ಶಿಕ್ಷಣದ ವಾರಸಿಕೆಗೆ ಬೇಕು ಬದಲಾವಣೆಯ ಬೆಳಕು- ಜಿ.ಎಸ್. ಜಯದೇವ

ಯಾವ ಕಾಲದಲ್ಲಿ, ಯಾವ ದೇಶದಲ್ಲಿ ಅತ್ಯಂತ ಉತ್ಕೃಷ್ಟವಾದ ಶಿಕ್ಷಣ ವ್ಯವಸ್ಥೆ ಇತ್ತು? ಇದಕ್ಕೆ ಉತ್ತರ ಹುಡುಕುತ್ತಾ ಹೋದಂತೆ ನಮಗೆ ನಿರಾಸೆಯೇ ಕಾದಿದೆ.  ಆಯಾ ಕಾಲದಲ್ಲಿ ಪ್ರಾಜ್ಞರೆನಿಸಿದ ಮಹನೀಯರು ತಮ್ಮ ಕಾಲದ ಶಿಕ್ಷಣವನ್ನು ಹಲವಾರು ಕಾರಣಗಳಿಗಾಗಿ ತೆಗಳುವುದನ್ನು ನೋಡುತ್ತೇವೆ.

ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು “ಓದಿಸುವಣ್ಣಗಳು ಕೇವಲ ಧನಕ್ಕೆ ಮುನಿಯುತ್ತಾರೆ; ಮನಕ್ಕೆ ಮುನಿಯುವುದಿಲ್ಲ’ ಎನ್ನುತ್ತ ಹಣಕ್ಕಾಗಿ ಬಣ್ಣ ಗೆಟ್ಟ ಶಿಕ್ಷಣವನ್ನು ಹಳಿಯುತ್ತಾರೆ.  ಅಥವಾ ನಮ್ಮ ಪುರಾತನ ಗುರುಕುಲಪದ್ಧತಿಯನ್ನು ತೆಗೆದುಕೊಂಡರೆ ಅದು ಜಾತಿ, ಕುಲ, ಗೋತ್ರ ಇತ್ಯಾದಿಗಳನ್ನು ನೆಪಮಾಡಿಕೊಂಡು ಬಹುಸಂಖ್ಯಾತರಿಗೆ ಶಿಕ್ಷಣವನ್ನೇ ನಿರಾಕರಿಸಿತು.

ಹಾಗೆಯೇ ಮುಂದೆ ಬಂದರೆ ಬ್ರಿಟಿಷರ ಭಾರತದಲ್ಲಿ ಮೆಕಾಲೆ ಮಹಾಶಯನ ಶಿಕ್ಷಣ ವಸಾಹತುಶಾಹಿಯ ಪಿತೂರಿಯಾಗಿ ಕಂಡುಬರುತ್ತದೆ.  ಈ ಶಿಕ್ಷಣ ಪಡೆದ ಭಾರತೀಯರು ‘ಬಣ್ಣ ಮತ್ತು ರಕ್ತದಲ್ಲಿ ಮಾತ್ರ ಭಾರತೀಯರಾಗಿರಬೇಕು; ಆದರೆ ಬೌದ್ಧಿಕತೆಯಲ್ಲಿ, ಅಭಿಪ್ರಾಯದಲ್ಲಿ, ಅಭಿರುಚಿಯಲ್ಲಿ ಇಂಗ್ಲಿಷ್ ಪರವಾಗಿರಬೇಕು’ ಎಂಬುದು ಮೆಕಾಲೆಯ ನಿರೀಕ್ಷೆ.  ಈ ಶಿಕ್ಷಣದ ಪರಿಣಾಮವಾಗಿ ಅನಕ್ಷರತೆ ಹೆಚ್ಚಾಗಿದ್ದನ್ನು ಗಾಂಧೀಜಿ 1931ರ ರೌಂಡ್ ಟೇಬಲ್ ಕಾನ್‌ಫರೆನ್ಸ್‌ನಲ್ಲಿ ಪ್ರಸ್ತಾಪಿಸಿದರು.  ಇದು ಬ್ರಿಟಿಷ್ ಸಾಮ್ರಾಜ್ಯಕ್ಕೆ ಅವಮಾನಕರವಾದ ಸಂಗತಿ ಎಂದೂ ಹೇಳಿದರು.

