ಸಮಾನತೆಯ ಅನುಭೂತಿ ಮೂಡಿಸುವ ಸಾಕ್ಷ್ಯಚಿತ್ರ-ಡಾ. ಡಿ. ಎಸ್‌. ಚೌಗಲೆ

ಬದುಕಿನ ಕತೆ

 ಸಾಕ್ಷ್ಯಚಿತ್ರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ…   https://www.youtube.com/watch?v=kQdv5uv02T4

 

ಐವತ್ತು ಸಾವಿರ ರೈತರು 180 ಕಿ.ಮೀ. ಕಾಲ್ನಡಿಗೆಯಲ್ಲಿ ಮುಂಬೈ ತಲುಪಿ ಶಕ್ತಿ ಪ್ರದರ್ಶಿಸುವ ಮೂಲಕ ಮಹಾರಾಷ್ಟ್ರ ಸರ್ಕಾರವನ್ನು ಮಣಿಯುವಂತೆ ಮಾಡಿದ್ದು, ಈ ಶತಮಾನದ ಬಹುದೊಡ್ಡ ಪ್ರತಿಭಟನೆ ಎಂದು ಭಾವಿಸಿದ್ದೇನೆ. ದುಡಿವ ರೈತರ ಕಾಲುಗಳಲ್ಲಿ ಗುಳ್ಳೆಗಳೆದ್ದು ಕೆಲವರ ಪಾದದ ಚರ್ಮವೆ ಕಿತ್ತಿ ಗಾಯವಾದದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿ ಮನೆಮಾತಾಗಿದ್ದು ಬಹುದೊಡ್ಡ ಪ್ರತಿಕ್ರಿಯೆ. ಇದನ್ನು ಲಘುವಾಗಿ ಕಂಡು ಮಾತಾಡಿದ ರಾಜಕಾರಣಿಯೊಬ್ಬರಿಗೆ ಪ್ರಜ್ಞಾವಂತರು ಕಟುವಾಗಿ ಉತ್ತರಿಸಿದ್ದೂ ದಟ್ಟ ನೆನಪಾಗಿ ಮನಃಪಟಲದ ಮೇಲೆ ಉಳಿದಿದೆ. ಆ ಗಾಢತೆ, ಕರ್ನಾಟಕದ ರೈತ ಚಳವಳಿ ನೆನಪಿಸಿದ ಸಾಕ್ಷ್ಯಚಿತ್ರ ‘ರೈತ ಸಂಘದ ಪುಟ್ಟಣ್ಣಯ್ಯ’.

ಈ ಸಾಕ್ಷ್ಯಚಿತ್ರ ಪುಟ್ಟಣ್ಣಯ್ಯ ಅವರು ಬದುಕಿದ್ದಾಗಲೇ ಸುಮಾರು ಹತ್ತಾರು ತಿಂಗಳ ಹಿಂದೆಯೇ ನಿರ್ಮಾಣಗೊಂಡರೂ ಚರ್ಚೆಯಾಗಿರಲಿಲ್ಲ. ಆದರೆ, ಅವರ ನಿಧನದ ನಂತರ ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇದು ಬಹುಚರ್ಚೆಗೆ ಒಳಗಾಗಿದೆ. ಬಹಳ ಕುತೂಹಲದಿಂದ 58 ನಿಮಿಷಗಳ ಇದನ್ನು ನೋಡಿದಾಗ ಕರ್ನಾಟಕ ಮತ್ತು ಭಾರತದ ರೈತರ ಸಮಸ್ಯೆ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳ ಮೂಲವನ್ನು, ಅದರ ಶೋಧವನ್ನು ಪುಟ್ಟಣ್ಣಯ್ಯ ಮೂಲಕ ಅರಿತು ಅನುಭವಿಸಿದಂತೆ ಭಾಸವಾಯಿತು. ಅದನ್ನು ಆಗುಮಾಡಿದವರು ಚಿತ್ರ ನಿರ್ದೇಶಕ ಕೇಸರಿ ಹರವು.

