ಸದ್ಯದ ಬೆಳಕಿನಲ್ಲಿ ಅಂಬೇಡ್ಕರ್-ಡಾ. ಎಸ್. ತುಕಾರಾಮ್

                                                     
                                                                 
ಬದುಕಿ ಉಳಿಯುವುದೇ ದೊಡ್ಡ ಸಾಧನೆಯಲ್ಲ. ಬದುಕಿ ಉಳಿಯಲು ಅನೇಕ ರೀತಿಗಳಿವೆ. ಎಲ್ಲ ರೀತಿಯ ಬದುಕು ನಮ್ಮ ಗೌರವ ಹಾಗೂ ಹೆಮ್ಮೆಗೆ ಅರ್ಹವಲ್ಲ. ಒಬ್ಬ ವ್ಯಕ್ತಿಯಾಗಲೀ ಅಥವಾ ಒಂದು ಸಮಾಜವಾಗಲೀ ಸುಮ್ಮನೆ ಜೀವಂತವಾಗಿ ಉಳಿಯುವುದಕ್ಕೂ, ಘನತೆ–ಗೌರವದಿಂದ ಬಾಳಿ ಬದುಕುವುದಕ್ಕೂ ವ್ಯತ್ಯಾಸವಿದೆ.
-ಡಾ. ಬಿ.ಆರ್. ಅಂಬೇಡ್ಕರ್
ಮೇಲಿನ ಸಂದೇಶದಲ್ಲಿ ಎರಡು ಸಂಗತಿಗಳನ್ನು ಗುರುತಿಸಬೇಕು. ಮೊದಲನೆಯದು, ಪ್ರಸ್ತುತ ನಡೆಯುತ್ತಿರುವ ಆಗುಹೋಗುಗಳನ್ನು ಗಮನಿಸಿದರೆ, ವರ್ತಮಾನದ ಬದುಕು ಗೌರವಕ್ಕೂ ಅರ್ಹವಲ್ಲ – ಹೆಮ್ಮೆ ಪಡುವುದಕ್ಕೂ ಯೋಗ್ಯವಲ್ಲ ಎನ್ನಿಸುತ್ತಿರುವುದು. ಅಂಬೇಡ್ಕರ್‌ರವರ ಮೇಲಿನ ಮಾತು ದಲಿತರಿಗೂ ಮತ್ತು ದಲಿತೇತರರಿಗೂ ಅನ್ವಯಿಸುತ್ತದೆ ಎನ್ನುವುದು ಎರಡನೆಯ ಸಂಗತಿ.
ಏಕೆಂದರೆ, ಈ ಶ್ರೇಣೀಕೃತ ಸಮಾಜದ ವ್ಯವಸ್ಥೆಯಲ್ಲಿ ಇಬ್ಬರೂ ಬಿಡುಗಡೆಗೊಳ್ಳುತ್ತಿಲ್ಲ. ದಲಿತರು ಅವಮಾನಗಳನ್ನು ಧಿಕ್ಕರಿಸಿದಷ್ಟು, ಸ್ವರೂಪ ಬದಲಾಯಿಸಿಕೊಂಡು ಬರುತ್ತಿರುವ ಜಾತಿ ವಿಷಕ್ಕೆ ಬಲಿಯಾಗುತ್ತಿದ್ದಾರೆ. ಜಾತಿ ಮಾಡುವವರು ಜಾತಿಯಿಂದಾಗುವ ಹಿಂಸೆಯನ್ನು ಕಾಣುತ್ತಲೇ ಇಲ್ಲ. ಪರಸ್ಪರ ಅಸಮಾನತೆಗೆ ತೆತ್ತುಕೊಂಡು ಮಾನವ ಘನತೆಗೆ ಧಕ್ಕೆ ತಂದಿದ್ದೇವೆ.
ಹಗರಣಗಳನ್ನು ಕಟ್ಟಿಕೊಂಡು ಸುಮ್ಮನೆ ಜೀವಂತವಾಗಿದ್ದೇವೆ. ಘನತೆ–ಗೌರವದಿಂದ ಬಾಳುವ ಛಲ ಕಳೆದುಕೊಳ್ಳುತ್ತಿದ್ದೇವೆ. ಈ ವ್ಯತ್ಯಾಸ ಮತ್ತು ಕಾರಣವನ್ನು ಅರಿಯುವುದು ವರ್ತಮಾನದ ಆಶಯವಾಗಿರಬೇಕು. ಅಂಬೇಡ್ಕರ್‌ರವರ, ಘನತೆ–ಗೌರವದ ಸಮಾಜಕ್ಕೆ ಹಂಬಲಿಸಿದ ಮೇಲಿನ ಸಂದೇಶವನ್ನು ಗಮನದಲ್ಲಿಟ್ಟುಕೊಂಡು ಇಂದಿನ ಸಮಾಜವನ್ನು ಕಾಣಬೇಕೆನಿಸುತ್ತದೆ.
ನಮ್ಮ ಸಮಾಜದಲ್ಲಿ ಎರಡು ಬಗೆಯ ಜನರಿದ್ದಾರೆ. ಒಂದು, ಜಾತಿ–ಅಸ್ಪೃಶ್ಯತೆ ಬಗ್ಗೆ ಕರಗದೆ ಬಂಡೆಯಂತಿರುವವರು. ಇವರು ಯಾವುದೇ ಗೌರವಕ್ಕೂ ಅರ್ಹರಲ್ಲ. ಅವರು ಈ ಸಮಾಜದಲ್ಲಿ ಸುಮ್ಮನೆ ಜೀವಂತವಾಗಿದ್ದಾರೆ. ಆದರೆ ಅವರ ಬಂಡೆಯಂಥ ಮನಸ್ಸು, ಅವರ ಜಾತಿಯತೆಯ ನಡೆಯಿಂದ ಆಗಿರುವ ‘ಗಾಯ’ ಅವರನ್ನು ಇನ್ನೂ ಕಲಕಿಲ್ಲ–ಕಲಕುತ್ತಿಲ್ಲ! ಇನ್ನೊಂದು ಗುಂಪು, ಜಾತಿ–ಅಸ್ಪೃಶ್ಯತೆ, ಅಸಮಾನತೆ ಬಗ್ಗೆ ಬಂಡಾಯವೆದ್ದವರು.
ಅವರು ಈ ಸಮಾಜದ ಘನತೆ–ಗೌರವಕ್ಕೆ ದುಡಿದಿದ್ದಾರೆ. ಅವರ ಸಂದೇಶಗಳು ವರ್ತಮಾನವನ್ನು ತಟ್ಟುತ್ತಿಲ್ಲ. ಅವರಲ್ಲಿ ಬುದ್ಧ, ಬಸವ,  ಗಾಂಧಿ, ಅಂಬೇಡ್ಕರ್‌ರಂಥರವರು ಇದ್ದಾರೆ. ಅವರಿಂದಾಗಿಯೇ ನಮ್ಮ ಸಮಾಜದಲ್ಲಿ ಇಂದೂ ಘನತೆ, ಗೌರವ ಉಳಿದುಬರುತ್ತಿದೆ ಎಂಬ ಅರಿವೂ ಕೂಡ ಇಲ್ಲವಾಗುತ್ತಿದೆ.
