ಲೇಖಕನ ಅಜ್ಞಾತವಾಸ – ಜಯಂತಕಾಯ್ಕಿಣಿ

bogaseyalli male
ಮುಂಬಯಿಯ ಖ್ಯಾತ ರೇಖಾಚಿತ್ರ ಕಲಾವಿದ, ಗೆಳೆಯ ಕಮಲಾಕ್ಷ ಶೆಣೈ ಹೇಳಿದ ತಮ್ಮ ಬಾಲ್ಯದ ಒಂದು ಘಟನೆ ಇಂತಿದೆ. ಅವರು ಪುಟ್ಟವರಾಗಿದ್ದಾಗ ಉಡುಪಿಗೊಮ್ಮೆ ಗಾಂಧೀಜಿ ಬಂದಿದ್ದರಂತೆ. “ಗಾಂಧೀಜಿ ಬರ್ತಾರೆ..ಗಾಂಧೀಜಿ ಬರ್ತಾರೆ… ಎಲ್ಲರೂ ಪ್ರಭಾತಫೇರಿಗೆ ಹೋಗಬೇಕು…” ಎಂದು ಮನೆಯ ಮಕ್ಕಳನ್ನೆಲ್ಲ ನಸುಕಿನ ನಾಲ್ಕಕ್ಕೇ ಎಬ್ಬಿಸಲಾಗಿತ್ತು. ಮಕ್ಕಳೆಲ್ಲ ಸ್ನಾನಕ್ಕೆ ಮುನ್ನ ಗದ್ದೆ ಬಯಲಿಗೆ ಹೋಗಿ ಸಾಲಾಗಿ ‘ಎರಡಕ್ಕೆ’ ಕೂತಿದ್ದರು. ಕಮಲಾಕ್ಷರಿಗೆ ಆಗ ಹತ್ತೋ ಹನ್ನೆರಡೋ ವಯಸ್ಸು. ಅವರ ತಮ್ಮ ಅವರಿಗಿಂತ ನಾಲ್ಕು ವರ್ಷ ಪುಟ್ಟೋನು. ಅಲ್ಲಿ ಕೂತಿದ್ದಾಗ ಕತ್ತಲಲ್ಲೇ ಎಲ್ಲರೂ ಗಾಂಧೀಜಿಯವರ ಗುಣಗಾನ ನಡೆಸಿದ್ದರು. ನಡುವೆ, ಏನೋ ಹೊಳೆದವನಂತೆ ತಮ್ಮನು “ಅಣ್ಣೋ” ಗಾಂಧೀಜಿ ಎರಡಕ್ಕೇ ಮಾಡುತ್ತಾರೋ?”ಎಂದು ಕೇಳಿದನಂತೆ. ಹೌದು ಎಂದು ತಿಳಿದಾಗ ಅವನಿಗೆಷ್ಟು ಬೇಸರವಾಯಿತೆಂದರೆ, ಅವನ ಪ್ರಭಾತಫೇರಿಯ ಆಸಕ್ತಿಯೇ ಹೊರಟುಹೋಯಿತಂತೆ.
ಪುಟ್ಟ ಮನಸ್ಸಿನ ಆ ನಿರಾಸೆ ಸಹಜವಾದದ್ದು. ಇಷ್ಟದೇವತಾ ವಿಗ್ರಹವೊಂದು ಭಗ್ನಗೊಳ್ಳುವ ನೋವು ಇದು. ನಮ್ಮಆರಾಧ್ಯ ದೇವತೆಗಳನ್ನು ನಾವು ಹೀಗೆ ಕ್ಷುದ್ರ ಲೌಕಿಕದ ಎಲ್ಲ ಅಂಶಗಳಿಂದ ಬೇರ್ಪಡಿಸಿ, ಕಲ್ಪನೆಯ ಉನ್ನತಿ ಸಿಂಹಾಸನದಲ್ಲಿಟ್ಟುಬಿಡುತ್ತೇವೆ. ಮತ್ತು ಅವರನ್ನಲ್ಲಿಟ್ಟುಕೊಂಡೇ ನಮ್ಮ ಲೌಕಿಕಕ್ಕೆ ಬೇಕಾದ ಸ್ಥೈರ್ಯವನ್ನು, ತನ್ಮಯತೆಯನ್ನು ಅವರಿಂದ ಪಡೆಯಲು ಹವಣಿಸುತ್ತೇವೆ. ಅವರು ದೂರ ನಮ್ಮ ಕೈ ಎಟುಕದಲ್ಲಿ ಮನ ಮಾತ್ರ ನಿಲುಕುವಲ್ಲಿ, ನೆನೆದಾಗೆಲ್ಲ ಅಭಯದ ಮುಗುಳ್ನಗೆ ಬೀರುತ್ತ ಇರಬೇಕು. ಮತ್ತು ನಾವಿಲ್ಲಿ ನಮ್ಮದೈನಿಕದ ಮಗ್ಗವನ್ನು ಹೊಡೆಯುತ್ತಲೇ ಇರಬೇಕು.
