ಸಾಲದ ಕೂಪಕ್ಕೆ ಗ್ರಾಮೀಣ ಮಹಿಳೆಯರು -ಕೆ.ಪಿ.ಸುರೇಶ

women and bank credit

ರಾಷ್ಟ್ರಭಕ್ತಿಯ ಹುಸಿಪ್ರದರ್ಶನ, ಗೋರಕ್ಷಣೆಯ ನೆಪದ ಆವುಟಗಳ ವಿಕೃತ ಗಲಾಟೆಗಳಲ್ಲಿ ಮಾಧ್ಯಮಗಳೂ ಲೋಲುಪರಾಗುತ್ತಾ ದಿನಗಳು ಉರುಳುತ್ತಿದ್ದಂತೆ, ರಾಜ್ಯ ಮತ್ತೆ ಭೀಕರ ಬರಕ್ಕೆ ತುತ್ತಾಗುವ ಲಕ್ಷಣಗಳು ಈಗಲೇ ಕಾಣುತ್ತಿದೆ. ನಮ್ಮ ಜಲಾಶಯಗಳು ಅರ್ಧವೂ ತುಂಬಿಲ್ಲ. ಮುಂಗಾರು ಬೆಳೆಯೇ ಕೈ ಹತ್ತುವುದು ಕಷ್ಟವೆಂಬಂತೆ ತೋರುತ್ತಿದೆ. ಸರ್ಕಾರ ಇದನ್ನೆದುರಿಸಲು ಸಮರೋಪಾದಿಯ ಹೆಜ್ಜೆಗಳನ್ನು ಇಡುತ್ತದೆಂಬ ಆಶಯ ಇದೆ.
ಈ ಬರಗಾಲ, ಬೆಳೆ ನಷ್ಟ ಗ್ರಾಮೀಣ ಬದುಕಿನ ಮೇಲೆ ಆತ್ಯಂತಿಕ ಬದಲಾವಣೆ ತರುತ್ತದೆ ಎಂಬುದು ನಮಗೆಲ್ಲಾ ಗೊತ್ತು. ಆದರೆ ಇದಕ್ಕೆ ಪ್ರತಿಬಂಧಕವಾಗಿ ಸರ್ಕಾರ ಎರಡು ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಹಾಕಿಕೊಂಡಿದೆ. ಉದ್ಯೋಗ ಖಾತರಿ ಮತ್ತು ಗ್ರಾಮೀಣ ಜೀವನೋಪಾಯ ಸಂವರ್ಧನಾ ಮಿಶನ್. ಇವೆರಡೂ ಯುಪಿಎ ಕೂಸುಗಳು. ಅಂದರೆ ಕಾಂಗ್ರೆಸ್ ಸರ್ಕಾರ ನಮ್ಮದು ಎಂದು ಹೆಗ್ಗಳಿಕೆಯಲ್ಲಿ ಸಾಧಿಸಿ ತೋರಬೇಕಾಗಿದ್ದ ಕಾರ್ಯಕ್ರಮಗಳು.!!
ಮಹಿಳಾ ಸ್ವಸಹಾಯ ಸಂಘಗಳಿಗೆ ಆರ್ಥಿಕ ಸೌಲಭ್ಯ ನೀಡಿ ಅವರ ಜೀವನೋಪಾಯ ಸುಧಾರಿಸುವುದು ಈ ಜೀವನೋಪಾಯ ಸಂವರ್ಧನಾ ಮಿಶನ್‍ನ ಉದ್ದೇಶ.