ಬಂಡೆಯಂಥ ಮನಸ್ಸನ್ನು ತಲುಪುವುದು ಹೇಗೆ? ಬಂಡಾಯದವರ ಕೂಗಿನಲ್ಲಿರುವುದೇನು? ಎನ್ನುವುದರ ಬಗ್ಗೆ ಪ್ರಸ್ತುತ ನಾವು ಯೋಚಿಸಬೇಕಾಗಿದೆ. ಇವರ ಸಂದೇಶಗಳನ್ನು ಗಾಳಿ–ಬೆಳಕಿನಂತೆ ತೆಗೆದುಕೊಳ್ಳಬೇಕಿದೆ. ಸಮಾನತೆ, ಮನುಷ್ಯತ್ವಕ್ಕಾಗಿ ಹಂಬಲಿಸುತ್ತಿರುವ ಮಾತುಗಳು ಜಾತಿ ಮಾಡುವವರಿಗೂ ಅರಿವಾಗುತ್ತಿಲ್ಲ, ಜಾತಿ ಸಂಕೋಲೆಗಳಲ್ಲಿ ಬಿದ್ದವರಿಗೂ ಅರಿವಾಗುತ್ತಿಲ್ಲ! ಇಂಥವರನ್ನು ಕುರಿತೇ ಅಂಬೇಡ್ಕರ್ ಹೇಳಿದ್ದು – ‘ತಾನಿರುವ ಕತ್ತಲೆ ಅರಿಯಲಾರದವರು ಬೆಳಕಿಗೆ ಹಂಬಲಿಸಲಾರರು’.
ಅಂಬೇಡ್ಕರ್ ಅವರ 125ನೇ ವರ್ಷಾಚರಣೆಯ ಈ ಪಯಣದಲ್ಲಿ ‘ನಾವು ಕಂಡಿದ್ದೇನು? ಕಾಣಬಯಸಿದ್ದೇನು?’ ಎನ್ನುವುದನ್ನು ಯೋಚಿಸಬೇಕಿದೆ. ಅಂಬೇಡ್ಕರ್ ಬಯಸಿದ ಸಮಾಜ ಎಂಥದ್ದು ಎಂಬ ಬಗೆ ಕಣ್ತೆರೆಯಬೇಕಿದೆ. ಅವರು ಸಮಾಜಕ್ಕೆ ನೀಡಿದ ಸಂದೇಶಗಳಲ್ಲಿ ದಮನಿತರ ಬಿಡುಗಡೆಗಾಗಿ ಹಂಬಲಿಸಿದ ಕನಸಿದೆ. ಸ್ವಾಭಿಮಾನಿ ಬದುಕಿಗೆ ನಡೆಸಿದ ಸಂರ್ಘಷವಿದೆ. ಜಾತಿ–ಸಮಾಜ ಕಣ್ತೆರೆದು ನೋಡಬೇಕಾದ ಸಂಗತಿ ಇದೆ. ಆದರೆ ಹಿಂತಿರುಗಿ ನೋಡಿದಾಗ ಅವರ ಚಿಂತನೆಗಳನ್ನು ಸರಿಯಾಗಿ ನಿರ್ವಹಿಸಿಲ್ಲವೆನ್ನುವುದು ಖಾತ್ರಿಯಾಗುತ್ತಲೇ ಇದೆ!
ಅಂಬೇಡ್ಕರ್ ಅವರನ್ನು ವೈಭವೀಕರಿಸಿ ಮರೆಸಿದ್ದೇವೆ. ಇಲ್ಲವೇ ಅರಿಯಲಾರದೆ ಹಿಂದೆ ಬಿದ್ದಿದ್ದೇವೆ. ದಲಿತರು ಅವರನ್ನು ತಮ್ಮವರೆಂದು ವೈಭವೀಕರಿಸಿದರೆ, ದಲಿತೇತರರು ಅಂಬೇಡ್ಕರರನ್ನು ಅರಿಯಲಾರದೆ ಹಿಂದೆಬಿದ್ದಿದ್ದಾರೆ. ಈಗ ಇಬ್ಬರೂ ಸೇರಿ 125ನೇ ವರ್ಷಾಚರಣೆಗೆ ಹೊಸ ಅರ್ಥ ತರಬೇಕಿರುವುದು ನೈತಿಕ ಕರ್ತವ್ಯವೆನಿಸುತ್ತದೆ; ಅದೂ ಅವರ ಚಿಂತನೆಯನ್ನು ಸಂಪೂರ್ಣವಾಗಿ ಅರಿಯುವ ಮೂಲಕ.
ಅಂಬೇಡ್ಕರ್ ಅವರನ್ನು ನೆನೆಯುವುದು ಎಂದರೆ ವರ್ತಮಾನದ ಎಚ್ಚರಿಕೆ. ಹೀಗಾಗಿ ಈ ಮಹಾನ್ ಚೇತನದ ವರ್ಷಾಚರಣೆ ಎಂದರೆ – ಮತ್ತೆ ಮತ್ತೆ,  ಎಲ್ಲಾ ಶೋಷಿತವರ್ಗಗಳ ಬಯಕೆಯನ್ನು ನಿರೀಕ್ಷೆಗಳನ್ನು ಸಮಾಜಕ್ಕೆ ಕನ್ನಡಿಯಂತೆ ತೋರಿಸುವುದು.
ಮನುಷ್ಯರಂತೆ ಬಾಳಲು ಅವಕಾಶ ಕಲ್ಪಿಸುವುದು. ಅಸ್ಪೃಶ್ಯತೆಯ ಗಾಯವನ್ನು ಮಾಗಿಸುವುದು. ಸಮಾನತೆಯ ಕನಸನ್ನು ಎಲ್ಲರ ಎದೆಯಲ್ಲಿ ಬಿತ್ತುವುದು. ಜಾತಿವಾದಿಗಳಾಗಿರುವವರನ್ನು ಮನುಷ್ಯರನ್ನಾಗಿಸಲು ಕಾರ್ಯಕ್ರಮ ಹಾಕಿಕೊಳ್ಳುವುದು.
ಇಂದು ಗೌರವದ ಬದುಕು ಸಾಗಿಸುವುದಕ್ಕೆ ಸಾಮಾನ್ಯರಿಗೆ ಸವಾಲುಗಳು ಇವೆ. ರೈತ ಸಾಲಕ್ಕೆ ಹೆದರಿ ಆತ್ಮಹತ್ಯೆಯ ದಾರಿ ತುಳಿದರೆ, ಹೆಣ್ಣುಮಕ್ಕಳು ಅಸಹಾಯಕರಾಗಿ ಬೀದಿಗೆ ಬೀಳುತ್ತಿದ್ದಾರೆ. ಅಲ್ಪಸಂಖ್ಯಾತರು ತಬ್ಬಲಿತನಕ್ಕೆ ಒಳಗಾಗುತ್ತಿದ್ದಾರೆ. ದಲಿತರು ಅಸ್ಪೃಶ್ಯತೆಯಿಂದ ಹೊರಬರಲು ‘ಗೌರವ’ಕ್ಕಾಗಿ ಬೇಡುತ್ತಿದ್ದಾರೆ.
