ಸರ್ಕಾರದ ಉಳಿತಾಯ ಯೋಜನೆ! -ಶಾರದಾ ಗೋಪಾಲ

                                       ration
   ಆಕೆ ಗಂಗವ್ವ. ಕುಷ್ಠ ರೋಗದಿಂದ ಕೈಬೆರಳುಗಳೆಲ್ಲ ಮುರುಟಿ ಹೋಗಿವೆ. ಉದ್ಯೋಗ ಖಾತರಿಯಲ್ಲಿ ಕೆಲಸಕ್ಕೆ ಅರ್ಜಿ ಹಾಕಿದ್ದರೂ, ಕೆಲಸ ಮಾಡಲು ಸಾಧ್ಯವಿಲ್ಲ. ಬೆರಳೇ ಇಲ್ಲದ ಕೈಯಲ್ಲಿ ಸಲಿಕೆ ಹಿಡಿಯಲು, ಬುಟ್ಟಿ ಎತ್ತಲು ಆಗದು. ಗಂಡ ಸತ್ತಿದ್ದಾನೆ. ಇದ್ದೊಬ್ಬ ಮಗಳು ಮದುವೆಯಾಗಿ ಗಂಡನ ಮನೆಗೆ ಹೋಗಿದ್ದಾಳೆ. ತಿಂಗಳಿಗೆ 5 ಕೆ.ಜಿ. ಆಹಾರ ಹೊಟ್ಟೆ ತುಂಬಿಸುತ್ತಿಲ್ಲ.

‘ನಾ ಇನ್ನೇನು ಬಹಳ ದಿನ ಬದುಕಂಗಿಲ್ರೀ, ಹೊಟ್ಟೆಗಿಲ್ಲದೆ ಸಾಯ್ತೀನಿ’ ಎಂದು ಕೃಶ ಶರೀರದ ಗಂಗಮ್ಮ ಹೇಳುವಾಗ ಆಕೆಯ ಕಣ್ಣಲ್ಲಿ ನೀರಿಲ್ಲ. ಆದರೆ ಅವಳ ಸ್ಥಿತಿ ನೋಡಿದ ನಮ್ಮ ಕಣ್ಣು ಜಿನುಗುವುದು ಖಚಿತ.

ಈ ಒಂಟಿ ಹೆಣ್ಣು ಮಗಳು ತನಗೆ ಕೊಟ್ಟ 35 ಕೆ.ಜಿ. ಪಡಿತರವನ್ನು ಸಂತೆಯಲ್ಲಿಟ್ಟು ಮಾರುತ್ತಾಳೆಂದು ಆರೋಪಿಸಿ  9 ತಿಂಗಳ ಹಿಂದೆಯೇ ಆಕೆಯ ಅಂತ್ಯೋದಯ ಕಾರ್ಡನ್ನು ಸರ್ಕಾರ ಕಿತ್ತುಕೊಂಡಿತ್ತು. ಆದೇಶವಿಲ್ಲ, ಏನೂ ಇಲ್ಲ. ರೇಷನ್ನಿಗೆ ಹೋಗಿದ್ದಾಕೆಯ ಕೈಯಲ್ಲಿದ್ದ ಕಾರ್ಡನ್ನು ಪಡಿತರ ಅಂಗಡಿಯಾತ ಕಿತ್ತುಕೊಂಡು, ‘ಈ ಕಾರ್ಡ್ ಕೊಟ್ಟು ತಾಲ್ಲೂಕಾಫೀಸಿಂದ ಬಿಪಿಎಲ್ ಕಾರ್ಡ್ ತಗೊಂಡು ಬಾ. ಇನ್ನು ಮುಂದೆ ನಿನಗೆ 3 ಕೆ.ಜಿ. ಅಕ್ಕಿ, 2 ಕೆ.ಜಿ. ಗೋಧಿ ಅಷ್ಟೇ’ ಎಂದು ಅಷ್ಟನ್ನೇ ಸುರುವಿದ್ದ. 35 ಕೆ.ಜಿ.ಗೆಂದು ದೊಡ್ಡ ಚೀಲ ತಂದಿದ್ದ ಗಂಗಮ್ಮ  ದೊಡ್ಡದಾಗಿ ಬಾಯಿ ತೆರೆದು ಅಳುತ್ತಾ ವಾಪಸ್‌ ಬಂದಿದ್ದಳು.