ಅವರನ್ನು ನಾವು ಎಷ್ಟು ಅಸಹಜ ಮೂರ್ತಿಗಳನ್ನಾಗಿಸಿ ನೋಡುತ್ತೇವೆಂದರೆ, ಅವರು ಸೀನಿದರೂ ಸಾಕು ನಮಗೆ ಮಂಕು ಕವಿಯುತ್ತದೆ. ಅವರು ಗಡ್ಡ ಮಾಡಿಕೊಳ್ಳದಿದ್ದರೆ ನಾವು ಕಾಯಿಲೆ ಬೀಳುತ್ತೇವೆ. ಅವರ ನರೆತ ಕೂದಲು ಕಂಡರೆ ನಮ್ಮ ಜೀವ ಹಣ್ಣಾಗುತ್ತದೆ. ಮುಪ್ಪು, ಕಾಯಿಲೆ, ಆಸೆ, ಲಜ್ಜೆ, ಕಾಮ, ಕ್ರೋಧ, ಮದ, ಮತ್ಸರ ಇವೆಲ್ಲವನ್ನೂ ದಾಟಿದ ದಯಾಘನರು ಅವರು. ಕ್ಷೇಮ, ಸುಭಿಕ್ಷೆಗಳ ಸ್ವರ್ಗದಲ್ಲೇ ಸದಾ ಇರುವವರು. ನಮ್ಮ ಮಾಸಿದ ಒಳ ಉಡುಪುಗಳು, ಬಿಚ್ಚಿದ್ದ ಹರುಕುಗಳು ಕಾಣದಷ್ಟು ದೂರದಲ್ಲಿರುವ ಅವರ ಬಳಿಯೇ ತೋಡಿಕೊಳ್ಳಬಲ್ಲೆವು ನಮ್ಮೆಲ್ಲ ಒಳ ಕಷ್ಟ. ನಮ್ಮತೇಪೆ, ಹೊಲಿಗೆಗಳ ಪರಿವೆಯಿಲ್ಲದ ಅವರ ಜತೆಗೇ ಶಕ್ಯ ನಮ್ಮ ಮಾನಸಿಕ ಸಲಿಗೆ. ಆಗದವರ ಕುರಿತು ಆಡಿಕೊಳ್ಳುವ, ಹುಸಿಯೆನಿಸುವ ಆಕಾಂಕ್ಷೆಗಳನ್ನೆಲ್ಲ ತೋಡಿಕೊಳ್ಳುತ್ತಲೇ ನಂಬಿಕೊಳ್ಳುವ, ತಪ್ಪುಗಳನ್ನೆಲ್ಲ ಇನಿತೂ ಅಹಂಕಾರ ಮುಕ್ಕಾಗದಂತೆ ಒಪ್ಪಿಕೊಳ್ಳುವ – ಸಲಿಗೆ.
