ಸಂವಾದ ಮಾಸ ಪತ್ರಿಕೆಯಲ್ಲಿ ಕೆ.ಎಲ್. ಚಂದ್ರಶೇಖರ ಐಜೂರ್ ಅವರು ಮಾಡಿದ ಮಹಾದೇವರ ಸಂದರ್ಶನ

 

ನೆಲದ ಅರಿವಿನ ಪರಿಧಿಯನ್ನು ವಿಸ್ತರಿಸುತ್ತಲೇ ಇರುವ ದೇವನೂರರು ತಮ್ಮ ನಡೆ ನಾಲಿಗೆ ಎರಡರಲ್ಲೂ ತಾಯ್ತನದ ಗುಣಗಳನ್ನು ಕಾಪಾಡಿಕೊಂಡು ಬಂದವರು. ದೇವನೂರರಚಿಂತನೆಗಳು ಕನ್ನಡದ ಅನೇಕ ತಲೆಮಾರುಗಳನ್ನು ಪ್ರಭಾವಿಸುತ್ತಲೇ ಬಂದಿವೆ. ೨೮ ವರ್ಷಗಳ ನಂತರ ಪ್ರಕಟಗೊಂಡ ದೇವನೂರರ ಈಚಿನ ಕೃತಿಎದೆಗೆ ಬಿದ್ದ ಅಕ್ಷರವೂಕನ್ನಡದ ಓದುಗರನ್ನು ಮಾನವೀಯ ಕಣ್ಣುಗಳಿಂದ ಪೊರೆಯುತ್ತಲೇ ಇದೆ. ’ದೇವನೂರ ಮಹಾದೇವ ಮತ್ತು ಕಿ.ರಂ.ನಾಗರಾಜರನ್ನು ನೋಡಿದಾಗ, ನೆನೆದಾಗ ಮಾತ್ರ ಗಾಂಧಿಇಲ್ಲೆಲ್ಲೋ ಓಡಾಡಿದ್ದರೆಂದು ನನಗೆ ಅನಿಸತೊಡಗುತ್ತದೆ…’ ಎಂಬ ನಟರಾಜ್ ಹುಳಿಯಾರರ ಮಾತಿನಲ್ಲಿ ಅಂಥ ಉತ್ಪ್ರೇಕ್ಷೆಯೇ ಕಾಣದು.


ಸರಪಳಿಯ
ಉದ್ದ ಇರುವಷ್ಟು ಮಾತ್ರ ನಮ್ಮ ಚಲನೆ ನಡೆದಾಟ

 

ಪ್ರಶ್ನೆ: ನಿಮ್ಮನ್ನು ಒಳಗೊಂಡಂತೆ ಕನ್ನಡದ ಬಹುಪಾಲು ಪ್ರಗತಿಪರ ಚಿಂತಕರು, ಲೇಖಕರು ಅನಿವಾರ್ಯವಾಗಿಯಾದರೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿ ಎಂದು ಬಯಸಿದ್ದುಂಟು. ಈಗ ಕಾಂಗ್ರೆಸ್ಕರ್ನಾಟಕದಲ್ಲಿ ಸರ್ಕಾರ ರಚಿಸಿ ಇನ್ನೂ ತಿಂಗಳು ಕೂಡ ದಾಟಿಲ್ಲ, ಇಂಥ ಹೊತ್ತಲ್ಲಿ ಸರ್ಕಾರದಿಂದ ಜನಸಮುದಾಯಕ್ಕೆ ಒಳಿತಾಗುವಂತಹ  ಯೋಜನೆಗಳನ್ನೇನಾದರೂ ನಿರೀಕ್ಷಿಸಿಬಹುದೇ?

