‘ಶೆರೆ ಬಂದ್ಮಾಡ್ರಿ ಸಾಹೇಬ್ರಾ…!’-ಪ್ರಸನ್ನ

 

ಈ ಬಾರಿ ಚರಕ ಉತ್ಸವದ ಸಂದರ್ಭದಲ್ಲಿ ಹೆಗ್ಗೋಡಿನಲ್ಲಿ ‘ಮದ್ಯಪಾನ ನಿಷೇಧ ಆಂದೋಲನ ಹಾಗೂ ಗ್ರಾಮೀಣ ಮಹಿಳೆ’ ಎಂಬ ವಿಷಯ ಕುರಿತಂತೆ ಒಂದು ಸಮಾಲೋಚನಾ ಸಭೆ ನಡೆಯಿತು. ಗ್ರಾಮೀಣ ಮಹಿಳೆಯರೇ ಬಯಸಿ ಮದ್ಯಪಾನ ನಿಷೇಧದ ವಸ್ತುವನ್ನು ಚರ್ಚೆಗೆ ಆಯ್ದುಕೊಂಡಿದ್ದರು. ಮದ್ಯಪಾನ ನಿಷೇಧ ಚಳವಳಿಯು ಕಳೆದ ವರ್ಷ ಅಕ್ಟೋಬರ್ 2, ಗಾಂಧಿ ಜಯಂತಿಯಂದು ರಾಯಚೂರು ಜಿಲ್ಲೆಯಲ್ಲಿ ಆರಂಭವಾಯಿತು. ಅಂದು ರಾಯಚೂರಿನ ಜಿಲ್ಲಾ ಕೇಂದ್ರದಲ್ಲಿ ನಲವತ್ತು ಸಾವಿರ ಗ್ರಾಮೀಣ ಮಹಿಳೆಯರು ಸೇರಿ ‘ಮದ್ಯಪಾನ ನಿಷೇಧಿಸಿ ಇಲ್ಲವೇ ಸರ್ಕಾರಿ ಕಚೇರಿಗಳಲ್ಲಿ ನೀವು ಸುಳ್ಳೇ ನೇತುಹಾಕಿರುವ ಗಾಂಧೀಜಿ ಚಿತ್ರವನ್ನು ಹಿಂದಿರುಗಿಸಿ’ ಎಂದು ಒತ್ತಾಯಿಸಿ ಬಂಧನಕ್ಕೊಳಗಾದರು.

ಮದ್ಯ, ಮಾದಕ ಪದಾರ್ಥ ಹಾಗೂ ಹೊಗೆಸೊಪ್ಪಿನ ಹವ್ಯಾಸವೆಂಬುದು, ಇಂದು ಇಡೀ ಸಮಾಜವನ್ನೇ ಆವರಿಸಿರುವ ಪಿಡುಗಾಗಿದೆ. ವಿಶೇಷವಾಗಿ ಬಡ ಜನತೆಯನ್ನು ಆವರಿಸಿಕೊಂಡು ಕೊಲ್ಲುತ್ತಿರುವ ಪಿಡುಗಾಗಿದೆ. ಪಿಡುಗಿಗೆ ಒಳಗಾಗುವವರು ಹೆಚ್ಚಾಗಿ ಗಂಡಸರಾದರೆ ಅದರ ದುಷ್ಪರಿಣಾಮ ಅನುಭವಿಸುವವರು ಹೆಚ್ಚಾಗಿ ಹೆಂಗಸರು ಹಾಗೂ ಮಕ್ಕಳು.

