ ಗಳಿಸಿದ ಬಾಯರ್ ಹೆಸರಿನ ಇನ್ನೊಂದು ಬಹುರಾಷ್ಟ್ರೀಯ ಕಂಪನಿ ಗ್ಲುಫೊಸಿನೇಟ್ ವಿಷವನ್ನು ತಯಾರಿಸುತ್ತದೆ. ಇದನ್ನು ಸುರಿದರೆ ಕಳೆಗಳೆಲ್ಲ ಸತ್ತರೂ ಸಾಸಿವೆ ಸಸ್ಯಗಳು ಸೊಂಪಾಗಿ ನಿಂತಿರುತ್ತವೆ. ಮೊನ್ಸಾಂಟೊ ಕಂಪನಿ ಬಿಟಿ ಬದನೆಯನ್ನು ಹೊಲದಲ್ಲಿ ಬೆಳೆಸಲು ಹೊರಟು ದೇಶದಾದ್ಯಂತ ಪ್ರತಿಭಟನೆ ಎದುರಿಸಿತಷ್ಟೆ.

ಯಾವ ಆಹಾರ ವಸ್ತುಗಳಿಗೂ ಕುಲಾಂತರಿ ತಂತ್ರಜ್ಞಾನ ಬೇಡವೆಂದು ಜಪಾನ್, ಚೀನಾ ಸೇರಿದಂತೆ ನೂರೊಂದು ರಾಷ್ಟ್ರಗಳು ನಿಷೇಧ ಹಾಕಿರುವ ಅದೇ ಸಂದರ್ಭದಲ್ಲಿ ದೀಪಕ್ ಪೆಂಟಾಲ್ ತಮ್ಮ ಲ್ಯಾಬಿನಲ್ಲಿ ಬೆಳೆಸಿದ ಕುಲಾಂತರಿ ಸಾಸಿವೆಯನ್ನು ಪ್ರಾಯೋಗಿಕವಾಗಿ ಹೊಲದಲ್ಲಿ ಬೆಳೆಸಲು ಜಿಇಎಸಿಯ ಅನುಮತಿ ಕೇಳಿದರು. ಕುಲಾಂತರಿಗಳ ಸಮಗ್ರ ಅಧ್ಯಯನ ನಡೆದ ಹೊರತೂ ಹೊಲಕ್ಕೆ ಊರುವುದು ಬೇಡವೆಂದು ಸಂಸದೀಯ ಸಮಿತಿ ಹಾಗೂ ಸರ್ವೋಚ್ಚ ನ್ಯಾಯಾಲಯದ ತಾಂತ್ರಿಕ ಸಮಿತಿ ಶಿಫಾರಸು ಮಾಡಿದವು. ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಈ ಸಮಿತಿಗಳ ಶಿಫಾರಸುಗಳನ್ನು ಬದಿಗೊತ್ತಿ, ಜಿಇಎಸಿಯ ಸದಸ್ಯರನ್ನು ಬದಲಿಸಿ, ಕು.ಸಾಸಿವೆ ಬೆಳೆಗೆ ಪ್ರಾಯೋಗಿಕ ಅನುಮತಿ ನೀಡಲಾಯಿತು. ಆದರೆ ಸಾಸಿವೆ ಜಾಸ್ತಿ ಬೆಳೆಯುವ ಬಹುತೇಕ ರಾಜ್ಯಗಳು ಅನುಮತಿ ನಿರಾಕರಿಸಿದವು.

ರಾಜಸ್ತಾನದಲ್ಲಿ ರೈತರೇ ಪ್ರಾಯೋಗಿಕ ಬೆಳೆಯನ್ನು ಸುಟ್ಟು ಹಾಕಿದರು. ಪಂಜಾಬ್ ಮತ್ತು ದಿಲ್ಲಿ ಎರಡೇ ರಾಜ್ಯಗಳ ಹೊಲದಲ್ಲಿ ನಡೆದ ಪ್ರಯೋಗಗಳ ಆಧಾರದ ಮೇಲೆ ಈಗ ಎಲ್ಲೆಂದರಲ್ಲಿ ಅದನ್ನು ಬೆಳೆಯಲು ಮುಕ್ತ ಅವಕಾಶ ಬೇಕೆಂಬ ಒತ್ತಾಯ ಬಂದಿದೆ. ರೈತಪರ ಸಂಘಟನೆಗಳ ವಾದದ ಪ್ರಕಾರ, ಕುಲಾಂತರಿ ಸಾಸಿವೆಯಿಂದ ರೈತರಿಗೆ ಏನೂ ಪ್ರಯೋಜನ ಇಲ್ಲ. ಸರ್ಕಾರಗಳು ಸೂಕ್ತ ಬೆಂಬಲ ಬೆಲೆ ಮತ್ತು ಇನ್ನಿತರ ಪ್ರೋತ್ಸಾಹ ನೀಡಿದರೆ ಮಾಮೂಲು ಸಾಸಿವೆಯ ಉತ್ಪಾದನೆಯನ್ನೇ ಮೂರು ಪಟ್ಟು ಹೆಚ್ಚಿಸಬಹುದು. ಕು.ಸಾಸಿವೆ ಮತ್ತು ಅದರ ಎಣ್ಣೆಯಿಂದ ಆರೋಗ್ಯದ ಮೇಲೆ ಪರಿಣಾಮ ಏನಾಗುತ್ತದೆ ಅನ್ನೋದನ್ನು ಪೆಂತಾಲ್ ರಹಸ್ಯವಾಗಿ ಇಟ್ಟಿದ್ದಾರೆ. ಅದಕ್ಕೆ ಅನುಮತಿ ನೀಡಬೇಕಾದ ಜಿಇಎಸಿಯಲ್ಲಿ ವೈದ್ಯವಿಜ್ಞಾನಿಯೇ ಇಲ್ಲ. ಬಹುರಾಷ್ಟ್ರೀಯ ಕಳೆನಾಶಕ ಕಂಪನಿಗೆ ಲಾಭ ಮಾಡುವುದಷ್ಟೇ ಈ ಸಾಸಿವೆಯ ಉದ್ದೇಶವಾಗಿದೆ.