ಈ ಕುರಿತ ಇತ್ತೀಚೆಗಿನ ಒಂದು ಅಧ್ಯಯನವನ್ನು (India Spend ಜಾಲತಾಣ)ನಾನಿಲ್ಲಿ ಸಾದರಪಡಿಸುತ್ತಿದ್ದೇನೆ
ಕಳೆದ ಮೂರು ವರ್ಷಗಳಲ್ಲಿ ಸುಮಾರು 75 ಸಾವಿರ ಕೋಟಿ ಸಾಲವನ್ನು ದೇಶದ ಲಕ್ಷಾಂತರ ಮಹಿಳೆಯರಿಗೆ ಸ್ವಸಹಾಯ ಸಂಘಗಳ ಮೂಲಕ ವಿತರಿಸಲಾಗಿದೆ. ಆದರೆ ಈಗಿನ ತಖ್ತೆ ಪ್ರಕಾರ ಸುಮಾರು 9000 ಕೋಟಿ ರೂಪಾಯಿಗಳಷ್ಟು ಮೊತ್ತ ಮರುಪಾವತಿಯಾಗದ ಕೆಟ್ಟ ಸಾಲ ಎಂದು ಪರಿಗಣಿತವಾಗಿದೆ. ಅಂದರೆ ಈ ಸಾಲ ಪಡೆದ ಮಹಿಳೆಯರಿಗೆ ಸಾಲ ಮರುಪಾವತಿ ಮಾಡಲಾಗುತ್ತಿಲ್ಲ. ದೇಶದ ಉದ್ಯಮಪತಿಗಳ ಕೆಟ್ಟ ಸಾಲದ ಮೊತ್ತ ನೋಡಿದರೆ ಇದೇನು ದೊಡ್ಡ ಮೊತ್ತ ಅಲ್ಲ. ಲಾಯ್ಡ್ ಸ್ಟೀಲ್ ಒಂದೇ 9500 ಕೋಟಿ ಸಾಲ ಮಾಡಿದೆ.!!
ಇದನ್ನೂ ಸರ್ಕಾರ ಮನ್ನಾ ಮಾಡುವ ಸಾಧ್ಯತೆ ಇದೆ. ಪ್ರಶ್ನೆ ಅದಲ್ಲ.!!
ಸ್ವಸಹಾಯ ಸಂಘಗಳು ಬಲಗೊಳ್ಳುತ್ತಿದ್ದಂತೆ ಅಭಿವೃದ್ಧಿ, ಬಡತನ ನಿರ್ಮೂಲನೆಗೆ ಈ ಮಹಿಳೆಯರ ಸ್ವಸಹಾಯ ಸಂಘಗಳನ್ನು ಚಾಲನಾ ಶಕ್ತಿಯಾಗಿ ಸರ್ಕಾರ ಪರಿಗಣಿಸಿದೆ. ಇವರಿಗೆ ಸಾಲ ಕೊಟ್ಟರೆ ಬಡತನ ನೀಗೀತು ಎಂಬುದು ಸರ್ಕಾರದ ಲೆಕ್ಕಾಚಾರ. ಮಹಿಳೆ ದುಡ್ಡಿನ ಅಪವ್ಯಯ ಮಾಡುವುದಿಲ್ಲ. ಅವಳಿಗೆ ಚಟಗಳಿಲ್ಲ, ಮಕ್ಕಳು ಸಂಸಾರದ ಹೊಣೆ ಇದೆ ಎಂಬ ಸತ್ಯಗಳನ್ನು ಎಲ್ಲರೂ ಸರ್ಕಾರಕ್ಕೆ ಹೇಳಿದ ಮೇಲೆ ಸರ್ಕಾರಕ್ಕೆ ಈ ಉಮೇದು ಬಂದದ್ದು.
ಈ ಸ್ವಸಹಾಯ ಸಂಘಗಳಿಗೆ ಗರಿಷ್ಠ ಸಾಲವನ್ನು ಆದ್ಯತಾ ವಲಯದೊಳಗೇ ಪರಿಗಣಿಸಿ ನೀಡಬೇಕು ಎಂದು ಬ್ಯಾಂಕುಗಳಿಗೆ ಸರ್ಕಾರವೂ ಹೇಳಿತು. ಬ್ಯಾಂಕುಗಳೋ ಗ್ರಾಮೀಣ ವಲಯದಲ್ಲಿ ನೀಡಬೇಕಾದ ಸಾಲದ ಗುರಿ ತಲುಪಲು ಇದೇ ಸುಲಭದ ದಾರಿ ಎಂದು ಪರಿಗಣಿಸಿ ಬ್ಯಾಂಕು ಖಾತೆ ಇದ್ದರೆ ಸಾಕು ಸಾಲ ಕೊಡುವ ಪರಿಪಾಠ ಶುರುಮಾಡಿದವು.
