ವಿಜ್ಞಾನಲೋಕದ ವಿಜೃಂಭಿತ ತಾರೆ ಸ್ಟೀಫನ್ ಹಾಕಿಂಗ್-ನಾಗೇಶ ಹೆಗಡೆ

                                                  
15 Mar, 2018

ಗೆಲಿಲಿಯೊನ ಮುನ್ನೂರನೇ ಪುಣ್ಯತಿಥಿಯ ದಿನವೇ ಜನಿಸಿದ ಸ್ಟೀಫನ್ ಹಾಕಿಂಗ್ ಬದುಕಿನುದ್ದಕ್ಕೂ ನಾನಾ ಬಗೆಯ ಅಚ್ಚರಿಗಳಿಗೆ ಕಾರಣರಾಗುತ್ತ ನಿನ್ನೆ, ಐನ್ ಸ್ಟೀನ್ ಹುಟ್ಟಿದ ದಿನವೇ ನಿಧನರಾದರು. ಗಾಲಿಕುರ್ಚಿಯ ಮೇಲೆ ಮುದುಡಿ ಕೂತೇ ಭೂಮಿಯಾಚಿನ ತಾರಾಲೋಕದ ಬಗ್ಗೆ ಜನಸಾಮಾನ್ಯರಲ್ಲಿ ಅಸಾಮಾನ್ಯ ಕೌತುಕವನ್ನೂ ವಿಜ್ಞಾನಿಗಳಲ್ಲಿ ಅತಿ ಹೆಚ್ಚು ವಿವಾದಗಳನ್ನೂ ಹುಟ್ಟು ಹಾಕುತ್ತ ವಿಜ್ಞಾನಲೋಕದ ಅಪ್ರತಿಮ ತಾರೆಯಾಗಿಯೇ ಮರೆಯಾದರು.

ಆಪಾದಮಸ್ತಕ ಅಂಗವಿಕಲತೆಯಲ್ಲೂ ಇವರು ಬಾಹ್ಯವಿಶ್ವದ ವಿದ್ಯಮಾನಗಳ ಕುರಿತು ಸಾಮಾನ್ಯರ ಊಹೆಗೂ ನಿಲುಕದಂಥ ಬಿಗ್ ಬ್ಯಾಂಗ್ ಥಿಯರಿ, ಕಪ್ಪುರಂಧ್ರದ ವಿಕಿರಣ, ಸಾಪೇಕ್ಷ ಸಿದ್ಧಾಂತ, ಸುರಂಗಲೋಕ, ವಿಶ್ವದ ಅವಸಾನ, ಮುಂತಾದ ಪರಿಕಲ್ಪನೆಗಳ ಬಗ್ಗೆ ಮಿದುಳಿನಲ್ಲಿಯೇ ಲೆಕ್ಕಾಚಾರ ಮಾಡಿ ಇತರ ಭೌತವಿಜ್ಞಾನಿಗಳ ತರ್ಕಗಳನ್ನು ತಲೆಕೆಳಗು ಮಾಡುತ್ತಿದ್ದರು. ಬಾಹ್ಯಾಕಾಶದ ತೂಕರಹಿತ ಸ್ಥಿತಿಯಲ್ಲಿ ತೇಲಾಡಿದರು. ಸಿನೆಮಾದಲ್ಲಿ ನಟಿಸಿದರು. ಎರಡೆರಡು ಬಾರಿ ವಿವಾಹವಾಗಿ ಎರಡನೆಯವಳಿಂದಲೂ ದೂರವಾದರು.