ಈ ಜನವರ್ಗಗಳು ತಮ್ಮಷ್ಟಕ್ಕೆ ತಾವೇ ಮನಸ್ಸುಮಾಡಿದರೆ ಪರಿಹಾರ ಸಾಧ್ಯವಾ? ಎನ್ನುವ ಪ್ರಶ್ನೆಯ ಜೊತೆಗೆ, ಇತರರಿಗೆ ಮರ್ಯಾದೆ ಕೊಡಬೇಕು ಅನ್ನಿಸುವುದು ಮುಖ್ಯವಲ್ಲವಾ? ಎನ್ನುವ ಪ್ರಶ್ನೆಯೂ ನಮ್ಮನ್ನು ಕಾಡಬೇಕಿದೆ. ಮನೆ ಒಳಗೆ ತಮ್ಮ ಪಾಡಿಗೆ ತಾವು ಬದುಕುವುದು ಸುಲಭ. ತಮ್ಮ ಊರುಕೇರಿಯಲ್ಲಿ ಬದುಕಿಕೊಳ್ಳಲೂ ಪರದಾಡಬೇಕು. ಕೇರಿಯಿಂದ ಆಚೆ ಬಂದರೆ ಮುಖ ಬದಲಾಯಿಸಿಕೊಂಡು ಜೀವಿಸಬೇಕು.
ಹೀಗೆ ಅನೇಕ ಇಕ್ಕಟ್ಟು ಬಿಕ್ಕಟ್ಟುಗಳನ್ನು ಪಟ್ಟಿ ಮಾಡುತ್ತಾ ಹೋಗಬಹುದು. ಸಮಾಜದಲ್ಲಿ ಸಮಾನತೆಯಲ್ಲಿ ಬದುಕುವ ಸಾಮಾಜಿಕ ಸನ್ನಿವೇಶದ ಸೃಷ್ಟಿ ಅಂಬೇಡ್ಕರ್ ಬಯಕೆಯಾಗಿತ್ತು. ಆದರೆ ನಮಗೆ ಹೀಗೆ ನಮ್ಮೊಟ್ಟಿಗೆ ಇರುವವರನ್ನು ತಾರತಮ್ಯ ಮಾಡದೆ ನೋಡಿಕೊಳ್ಳಲು ಸಾಧ್ಯವಾಗಿದೆಯಾ?
ಇಂದು ಮತ್ತು ಯಾವತ್ತೂ, ಸಾಮಾಜಿಕ ಅವಮಾನಕ್ಕೆ ತುತ್ತಾದವರಿಗೆ ಬಹು ದಾರಿಗಳಿರುವುದಿಲ್ಲ! ಇದು ಚಾರಿತ್ರಿಕವಾಗಿ ಕಂಡಿರುವ ಸತ್ಯ! ಅವರು ಅವಮಾನದಿಂದ ಬೇರೆ ದಾರಿ ಹಿಡಿಯಬೇಕು! ಅಥವಾ ಸಾವಿಗೆ ಶರಣಾಗಬೇಕು! ಅಥವಾ ಹೊರಬರಬೇಕು! ಶ್ರೇಣೀಕೃತ ಸಮಾಜದ ಅಂತರಂಗದಲ್ಲಿರುವ ಅಸಮಾನತೆಯ ಅಂಶಗಳೇ ಇದಕ್ಕೆ ಕಾರಣ ಎನ್ನುವುದು ಅಂಗೈಹುಣ್ಣಿನಷ್ಟೆ ಸತ್ಯ.
ಹೀಗಾಗಿಯೇ ಅಂಬೇಡ್ಕರ್‌ರವರು ಸುದೀರ್ಘ ಹೋರಾಟದಿಂದ ಫಲಕಾಣದೆ ಹೊರಬಂದರು. ಅವರು ಬೌದ್ಧ ಧರ್ಮ ಸ್ವೀಕಾರಕ್ಕೆ ಈ ಹಿನ್ನೆಲೆ ಇದೆ. ‘ನಾನು ಹಿಂದೂವಾಗಿ ಹುಟ್ಟಿರುವೆ, ಆದರೆ ಹಿಂದೂವಾಗಿ ಸಾಯಲಾರೆ’ ಎಂದದ್ದು ಈ ಹಿಂಸೆಯಿಂದ ಹೊರಬರುವ ಮಾರ್ಗವಾಗಿ. ಅವರು ಬೌದ್ಧಧರ್ಮ ಸ್ವೀಕರಿಸಿರುವುದಕ್ಕೆ ಚಾರಿತ್ರಿಕ ಸಮರ್ಥನೆ ಇರುವುದು ಈ ಹಿನ್ನೆಲೆಯಲ್ಲೇ.
ಶ್ರೇಣೀಕೃತ ಸಮಾಜದೊಡನೆ ನಿರಂತರ ಸಂವಾದದಿಂದ ಫಲಕಾಣದೆ ಅವರು ಭರವಸೆ ಕಳಕೊಂಡಿದ್ದರು. ಹಾಗಾಗಿ ಈ ಘೋಷಣೆ ಮೂಲಕ ಹೊರಬಂದುಬಿಟ್ಟರು! ಜಾತಿ ಮಾಡುವ ಸಮಾಜಕ್ಕೆ ಈ ನೋವಿನ ಹಿನ್ನೆಲೆ ಅರ್ಥವಾಗಬೇಕು. ಅಂಬೇಡ್ಕರ್ ಅವರ ಹೋರಾಟಕ್ಕೆ ನಾವು ಯಾವತ್ತೂ ಗೌರವ ನೀಡಿಲ್ಲ.
ನೀಡಿದ್ದಿದ್ದರೆ ಇವತ್ತು ನಾವು ಕಾಣುತ್ತಿರುವ ಸಾಮಾಜಿಕ ಸಂಕಟಗಳು ಈ ಪ್ರಮಾಣದಲ್ಲಿ ಇರುತ್ತಿರಲಿಲ್ಲವೇನೋ? ‘ಜಾತಿ’ಕರಣ ಒಂದರಿಂದಲೇ ಮರ್ಯಾದೆ ಹೆಸರಿನಲ್ಲಿ ಹೆತ್ತಕರುಳನ್ನು ಕೊಲ್ಲುತ್ತಿದ್ದೇವೆ. ವಸತಿನಿಲಯಗಳಲ್ಲಿ, ವಿ.ವಿ.ಗಳಲ್ಲಿ ಓದುವ ಮುಗ್ಧ ವಿದ್ಯಾರ್ಥಿಗಳು ಸಾಯುತ್ತಿದ್ದಾರೆ. ಮನುಷ್ಯರನ್ನು ‘ಮಲ’ದ ಗುಂಡಿಗೆ ಇಳಿಸುತ್ತಿದ್ದೇವೆ. ಉಸಿರುಗಟ್ಟಿ ಸಾಯುವವರಿಗೆ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದ್ದೇವೆ.
