‘ಸಂತೋಷ’: ಸರ್ಕಾರದ ‘ಗಂಭೀರ’ ಆದ್ಯತೆ- ಸಿ.ಜಿ. ಮಂಜುಳಾ

happy people

ಒಂದು ರಾಷ್ಟ್ರದ ಪ್ರಗತಿಯನ್ನು ನಿರ್ಧರಿಸುವುದು ಹೇಗೆ? ಒಟ್ಟು ದೇಶಿ ಉತ್ಪನ್ನದ (ಜಿಡಿಪಿ) ವೃದ್ಧಿ ದರದಿಂದ ರಾಷ್ಟ್ರದ ಅಭಿವೃದ್ಧಿಯನ್ನು ಅಳೆಯುವುದು ನಡೆದುಬಂದಿದೆ. ಆದರೆ ಕೇವಲ ಆರ್ಥಿಕ ಬೆಳವಣಿಗೆ ಸಾಧಿಸಿಬಿಟ್ಟರೆ ರಾಷ್ಟ್ರ ಅಭಿವೃದ್ಧಿ ಪಥದತ್ತ  ಹೆಜ್ಜೆ ಹಾಕಿದಂತಾಗುತ್ತದೆಯೆ? ಜನರ ಬಾಳಿನಲ್ಲಿ ಸುಖ ಸಂತೋಷ ನೆಮ್ಮದಿಯೂ ಇರಬೇಕಲ್ಲವೆ? ಇಂತಹ ಸುಖ ಸಂತೋಷ ನೆಮ್ಮದಿ ಇರುವ ರಾಷ್ಟ್ರಗಳ ಪಟ್ಟಿಯನ್ನು  ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಪರಿಹಾರ ಜಾಲ ಕಳೆದ ವಾರ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಭಾರತ, 156 ರಾಷ್ಟ್ರಗಳ ಪಟ್ಟಿಯಲ್ಲಿ 118ನೇ ಸ್ಥಾನ ಪಡೆದಿದೆ.

ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (ಎಚ್‌ಡಿಐ) 188 ರಾಷ್ಟ್ರಗಳ ಪೈಕಿ ಭಾರತದ ಸ್ಥಾನ 130ಕ್ಕೆ ಕುಸಿದಿದೆ. ಹಾಗೆಯೇ ಭ್ರಷ್ಟಾಚಾರ ಸೂಚ್ಯಂಕದಲ್ಲಿ (ಸಿಪಿಐ) 168 ರಾಷ್ಟ್ರಗಳ ಪೈಕಿ  ಭಾರತ 76ನೇ ಸ್ಥಾನದಲ್ಲಿದೆ. ಈ ಅಂಶಗಳನ್ನೂ ನಾವು ಪರಿಗಣನೆಗೆ ತೆಗೆದುಕೊಳ್ಳಬೇಕು. ಎಚ್‌ಡಿಐ ಹಾಗೂ ಸಿಪಿಐಗಳು ಇಷ್ಟು ಕೆಳಮಟ್ಟದಲ್ಲಿರುವಾಗ ಸಂತುಷ್ಟತೆಯ ಸೂಚ್ಯಂಕದಲ್ಲಿ ಭಾರತ ಮೇಲೇರಲು ಹೇಗೆ ತಾನೇ ಸಾಧ್ಯ?

ಜಿಡಿಪಿ ತಲಾ ವರಮಾನ, ಜೀವಿತಾವಧಿ, ಸಾಮಾಜಿಕ ಬೆಂಬಲ ಹಾಗೂ  ಬದುಕಿನಲ್ಲಿ ಆಯ್ಕೆ ಸ್ವಾತಂತ್ರ್ಯಗಳನ್ನು ರಾಷ್ಟ್ರದ ಸಂತುಷ್ಟತೆಯನ್ನು ನಿರ್ಧರಿಸುವ ಸೂಚ್ಯಂಕಗಳಾಗಿ ಪರಿಗಣಿಸಲಾಗಿದೆ ಎಂಬುದು ಇಲ್ಲಿ ಮುಖ್ಯ.

ನರೇಂದ್ರ ಮೋದಿಯವರು 2014ರ ಮೇ ತಿಂಗಳಲ್ಲಿ ಪ್ರಧಾನಿ ಪಟ್ಟಕ್ಕೇರಿದಾಗ ಒಳ್ಳೆಯ ದಿನಗಳು (ಅಚ್ಛೇ ದಿನ್) ಬರಲಿವೆ ಎಂದು ಜನರಿಗೆ  ಆಶ್ವಾಸನೆ ನೀಡಿದ್ದರು. ಆದರೆ  2016ರ ಸಂತುಷ್ಟ ದೇಶಗಳ ಜಾಗತಿಕ ಪಟ್ಟಿ ಬೇರೆಯದೇ ಕಥೆ ಹೇಳುತ್ತಿದೆ. ತನ್ನ ಸಹವರ್ತಿ ‘ಬ್ರಿಕ್’  ರಾಷ್ಟ್ರಗಳಾದ ಬ್ರೆಜಿಲ್ (16), ರಷ್ಯಾ (56) ಹಾಗೂ ಚೀನಾಗೆ (83)  ಹೋಲಿಸಿದರೆ ಭಾರತ ಗಳಿಸಿರುವ 118ನೇ ಸ್ಥಾನ  ತೀರಾ ಕೆಳಮಟ್ಟದ್ದು. ಕಳೆದ ವರ್ಷ 117ನೇ ಸ್ಥಾನವನ್ನು ಭಾರತ ಗಳಿಸಿತ್ತು.

ಅಷ್ಟೇ ಅಲ್ಲ, ಚಿಕ್ಕಪುಟ್ಟ ನೆರೆಯ ಏಷ್ಯನ್ ರಾಷ್ಟ್ರಗಳಾದ ಥಾಯ್ಲೆಂಡ್‌  (33), ಮಲೇಷ್ಯಾ (47), ಇಂಡೊನೇಷ್ಯಾ (79), ಫಿಲಿಪ್ಪೀನ್ಸ್ (82), ಭೂತಾನ್ (84), ಪಾಕಿಸ್ತಾನ (92), ವಿಯೆಟ್ನಾಂ (96), ಲಾವೊಸ್ (102), ನೇಪಾಳ (107), ಬಾಂಗ್ಲಾದೇಶ (110) ಹಾಗೂ ಶ್ರೀಲಂಕಾಗಳೂ (117) ನಮಗಿಂತ ಎತ್ತರದ ಸ್ಥಾನದಲ್ಲಿವೆ ಎಂಬುದನ್ನು ಗಮನಿಸದೆ ಇರುವುದು ಸಾಧ್ಯವಿಲ್ಲ. ಸಂತುಷ್ಟತೆ ಇಳಿಮುಖವಾಗುತ್ತಿರುವ 10 ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದೆ ಎಂಬುದನ್ನು ಕಡೆಗಣಿಸಲಾಗದು.

ಆರ್ಥಿಕವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ರಾಷ್ಟ್ರವಾಗಿದೆ ಭಾರತ. ಆಧುನಿಕೋತ್ತರ ಬದುಕಿಗೆ  ತೆರೆದುಕೊಂಡಿದ್ದರೂ ಸಾಮಾಜಿಕ ಪಿಡುಗುಗಳೆನಿಸುವ ಸಂಪ್ರದಾಯದ  ಬೇರುಗಳೂ  ಆಳವಾಗಿವೆ. ಭಾರತದ ಜನಸಂಖ್ಯೆಯ ಶೇ 70ರಷ್ಟು ಮಂದಿ ಈಗಲೂ ಹಳ್ಳಿಗಳಲ್ಲಿ ವಾಸ ಮಾಡುತ್ತಾರೆ.  ಶೇ 58ರಷ್ಟು ಕುಟುಂಬಗಳು ಕೃಷಿ ಅವಲಂಬಿಸಿವೆ ಎಂಬುದನ್ನು ಅಧಿಕೃತ  ಅಂಕಿ ಅಂಶಗಳು ತಿಳಿಸುತ್ತವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಪ್ರಕಾರ, 2014ರಲ್ಲಿ ರಾಷ್ಟ್ರದಲ್ಲಿ  5650 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಹೀಗಿರುವಾಗ ಸಂತಸ ಎಲ್ಲಿ?