ಕಳೆದ ಏಪ್ರಿಲ್‌ನಿಂದ ರಾಜ್ಯ ಸರ್ಕಾರ ರಾಜ್ಯದ ಬಿಪಿಎಲ್ ಕಾರ್ಡುದಾರರೆಲ್ಲರಿಗೂ ಉಚಿತವಾಗಿ ಅಕ್ಕಿ, ಗೋಧಿ ನೀಡುವುದಾಗಿ ಘೋಷಿಸಿತು. ಆದರೆ ಇದರ ಹಿಂದೆ ನಡೆದ ನಾಟಕ ರೇಷನ್ ತರದವರಿಗೆ ಗೊತ್ತಾಗಲೇ ಇಲ್ಲ. ‘ಉದ್ಯೋಗ ಖಾತರಿಯ ₹ 204 ಮತ್ತು ಈ ಉಚಿತ ರೇಷನ್ ಎರಡು ಸಾಕು, ಇನ್ನು ಈ ಜನರೆಲ್ಲರೂ ಪುಕ್ಕಟೆ ಉಂಡು, ಮಲಗೆದ್ದು ಪಗಾರ ಪಡೆದು ಸುಖವಾಗಿರುತ್ತಾರೆ, ಕೆಲಸ ಮಾಡಲು ಸಿಕ್ಕುವುದೇ ಇಲ್ಲ’ ಎಂದು ಶಪಿಸುವ ಮಧ್ಯಮ ವರ್ಗದವರಿಗೆ ನಿಜಸ್ಥಿತಿಯ ಅರಿವಾಗಲು ವಾಸ್ತವದ ಒಳ ಹೊಕ್ಕು ನೋಡಿದರಷ್ಟೇ ಸಾಧ್ಯ.

ಕುಟುಂಬಕ್ಕೆ 30 ಕೆ.ಜಿ. ಆಹಾರ ಕೊಡುತ್ತಿದ್ದ ಸರ್ಕಾರ ಏಕಾಏಕಿ ಒಬ್ಬರಿಗೆ 5 ಕೆ.ಜಿ. ಎಂದು ಹಿಂದಿನ ಬಿಜೆಪಿ ಸರ್ಕಾರದ ಯುನಿಟ್ ಪದ್ಧತಿಯನ್ನು ಜಾರಿಗೊಳಿಸಿತ್ತು. ಅಂದರೆ ಒಬ್ಬರಿಗೆ ತಿಂಗಳಿಗೆ 3 ಕೆ.ಜಿ. ಅಕ್ಕಿ, 2 ಕೆ.ಜಿ. ಗೋಧಿ. ಇನ್ನೂ ಹೆಚ್ಚಿಗೆ ಕೊಟ್ಟರೆ ನಮ್ಮ ಜನ ಮಾರಿಕೊಳ್ಳುತ್ತಾರೆ ಎಂದು ಸರ್ಕಾರ ಬಲು ವಿಚಾರ ಮಾಡಿ ಬಡ ಜನರ ಹೊಟ್ಟೆಯನ್ನು ಚಿವುಟಿಬಿಟ್ಟಿತ್ತು.