ದೇವನೂರು: ದಿನಕ್ಕೊಂದು ಚಿನ್ನದ ಮೊಟ್ಟೆಯಿಡುತ್ತಿದ್ದ ಕೋಳಿಯನ್ನು ದುರಾಸೆಗಾಗಿ ಕೊಂದ ಕಲ್ಪನೆಯ ಕಥೆಯನ್ನೇ ರಾಜ್ಯ ಸರ್ಕಾರದ ಕೆಐಎಡಿಬಿ ಮತ್ತು ಭೂಬ್ಯಾಂಕ್‌ಗಳು ಇಂದು ವಾಸ್ತವ ಮಾಡುತ್ತಿವೆ. ಕಳೆದಎರಡುವರ್ಷಗಳಲ್ಲೇ ಬಿಜೆಪಿ ಸರ್ಕಾರ ಒಂದು ಲಕ್ಷ ಎಕರೆಗಳಿಗೂ ಹೆಚ್ಚು ಭೂಸ್ವಾಧೀನ ಮಾಡಿಕೊಂಡು ರೈತಾಪಿಯನ್ನು ಭವಿಷ್ಯದ ಭಿಕ್ಷುಕರನ್ನಾಗಿ ಮಾಡಿಬಿಟ್ಟಿತು. ಭೂಮಿಯನ್ನು ರೈತರಿಂದ ಕಿತ್ತು ಬಂಡವಾಳಗಾರರಿಗೆ ಕ್ರಯಮಾಡುವ ಪೈಶಾಚಿಕ ಕಾನೂನನ್ನು ಹಿಂದೆಗೆದುಕೊಂಡು ಅವಶ್ಯವಿದ್ದಷ್ಟು ಗುತ್ತಿಗೆ ನೀಡುವ, ಯಾವ ಉದ್ದೇಶಕ್ಕೆ ಭೂಮಿ ನೀಡಲಾಗಿರುತ್ತದೋ ಅದನ್ನು ಅನುಷ್ಠಾನ ಮಾಡದಿದ್ದರೆ ನೀಡಿದ್ದ ಭೂಮಿಯನ್ನು ಹಿಂತೆಗೆದುಕೊಳ್ಳುವಂತೆಇರಬೇಕು. ರಾಜ್ಯದ ಗಡಿಯ ತಮಿಳ್ನಾಡು ಮಹಾರಾಷ್ಟ್ರಗಳಲ್ಲಿ ಈ ನೀತಿ ಇರುವಾಗ ನಮಗೇನಾಗಿದೆ? ರಾಜ್ಯದ ಆಸ್ತಿಯನ್ನು ಖಾಸಗೀ ಬಂಡವಾಳದ ಭೂತದ ದವಡೆಯಿಂದ ಕಾಪಾಡಿಕೊಳ್ಳುವುದಕ್ಕೆ ಮೊದಲ ಆದ್ಯತೆಕೊಡಬೇಕಾಗಿದೆ. ಹಾಗೇ, ದಲಿತ ಹಿಂದುಳಿದ ಅಲ್ಪಸಂಖ್ಯಾತ ವರ್ಗದ ನಿರ್ಲಕ್ಷಿತ ವಿದ್ಯಾರ್ಥಿಗಳ ಮುಖ್ಯವಾಗಿ ಹೆಣ್ಣು ಮಕ್ಕಳ ವಸತಿಶಾಲೆಗಳನ್ನು ವಾಸಯೋಗ್ಯ ಮಾಡುವುದಕ್ಕೆ ಹಾಗೂ ಶಿಕ್ಷಣವಂಚಿತ ಮಕ್ಕಳ ಶಿಕ್ಷಣಕ್ಕೆ ಹೆಚ್ಚುಆದ್ಯತೆ ನೀಡಬೇಕಾಗಿದೆ. ಇದರೊಡನೆ ಗೃಹಕೈಗಾರಿಕೆ ಹೆಚ್ಚಳ, ಪಾಳೇಗಾರರ ನೈಸರ್ಗಿಕ ಕೃಷಿಗೆ ಆದ್ಯತೆ ಜೊತೆಗೆ ಅಂತರ್ಜಲ ಕಾಪಾಡುವುದೇ ಮುಂತಾಗಿ ತುರ್ತು ಗಮನ ನೀಡಬೇಕು.

