ಸರಳ ರೇಖೆ – ಸುಬ್ಬು ಹೊಲೆಯಾರ್

subbu cover page

ಅವ್ವ ಸಾಕವ್ವ
ಸುಮ್ಮಗೆ ಕೂತಿದ್ದಾಗ
ತೋರು ಬೆರಳಲ್ಲಿ ನೆಲದ ಮೇಲೆ ಹಂಗೆ ಎಳೆದ ಗೆರೆ

ಮಣ್ಣಿವೆಯಲ್ಲಿ ಎರೆಹುಳ
ಹರಿದು ಹೋದಂತೆ
ನೆಲವೇ ಬರೆಯಿಸಿಕೊಂಡ ಚಿತ್ರ

ಮೊದಲ ಮಳೆಗೆ
ಬಿದ್ದ ಹನಿ ನೀರು ಹರಿದು
ಜಲ ಚಿನ್ಹೆಯ ತನು

ದೇವನೂರಿನ ದೊಡ್ಡ ಮಗುವೊಂದು
ಕಡ್ಡಿಯನ್ನು ಬಸ್ಸ್ ಮಾಡಿಕೊಂಡು
ಗೆರೆ ಎಳೆದುಕೊಂಡು ಹೋದ
ಸಮಗೆರೆಯ ಮೇಲೆ ನಮ್ಮೆಲ್ಲರ ಬೆರಳುಗಳ ಪಯಣ

ಸರಳರೇಖೆ ಎಂದರೆ ಸರಳ ರೇಖೆಯೇ
ಮಾತಿಲ್ಲ ಆಳ. ಅರ್ಥಗಳ ಮೌನವೇ ಎಲ್ಲ
ಸರಳ ರೇಖೆ ಎಂದರೆ ಅಗಣಿತ ಅಣುಗಳ ಅನಂತ ಚಲನೆ…

ರೇಖೆಯೆಂದರೆ ಮುಗುಳ್ನಗೆ. ಅಂತಃಕರಣದ ಧ್ಯಾನ
ಇದಕ್ಕಿಂತ ಹೆಚ್ಚು ಅಲ್ಲ
ಕಡಿಮೆಯೂ ಅಲ್ಲ. ಅಲ್ಲಮ ಪ್ರಭುವೇ….
(ಸುಬ್ಬು ಹೊಲೆಯಾರ್ ಅವರ “ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ…” ಕೃತಿಯಲ್ಲಿ ಈ ರಚನೆ ಇದೆ.)