ಈ ಅಧ್ಯಯನ ಕಲಘಟಗಿಯ ಒಂದು ಉದಾಹರಣೆ ನೀಡುತ್ತದೆ. ಕಲಘಟಗಿಯ ಜನಸಂಖ್ಯೆ 17 ಸಾವಿರ. ಆದರೆ ಅಲ್ಲಿನ ಸ್ವಸಹಾಯ ಸಂಘಗಳ ಸದಸ್ಯರ ಸಂಖ್ಯೆ ಲೆಕ್ಕ ಹಾಕಿದರೆ 25ಸಾವಿರ ದಾಟುತ್ತದೆ. ಇದು ಸ್ವಸಹಾಯ ಸಂಘಗಳ ಸ್ಥಿತಿ. ಎರಡು ಮೂರು ಕಡೆ ಸದಸ್ಯರಾಗಿ ಸಾಲ ಪಡೆಯುತ್ತಾ ಹೋಗಿ ಈಗ ಸುಸ್ತಿದಾರರಾಗಿ ಕೂತಿದ್ದಾರೆ.
ಈ 9ಸಾವಿರ ಕೋಟಿ ಸುಸ್ತಿಯಲ್ಲಿ ಕರ್ನಾಟಕದ ಪಾಲು ರೂ. 2235 ಕೋಟಿ. ಪಕ್ಕದ ಆಂಧ್ರ, ತೆಲಂಗಾಣದ ಪಾಲು ತಲಾ ರೂ. 1768 ಕೋಟಿ ಮತ್ತು 1415 ಕೋಟಿ. ಸ್ವಸಹಾಯ ಸಂಘಗಳ ಸಾಲ ಕೆಟ್ಟ ಸಾಲವೆಂದು ಆಗಿದ್ದರಲ್ಲಿ ಈ ಮೂರು ರಾಜ್ಯಗಳ ಪಾಲು ಶೆ. 87. ಇನ್ನು ಬ್ಯಾಂಕುಗಳನ್ನು ನೋಡಿದರೆ ಭಾರತೀಯ ಸ್ಟೇಟ್ ಬ್ಯಾಂಕ್ ಸುಮಾರು 1556 ಕೋಟಿ ಸಾಲ ಕೊಟ್ಟು ಕೂತಿದೆ.
ಏನಾಗುತ್ತಿದೆ ಹಾಗಿದ್ದರೆ?
ದೊಡ್ಡ ಕಾರ್ಪೋರೇಟ್ ಸಾಲಿಗರ ಮೊತ್ತಕ್ಕೆ ಹೋಲಿಸಿದರೆ ಇದು ಏನೂ ಅಲ್ಲ. ನಾಳೆ ಸರ್ಕಾರವೂ ಚುನಾವಣೆ ಸಂದರ್ಭದಲ್ಲಿ ಇದನ್ನು ಮನ್ನಾ ಮಾಡಲೂ ಬಹುದು. ಆದರೆ ನಮ್ಮ ಗ್ರಾಮೀಣ ಸಮಸ್ಯೆ ಇನ್ನೂ ಆಳವಾದದ್ದು. ಸಾಲ ಪಡೆಯಲು ಬೇಕಾದ ಮನಃಸ್ಥಿತಿಗೆ ಮುಖ್ಯವಾದದ್ದು ಅದರ ಬಳಕೆಯ ಅರಿವು. ಮರುಪಾವತಿಯ ಪ್ಲಾನ್. ಇದನ್ನು ಆರ್ಥಿಕ ಸಾಕ್ಷರತೆ ಅಥವಾ ಬ್ಯಾಂಕಿಂಗ್ ಸಾಕ್ಷರತೆ ಎಂದು ಪರಿಣಿತರು ಕರೆಯುತ್ತಾರೆ. ಇದನ್ನು ಕಲಿಸುವುದೆಂದರೆ, ನಾಳೆ ಸಾಲ ಕತ್ತಿಗೆ ಉರುಳಾಗುವ ಸಾಧ್ಯತೆಯ ಅರಿವು ಎಂದರ್ಥ.