ನೆಚ್ಚಿನ ಲೇಖಕ ಅಮೂರ್ತನಾದಷ್ಟೂ ಅವನ ಕೃತಿಗಳಲ್ಲಿ ನಮಗೆ ರುಚಿ ಹೆಚ್ಚು. ಲೇಖಕನ ಭಾವಚಿತ್ರ ಇರದ ಕಾದಂಬರಿಗೂ, ಇದ್ದ ಕಾದಂಬರಿಯೂ ಗುಣಲಕ್ಷಣಗಳಲ್ಲಿ ಆಗಾಧ ಅಂತರವಿರುತ್ತದೆ. ನಮ್ಮ ತರಹವೇ ಖಚಿತವಾದ ಮೂಗು ಕಣ್ಣು ಹುಬ್ಬುಗಳ ವಿನ್ಯಾಸವಿರುವ ಲೇಖಕನ ಚಿತ್ರ ಅವನನ್ನು ನಮ್ಮ ಲೌಕಿಕದ ಸಮೀಪ ತರುತ್ತದೆ. ರಾತ್ರಿ ಹೊಳೆಯುವ ಮೋಡಗಳಾಚೆಗಿನ ಪ್ರಭಾವೀ ಉಪಸ್ಥಿತಿಯನ್ನು ಕಳಕೊಂಡು ಹಗಲಲ್ಲೇ ಬಸ್ ಸ್ಟಾಂಡಿನಲ್ಲಿ ಪೇಲವವಾಗಿ ಕಾಣುವ ಚಂದ್ರನಂತಗುತ್ತಾನೆ ಲೇಖಕ. ಅವನ ಹಾಲು ಬೆಳಕಿಗೆ ಈಗ ನೀರೇ ನೀರು. ನಮ್ಮಜೀವನ್ಮರಣದ ಸಮಸ್ಯೆಗಳನ್ನು ಕೃತಿಗಳಲ್ಲಿ ಬಿಡಿಸುವ ಲೇಖಕ, ನಮ್ಮ ಜತೆಗೆ ಓಡುತ್ತ ಬಸ್ ಸ್ಟಾಂಡಿನಲ್ಲಿ ಕಿಟಕಿಯಿಂದ ಟವಲ್  ಒಗೆಯುತ್ತ ದೀನನಂತೆ “ಒಂದು ಸೀಟು ಹಿಡೀರಿ…” ಎಂದು ಒಳಗಿನವರಿಗೆ ಅಂಗಲಾಚುತ್ತಾನೆಂದರೆ….ಛೇ.
ಲೇಖಕ  ಅಜ್ಞಾತನಾಗಿದ್ದಾಗಲೇ ನಿಜವಾದ ಅರ್ಥದಲ್ಲಿ ಓದುಗನ ಜೀವಸಖನಾಗುತ್ತಾನೆ. ತನ್ನ ಕೃತಿಗಳ ಮೂಲಕ ಮನದಲ್ಲಿ ಬೆಳೆಯುತ್ತಾನೆ. ಬೇಂದ್ರೆ, ಕಾರಂತ, ಕುವೆಂಪು ಅವರೆಲ್ಲ ನಮ್ಮ ಸಂವೇದನೆಯನ್ನು ಪೋಷಿಸಿದ್ದೇ ಹೀಗೆ. ಎಲ್ಲೋ ಒಂದು ಸಾರ್ವಜನಿಕ ಸಮಾರಂಭದಲ್ಲಿ ಅವರನ್ನು ಕಣ್ತುಂಬ ಕಿವಿತುಂಬ ಅನುಭವಿಸಿರಬಹುದು. ಅವರ ಕೈ ಕುಲುಕಿರಬಹುದು ಅಷ್ಟೆ. ಮತ್ತವರು ಪ್ರಕಟಗೊಳ್ಳುವುದು ಮನಸ್ಸಿನಲ್ಲೇ. ಮತ್ತೊಂದು ಪುಸ್ತಕದ ಪುಟತೆರೆದಾಗಲೇ. ನಾವು ಕಂಡೇ ಇರದ ವಿದೇಶಿ ಲೇಖಕರು ನಮ್ಮ ಸಂವೇದನೆಯ ಭಾಗವಾಗುವುದೂ ತಮ್ಮ ಈ ಅಜ್ಞಾತವಾಸದಿಂದಲೆ. ವಿಚಿತ್ರವೆಂದರೆ ಅಜ್ಞಾತನಾದಷ್ಟೂ ಲೇಖಕನೊಬ್ಬ ಪಾರದರ್ಶಕನೂ ಆಗುತ್ತಾ ಹೋಗುವುದು. ದೈಹಿಕತೆಯ ಹಂಗಿಲ್ಲದ ಮಾನಸಿಕ ಸಂಪರ್ಕವೇ ಈ ಸಂಬಂಧದ ಜೀವಾಳ.