ಈ ಚಿತ್ರದ ಬಂಧವೇ ವಿಶಿಷ್ಟ ಮತ್ತು ಬಹುಆಯಾಮಿ. ಕೇವಲ ವ್ಯಕ್ತಿ ಮತ್ತು ಅವರ ಸಾಧನೆ ಮಾತ್ರವಲ್ಲ, ರೈತ ನಾಯಕರ ಮಾತುಕತೆಯಲ್ಲಿ ಕರ್ನಾಟಕದ ರೈತ ಚಳವಳಿ, ಅದರ ಚರಿತ್ರೆ, ತನ್ಮೂಲಕ ಸಾವಯದ ರೂಪದಲ್ಲಿ ಪುಟ್ಟಣ್ಣಯ್ಯ ಅವರ ರೈತ ಹೋರಾಟದ ಬದುಕು, ಚಿಂತನೆಗಳಿವೆ. ಅಪ್ಪಟ ಚಿತ್ರಕಥೆಯಿದೆ. ಆರಂಭದಲ್ಲಿ ಸ್ಟಿಲ್‌ನಲ್ಲಿ ಅನೇಕ ರೈತರ ನೆಳಲು ಬೆಳಕಲ್ಲಿ ಮೂಡಿದ ಭಾವಬಿಂಬಗಳು ವಿಭಿನ್ನ ಸಂವೇದನೆ ಸೃಷ್ಟಿಸುತ್ತವೆ. ರೈತ ಮಹಿಳೆ, ರೈತ, ಕುರಿಗಾಹಿ, ಬೆಳೆ ಪ್ರಮಾಣ, ಅಗತ್ಯ ಬೆಲೆ ಸಿಗದೆ ತಮ್ಮ ಬೆಳೆಯನ್ನು ಚೆಲ್ಲಿದ್ದು ಮತ್ತು ರೈತರ ಆತ್ಮಹತ್ಯೆಯ ವಿವರಣೆಗಳು ಬೆಚ್ಚಿಬೀಳಿಸುತ್ತವೆ. ಕರ್ನಾಟಕದಲ್ಲಿ ಆರು ವರ್ಷಗಳಿಂದ ಭೀಕರ ಬರಗಾಲ ಎಂಬ ಸಿದ್ದರಾಮಯ್ಯನವರ ಧ್ವನಿ. ಬೆಳಕು ಮೂಡಿದಾಗ ಕೊಳವೆಬಾವಿಯಿಂದ ನೀರು ಪಡೆಯುವ ದೃಶ್ಯ.