ಇವೆಲ್ಲ ಮರ್ಯಾದೆ ಇರುವ ನಾಗರಿಕ ಸಮಾಜದಲ್ಲಿ ಇರುವಂಥದಲ್ಲ. ಅಂಬೇಡ್ಕರ್ ಪ್ರಯತ್ನಿಸಿದ್ದು; ವ್ಯಕ್ತಿಗೌರವಕ್ಕೆ ಧಕ್ಕೆ ಬರದಂತ ಸಮಾಜಕ್ಕೆ, ಆತ್ಮಗೌರವಕ್ಕೆ ಬದ್ಧರಾಗಿರುವ ಸಮಾಜಕ್ಕೆ. ಆದರೆ ಇಂದು ಇಂಥ ಸನ್ನಿವೇಶ ಕಣ್ಮರೆಯಾಗುತ್ತಿದೆ. ಈಗ ಸಮಾನತೆ ಬಗ್ಗೆ ಮಾತನಾಡುವುದು ‘ನುಡಿ’ಯಲ್ಲಿದೆ, ‘ನಡೆ’ಯಲ್ಲಿ ಕಣ್ಮರೆಯಾಗಿದೆ.
ದಲಿತರ ಏಳಿಗೆ ಬಗ್ಗೆ ಮಾತನಾಡುವುದು ಸರಿ. ಆದರೆ ದಲಿತರು ಹತ್ತಿರಕ್ಕೆ ಬಂದ ಕೂಡಲೆ ಅದು ‘ಭಂಗ’ದಂತೆ ಅಥವಾ ಧಕ್ಕೆ ಎಂದು ತಿಳಿಯಲಾಗುತ್ತಿದೆ. ಈಗ ಸಾರ್ವಜನಿಕವಾಗಿ ಹೆಚ್ಚು ಜಾಗಗಳು ಸೃಷ್ಟಿಯಾಗಿವೆ. ಆದರೆ ಮನಸ್ಸಲ್ಲಿ ಜಾಗ ಇಲ್ಲದಾಗಿದೆ. ಹೀಗೆ ಮಾಡುವುದರಿಂದ ಹತ್ತಿರ ಬರುವವರಿಗೆ ಅವಮಾನಿಸುತ್ತಿದ್ದೇವೆ ಎಂಬ ಪ್ರಜ್ಞೆಯೇ ಇಲ್ಲವಾಗಿದೆ.
ಮಲದ ಗುಂಡಿಗಿಳಿದು ವ್ಯಕ್ತಿಯೊಬ್ಬ ಸತ್ತ ಎಂದರೆ, ಅದರಲ್ಲಿ ಸಮಾಜದ ಪಾತ್ರ ಏನು? ನಮ್ಮ ಮಲ ಬಾಚಿದ್ದಕ್ಕೆ ಅವರನ್ನು ಗೌರವಿಸಬೇಕಾ? ದೂರವಿರಿಸಬೇಕಾ? ವ್ಯಕ್ತಿ ಘನತೆಯ ಬಗ್ಗೆ ಅರಿತುಕೊಳ್ಳುವುದನ್ನು ನಮ್ಮ ಪಂಚೇದ್ರಿಯಗಳು ಕಳಕೊಂಡಿವೆ. ‘ಮೀಸಲಾತಿ’ ನೀಡಿ ಸಮಾನತೆ ತರುವ ಪ್ರಯತ್ನ ಸಂವಿಧಾನಾತ್ಮಕವಾಗಿ ಬಂದಿದೆ.
ಆದರೆ ಮೀಸಲಾತಿ ಪಡೆದವರನ್ನು ಬೇರೆಯಾಗಿ ಕಾಣುವುದನ್ನು ಬಿಡಲಾರದೆ ಹೋದರೆ ಸಾಮಾಜಿಕ ಸಂಘರ್ಷಕ್ಕೆ ಕೊನೆಯೇ ಇರುವುದಿಲ್ಲ. ಸಮಾನತೆ–ಸೋದರತೆ ಘೋಷಣೆಯಾಗದೇ ನಮ್ಮ ನಡೆ–ನುಡಿಯ ಭಾಗವಾದರೆ ಮಾತ್ರ ಏನಾದರೂ ಸುಧಾರಿಸಬಹುದು. ಇಲ್ಲದಿದ್ದರೆ 125ನೇ ವರ್ಷದ ಘೋಷಣೆಗಳು 200ಕ್ಕೂ ಮುಂದುವರಿಯಬಹುದು! ಅಂದರೆ ನಾವು ಗೌರವದ ಬದುಕಿಗೆ ಬದುಕು ಬದಲಾಯಿಸಿಕೊಳ್ಳುವುದು ಮುಖ್ಯವಾಗಬೇಕಾಗುತ್ತದೆ. ಆಗ ನಾವು ಚರಂಡಿಗೆ ಮನುಷ್ಯನನ್ನು ಇಳಿಸುವುದಿಲ್ಲ. ಮಲ ಬಾಚಲು ಮನುಷ್ಯನನ್ನು ಬಳಸುವುದಿಲ್ಲ. ಮರ್ಯಾದೆ ಹತ್ಯೆಗೆ ಕೈಹಾಕುವುದಿಲ್ಲ. ವಿದ್ಯಾರ್ಥಿಗಳನ್ನು ಕಳೆದುಕೊಳ್ಳುವುದಿಲ್ಲ.
ನಮ್ಮ ಮನಸ್ಸಿನ ಭ್ರಷ್ಟತೆ ನಮ್ಮ ಸಂವಿಧಾನಕ್ಕೆ ಅಪಚಾರ ಮಾಡುತ್ತಿದೆ. ಭ್ರಷ್ಟತೆಯಿಂದಾಗಿ ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಮಾಜಮುಖಿ ಪಠ್ಯವಸ್ತುಗಳು ಕಳೆದುಹೋಗಿವೆ. ಅಸಂಗತ ವಿಚಾರಗಳನಿಟ್ಟು ಮಕ್ಕಳ ಮನಸ್ಸನ್ನು ಕಲುಷಿತಗೊಳಿಸುತ್ತಿದ್ದಾರೆ.
ನೇಮಕಾತಿಯಲ್ಲಿ ಭ್ರಷ್ಟತೆ ಮೇಲುಗೈ ಮಾಡಿರುತ್ತೇವೆ. ವಿ.ವಿ.ಗಳಲ್ಲಿ ಶೈಕ್ಷಣಿಕ ಉದ್ದೇಶಗಳನ್ನು ಬಿಟ್ಟು ಉಳಿದೆಲ್ಲಾ ನಡೆಯುವ ಸ್ಥಿತಿಯಲ್ಲಿದೆ. ತಂತ್ರಜ್ಞಾನದಲ್ಲಿ ‘ತಂತ್ರ’ ಕಲಿತೇವು, ಆದರೆ ವಿ‘ಜ್ಞಾನ’ ಕಳಕೊಂಡು ಮೌಢ್ಯಕ್ಕೆ ಬೀಳಲು ಹೊರಟಿದ್ದೇವೆ!
