ಲೋಕಜ್ಞಾನ ಸಂಪಾದಕೀಯ-ನಿತ್ಯಾನಂದ ಬಿ.ಶೆಟ್ಟಿ


ಈ ಪತ್ರಿಕೆಯನ್ನೂ ಒಳಗೊಂಡು ಹೇಳುವುದಾದರೆ ವಿಶ್ವವಿದ್ಯಾನಿಲಯವೂ ಸೇರಿದಂತೆ ನಮ್ಮ ಅಕಾಡೆಮಿಕ್ ಜಗತ್ತು ಹೊಂದಿರುವ ಬೌದ್ಧಿಕ ತಿಳುವಳಿಕೆಗೂ ಜನಸಾಮಾನ್ಯರ ನಡುವಿನ ಜನಪ್ರಿಯ ನಂಬಿಕೆಗೂ ಪರಸ್ಪರ ಭೇಟಿಯಾಗಲೂ ಸಾಧ್ಯವಿಲ್ಲದಂತಹ ಬಹಳ ದೊಡ್ಡ ಅಂತರವಿದೆ. ಉದಾಹರಣೆಗೆ ಭಾರತವನ್ನು ಒಂದು ದೇಶವನ್ನಾಗಿ ಪ್ರೀತಿಸುವವರೆಲ್ಲರೂ ರಾಷ್ಟ್ರ-ರಾಷ್ಟ್ರೀಯತೆ ಇತ್ಯಾದಿ ಪರಿಕಲ್ಪನೆಗಳನ್ನು ಅರಿತುಕೊಂಡು ದೇಶವನ್ನು ಪ್ರೀತಿಸುತ್ತಿಲ್ಲ. ಈ ಊರು ನಮ್ಮದು, ಹಾಗಾಗಿ ಈ ಊರನ್ನು ಹೊಂದಿರುವ ಈ ನಾಡೂ ನಮ್ಮದು ಎಂಬಿತ್ಯಾದಿ ಅನ್ವಯ ಮತ್ತು ದೂರಾನ್ವಯಗಳಿಂದ ಅವರು ಈ ದೇಶವನ್ನು ಪ್ರೀತಿಸುತ್ತಾರೆ. ಆದರೆ ದೇಶ ಮತ್ತು ಪ್ರದೇಶಗಳ ಸಂಬಂಧ ಹಳಸಿಕೊಂಡಾಗ ಪ್ರದೇಶವಾಸಿಗಳ ದೇಶಾಭಿಮಾನದಲ್ಲಿ ವ್ಯತ್ಯಯವುಂಟಾಗಬಹುದು. ಅದು ಸಹಜವಾದಂತಹ ಒಂದು ಪ್ರಕ್ರಿಯೆ. ಭಾಷಿಕ-ಪ್ರಾದೇಶಿಕತೆಗಳ ಪ್ರತಿನಿಧೀಕರಣಗಳು ಏಕೀಕರಣವನ್ನು ಭಂಗಗೊಳಿಸುವಂತಹ ವಿದ್ಯಮಾನಗಳಲ್ಲ. ಅವು ದೇಶ-ಪ್ರದೇಶಗಳ ಸಂಬಂಧವನ್ನು ಹೊಚ್ಚಹೊಸದಾಗಿ ನೋಡುವಂತೆ ನಮ್ಮನ್ನು ಒತ್ತಾಯಿಸುತ್ತವೆ ಎನ್ನುವುದನ್ನು ಒಂದು ಬಗೆಯ ಬೌದ್ಧಿಕ ತಿಳುವಳಿಕೆಯಾಗಿ ಹೊಂದಿದ್ದೇವೆಯೇ ಹೊರತು ನಮಗಿನ್ನೂ ಅದನ್ನು ಜನಸಾಮಾನ್ಯರ ನಂಬಿಕೆಯ ಭಾಗವನ್ನಾಗಿಸಲು ಸಾಧ್ಯವಾಗಿಲ್ಲ.