ಅನೇಕ ಪಾಶ್ಚಾತ್ಯ ಚಿಂತಕರೂ ತಮ್ಮ ದೇಶದ ಶಿಕ್ಷಣವ್ಯವಸ್ಥೆಯ ಅಸಮರ್ಪಕತೆಯನ್ನು ಕುರಿತು ಮಾತನಾಡುತ್ತಾರೆ. ‘ಶಾಲಾಶಿಕ್ಷಣ ನನ್ನ ಕಲಿಕೆಯ ಮಧ್ಯಪ್ರವೇಶಿಸಿ ಅಡ್ಡಿಪಡಿಸಲು ನಾನು ಬಿಡುವುದಿಲ್ಲ’ ಎಂದು ಮಾರ್ಕೆಟ್ವೇನ್ ಹೇಳಿದರೆ, ‘ಕಲಿಯಲು ಯೋಗ್ಯವಾದ ಯಾವುದನ್ನೂ ಬೋಧಿಸಲು ಸಾಧ್ಯವಿಲ್ಲ’ ಎನ್ನುತ್ತಾನೆ ಆಸ್ಕರ್ ವೈಲ್ಡ್.

ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ‘ಒಬ್ಬ ಅಧ್ಯಾಪಕನಾದವನು ಗಿಡಕ್ಕೆ ನೀರೆರೆಯುವಷ್ಟು ಮಾತ್ರ ಮಗುವಿಗೆ ಬೋಧಿಸಬಲ್ಲ; ಮಗು ತನ್ನೊಳಗಿನ ಸತ್ವದನ್ವಯ ತಾನೇ ಬೆಳೆಯುತ್ತದೆ.’ ಲ್ಯಾಟಿನ್ ಅಮೆರಿಕಾದ ಚಿಂತಕ ಐವಾನ್ ಇಲಿಯಚ್ ಶಾಲೆ ಒಂದು ಸಂಸ್ಥೆಯಾಗಿ ವಿಫಲವಾಗಿರುವುದನ್ನು ಕುರಿತು ಚರ್ಚಿಸುತ್ತಾನೆ. ‘ಈ ಶಾಲೆಗಳು ಮನುಷ್ಯನ ಗ್ರಹಿಕೆಯನ್ನು  ಕುಬ್ಜಗೊಳಿಸುವ, ಗೊಂದಲವನ್ನು ಸೃಷ್ಟಿಸುವ ಕೇಂದ್ರಗಳಾಗಿವೆ’ ಎನ್ನುತ್ತಾನೆ. ಹೀಗೆ ಎಲ್ಲ ಕಾಲದಲ್ಲೂ, ಎಲ್ಲ ದೇಶಗಳಲ್ಲೂ ಶಿಕ್ಷಣದ ಬಗ್ಗೆ ಒಂದಲ್ಲ ಒಂದು ತಕರಾರು ಇದ್ದೇ ಇದೆ.

ಇದೆಲ್ಲಾ ಚರಿತ್ರೆಗೆ ಸೇರಿದ ವಿಷಯ ಎಂದು ಮರೆತು ಬಿಡೋಣ. ಆದರೆ ನಮ್ಮ ಇಂದಿನ ಶಿಕ್ಷಣ ಹೇಗಿದೆ? ಹಿಂದೆಂದೂ ಕಂಡರಿಯದಷ್ಟು ಮಾಹಿತಿ ನಮಗೆ ಆಧುನಿಕ ತಂತ್ರ ಜ್ಞಾನದಿಂದ ಲಭಿಸುತ್ತಿದೆ.

ನಾಯಿಕೊಡೆಗಳ ಹಾಗೆ ಎಲ್ಲೆಲ್ಲೂ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ತಲೆ ಎತ್ತುತ್ತಿವೆ.  ಶೈಕ್ಷಣಿಕ ಕ್ಷೇತ್ರದ ಪ್ರಗತಿಯಿಂದ ಅಭಿವೃದ್ಧಿ, ಅಭಿವೃದ್ಧಿಯಿಂದ ದೇಶದ ಪ್ರಗತಿಯಾಗುತ್ತದೆ ಎಂಬ ನಿರೀಕ್ಷೆಯನ್ನು ಅರ್ಥಮಾಡಿಕೊಳ್ಳಬಹುದು.  ಆದರೆ ಆಗಿರುವುದೇನು? ಬ್ರಿಟಿಷರ ಶಿಕ್ಷಣ ವಸಾಹತುಶಾಹಿ ಪಿತೂರಿಯಾಗಿತ್ತು ಎಂದು ಗುರುತಿಸುವ ನಾವು ಇಂದಿನ ಶಿಕ್ಷಣ ಜಾಗತಿಕರಣದ ದೊಡ್ಡ ಪಿತೂರಿ ಎಂಬುದನ್ನು ಗುರುತಿಸಲು ವಿಫಲರಾಗಿದ್ದೇವೆ.