ಬಳಿಕ ಪುಟ್ಟಣ್ಣಯ್ಯ ಅವರು ಶಿಬಿರವೊಂದರಲ್ಲಿ ಮಾತನಾಡುವುದು- ‘ನಿಮ್ಮ ಸಾವನ್ನು ಯಾರೂ ಪರಿಗಣಿಸ್ತಿಲ್ಲ. ನಿಮ್ಮ ಸಾವು ಈ ದೇಶದಲ್ಲಿ ಲೆಕ್ಕಕ್ಕಿಲ್ಲ. ರಕ್ಷಣೆ ಮಾಡೋ ನೀತಿಯಿಲ್ಲ. ಶ್ರಮಜೀವಿಗಳಾದ ನೀವು ಈ ದೇಶದಲ್ಲಿ ಅಸ್ಪೃಶ್ಯರು. ಮೋದಿಯವರು ಮೊನ್ನೆ ಮೈಸೂರಿಗೆ ಬಂದಿದ್ದರು. ಅವರು ಹೇಳತಾರೆ-263 ಮಿಲಿಯನ್ ಟನ್ ಆಹಾರವನ್ನು ಉತ್ಪಾದಿಸುತ್ತೀವಿ. ಕಿಸಿ ಕೆ ಪಾಸ್ ಭೀಕ್ ಮಾಂಗತಾ ನಹಿ. ಸ್ವಾಭಿಮಾನಸೆ ಜೀ ರಹೆ ಹೈ ಹಮ್ ಪೂರಾ ದೇಶ ಮೇ. ಬಹುತ ಬಡಾ ಕಾಂಟ್ರಿಬ್ಯೂಷನ್ ದಿಯಾ ಹೈ ಕಿಸಾನ್ ಲೋಗ್. ಕ್ಯಾ ಕಿಸಾನ್ ಕೇಲಿಯೆ ಕೋಯಿ ನೀತಿ ಬನಾಯಾ ಹೈ ಆಪ್‌ ಪ್ರಧಾನ ಮಂತ್ರಿಜಿ? ಕೋಯಿ ಕೃಷಿ ನೀತಿ ಕೆ ಬಾರೇ ಮೇ ಚಿಂತನ ಕಿಯಾ ಹೈ? ಕಿಸಾನ್ ಕೆ ಆತ್ಮಹತ್ಯಾ ಕೆ ಬಾರೆಮೆ ಸೋಚಾ ಹೈ? ಕಾರ್ಪೊರೆಟ್ ಸೆಕ್ಟರ್ ಕೊ ಸ್ವಾಗತ ಕರ ರಹ ಹೈ ಉನ್ಹುನೆ…’ ಮಂಡ್ಯದ ಈ ಗಂಡು ನಿರರ್ಗಳ ಹಿಂದಿಯಲ್ಲಿ ಮಾತನಾಡಿದ್ದು ವಿಶೇಷ.

(ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಪುಟ್ಟಣ್ಣಯ್ಯ)

ಹಲವಾರು ಉಪಸಾಕ್ಷ್ಯಚಿತ್ರಗಳು ಪೂರಕವಾಗಿವೆ. ಅದರಲ್ಲಿ ಮುಖ್ಯವಾಗಿ ಸ್ವಾತಂತ್ರ್ಯ ಚಳವಳಿ, ನರಗುಂದದ ರೈತ ಚಳವಳಿ ಹಾಗೂ ಕಾವೇರಿ ನದಿನೀರು ಹಂಚಿಕೆ ಸಂದರ್ಭದ ಚಳವಳಿಯ ಸಾಕ್ಷ್ಯಚಿತ್ರಗಳು. ಪ್ರಧಾನಿ ನೆಹರೂ ಅವರ ಮೊದಲ ಪಂಚವಾರ್ಷಿಕ ಯೋಜನೆ, ಉದ್ಯಮಕ್ಕೆ ನೀಡಿದ ಆದ್ಯತೆ ಹಾಗೂ ಕೃಷಿ ನೀತಿಯ ರೂಪರೇಷೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳುವ ಪ್ರೊ.ಕೆ.ಸಿ. ಬಸವರಾಜು ಅವರ ವಿವರಣೆ. ಪ್ರೊ.ನಂಜುಂಡಸ್ವಾಮಿಯವರು 1980ರಲ್ಲಿ ರೈತ ಚಳಚಳಿಗೆ ಬಂದ ಐತಿಹಾಸಿಕ ಅನಿವಾರ್ಯತೆ ಮತ್ತು ಆ ಮೂಲಕ ಕರ್ನಾಟಕದಲ್ಲಿ ಹುಟ್ಟಿಕೊಂಡ ಸಂಘರ್ಷಗಳು ಚರ್ಚೆಗಳು ಚಿತ್ರದಲ್ಲಿ ಹೈಲೈಟ್ ಆಗಿವೆ. ಗಂಗಾಧರ ಅವರ ತಣ್ಣನೆಯ ವಿಚಾರಗಳು ಬೆಂಕಿ ಉಗುಳಿದಂತಿವೆ. ಪ್ರೊ.ಕೆ.ಸಿ. ಬಸವರಾಜು, ಕೆ.ಟಿ. ಗಂಗಾಧರ್, ದೇವನೂರ ಮಹಾದೇವ, ಪರಶುರಾಮೇಗೌಡ, ಇಂದೂಧರ ಹೊನ್ನಾಪುರ, ಚಾಮರಸ ಮಾಲಿಪಾಟೀಲ, ಹರವು ದೇವೇಗೌಡ, ಕೆನ್ನಾಳು ನಾಗರಾಜ್, ನಂಜುಂಡೇಗೌಡ, ನಂದಿನಿ ಜಯರಾಮ, ಚುಕ್ಕಿ ನಂಜುಂಡಸ್ವಾಮಿ ಮುಂತಾದ ರೈತ ಹೋರಾಟಗಾರರು ಮತ್ತು ಪುಟ್ಟಣ್ಣಯ್ಯನವರ ಒಡನಾಡಿಗಳ ಅನುಭವ ಕಥನ ಪುಟ್ಟಣ್ಣಯ್ಯ ಹಾಗೂ ರೈತ ಹೋರಾಟಗಳನ್ನು ಬಿಚ್ಚಿಟ್ಟಿವೆ. ಒಟ್ಟು ರೈತ ಚಳವಳಿಯ ಒಂದು ಭಾಗವಾಗಿ ಪುಟ್ಟಣ್ಣಯ್ಯ ತೆರೆದುಕೊಳ್ಳುತ್ತ ಸಾಗುವುದು ವೈಶಿಷ್ಟ್ಯ.