ವ್ಯಸನ ಹೊಸತೇನಲ್ಲ, ವ್ಯಸನದ ವ್ಯಾಪಾರೀಕರಣ ಹೊಸತಷ್ಟೆ. ಒಳ್ಳೆಯದ್ದು ಕೆಟ್ಟದ್ದು ಎಲ್ಲವನ್ನೂ ವ್ಯಸನವಾಗಿ ಪರಿವರ್ತಿಸಬಲ್ಲ ರಾಕ್ಷಸ ಮಾರುಕಟ್ಟೆ ವ್ಯವಸ್ಥೆಯೊಂದನ್ನು ಕಟ್ಟಿ ನಿಲ್ಲಿಸಿದ್ದೇವೆ ನಾವಿಂದು. ಈ ಅನೈತಿಕ ವ್ಯವಸ್ಥೆಯು ತೆರಿಗೆ ರೂಪದಲ್ಲಿ ಹಾಗೂ ಅದಕ್ಕಿಂತ ಮಿಗಿಲಾಗಿ ಕಾಣಿಕೆಯ ರೂಪದಲ್ಲಿ, ಸರ್ಕಾರಗಳು ರಾಜಕಾರಣಿಗಳು ಅಧಿಕಾರಿಗಳು ಹಾಗೂ ಧರ್ಮಗುರುಗಳಿಗೆ ಉಣಿಸುತ್ತಿರುವ ಹಣದ ಮೊತ್ತವನ್ನು ನೀವು ಊಹಿಸಲಾರಿರಿ ಕೂಡ. ಅಷ್ಟು ದೊಡ್ಡದು ಮತ್ತು ಸಂಕೀರ್ಣವಾದದ್ದು ಆ ಹಣ ಹಾಗೂ ವ್ಯಸನದ ಆ ವ್ಯವಸ್ಥೆ.

ಬಡಜನತೆಯನ್ನು ಸಮಗ್ರವಾಗಿ ಹಾಗೂ ಅಹಿಂಸಾತ್ಮಕವಾಗಿ ಕೊಲ್ಲುತ್ತಿರುವ ಈ ವ್ಯವಸ್ಥೆಯನ್ನು ಸರ್ಕಾರಗಳು ವಿಚಿತ್ರ ರೀತಿಯಲ್ಲಿ ಸಮರ್ಥಿಸಿಕೊಳ್ಳುತ್ತಿವೆ. ಅಕ್ಕಿಭಾಗ್ಯ, ಅನ್ನಭಾಗ್ಯ ಇತ್ಯಾದಿ ಭಾಗ್ಯಗಳನ್ನು ಬಡವರಿಗೆ ಹಂಚಲಿಕ್ಕಾಗಿ ವ್ಯಸನಮೂಲದ ತೆರಿಗೆ ತನಗೆ ಅತ್ಯಗತ್ಯ ಎಂದು ಸರ್ಕಾರಗಳು ಹೇಳುತ್ತವೆ. ಸರ್ಕಾರದ ಸುಳ್ಳು ಮಾತನ್ನು ನಾವು ನಂಬುತ್ತೇವೆ. ನಂಬದವರು ಮಹಿಳೆಯರು ಮಾತ್ರ.

