ಶರವೇಗದ ಕಾಲಕ್ಕೆ ಸಾವಧಾನದ ಓದು–ಎಚ್.ಆರ್.ರಮೇಶ

[20-10-2018 ರಂದು ಪ್ರಜಾವಾಣಿಯಲ್ಲಿ ಮಲೆಗಳಲ್ಲಿ ಮದುಮಗಳು ಕುರಿತು ಬರೆದ, ದೇವನೂರರ ಲೇಖನಕ್ಕೆ ಎಚ್.ಆರ್.ರಮೇಶ ಅವರ ಪ್ರತಿಕ್ರಿಯೆ.]

ದೇವನೂರು ಮಾತಾಡುತ್ತಿದ್ದಾರೆಂದರೆ ಮೈ ಮತ್ತು ಮನಸ್ಸನ್ನು ಅಲರ್ಟ್ ಮಾಡಿಕೊಳ್ಳಬೇಕು. ಯಾಕಂದರೆ ಅಕ್ಕಪಕ್ಕದವರು ಯಾರಾದರು ಮಾತಾಡಿ, ಆ ಸದ್ದಿನಲ್ಲಿ ಇವರ ಯಾವುದಾದರು ಒಂದು ಶಬ್ದ ಮಿಸ್ಸಾಗಿಬಿಡುತ್ತೇನೋ ಎನ್ನುವ ಭಾವನೆ. ಅವರ ಯಾವುದಾದರು ಹೊಸ ಬರಹ ಪತ್ರಿಕೆಗಳಲ್ಲಿ ಕಾಣಿಸಿಕೊಂಡರೆ ಮಿಂಚಂತೆ ಏನೋ ಒಂಥರ ಝಲ್ಲೆನ್ನುವ ಅನುಭವವಾಗುತ್ತದೆ. ಅವರ ಮಾತುಗಳು ಒಂದು ಸೋಜಿಗ. ಅವರ ಬರಹ ಒಂದು ಥರದ ಬೆರಗು. ಅಂದರೆ ಮೈ ಮರೆಸುವಂತದ್ದಲ್ಲ; ಬದಲಿಗೆ, ನಮ್ಮ ಪ್ರಜ್ಞೆಯನ್ನು ಜಾಗೃತಗೊಳಿಸುವಂತದ್ದು.
20-10-2018ರ ಪ್ರಜಾವಾಣಿಯನ್ನು ತಿರುವುಹಾಕುವಾಗ ಸೆಂಟರ್ ಪೇಜಿನಲ್ಲಿ ದೇವನೂರು ಅವರ ಫೋಟೋ ಕಂಡಿತು. ಮತ್ತೊಮ್ಮೆ ನೋಡಿ ಕನ್‍ಫರ್ಮ್ ಮಾಡಿಕೊಂಡೆ. ಎಂಥ ಚೆಂದದ ಬರವಣಿಗೆ, ಕನ್ನಡದ ಮೌಂಟ್ ಎವರೆಸ್ಟ್ ಮಲೆಗಳಲ್ಲಿ ಮದುಮಗಳು ಮೇಲೆ! ಸದ್ಯದ ಪ್ರಕ್ಷುಬ್ಧ ಭಾರತೀಯ ಸನ್ನಿವೇಶದಲ್ಲಿ ತಮ್ಮ ಬರವಣಿಗೆಯ ಉದ್ದಕ್ಕು ಕೃತಿಯು ಬಿಚ್ಚುಕೊಳ್ಳುವ ಮತ್ತು ಅವಿಸಿಟ್ಟುಕೊಳ್ಳುವ ಅರ್ಥ ಸಾಧ್ಯತೆಗಳನ್ನು ತುಂಬಾ ಸೂಕ್ಷ್ಮವಾಗಿ ಗ್ರಹಿಸಿ ದೇವನೂರು ಅವರು ಬರೆದಿದ್ದಾರೆ. ವಿಮರ್ಶೆ ಬರಲ್ಲ ಎಂದು ಮೊದಲಿಗೇ ವಿನಯಪೂರ್ವಕವಾಗಿ ಹೇಳಿಕೊಂಡು ತಮ್ಮ ಹರಿತವಾದ ಗ್ರಹಿಕೆಯಲ್ಲಿ ಈ ಕೃತಿಗೆ ಹೊಸದಾದ ವಿಮರ್ಶೆಯನ್ನು ವಿಶ್ವವಿದ್ಯಾಲಯದಲ್ಲಿ ಜಿಡ್ಡುಗಟ್ಟಿರುವ ಇಂಗ್ಲಿಶ್ ಪ್ರೊಫೆಸರ್‍ಗಳು ನಾಚಿಕೊಳ್ಳುವಂತೆ ಮತ್ತು ದಂಗಾಗುವಂತೆ ವಿಶ್ವದ ಶ್ರೇಷ್ಠ ಕೃತಿಗಳ ಜೊತೆಗೆ ಇದನ್ನು ಇಟ್ಟು ಓದಿರುವುದು ಹೊಸ ತಲೆಮಾರಿಗೆ ಉತ್ತೇಜನಕಾರಿಯಾಗಿದೆ. ಕನ್ನಡದ ಲಡ್ಡುಹಿಡಿದಿರುವ ಭಾರತೀಯ ಕಾವ್ಯಮೀಮಾಂಸೆಯನ್ನು ಅರೆದು ಕುಡಿದಿರುವ ಚಿಂತಕರಿಗೆ ಕಾಣದಂತಹ ಅನೇಕ ಸೂಕ್ಷ್ಮ ಒಳನೋಟಗಳನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ತುಂಬಾ ಆಪ್ತವೆನ್ನುವ ಹಾಗೆ ಬರೆದಿದ್ದಾರೆ. ಮತ್ತು ಕೃತಿಯ ಮೌಲ್ಯವನ್ನು ಹೆಚ್ಚಿಸಿದ್ದಾರೆ.