ಅಂಬೇಡ್ಕರ್ ಚಿಂತನೆ ಎಂದರೆ ವರ್ತಮಾನದ ಎಚ್ಚರಿಕೆ. ಅಂದರೆ ಅವರು ನಮ್ಮೊಳಗೆ ಹೊಸದಾಗಿ ಹುಟ್ಟಬೇಕು. ಈಗ ವರ್ತಮಾನದಲ್ಲಿ ಜಾಗತೀಕರಣದ ಪರಿಣಾಮಗಳಲ್ಲಿ ಶೋಷಿತವರ್ಗಕ್ಕೆ ಹೊಸದಾಗಿ ಅವರ ಸಂದೇಶಗಳು ಬೇಕು. ಖಾಸಗಿ ಕ್ಷೇತ್ರಗಳಲ್ಲಿ ಮೀಸಲಾತಿ ಮೂಲಕ ಅವರ ನ್ಯಾಯಪರ ಸಾಮಾಜಿಕ ಆಶಯಕ್ಕೆ ಬೆಲೆ ತರಬೇಕು.
ಮಾಧ್ಯಮ ಕ್ಷೇತ್ರಗಳಲ್ಲಿ, ಉದ್ಯಮ ಕ್ಷೇತ್ರಗಳಲ್ಲಿ ಅಂಬೇಡ್ಕರ್ ವಿಚಾರಗಳಿಗೆ ಹೆಚ್ಚು ಅವಕಾಶ ಇರಬೇಕು. ವಿಶೇಷವಾಗಿ ಯುವಜನತೆಗೆ ಇದನ್ನು ತಿಳಿಸುವಂತಾಗಬೇಕು. ವರ್ತಮಾನದ ಅಗತ್ಯಕ್ಕೆ ಸರಿಯಾಗಿ ತೆರೆದುಕೊಳ್ಳುವಂತೆ ಸಜ್ಜುಗೊಳಿಸಬೇಕು. ಶಿಕ್ಷಣವನ್ನು ಎಲ್ಲ ಬಗೆಯ ಶೋಷಣೆಗಳಿಂದ ಮುಕ್ತವಾಗುವ ಸ್ವಾಭಿಮಾನದ ಭಾಗವಾಗಿರಿಸಬೇಕು.
ಅಲ್ಲಿನ ಚಟುವಟಿಕೆಗಳು ನಮ್ಮ ಮಕ್ಕಳಲ್ಲಿನ ಮನಸ್ಸನ್ನು ಶುದ್ಧವಾಗಿರಿಸಲು ಯತ್ನಿಸಬೇಕು. ‘ಬಿಸಿ ಊಟ’ ಅಂಥ ಪ್ರಯತ್ನವಾಗಿ ಬಂದಿತು. ಆದರೆ ನಮ್ಮ ‘ಜಾತಿ’ಸಮಾಜ ಅನ್ನ ಹಾಕುವ ಕೈಯಲ್ಲಿ ಜಾತಿ ಹುಡುಕಿತು. ಹೀಗಾಗಿ ಸಮಾನತೆ ಜಾತ್ಯತೀತತೆಯನ್ನು ಪಡೆಯುವ ಅವಕಾಶ ದೂರವೇ ಉಳಿಯುತ್ತಿದೆ. ಇಂಥ ಸಂಗತಿಗಳನ್ನು ಕುರಿತು ಅಂಬೇಡ್ಕರ್ ಹೇಳುತ್ತಾರೆ: ‘ಇದೇ ಬಗೆಯ ನಿರಾಕರಣೆಯನ್ನು ಮುಂದುವರಿಸಿದರೆ ನಮ್ಮ ಪ್ರಜಾಪ್ರಭುತ್ವಕ್ಕೆ ಆಪತ್ತು ಎದುರಾಗುತ್ತದೆ’. ಈ ಮಾತನ್ನು ಎಚ್ಚರದಲ್ಲಿರಿಸಿಕೊಂಡು ವರ್ತಮಾನ ನಡೆಯಬೇಕಿದೆ.
ನಮ್ಮ ಸಮಾಜದಲ್ಲಿ ಅಸಮಾನತೆ ನಿವಾರಣೆಯಾಗುವುದು ಸವಾಲಿನ ಸಂಗತಿಯಾಗಿ ಬಿಟ್ಟಿದೆ. ಏಕೆಂದರೆ ನಮ್ಮಲ್ಲಿ ಸಮಾನತೆಯ ಕನಸೇ ಉಳಿದಿಲ್ಲ! ಸಮಾನತೆ ನಾಶವಾಗಿರುವುದರಿಂದಲೇ ಶ್ರೇಣೀಕೃತ ಸಮಾಜದ ಅಸ್ತಿತ್ವ ಜೀವಂತವಾಗಿದೆ. ಶ್ರೇಣೀಕೃತ ಸಮಾಜದಿಂದ ಕೆಲವರಿಗೆ ಉನ್ನತಿ, ಕೆಲವರಿಗೆ ಅಧೋಗತಿ. ಭ್ರಾತೃತ್ವ ಇಲ್ಲದ್ದರಿಂದ ‘ಜಾತಿ’ ಬಂದಿದೆ. ‘ಜಾತಿ’ ಅಳಿಯದೆ ಭ್ರಾತೃತ್ವ ಹುಟ್ಟುವುದಿಲ್ಲ, ಹಾಗಾಗಿ ಅಸ್ಪೃಶ್ಯತೆಯೂ ಅಳಿಯದು. ಹೀಗಾಗಿ ನಾವು ಭಾರತೀಯರಾಗೇ ಒಟ್ಟಿಗೆ ಇರುವುದು ಕಷ್ಟ. ಇದನ್ನೆಲ್ಲಾ ಹೇಗೆ ಅರ್ಥಮಾಡಿಸುವುದು? ಯಾರಿಗೆ ಅರ್ಥಮಾಡಿಸುವುದು?