 

ಪ್ರಶ್ನೆ: ಸಾಮಾಜಿಕ ಚಳುವಳಿಗಳ ನಾಯಕನಾಗಿ ನೀವು ಕ್ರಮಿಸಿದ ದಾರಿಯೂ ಧೀರ್ಘವಾದದ್ದೇ. ಬಿಕ್ಕಟ್ಟಿನ ಕಾಲವೇ ಕಾಂಗ್ರೆಸ್ ಪಕ್ಷವನ್ನು ತನ್ನ ಆಳುವ ಪ್ರಭುತ್ವವಾಗಿ ಆಯ್ಕೆ ಮಾಡಿಕೊಂಡಂತೆ ಕಾಣುತ್ತಿದೆ.ಇಂಥ ಹೊತ್ತಲ್ಲಿ ಸರ್ಕಾರವನ್ನು ಎಚ್ಚರದಲ್ಲಿಟ್ಟು ಸದಾ ಕ್ರಿಯಾಶೀಲವಾಗಿಡುವ ನಿಟ್ಟಿನಲ್ಲಿ ಒಂದು ಪ್ರಬಲ ಒತ್ತಡದ ಗುಂಪಿನ ಅಗತ್ಯವಿದೆ. ನಿಮ್ಮ ಸಾರಥ್ಯದಲ್ಲಿ ಅಂಥ ಒತ್ತಡ ಗುಂಪೊಂದನ್ನು ನಿರೀಕ್ಷಿಸಬಹುದೇ?

ದೇವನೂರು: ಯಾರೇ ಆಳ್ವಿಕೆ ನಡೆಸುತ್ತಿರಲಿ, ಒಂದು ಒತ್ತಡದ ಗುಂಪು ಇರಬೇಕು, ಇರಲೇ ಬೇಕು. ಆದರೆ ಇಂದು ಬಡದೇಶಗಳು ಪರತಂತ್ರಕ್ಕೆ ವಶವಾಗುತ್ತಿವೆ; ಸ್ವತಂತ್ರ ಕಳೆದುಕೊಳ್ಳುತ್ತಿವೆ. ಸಾಲಕೊಡುವ ಬಲಿಷ್ಠ ರಾಷ್ಟ್ರಗಳುಇಲ್ಲಿನ ಆಗು ಹೋಗುಗಳನ್ನು ನಿರ್ಧರಿಸುತ್ತಿವೆ. ವಿಶ್ವ ವಾಣಿಜ್ಯ ಸಂಸ್ಥೆ, ವಿಶ್ವಬ್ಯಾಂಕ್, ಗ್ಯಾಟ್ ಒಪ್ಪಂದಗಳು ನಮ್ಮಂಥ ದೇಶಗಳನ್ನು ಹೆಬ್ಬೆಟ್ಟು ಸಹಿ ಒತ್ತುವವನ ದುಸ್ಥಿತಿಗೆ ಇಳಿಸಿ ಬಿಟ್ಟಿವೆ. ನಮ್ಮಂಥ ದೇಶಗಳ ಕಾಲಿಗೆ ವಿಶ್ವವಾಣಿಜ್ಯ ಸಂಸ್ಥೆ, ವಿಶ್ವಬ್ಯಾಂಕ್, ಗ್ಯಾಟ್ ಒಪ್ಪಂದಗಳ ಸರಪಳಿ ಬಿಗಿದಿದೆ. ಈ ಸರಪಳಿಯ ಉದ್ದ ಇರುವಷ್ಟು ಮಾತ್ರ ನಮ್ಮ ಚಲನೆ ನಡೆದಾಟ. ಇಂದು ಬೇಕಾಗಿರುವುದು -ಈ ಸರಪಳಿ ಕತ್ತರಿಸುವ ಸ್ವಾತಂತ್ರ್ಯ ಹೋರಾಟದಪರ್‍ಯಾಯ ರಾಜಕಾರಣ. ವಿದ್ಯಾರ್ಥಿ ಯುವಜನತೆ ಮಹಿಳೆಯರ ನಾಯಕತ್ವದ ಪರ್‍ಯಾಯ ರಾಜಕಾರಣ ಭುಗಿಲೆದ್ದರೆ ಮಾತ್ರ ಒಂದು ದಿಕ್ಕು ಕಾಣಬಹುದು. ನಮ್ಮಂಥವರು ಇದಕ್ಕಾಗಿ ವಾತಾವರಣವನ್ನು ಉಂಟುಮಾಡುತ್ತಾಹಿಂಬಾಲಿಸಬೇಕಿದೆ.