ಶಿಕ್ಷಣಕ್ಷೇತ್ರವೇ ಉದ್ಯಮದ ಸ್ವರೂಪ ಪಡೆಯುತ್ತಿರುವ ಇಂದಿನ ಸಂದರ್ಭದಲ್ಲಿ ಜಾಗತೀಕರಣದ ಪಿತೂರಿ ಮಾರುಕಟ್ಟೆಯ ತುತ್ತೂರಿಯಾಗಿ ಎಲ್ಲೆಲ್ಲೂ ಮೊಳಗುತ್ತಿದೆ. ಮಕ್ಕಳನ್ನು ಈ ಮಾರುಕಟ್ಟೆಯ ಬಳಕೆದಾರರನ್ನಾಗಿ ರೂಪಿಸುವುದೇ ಶಿಕ್ಷಣದ ಉದ್ದೇಶ, ಕೊಳ್ಳುಬಾಕರಾಗಿರುವ ನಮ್ಮ ಜನಗಳ ಬೇಡಿಕೆಯೂ ಹಾಗೆ ಇದೆ. ಇಂತಹ ಒಂದು ವಿಸ್ಮೃತಿಗೆ ಭಾರತವಷ್ಟೇ ಏಕೆ ಇಡೀ ಜಗತ್ತೇ ಒಳಗಾಗಿದೆಯಲ್ಲ, ಹೀಗೇಕೆ?

ವಿಜ್ಞಾನ ತಂತ್ರಜ್ಞಾನಗಳು ತ್ವರಿತಗತಿಯಲ್ಲಿ ಪ್ರಗತಿ ಸಾಧಿಸುತ್ತಿವೆಯಾದರೂ ಒಂದು ಸಮುದಾಯದ ಮನಃಸ್ಥಿತಿಯನ್ನು ಬದಲಿಸಬಲ್ಲ ಮೆದುಳಿನ ವಿಕಾಸ ಅಥವಾ ಮನೋವಿಕಾಸ ಮಾತ್ರ ಮಂದಗತಿಯಲ್ಲೇ ಸಾಗುತ್ತದೆ.  ವಿಜ್ಞಾನ–ತಂತ್ರಜ್ಞಾನಗಳ ಪ್ರಗತಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ಮನಸ್ಸಿನ ಪಕ್ವತೆ ಇದೇ ಗತಿಯಲ್ಲಿ ಬೆಳೆಯಲು ಸಾಧ್ಯವಿಲ್ಲ. ಇದು ಸಹಜ ಜೈವಿಕವಿದ್ಯಮಾನ.

ಹೊಸ ಹೊಸ ‘ಆಪಲ್’ ಉಪಕರಣಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುವಂತೆ ಮನಸ್ಸಿನ ರಚನೆಯಲ್ಲೂ ಬದಲಾವಣೆಗಳನ್ನು ತರಲು ಸಾಧ್ಯವಿಲ್ಲ.  ಹಾಗಾಗಿ ಮನಸ್ಸಿನ ದೌರ್ಬಲ್ಯಗಳು ಹಾಗೆ ಉಳಿದುಬಿಡುತ್ತವೆ.  ಇಂತಹ ದುರ್ಬಲವಾದ ಸಮೂಹಮನಸ್ಸು ಏನನ್ನು ಬಯಸುತ್ತದೆ? ವಿಜ್ಞಾನ-ತಂತ್ರಜ್ಞಾನದ ಪ್ರಗತಿಯಿಂದಾಗಿ ಜ್ಞಾನದಾಹವೇನೂ ಹೆಚ್ಚಾಗಲಿಲ್ಲ;  ಬದಲಾಗಿ ಪಶುಪ್ರವೃತ್ತಿಗಳು ಹಿಂದೆಂದಿಗಿಂತಲೂ ಹೆಚ್ಚು ಪ್ರಕಾಶಕ್ಕೆ ಬರುತ್ತಿವೆ.

ಬಹುಬೇಗ ಮುಗಿದು ಹೋಗಬಹುದಾದ ಈ ಬದುಕಿನಿಂದ ಸುಖದ ರಸವನ್ನು ಒಂದು ತೊಟ್ಟೂ ಬಿಡದೆ ಹಿಂಡಿ ಹೀರುವ, ಹೆಚ್ಚು-ಅತಿಹೆಚ್ಚುಗಳನ್ನು ಪಡೆಯುವ ಹಂಬಲಕ್ಕೆ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ಇದರಿಂದಾಗಿ ಪರಿಸರ ಕೆಡುತ್ತಿದೆ, ಮನುಷ್ಯ ಸಂಬಂಧಗಳು ಹಳಸುತ್ತಿವೆ. ಆದರೂ ಈ ವಿನಾಶಕಾರಿ ಬೇಡಿಕೆಗಳನ್ನು ಈಡೇರಿಸಲು ಬೇಕಾದ ಬುದ್ಧಿಮತ್ತೆಯನ್ನು ನೀಡಲು ನಮ್ಮ ಶಿಕ್ಷಣ ವ್ಯವಸ್ಥೆ ಶ್ರಮಿಸುತ್ತಿದೆ.