ಸ್ವಸಹಾಯ ಸಂಘಗಳಿಗೆ ಸಾಲ ನೀಡುವುದೆಂದರೆ ಏನಾದರೂ ಹುಟ್ಟುವಳಿ/ ಆದಾಯ ಸೃಷ್ಟಿಗೆ ಅನುವು ಮಾಡಿ ಕೊಡುವುದು ಎಂಬುದು ಸರ್ಕಾರದ ಘೋಷಿತ ನೀತಿ. ಬಹುತೇಕ ಸ್ವಸಹಾಯ ಸಂಘಗಳು ಉಳಿತಾಯದ ಅವಧಿ ಮುಗಿದ ಮೇಲೆ ಬ್ಯಾಂಕಿನಿಂದ ಸಾಲ ತೆಗೆದುಕೊಂಡು ಸದಸ್ಯರಿಗೆ ಹಂಚಿ ಹೆಚ್ಚಿನ ಬಡ್ಡಿ ವಸೂಲು ಮಾಡುತ್ತವೆ. (ಅದು ಅವರೊಳಗಿನ ವ್ಯವಹಾರ. ಈ ಲಾಭ ಅವರೊಳಗೇ ಹಂಚಿಕೆ ಆಗುತ್ತದೆ.) ಆದರೆ ಬಹುತೇಕ ಸಾಲ ಕೃಷಿ ಹಂಗಾಮಿನಲ್ಲಿ ಉಳುಮೆ, ಬೀಜ, ಗೊಬ್ಬರಕ್ಕೆ ಸಂಬಂಧಿಸಿದ್ದು. ಇದು ಬಿಟ್ಟರೆ, ವೈಯಕ್ತಿಕ ಕೌಟುಂಬಿಕ ಬಾಬ್ತಿಗೆ. ಮನೆ ರಿಪೇರಿಗೆ ಸಾಲ ಮಾಮೂಲಿ. ಆದರೆ ಇವ್ಯಾವುದೂ ದಾಖಲಾಗುವುದಿಲ್ಲ.
ಇತ್ತ ಖಾಸಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಕಂಡಕಂಡಲ್ಲಿ ಅಂಗಡಿ ತೆರೆದು ಸಾಲ ಕೊಡುವುದು ಶುರು ಮಾಡಿವೆ. ಒಂದು ಕಡೆ ಸಾಲ ಪಡೆದ ಮಹಿಳೆಯರು ಆ ಸಾಲ ತೀರಿಸಲು ಇನ್ನೊಂದು ಕಡೆ ಸಾಲ ಮಾಡುತ್ತಾರೆ. ಸಾಲ ವಸೂಲಿಗೆ ದೇವರ ಮೇಲೆ ಪ್ರಮಾಣ ಮಾಡಿಸುವ ಕ್ರಮವೂ ಅಲ್ಲಲ್ಲಿ ಜಾರಿಗೆ ಬಂದಿದ್ದು, ಮುಂದಿನ ವರ್ಷದ ವೇಳೆಗೇ ಇದು ಆಯ್ಕೆಯೇ ಇಲ್ಲದ ಸ್ಥಿತಿಗೆ ತಲುಪುತ್ತದೆ.
ನಾನೇ ಅಧ್ಯಯನ ಮಾಡಿದ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘಗಳಲ್ಲಿ ಅಲ್ಲಿನ ಸದಸ್ಯೆಯರು, ತಂತಮ್ಮ ಸ್ವಸಹಾಯ ಸಂಘಗಳಿಂದ ಸಾಲ ಪಡೆಯಲಾರದೇ ಮೈಕ್ರೋ ಫೈನಾನ್ಸ್ ಮೊರೆ ಹೋಗಿರುವ ಉದಾಹರಣೆಗಳಿವೆ. ಸುಸ್ತಿಯಾದ ಕಾರಣ ಬ್ಯಾಂಕುಗಳು ಮತ್ತೆ ಸಾಲ ನೀಡಲು ನಯವಾಗಿ ನಿರಾಕರಿಸಿವೆ. ಇನ್ನೊಂದೆಡೆ, ಒಬ್ಬೊಬ್ಬರನ್ನೂ ಹುಡುಕಿ ಸಾಲ ಕೊಡುವ ಬದಲು, ಸ್ವಯಂಸೇವಾ ಸಂಸ್ಥೆಗಳನ್ನು ವ್ಯವಹಾರದ ಏಜೆಂಟುಗಳಾಗಿ ನೇಮಿಸಿಕೊಂಡು ಅವರಿಗೆ ದೊಡ್ಡ ಮೊತ್ತ ನೀಡಿ, ‘ಹೇಗಾದರೂ ಕೊಡಿ, ಎಷ್ಟಾದರೂ ಬಡ್ಡಿ ಹಾಕಿ, ನಮ್ಮ ದುಡ್ಡು ಸರಿಯಾಗಿ ವಾಪಾಸು ಮಾಡಿ’ ಎಂದು ಬ್ಯಾಂಕುಗಳೂ ವ್ಯವಹಾರ ಕುದುರಿಸುತ್ತಿವೆ.