 

ಪ್ರಶ್ನೆ: ಹಿಂದಿನ ಸರ್ಕಾರಗಳು ದಲಿತರಿಗೆ ಮೀಸಲಿಟ್ಟ ಹಣವನ್ನು ಖರ್ಚು ಮಾಡದೆ ಬೇರೆ ಯೋಜನೆಗಳಿಗೆ ಬಳಸಿದ ಉದಾಹರಣೆಗಳುಂಟು. ದಲಿತರಿಗೆಂದೇ ಮೀಸಲಿಟ್ಟ ಹಣ ಖರ್ಚಾಗದಿದ್ದರೆ ದಲಿತರಹೆಸರಿನಲ್ಲಿ ಭೂಮಿಯನ್ನಾದರೂ ಸರ್ಕಾರ ಖರೀದಿಮಾಡಿ ಪ್ರತ್ಯೇಕವಾಗಿ ಇಡಬೇಕೆಂದು ನೀವೇ ಹಿಂದೆ ಅನೇಕಸಲ ಹೇಳಿದ್ದಿರಿ. ಕುರಿತು ಸರ್ಕಾರದೊಂದಿಗೆ ಪಾಲಿಸಿ ರೂಪಿಸುವ ಮಟ್ಟದಲ್ಲಿ ಚರ್ಚಿಸಲುಸಾಧ್ಯವೇ?

ದೇವನೂರು: ಸಮಾಜ ದಲಿತರನ್ನು ಊರಾಚೆ ಇಟ್ಟಿದೆ. ಸರ್ಕಾರ ದಲಿತರ ಉದ್ಧಾರಕ್ಕೆಂದು ಹಣ ಮೀಸಲಿಟ್ಟು ಅದನ್ನು ಲ್ಯಾಪ್ಸ್ ಮಾಡುವ ಸಂಪ್ರದಾಯ ಇಟ್ಟುಕೊಂಡಿದೆ.  ಒಂದಕ್ಕೊಂದು ಸಂಬಂಧವಿಲ್ಲವೆ? ಉದ್ದೇಶಪೂರ್ವಕವಾಗಿ ಈ ರೀತಿ ಮಾಡುತ್ತಿರಬಹುದೆಂದು ಒಂದೊಂದು ಸಲ ನನಗನ್ನಿಸುತ್ತದೆ. ಇದನ್ನು ಕೇಳುವ ಜನಪ್ರತಿನಿಧಿಗಳಾಗಲೀ ಸಂಘಟನೆಗಳಾಗಲೀ ಇಲ್ಲ. ಇದ್ದರೂ ಎಚ್ಚರವಿದ್ದಂತಿಲ್ಲ. ಹೀಗಿರುವಾಗ ಚರ್ಚೆ ಮೂಲಕ ದಲಿತರಿಗೆಮೀಸಲಿಟ್ಟು ಲ್ಯಾಪ್ಸ್ ಮಾಡುವ ಹಣವನ್ನು ದಲಿತಭೂನಿಧಿಗಾಗಿ ವಿನಿಯೋಗಿಸುವಂತಹ ಕಾನೂನು ರೂಪಿಸುವುದು ಚರ್ಚೆ ಮೂಲಕ ಕಷ್ಟದ ಮಾತು. ಆದರೂ ಪ್ರಯತ್ನಿಸಬಹುದು. ಆದರೆ ಒಂದು ಹೋರಾಟವೂ ಬೇಕಾಗಿದೆ.

 

ಪ್ರಶ್ನೆ: ಭೂಮಿ ಹಂಚಿಕೆ ಎಂಬುದು ಇನ್ನೂ ನೆನೆಗುದಿಗೆ ಬಿದ್ದಿರುವ ಹೊತ್ತಲ್ಲಿ, ಗ್ರಾಮಾಂತರ ಭಾಗದ ದಲಿತ ಯುವಕರು ತಮ್ಮ ಹಳ್ಳಿಗಳನ್ನು ತೊರೆದು ನಗರ ಸೇರಿ ಇಲ್ಲಿನ ವೇಗಕ್ಕೆ ತಕ್ಕ ಕಲೆಕಸುಬುದಾರಿಕೆಗಳಿಲ್ಲದೆ ದಿನಗೂಲಿ ಆಳುಗಳಾಗಿ ಇಲ್ಲಿಯೂ ಶೋಷಣೆಗೊಳಗಾಗುತ್ತಿದ್ದಾರೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಂಥವು ದಲ್ಲಾಳಿಗಳ, ಕಮಿಷನ್ ಏಜೆಂಟರ ಕೈಗೆ ಸಿಕ್ಕ ಬಂಪರ್ಲಾಟರಿಯಂತಾಗಿವೆ. ಹೀಗಿರುವಾಗ, ಭೂಮಿ ಹಂಚಿಕೆಯ ಉಸಾಬರಿಯೇ ಬೇಡವೆಂದು ಸರ್ಕಾರ  ಮುಗುಮ್ಮಾಗಿ ಉಳಿದುಬಿಟ್ಟರೆ ಗತಿ ಏನು?