ಫೇಸ್‍ಬುಕ್ ಮತ್ತು ವಾಟ್ಸಾಪ್‍ಗಳಲ್ಲಿಯೇ ಮುಳುಗಿಹೋಗಿರುವ ನಮ್ಮ ಕಾಲದ ತರುಣ ತರುಣಿಯರಿಗೆ ಈ ಪುಟ್ಟ ಬರಹ ‘ಮಲೆಗಳಲ್ಲಿ ಮದುಮಗಳು’ವಿನಲ್ಲಿ ಕಳೆದು ಹೋಗಲು ಆಹ್ವಾನಿಸುವಂತಿದೆ. ‘ಕಾದಂಬರಿ’ ಎನ್ನುವ ಪರಿಕಲ್ಪನೆ ಯೂರೋಪ್ ಪ್ರಣೀತವಾಗಿದ್ದರೂ ಆ ಎಲ್ಲ ವ್ಯಾಖ್ಯಾನಗಳನ್ನು ರಷ್ಯನ್ ಕಾದಂಬರಿಗಳು ಮತ್ತು ನಮ್ಮ ಮಲೆಗಳಲ್ಲಿ ಮದುಮಗಳು ಹೇಗೆಲ್ಲ ಛೇಧಿಸಿ ಅದನ್ನು ಹೊಸ ನೆಲೆಗಟ್ಟಿನಲ್ಲಿ ನೋಡಬೇಕೆಂದು ತೋರಿಸಿಕೊಟ್ಟಿರುವುದನ್ನು ತಮ್ಮ ಬರಹದಲ್ಲಿ ಉದಾಹರಣೆ ಸಮೇತ ದೇವನೂರರು ಸ್ವೋಪಜ್ಞವಾಗಿ ಚರ್ಚಿಸುತ್ತಾರೆ. ನಿಜವಾದ ಸಾಹಿತ್ಯ ಕೃತಿಗಳು ಹೇಗೆ ಭಿನ್ನವಾಗಿ ನಿಲ್ಲುತ್ತವೆ ಎನ್ನುವುದನ್ನು ಪತ್ತೆದಾರಿ ಕಾದಂಬರಿಯ ಪಕ್ಕದಲ್ಲಿಟ್ಟು ನೋಡುವುದು ಗಮನಸೆಳೆಯುತ್ತದೆ. ಪತ್ತೆದಾರಿ ಕಾದಂಬರಿಕಾರನಿಗೆ ಸಿದ್ಧ ವಸ್ತುವೆಂಬುದು ಈಗಾಗಲೇ ಇದೆ. ಆದರೆ ಇಲ್ಲಿ ಮಲೆಗಳಲ್ಲಿ ಮದುಮಗಳು ಕಾದಂಬರಿಕಾರನಿಗೆ ಅಂತಹದ್ದು ಯಾವುದೂ ಇಲ್ಲ. ಬದಲಿಗೆ, ನಿಧಾನವಾಗಿ ಹರಿಯುತ್ತಿರುವ ಬದುಕೇ ವಸ್ತು ಎಂಬುದನ್ನು ಕಂಪೇರಿಟಿವ್ ವಿಶ್ಲೇಷಣೆ ಮಾಡುತ್ತಾರೆ.