ಕುಟುಂಬದಲ್ಲಿ ಮೂವರಿದ್ದರೆ ತಲಾ 8 ಕೆ.ಜಿ.ಯಂತೆ ಅಕ್ಕಿ ಸಿಗುತ್ತಿದ್ದುದು ಈಗ ಒಮ್ಮೆಗೇ ತಲಾ 3 ಕೆ.ಜಿ.ಗಿಳಿದಿತ್ತು. ಜೊತೆಗೆ  ಗೋಧಿ ನಮ್ಮ ಆಹಾರವಲ್ಲ, ಇಲ್ಲಿನ ಹವಾಮಾನಕ್ಕೆ ಗೋಧಿ ಹೊಂದುವುದಿಲ್ಲ, ಬಿಸಿಲಲ್ಲಿ ದುಡಿಯುವ ಜನರಿಗೆ ಅದು ಬಹಳ ಉಷ್ಣ ಎಂದು ಜನರ ಅಭಿಪ್ರಾಯ. ಆದರೆ ಸರ್ಕಾರ ಅದನ್ನೆಲ್ಲ ಕೇಳದು, ಬದಲಾಗಿ ರೇಷನ್ನಿನಲ್ಲಿ ಅದನ್ನು ತುರುಕಿ ಜನರ ಆಹಾರದ ಭಾಗವಾಗಿಸಲಾಗಿದೆ. ಹಳ್ಳಿ ಹಳ್ಳಿಯಲ್ಲಿ 3 ಕೆ.ಜಿ. ರೇಷನ್ನಿನಿಂದ ಜನ ರೋಸಿಹೋಗಿದ್ದಾರೆ. ಕೆರಳಿದ್ದಾರೆ.

ಅದಾದರೂ ಪ್ರತಿ ತಿಂಗಳೂ ಸಿಗುವ ಖಾತರಿ ಇದೆಯೇ? ಖಂಡಿತ ಇಲ್ಲ. ಅಂಗಡಿ ಮುಂದೆ ಸಾಲಲ್ಲಿ ನಿಂತು ಪಾಳಿ ಬಂದಾಗಲೇ ಗೊತ್ತಾಗುವುದು ಈ ಬಾರಿ ತನ್ನ ಪಾಲಿಗೆ ಪಡಿತರ ಇಲ್ಲ ಎಂದು! ರೇಷನ್ ಪಡೆಯಬೇಕಾದವರ ಪಟ್ಟಿಯಲ್ಲಿ ಅವರ ಹೆಸರು ಬಂದಿರುವುದಿಲ್ಲವಂತೆ. ರೇಷನ್ ಪಟ್ಟಿಯಲ್ಲಿ ಹೆಸರು ಯಾಕೆ ಬಂದಿಲ್ಲ? ಅದು ಅಂಗಡಿಯವನಿಗೆ ಗೊತ್ತಿಲ್ಲ. ‘ಮೇಲೆ ಹೋಗಿ ಕೇಳಿ’ ಎನ್ನುತ್ತಾನೆ.

ಅಲ್ಲಿಂದ ಶುರು ರೇಷನ್ ಕಾರ್ಡ್ ಯಾತ್ರೆ. ಪಂಚಾಯಿತಿಯಲ್ಲಿ ಕೇಳಿದರೆ ತಾಲ್ಲೂಕಾಫೀಸಿಗೆ, ತಾಲ್ಲೂಕಾಫೀಸಿನಲ್ಲಿ ಕೇಳಿದರೆ ಪಂಚಾಯಿತಿ ಆಫೀಸಿಗೆ ಮತ್ತೆ ಅರ್ಜಿ ಕೊಡು, ಫೋಟೊ ತೆಗೆಸು, ಕಾರ್ಡ್ ಬರುವ ಮೊದಲು ಎಸ್ಸೆಮ್ಮೆಸ್ ಕಳಿಸು, ಕಾರ್ಡು ಬಂದಮೇಲೆ ಹೆಬ್ಬೆರಳು ಗುರುತು ನೀಡು ಇತ್ಯಾದಿ… ಉಚಿತ ಅಕ್ಕಿಗಾಗಿ ಕಾರ್ಡ್ ಪಡೆಯಲು ಇಷ್ಟೆಲ್ಲ ಗೋಡೆಗಳು. ಈ ಎಲ್ಲ ಪ್ರಕ್ರಿಯೆ ಮುಗಿಯುವ ವೇಳೆಗೆ ಎರಡು ವರ್ಷಗಳೇ ಕಳೆದಿರುತ್ತವೆ. ಆ ಕುಟುಂಬದ ಎರಡು ವರ್ಷಗಳ ಕಾಳನ್ನು ಸರ್ಕಾರ ಉಳಿತಾಯ ಮಾಡಿರುತ್ತದೆ.