ದೇವನೂರು: ದಲಿತರು ಹಳ್ಳಿಗಳಲ್ಲೂ ಹೆಚ್ಚಾಗಿ ದಿನಗೂಲಿಗಳು ತಾನೆ? ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ತಲುಪಬೇಕಾದವರಿಗೆ ತಲಪುವಂತಾಗುವುದು ತಂತಾನೇ ಆಗುವುದಿಲ್ಲ. ಇದಕ್ಕಾಗೊಂದುಎಚ್ಚರದ ಗುಂಪು ಹುಟ್ಟಿಕೊಳ್ಳಬೇಕಾಗಿದೆ. ಅನ್ನ ಬಟ್ಟೆ ನೆಲೆ ನೀಡಿ ಕಾಪಾಡುವ ಭೂಮಿ ಮೇಲೆ ಬಂಡವಾಳ ಬಿತ್ತಿ ಬಂಡವಾಳ ಬೆಳೆಯುವ ಅತ್ಯಾಚಾರಿಗಳ ಕಣ್ಣು ಬಿದ್ದಿರುವಾಗ ಇನ್ನು ದಲಿತರಿಗೆಲ್ಲಿ ಭೂಮಿ ಸಿಗುತ್ತದೆ! ಇನ್ನುದಲಿತರು ತಾವೂ ಬದಲಾಗುತ್ತಾ ಸಣ್ಣಪುಟ್ಟ ವ್ಯಾಪಾರಗಾರರು ಆಗುವತ್ತ ಹೆಜ್ಜೆ ಇಟ್ಟು ಇಂದಿಗೆ ಮುಖಾಮುಖಿಯಾಗಬೇಕಾಗಿದೆ ಎನಿಸುತ್ತದೆ. ಸರ್ಕಾರವು ಈ ದಿಕ್ಕಿನಲ್ಲಿ ಯೋಜನೆಗಳನ್ನು ರೂಪಿಸಿದರೆ ಒಳ್ಳೆಯದು.

 

ಪ್ರಶ್ನೆ: ಪಕ್ಕದ ತಮಿಳುನಾಡು ಸರ್ಕಾರ ಬಿ.ಪಿ.ಎಲ್. ಮತ್ತು .ಪಿ.ಎಲ್. ಕಾರ್ಡ್ಗಳನ್ನು ಹೊಂದಿರುವ ಎಲ್ಲರಿಗೂ ಎರಡು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ನೀಡುತ್ತಿದೆ, ಇದಕ್ಕೆ ಹತ್ತು ಸಾವಿರ ಕೋಟಿ ರೂಪಾಯಿತಗಲುತ್ತದೆ ಎಂದು ಅಂದಾಜಿಸಲಾಗಿದೆ. ಕೇಂದ್ರದ ಹಣಕಾಸು ನೀತಿಯನ್ನೂ ಮೀರಿಯೂ ತಮಿಳುನಾಡಿನಲ್ಲಿ ಮಾನವಾಭಿವೃದ್ಧಿಯು ನೆರೆಯ ರಾಜ್ಯಗಳಿಗಿಂತಲೂ ಮುಂದಿದೆ. ಸದ್ಯಕ್ಕಾದರೂ ಕರ್ನಾಟಕತಮಿಳುನಾಡು ಮಾದರಿಯತ್ತ ನೋಡಬಹುದಲ್ಲವೇ?

ದೇವನೂರು: ತಮಿಳುನಾಡಿನ ಗುಡಿಕೈಗಾರಿಕಾ ವಹಿವಾಟು ಆ ನಾಡಿನ ಏಳಿಗೆಗೆ ಕಾರಣವಿರಬಹುದು. ವಿದೇಶದಿಂದ ಅಲ್ಲ, ಅಕ್ಕ ಪಕ್ಕದ ರಾಜ್ಯಗಳಿಂದಲೇ ನಾವು ಕಲಿಯ ಬೇಕಿರುವುದು ಬಹಳಷ್ಟಿದೆ.