ಭಾರತದಲ್ಲಿರುವುದು ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆ. ಮಹಿಳೆಯನ್ನು ತಾರತಮ್ಯ ದೃಷ್ಟಿಯಿಂದ ಕಾಣುವ ಪಿತೃ ಪ್ರಧಾನ ವ್ಯವಸ್ಥೆಯ ಮೌಲ್ಯಗಳು ಲಿಂಗ ತಾರತಮ್ಯವನ್ನು ಈಗಲೂ ಜೀವಂತವಾಗಿಟ್ಟಿವೆ. ಹೆಣ್ಣುಮಕ್ಕಳು ಹುಟ್ಟುವುದನ್ನು ಇಷ್ಟಪಡದ ಸಮಾಜದಲ್ಲಿ  ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗುತ್ತಿರುವುದನ್ನು ಜನಗಣತಿ ವರದಿಗಳು ಬಯಲುಮಾಡುತ್ತಲೇ ಇವೆ.

ಇನ್ನು ಬಾಲ್ಯ ವಿವಾಹ, ಮರ್ಯಾದೆಗೇಡು ಹತ್ಯೆ ಮುಂತಾದ  ಪಿಡುಗುಗಳು  ಹೆಣ್ಣು ಮಕ್ಕಳ  ಆಯ್ಕೆಯ ಸ್ವಾತಂತ್ರ್ಯಕ್ಕೆ ಕಿಂಚಿತ್ತೂ ಬೆಲೆ ಇಲ್ಲ ಎಂಬುದಕ್ಕೆ ದ್ಯೋತಕ. ಆಯ್ಕೆಯ ಸ್ವಾತಂತ್ಯವಿಲ್ಲದಿದ್ದಾಗ ಸಂತೋಷದಿಂದಿರುವುದು ಹೇಗೆ ಸಾಧ್ಯ?

ಮಹಿಳೆಯರ ವಿರುದ್ಧದ ಹಿಂಸಾಚಾರ ತಡೆಗಾಗಿ  1993ರಲ್ಲಿ ವಿಶ್ವಸಂಸ್ಥೆ ನಿರ್ಣಯ ಕೈಗೊಂಡಿತ್ತು. ಅಲ್ಲದೆ, ಈ ಪಿಡುಗಿನ ವಿರುದ್ಧದ ಕ್ರಿಯೆಗೆ ಚೌಕಟ್ಟನ್ನೂ ಒದಗಿಸಿಕೊಟ್ಟಿತು. ಆದರೆ 20 ವರ್ಷಗಳಾದ ನಂತರವೂ ಪ್ರಪಂಚದಲ್ಲಿ ಮೂವರಲ್ಲಿ ಒಬ್ಬ ಮಹಿಳೆ ದೈಹಿಕ ಅಥವಾ ಲೈಂಗಿಕ ಹಿಂಸಾಚಾರವನ್ನು ಅನುಭವಿಸುತ್ತಿದ್ದಾಳೆ. ಅದೂ ಆಕೆ ಈ ಹಿಂಸೆ ಅನುಭವಿಸುವುದು ಆಪ್ತ ಸಂಗಾತಿಯಿಂದಲೇ ಎಂಬುದು ವಿಪರ್ಯಾಸ.

ಭಾರತದಲ್ಲಿ  ಮನೆ, ಶಾಲೆ, ದುಡಿಯುವ ಸ್ಥಳಗಳಲ್ಲಿ ಹಲವು ಬಗೆಯ ದೌರ್ಜನ್ಯಗಳಿಗೆ ಹೆಣ್ಣುಮಕ್ಕಳು ಒಳಗಾಗುತ್ತಿರುವ ವರದಿಗಳು ಇಲ್ಲದ ದಿನವೇ ಇಲ್ಲ ಎಂಬಂತಹ ಸ್ಥಿತಿ ಇದೆ.

