”ಶಾಮಂತಿ” ಮಕ್ಕಳ ತೋಟದ ಹೂ

ಶಾಮಂತಿ ಏಕೆ? ಹೇಗೆ?
SHAMANTI-1    `ಮಕ್ಕಳು’ ಎಂಬ ಪದ ಮನಸಿಗೆ ಬಂದಾಕ್ಷಣ ಜೊತೆಜೊತೆಯಲ್ಲೇ `ಹೂಗಳು’, `ಬಣ್ಣಗಳು’, `ತಿಂಡಿಗಳು’, `ಆಟಿಕೆಗಳು’ ಹೀಗೆ ವಿಧ ವಿಧದ ಚಿತ್ರಗಳು ಮನಸಿಗೆ ಬರುತ್ತವೆ. ಇವೆಲ್ಲವೂ ಬಾಲ್ಯದೊಂದಿಗೆ ತಳುಕು ಹಾಕಿಕೊಂಡಿರುವ ವೈವಿಧ್ಯಮಯ ಚಿತ್ರಗಳು. ಬಾಲ್ಯ ಎಂಬುದು ಒಂದು ಖಾಲಿ ಕ್ಯಾನ್ವಾಸಿನ ಮೇಲೆ ಮೂಡುತ್ತಾ ಹೋಗುವ ಚಿತ್ರವಿದ್ದಂತೆ. ಆ ಚಿತ್ರ ರೂಪುಗೊಳ್ಳುವ ಪ್ರಕ್ರಿಯೆಯೇ ಅನೂಹ್ಯವಾದುದು ಹಾಗೂ ಅದ್ಭುತವಾದುದು. ಆ ಹಂತದಲ್ಲಿ ಸಿಗುವ ಅವಕಾಶಗಳು, ಆಸರೆಗಳು, ಅನುಭವಗಳು, ಆ ಚಿತ್ರವನ್ನು `ಮಾಸ್ಟರ್ ಪೀಸ್’ ಮಾಡಬಲ್ಲದು. ಇಲ್ಲ ಯಾವುದೋ ಮಾಸ್ಟರ್ ಪೀಸ್ ನ `ನಕಲು’ ಕೂಡ ಮಾಡಬಹುದು. ಇದ್ಯಾವುದು ಇಲ್ಲವಾದರೆ ಕಸದಬುಟ್ಟಿಗೆ ಎಸೆಯಲರ್ಹವಾದ ವ್ಯರ್ಥ ಚಿತ್ರವೂ ಕೂಡ ಆಗಬಹುದು. ಇದು ಬಾಲ್ಯದ ಸಾಧ್ಯತೆಗಳ ಶಕ್ತಿ. ಶಿಕ್ಷಣವೆನ್ನುವುದು ಈ ಬಾಲ್ಯದ ಸಾಧ್ಯತೆಗಳನ್ನು ವಿಸ್ತರಿಸಬಲ್ಲ ಮಾಧ್ಯಮವಾಗಬೇಕು ಎಂಬುದು ಎಲ್ಲ ಸೂಕ್ಷ್ಮಜÐರ ಆಶಯ. ಈ ಆಶಯ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಎಷ್ಟರ ಮಟ್ಟಿಗೆ ಈಡೇರುತ್ತಿದೆ ಎಂಬುದನ್ನು ನಾವು ನೋಡುತ್ತಲೇ ಇದ್ದೇವೆ.