ಪುಟ್ಟಣ್ಣಯ್ಯನವರ ಓದಿನ ಹರವು, ಕೃಷಿ ಮತ್ತು ನೀರಿನ ಕುರಿತಾದ ತಿಳಿವಳಿಕೆ, ಬದುಕಿನ ಅನುಭವ ದೊಡ್ಡದು. ಸಾಹಿತ್ಯ, ಜಾನಪದ, ಕಲೆ ಮತ್ತು ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದ ಅವರ ಮಾತುಗಾರಿಕೆಯಲ್ಲಿ ಒಂದು ನಾಟಕೀಯತೆ, ಆಡುಮಾತಿನ ಸೊಗಡಿನ ಜೀವಂತಿಕೆಯಿತ್ತು. ಹೀಗಾಗಿ ತುಂಬಾ ಪರಿಣಾಮಕಾರಿಯಾದ ವಾಗ್ಮಿಯಾಗಿದ್ದರು. ಹಸು, ಎಮ್ಮೆ, ಎತ್ತು ಮತ್ತು ದನಗಳ ಆರೈಕೆಯ ಬಗ್ಗೆ ಆರ್ಥಿಕವಾಗಿ, ವೈಜ್ಞಾನಿಕವಾಗಿ ಮಾತನಾಡುತ್ತಿದ್ದರು. ಪುಟ್ಟಣ್ಣಯ್ಯನವರು ಎಲ್ಲ ರಾಜಕೀಯ ಪಕ್ಷಗಳ ಗುಣವನ್ನು ಹೀಗೆ ಹೇಳಿದ್ದರು- ‘ಒಂದು ತುಂಡು ಕಕ್ಕಸವನ್ನು ಮೂರು ತುಂಡು ಮಾಡಿದಂಗೇರಿ ನಮ್ಮ ರಾಜಕೀಯ ಪಕ್ಷಗಳು. ಮೂರೂ ತುಂಡುಗಳ ವಾಸನೆ ಒಂದೇ. ಹಾಗೆಯೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನೂ ಅಷ್ಟೇ’ ಇದನ್ನು ಮೆಲುಕು ಹಾಕಿದವರು ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷ ರಾಜೇಗೌಡರು.