ರೋಬಾಟ್ ಚಾಲಿತ ಗಂಟಲಿನ ಮೂಲಕ ಗೊಗ್ಗರು ಧ್ವನಿಯಲ್ಲಿ ಬ್ರಹ್ಮಾಂಡ ಸತ್ಯಗಳನ್ನು ಅನಾವರಣ ಮಾಡುತ್ತಲೇ ವಿಜ್ಞಾನಲೋಕದ ಎದುರಾಳಿಗಳಿಗೆ ಸವಾಲು ಎಸೆಯುವ ಚುರುಕು ಬುದ್ಧಿ ಮತ್ತು ಎಣೆಯಿಲ್ಲದ ತುಂಟತನದಿಂದಾಗಿ ಇವರು ಸದಾ ಮಾಧ್ಯಮಗಳ ಕಣ್ಮಣಿಯಾಗಿದ್ದರು.

ಕಾಲೇಜು ದಿನಗಳಲ್ಲಿ ಗಣಿತದಲ್ಲಿ ಮಾತ್ರ ಚುರುಕುತನ, ಇತರೆಲ್ಲ ವಿಷಯಗಳಲ್ಲೂ ದಡ್ಡತನ ಪ್ರದರ್ಶಿಸುತ್ತ ಎಲ್ಲರಂತೆಯೇ ಕುಣಿಯುತ್ತ ಕೀಟಲೆ ಮಾಡುತ್ತಲಿದ್ದ ಇವರಿಗೆ 21ನೇ ವಯಸ್ಸಿನಲ್ಲಿ ಎಎಲ್ಎಸ್ (ಅಮಿಯೊಟ್ರೊಫಿಕ್ ಲ್ಯಾಟರಲ್ ಸ್ಕ್ಲೆರೊಸಿಸ್) ಎಂಬ ಅಪರೂಪದ ನರರೋಗ ಕಾಣಿಸಿಕೊಂಡಿತು. ಕ್ರಮೇಣ ಅಂಗಾಂಗಗಳೆಲ್ಲ ನಿಶ್ಚಲವಾಗುತ್ತ ಕೊನೆಗೆ ಹೃದಯದ ಸ್ನಾಯುಗಳಿಗೇ ಲಕ್ವ ಹೊಡೆದು ಹೆಚ್ಚೆಂದರೆ ಐದು ವರ್ಷ ಬದುಕಬಹುದೆಂದು ವೈದ್ಯರು ಹೇಳಿದ್ದರು. ಇನ್ನೇನು ಬದುಕು ಮುಗಿದೇ ಹೋಯಿತೆಂದು ಖಿನ್ನರಾಗಿ ಎರಡು ವರ್ಷ ಕಳೆಯುವುದರಲ್ಲಿ ರೋಗದ ಪ್ರಗತಿ ಅಲ್ಲಿಗೇ ನಿಂತಿತು.

ಮತ್ತೆ ಬದುಕಿನಲ್ಲಿ ಉತ್ಸಾಹ ಬಂದು ಓದಲು ಕೂತಾಗ ಖಗೋಲದ ಕಪ್ಪುರಂಧ್ರಗಳು ಇವರ ಆಸಕ್ತಿ ಕೆರಳಿಸಿದವು. ಅದರಲ್ಲಿನ ಗಣಿತಸೂತ್ರಗಳಲ್ಲಿ ಏನೋ ಐಬು ಕಂಡಿದ್ದರಿಂದ ಆ ರಂಧ್ರಗಳ ಬಗೆಗೇ ಕೇಂಬ್ರಿಜ್ ನಲ್ಲಿ ಸಂಶೋಧನೆ ಆರಂಭಿಸಿದರು. ದೊಡ್ಡ ತಾರೆಯೊಂದು ತನ್ನ ಭಾರೀ ದ್ರವ್ಯರಾಶಿಯಿಂದಾಗಿ ತನ್ನ ಮೇಲೆಯೇ ಕುಸಿದು ಬೆಳಕನ್ನೂ ಹೊರಕ್ಕೆ ಹೊಮ್ಮಿಸಲಾಗದ ವಿಲಕ್ಷಣ ಸ್ಥಿತಿಗೆ ಬಂದಾಗ ಅಲ್ಲಿ ಕಾಲ, ದೇಶ, ದಿಕ್ಕು ಎಲ್ಲವೂ ಶೂನ್ಯವಾಗಬೇಕು. ಆಗಲೂ ಅದು ವಿಕಿರಣ ಹೊಮ್ಮಿಸಲೇಬೇಕು ಎಂದು ಇವರು ಗಣಿತದ ಮೂಲಕ ವಾದಿಸಿ, ವಿವಾದಕ್ಕೆ ಸಿಲುಕಿ, ಗೆದ್ದರು.