ಇಂದಿನ ಸುಶಿಕ್ಷಿತರ ಕಡೆ ನೋಡಿದರೆ ಸಾಕು ನಮ್ಮ ಶಿಕ್ಷಣದ ಪರಿಣಾಮ ಏನಾಗಿದೆ ಎಂದು ಕಾಣುತ್ತದೆ.  ನಮ್ಮ ಪರಿಸರ ವಿನಾಶಕ್ಕೆ ಕಾರಣವಾಗಿರುವವರು, ಮನುಕುಲವನ್ನು ಅಳಿವು-ಉಳಿವಿನ ಅಂಚಿಗೆ ತಳ್ಳಿರುವವರು ಕಾಲೇಜು ಶಿಕ್ಷಣ ಪಡೆದ ವಿದ್ಯಾವಂತರೆ ಹೊರತು ಹೊಲಗದ್ದೆಗಳಲ್ಲಿ ದುಡಿಯುತ್ತಿರುವ ಶ್ರಮಿಕರಲ್ಲ.  ಹಾಗಾಗಿ ಶಿಕ್ಷಣ ಹಿಂದೆಂದಿಗಿಂತಲೂ ಈಗ ಅಪಾಯಕಾರಿ ರೂಪ ತಾಳಿದೆ.  ಈ ಅವಘಡಗಳಿಗೆ ಕಾರಣವಾಗುತ್ತಿರುವ ಶಿಕ್ಷಣಸಂಸ್ಕೃತಿಯ ಕುರಿತು ನಾವು ಚರ್ಚಿಸಲೇಬೇಕು.

ಮನುಷ್ಯನೇ ಮನುಕುಲಕ್ಕೆ ಅಪಾಯಕಾರಿಯಾಗಿ ಪರಿಣಮಿಸಲು ಕಾರಣವೇನು? ಮನುಷ್ಯನ ಮನಸ್ಸಿನಲ್ಲುಂಟಾಗುತ್ತಿರುವ ಒಂದು ಅಸಹಜ ಪಲ್ಲಟವನ್ನು ನಾವು ಗುರುತಿಸಬೇಕು.  ವಿಜ್ಞಾನ–ತಂತ್ರಜ್ಞಾನಗಳ ಪ್ರಭಾವದಲ್ಲಿ ಪರಸ್ಪರತೆಯನ್ನು, ಸಹಬಾಳ್ವೆಯನ್ನು ಬೆಸೆಯುತ್ತಿದ್ದ ಬದುಕಿನ ಸರಳ ನಂಬಿಕೆಗಳು ಈಗ ನಿರಾಧಾರವೆಂಬ ಕಾರಣಕ್ಕಾಗಿ ಅಪ್ರಸ್ತುತವಾಗಿವೆ.

ವಿಜ್ಞಾನ-ಮಾಹಿತಿ ತಂತ್ರಜ್ಞಾನಗಳು ಓತಪ್ರೋತವಾಗಿ ಸಮೂಹಮನಸ್ಸನ್ನು ಆಕ್ರಮಿಸಿ ಮನುಷ್ಯರೆಲ್ಲರಿಗೂ ಆ ಯಾಂತ್ರಿಕ ಗುಣವನ್ನೇ ದಯಪಾಲಿಸಿದೆ.  ಹಾಗಾಗಿ ಇವನಿಗೆ ತನ್ನ ಸಹಜೀವಿಗಳ ಬಡತನ, ಅನಕ್ಷರತೆ, ಅಸಮಾನತೆ, ಪರಿಸರನಾಶ ಮುಂತಾದ ಗಂಭೀರ ವಿಷಯಗಳು ಕೇವಲ ತುಲನಾತ್ಮಕವಾದ ಅಂಕಿ–ಅಂಶಗಳಾಗಿ ಬಿಡುತ್ತವೆ.