ಬಹುಶಃ ಲೇಖಕನೂ ಒಂದು ರೀತಿಯ ಅಜ್ಞಾತವಾಸದಲ್ಲಿದ್ದಾಗಲೇ ಅತ್ಯುತ್ತಮವಾಗಿ ಬರೆಯಬಲ್ಲ. ಅವನ ಅನಾಮಿಕತೆಯೇ ಅವನಿಗೊಂದು  ಮುಕ್ತತೆಯನ್ನು ಕೊಡಬಲ್ಲದು. ಹೆಸರುವಾಸಿಯಾದಷ್ಟೂ (ಹೆಸರೇ ವಾಸಿ?) ಆ ಹೆಸರಿನೊಂದಿಗೆ ಒಂದು ವಿಮುಖತೆ ಸಾಧಿಸಿಕೊಳ್ಳುವ ಹಟತೊಡದಿದ್ದರೆ ಲೇಖಕ ತನ್ನ ವಿಸ್ಮಯಗಳನ್ನು ಕಳೆದುಕೊಳ್ಳುತ್ತಾನೆ. ಚಂದಮಾಮದ ಕಥೆಗಳಲ್ಲಿ ರಾಜನು ಮಾರುವೇಷದಲ್ಲಿ, ಪ್ರಜೆಗಳ ಕುಶಲ ಕೇಳಲು ರಾತ್ರಿಯ ಬೀದಿಗಳಲ್ಲಿ ಅಡ್ಡಾಡುವಂತೆ, ಲೇಖಕ ತನ್ನ ಜೋಳಿಗೆಯನ್ನು ತುಂಬಿಕೊಳ್ಳುತ್ತಾನೆ. ತೊಟ್ಟಿಯಿಂದ ಕಸ ಹೆಕ್ಕುವಂತೆ ಜನಜೀವನದಿಂದ ತನ್ನ ಕೃತಿಯ ಅವಯವಗಳನ್ನು ಹೆಕ್ಕಿಕೊಳ್ಳುತ್ತಾನೆ. ಇಂಥ ಲೇಖಕ ತನಗೆ ಸಂವಾದ, ಸಾಮಗ್ರಿ ಮತ್ತು ಹೆಸರು-ಇವೆಲ್ಲವನ್ನೂ ಕೊಡುವ ಸಮಾಜಕ್ಕೆ ಮೂಲತಃ ಋಣಿಯಾಗಿರಬೇಕು. ಬದಲಿಗೆ ಬರೆದು ತಾನೇ ಸಮಾಜದ ಮೇಲೆನೋ ಮೆಹರ್ಬಾನಿ ತೋರಿಸುತ್ತಿದ್ದೇನೆಂಬ ಠೇಂಕಾರದಲ್ಲಿ ತೊಡಗಿದರೆ ಅವನ ಕಮ್ಮಟದ ಕಿಟಕಿಗಳೆಲ್ಲ ಬಂದಾಗತೊಡಗುತ್ತವೆ. ಗಾಳಿ ಬೆಳಕು ಸಾಲದೆ ಅವನ ಬರವಣಿಗೆಯ ಜೀವ ಕ್ರಮೇಣ ಹೊರಟು ಹೋಗುತ್ತದೆ. ಅಜ್ಞಾತದ ಹಸಿವು ಇದ್ದಷ್ಟೂ ವ್ಯಕ್ತಿ ವಿನಮ್ರನಾಗುತ್ತಾನೆ. ತನಗೆಲ್ಲಾ ಗೊತ್ತಿದೆ, ಎಲ್ಲ ಅರ್ಥಗಳೂ ಆಗಿ ಹೋಗಿವೆ ಎಂದುಕೊಂಡೇ ರಚನೆಗೆ ತೊಡಗುವ ಕಲಾವಿದ, ಲೇಖಕ ಕ್ಷುದ್ರ ಲೌಕಿಕದ್ದೇ ಇನ್ನೊಂದು ರಮ್ಯ ಆಟದಲ್ಲಿ ತೊಡಗಿರುತ್ತಾನೆ, ಅಷ್ಟೆ. ಹವ್ಯಾಸ ಆಗ ಆತನಿಗೆ ಹೊಸ ಬೆಳಕು ನೀಡುವುದಿಲ್ಲ. ಆತನನ್ನು ಬೆಳೆಸುವುದಿಲ್ಲ.