ಸರ್ಕಾರ ನೀಡುತ್ತಿರುವ ಅಂಕಿಅಂಶಗಳು ನಿಜಕ್ಕೂ ಅರ್ಧಸತ್ಯಗಳಾಗಿವೆ. ಉದಾಹರಣೆಗೆ, ಕಳೆದ ವರ್ಷ ಮದ್ಯದ ಉದ್ದಿಮೆಯ ವಾರ್ಷಿಕ ವಹಿವಾಟು ಸುಮಾರು ಐವತ್ತೈದು ಸಾವಿರ ಕೋಟಿ ರೂಪಾಯಿಗಳಿತ್ತಂತೆ. ಸರ್ಕಾರಕ್ಕೆ ಅದರಿಂದ ತೆರಿಗೆ ರೂಪದಲ್ಲಿ ಬಂದ ಹಣ ಸುಮಾರು ಹದಿನಾರು ಸಾವಿರ ಕೋಟಿ ರೂಪಾಯಿಗಳಂತೆ. ಸರ್ಕಾರದ ಒಟ್ಟು ಆಯವ್ಯಯದಲ್ಲಿ ಹದಿನಾರು ಸಾವಿರ ಕೋಟಿ ರೂಪಾಯಿ ದೊಡ್ಡ ಮೊತ್ತವೇನಲ್ಲ. ಮಾತ್ರವಲ್ಲ, ಉದ್ದಿಮೆಯನ್ನು ಬಂದ್‌ ಮಾಡಿದರೆ ಸಮಾಜದಲ್ಲಿ ಹೆಚ್ಚುವ ಒಟ್ಟಾರೆ ಉತ್ಪಾದಕತೆಯ ಕಾರಣದಿಂದಾಗಿ ಅರ್ಧಕ್ಕರ್ಧ ತೆರಿಗೆ ಬೇರೊಂದು ರೂಪದಲ್ಲಿ ಬರುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಇನ್ನು, ಆರೋಗ್ಯ ರಕ್ಷಣೆ, ಅಪರಾಧ ನಿಗ್ರಹ ಇತ್ಯಾದಿ. ಜನರ ಆರೋಗ್ಯವನ್ನು ಸರ್ಕಾರಗಳು ಆದಾಯವೆಂದು ಪರಿಗಣಿಸುತ್ತಿಲ್ಲ. ಪರಿಗಣಿಸಬೇಕು. ಏಕೆಂದರೆ, ಖರ್ಚಿನ ಉಳಿತಾಯ ಅದು. ಅಂತಹ ಉಳಿತಾಯವು ವ್ಯಸನ ತೆರಿಗೆಯ ಹತ್ತು ಪಟ್ಟು ದೊಡ್ಡದಿರುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಇನ್ನು ಅಪರಾಧ: ಮದ್ಯಪಾನ ನಿಷೇಧ ಮಾಡಿರುವ ಬಿಹಾರ ರಾಜ್ಯದಲ್ಲಿ ಕೇವಲ ಒಂದೂವರೆ ವರ್ಷದಲ್ಲಿ ಅಪರಾಧಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆಯಂತೆ.

ಆದರೆ, ಸಾಮಾನ್ಯವಾಗಿ ಅದಕ್ಷತೆಯಿಂದ ಬಳಲುವ ಸರ್ಕಾರಗಳು ಮದ್ಯ ಮಾರಾಟದ ವಿಷಯದಲ್ಲಿ ಮಾತ್ರ ತುಂಬ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತವೆ. ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರತಿ ತಿಂಗಳು ಸಭೆ ನಡೆಸುತ್ತಾರೆ. ಸಭೆಯಲ್ಲಿ ಮದ್ಯ ಮಾರಾಟದ ಜಿಲ್ಲಾವಾರು ಗುರಿಯನ್ನು ನಿಗದಿಪಡಿಸುತ್ತಾರೆ. ಗುರಿ ತಲುಪದ ಅಧಿಕಾರಿಗಳನ್ನು ಶಿಕ್ಷಿಸುತ್ತಾರೆ. ಮಾತ್ರವಲ್ಲ, ಗುರಿ ತಲುಪಲಿಕ್ಕಾಗಿ ವಾಮಮಾರ್ಗ ಹಿಡಿಯುವ ಅಧಿಕಾರಿಗಳ ವಾಮಮಾರ್ಗವನ್ನೂ, ಭ್ರಷ್ಟತೆಯನ್ನೂ ಸಹಿಸಿಕೊಳ್ಳುತ್ತಾರೆ. ಅನೇಕ ಸಂದರ್ಭಗಳಲ್ಲಿ ರಾಜ್ಯದ ಮುಖ್ಯಮಂತ್ರಿಯೇ ಇಂತಹ ಸಭೆಗಳ ಅಧ್ಯಕ್ಷತೆ ವಹಿಸಿ, ಗುಡುಗಿ, ಮದ್ಯ ಮಾರಾಟ ಹೆಚ್ಚಿಸುವಂತೆ ತಾಕೀತು ಮಾಡುತ್ತಾರೆ.