ಹಾಗೆಯೇ ಕಪ್ಪುರಂಧ್ರದಲ್ಲಿ ಶೂನ್ಯವಾಗಿದ್ದ ಕಾಲವನ್ನು ಹಿಂದಕ್ಕೆ ತಿರುಗಿಸುತ್ತ ಬಂದರೆ ಅದು ಇಡೀ ವಿಶ್ವವನ್ನೇ ಬಿಂದುರೂಪಕ್ಕೆ, ಅಂದರೆ ಮಹಾಸ್ಫೋಟದ ಮುಂಚಿನ ಶೂನ್ಯಸ್ಥಿತಿಗೆ ತರುತ್ತದೆ ಎಂಬ ಸ್ಫೋಟಕ ಸಂಗತಿಯನ್ನು ಸೂತ್ರಗಳಲ್ಲಿ ಬಿಚ್ಚಿಟ್ಟರು. ಹಠಾತ್ತಾಗಿ ವಿಶ್ವಮಾನ್ಯ ವಿಜ್ಞಾನಿಯಾದರು. ಪ್ರೇಯಸಿ ಜೇನ್ ವೈಲ್ಡ್‌ಳನ್ನು ಲಗ್ನವಾದರು. ಸ್ವತಃ ಕುಗ್ಗಿ ಕುಗ್ಗಿ ನಿಶ್ಚಲ ಸ್ಥಿತಿಗೆ ಬರುತ್ತಿರುವಾಗ ನ್ಯೂಮೊನಿಯಾ ರೋಗಕ್ಕೆ ತುತ್ತಾದರು.

ಬದುಕಬೇಕೆಂದಿದ್ದರೆ ಗಂಟಲಲ್ಲಿದ್ದ ಧ್ವನಿಪೆಟ್ಟಿಗೆಯನ್ನು ಕಳಚಿ ಹಾಕಬೇಕೆಂದು ವೈದ್ಯರು ಹೇಳಿದರು. ಕೃತಕ ಧ್ವನಿ ಹೊಮ್ಮಿಸಲು ಇಲೆಕ್ಟ್ರಾನಿಕ್ ತಜ್ಞರು ಇವರ ಮೇಲೆ ಸಂಶೋಧನೆ ನಡೆಸುತ್ತಿದ್ದಾಗ ಇವರು ವಿಶ್ವದ ಇನ್ನಿತರ ವೈಚಿತ್ರ್ಯಗಳ ಕುರಿತು ಸಂಶೋಧನೆ ಮಾಡುತ್ತಿದ್ದರು. ಇತರ ವಿಜ್ಞಾನಿಗಳ ಪ್ರಬಂಧಗಳ ಪುಟಗಳನ್ನು ಉದ್ದ ಮೇಜಿನ ಮೇಲೆ ಸಾಲಾಗಿ ಇಟ್ಟು ಇವರನ್ನು ಓಡಾಡಿಸಲಾಗುತ್ತಿತ್ತು. ದೈಹಿಕ ಶಕ್ತಿ ಕುಂದುತ್ತ ಹೋದಂತೆಲ್ಲ, ಸ್ಮರಣಶಕ್ತಿ, ತರ್ಕಶಕ್ತಿ ಮತ್ತು ಏಕಾಗ್ರತೆ ಹೆಚ್ಚುತ್ತ ಹೋಗಿ, ಹಿಂದಿನ ಅನೇಕ ಖಗೋಲ ತಜ್ಞರ ವಾದಗಳನ್ನು ಇವರು ಖಂಡಿಸುತ್ತ ಹೋದರು.