ಹೆಣ್ಣುಮಕ್ಕಳನ್ನು ಸಂತಸವಾಗಿರಿಸಬೇಕೆ? ಅವರಿಗೆ ಶಾಲೆಗೆ ಹೋಗಲು ಅವಕಾಶ ನೀಡಿ ಎಂದು ಕೇಳಬೇಕಾದ ಸ್ಥಿತಿ ಇದೆ.  ರಾಷ್ಟ್ರದಲ್ಲಿ ಪ್ರಾಥಮಿಕ ಶಾಲಾಮಟ್ಟದಲ್ಲಿ  ಬಹುತೇಕ ಸಮಾನತೆಯನ್ನೇನೊ ಸಾಧಿಸಲಾಗಿದೆ. ಆದರೆ ಪ್ರೌಢ ಶಿಕ್ಷಣ ಮಟ್ಟಕ್ಕೆ ಬಂದಾಗ ಬಾಲ್ಯವಿವಾಹವೋ ಮತ್ತೊಂದೋ ಕಾರಣದಿಂದಾಗಿ  ಹೆಣ್ಣುಮಕ್ಕಳು ನಾಪತ್ತೆಯಾಗಿಬಿಡುತ್ತಾರೆ. ಆದರೆ ಈಚಿನ ದಿನಗಳಲ್ಲಿ  ಅಲ್ಲೊಂದು ಇಲ್ಲೊಂದು ಎಂಬಂತೆ  ಹೆಣ್ಣುಮಕ್ಕಳಿಂದ ಬಾಲ್ಯವಿವಾಹಕ್ಕೆ ಪ್ರತಿರೋಧ ವ್ಯಕ್ತವಾಗುತ್ತಿದೆ ಎಂಬುದು ಸಂತಸದ ಸಂಗತಿ.

ಪ್ರತಿ ವರ್ಷ ಮಾರ್ಚ್ 20ರಂದು  ಸಂತೋಷದ ಅಂತರರಾಷ್ಟ್ರೀಯ ದಿನ ಆಚರಿಸಬೇಕೆಂದು 2013ರಲ್ಲಿ ವಿಶ್ವಸಂಸ್ಥೆ ಮೊದಲ ಬಾರಿಗೆ ಘೋಷಿಸಿತು. ಆರ್ಥಿಕ ಪ್ರಗತಿ ಮೇಲಷ್ಟೇ ಗಮನ ಕೇಂದ್ರೀಕರಿಸದೆ ನಾಗರಿಕರ ಕ್ಷೇಮವನ್ನೂ  ಆದ್ಯತೆಯಾಗಿ ಪರಿಗಣಿಸಲು ಸರ್ಕಾರಗಳಿಗೆ
ಉತ್ತೇಜನ ನೀಡುವುದು ಇದರ ಉದ್ದೇಶ. ಈ ಮೂಲಕ ಸಂತೋಷ, ಸೌಖ್ಯದಂತಹ ಮೌಲ್ಯಗಳು ಚಾಲ್ತಿ ಪಡೆಯುವುದು ಬದುಕಿನ ಗುಣಮಟ್ಟ ಸುಧಾರಣೆಯತ್ತ ಇರಿಸಿದ ಹೆಜ್ಜೆಯಾಗುತ್ತದೆ.

ವಾಸ್ತವವಾಗಿ ‘ಒಟ್ಟು ರಾಷ್ಟ್ರೀಯ ಸಂತೋಷ’  (ಜಿಎನ್ಎಚ್),  ಎಂಬುದು ಪುಟ್ಟ ರಾಷ್ಟ್ರ ಭೂತಾನ್‌ನ ಅಭಿವೃದ್ಧಿ ಪ್ರಕ್ರಿಯೆಯ ತತ್ವವಾಗಿದೆ.  ಭೂತಾನ್ ದೊರೆ ಜಿಗ್ಮೆ ಸಿಂಗ್ಯೆ ವ್ಯಾಂಗ್ ಚುಕ್ ಅವರು 1972ರಲ್ಲಿ ಸಿಂಹಾಸನವನ್ನೇರಿದ ನಂತರ ಮಂಡಿಸಿದ ತತ್ವ ಇದು. ಸಾರ್ವಜನಿಕ ನೀತಿಗಳ ಮೂಲಕ ಸಾಮೂಹಿಕ ಸಂತುಷ್ಟತೆ ಸಾಧನೆಗೆ ಯತ್ನಿಸಬೇಕು ಎಂಬುದು ಜಿಎನ್‌ಎಚ್‌ನ ಉದ್ದೇಶ. ಇದಕ್ಕಾಗಿ ಯೋಜನೆಗಳು ಹಾಗೂ ಕಾರ್ಯಕ್ರಮಗಳಲ್ಲಿ ಸಂತೋಷ ಎಂಬುದು ಪ್ರಮುಖ ಮಾನದಂಡವಾಗುತ್ತದೆ.