ಕಾರ್ಡು ಮತ್ತು ಕಾಳು ವಿತರಣೆಯ ಗೊಂದಲ, ಸಮಸ್ಯೆಗಳನ್ನು ಪರಿಹರಿಸಲೆಂದೇ ಸರ್ಕಾರದ ‘ಆಹಾರ ಅದಾಲತ್’ ಯೋಜನೆ ಇದೆ. ಪ್ರತಿ ತಿಂಗಳೂ ತಾಲ್ಲೂಕು ಮಟ್ಟದ ನೋಡಲ್ ಅಧಿಕಾರಿಗಳು 7ನೇ ತಾರೀಖು ಪ್ರತಿ ರೇಷನ್ ಅಂಗಡಿಯ ಮುಂದೂ ಅದಾಲತ್ ನಡೆಸಬೇಕು! ಆದೇಶ ಎಷ್ಟು ಅವಾಸ್ತವಿಕವೋ ಅಷ್ಟೇ ಹಾಸ್ಯಾಸ್ಪದವಾದದ್ದು ಕೂಡ. ಒಂದೇ ದಿನ ತಾಲ್ಲೂಕಿನ ಎಲ್ಲ ರೇಷನ್ ಅಂಗಡಿಗಳ ಮುಂದೆ ಅದಾಲತ್ ಮಾಡಬೇಕು. ಅಸಾಧ್ಯದ ಆದೇಶ ಹೊರಡಿಸಿ ಸರ್ಕಾರ ಸುಮ್ಮನಾಯಿತು, ಅಧಿಕಾರಿಗಳು ಅದನ್ನು ಮುಟ್ಟುವ ಗೋಜಿಗೆ ಹೋಗಲಿಲ್ಲ. ಯೋಜನೆ ಜಾರಿಗೆ ಬರಲೇ ಇಲ್ಲ.

ಜನರ ಸಮಸ್ಯೆಗಳನ್ನು ಬಗೆಹರಿಸಿ ನಿಜವಾಗಿ ಅವಶ್ಯಕತೆ ಇರುವವರಿಗೆ ರೇಷನ್ ತಲುಪಿಸಬೇಕೆಂಬ ಇಚ್ಛಾಶಕ್ತಿ ಸರ್ಕಾರಕ್ಕೆ ಇದ್ದಿದ್ದರೆ, ಆಹಾರ ಅದಾಲತ್‌ನ್ನು ಖಂಡಿತ ಸರಿಯಾಗಿ ಮಾಡಿ ಸ್ಥಳೀಯ ಸಮಸ್ಯೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬಹುದಿತ್ತು. ಇಚ್ಛಾಶಕ್ತಿಯೇ ಇಲ್ಲವೆಂದರೆ ಏನು ಮಾಡುವುದು?