ಎಲ್ಲರಿಗೂ ಸುಲಭದಲ್ಲಿ ಅರ್ಥವಾಗುವಂತೆ ಇವರು ಬರೆದ ‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್’ ಪುಸ್ತಕದ ಎರಡೂವರೆ ಕೋಟಿ ಪ್ರತಿಗಳು ಖಾಲಿಯಾದವು. ಮೂವರು ಮಕ್ಕಳಿಗೆ ಜನ್ಮಕೊಟ್ಟ ಪತ್ನಿಗೆ ವಿಚ್ಛೇದನ ನೀಡಿ ಹಾಕಿಂಗ್ ತನಗೆ ಶುಷ್ರೂಷಕಿಯಾಗಿದ್ದ ಇಲಾನಿ ಮೇಸನ್ ಎಂಬಾಕೆಯ ಕೈಹಿಡಿದರು. ಅವಳೊಂದಿಗೆ ಹನ್ನೊಂದು ವರ್ಷ ಬಾಳುವೆ ನಡೆಸಿ 2006ರಲ್ಲಿ ಅವಳಿಂದಲೂ ದೂರವಾದರು

ನಕ್ಷತ್ರ ಲೋಕದ ವಿದ್ಯಮಾನಗಳ ಬಗ್ಗೆ ಏಳು ಹೊಸ ಸಿದ್ಧಾಂತಗಳನ್ನು ಮಂಡಿಸಿದ ಇವರಿಗೆ ಪ್ರಪಂಚದ ಎಲ್ಲ ಕಡೆಗಳಿಂದಲೂ ಉಪನ್ಯಾಸಕ್ಕೆ ಆಹ್ವಾನ ಬರುತ್ತಿದ್ದವು. ಸೈದ್ಧಾಂತಿಕ ಭೌತ ವಿಜ್ಞಾನಕ್ಕೆ ಮೀಸಲಿದ್ದ ಎಲ್ಲ ಪ್ರತಿಷ್ಠಿತ ಪ್ರಶಸ್ತಿಗಳೂ ಇವರಿಗೆ ಲಭಿಸಿದವು.ಕಪ್ಪುರಂಧ್ರಗಳಿಂದ ವಿಕಿ
ರಣ ಹೊಮ್ಮುತ್ತದೆ ಎಂಬ ಇವರ ಸಿದ್ಧಾಂತಕ್ಕೆ ಪುರಾವೆಗಳೇ ಇಲ್ಲವಾದ್ದರಿಂದ ನೊಬೆಲ್ ಪ್ರಶಸ್ತಿ ಮಾತ್ರ ಸಿಗಲಿಲ್ಲ. ಈಗಿರುವ ಭೌತವಿಜ್ಞಾನಿಗಳಲ್ಲಿ ಅತ್ಯಂತ ಪ್ರತಿಭಾನ್ವಿತರ ಪೈಕಿ ಮೊದಲ ಹತ್ತು ಸ್ಥಾನಗಳಲ್ಲಿ ಹಾಕಿಂಗ್ ಬರದಿದ್ದರೂ ಇವರ ತಾರಾಖ್ಯಾತಿ ಅದೆಷ್ಟು ಎತ್ತರಕ್ಕೇರಿ
ತ್ತೆಂದರೆ ಜಗತ್ತಿನ ಇತರೆಲ್ಲ ತಾರಾನಟರೂ ಕ್ರೀಡಾಪಟುಗಳೂ, ರಾಜಕೀಯ ಮುತ್ಸದ್ದಿಗಳೂ ಇವರೊಂದಿಗೆ ಫೋಟೊ ತೆಗೆಸಿಕೊಳ್ಳಬಯಸುತ್ತಿದ್ದರು.