ಜನಪ್ರಿಯ ನಂಬಿಕೆಗಳು ಬಹಳ ಬಾರಿ ಸ್ಥೂಲವಾಗಿ ಹಾಗೂ ಸಡಿಲವಾಗಿ ಕಟ್ಟಲ್ಪಟ್ಟಿದ್ದರೂ ಅದು ಒಂದು ಇಡಿಯಾಗಿ ಏಕಶಿಲಾಕೃತಿಯ ರೂಪದಲ್ಲಿ ನಮಗೆದುರಾಗುತ್ತದೆ. ಉದಾಹರಣೆಗೆ ಹಿಂದೂ ಮುಸ್ಲಿಮ್ ಇತ್ಯಾದಿ ಹೆಸರುಗಳಿಂದ ನಾವು ಕರೆಯುತ್ತಿರುವ ಧರ್ಮಗಳು. ಅವು ಯಾವ ಅರ್ಥದಲ್ಲೂ ಮತ್ತು ಯಾವ ನೆಲೆಯಲ್ಲೂ ಏಕಘನಾಕೃತಿಯಾಗಿ ಇಲ್ಲ. ಅದರೊಳಗೆ ಅನೇಕ ಪ್ರತಿಷೇಧಗಳಿವೆ. ಆದರೆ ಈ ವಾಸ್ತವ ಜನಪ್ರಿಯ ನಂಬಿಕೆಗೆ ಬೇಕಾಗಿಲ್ಲ. ಜನಪ್ರಿಯ ನಂಬಿಕೆಯ ಮುಂದೆ ಇವೆಲ್ಲವೂ ಒಂದು ದೊಡ್ಡ ಇಡಿಯಾಗಿ ಮತ್ತು ಸುಂದರವಾಗಿ ಅಥವ ಭಯಾನಕವಾಗಿ ಕಾಣುತ್ತವೆ. ಹಾಗಾಗಿ ನಿರ್ದಿಷ್ಟ ಧಾರ್ಮಿಕತೆಯನ್ನು ಪ್ರತಿನಿಧಿಸುತ್ತವೆ ಎಂದು ಭಾವಿಸಿರುವ ಬಣ್ಣಗಳಾಗಲೀ, ಓಂ ಚಿಹ್ನೆಗಳಾಗಲೀ ಹೇಗೆ ನಮ್ಮವು ಆದವು.? ಇವು ನಿಜಕ್ಕೂ ನಮ್ಮವೇನಾ..? ನಮ್ಮದು ಅಂದರೆ ಏನು..? ಇತ್ಯಾದಿ ಮೂಲಜಿಜ್ಞಾಸಿಕ ಪ್ರಶ್ನೆಗಳು ಜನಪ್ರಿಯ ನಂಬಿಕೆಗಳಿಗೆ ಬೇಡ. ಜನಪ್ರಿಯ ನಂಬಿಕೆಗಳನ್ನು ಸೃಷ್ಟಿಸುವ ಶಕ್ತಿಗಳಿಗೆ ತಾವು ಸೃಷ್ಟಿಸುವ ನಂಬಿಕೆಗಳನ್ನು ಜನಜೀವನದ ಭಾಗವಾಗಿ, ಸಂಸ್ಕೃತಿಯ ಅಂಗವಾಗಿ ಮಾಡುವುದು ಹೇಗೆ, ಇದರ ಕುರಿತು ಒಂದು ಡಿಸ್ಕೋರ್ಸ್(ವಾಙ್ಮಯ) ರೂಪಿಸುವುದು ಹೇಗೆ ಎಂಬ ಚಮತ್ಕಾರಿ ವಿದ್ಯೆ ಗೊತ್ತಿದೆ. ಈ ವಿದ್ಯೆಯ ಹಿಂದೆ ಕಾರಣಗಳಿರಬೇಕಿಲ್ಲ, ಅನುಭವಗಳಿರಬೇಕಿಲ್ಲ. ರಾಜಕಾರಣ ಒಂದಿದ್ದರೆ ಸಾಕು. ಈ ಎಲ್ಲ ವಾಙ್ಮಯ ವ್ಯವಹಾರಗಳ ಹಿಂದಿನ ನಿಯಮಗಳನ್ನು ಅರಿತವರಿಗೂ ಇದನ್ನು ಒಂದು ವಾದಗ್ರಸ್ಥ ವಿಷಯವನ್ನಾಗಿ ಜನರ ಮುಂದೆ ಮಂಡಿಸುವುದು ಸಾಧ್ಯವಾಗುತ್ತಿಲ್ಲ.