    ಮಕ್ಕಳ ಪುಟ್ಟ ಮನಸು ತನ್ನ ಹೊರಜಗತ್ತಿನೊಂದಿಗೆ ಹೇಗೆಲ್ಲಾ ಅನುಸಂಧಾನ ನಡೆಸುತ್ತಿರುತ್ತದೆ ಎಂಬುದು ಅತ್ಯಂತ ಕುತೂಹಲಕರ. ಎರಡು ಪುಟ್ಟ ಮಕ್ಕಳು ನಡೆಸುವ ಸಂಭಾಷಣೆಯೊಂದನ್ನು ಕದ್ದು ಆಲಿಸಿದರೆ ಮಕ್ಕಳ ಭಾವಜಗತ್ತಿನ ಸಣ್ಣ ಝಲಕನ್ನು ನಾವು ಅನುಭವಿಸಬಹುದು. ಮಕ್ಕಳೆಂದರೆ ಕೇವಲ ಮಕ್ಕಳಲ್ಲ. ಅವರೂ ಏನೂ ತಿಳಿಯದವರು ಅಥವಾ ತೀರಾ ಮುಗ್ಧರು ಎಂಬುದೆಲ್ಲಾ ಸುಳ್ಳು. ಅವರಿಗೆ ಅವರದೇ ಆದ ಗ್ರಹಿಕೆಗಳು, ತಿಳಿವಳಿಕೆಗಳು, ಧೋರಣೆಗಳು, ಕಲ್ಪನೆಗಳು, ಕನಸುಗಳು, ಲೆಕ್ಕಾಚಾರಗಳು ಇವೆಲ್ಲಾ ಇರುತ್ತವೆ. ಇವುಗಳು ನಿಜವಾಗಿಯೂ ಮಕ್ಕಳೊಂದಿಗೆ ಕೆಲಸ ಮಾಡುವವರಿಗೆ ತಿಳಿದಿರಬೇಕಾಗುತ್ತದೆ. ಆದರೆ ನೀರಸತೆ, ನಿಷ್ಕ್ರಿಯತೆ ಹಾಗೂ ಒಣಶಿಸ್ತುಗಳನ್ನೇ ನಂಬಿಕೊಂಡಿರುವ ಶಿಕ್ಷಣ ವ್ಯವಸ್ಥೆಯೊಳಗೆ ತಮ್ಮೊಳಗಿನ ಜೀವದ್ರವ್ಯವನ್ನು ದಿನೇದಿನೇ ಕಳೆದುಕೊಳ್ಳುತ್ತಾ `ಯಂತ್ರಮಾನವ’ರಾಗುತ್ತಿರುವ ಮಕ್ಕಳು ತಮ್ಮ ಸ್ವಾಲೋಚನೆಗಳನ್ನು ರೂಪಿಸಿಕೊಳ್ಳುವ ಗಟ್ಟಿ ಮಾಡಿಕೊಳ್ಳುವ ಬದಲು ತಮ್ಮ ಮೇಲೆ ಹೇರಲಾಗುವುದನ್ನೇ ಗಟ್ಟಿಮಾಡಿಕೊಳ್ಳಲು ಹೆಣಗಾಡಿ ಕೊನೆಗೆ ಅದೂ ಮಾಡಲಾಗದೇ, ಇದೂ ಮಾಡಲಾಗದೇ ಹೆಚ್ಚಿನ ಮಕ್ಕಳು ಅತಂತ್ರರಾಗುತ್ತಿದ್ದಾರೆ.
     SHAMANTI-4ಹೀಗೆಲ್ಲಾ ನಮಗೆ ಅನಿಸಿ ಈ ಮಕ್ಕಳಿಗೆ ಯಾವ್ಯಾವುದರ ಬಗ್ಗೆ ಏನೆಲ್ಲಾ ಅನಿಸುತ್ತದೆ ಎಂದು ತಿಳಿದುಕೊಳ್ಳುವುದನ್ನು ಹಾಗೂ ಅವರು ಅದನ್ನೆಲ್ಲಾ ವ್ಯಕ್ತಪಡಿಸಲು ಅವಕಾಶಗಳನ್ನು ನೀಡಬೇಕು ಎಂದು ತೀವ್ರವಾಗಿ ಅನಿಸಲು ಶುರುವಾಯಿತು. ಈ ಅನಿಸಿಕೆಯೊಂದಿಗೆ ಶುರುವಾದದ್ದು `ನವಿಲಗರಿ’ ಎಂಬ ಮಾಸಿಕ ಪತ್ರಿಕೆ (2004). ಒಂದೂವರೆ ವರ್ಷ ನಡೆದು ನಿಂತು ಹೋದ ಈ ಪತ್ರಿಕೆ ಮಕ್ಕಳ ಅಭಿವ್ಯಕ್ತಿಯ ಸಾಧ್ಯತೆಗಳ ಕುರಿತಾದ ಅನುಭವವನ್ನೂ ಹಾಗೂ ಒಂದು ಮುನ್ನೋಟವನ್ನು ನಮಗೆ ಒದಗಿಸಿತು. ಅನಂತರ ಶಾಲೆಯ ಮಟ್ಟಿಗೆ ಫೋಕಸ್ಡ್ ಆಗಿ ಏನಾದರೂ ರೂಪುಗೊಳ್ಳಬೇಕೆಂದು ನಮ್ಮ ಶಾಲೆಯ ಮಕ್ಕಳಿಗೆ ಹಲವು ಅವಕಾಶಗಳನ್ನು ಸೃಷ್ಟಿಸುತ್ತಾ ಬಂದೆವು. ಹಲವು ಪುಸ್ತಕಗಳ ಓದು, ಸಿನಿಮಾಗಳ ವೀಕ್ಷಣೆ, ಹಲವು ವ್ಯಕ್ತಿಗಳೊಂದಿಗೆ ಸಂವಾದಗಳು, ಬೇಸಿಗೆ ಶಿಬಿರ, ಆದಿಮ ಸಾಂಸ್ಕøತಿಕ ಕೇಂದ್ರಕ್ಕೆ ಭೇಟಿ, ನಾಟಕಗಳ ವೀಕ್ಷಣೆ, ಹೀಗೆ ಮಕ್ಕಳು ತಮ್ಮ ಕುತೂಹಲದ ಕಣ್ಣುಗಳನ್ನು ಇನ್ನಷ್ಟು ಅಗಲಿಸಿ ನೋಡುವಂತೆ ಗಮನಿಸುವಂತೆ ಅಭಿವ್ಯಕ್ತಿಸುವಂತೆ ಪ್ರೇರೇಪಿಸುತ್ತಿದ್ದೆವು. ಅದನ್ನೆಲ್ಲಾ ತಮ್ಮ `ಲೇಖನ ಪುಸ್ತಕ’ ಗಳಲ್ಲಿ ದಾಖಲಿಸುತ್ತಾ ಹೋದರು. ಅದು ಲೇಖನಗಳ ರೂಪದಲ್ಲೂ, ಪದ್ಯಗಳ ರೂಪದಲ್ಲೂ, ಚಿತ್ರಗಳ ರೂಪದಲ್ಲೂ ಇರುತ್ತಿದ್ದವು. ಇಲ್ಲವೆಂದರೆ ವಾರದ `ಕಾಮನಬಿಲ್ಲು’ ಕಾರ್ಯಕ್ರಮದಲ್ಲಿ ಅವರೇ ರೂಪಿಸುವ ನಾಟಕಗಳೂ ಆಗಿರುತ್ತಿದ್ದವು. ಇವುಗಳಲ್ಲಿ ಆಯ್ದವುಗಳನ್ನು `ಬೇಲಿಹೂ’ ಎಂಬ ಮಾಸಿಕ ಗೋಡೆಪತ್ರಿಕೆಯಲ್ಲಿ ಸಂಕಲಿಸಿ ಪ್ರಕಟಿಸುತ್ತಿದ್ದೆವು. ಅವರು ಕಟ್ಟಿದ ಪದಗಳ ಗೂಡು ಅವರು ಸೃಷ್ಟಿಸಿದ ಚಿತ್ರಗಳ ಸೊಗಸಿಗೆ ಅವರು ಪಡುವ ಸಂಭ್ರಮ ಇವೆಲ್ಲವನ್ನೂ ವರ್ಣಿಸುವುದು ಕಷ್ಟ! ಈ ಪ್ರಕ್ರಿಯೆಗಳಲ್ಲಿ ಮೇಷ್ಟ್ರು ಮಕ್ಕಳು ಎಂಬ ಭೇದ ಮರೆತು ಎಲ್ಲರೂ ಮನುಷ್ಯರು ಎಂದು ತಿಳಿಯುತ್ತಿದ್ದೆವು. ಈ ಮನುಷ್ಯತನ ಮಕ್ಕಳು ದೊಡ್ಡವರಿಗೆ ಕಲಿಸುವ ಪಾಠ. ಯಾವುದೋ ತಿಳಿಯದ ನೋಡಿರದ ಅಮೆರಿಕದ ಸಸ್ಯವರ್ಗದ ಬಗ್ಗೆ ತಿಳಿಸುತ್ತಾ ಮಕ್ಕಳ ಕಣ್ಣಲ್ಲಿ ಅಜ್ಞಾನದ ಭಯವನ್ನು ಹುಟ್ಟುಹಾಕುವುದಕ್ಕಿಂತ ಅದೇ ಮಗು ತನ್ನ ತೋಟದಲ್ಲಿ ಬೆಳೆಯುವ ಸಸ್ಯಗಳ ಕುರಿತು ಧೈರ್ಯವಾಗಿ ವಿವರವಾಗಿ ತನಗೆ ತಿಳಿದದ್ದನ್ನು ಹೇಳುವುದು ಮಿಗಿಲು ಅಲ್ಲವೇ?