ವಿಚಿತ್ರ ರೀತಿಯಲ್ಲಿ ಈಗಲೂ, ನಮ್ಮಲ್ಲಿ ಜಾತಿಪ್ರಜ್ಞೆ ಆಳವಾಗಿ ನಿಂತಿರುವುದನ್ನು ಕಾಣಬಹುದು. ಜಾತಿಪ್ರಜ್ಞೆ ಇರುವುದರಿಂದ ನ್ಯಾಯಪ್ರಜ್ಞೆ ಕಳೆದುಹೋಗಿದೆ. ನ್ಯಾಯಪ್ರಜ್ಞೆ ಇಲ್ಲದ್ದರಿಂದ ಸಾಮಾಜಿಕ ನ್ಯಾಯಪ್ರಜ್ಞೆ ಕಾಣುತ್ತಿಲ್ಲ. ಹೀಗಾಗಿ ನಮ್ಮ ಸಮಾಜದಲ್ಲಿ ‘ಸ್ವಾತಂತ್ರ್ಯ, ಸಮಾನತೆ, ಭಾತೃತ್ವ’ ಪ್ರಜ್ಞೆ ಕಾಣುವುದಾದರೂ ಹೇಗೆ? ಶಿಕ್ಷಣ ನಮ್ಮ ಮನುಷ್ಯಪ್ರಜ್ಞೆಯನ್ನು ಶುಚಿಗೊಳಿಸುತ್ತದೆ ಎಂದು ಅಂಬೇಡ್ಕರ್ ನಂಬಿದ್ದರು.ಈಗ ಶಿಕ್ಷಣವಂತರಲ್ಲೇ ‘ಜಾತಿ’ ಪ್ರಜ್ಞೆ ಜಾಗೃತವಾಗಿರುವುದು ದುಃಖದ ಸಂಗತಿ. ಈ ದುಃಖವನ್ನು ಮನುಷ್ಯನಾಗಿ ನೀಗಿಕೊಳ್ಳಲು ಬುದ್ಧಗುರುವಿನ ‘ಕರುಣೆ’, ‘ಮೈತ್ರಿ’ಯ ಸಂದೇಶ ಕೊಟ್ಟರು. ಆದರೂ ನಮ್ಮ ಕಾರುಣ್ಯಪ್ರಜ್ಞೆ ಚಿಗುರಲಿಲ್ಲ. ‘ಮೈತ್ರಿ’ ಮಾತು ದೂರ ಉಳಿಯುತ್ತಿದೆ.

ವಿಶ್ವಗುರು ಬಸವಣ್ಣನವರು ‘ದಯವಿರಬೇಕು ಸಕಲ ಜೀವಗಳಲ್ಲಿ’ ಎಂದರು. ‘ಕುಲ ಕುಲವೆನ್ನದಿರು’ ಎಂದರು ಕನಕದಾಸರು. ನಾವು ದಯನೀಯವಾಗೇ ಬದುಕಲು ನಿಂತೆವು. ಗಾಂಧೀಜಿ ‘ಹೃದಯ ಪರಿವರ್ತನೆ’ ಎಂದರು ನಮ್ಮ ಹೃದಯದಲ್ಲಿ ಹೃದಯಗಳೇ ಕಾಣದಾದವು. ಏಕೆಂದರೆ, ಇಂದಿಗೂ ನಮ್ಮನ್ನು ‘ಅಲಿಖಿತ ಸಂವಿಧಾನ’ ಆಳುತ್ತಿದೆ.
ನಮ್ಮ ಸಾಮಾಜಿಕ ಪ್ರಜ್ಞೆಯನ್ನು ಅಲಿಖಿತ ಸಂವಿಧಾನ ಆಳುತ್ತಿರುವುದರಿಂದ ನಮ್ಮ ಸಾಮಾಜಿಕ ಪ್ರಜ್ಞೆಯಲ್ಲಿ ಸಮಾನತೆ ಬದಲು ಅಸಮಾನತೆ ಇದೆ. ಮುಟ್ಟಿಸಿಕೊಳ್ಳುವ ಬದಲು  ಅಸ್ಪೃಶ್ಯತೆ ಇದೆ. ಇಡೀ ಭಾರತದ ಘನತೆ ನಾಶವಾಗುತ್ತಿರುವುದು ಇದರಿಂದಲೇ. ಗೌರವದ ಬದುಕು ನಮ್ಮೊಳಗೆ ನಾಶವಾಗಿರುವುದೂ ಹೀಗೆಯೇ? ಈ ನಾಡಿನ ಶೋಷಿತ ಜನವರ್ಗಗಳು ಸಾಮಾಜಿಕ ಅಸಮಾನತೆಯಿಂದ ಸಾಕಷ್ಟು ಬವಣೆ ಅನುಭವಿಸಿವೆ. ಹೀಗಾಗಿ ಅವರನ್ನು ಮುಖ್ಯವಾಹಿನಿಗೆ ಬರುವಂತೆ ಮಾಡುವುದು ಇಂದಿನ ಅಗತ್ಯ.
ಜಾತಿ ಮತದ ಭೇದಭಾವವಿಲ್ಲವೆಂಬ ಭರವಸೆ ದೊರೆತರೆ ಮಾತ್ರ ಅವರು ನಂಬುತ್ತಾರೆ. ಈ ಭರವಸೆ ದೊರೆಯದೇ ಹೋದರೆ ಅವರು ಮುಖ್ಯವಾಹಿನಿಗೆ ಬರಲೊಲ್ಲರು. ನಮ್ಮ ಸಾಮಾಜಿಕ ಸ್ಥಿತಿಯ ವಿನ್ಯಾಸ ತಾರತ್ಯಮದ ಮೇಲೆ ನಿಂತಿರುವುದರಿಂದ ಯಾವ ದಾರಿಯಲ್ಲಿ ಹೋದರೂ ‘ಜಾತಿ’ ಕಾಡುತ್ತಿರುತ್ತದೆ.
We the people of india ಅನ್ನುವಾಗ ನಾವು ವಾರಸುದಾರರು, ನಾವೇ ನಮ್ಮ ರಾಷ್ಟ್ರ ಕಟ್ಟಿದವರು, ನಮ್ಮ ರಾಷ್ಟ್ರದ ಹಿತಕಾಯಬೇಕಾದವರು. ಎಲ್ಲರ ಒಳಿತಿಗೆ, ಸಹಬಾಳ್ವೆಗೆ, ಸಮಾನತೆಗೆ ಬಾಧ್ಯರು ಎಂದುಕೊಂಡೆವು.
ಆದರೆ ವಾಸ್ತವದಲ್ಲಿ ಇವೆಲ್ಲಾ ದೂರ ಉಳಿಯುತ್ತಿವೆ. ಈ ಬಗ್ಗೆ ಅರಿವು ಸಾಕಷ್ಟು ವಿಸ್ತರಿಸಬೇಕಾಗಿದೆ. ದಾರ್ಶನಿಕರ ವಿಚಾರಧಾರೆಗಳನ್ನಿಟ್ಟುಕೊಂಡು ಅನ್ಯಾಯದ ಅರಿವಿಲ್ಲದವರಿಗೆ ಅರಿವು ತರಬೇಕಾದ್ದು ಮುಖ್ಯ.