ಉಚಿತ ಆಹಾರ ಆದೇಶದ ಬೆನ್ನಲ್ಲೇ ಇನ್ನೊಂದು ಆದೇಶ. ಒಬ್ಬರು, ಇಬ್ಬರಿರುವ ಅಂತ್ಯೋದಯ ಕುಟುಂಬಗಳ  ಕಾರ್ಡುಗಳನ್ನು ಹಿಂತೆಗೆದುಕೊಂಡು ಅವನ್ನೆಲ್ಲ ಬಿಪಿಎಲ್ ಆಗಿ ಪರಿವರ್ತಿಸಬೇಕು. ಆರಕ್ಕಿಂತ ಹೆಚ್ಚು ಜನರುಳ್ಳ ಕುಟುಂಬಕ್ಕೆ ಅಂತ್ಯೋದಯ ಕಾರ್ಡ್‌  ವಿತರಣೆ. ತಿಂಗಳಿಗೆ 35 ಕೆ.ಜಿ. ಧಾನ್ಯವನ್ನು ಕಷ್ಟಪಟ್ಟು ಹೊತ್ತು ತರುತ್ತಿದ್ದ ಮುದುಕಿ ಈಗ 5 ಕೆ.ಜಿ. ತರುತ್ತಿದ್ದಾಳೆ. ಆಕೆಯ ಭಾರವನ್ನು ಸರ್ಕಾರ ಇಳಿಸಿಬಿಟ್ಟಿದೆ. ಒಂದೊಂದು ಕಾರ್ಡಿನಿಂದಲೂ 30 ಕೆ.ಜಿ.ಯಂತೆ ರಾಜ್ಯದ 10 ಲಕ್ಷ ಅಂತ್ಯೋದಯ ಕಾರ್ಡುಗಳಿಂದ ತಿಂಗಳಿಗೆ 3 ಕೋಟಿ ಕೆ.ಜಿ. ಉಳಿತಾಯ,   ಆರು ತಿಂಗಳಿಗೆ 18 ಕೋಟಿ ಕೆ.ಜಿ. ಉಳಿತಾಯ.

ತಾನು ಮಾಡಿದ್ದು ನ್ಯಾಯ, ಅನವಶ್ಯವಾಗಿ ಮಾರಾಟವಾಗಿ ಹೋಗುತ್ತಿದ್ದ ಸೋರಿಕೆ ಕಾಳನ್ನು ಉಳಿಸಿಕೊಂಡಿದ್ದೇನೆ ಎಂಬುದು ಸರ್ಕಾರದ ವಾದ. ಒಬ್ಬಿಬ್ಬರು ಇರುವಲ್ಲಿಂದ ಹಿಂಪಡೆದು, 6– 8 ಸದಸ್ಯರಿರುವ ಕುಟುಂಬಗಳಿಗೆ ಅಂತ್ಯೋದಯ ಕಾರ್ಡ್ ಕೊಟ್ಟಿರುವುದಾಗಿ ಸರ್ಕಾರ ಸಾರುತ್ತದೆ. ಆದರೆ ಅಂತ್ಯೋದಯ ಕಾರ್ಡುಗಳನ್ನು ಕೊಡಬೇಕೆಂದು ಆದೇಶಿಸಿದ್ದು ಸುಪ್ರೀಂ ಕೋರ್ಟ್.

ಅದನ್ನು ಮೀರಿದ ಆದೇಶ ಹೊರಡಿಸಿದರೆ ಕೋರ್ಟಿನ ಆಜ್ಞೆಯ ಉಲ್ಲಂಘನೆ ಆಗುತ್ತದೆ ಎಂದು ಆರು ತಿಂಗಳ ನಂತರ ಅರಿವಿಗೆ ಬಂದು ಸರ್ಕಾರ ತನ್ನ ಆದೇಶ  ಹಿಂತೆಗೆದುಕೊಂಡಿತು. ಸೆಪ್ಟೆಂಬರ್ ಒಂದಕ್ಕೇ ಮರು ಆದೇಶ ಹೊರಡಿಸಿ ಅಂತ್ಯೋದಯ ಕಾರ್ಡ್ ಇರುವ ಕುಟುಂಬಕ್ಕೆ ಈಗ ಕೊಟ್ಟಿರುವ ಬಿಪಿಎಲ್ ಕಾರ್ಡುಗಳನ್ನು ಹಿಂಪಡೆದು ಅಂತ್ಯೋದಯ ಕಾರ್ಡುಗಳನ್ನು ಮರಳಿ ಕೊಡಬೇಕೆಂದು ಆದೇಶ ಬಂದು ಮೂರು ತಿಂಗಳ ಮೇಲಾಯಿತು. ಇನ್ನೂವರೆಗೆ ತಮಗದು ಗೊತ್ತೇ ಇಲ್ಲವೆಂದು ಜಿಲ್ಲಾ ಆಹಾರ ಅಧಿಕಾರಿಗಳು ಹೇಳುತ್ತಾರೆ.