ಕಂಪ್ಯೂಟರ್‌ಗಳ ಹಾಗೆ ಇವನೂ ಸಹ ನಿರ್ಲಿಪ್ತನಾಗಿ ಈ ಅಂಕಿ–ಅಂಶಗಳನ್ನೇ ಕಾಪಿ, ಪೇಸ್ಟ್ ಅಥವಾ ಡಿಲೀಟ್ ಮಾಡಲು ಶಕ್ತ!  ತನ್ನ ಮತ್ತು ತನ್ನ ಪರಿಸರದೊಡನೆ ಇರುವ ಸಹಜ ಸಾವಯವ ಸಂಬಂಧವನ್ನು ಕಡಿದುಕೊಳ್ಳುವ ಮೂಲಕ ಮಾತ್ರ ಆಧುನಿಕರಾಗಬಲ್ಲರು ಈ ನವನಾಗರಿಕರು.  ಹೀಗೆ ಸುಖದ ಹಿಂದೆ ಬಿದ್ದು ಬದುಕಿನ ಸಂತೋಷವನ್ನು ಕಳೆದುಕೊಳ್ಳುವ, ಸುಖಮಯ ಬದುಕಿನ ಸಿದ್ಧತೆಯಲ್ಲೆ ಸವೆದುಹೋದ ಬದುಕಿಗಾಗಿ ಕೊನೆಯಲ್ಲಿ ವಿಶಾದಿಸುವ ಪರಿಪಾಠವೇ ಆಧುನಿಕ ಬದುಕು ಎನಿಸಿದೆ.  ನಮ್ಮ ಶಿಕ್ಷಣ ಇದಕ್ಕೆ ಪೂರಕವಾಗಿದೆ. ಇಂತಹ ಜೀವವಿರೋಧಿ ಶಿಕ್ಷಣವನ್ನು ವಿಮರ್ಶೆಗೆ ಒಳಪಡಿಸಬೇಡವೆ?

ಈ ಸಂದರ್ಭದಲ್ಲಿ ನಮ್ಮ ಶಿಕ್ಷಣದ ಆದ್ಯತೆಗಳೇನು, 122 ಕೋಟಿ ಜನಸಂಖ್ಯೆಯನ್ನು ದಾಟಿದ ನಮ್ಮ ದೇಶದ ಎಲ್ಲ ಜನರನ್ನು ಮತ್ತು ಅವರ ಸ್ಥಿತಿಗತಿಗಳನ್ನು ಗಣನೆಗೆ ತೆಗೆದುಕೊಂಡು ನಮ್ಮ ಶಿಕ್ಷಣದ ಆದ್ಯತೆಗಳನ್ನು ರೂಪಿಸಿದ್ದೇವೆಯೆ – ಎಂದು ಪರಿಶೀಲಿಸಬೇಕು.

40ಕೋಟಿಗೂ ಮಿಗಿಲಾಗಿರುವ ನಮ್ಮ ಮಕ್ಕಳ ಭವಿಷ್ಯವೇನು? ಮುಂದೆ ಅವರಿಗೆ ಯಾವ ವೃತ್ತಿಯ ಅಥವಾ ಉದ್ಯೋಗದ ಸಾಧ್ಯತೆ ಇದೆ? ಇಂಗ್ಲಿಷ್‌ಭಾಷೆ ಬಂದರೆ ಸಾಕು, ಕಂಪ್ಯೂಟರ್ ತರಬೇತಿ ಇದ್ದರೆ, ಸಾಕು ಉದ್ಯೋಗಗಳು ಕಾದು ನಿಂತಿವೆ ಎಂಬ ನಂಬಿಕೆ ಪ್ರಬಲವಾಗಿದೆ.  ಆದರೂ ಇಂಗ್ಲಿಷ್ ಹಾಗೂ ಕಂಪ್ಯೂಟರ್‌ಗಳಿಂದಾಗಿ ಎಷ್ಟು ಜನಕ್ಕೆ ಉದ್ಯೋಗ ದೊರೆತಿದೆ ಎಂಬುದನ್ನು ಅಂಕಿ–ಅಂಶಗಳ ಆಧಾರದಲ್ಲಿ ಪರಿಶೀಲಿಸೋಣ.

ಈ ದೇಶದ ಉದ್ಯೋಗಸ್ಥರ ಪೈಕಿ ಸಾಫ್ಟ್‌ವೇರ್ ವಲಯದ ನೌಕರಿಯಲ್ಲಿರುವವರು ಶೇ.  0.002 ಭಾಗ ಮಾತ್ರ. ಎಂದರೆ ಸಂಘಟಿತ ವಲಯದ ಸುಮಾರು 7.5 ಕೋಟಿ ಉದ್ಯೋಗಸ್ಥರಲ್ಲಿ ಸಾಫ್ಟವೇರ್ ಮಂದಿಯ ಪಾಲು ಶೇ.0.002.  ದೇಶದ 122 ಕೋಟಿ ಜನಸಂಖ್ಯೆಯನ್ನು ತೆಗೆದುಕೊಂಡರೆ ಇವರು ಕಣ್ಣಿಗೇ ಕಾಣುವುದಿಲ್ಲ! ಮೇಲಾಗಿ ಸಂಘಟಿತ ವಲಯದ ಉದ್ಯೋಗಸ್ಥರೆಲ್ಲರಿಗೂ ಇಂಗ್ಲಿಷ್-ಕಂಪ್ಯೂಟರ್‌ಗಳು ಬೇಕೆಂದೇನೂ ಇಲ್ಲ.