ಸಾಮಾಜಿಕ ಅಸಮಾನತೆ ಬಗ್ಗೆ, ದಲಿತೇತರ ಮಧ್ಯೆ ಇಂದು ಹೆಚ್ಚು ಚರ್ಚೆಗಳಾಗಬೇಕು. ಭಾರತೀಯ ಸಮಾಜ ಎಲ್ಲ ರೀತಿಯ ಕಾರ್ಯ–ಹಿಂಸೆಗಳನ್ನು ದಲಿತ ಸಮುದಾಯದ ಮೇಲೆ ಹೇರಿರುರುವುದು ಯಾಕೆ ಎಂಬ ಪ್ರಶ್ನೆ ಏಳಬೇಕು. ಇದು ‘ಸಾಮಾಜಿಕ ಕೆಡುಕು’. ಇದನ್ನು ಅಂಬೇಡ್ಕರ್ ಅನುಭವಿಸಿದ್ದರು. ಅದಕ್ಕಾಗೇ ‘ಜಾತಿ ವಿನಾಶ’ ಅವರ ಆದ್ಯತೆಯಾಗಿತ್ತು.
ದಲಿತ ಸಮುದಾಯದ ಸಮಸ್ಯೆ ಕೇವಲ ಹಸಿವಿನದಲ್ಲ, ಬಡತನದ್ದಲ್ಲ ಎಂಬ ಸತ್ಯದ ಅರಿವಿತ್ತು ಅವರಿಗೆ. ಅವಮಾನಗೊಳ್ಳದೆ ಬದುಕುವ ಸಮಾಜಕ್ಕಾಗಿ ಹಂಬಲಿಸುತ್ತಲಿದ್ದರು. ಈ ವಿಚಾರದಲ್ಲಿ ದಲಿತರಿಗೆ, ಅದರಲ್ಲೂ ಓದಿದ ದಲಿತರಿಗೆ ಹೊಣೆಗಾರಿಕೆ ಹೆಚ್ಚಿದೆ. ‘ಜಾತಿ’ ಅವಮಾನಗಳಿಂದ ಕ್ರೋಧಗೊಳ್ಳುವ ಬದಲು ಮೀರಿ ನಿಲ್ಲುವಂತಾಗಬೇಕು. ಇದಕ್ಕೆ ಅಂಬೇಡ್ಕರ್ ಮಾರ್ಗವೂ ಬೇಕು, ಗಾಂಧಿ ಮಾರ್ಗವನ್ನೂ ಗಮನಿಸಬೇಕು.
ಅಂಬೇಡ್ಕರ್ ತಮ್ಮ ವಿದ್ವತ್ ಮೂಲಕವೇ ಜಗತ್ತಿಗೆ ಮಾದರಿಯಾದರು. ಇದು ಸ್ವಾಭಿಮಾನದ, ಘನತೆಯ, ಗೌರವದ ಮಾರ್ಗ. ಗಾಂಧೀಜಿ ಅವರ ಮಾರ್ಗದ ಬಗ್ಗೆ ವರ್ತಮಾನದಲ್ಲಿ ಪರಿಶೀಲಿಸುವುದು ಸೂಕ್ತ. ಗಾಂಧಿ ಬಗ್ಗೆ ಅಂಬೇಡ್ಕರ್‌ಗಿದ್ದ ಅಭಿಪ್ರಾಯವನ್ನು ಪ್ರಸ್ತುತದಲ್ಲಿ ವಿಶ್ಲೇಷಿಸುವ ಅನಿವಾರ್ಯತೆ ಇದೆ.
ಗಾಂಧಿ ಎಂದಕೂಡಲೇ ಕ್ರೋಧಗೊಳ್ಳುವ ಬದಲು, ಅವರು ಅನುಸರಿಸಿದ ಮಾರ್ಗದಲ್ಲಿ ದಲಿತರಿಗೆ ಆಪ್ಯಾಯಮಾನವಲ್ಲದ ಸಂಗತಿಗಳೇನು ಎನ್ನುವುದನ್ನು ಅರಿಯಬೇಕು.
ಅಭಿಪ್ರಾಯಭೇದಗಳನ್ನು ಉಳಿಸಿಕೊಂಡೂ ಸಮಾನತೆಯ ಮಾತನ್ನಾಡಲು ಕಷ್ಟವಾಗುವುದಿಲ್ಲವೇ? ಗಾಂಧೀಜಿ ಅಸ್ಪೃಶ್ಯತೆಯ ಸಮಸ್ಯೆಯನ್ನು, ಅದಕ್ಕೆ ಪರಿಹಾರವನ್ನು ಸೂಚಿಸಿದ್ದು ತಾವು ನಂಬಿದ ಧರ್ಮದಲ್ಲಿ. ಹೀಗಾಗಿ ‘ಅಸ್ಪೃಶ್ಯತೆ ಹಿಂದೂ ಧರ್ಮದ ಬಹುದೊಡ್ಡ ಕಳಂಕ’ ಎಂದರು; ‘ಪಾಪ’ ಎಂದರು.
ಅವರ ಪ್ರಾಮಾಣಿಕತೆಯನ್ನು ಸಂದೇಹಪಡಬೇಕಿಲ್ಲ. ಆದರೆ ಭಿನ್ನತೆ ಇರುವುದು ಪರಿಹಾರಕ್ಕೆ ಪ್ರಯತ್ನಿಸಿದ ವಿಧಾನಗಳಲ್ಲಿ, ಬೇಡಿಕೆಗಳಲ್ಲಿ, ನೆನಪಿಸಿಕೊಳ್ಳಬೇಕಾದ ಮಾತು ಏನೆಂದರೆ, ಅಂಬೇಡ್ಕರ್ ಗಾಂಧೀಜಿಗೆ ಹೇಳಿದ್ದು, ‘ದೇವರ ಕಣ್ಣಿಗೆ ಎಲ್ಲರೂ ಸಮಾನರು ಎನ್ನುವುದು ನನಗೆ ಬೇಕಿಲ್ಲ. ನನಗೆ ಬೇಕಿರುವುದು, ಲೌಕಿಕ ಜೀವನದಲ್ಲಿ, ಮನುಷ್ಯರ ಕಣ್ಣಲ್ಲಿ ಮನುಷ್ಯರು ಸಮಾನರು ಎನ್ನುವುದು’ ಎಂದರು.
ಗಾಂಧಿ ಅಸ್ಪೃಶ್ಯತೆ ಆಚರಣೆ ‘ಪಾಪ’ ಎಂದರು. ಅಂಬೇಡ್ಕರ್ ಅಸ್ಪೃಶ್ಯತೆಯನ್ನು ‘ಕ್ರೈಮ್’ (ಅಪರಾಧ) ಎಂದರು. ಇಬ್ಬರ ಪ್ರಯತ್ನದಲ್ಲಿದ್ದುದು ಒಂದೇ –ಅಸ್ಪೃಶ್ಯತೆಯ ನಿವಾರಣೆ. ಆದರೆ, ಅಂಬೇಡ್ಕರ್ ಅಸ್ಪೃಶ್ಯತೆ ಬಗ್ಗೆ ಎತ್ತಿದ ಪ್ರಶ್ನೆಗಳು ವ್ಯಕ್ತಿಗತವಾಗಿರಲಿಲ್ಲ. ಅದು ಎಲ್ಲ ಶೋಷಿತ ಸಮುದಾಯಗಳ ಪ್ರಶ್ನೆಯಾಗಿರುತ್ತಿತ್ತು.