SHAMNTI-3   ಈ ಎಲ್ಲ ಪ್ರಕ್ರಿಯೆಗಳು ಬಂದು ಮುಟ್ಟಿದ್ದು ಶಾಮಂತಿ ಪುಸ್ತಕ ಪ್ರಕಟಣೆಯ ಹಂತಕ್ಕೆ. ಈ ದಾರಿಯ ಒಂದೊಂದು ಹೆಜ್ಜೆಗಳು ಇನ್ನೊಂದೆರಡು ಹೆಜ್ಜೆಗಳನ್ನು ಹೆಚ್ಚಿಗೆ ಹಾಕಲು ಪ್ರೇರೇಪಿಸಿವೆ. 2010 ರಲ್ಲಿ ಮೊದಲನೇ ಶಾಮಂತಿ ಪ್ರಕಟಣೆಯಾದಾಗ ಅದೊಂದು ಹೆರಿಗೆಯಂತೆ ಎಲ್ಲ ನೋವು ಹಾಗೂ ತೃಪ್ತಿಗಳನ್ನು ನೀಡಿತು. ಕೋಟಗಾನಹಳ್ಳಿ ರಾಮಯ್ಯನವರ ಪ್ರೀತಿ ಹಾಗೂ ಪ್ರೋತ್ಸಾಹ ಪೂರ್ವಕ ಮುನ್ನುಡಿ ಈ ಮೊದಲ ಸಂಚಿಕೆಯನ್ನು ಗಟ್ಟಿಗೊಳಿಸಿತು.  ಇದರೊಂದಿಗೆ ನಮ್ಮ ಶಾಲಾ ಬಳಗದ ಎಚ್. ಮುನಿಯಪ್ಪ, ಎಂ.ದೇವರಾಜ್, ಎಚ್.ಬಿ. ಮಂಜುನಾಥ್, ಕೆ.ಶಿವಶಂಕರ್, ಜೆ. ಶ್ರೀನಿವಾಸ್, ಛಾಯಾದೇವಿ, ಟಿ.ಜೆ. ಸುನೀತ, ವಿದ್ಯಾಲಕ್ಷ್ಮಿ, ಪದ್ಮಾವತಿ ಇವರುಗಳ ಸಾಂಘಿಕ ಸಹಕಾರ ಹಾಗೂ ನಮ್ಮೂರಿನ ಸ್ನೇಹ ಯುವಕರ ಬಳಗವೇ `ಸ್ನೇಹ ಪ್ರಕಾಶನ’ವಾಗಿ ಶಾಮಂತಿಗೆ ನೀಡಿದ ಒತ್ತಾಸೆ ಮರೆಯಲಾರದ್ದು.
   ಹೀಗೆ ಶುರುವಾಗಿ ಈಗ ಶಾಮಂತಿ 4 ಪ್ರಕಟವಾಗಿದೆ. ನಾಡಿನ ಹಲವು ಸಹೃದಯರು ಈ ಮಕ್ಕಳ ಪುಸ್ತಕವನ್ನು ಆದರಿಸಿದ್ದಾರೆ. ಒಪ್ಪಿಕೊಂಡಿದ್ದಾರೆ. ಈ ದಿಕ್ಕಿನಲ್ಲಿನ ಹೆಜ್ಜೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅವರೆಲ್ಲರಿಗೂ ಶರಣು
-ಎಸ್. ಕಲಾಧರ್, ಸಂಪಾದಕರು, ಶಾಮಂತಿ