ಇವೆಲ್ಲದರ ಮಧ್ಯೆ ಅರಣ್ಯ ಇಲಾಖೆಯಿಂದ ಗ್ರಾಮ ಸಭೆಗಳಲ್ಲಿ ಫಲಾನುಭವಿಗಳ ಹೆಸರು ಕೊಡಿ, ಆದ್ಯತೆಯ ಮೇರೆಗೆ ಗ್ಯಾಸ್ ಸಂಪರ್ಕ ಕೊಡುತ್ತೇವೆಂದು ಘೋಷಣೆ.  ಮುಂದಿನ ಪರಿಣಾಮದ ಬಗ್ಗೆ ವಿಚಾರ ಮಾಡದೆಯೇ ಜನ ಗ್ಯಾಸಿಗಾಗಿ ಮುಗಿಬೀಳುತ್ತಾರೆ. ಕಾರ್ಡ್‌ನಲ್ಲಿ ‘ಅನಿಲ ಸಹಿತ’ ಎಂದು ಎಂಟ್ರಿ ಆದರೆ ಮುಗಿಯಿತು, ಚಿಮಣಿ ಎಣ್ಣೆ ಇಲ್ಲ. ಹಳ್ಳಿಯ ಜನ ಅಡುಗೆ ಮಾಡಲು ಸೀಮೆಎಣ್ಣೆ ಬಳಸುವುದಿಲ್ಲ, ಆದರೆ ಕರೆಂಟೇ ಇಲ್ಲದ ಸಮಯದಲ್ಲಿ ಮನೆಯಲ್ಲಿ ದೀಪ ಹಚ್ಚಲು ಚಿಮಣಿ ಎಣ್ಣೆ ಅವರಿಗೆ ಬೇಕು. ಈಗ ‘ಅನಿಲ ಸಹಿತ’ ಎಂದು ಅಚ್ಚಾಗಿ ಬಂದಿರುವ (ಅವರ ಮನೆಯಲ್ಲಿ ಗ್ಯಾಸ್ ಸಂಪರ್ಕ ಇಲ್ಲದಿದ್ದರೂ) ಕಾರ್ಡ್‌ದಾರರೆಲ್ಲ ಸೀಮೆಎಣ್ಣೆ ಸಿಗದೇ, ತಿನ್ನುವ ತೈಲದಲ್ಲಿ ದೀಪ ಹಚ್ಚಿ ಮನೆಗಳನ್ನು ಬೆಳಗಿಸಿಕೊಳ್ಳುತ್ತಿದ್ದಾರೆ.

ಅಧಿಕಾರಿಗಳು ಬಡವರ, ಹಳ್ಳಿಗರ, ಕಾಡಲ್ಲಿರುವವರ, ಆದಿವಾಸಿಗಳ, ದಲಿತರ ಜೀವನದಿಂದ ಎಷ್ಟು ದೂರ ಇದ್ದಾರೆ ಎಂಬುದನ್ನು ಈ ಆದೇಶಗಳೇ ಹೇಳುತ್ತವೆ. ಇಲ್ಲದಿದ್ದರೆ ‘ರಾಷ್ಟ್ರೀಯ ಆಹಾರ ಭದ್ರತಾ’ ಕಾನೂನು ತಂದಿರುವ ಕಾಂಗ್ರೆಸ್ ಪಕ್ಷದ ಸರ್ಕಾರವಿರುವ ರಾಜ್ಯದಲ್ಲಿ, ‘ರೇಷನ್ ಸಾರ್ವತ್ರೀಕರಣವಾಗಬೇಕೆಂದು’ ವಾದ ಮಾಡುತ್ತಿದ್ದ ಮೋದಿಯವರ ದೇಶದಲ್ಲಿ ಜನಕ್ಕೆ ಬೇಯಿಸಲು ಅಕ್ಕಿಯಿಲ್ಲ, ದೀಪ ಬೆಳಗಿಸಲು ಎಣ್ಣೆಯಿಲ್ಲ ಎಂಬಂತಾಗುವುದು ಸಾಧ್ಯವಿತ್ತೇ?