ಆದರೆ, ಹೆಗ್ಗೋಡಿನ ಸಭೆಗೆ ಬಂದಿದ್ದ ಗ್ರಾಮೀಣ ಮಹಿಳೆಯರ ಒಕ್ಕೊರಲಿನ ಅಭಿಪ್ರಾಯ ಬೇರೆಯದೇ ಇತ್ತು: ‘ಶೆರೆ ಬಂದ್ಮಾಡ್ರಿ ಸಾಹೇಬ್ರಾ…! ಇಲ್ಲಾಂದ್ರ ಕುರ್ಚಿ ಖಾಲಿ ಮಾಡ್ರೀ…!’ ರಾಯಚೂರಿನಿಂದ ಬಂದಾಕಿ ಮುಂದುವರೆದು ಹೇಳಿದಳು, ‘ನೀವು ನಮಗಾ ಅಕ್ಕಿಭಾಗ್ಯ ಅನ್ನಭಾಗ್ಯ ಕೊಡಬ್ಯಾಡ್ರೀ!…. ನಮ್ಗೂಳ ಗಂಡಂದಿರನ್ನ… ಗಂಡುಮಕ್ಕಳನ್ನ ನಮಗ ವಾಪಾಸ್ ಕೊಡ್ರೀ!… ನಮ್ಮೊಟ್ಟಿಗೀ ಅವ್ರು ದುಡದ್ರ ನಾವಾ ಅನ್ನ ಗಳಿಸಿ ಉಣ್ಣತೀವ್ರಿ’.

ಸಾಮಾನ್ಯವಾಗಿ ಇವರು ಮೌನಿ ಹೆಂಗಸರು. ಪರಿಸ್ಥಿತಿಯು ಬಲವಂತದಿಂದ ಇವರ ಬಾಯಿ ಬಿಡಿಸಿದೆ. ಪಿಡುಗಿನಿಂದಾಗಿ ರೋಸಿಹೋಗಿದ್ದಾರೆ ಇವರು. ತಮ್ಮ ಸಹಜ ಸೌಂದರ್ಯ ಹಾಗೂ ಜೀವನೋತ್ಸಾಹಗಳನ್ನು ಕಳೆದುಕೊಂಡಿದ್ದಾರೆ. ಮೂಳೆಚಕ್ಕಳವಾಗಿದ್ದಾರೆ. ಕಣ್ಣೀರು ಇಂಗಿದವರು, ಭಾವನೆ ಮುರುಟಿ ಹೋದವರು ಆಗಿದ್ದಾರೆ ಬಡ ಹೆಣ್ಣು ಮಕ್ಕಳು. ಆದರೆ ಉತ್ಸವದ ದಿನ, ತಾವೇ ಸಂಘಟಿಸಿದ ಉತ್ಸವವಾದ್ದರಿಂದ, ನಗುನಗುತ್ತಿದ್ದರು. ಇದ್ದುದರಲ್ಲಿ ಒಳ್ಳೆಯ ಸೀರೆ ಉಟ್ಟಿದ್ದರು. ಮಕ್ಕಳು ಮರಿಗಳಿಗೆ ಸ್ನಾನ ಮಾಡಿಸಿ ಶುದ್ಧಬಟ್ಟೆ ತೊಡಿಸಿ ಜೊತೆಗೆ ಕರೆತಂದಿದ್ದರು. ಪ್ರತಿದಿನವೂ, ಸಾಧ್ಯವಾಗುವುದಾದರೆ ಹೀಗೆಯೇ ಬದುಕಬೇಕೆಂಬ ಸರಳ ಆಶಯ ಹೊತ್ತು ಬಂದಿದ್ದರು ಅವರು.