ಅಕಸ್ಮಾತ್ ಈ ಸಾಸಿವೆಯಿಂದ ರೈತರಿಗೆ, ವರ್ತಕರಿಗೆ ಅಥವಾ ಬಳಕೆದಾರರಿಗೆ ವ್ಯಾಪಕ ಹಾನಿಯಾದರೆ ಯಾರು ನಷ್ಟ ತುಂಬಿಕೊಡಬೇಕು ಎಂಬುದೇ ಇನ್ನೂ ನಿರ್ಧಾರವಾಗಿಲ್ಲ. ಬಿಟಿ ಹತ್ತಿಯ ವಿಷಯದಲ್ಲಿ ಈಗಲೂ ನಿರ್ಧಾರವಾಗಿಲ್ಲ. ಅಮೆರಿಕದಲ್ಲಿ ಕುಲಾಂತರಿ ನಿಯಮಗಳು ತುಂಬ ಬಿಗಿಯಾಗಿವೆ. ಅಲ್ಲಿ ಕು.ಜೋಳವನ್ನು ಪಶು ಆಹಾರಕ್ಕೆ ಮಾತ್ರ ಬಳಸಬೇಕಿತ್ತು. ಸ್ಟಾರ್‌ಲಿಂಕ್ ಕಂಪನಿಯ ಕು.ಜೋಳದ ಅವಲಕ್ಕಿ 2000ದಲ್ಲಿ ಮನುಷ್ಯರ ಆಹಾರಕ್ಕೂ ಸೇರಿ ಎಡವಟ್ಟಾಗಿ ನಷ್ಟ ಪರಿಹಾರಕ್ಕೆಂದು ನೂರು ಕೋಟಿ ಡಾಲರ್‌ಗಿಂತ ಹೆಚ್ಚು ಹಣವನ್ನು ಕಂಪನಿ ಕಕ್ಕಬೇಕಾಯಿತು. ನಮ್ಮಲ್ಲಿ ಬಿಟಿ ಹತ್ತಿಯಿಂದ ನಷ್ಟವಾದರೆ ರೈತರೇ ಅನುಭವಿಸಬೇಕು ಅಥವಾ ನಮ್ಮೆಲ್ಲರ ತೆರಿಗೆ ಹಣದಿಂದ ಪರಿಹಾರ ನೀಡಬೇಕೆ ವಿನಾ ಕಂಪನಿಗಳಿಗೆ ಬಿಸಿ ತಟ್ಟುವುದೇ ಇಲ್ಲ. ಈಗ ಬಹುರಾಷ್ಟ್ರೀಯ ಕಂಪನಿಯ ಕಳೆನಾಶಕ ವಿಷದ ಏಜೆಂಟರಂತೆ ವಿಜ್ಞಾನಿಗಳು ವರ್ತಿಸುತ್ತಿದ್ದಾರೆಯೆ? ಕಳೆನಾಶಕಗಳ ಇತಿಹಾಸವೇ ಕರಾಳವಾಗಿದೆ.