ಈ ಯಾವ ಸಾಲ ನೀಡಿಕೆಯಲ್ಲೂ ಮಹಿಳೆಯರಿಗೆ ಮುಂದಾಗುವ ಅಪಾಯದ ಬಗ್ಗೆ ಯಾರೂ ಹೇಳುವ ಗೋಜಿಗೇ ಹೋಗಿಲ್ಲ.
ಆದಾಯ ವೃದ್ಧಿ ಆಗುವ ಉದ್ಯಮಶೀಲತೆ ಎಲ್ಲಾ ಕಡೆ ಸಾಧ್ಯವಿಲ್ಲ. ಎಲ್ಲರಿಂದಲೂ ಸಾಧ್ಯವಿಲ್ಲ. ಆದರೆ ಅದರ ಬಗ್ಗೆ ತಿಳಿ ಹೇಳಬೇಕಲ್ಲ? ಆ ಕೆಲಸ ಎಲ್ಲೂ ಆಗದೇ, ಗ್ರಾಮೀಣ/ ರೈತಮಹಿಳೆಯರೂ ನಮ್ಮ ರೈತರಂತೆ ಸಾಲದ ಕೂಪಕ್ಕೆ ಬೀಳುತ್ತಿದ್ದಾರೆ.
ಗ್ರಾಮೀಣ ಜೀವನೋಪಾಯ ಸಂವರ್ಧನಾ ಸೊಸೈಟಿ (ಸಂಜೀವಿನಿ) ಎನ್ನೋದು ಕರ್ನಾಟಕದಲ್ಲೂ ಇದೆ. ವಿವಿಧ ಜಿಲ್ಲೆಗಳಲ್ಲಿ ದಂಡಿಯಾಗಿ ಈ ಸ್ವಸಹಾಯ ಸಂಘಗಳಿಗೆ ಸಹಾಯ ಧನ/ಸಾಲ ನೀಡುವ ಕೆಲಸ ಮಾಡಿದೆ. ಬಂಡವಾಳ ನಿಧಿ ಎಂಬ ಈ ನಿಧಿಯನ್ನು ನಿರಾಮಯವಾಗಿ ಹಂಚುತ್ತಾ ಗುರಿ ಸಾಧನೆಯ ಪುಳಕದಲ್ಲಿ ಸಂಸ್ಥೆಯೂ ಇದೆ. ಆದರೆ ಈ ಜಿಲ್ಲೆಗಳ ಬಹುತೇಕ ಸಂಜೀವಿನಿ ಸಿಬ್ಬಂದಿಗೆ ಗ್ರಾಮೀಣ ಜೀವನೋಪಾಯಗಳು ಯಾವುವು? ಎಲ್ಲೆಲ್ಲಾ ಇವೆ? ಯಾವುದನ್ನು ಸುಧಾರಿಸಬಹುದು ಎಂಬ ಐಡಿಯಾವೇ ಇಲ್ಲ. ಸ್ವತಃ ಸಂಸ್ಥೆಯಲ್ಲೇ ಪ್ರಾಯಶಃ ಗ್ರಾಮೀಣ ಜೀವನೋಪಾಯಗಳ ಒಂದು ನಕ್ಷೆ ಇಲ್ಲ. ಕೆ.ಎಂಎಫ್ ಮೂಲಕ, ತೆಂಗು ಮಂಡಳಿ ಮೂಲಕ ಅವರ ಕಾರ್ಯಕ್ರಮಗಳನ್ನು ತನ್ನ ಅನುದಾನದೊಂದಿಗೆ ಸಹಯೋಗದ ಹೆಸರಲ್ಲಿ ಅನುಷ್ಠಾನ ಮಾಡುವುದಷ್ಟೇ ಸದ್ಯಕ್ಕೆ ಕಾಣಿಸುತ್ತಿರುವುದು. ಈ ಸ್ವಸಹಾಯ ಸಂಘಗಳಿಗೆ ಲೆಕ್ಕಪತ್ರದ ಶಿಸ್ತಿನ ತರಬೇತಿ ನೀಡಲು ಸಮುದಾಯ ಸಂಪನ್ಮೂಲ ವ್ಯಕ್ತಿಗಳನ್ನು ಸೃಷ್ಟಿ ಮಾಡುವ ಪರಿಕಲ್ಪನೆಯೂ ಈ ಗ್ರಾಮೀಣ ಜೀವನೋಪಾಯ ಮಿಷನ್‍ನಲ್ಲಿದೆ.
