ವ್ಯವಸ್ಥೆ ವಿರೋಧಿ ದೃಷ್ಟಿಗೆ ಸಮುದಾಯ ಪ್ರಜ್ಞೆಯ ಬೆಳಕು

21.4.2019ರ ಸಂಯುಕ್ತ ಕರ್ನಾಟಕದಲ್ಲಿ ದೇವನೂರ ಮಹಾದೇವ ಅವರ ಸಂದರ್ಶನ -ಡಾ.ಎಸ್ ತುಕಾರಾಂ ಅವರಿಂದ


* ನಿಮ್ಮ ಸ್ವರಾಜ್ ಇಂಡಿಯಾ ಪಕ್ಷ ಲೋಕಸಭೆಗೆ ರಾಜ್ಯದಲ್ಲಿ ಯಾವ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿಲ್ಲವಲ್ಲ, ಯಾಕೆ?
ರೈತ ಮತ್ತು ದಲಿತ ಸಂಘಟನೆಗಳ ಕೂಡಿಕೆಯ ಸ್ವರಾಜ್ ಇಂಡಿಯಾದ ನೆಲೆ ಇರುವುದು ಜಿಲ್ಲಾ ಪಂಚಾಯ್ತ್, ತಾಲ್ಲೂಕು ಪಂಚಾಯ್ತ್ ಕ್ಷೇತ್ರಗಳಲ್ಲಿ. ಹಾಗಾಗಿ ನಿಲ್ಲಿಸಿಲ್ಲ. ಈ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರಾಜ್ ಅವರಿಗೆ ಬೆಂಬಲ ನೀಡಿದ್ದೇವೆ.

• ಹಾಗಾದರೆ ಉಳಿದೆಡೆ ಲೋಕಸಭಾ ಕ್ಷೇತ್ರಗಳಲ್ಲಿ ನಿಮ್ಮ ಕೆಲಸ ಏನು?

ಸ್ವರಾಜ್ ಇಂಡಿಯಾ “ದೇಶಕ್ಕಾಗಿ ನಾವು” ಎಂಬ ಜಾಗೃತಿಯ ಆಂದೋಲನದ ಭಾಗವಾಗಿದೆ. ದೇಶವನ್ನು ಕಿತ್ತು ತಿನ್ನುತ್ತಿರುವ ನಿರುದ್ಯೋಗ, ತತ್ತರಿಸುತ್ತಿರುವ ಕೃಷಿ ಇತ್ಯಾದಿ ವಿಷಯಗಳನ್ನು ಮುನ್ನೆಲೆಗೆ ತಂದು ಚುನಾವಣಾ ಸಂದರ್ಭದಲ್ಲಿ ಚರ್ಚೆಯಾಗುವಂತೆ ವಾತಾವರಣ ಉಂಟುಮಾಡಿದ್ದೇವೆ. ಇದೇನು ಕಮ್ಮಿ ರಾಜಕಾರಣವಲ್ಲ!

 ನೀವು “ದೇಶಕ್ಕಾಗಿ ನಾವು” ಅನ್ನುತ್ತಿದ್ದರೆ ಬಿಜೆಪಿಯವರು “ದೇಶಕ್ಕಾಗಿ ಮೋದಿ” ಅನ್ನುತ್ತಿದ್ದಾರಲ್ಲ!
ಅವರು ಭಾವನಾತ್ಮಕ ವಿಷಯಗಳನ್ನು ಚುನಾವಣಾ ವಿಷಯವಾಗಿ ಮಾಡಲು ಪ್ರಯತ್ನಿಸಿ ವಿಫಲರಾಗಿ ದಿಕ್ಕೆಟ್ಟು ‘ಮೋದಿ ಮೋದಿ’ ಎಂದು ಕಿರುಚುತ್ತಿದ್ದಾರೆ. ಹೀಗೆ ಕಿರುಚುತ್ತಿರುವವರು ಬಹುತೇಕ ನಿರುದ್ಯೋಗಿ ಯುವಕರು. ನಿರುದ್ಯೋಗ ಕಳೆದ ನಲವತ್ತೈದು ವರ್ಷಗಳಲ್ಲಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿರಲಿಲ್ಲ ಎಂದು ಅಂಕಿಅಂಶಗಳು ಹೇಳುತ್ತವೆ. ವರ್ಷಕ್ಕೆ ಕೋಟಿಗಟ್ಟಲೆ ಉದ್ಯೋಗ ನೀಡುತ್ತೇವೆ ಎಂದು ಜನತೆಗೆ ವಚನ ನೀಡಿ ಅಧಿಕಾರಕ್ಕೆ ಬಂದ ವ್ಯಕ್ತಿಯೊಬ್ಬ ನೀಡುವುದಿರಲಿ, ಯಥಾಸ್ಥಿತಿಯನ್ನು ಉಳಿಸಿಕೊಳ್ಳಲಿಲ್ಲ. ಬದಲಾಗಿ ಉದ್ಯೋಗ ನಷ್ಟ ಮಾಡಿಬಿಟ್ಟ. ವಚನಪಾಲಕ ರಾಮನನ್ನು ಈ ವಚನ ಭ್ರಷ್ಟರು ಹೇಗೆ ಉಚ್ಚಾರಣೆ ಮಾಡುತ್ತಾರೋ ನನಗೆ ಅರ್ಥವಾಗುತ್ತಿಲ್ಲ. ಬಹುಶಃ ಆತ್ಮಸಾಕ್ಷಿ ಅಳುಕು ಇಲ್ಲದವರಿಗೆ ಇದು ಸಾಧ್ಯವಾಗಬಹುದು. ಅದಕ್ಕೇ ಬಿಜೆಪಿ ಅಧ್ಯಕ್ಷ ಅಮಿತ್ ಷಾ ತಮ್ಮನ್ನು ಅಧಿಕಾರಕ್ಕೆ ತಂದ ತಮ್ಮ ಪ್ರಣಾಳಿಕೆಯ ಚುನಾವಣಾ ಭರವಸೆಗಳನ್ನು `ಚುನಾವಣಾ ಜುಮ್ಲಾ (ಸುಳ್ಳು)’ ಎಂದು ಹೇಳುತ್ತಾರೆ. ಇದು ನಿರ್ಲಜ್ಜತೆಯ ತುಟ್ಟತುದಿ.