ಅಸಂಘಟಿತ ವಲಯದ ದುಡಿಮೆಗಾರರ ಸಂಖ್ಯೆ 38 ಕೋಟಿ. ಈ ವಲಯದ ಕೃಷಿಕಾರ್ಮಿಕರು, ಸಣ್ಣ ವ್ಯಾಪಾರಿ, ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುವವರು, ನೇಕಾರರು ಮುಂತಾದ ಬಹುಪಾಲು ಶ್ರಮಜೀವಿಗಳಿಗೂ ಇಂಗ್ಲಿಷ್–ಕಂಪ್ಯೂಟರ್‌ಗಳ ಹಂಗಿಲ್ಲ.  122 ಕೋಟಿ ಜನಗಳ ಪೈಕಿ ಇಂಗ್ಲಿಷ್‌ಭಾಷೆ ಆಧರಿತ ನೌಕರಿಯಲ್ಲಿರುವವರು ಕೇವಲ ಎರಡರಿಂದ ಮೂರು ಕೋಟಿ ಇರಬಹುದು ಅಷ್ಟೆ. ಆದರೂ ನಮ್ಮ ಶಿಕ್ಷಣದ ಕೇಂದ್ರ ಬಿಂದು ಇಂಗ್ಲಿಷ್-ಕಂಪ್ಯೂಟರ್‌ಗಳೇ ಆಗಿವೆ. ಈ ನಂಬಿಕೆ ಪೋಷಕರನ್ನು ಗಾಢವಾಗಿ ಆವರಿಸಿದೆ, ಅದರಲ್ಲೂ ಹೆಚ್ಚಾಗಿ ಇಂಗ್ಲಿಷ್-ಕಂಪ್ಯೂಟರ್‌ಗಳ ಅರಿವಿಲ್ಲದ ಪೋಷಕರಿಗೆ ಇವು ಅಲ್ಲಾ ಉದ್ದೀನನ ಅದ್ಭುತದೀಪದ ಹಾಗೆ ಕಂಡು ಬರುತ್ತಿದೆ.

ಈ ವಿವರಣೆಯ ಉದ್ದೇಶ ಇಂಗ್ಲಿಷ್-ಕಂಪ್ಯೂಟರ್‌ಗಳು, ಬೇಡ ಎಂದೇನು ಅಲ್ಲ.  ಉನ್ನತ ವ್ಯಾಸಂಗದಲ್ಲಿ ಇಂಗ್ಲಿಷ್‌ಭಾಷೆಯ ಪಾತ್ರವನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.ಜರ್ಮನಿ ಮುಂತಾದ ದೇಶಗಳು ಈ ಸತ್ಯವನ್ನು ಒಪ್ಪಿಕೊಂಡು ತಮ್ಮ ಕೆಲವು ಶಾಲೆಗಳಲ್ಲಿ ಇಂಗ್ಲಿಷ್‌ಶಿಕ್ಷಣಕ್ಕೆ ಮುಂದಾಗಿದ್ದಾರೆ.  ಕಲಿಕೆಯ ಮೊದಲ ಹಂತಗಳಲ್ಲಿ ಮಗು ತನ್ನ ಮೊದಲ (ಮಾತೃ) ಭಾಷೆಯಲ್ಲೆ ವಿಷಯಗಳನ್ನು ಗ್ರಹಿಸುವುದು ಸಹಜ ಕಲಿಕೆಯ ಕ್ರಿಯೆ.