ಶಿಸ್ತು ಕಲಿಸುವುದೆಂದರೆ ಏನು? ಅನುತ್ಪಾದಕ ವೆಚ್ಚಕ್ಕೆ ಸಾಲ ಮಾಡಬೇಡಿ ಎಂದು ಹೇಳುವುದು ಸುಲಭ. ಅನುತ್ಪಾದಕ ವೆಚ್ಚ ಯಾವುದು ಎಂದು ಕೇಳಿದರೆ, ನಗರದಲ್ಲಿ ಮಾಮೂಲಿ ಸಡಗರ ವಿಚಾರಗಳೆಲ್ಲಾ ಹಳ್ಳಿ ಮಟ್ಟಿಗೆ ಅನವಶ್ಯಕ ಎಂದು ಹೇಳಬಹುದು. ಹಬ್ಬ ಹರಿದಿನ, ಮದುವೆಗಳ ಬಗ್ಗೆಯೇನೋ ನೀತಿಬೋಧೆ ಮಾಡಬಹುದು. ಆದರೆ ಆರೋಗ್ಯ, ಶಿಕ್ಷಣದ ವೆಚ್ಚ? ಕೃಷಿ ಸೋತಾಗ ಮನೆ ನಿಭಾಯಿಸುವ ವೆಚ್ಚ?

ಸಾಲದ ಅನಿವಾರ್ಯತೆ ಗ್ರಾಮೀಣ ಮಹಿಳೆಗೆ ಹುಟ್ಟಿದ್ದು ಹೇಗೆ? ಕೃಷಿ ಮೂಲದ ಕೆಲಸಗಳಿಗೆ ರೈತನಿಗೆ ಸಾಲ ಹುಟ್ಟದೇ ಅನಿವಾರ್ಯವಾಗಿ ಮಹಿಳೆಯ ಮೂಲಕ ಸಾಲ ಎತ್ತುವ ಸ್ಥಿತಿ ಬಂದಿದೆ. ಕೃಷಿಕೆಲಸ, ಮನೆ ರಿಪೇರಿ, ಆಸ್ಪತ್ರೆ ಖರ್ಚು, ಬಟ್ಟೆ ಬರೆ, ಹೀಗೆ ಈ ಸಾಲ ಎಲ್ಲೆಡೆ ಹರಿದಾಡುತ್ತಿದೆ. ಕೃಷಿಯಲ್ಲಿ ಹುಟ್ಟುವಳಿ ಇಲ್ಲದೇ, ಕೂಲಿ ಮಾಡುವ ಸ್ಥಿತಿ ಬಂದಾಗಲು ಒಂದು ಹಿಡಿ ಮೊತ್ತದ ಕಾಸು ಹುಟ್ಟುವುದು ಈ ಮೂಲಕವೇ.
ಅಂದರೆ ಕೃಷಿ ಅಸ್ಥಿರಗೊಳಿಸಿ ರೈತರನ್ನು ಮೊದಲು ದಿಕ್ಕೆಡಿಸಿದ ಸರ್ಕಾರ ಈಗ ಮಹಿಳೆಯರನ್ನೂ ಅದೇ ಕೂಪಕ್ಕೆ ತಳ್ಳುತ್ತಿದೆ. ಹರಿಶ್ಚಂದ್ರನೊಂದಿಗೆ ಅವನ ಮಡದಿಯೂ ದಿಕ್ಕಾ ಪಾಲಾದ ಹಾಗೆ!
ನಮ್ಮ ಮುಖ್ಯಮಂತ್ರಿಗಳು ಸಾಲ ಮನ್ನಾ ಮಾಡುವ ಬಗ್ಗೆ ಮಾತಾಡಿದ್ದಾರೆ. ಈ ರೈತಾಪಿ ಸಾಲದ ಮೊತ್ತ ಸುಮಾರು 30 ಸಾವಿರ ಕೋಟಿ. ಇದೇ ಮೊತ್ತದಲ್ಲಿ ರೈತರ ಉತ್ಪನ್ನವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಿದ್ದರೆ; ನಮ್ಮ ಸರ್ಕಾರೀ ಶಾಲೆಗಳನ್ನು, ಆಸ್ಪತ್ರೆಗಳನ್ನು ಗಟ್ಟಿಗೊಳಿಸಿದ್ದರೆ ಈ ಮನ್ನಾದ ಅಗತ್ಯವಿರುತ್ತಿರಲಿಲ್ಲ.