ಬೌದ್ಧ ಸಂಸ್ಕೃತಿಯ ಬೇರುಗಳು ಇದರಲ್ಲಿವೆ. ಸುಸ್ಥಿರ  ಅಭಿವೃದ್ಧಿಗೆ ಉತ್ತೇಜನ, ಸಾಂಸ್ಕೃತಿಕ ಮೌಲ್ಯಗಳ ಸಂರಕ್ಷಣೆ ಹಾಗೂ ಉತ್ತೇಜನ,  ನೈಸರ್ಗಿಕ ಪರಿಸರದ ಸಂರಕ್ಷಣೆ ಹಾಗೂ ಒಳ್ಳೆಯ ಆಡಳಿತ – ಇವು ಜಿಎನ್‌ಎಚ್ ತತ್ವದ ನಾಲ್ಕು ಆಧಾರ ಸ್ತಂಭಗಳು. ಭೂತಾನ್‌ನ ಎಲ್ಲಾ ಉದ್ದೇಶಿತ ನೀತಿಗಳೂ  ಜಿಎನ್‌ಎಚ್‌ನ   ಪರಾಮರ್ಶೆಗೆ ಒಳಪಡುವುದು ಕಡ್ಡಾಯ.

ಪ್ರಗತಿಯನ್ನು ಅಳೆಯಲು ಈಗಾಗಲೇ ಅನೇಕ ಗುರಿಗಳು ಹಾಗೂ ಸೂಚ್ಯಂಕಗಳು ಜಗತ್ತಿನಲ್ಲಿ ಚಾಲ್ತಿಯಲ್ಲಿವೆ. ಮಾನವ ಅಭಿವೃದ್ಧಿ ಸೂಚ್ಯಂಕ, ಸುಸ್ಥಿರ ಅಭಿವೃದ್ಧಿ ಅಥವಾ ಸಹಸ್ರಮಾನದ ಅಭಿವೃದ್ಧಿ ಗುರಿಗಳು ಇತ್ಯಾದಿ. ಆದರೆ ಅಭಿವೃದ್ಧಿಯ ಗುರಿ ನಿಜಕ್ಕೂ ಸಾಧನೆ ಆಯಿತೆ ಎಂಬುದನ್ನು  ನಿಕಷಕ್ಕೊಡ್ಡಬೇಕಾದಲ್ಲಿ ಆಗ ರಾಷ್ಟ್ರದ  ಜನರ ಕ್ಷೇಮ ಹಾಗೂ ಅವರ ಸಂತುಷ್ಟತೆ ಮಟ್ಟವನ್ನು ಅಳೆಯಬೇಕು.  ಭೂತಾನ್ ದೊರೆ ರೂಪಿಸಿದ ಈ  ಪರಿಕಲ್ಪನೆ ಈಗ ಜಗತ್ತಿನ  ಆಶಯವಾಗಿ ಮಾರ್ದನಿಸುತ್ತಿದೆ.