ವಿಷಯವನ್ನು ಗ್ರಹಿಸುವುದಕ್ಕೆ ಬೇಕಾದ ಭಾಷೆಯೇ ತೊಡಕಾಗಿ ನಿಂತರೆ ಸುಸಂಬದ್ಧವಾದ ಗ್ರಹಿಕೆ ಹೇಗೆ ಸಾಧ್ಯವಾದೀತು? ಗ್ರಹಿಕೆಯೆ ಈ ಲೋಪ ಮುಂದಿನ ಹಂತದ ಕಲಿಕೆಗೆ ಮಾರಕವಾಗಿ ಗಿಳಿಪಾಠದ ವ್ಯಕ್ತಿತ್ವಗಳು ರೂಪುಗೊಳ್ಳುವುದು ಅನಿವಾರ್ಯ.  ದೇಶದ ಎಲ್ಲ ಮಕ್ಕಳೂ ಹೀಗಾದರೆ ದೇಶದ ಭವಿಷ್ಯವೇನು? 2001ರ ಜನಗಣತಿಯಂತೆ ನಮ್ಮ ದೇಶದಲ್ಲಿ ಇಂಗ್ಲಿಷ್ ಬಲ್ಲ ಜನರ ಸಂಖ್ಯೆ ಶೇ. ಹತ್ತು. ಆದರೆ ಇವರ ಪೈಕಿ ನಿಜವಾಗಿಯೂ ಇಂಗ್ಲಿಷ್ ಮಾತನಾಡಲು ಬರೆಯಲು ಬರುವವರು ಶೇ. ಎರಡರಷ್ಟು ಮಾತ್ರ.

ಇವರಲ್ಲಿ ಮೊದಲನೇ ತರಗತಿಯಿಂಲೇ ಇಂಗ್ಲಿಷ್ ಮಾಧ್ಯಮದಲ್ಲಿ ಪಾಠಮಾಡಬಲ್ಲ ಶಾಲಾ ಮಾಸ್ತರುಗಳ ಸಂಖ್ಯೆ ಎಷ್ಟಿರಬಹುದು? ಈ ಪ್ರಶ್ನೆಗಳ ಜೊತೆಜೊತೆಗೇ ನಮ್ಮನ್ನು ಕಾಡುವ ಇತರ ಪ್ರಶ್ನೆಗಳೆಂದರೆ ಬೇಡಿಕೆ ಇರುವ ಕುಶಲಕರ್ಮಿಗಳ ಕೊರತೆ. ಎಲ್ಲರ ಅನುಭವದಂತೆ ಒಳ್ಳೆಯ ಪ್ಲಂಬರ್ ನಮಗೆ ಸಿಗುತ್ತಿಲ್ಲ, ಕಟ್ಟಡನಿರ್ಮಾಣ ಮಾಡುವ ಗಾರೆಕೆಲಸದವರಿಗೆ ವಿಜ್ಞಾನಾಧಾರಿತ ಕೌಶಲವನ್ನು ನಾವು ಎಲ್ಲೂ ಕೊಡುತ್ತಿಲ್ಲ,  ನೇಕಾರರಿಗೆ ನೆರವಾಗುವುದಿರಲಿ, ಅವರನ್ನು ದಮನ ಮಾಡುವುದೇ ನಮ್ಮ ಕೆಲಸವಾಗಿದೆ.

ಇಂತಹ ಯಾವ ಯಾವ ವಲಯಗಳಲ್ಲಿ ಉದ್ಯೋಗಸೃಷ್ಟಿ ಸಾಧ್ಯವೋ ಅವಾವುವೂ ನಮ್ಮನ್ನು ಆಕರ್ಷಿಸುವುದಿಲ್ಲ, ಅವುಗಳ ಮೌಲ್ಯವರ್ಧನೆ ಬೇಕಿಲ್ಲ; ಪ್ರಾಥಮಿಕ ಶಿಕ್ಷಣದಲ್ಲಂತೂ ಇವುಗಳಿಗೆ ಸ್ಥಾನವೇ ಇಲ್ಲ.  ನಮ್ಮ ಪ್ರಾಥಮಿಕ ಶಿಕ್ಷಣ ದಿನಕಳೆದಂತೆ ಕೃಷಿ ಮತ್ತು ಶ್ರಮಜೀವನದಿಂದ ಮಕ್ಕಳನ್ನು ಪಾರುಮಾಡುವುದೇ ತನ್ನ ಆದ್ಯಕರ್ತವ್ಯ ಎಂದು ಭಾವಿಸಿದಂತಿದೆ.

ಮಂತ್ರದಂಡದಂತೆ ಶಿಕ್ಷಣ ಎಲ್ಲವನ್ನು ಏಕಾಏಕಿ ಬದಲಿಸಬೇಕು ಎಂದು ನಿರೀಕ್ಷಿಸಲಾಗುವುದಿಲ್ಲ, ನಿಜ. ಆದರೆ ನಮ್ಮ ಶಿಕ್ಷಣ ನೀತಿ-ಶಿಕ್ಷಣಸಂಸ್ಕೃತಿಗಳು ನಮ್ಮ ಮಕ್ಕಳನ್ನು ತಮ್ಮ ಕಾಲ ಕೆಳಗಿನ ನೆಲಕ್ಕೇ ಆಗಂತುಕರಾಗುವಂತೆ ಶಿಕ್ಷಣ ನೀಡಿದರೆ ಅದನ್ನು ಹೇಗೆ ತಾನೇ ಒಪ್ಪುವುದು.