• ಆದರೆ ಬಿಜೆಪಿಯವರು ‘ದೇಶ ಮೊದಲು, ಪಕ್ಷ ನಂತರ, ಕೊನೆಗೆ ವ್ಯಕ್ತಿ’ ಅನ್ನುತ್ತಾರಲ್ಲ?
ಅವರ ನುಡಿ ನೋಡಬೇಡಿ, ನಡೆ ನೋಡಿ. ದೇಶದ ಸಾರ್ವಜನಿಕ ಸಂಪತ್ತನ್ನು ಮಾರುತ್ತಿರುವವರು ಯಾವ ನಾಲಿಗೆಯಲ್ಲಿ ದೇಶ ಮೊದಲು ಅನ್ನುತ್ತಿದ್ದಾರೆ? ಇದು ದೇಶವನ್ನೇ ಮಾರಿದಂತಾಗುವುದಿಲ್ಲವೇ? ಜೊತೆಗೆ ಪ್ರಧಾನ ಮಂತ್ರಿ ಮೋದಿಯವರ ಮಾತುಗಾರಿಕೆಯ ಏರಿಳಿತ, ಹಾವಭಾವ ನೋಡಿದರೆ ಏನನ್ನಿಸುತ್ತದೆ? ಇದು ಹಾರಾಜು ಹಾಕುವವರ ಹಾವಭಾವ, ಮಾತುಗಾರಿಕೆಯಂತೆ ಕಾಣುವುದಿಲ್ಲವೆ? ಇನ್ನು ಪಕ್ಷಕ್ಕೆ ಬಂದರೆ ಬಿಜೆಪಿ ಪಕ್ಷ ಎಲ್ಲಿದೆ? ಅದೊಂದು ಕೂಗುಮಾರಿ ಗುಂಪು ಮಂದೆಯಾಗಿದೆ. ಅಲ್ಲಿರುವುದು ಇಬ್ಬರೆ. ಮೂರನೆಯವರಿಗೆ ಸ್ಥಾನವಿಲ್ಲ. ಜೊತೆಗೆ ಕೇಂದ್ರ ಸಚಿವ ಸಂಪುಟವನ್ನೇ ನೋಡಿ- ಅಲ್ಲಿರುವುದು ಒಬ್ಬರೆ! ಉಳಿದ ಸಚಿವರು ಪ್ರಧಾನಮಂತ್ರಿಗಳ ಪರಿಚಾರಕರು. ಬಿಜೆಪಿಯವರು ದೇಶ ಮೊದಲು, ಪಕ್ಷ ನಂತರ, ಕೊನೆಗೆ ವ್ಯಕ್ತಿ ಅಂತಾರಲ್ಲ ಅದನ್ನು ಮೋದಿಯವರು ತಲೆಕೆಳಗೆ ಮಾಡಿಬಿಟ್ಟರು. ಈ ಸಲದ ಚುನಾವಣಾ ಪ್ರಣಾಳಿಕೆ ನೋಡಿ- ಅಲ್ಲಿ ಮೋದಿಯವರೊಬ್ಬರ ಫೋಟೋ ಮಾತ್ರವಿದೆ.

• ಅಂದರೆ ಮೋದಿಯವರು ಏಕವ್ಯಕ್ತಿ ಅಧಿಕಾರ ಕೇಂದ್ರದತ್ತ ನಡೆಯುತ್ತಿದ್ದಾರೆ ಎನ್ನುವುದು ನಿಮ್ಮ ಆರೋಪವೇ?
ಶಾಸ್ತ್ರ ಕೇಳಲೇಬೇಕಾಗಿಲ್ಲ. ಮೋದಿಯವರದು ಏಕವ್ಯಕ್ತಿ ಕೇಂದ್ರಿತ ಅಧಿಕಾರ ಅನ್ನುವ ಮಾತು ಬಿಜೆಪಿ ಪಕ್ಷದ ನಾಯಕರ ಅಸಹಾಯಕ ಪಿಸುನುಡಿಗಳು.