ಆದರೆ ಸಾಲ ಮನ್ನಾ ಅನ್ನುವುದೂ ರಾಜಕೀಯ ಅಸ್ತ್ರ ಅಲ್ಲವೇ. ಮುಂದಿನ ಚುನಾವಣೆಗೆ ಮೊದಲು ಸ್ಪರ್ಧೆಗಿಳಿದವರಂತೆ ಮೋದಿ ಮತ್ತು ಸಿದ್ಧರಾಮಯ್ಯನವರು ಈ ಮನ್ನಾ ಘೋಷಣೆ ಮಾಡುವುದು ಬಹುತೇಕ ಖಚಿತ. ಮುಳುಗಿದವನಿಗೆ ಛಳಿಯೇನು, ಮಳೆಯೇನು ಎಂಬಂತೆ ಈಗಾಗಲೇ ನಮ್ಮ ಬಹುತೇಕ ರೈತರು ಸಾಲ ಮರುಪಾವತಿ ವಿಷಯದಲ್ಲಿ ಭಂಡ ಬಿದ್ದಿದ್ದಾರೆ. ನಮ್ಮ ಮಹಿಳೆಯರೂ ಈ ದಾರಿ ಹಿಡಿಯುವದು ಖಚಿತ. ನಾಳೆ  ಸಾಲ ಮನ್ನಾ ಆಯಿತೆನ್ನಿ. ಆದರೆ ಇದೇನು ಮೋಕ್ಷದ ದಾರಿಯಲ್ಲ. ಸಾಲಮನ್ನವಾದ ಮಾರನೇ ದಿನವೂ ಶಾಲೆ ಫೀಸು, ಬೀಜ ಖರೀದಿ, ಆಸ್ಪತ್ರೆ ಭೇಟಿ, ಬೆಲೆ ಕುಸಿತ ಮುಂದುವರಿಯುತ್ತಿರುತ್ತದೆ. ಇದನ್ನು ತಿದ್ದುವ ನಡೆ ಸರ್ಕಾರಕ್ಕಿರುವಂತೆ ಕಾಣುತ್ತಿಲ್ಲ್ಲ. ಅಂದರೆ ಮತ್ತೆ ಪುನಃ ಇನ್ನೊಂದು ಪ್ರದರ್ಶನ ಆರಂಭವಾಗುತ್ತದೆ. ಆಗ ಮತ್ತಷ್ಟು ಮಂದಿ ಈ ಜರ್ಝರಿತ ಸಮುದಾಯಕ್ಕೆ ಸೇರ್ಪಡೆಯಾಗುತ್ತಾರೆ. ಈಗಿರುವವರಿಗೆ ಇನ್ನಷ್ಟು ವಯಸ್ಸಾಗಿರುತ್ತೆ..!!
ಸ್ವಸಹಾಯ ಸಂಘಗಳ ಈ ಸಾಲದ ಚಿತ್ರ ಬರ ಎದುರಾಗಲಿರುವ ಮುಂದಿನ ಬೇಸಿಗೆಯಲ್ಲಿ ಇನ್ನಷ್ಟು ದಾರುಣವಾಗಲಿದೆ.
ಆಗಲೂ ಹಸು, ಸೈನ್ಯ, ಕಾಶ್ಮೀರಗಳ ತ್ರಿಶೂಲ ಪ್ರದರ್ಶನವೇ ನಮ್ಮ ಗಮನ ಸೆಳೆಯಬಹುದು. ಈ ಪೈಪೋಟಿಯ ಪ್ರದರ್ಶನ ನಡೆಯುವಾಗ ಬರಪರಿಹಾರ, ಬೆಳೆ ಪರಿಹಾರಗಳಲ್ಲಿ ಪುಷ್ಕಳ ಭೋಜನವೂ ನಡೆಯುತ್ತಿರುತ್ತೆ. ಭೂತಯ್ಯನ ಮಗ ಅಯ್ಯು ಸಿನೆಮಾದ ಊಟದ ದೃಶ್ಯದ ಪಾತ್ರಧಾರಿಗಳು ನಮ್ಮವರೇ ಆಗಿರುತ್ತಾರೆ.