ಮೇಲಿನ ಮಾತನ್ನು ಇನ್ನಷ್ಟು ವಿಷದೀಕರಿಸಲು ಆಧುನಿಕ ಭಾರತದ ರಾಜಕಾರಣದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಮುಖ ವಿದ್ಯಮಾನವಾಗಿ ಪರಿವರ್ತಿತಗೊಂಡಿರುವ ‘ಗೋ-ರಾಜಕಾರಣ’ದ ಸುತ್ತ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಬಹುದು. ಒಂದು ಚೂರು ಚರಿತ್ರೆ, ಒಂದು ಚೂರು ವಿಜ್ಞಾನ ಇನ್ನೊಂದಷ್ಟು ಪುರಾಣದ ತಿಳುವಳಿಕೆ ಇದ್ದವರಿಗೆಲ್ಲ ಗೋವಿನ ಸುತ್ತ ಇರುವ ಕತೆಗಳ ಚಾರಿತ್ರಿಕತೆ ಮತ್ತು ಅವುಗಳ ಹಿಂದಿನ ಸಾಮಾಜಿಕ-ಆರ್ಥಿಕ ಸಂದರ್ಭ ಮತ್ತು ಸಂಬಂಧ ಗೊತ್ತಿರುತ್ತದೆ. ಆದರೆ ಗೋವಿನ ಕುರಿತು ಸೃಜಿಸಲಾಗಿರುವ ಜನಪ್ರಿಯ ನಂಬಿಕೆಗೆ ಈಗ ಅದೆಂತಹ ಶಕ್ತಿ ಬಂದಿದೆಯೆಂದರೆ ಅದು ಸದರಿ ವಿಷಯದ ಸುತ್ತಲಿನ ಎಲ್ಲ ಬಗೆಯ ಸ-ಕಾರಣ ತಿಳುವಳಿಕೆಗಳನ್ನು ಬದಿಗೆ ಸರಿಸಿ ಗೋವು ಅಂದರೆ ಕಾಮಧೇನು, ಮುಕ್ಕೋಟಿ ದೇವತೆಗಳ ಆವಾಸಸ್ಥಾನ ಎಂದಷ್ಟೇ ಕಾಣುತ್ತಿದೆ. ಹಾಗಾಗಿ ಅದನ್ನು ಆಹಾರವಾಗಿ ಸ್ವೀಕರಿಸುವ ಮುಸ್ಲಿಮರೋ-ದಲಿತರೋ ದೇಶದ್ರೋಹಿಗಳೂ, ಸಂಸ್ಕೃತಿದ್ರೋಹಿಗಳೂ ಆಗಿ ಕಾಣುತ್ತಾರೆ. ಇದು ಭಾರತದಲ್ಲಿನ ಜನಪ್ರಿಯ ನಂಬಿಕೆಯ ಗೆಲುವು ಅಲ್ಲ; ಗೋವು ಎಂಬ ಪ್ರಾಣಿಯನ್ನು ಅದರ ಪವಿತ್ರೀಕೃತ ಸ್ಥಿತಿಯಿಂದ ಸ್ಥಾನಚ್ಯುತ ಮಾಡಲಿಕ್ಕಾಗದ ಅಥವಾ ಕನಿಷ್ಠ ಪಕ್ಷ ಗೋ ಆರಾಧನೆಯ ವಿಷಯವನ್ನು ಒಂದು ವಿವಾದಾಸ್ಪದವಾದ ವಿಷಯವನ್ನಾಗಿಯೂ ಪರಿವರ್ತಿಸಲಿಕ್ಕಾಗದ ಭಾರತದ ಬುದ್ಧಿಜೀವಿಗಳ ಚಿಂತನಕ್ರಮ ಮತ್ತು ನೋಟಕ್ರಮದ ಸೋಲು.
ಈ ಸೋಲನ್ನು ಒಪ್ಪಿಕೊಂಡು ಭಾರತದ ಬುದ್ಧಿಜೀವಿಗಳು ತಮ್ಮ ಸಹಜೀವಿಗಳೊಡನೆ ‘ಹರಟುವ ಭಾಷೆ’ಯೊಂದನ್ನು ಮತ್ತು ಅವಕಾಶವೊಂದನ್ನು ಸೃಜಿಸದೇ ಹೋದರೆ ಬಲುದೊಡ್ಡ ಬೌದ್ಧಿಕ ಸಂಕಟವನ್ನು ನಮ್ಮ ಅಕಾಡೆಮಿಕ್ ವಲಯ ಎದುರಿಸಬೇಕಾಗಬಹುದು.