ದಟ್ಟಡವಿಯಲ್ಲಿ ಅಡಗಿ ಕೂತಿರುತ್ತಿದ್ದ ವಿಯೆಟ್ನಾಂ ಯೋಧರನ್ನು ಹೊರಕ್ಕೆಳೆಯಲೆಂದು ಅಮೆರಿಕದ ಮಿಲಿಟರಿ ಇದೇ ಮೊನ್ಸಾಂಟೊ ಕಂಪನಿಯ ‘ಏಜೆಂಟ್ ಆರೇಂಜ್’ ಎಂಬ ಕಳೆನಾಶಕವನ್ನು ಗಿಡಮರಗಳ ಮೇಲೆ ಸುರಿದಿದ್ದರಿಂದ ಲೆಕ್ಕವಿಲ್ಲದಷ್ಟು ಕುಟುಂಬಗಳು ಈಗಲೂ ನರಳುತ್ತಿವೆ. ನಂತರ ಮೊನ್ಸಾಂಟೊ ಕಂಪನಿ ಹೊಸದಾಗಿ ಕಳೆನಾಶಕ ನಿರೋಧಕ (ರೌಂಡಪ್ ರೆಡಿ) ಸೋಯಾ, ಸಜ್ಜೆ, ಹತ್ತಿ, ಗೋಧಿ ಮುಂತಾದ ಕುಲಾಂತರಿ ಸಸ್ಯಗಳನ್ನು ಸೃಷ್ಟಿಸಿತು. ಅವಕ್ಕೆಲ್ಲ ಅದೇ ಕಂಪನಿಯ ‘ರೌಂಡಪ್’ ಹೆಸರಿನ ಕಳೆನಾಶಕ ವಿಷವನ್ನು ಸುರಿದರೆ ಕಳೆ ಮಾತ್ರ ಸಾಯುತ್ತವೆ, ಬೆಳೆ ಉಳಿಯುತ್ತವೆ. ಆದರೆ ಕಳೆ ಸುರಿದಲ್ಲೆಲ್ಲ ಮಣ್ಣಿಗೆ, ನೀರಿಗೆ, ಗಾಳಿಗೆ ವಿಷ ಹರಡುತ್ತದೆ. ಇತರ ಜೀವಿಗಳಿಗೆ ಹಾಗಿರಲಿ, ಮನುಷ್ಯರಲ್ಲೂ ಅದು ಕ್ಯಾನ್ಸರ್‌ಗೆ ಕಾರಣವಾಗಬಲ್ಲದು ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತು.

ಕಳೆದ ಮೇ ತಿಂಗಳಲ್ಲಿ ಜರ್ಮನಿ ಇದೇ ರೌಂಡಪ್‌ಗೆ (ಅದರ ವೈಜ್ಞಾನಿಕ ಹೆಸರು ‘ಗ್ಲೈಫೊಸೇಟ್’) ನಿಷೇಧ ಹೇರಿತು. ಜೂನ್‌ನಲ್ಲಿ ನೆದರ್ಲೆಂಡ್ಸ್ ನಿಷೇಧ ಹೇರಿತು. ಜುಲೈ ತಿಂಗಳಲ್ಲಿ ಫ್ರಾನ್ಸ್ ಕೂಡ ನಿಷೇಧಿಸಿತು. ಶ್ರೀಲಂಕಾ, ಬ್ರಝಿಲ್, ಅರ್ಜೆಂಟೈನಾ, ಕೊಲಂಬಿಯಾ ಹೀಗೆ ಸಾಲು ಸಾಲು ದೇಶಗಳು ರೌಂಡಪ್ಪನನ್ನು ಕತ್ತು ಹಿಡಿದು ಹೊರದಬ್ಬಿದವು. ಭಾರತ ಮಿಸುಕಲಿಲ್ಲ. ಈಗ ಬಾಯರ್ ಕಂಪನಿಯ ಕಳೆನಾಶಕವೂ ಅಷ್ಟೇ ಅಪಾಯಕಾರಿ ಎಂದು ಆರೋಗ್ಯ ವಿಜ್ಞಾನಿಗಳು ಹೇಳುತ್ತಿದ್ದಾರೆ. ಯದ್ವಾತದ್ವಾ ಬಳಸಿದರೆ ತಲೆಸುತ್ತು, ಪ್ರಜ್ಞಾಶೂನ್ಯತೆ, ಮೈಕೈ ನಡುಕ ಬರುತ್ತದೆಂಬುದು ಗೊತ್ತಾಗಿದೆ. ಇನ್ನು ಸಾವು ಗೆದ್ದು ನಿಲ್ಲಬಲ್ಲ ಸಾಸಿವೆಯ ಗುಣ ಇನ್ನೇನೇನೊ?  ಅಸಲೀ ರೈತರ ಅಭಿಪ್ರಾಯವನ್ನು ಯಾರೂ ಕೇಳುತ್ತಿಲ್ಲ. ಅತ್ತ ಬಿಟಿ ಹತ್ತಿ ಬೆಳೆದವರು ಮೊನ್ಸಾಂಟೊ ಬಾಣಲೆಗೆ ಬಿದ್ದಿದ್ದರೆ ಇತ್ತ ಸಾಸಿವೆಯ ಕೃಷಿಕರಿಗಾಗಿ ಬಾಯರ್ ಬೆಂಕಿ ಸಿದ್ಧವಾಗಿದೆ.