ಅವಳೊಬ್ಬ ಮುದುಕಿ. ರಾಯಚೂರಿನಿಂದ ಬಂದಿದ್ದಳು. ಮಣ್ಣಿನ ವೇದಿಕೆಯ ಮೇಲೆ ಜಮಖಾನೆ ಹಾಸಿ ಅವಳನ್ನು ಕೂಡಿಸಿದ್ದರು. ಗರಿಮುದುಡದ ಇಳಕಲ್ ಸೀರೆಯುಟ್ಟು ಬಂದಿದ್ದ ಮುದುಕಿ, ದೂರದಿಂದ ಪುಟ್ಟದೊಂದು ಸೀರೆ ರಾಶಿಯಂತೆ ಕಾಣುತ್ತಿತ್ತು. ಇಕ್ಕಳದಂತಹ ಅವಳ ಕೈಗಳು ಸೆರಗನ್ನು ಭದ್ರವಾಗಿ ಹಿಡಿದು ಮುಖಕ್ಕೆ ಮರೆಮಾಡಿಕೊಂಡಿತ್ತು. ಒಬ್ಬ ಕಾರ್ಯಕರ್ತೆ ಮುದುಕಿಯ ಮುಖವನ್ನು ಹುಡುಕಿ ಹಿಡಿದು ಅದರೆದುರಿಗೆ ಮೈಕು ಒಡ್ಡಿ ಮಾತಾಡು ಅಂದಳು. ಕೊಂಚ ತಡವರಿಸಿ, ನಂತರ ‘ಬಾಟಲೀ ಒಡದೇನ್ರೀ…!’ ಎಂದು ಎರಡೇ ಪದ ನುಡಿದು ಸುಮ್ಮಗಾಯಿತು ಮುದುಕಿ. ಮಾತು ಮುಂದುವರೆಸಲಿ ಎಂದು ಕೊಂಚ ಹೊತ್ತು ಕಾದ ಕಾರ್ಯಕರ್ತೆ ಮಿಕ್ಕ ಮಾತುಗಳನ್ನು ತಾನೇ ಆಡಿ ಮುಗಿಸಿದಳು.

ಅದು ಹೀಗಿತ್ತು: ರಾಯಚೂರು ಜಿಲ್ಲೆಯ ಕುಗ್ರಾಮವೊಂದರಲ್ಲಿ ಬದುಕಿರುವ ಒಬ್ಬ ವೀರ ಮಹಿಳೆ ಈಕೆ. ತನ್ನೂರಿನಲ್ಲಿ ನಡೆದಿದ್ದ ಕಳ್ಳಮದ್ಯ ಮಾರಾಟದ ದಂಧೆಯಿಂದ ರೋಸಿ ಹೋಗಿ, ಮತ್ತೆ ಮತ್ತೆ ಮದ್ಯ ಮಾರುವಲ್ಲಿಗೆ ಹೋಗಿ, ಬಾಟಲಿಗಳನ್ನು ಒಡೆದು ರಸ್ತೆಗೆ ಚೆಲ್ಲಾಡಿ ಬರುತ್ತಿದ್ದಳು ಈಕೆ. ಈಕೆಯ ರೌದ್ರಾವತಾರ ಕಂಡು ಹೆದರಿಹೋದ ಭಂಡ ಗಂಡಸರು ಈಕೆಯ ಮೇಲೆ ಕೈ ಮಾಡುವ ಧೈರ್ಯ ತೋರಿಸಲಿಲ್ಲ. ಮುದುಕಿಯ ಹಟದಿಂದಾಗಿ ಅಂತೂ ಕಡೆಗೊಂದು ದಿನ ಗ್ರಾಮವು ಮದ್ಯಮುಕ್ತ ಗ್ರಾಮವಾಯಿತು.

ಕಾರ್ಯಕರ್ತೆಯ ಬಾಯಿಂದ ವೀರಗಾಥೆ ಕೇಳಿದ ಮಹಿಳೆಯರು ಚಪ್ಪಾಳೆಯಿಕ್ಕಿ ಸಂಭ್ರಮಿಸಿದರು.