ನಮ್ಮ ಮಕ್ಕಳು ಭಾರತೀಯಕಿಡ್‌ಗಳಾಗುವ ಬದಲು ಯೂರೋಕಿಡ್‌ಗಳನ್ನಾಗಿ ಮಾಡುವ, ನಮ್ಮ ಮಕ್ಕಳ ಮನಸ್ಸಿನಲ್ಲಿ ಅಮೆರಿಕ–ಕನಸನ್ನು ಬಿತ್ತುತ್ತ ಸುಸ್ಥಿರ ಜೀವನದಿಂದ ದೂರಸರಿಸುವ ಶಿಕ್ಷಣ ನಮಗೆ ಬೇಕೆ? ಥಳುಕುಬಳುಕಿನ ಈ ದುಬಾರಿ ಖಾಸಗಿ ಶಾಲೆಗಳು ನೀಡುತ್ತಿರುವ ಗುಣಾತ್ಮಕ ಶಿಕ್ಷಣವಾದರೂ ಏನು? ಸ್ಪರ್ಧೆಯೇ ಆಧಾರಸ್ತಂಭವಾದ ಇಂತಹ ಶಾಲೆಗಳಲ್ಲಿ ಓದಿದವರು ಇತರರನ್ನು ತುಳಿದು ಮೇಲೇರುವ ಕಲೆಯನ್ನು ಕಲಿಯುತ್ತಾರೆ.

ಕೊಡುವುದಕ್ಕಿಂತಲೂ ಕಿತ್ತುಕೊಳ್ಳುವುದರಲ್ಲಿ ಪರಿಣತರಾಗುತ್ತಾರೆ; ಯಾವ ಅಪರಾಧಪ್ರಜ್ಞೆಯೂ ಇಲ್ಲದೆ ಇತರರ ಶ್ರಮದ ಫಲವನ್ನು ಕಾನೂನುಗಳನ್ನು ಮೀರದೆಯೆ ಕದಿಯುವ ಕಲೆಯನ್ನು ಕರಗತ ಮಾಡಿಕೊಳ್ಳುತ್ತಾರೆ. ಒಟ್ಟಿನಲ್ಲಿ ಸಮಾಜದ ಅಸಮಾನತೆಯನ್ನು ಹೆಚ್ಚಿಸುತ್ತಾರೆ.  1964–66ರಲ್ಲಿ ಕೊಥಾರಿ ಶಿಕ್ಷಣ ಆಯೋಗವು ಸಮಾನ ಶಾಲಾವ್ಯವಸ್ಥೆಯನ್ನು ಶಿಫಾರಸ್ಸು ಮಾಡಿತ್ತು.

ದೇಶದ ಭವಿಷ್ಯ ತರಗತಿಗಳಲ್ಲಿ ರೂಪುಗೊಳ್ಳುತ್ತದೆ ಎಂಬ ಆಯೋಗದ ಮೊದಲ ಮಾತು ಮಾರ್ಮಿಕವಾಗಿದೆ. ಆದರೆ ಇಂದು 50 ವರ್ಷಗಳು ಕಳೆದನಂತರ ಶಿಕ್ಷಣಕ್ಷೇತ್ರ ಅಸಮಾನತೆಯ ತೊಟ್ಟಿಲಾಗಿದೆ. ಇಂದು ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದಕ್ಕಿಂತ ದೊಡ್ಡ ಆತಂಕ ಎಂದರೆ ಆ ಸ್ಥಳದಲ್ಲಿ ತೀರ ಕಳಪೆ ಮಟ್ಟದ ಹಣದಾಹಿ ಖಾಸಗಿ ಶಾಲೆಗಳು ತಲೆ ಎತ್ತುತ್ತಿರುವುದು.

ಈ ಬೆಳವಣಿಗೆಯನ್ನು ನಿಯಂತ್ರಿಸದ ಹೊರತು ನಿಜವಾದ ಗುಣಾತ್ಮಕ ಶಿಕ್ಷಣ ದೂರದ ಮಾತು. ಶಿಕ್ಷಣದ ನಿಜವಾರಸುದಾರರಾದ ನಮ್ಮ ಶಾಲಾಮಾಸ್ತರುಗಳು ಈ ಕುರಿತು ಚಿಂತಿಸಬೇಕು; ಬದಲಾವಣೆಯ ಹರಿಕಾರರಾಗಬೇಕು.
(ಲೇಖಕರು: ಶಿಕ್ಷಣತಜ್ಞರು)