2001ರಲ್ಲಿ ಸ್ಟ್ರಿಂಗ್ ಥಿಯರಿ ಕುರಿತು ಮುಂಬೈಯಲ್ಲಿ ಏರ್ಪಡಿಸಲಾಗಿದ್ದ ವಿಶ್ವಸಮ್ಮೇಳನಕ್ಕೆ ಬಂದಿದ್ದ ಇವರಿಗಾಗಿ ವಿಶೇಷ ವಾಹನವನ್ನು ಸಜ್ಜುಪಡಿಸಲಾಗಿತ್ತು. ದಿಲ್ಲಿಗೂ ಹೋಗಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರನ್ನು ಭೇಟಿಯಾಗಿ, ಭಾರತದ ಗಣಿತ ಪ್ರತಿಭೆಗಳನ್ನು ಶ್ಲಾಘಿಸಿ, ಜಂತರ್ ಮಂತರ್ ಮತ್ತು ಕುತುಬ್ ಮಿನಾರ್ ನೋಡಿ ಬಂದ ಹಾಕಿಂಗ್‌ಗೆ ತಾಜಮಹಲ್ ನೋಡುವ ಬಯಕೆ ಇತ್ತು. ಆದರೆ ಅಲ್ಲಿ ಇವರನ್ನು ವಿಮಾನದಿಂದ ಇಳಿಸುವ ಸೌಲಭ್ಯ ಇಲ್ಲವಾದ್ದರಿಂದ ಹಾಗೆಯೇ ಮರಳಬೇಕಾಯಿತು

ಮಾಧ್ಯಮಗಳ ಕಣ್ಮಣಿಯಾಗಿದ್ದ ಅವರು ಮನುಕುಲದ ಭವಿಷ್ಯದ ಬಗ್ಗೆ, ದೇವರ ಬಗ್ಗೆ, ಭವಿಷ್ಯದಲ್ಲಿ ರೋಬಾಟ್ ಗಳು ಎಲ್ಲವನ್ನೂ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಬಗ್ಗೆ, ಅನ್ಯಲೋಕದ ಜೀವಿಗಳು ದಾಳಿ ಇಡುವ ಬಗ್ಗೆ ಏನೇ ಹೇಳಿಕೆ ನೀಡಿದರೂ ಅದು ಜಾಗತಿಕ ಸುದ್ದಿಯಾಗುತ್ತಿತ್ತು. ಹವಾಗುಣ ಬದಲಾವಣೆ, ತಂತ್ರಜ್ಞಾನದ ಪರಾಕಾಷ್ಠೆ ಮುಂತಾದ ಸಂಗತಿಗಳಿಂದಾಗಿ ಮನುಕುಲ ತನ್ನಂತಾನೇ ನಾಶ ಮಾಡಿಕೊಳ್ಳುವ ಮುನ್ನವೇ ನಾವು ಬೇರೆ ಗ್ರಹಗಳಲ್ಲಿ ವಸಾಹತು ಆರಂಭಿಸಬೇಕು ಎನ್ನುತ್ತಿದ್ದರು.

ಭೌತವಿಜ್ಞಾನದ ಪ್ರಮುಖ ವಕ್ತಾರರಾಗಿ, ಖಗೋಲ ವಿಜ್ಞಾನವನ್ನು ಜನಪ್ರಿಯಗೊಳಿಸಿದ ಹೀರೋ ಆಗಿ, ಮನುಕುಲದ ಇಂದು ನಾಳೆಯ ಬಗ್ಗೆ ನಮ್ಮನ್ನೆಲ್ಲ ಚಿಂತನೆಗೆ ಹಚ್ಚಿದ ವಿಶ್ವಮಾನವರಾಗಿ ಸ್ಟೀಫನ್ ಹಾಕಿಂಗ್ ಎಂಬ ವಿಜೃಂಭಿತ ತಾರೆಯೊಂದು ಇದೀಗ ತಾರಾಕಣಗಳಲ್ಲಿ ಲೀನವಾಯಿತು.