ಮತ್ತೊಬ್ಬಾಕೆ ಮೂರು ಮಕ್ಕಳ ತಾಯಿ. ಆಕೆ ಪ್ರತಿತಿಂಗಳು ಹೇಗೋ ಮಾಡಿ ಮನೆಗೆ ರೇಷನ್ ತಂದಿಡುತ್ತಿದ್ದಳು. ಅವಳ ಗಂಡ ರೇಷನ್ನನ್ನೇ ಕದ್ದೊಯ್ದು ಮಾರಿ ಕುಡಿದು ಕಾಯಿಲೆ ಬೀಳುತ್ತಿದ್ದ. ಎರಡು ಬಾರಿ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವ ಪ್ರಯತ್ನ ಮಾಡಿದಳು ಆಕೆ. ಮೂರನೆಯ ಬಾರಿ, ಆಕೆಯ ಪ್ರಯತ್ನ ಮೀರಿ ಗಂಡ ಸತ್ತ. ವಿಧವೆಪಟ್ಟ ಹೊತ್ತು ಜಿಲ್ಲಾ ಆಸ್ಪತ್ರೆಯಿಂದ ಹಿಂದಿರುಗಿದಳು ಆಕೆ. ಈಗವಳು ದೃಢ ಸಂಕಲ್ಪದಿಂದ ಮಕ್ಕಳನ್ನು ಓದಿಸುವ ಪ್ರಯತ್ನ ನಡೆಸಿದ್ದಾಳೆ. ಗಂಡನ ಸಾವು ಆಕೆಯ ಬಾಳಿನ ದುರಂತವೋ ಸುಖಾಂತವೋ ಎಂದು ನಿರ್ಧರಿಸಲಾರದೆ ಚಡಪಡಿಸಿದರು ಮಹಿಳೆಯರು. ಅಂದು ಮಾತನಾಡಿದ ಮೂರನೆಯವಳು ಒಬ್ಬ ಬಾಲಕಿ. ಹೊಟ್ಟೆಯ ಸಂಕಟ ಹೇಳಿಕೊಳ್ಳಲಾರದೆ, ಹೇಳದೆ ಇರಲಾರದೆ, ಅಂತೂ ಕಡೆಗೊಮ್ಮೆ ತನ್ನ ತಂದೆಯ ಕತೆ ಹೇಳಿಕೊಂಡಳು.

ಕುಡಿತದ ಮಹಾನ್ ಚರಿತ್ರೆ ಹೊತ್ತು ತಿರುಗಿದವನು ಆ ತಂದೆ. ಹತ್ತು ವರ್ಷಗಳ ಹಿಂದೆ ಸಾಯುವಂತಾದಾಗ, ಹೆದರಿ, ತಜ್ಞರ ಸಹಾಯ ಪಡೆದು ಕುಡಿತ ಬಿಟ್ಟ. ಈಗ ಮುದಿತನದಲ್ಲಿ ದಮ್ಮಿನ ಕಾಯಿಲೆ. ಸರ್ವ ರೋಗಗಳಿಗೂ ಸಾರಾಯಿ ಮದ್ದು ಎಂದು ಗಟ್ಟಿಯಾಗಿ ನಂಬಿರುವ ಆತನ ಸ್ನೇಹಿತರು ಅವನಿಗೆ, ಔಷಧದ ರೂಪದಲ್ಲಿ ಮತ್ತೆ ಸಾರಾಯಿ ಕುಡಿಸಲು ಶುರು ಮಾಡಿದ್ದಾರೆ. ಮಾತು ಮುಂದುವರೆಸಲಾಗದೆ ಮೈಕು ಪಕ್ಕಕ್ಕಿಟ್ಟಿತು ಮಗು. ಅವಳ ಗೆಳತಿ ಎದ್ದು ಬಂದು ಅವಳ ಬೆನ್ನಿಗೆ ಕೈಯಾಡಿಸಿ ಕರೆದುಕೊಂಡು ಹೋಗಿ ಕೂರಿಸಿಕೊಂಡಳು. ಹೊಡೆತಗಳ ಕತೆಯಂತೂ ಕೇಳುವುದೇ ಬೇಡ.