 

ಪ್ರಶ್ನೆ: ಸಂವಿಧಾನದ ಒಂಬತ್ತನೇ ಶೆಡ್ಯೂಲ್ (ಭೂಸ್ವಾಧೀನ ಹಾಗೂ ಭೂಸುಧಾರಣಾ ಅಧಿನಿಯಮಗಳನ್ನು ನ್ಯಾಯಿಕ ವಿಮರ್ಶೆಯಿಂದ ಹೊರತುಪಡಿಸುವಿಕೆ) ಬಳಸಿಕೊಂಡು ತಮಿಳುನಾಡು ಸರ್ಕಾರ ಭೂಮಿಹಂಚಿಕೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿದೆ. ನ್ಯಾಯಾಲಯ ಹಸ್ತಕ್ಷೇಪವನ್ನೇ ಮಾಡಲಾಗದಂತೆ ತನ್ನ ಮೀಸಲಾತಿ ಗಡಿಯನ್ನು ತಮಿಳುನಾಡು ಶೇಕಡಾ ೬೯ಕ್ಕೇ ತಂದು ನಿಲ್ಲಿಸಿದೆ. ಇಲ್ಲೂ ನಮಗೆತಮಿಳುನಾಡು ದಿಕ್ಕಾಗಬಹುದಲ್ಲ

ದೇವನೂರು: ಯಾಕಾಗಬಾರದು?

 

ಪ್ರಶ್ನೆ: ಶಿಕ್ಷಣದ ರಾಷ್ಟ್ರೀಕರಣವಾಗದೆ ಅದನ್ನು ಏಕರೂಪಿಯನ್ನಾಗಿಸುವುದು ಕಷ್ಟದ ಮಾತು. ಕುರಿತು ಒಂದು ಪ್ರಬಲ ನೀತಿ ರೂಪಿಸಲು ಸರ್ಕಾರವೇಕೆ ಒದ್ದಾಡುತ್ತಿದೆ? ಯಾಕೋ ಸರ್ಕಾರದ ಆರಂಭಿಕಗೊಂದಲಗಳನ್ನು ನೋಡಿದರೆ ಮತ್ತೆ ಖಾಸಗಿ ಶಿಕ್ಷಣ ಸಂಸ್ಥೆಗಳೆ ಮೇಲುಗೈ ಸಾಧಿಸುವಂತೆ ಕಾಣುತ್ತಿದೆಯಲ್ಲಾ

ದೇವನೂರು: ಶಿಕ್ಷಣವನ್ನೇ ಇತರರಿಗೆ ಕೊಡಬಾರದು ಎಂದು ನಂಬಿಕೊಂಡ ದೇಶವಿದು. ಇಂಥದರಲ್ಲಿ ಶಿಕ್ಷಣ ಕೊಡುತ್ತೇವೆ ಎಂದು ಮುಂದೆ ಬರುವಾಗ ಖಾಸಗಿ ಎಂಬ ಕಾರಣಕ್ಕೆ ತಡೆಯಬಾರದು. ಖಾಸಗಿಯುಮನಾಪಲಿಯಾಗದಂತೆ ನೋಡಿಕೊಳ್ಳಬೇಕು. ಸಮೀಪ ಶಾಲಾ ಶಿಕ್ಷಣ ಪದ್ಧತಿ, ಖಾಸಗೀ ಶಾಲೆಗಳಲ್ಲೂ ೫೦% ಮೀಸಲಾತಿ ಇತ್ಯಾದಿ ಇತ್ಯಾದಿ ಅಳವಡಿಸಿಕೊಂಡು ಸರ್ಕಾರ ತನ್ನ ಜುಟ್ಟನ್ನು ಖಾಸಗಿ ಕೈಗೆ ಸಿಗದಂತೆಕಾಪಾಡಿಕೊಳ್ಳಬೇಕು. ಎಲ್ಲಾ ಖಾಸಗೀ- ಸರ್ಕಾರೀ ಸಂಬಂಧಗಳಲ್ಲೂ ಈ ಎಚ್ಚರ ಬೇಕಾಗಿದೆ.

ಸಂದರ್ಶನ: ಕೆ.ಎಲ್.ಚಂದ್ರಶೇಖರ್ ಐಜೂರ್