ದೇವನೂರ ಮಹಾದೇವ ಅವರ ದೃಷ್ಟಿಯಲ್ಲಿ ಪುಟ್ಟಣ್ಣಯ್ಯ ಒಂದು ತರಹದ ಸಮುದಾಯದ ನಾಯಕ. ಕಾವೇರಿ ನದಿ ತೀರ್ಪು ಬಂದು ಮಂಡ್ಯ ಪರಿಸರ ಹೊತ್ತಿ ಉರಿಯತೊಡಗಿದಾಗ ಸಾಂಬಾ ಬೆಳೆ ಹಾಗೂ ತಮಿಳಿನಾಡಿನ ರೈತರಿಗೆ ನೀರು ಅಗತ್ಯವಿದೆಯೆ? ಎಂದು ತಾರ್ಕಿಕವಾಗಿ ವಿಚಾರ ಮಂಡಿಸಿದ ಪುಟ್ಟಣ್ಣಯ್ಯನವರು, ‘ನಮ್ಮ ಮುಖ್ಯಮಂತ್ರಿಗಳು ನಿಮ್ಮನ್ನು ನಾನು ರಕ್ಷಿಸುತೀನಿ ಅಂತ ಹೇಳಬೇಕು’ ಎಂದು ಸಿದ್ದರಾಮಯ್ಯನವರಿಗೆ ಕೊಟ್ಟ ಕರೆಯ ಹಿಂದಿನ ಕಾಳಜಿ ಮಹತ್ವದ್ದು.ಈ ಸಾಕ್ಷ್ಯಚಿತ್ರದ ಕೊನೆಯಲ್ಲಿ ಪುಟ್ಟಣ್ಣಯ್ಯನವರು ಚಳವಳಿ ಕುರಿತು ಒಂದು ಮಾತು ಹೇಳುತ್ತಾರೆ:

‘ಭೂಮಿ ಹೆಂಗೆ ಒಂದು ಕಾಳಲ್ಲಿ ಹತ್ತಸಾವಿರ ಕಾಳು ತಯಾರು ಮಾಡುತ್ತೋ ಹಂಗೆ ಚಳವಳಿ. ಅದಕ್ಕೆ ಚಳವಳಿ ಮತ್ತು ಭೂಮಿ ಒಂದೇ. ಆದರೆ, ಭೂಮಿ ಹತ್ತಸಾವಿರ ಕಾಳು ಕೊಟ್ಟರೆ ಚಳವಳಿ ಒಂದೇ ಕಾಳಿನತ್ತ ಸಾಗಿದೆ. ಬಡತನ ಒಂದು ಅಸ್ಪೃಶ್ಯತೇನೆ. ಜಾತಿ ರೋಮಾಂಚನಗೊಳಿಸಿದಷ್ಟು ನೀತಿಗೊಳಿಸಿಲ್ಲ. ಅದೇ ಸಮಸ್ಯೆ. ಆದರೂ ಇವತ್ತಿಗೂ ನಾನು ಆಶಾವಾದಿ! ಶೇ 90ರಷ್ಟು ಒಳ್ಳೆಯವರಿದ್ದಾರೆ. ಆದರೆ, ಅವರು ಅಸಂಘಟಿತರು. ಹಳ್ಳಿಯಿಂದ ಒಬ್ಬನೂ ಹೊರಗಡೆ ಹೋಗಬಾರದೆಂಬ ಆರ್ಥಿಕ ನೀತಿ ಸೃಷ್ಟಿಯಾಗಬೇಕಿತ್ತು…’

ಇಂಥ ಪ್ರಖರ ಸೈದ್ಧಾಂತಿಕ ನಿಲುವಿನ ವ್ಯಕ್ತಿ ನಮ್ಮ ಪುಟ್ಟಣ್ಣಯ್ಯನವರು. ಕ್ಯಾನ್ವಾಸ್ ಒಂದೇ, ಬಣ್ಣಗಳು ಮತ್ತು ಇಮೇಜುಗಳು ಮಾತ್ರ ಅನೇಕ.