ಕಳೆದ ವಾರ ತುಮಕೂರಿನಲ್ಲಿ ಇಂತಹದ್ದೇ ಮತ್ತೊಂದು ಸಭೆ. ಸಭೆಯಲ್ಲಿ ಭಾಗವಹಿಸಿದ್ದೆ ನಾನು. ಸಭೆ ಪೂರ್ತಿ ಮುಗಿಯುವ ಮೊದಲೇ ತರಾತುರಿಯಿಂದ ಹೊರಡಬೇಕಾಗಿ ಬಂದಿತು, ಹೊರಟೆ. ಸಭೆಯಲ್ಲಿ ಸೇರಿದ್ದ ಮಹಿಳೆಯರು ಮನವಿ ಪತ್ರ ಸಲ್ಲಿಸಲೆಂದು ಜಿಲ್ಲಾಧಿಕಾರಿಗಳ ಕಚೇರಿಯತ್ತ ಮೆರವಣಿಗೆ ಹೊರಟರು. ಮೆರವಣಿಗೆಯಿಂದಾಗಿ ರಸ್ತೆ ಬಂದ್‌ ಆಯಿತು. ನಾನು ಹಿಡಿಯಬೇಕಿದ್ದ ಶಿವಮೊಗ್ಗೆಯ ಬಸ್ಸು, ಸಂಚಾರ ನಿಂತದ್ದರಿಂದಾಗಿ, ಪುರಭವನದ ಆ ವೃತ್ತದಲ್ಲಿಯೇ ಬಂದು ನಿಂತಿತು. ಓಡಿಹೋಗಿ ಹತ್ತಿ ಕುಳಿತೆ. ಬಸ್ಸಿನಲ್ಲಿ ಕುಳಿತವರು, ಕಿಟಕಿಯಾಚೆಗೆ ಕತ್ತು ತೂರಿಸಿ, ಘೋಷಣೆ ಕೂಗುತ್ತ ನಡೆದಿದ್ದ ಮಹಿಳೆಯರನ್ನು ಗಮನಿಸುತ್ತಿದ್ದರು. ಹೆಚ್ಚಾಗಿ ಗಂಡಸರೇ ಪಯಣಿಸುತ್ತಿದ್ದ ಬಸ್ಸು ಅದು.

‘ಓಹೋ!… ಕುಡ್ತಾ ನಿಲ್ಲುಸ್ತಾರಂತೆ ಕಣ್ಲಾ, ಹೆಂಗುಸ್ರು!’ ಇನ್ನೊಬ್ಬ, ‘ಅದೆಲ್ಲಾಯ್ತದೆ! ಆಟೆಲ್ಲ ವರಮಾನ ಬರ್ತಿರೋವಾಗ ಯಾವ ಸರ್ಕಾರ ಕುಡ್ತ ನಿಲ್ಸುತ್ತೆ’ ಅಂದ. ಹಾಗಂದು, ಅಲ್ಲಿ ಕುಳಿತಿದ್ದ ಹಿರಿಯರೊಬ್ಬರತ್ತ ತಿರುಗಿ, ‘ಏನಂತೀರಿ ಯಜಮಾನ್ರೆ?’ ಅಂತ ಗಟ್ಟಿಸಿ ಪ್ರಶ್ನೆ ಮಾಡಿದ. ಯಜಮಾನ್ರು, ಕೊಂಚ ಅಧೈರ್ಯದಿಂದಲೇ ಮುಗುಳು ನಕ್ಕರು. ಬಸ್ಸಿನ ಡ್ರೈವರ್, ‘ಎಲ್ಲಾಯ್ತದೆ, ಎಲ್ಲಾಯ್ತದೆ?’ ಅಂತ ತಲೆದೂಗಿ ತಾನೂ ಮಾತಿಗಿಳಿದ. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದ ಹತ್ತಿರ ಇರುವ ಒಂದು ಬಾರು ಬೆಳಿಗ್ಗೆ ಐದು ಗಂಟೆಗೇ ಬಾಗಿಲು ತೆರೆದುಕೊಳ್ಳುತ್ತದೆ ಎಂಬ ಸ್ವಾರಸ್ಯಕರ ಸುದ್ದಿ ಹೇಳಿದ. ಪ್ರಶ್ನೆ ಕೇಳಿದ್ದಾತ, ‘ವೋದಾ?… ದೇವಸ್ಥಾನಗ್ಳು ಸಹ ಎಂಟ್ ಗಂಟೆಗೆ ಬಾಗಿಲು ತೆರೆಯುತ್ತೆ, ಕುಡುಕ್ ನನ್‌ಮಕ್ಳ ದೇವಸ್ಥಾನ ಐದು ಗಂಟೆಗೇ ರೆಡಿ’ ಅಂದು ನಕ್ಕ.