ಅಸ್ಪಶ್ಯತೆ ಬಗ್ಗೆ ಅಂಬೇಡ್ಕರ್‌ರವರ ಪ್ರಶ್ನೆಗಳು ಸಮಾಜದಲ್ಲಿ ಹೆಚ್ಚು ಚರ್ಚೆಗೆ ಬರಬೇಕು. ನಮ್ಮ ಹೊಸ ತಲೆಮಾರಿನಲ್ಲಿ ಇವರ ಅಭಿಪ್ರಾಯಗಳನ್ನು ವಿಶ್ಲೇಷಿಸುವ, ಅರ್ಥಮಾಡಿಕೊಳ್ಳುವ ಸನ್ನಿವೇಶವನ್ನು ಸೃಷ್ಟಿಸಬೇಕು. ಶೋಷಿತ ಜನವರ್ಗಗಳನ್ನು ತಬ್ಬಲಿಗಳಲ್ಲ ಎಂದು ಹೇಳುವಂತಾಗಬೇಕು. ಗೌರವಯುತ ಬದುಕಿನ ಬಗ್ಗೆ ಭರವಸೆ ತರಬೇಕು.
ಒಟ್ಟಾರೆ ಅವರು ನಡೆಸಿದ ಚಿಂತನೆಗಳು ವರ್ತಮಾನಕ್ಕೆ ಅಗತ್ಯವಿದೆ ಎಂಬುದು ಗಾಳಿ–ಬೆಳಕಿನಷ್ಟೆ ಸತ್ಯ. ಅವರ ಆಲೋಚನೆ ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ ಎನ್ನಬಹುದು. ಇದಕ್ಕೆ ಈ ಕೆಳಕಂಡ ಅವರದೇ ಮಾತು ಮತ್ತಷ್ಟು ದೃಢೀಕರಿಸುತ್ತದೆ.
‘ಗಾಢ ಪ್ರೀತಿ ಮತ್ತು ಕೋಪವನ್ನು ಹೊಂದದವರು ತಮ್ಮ ಕಾಲದ ಮೇಲೆ ಯಾವುದೇ ಪ್ರಭಾವವನ್ನು ಬೀರಲಾರರು. ಮತ್ತು ಯಾವುದೇ ಘನ–ತತ್ವಗಳಿಗೆ ಅಥವಾ ಹೋರಾಟಯೋಗ್ಯವಾದ ಧ್ಯೇಯಗಳಿಗೆ ಪರಿಣಾಮಕಾರಿ ಮಾರ್ಗದರ್ಶನ ಮಾಡಲಾರರು. ನಾನು ಅನ್ಯಾಯ, ದಬ್ಬಾಳಿಕೆ, ಅಸಮಾನತೆ, ಶೋಷಣೆ ಮತ್ತು ವಂಚನೆಯನ್ನು ದ್ವೇಷಿಸುತ್ತೇನೆ.
ಮತ್ತು ಯಾರು ಇದನ್ನು ಆಚರಿಸುತ್ತಾರೋ ಅವರನ್ನು ಪ್ರಶ್ನಿಸುತ್ತೇನೆ. ಇದೇ ನಾನು ಬಲವಾಗಿ ನಂಬಿರುವ ತತ್ವ ಮತ್ತು ಧ್ಯೇಯ ನಾನು ಹೊಂದಿರುವ ಪ್ರೀತಿಯ ಪ್ರತಿಬಿಂಬ’ – ಈ ಮಾತನ್ನು ನೋವು ಉಂಡವರು ಆಲೋಚಿಸಬೇಕು. ನೋವು ಕೊಟ್ಟವರು ಆಲೋಚಿಸಬೇಕು.
‘ಸುಮ್ಮನೆ ಜೀವಂತವಾಗಿರುವುದಕ್ಕಿಂತ ಗೌರವ–ಘನತೆಯ ಬಾಳಿಗೆ ಆಸೆ ಪಡಬೇಕು’. ಇದೇ ಅಂಬೇಡ್ಕರ್‌ರವರ 125ನೇ ವರ್ಷಾಚರಣೆಯ ಆಶಯವೆಂದುಕೊಳ್ಳುವೆ.
***
ವಸತಿನಿಲಯಗಳಲ್ಲಿ, ವಿ.ವಿ.ಗಳಲ್ಲಿ ಓದುವ ಮುಗ್ಧ ವಿದ್ಯಾರ್ಥಿಗಳು ಸಾಯುತ್ತಿದ್ದಾರೆ. ಮನುಷ್ಯರನ್ನು ‘ಮಲ’ದ ಗುಂಡಿಗೆ ಇಳಿಸುತ್ತಿದ್ದೇವೆ. ಉಸಿರುಗಟ್ಟಿ ಸಾಯುವವರಿಗೆ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದ್ದೇವೆ. ಇವೆಲ್ಲ ಮರ್ಯಾದೆ ಇರುವ ನಾಗರಿಕ ಸಮಾಜದಲ್ಲಿ ಇರುವಂಥವಲ್ಲ.
***
ಈಗ ಸಾರ್ವಜನಿಕವಾಗಿ ಹೆಚ್ಚು ಜಾಗಗಳು ಸೃಷ್ಟಿಯಾಗಿವೆ. ಆದರೆ ಮನಸ್ಸಲ್ಲಿ ಜಾಗ ಇಲ್ಲದಾಗಿದೆ.
***
ಅಂಬೇಡ್ಕರ್ ಗಾಂಧೀಜಿಗೆ ಹೇಳಿದ್ದು: ‘ದೇವರ ಕಣ್ಣಿಗೆ ಎಲ್ಲರೂ ಸಮಾನರು ಎನ್ನುವುದು ನನಗೆ ಬೇಕಿಲ್ಲ. ನನಗೆ ಬೇಕಿರುವುದು, ಲೌಕಿಕ ಜೀವನದಲ್ಲಿ, ಮನುಷ್ಯರ ಕಣ್ಣಲ್ಲಿ ಮನುಷ್ಯರು ಸಮಾನರು ಎನ್ನುವುದು’.
***
ದಲಿತರು ಅಂಬೇಡ್ಕರ್ ಅವರನ್ನು ತಮ್ಮವರೆಂದು ವೈಭವೀಕರಿಸಿದರೆ, ದಲಿತೇತರರು ಅವರನ್ನು ಅರಿಯಲಾರದೆ ಹಿಂದೆಬಿದ್ದಿದ್ದಾರೆ.
***
ಅಂಬೇಡ್ಕರ್ ಅವರ ಹೋರಾಟಕ್ಕೆ ನಾವು ಯಾವತ್ತೂ ಗೌರವ ನೀಡಿಲ್ಲ. ನೀಡಿದ್ದಿದ್ದರೆ ಇವತ್ತು ನಾವು ಕಾಣುತ್ತಿರುವ ಸಾಮಾಜಿಕ ಸಂಕಟಗಳು ಈ ಪ್ರಮಾಣದಲ್ಲಿ ಇರುತ್ತಿರಲಿಲ್ಲವೇನೋ?