ವಾಸ್ತವವನ್ನು ಅವಲೋಕಿಸಿದಲ್ಲಿ, ಲೌಕಿಕವಾದ ಭೋಗ ಸಂಪತ್ತಿನ ನಡುವೆಯೂ ಅಸಂತುಷ್ಟತೆಯ ಭಾವನೆ  ಕಾಡಬಹುದು. ಖಿನ್ನತೆ, ವಿಚ್ಛೇದನ ಮುಂತಾದ ವೈಯಕ್ತಿಕ  ಹಾಗೂ ಸಾಮಾಜಿಕ ಸಮಸ್ಯೆಗಳು  ಏರುಗತಿಯಲ್ಲಿ ಸಾಗಿದರೆ ಅಂತಹ ಅಭಿವೃದ್ಧಿಗೆ ಏನರ್ಥ? ಆದರೆ ಇಂತಹ ಸಾಮಾಜಿಕ ತಳಮಳಗಳೂ  ಜಿಡಿಪಿ ವೃದ್ಧಿಗೆ ಕಾರಣವಾಗಬಹುದು ಎಂಬುದು ವಿಪರ್ಯಾಸ. ಏಕೆಂದರೆ  ಖಿನ್ನತೆಯ ಮಾತ್ರೆಗಳ ಮಾರಾಟ ವಹಿವಾಟು   ಅಮೆರಿಕದ ಆರ್ಥಿಕತೆಗೆ ಹಲವು ಸಹಸ್ರ ಡಾಲರ್‌ಗಳ ಕೊಡುಗೆ ನೀಡಬಲ್ಲುದು ಎಂಬಂತಹ ವಾದಗಳೂ ಇವೆ ಎಂದರೆ ಊಹಿಸಿಕೊಳ್ಳಿ.

ಜಿಎನ್‌ಪಿ (ಒಟ್ಟು ರಾಷ್ಟ್ರೀಯ  ಉತ್ಪನ್ನ) ಆಧಾರದಲ್ಲಿ ದೇಶದ ಪ್ರಗತಿಯನ್ನು ಅಳೆಯುವ ಕ್ರಮದ ಬಗ್ಗೆ 1970 ಹಾಗೂ 1980ರ ದಶಕದಲ್ಲಿ ಟೀಕೆಗಳಿದ್ದವು. 1989ರಲ್ಲಿ ವಿಶ್ವ ಬ್ಯಾಂಕ್‌ನ ಆಗಿನ ಅಧ್ಯಕ್ಷ ಬಾರ್ಬರ್ ಬಿ. ಕೊನಾಬಲ್ ಅವರು  ಸುಸ್ಥಿರವಲ್ಲದ ಅಭಿವೃದ್ಧಿಯಿಂದ  ಬಂದಂತಹ ಆದಾಯವನ್ನು ಜಿಎನ್‌ಪಿ ಅಂಕಿ ಅಂಶಗಳು ತೋರಿಸುತ್ತವೆ ಎಂಬುದನ್ನು ಒಪ್ಪಿಕೊಂಡಿದ್ದರು.

ಏಕೆಂದರೆ,  ಈ ಆದಾಯ ಲೆಕ್ಕಾಚಾರಗಳು ನೈಸರ್ಗಿಕ ಸಂಪನ್ಮೂಲಗಳ ವಿನಾಶವನ್ನು ಕಡೆಗಣಿಸಿಬಿಡುತ್ತವೆ.  ಇದರಿಂದಾಗಿ ಮನುಕುಲದ ಪ್ರಗತಿ ಹಾಗೂ ಸಮೃದ್ಧಿಯನ್ನು ಅಳೆಯಲು ಇನ್ನೂ ಉತ್ತಮ ಮಾರ್ಗ ಕಂಡುಕೊಳ್ಳಬೇಕಾದ ಅವಶ್ಯಕತೆಯನ್ನು ಕೊನಾಬಲ್ ಪ್ರತಿಪಾದಿಸಿದ್ದರು.

1990ರಲ್ಲಿ ವಿಶ್ವ ಸಂಸ್ಥೆ ತನ್ನ ಮಾನವ ಅಭಿವೃದ್ಧಿ ಸೂಚ್ಯಂಕ (ಎಚ್‌ಡಿಐ) ಎಂಬಂತಹ ಹೊಸ ಅಭಿವೃದ್ಧಿ ಮಾನದಂಡದಿಂದ ಅಭಿವೃದ್ಧಿಯನ್ನು ಅಳೆಯಲು  ಆರಂಭಿಸಿತು.  ಆಗ ಶಿಕ್ಷಣ, ಆಯುಷ್ಯ, ಲಿಂಗತ್ವ ಹಾಗೂ ಮಾನವ ಹಕ್ಕುಗಳ ಅಂಕಿಅಂಶಗಳು  ಪ್ರಗತಿಯ ಮಾನದಂಡದಲ್ಲಿ ಸೇರ್ಪಡೆಯಾದವು.