ಅವರ ಮಾತುಗಳಲ್ಲಿ ಅಧೈರ್ಯ, ಅನುಮಾನ, ಸಿನಿಕತೆ ಇತ್ಯಾದಿ ಹಲವು ಭಾವಗಳು ಸೇರಿ ಹೋಗಿದ್ದವು. ಇವರು ಯಡಿಯೂರಪ್ಪನವರ ಬಗ್ಗೆ ಮಾತನಾಡುವ ಪರಿಯೂ ಇದೇ ಹೌದು, ಸಿದ್ದರಾಮಯ್ಯನವರ ಹಾಲಿ ಸರ್ಕಾರದ ಬಗ್ಗೆ  ಮಾತನಾಡುವ ಪರಿಯೂ ಇದೇ ಹೌದು. ವಾಸ್ತವತೆಯೆಂಬ ಕೊಚ್ಚೆಯಲ್ಲಿ ಕಾಲಾಡಿಸಿ ಗಲೀಜಾಗಿ ಬದುಕುವುದೇ ಜಾಣತನವೆಂದು ತಿಳಿದವರು ಇವರು. ಪಾಪ ಅನ್ನಿಸಿತು. ಇವರೂ ಬಡವರೇ, ಇವರೂ ನೊಂದವರೇ! ಯೋಚನೆಗಳು ಮಾತ್ರ, ಇವರದ್ದು ಕಗ್ಗಂಟು ಅನ್ನಿಸಿತು.

ಇವರಿಗೆ ರಾಜಕೀಯದ ಬಗ್ಗೆ ವಿಪರೀತ ನಂಬಿಕೆ. ಸಮಾಜದ ಬಗ್ಗೆ ಅಷ್ಟೇ ಅಪನಂಬಿಕೆ. ಎರಡನೆಯ ಸ್ವಾತಂತ್ರ್ಯ ಸಂಗ್ರಾಮವೇನಾದರೂ ಈ ದೇಶದಲ್ಲಿ ನಡೆಯುವುದಾದರೆ ಅದು ಬಡವರ ನೇತೃತ್ವದಲ್ಲಿ ನಡೆಯಬೇಕು, ಅವರು ಬಡ ಮಹಿಳೆಯರಾಗಿರಬೇಕು ಎಂದು ಹಾರೈಸಿದೆ. ಬಸ್ಸು ಗಲೀಜು ಶಹರವನ್ನು ದಾಟಿ ಹೊರಬಂದಿತ್ತು. ಕಿಟಕಿಯಾಚೆ ಕಣ್ಣಾಡಿಸುತ್ತ ನಿಟ್ಟುಸಿರುಬಿಟ್ಟೆ.