• ಹಾಗಾದರೆ ಈ ಹಿಂದೆ ಇಂದಿರಾಗಾಂಧಿಯವರಿಗೂ ಏಕವ್ಯಕ್ತಿ ಅಧಿಕಾರ ಕೇಂದ್ರಿತ ಎಂಬ ಆರೋಪ ಇತ್ತಲ್ಲ?
ಹೌದು ಇತ್ತು. ಆದರೆ ಈ ಇಬ್ಬರ ನಡುವೆ ಒಂದು ವ್ಯತ್ಯಾಸವಿದೆ. ಇಂದಿರಾ ಅವರ ಆಡಳಿತದಲ್ಲಿ- ಬಡವರು, ಧ್ವನಿ ಇಲ್ಲದವರು, ಅಸಹಾಯಕರು ಉಸಿರಾಡುವಂತ ಸುಧಾರಣೆಗಳನ್ನು ತಂದರು. ಆದರೆ ಮೋದಿಯವರ ಆಡಳಿತದಲ್ಲಿ ಕೆಲವೇ ಕೆಲವು ಕಾರ್ಪೋರೇಟ್ ಕಂಪನಿಗಳ ಲಕ್ಷಾಂತರ ಕೋಟಿ ರೂಪಾಯಿಗಳ ಬಂಡವಾಳ ಬೆಳವಣಿಗೆಯಾಗುವುದಕ್ಕೆ ದೇಶದ ಪ್ರಧಾನಿ ಮೋದಿಯವರು ಒಬ್ಬ ವ್ಯವಸ್ಥಾಪಕನಂತೆ ಕಾರ್ಯ ನಿರ್ವಹಿಸಿಬಿಟ್ಟರು. ಅದಕ್ಕಾಗೇ, ಮೋದಿಯವರ ‘ಮನ್ ಕಿ ಬಾತ್‍’ನಲ್ಲಿ ಅಂತ್ಯೋದಯ; ದಿಲ್ ಕಾ ಕಾಮ್‍ನಲ್ಲಿ ಉಳ್ಳವರ ಸೇವಕ’ ಎಂಬ ನಾಣ್ಣುಡಿ ಹುಟ್ಟಿಕೊಂಡಿದೆ.

• ನೀವು ವಿದ್ಯಾರ್ಥಿದೆಸೆಯಲ್ಲಿ ಲೋಹಿಯಾ ವಿಚಾರಧಾರೆಯ ಸಮಾಜವಾದಿ ಯುವಜನ ಸಭಾದಲ್ಲಿ ಇದ್ದವರು. ಲೋಹಿಯಾ ಅವರ ‘ಕಾಂಗ್ರೆಸ್ ವಿರೋಧಿ’ [Anti-Congress] ನಿಲುವಿಗೆ ಈಗ ನಿಮ್ಮ ಅಭಿಪ್ರಾಯ?
ಅಕ್ಷರ, ಪದಕ್ಕೆ ಅರ್ಥ ನೀಡಬಾರದು. ಅದರ ಆಂತರ್ಯ (Spirit) ನೋಡಬೇಕು. ಆ ಕಾಲಘಟ್ಟದಲ್ಲಿ ಲೋಹಿಯಾ ಹಾಗೂ ಅಂಬೇಡ್ಕರ್ ಅವರ ‘ಕಾಂಗ್ರೆಸ್ ವಿರೋಧಿ’ ಎಂದರೆ ಅದು ಆಂತರ್ಯದಲ್ಲಿ `ವ್ಯವಸ್ಥೆ ವಿರೋಧಿ’ [Anti- establishment] ಎಂದೇ ಅರ್ಥ. ಈ ಅರ್ಥದಲ್ಲಿ ಇಂದು ‘ವ್ಯವಸ್ಥೆ ವಿರೋಧಿ’ ನಿಲುವು ಎಂದರೆ ಏನು? ಇಂದು ಬಿಜೆಪಿ ದೇಶವನ್ನು ಆಳುತ್ತಿದೆ. ಈಗ ವ್ಯವಸ್ಥೆ ವಿರೋಧಿ ನಿಲುವು ಎಂದರೆ ಅದು ಬಿಜೆಪಿ ವಿರೋಧಿ ನಿಲುವು ಎಂದೇ ಆಗುತ್ತದೆ. ಸಮಾಜದ ಸಾಮರಸ್ಯ ಮತ್ತು ಸಮಾನತೆಗಾಗಿ ಅಂದರೆ ಮುಂಚಲನೆಗಾಗಿ ಬದಲಾವಣೆ ಬೇಕೆಂದಿದ್ದರೆ ಸಮುದಾಯ ಪ್ರಜ್ಞೆ ಯಾವಾಗಲೂ ವ್ಯವಸ್ಥೆ ವಿರೋಧಿ ನಿಲುವನ್ನು ಜಾಗೃತವಾಗಿರಿಸಿಕೊಂಡಿರಬೇಕಾಗುತ್ತದೆ.