1992ರಲ್ಲಿ ರಿಯೊ ಜನೈರೊದಲ್ಲಿ ನಡೆದ ವಿಶ್ವಸಂಸ್ಥೆಯ ಭೂ ಶೃಂಗಸಭೆಯಲ್ಲಿ ‘ಕಾರ್ಯಸೂಚಿ 21’ಕ್ಕೆ 170 ರಾಷ್ಟ್ರಗಳು ಸಹಿ ಹಾಕಿದವು. ಪರಿಸರ ಆಸ್ತಿ ಹಾಗೂ ಮಾಲಿನ್ಯದ ಮಾರಕ ಪರಿಣಾಮವನ್ನು ಸಮರ್ಪಕವಾಗಿ ಮೌಲ್ಯಮಾಪನ ಮಾಡಲು ತಮ್ಮ ರಾಷ್ಟ್ರೀಯ ಲೆಕ್ಕಾಚಾರ ವಿಧಾನವನ್ನು ಪುನರ್ ರೂಪಿಸಲು  ಈ ರಾಷ್ಟ್ರಗಳು ಒಪ್ಪಿಕೊಂಡವು.

ಹಾಗೆಯೇ  ಕ್ರಾಂತಿಕಾರಕ  ಎನಿಸುವಂತಹ  ಸಂಪತ್ತು ಸೂಚ್ಯಂಕವನ್ನು (wealth Index)  1995ರಲ್ಲಿ ವಿಶ್ವಬ್ಯಾಂಕ್ ಬಿಡುಗಡೆ ಮಾಡಿತು.  ಈ ಪ್ರಕಾರ, ರಾಷ್ಟ್ರದ ಸಂಪತ್ತು ಎಂದರೆ ಶೇ 60 ಮಾನವ ಬಂಡವಾಳ (ಸಾಮಾಜಿಕ ಸಂಘಟನೆ, ಮಾನವ ಕೌಶಲ ಹಾಗೂ ಜ್ಞಾನ), ಶೇ 20ರಷ್ಟು ಪರಿಸರ ಬಂಡವಾಳ (ಪ್ರಕೃತಿಯ ಕೊಡುಗೆ) ಹಾಗೂ ಕೇವಲ ಶೇ 20ರಷ್ಟು ಕಟ್ಟಿದ ಬಂಡವಾಳ (ಕಾರ್ಖಾನೆಗಳು ಹಾಗೂ ಬಂಡವಾಳ).

ಅಭಿವೃದ್ಧಿಯನ್ನು ಅಳೆಯುವ  ಇಂತಹ ಉಪಕ್ರಮಗಳು ಅಭಿವೃದ್ಧಿಯ ಕುರಿತಂತಹ ಚಿಂತನಾಕ್ರಮಗಳಲ್ಲಿ ಬದಲಾವಣೆ ತಂದಿದೆ ಎಂಬುದು ಮುಖ್ಯ. ಸರ್ಕಾರದ ನೀತಿಗಳಿಗೆ ಜನರ ಸಂತೋಷವೂ  ಮಾನದಂಡವಾಗಬೇಕೆಂಬುದು ಬೇಡಿಕೆಯಾಗಿ ಪರಿವರ್ತಿತವಾಗುತ್ತಿರುವ ಬದಲಾವಣೆಯನ್ನು ಇದು ಪ್ರತಿಬಿಂಬಿಸುತ್ತದೆ.  ಸಂಯುಕ್ತ ಅರಬ್ ಅಮೀರರ  (ಯುಎಇ) ನಾಡಿನಲ್ಲಿ  ಸಂತೋಷ  ಖಾತೆಯನ್ನು ಪ್ರತ್ಯೇಕವಾಗಿ ನಿರ್ವಹಿಸುವ ಸಚಿವೆಯಾಗಿ  ಒಹೂದ್ ಅಲ್ ರೌಮಿ ಅವರು ಕಳೆದ ತಿಂಗಳು  ನೇಮಕಗೊಂಡಿರುವುದು ಹೊಸ ಬೆಳವಣಿಗೆ.