ಇಲ್ಲಿ ತಕ್ಷಣಕ್ಕೆ ನನಗೆ ನೆನಪಾಗುವುದು ಕುಸುಮಬಾಲೆಯ ಮೇಲೆ ಇರುವ ಒಂದು ಪುಟ್ಟ ಟೀಕೆ ಅಥವಾ ಆರೋಪ. ಅದು bad faith ಎನ್ನುವ ಮಾತು. ಅಂದರೆ, ಕುಸುಮಬಾಲೆಯ ಕಾದಂಬರಿಕಾರನಿಗೆ ಈಗಾಗಲೇ ಸಿದ್ದ ಕತೆಯೊಂದು ಗೊತ್ತಿದೆ, ಅದನ್ನೇ ಹೇಳುತ್ತಿದ್ದಾನೆ ಎನ್ನವುದು. ಕತೆ ಗೊತ್ತಿದ್ದರೂ, ಅದು ನಡೆದು ಹೋಗಿರುವ ದಾರಿ, ಸಾಗಿರುವ ಅನೂಹ್ಯ ತಿರುವುಗಳು, ಎದುರಾಗಿರುವ ಸನ್ನಿವೇಶಗಳು, ನಿರೂಪಿಸಿರುವ ನಿರೂಪಣೆ, ವಾಸ್ತವ ಬದುಕಿನ ಜೊತೆ ಬೆರೆತಿರುವ ಪುರಾಣದ ವಾಸನೆ, ರೂಪುಗೊಂಡಿರುವ ಮೌಲ್ಯಗಳು, ಒಡಮೂಡಿರುವ ಪಾತ್ರಗಳು- ಇವೆಲ್ಲ ಈಗಾಗಲೇ ಸಿದ್ದಗೊಂಡಿಲ್ಲ! ಅವೆಲ್ಲ ನಿರೂಪಣಾ ಹಾದಿಯಲ್ಲಿ ಸಿಕ್ಕಿರುವಂತವು. ಹಾಗಾಗಿ ಅದನ್ನು ಬ್ಯಾಡ್ ಫೇತ್ ಎಂದು ಕರೆಯಲು ಆಗುವುದಿಲ್ಲ.
ಶೇಕ್ಸ್ ಪಿಯರ್ ನ  ಎಲ್ಲ ನಾಟಕಗಳು ಈಗಾಗಲೇ ಸಿದ್ದಗೊಂಡಿರುವ ಕತೆಗಳೇ ಅಲ್ಲವೇ? ಆದರೆ ಅವನ್ನು ಓದುವಾಗ ಇರುವ ಕತೆಗಳು ನೆನಪಿಗೆ ಬರದ ಹಾಗೆ ಶೇಕ್ಸ್ ಪಿಯರ್ ಬರೆದಿದ್ದಾನೆ. ಹಾಗಾಗಿಯೇ ಮೇಲೆ ಹೇಳಿದಂತೆ ಈ ಕಾಲದ ತರುಣ ತರುಣಿಯರಿಗೆ ಕೇವಲ ವಾಟ್ಸಾಪ್ ಮತ್ತು ಫೇಸ್‍ಬುಕ್‍ನಲ್ಲಿ ಕಳೆದು ಹೋಗದೆ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಓದುವುದರ ಮೂಲಕ ಬೆಟ್ಟದಷ್ಟು ಆತ್ಮವಿಶ್ವಾಸ ಮತ್ತು ಜೀವನ ಪ್ರೀತಿಯನ್ನು ತುಂಬಿಕೊಳ್ಳಲು ಆಹ್ವಾನದಂತಿದೆ ದೇವನೂರರ ಈ ಪುಟ್ಟ ಬರಹ. ಹಾಗೇನೇ, ಪ್ರಕ್ಷುಬ್ಧ ಭಾರತೀಯ ಸನ್ನಿವೇಶದಲ್ಲಿನ ಜಾತಿ, ಧರ್ಮಗಳು ವ್ರಣದಂತೆ ಕಾಡುತ್ತಿದ್ದಾವೆ. ಆ ವ್ರಣಗಳನ್ನು ವಾಸಿಮಾಡುವ ದಿವ್ಯ ಔಷಧಿ ಮಲೆಗಳಲ್ಲಿ ಮದುಮಗಳುವಿನಂತಹ ಕೃತಿಗಳಿಗಿದೆ. ದೇವನೂರರಿಗೆ ಒಂದು ಪ್ರೀತಿಯ ನಮಸ್ಕಾರ ಮತ್ತು ಪ್ರಜಾವಾಣಿಗೆ ಕೃತಜ್ಞತೆಗಳು ಈ ಬರಹವನ್ನು ನಮ್ಮ ಕೈಗಳಿಗೆ ಇಟ್ಟದ್ದಕ್ಕೆ. ಗೊತ್ತು ಗುರಿಯಿಲ್ಲದೆ ಒಂದೇ ಸಮನೆ ಓಡುತ್ತಿರುವ ಈ ಕಾಲದ ಸಮಾಜದಲ್ಲಿ ‘ಇಲ್ಲಿ ಅವಸರವು ಸಾವಧಾನದ ಬೆನ್ನಹತ್ತಿದೆ’ ಎನ್ನುವ ಮಲೆಗಳಲ್ಲಿ ಮದುಮಗಳುವಿನ ಆರಂಭಿಕ ಸಾಲುಗಳು ನೆನಪಾಗುತ್ತವೆ.