ಒಬ್ಬ ಲೇಖಕನ ಹೆಸರು ಎತ್ತಿದ ತಕ್ಷಣ ಆತನ ಕೃತಿಯೊಂದು ತಂತಾನೇ ನೆನಪಿಗೆ ಬರುವ ಕಾಲವೊಂದಿತ್ತು. ಅಂದರೆ ಲೇಖಕ ತಾನು ಕೊಟ್ಟ ಅನುಭವದ ಮೂಲಕವೇ ನಮ್ಮ ಮನದಲ್ಲಿ ಉಳಿಯುತ್ತಿದ್ದ. ಆದರೆ ಈಗ ಯಾಕೋ ಪುಂಖಾನುಪುಂಖವಾಗಿ ಲೇಖಕರ ಹೆಸರುಗಳೇ ನೆನಪಾಗುತ್ತವೆ ಹೊರತು ಅವರ ಕೃತಿಗಳ ಹೆಸರೂ ಸಹ ಮನಸ್ಸಿಗೆ ಬರುವುದಿಲ್ಲ. ಹೆಸರು ಓದಿದೀನಿ ಅನಿಸುತ್ತದೆ, ಆತನನ್ನು ಓದಿದ ನೆನಪಾಗುವುದಿಲ್ಲ. ಸಭೆ ಸಮಾರಂಭ, ಆಮಂತ್ರಣ ಪತ್ರಿಕೆ, ಭಾಷಣ, ಗೋಷ್ಠಿ, ದತ್ತಿ ಉಪನ್ಯಾಸ, ಬಿಡುಗಡೆ ಸಮಾರಂಭ – ಹೀಗೆ ಸಾಹಿತ್ಯದ ಶರೀರವೇ ವಿಪರೀತವಾಗಿ ಧಡೂತಿಯಾಗಿ ಬೆಳೆದು ಬಿಟ್ಟಿದ್ದರಿಂದ ಹೀಗಾಯಿತೆ. ಸಾಹಿತಿಗಳೆಲ್ಲ ಅಜ್ಞಾತವಾಸವನ್ನೂ, ಅನಾಮಿಕತೆಯನ್ನೂ ತೊರೆದು, ಸಾರ್ವಜನಿಕ ಪಾತ್ರವೆಂಬಂತೆ ಬರವಣಿಗೆಯನ್ನು ನಿರ್ವಹಿಸತೊಡಗಿದ್ದರಿಂದ ಹೀಗಾಯಿತೆ? ವ್ಯಕ್ತಿಗತ ದಾಹ ಮತ್ತು ಮನುಕುಲದ ಮೋಹ ಎರಡೂ ಒಂದಾಗುವ ಸೋಜಿಗವೇ ಸಾಹಿತ್ಯ. ಅದು ಪ್ರೇಮದಷ್ಟೆ ಖಾಸಗಿಯಾಗ ಅನಾಮಿಕ ಕೃಷಿ. ಅದಕ್ಕೆಅದರದ್ದೇ ಆದ ಅಜ್ಞಾನವೊಂದು ಬೇಕು. ಅಂದಾಗಲೇ ಅದು ಹೊಸಸೀಮೆಗಳತ್ತ ಮುಖ ಮಾಡಿದ ಸಾಹಸ. ಎಲ್ಲ ಬಲ್ಲವರಿಗಿಲ್ಲಿ ಇಲ್ಲ ಕೆಲಸ!