ಈಗ ಈ ವರ್ಷದ ವರದಿ ಪ್ರಕಾರ, ಡೆನ್ಮಾರ್ಕ್,  ವಿಶ್ವದಲ್ಲೇ ಅತಿ ಹೆಚ್ಚು ಸುಖ ಸಂತೋಷ ಹೊಂದಿದ ದೇಶ ಎಂದು ಪರಿಗಣಿತವಾಗಿದೆ.  ಡೆನ್ಮಾರ್ಕ್ ಶ್ರೀಮಂತ ರಾಷ್ಟ್ರ ಮಾತ್ರವಲ್ಲ, ಸಾಮಾಜಿಕ ಸಮಾನತೆ ಹಾಗೂ ಸಮೃದ್ಧ ಕ್ಷೇಮಾಭಿವೃದ್ಧಿ ನೀತಿಗಳಿಂದಾಗಿ ಅಲ್ಲಿನ ಜನರು ಅನುಭವಿಸುವ ಸುರಕ್ಷಿತ ಭಾವ ಹೆಚ್ಚಿನದು.  ಎಂದರೆ  ಸಾಮಾಜಿಕ ಬಂಡವಾಳದಲ್ಲಿನ ಹೂಡಿಕೆಯ ಪ್ರಾಮುಖ್ಯವನ್ನು ಗ್ರಹಿಸಿಕೊಳ್ಳಬಹುದು.

ಪ್ರಜೆಗಳ ಕ್ಷೇಮ ಹಾಗೂ ಸಂತೋಷ, ರಾಷ್ಟ್ರದ  ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯ ಸೂಚ್ಯಂಕಗಳಾಗುವುದನ್ನು ಇನ್ನು ಕಡೆಗಣಿಸುವುದು ಸಾಧ್ಯವಿಲ್ಲ.   ಆರ್ಥಿಕ ಪ್ರಗತಿ ಜೊತೆಗೇ ಸಾಮಾಜಿಕ ಸೌಖ್ಯವನ್ನು ಸಾಧಿಸುವುದು ಗುರಿಯಾಗಬೇಕು. ನ್ಯಾಯ, ಪ್ರಾಮಾಣಿಕತೆ, ವಿಶ್ವಾಸ ಹಾಗೂ ಆರೋಗ್ಯ ಇರುವಂತಹ ಸ್ವಸ್ಥ  ಸಮಾಜದಲ್ಲಿ ಮಾತ್ರ ಇದು ಸಾಧ್ಯ. ‘ಆಲೋಚನೆ, ಮಾತು ಹಾಗೂ ಕ್ರಿಯೆಯಲ್ಲಿ ಸಮನ್ವಯತೆ ಇದ್ದರೆ ಅದೇ ಸಂತೋಷ’ ಎನ್ನುವ  ಗಾಂಧಿ ಮಾತುಗಳನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.

ಜಗತ್ತಿನ ಹಲವು ಭಾಗಗಳು ಇಂದು ಯುದ್ಧ ಹಾಗೂ ಸ್ಥಳಾಂತರಗಳ ಸಂಕಷ್ಟದಲ್ಲಿ ಸಿಲುಕಿವೆ. ಇಂತಹ ಸಂದರ್ಭದಲ್ಲಿ ಆಡಳಿತದ ನೀತಿಗಳ ಮೂಲಕ ಸಂತೋಷದ ಹೊನಲನ್ನು ಮನುಕುಲಕ್ಕೆ ಹರಿಸುವ ಹೊಣೆಗಾರಿಕೆಯನ್ನು ಮೊನ್ನೆ ಆಚರಿಸಿದ ‘ವಿಶ್ವ ಸಂತೋಷ ದಿನ’ ಜಾಗತಿಕ ಸಮುದಾಯಕ್ಕೆ ನೆನಪಿಸುವಂತಾಗಬೇಕು. ‘ಸಂತೋಷ ಎನ್ನುವುದು ಸಿದ್ಧವಸ್ತುವಲ್ಲ. ಅದು ನಿಮ್ಮದೇ ಕ್ರಿಯೆಗಳಿಂದ ಸಿಗುತ್ತದೆ’ ಎಂಬಂತಹ ದಲೈ ಲಾಮಾ ಅವರ ಮಾತು ಅರ್ಥಗರ್ಭಿತ.