ರೈಲಿನ ಮೂಲಕ ನೀರಷ್ಟೇ ಅಲ್ಲ ವಿದ್ಯುತ್ತೂ…ನಾಗೇಶ್ ಹೆಗಡೆ

                   

ಅಮೆರಿಕದ ನೆವಾಡಾ ಮರುಭೂಮಿಯಲ್ಲಿ ಒಂದು ಹೊಸಬಗೆಯ ಟ್ರೇನ್ ಓಡಾಡಲಿದೆ. ಇದು ಪ್ರಯಾಣಿಕರನ್ನು ಸಾಗಿಸುವುದಿಲ್ಲ. ಹಾಗಂತ ಅದುರು, ನೀರು, ಪೆಟ್ರೋಲಿನಂಥ ಸರಕು ಸಾಮಗ್ರಿಗಳನ್ನೂ ಸಾಗಿಸುವುದಿಲ್ಲ. ಇದರ ಓಡಾಟದ ಉದ್ದೇಶ ಏನೆಂದರೆ ಶಕ್ತಿಯ ಸಂಗ್ರಹ ಮತ್ತು ಪೂರೈಕೆ ಮಾಡುವುದು. ಒಂದರ್ಥದಲ್ಲಿ ಇದು ಓಡಾಡುವ ಬ್ಯಾಟರಿಯಂತೆ ಕೆಲಸ ಮಾಡುತ್ತದೆ. ಎತ್ತರದ ನಿಲ್ದಾಣದಿಂದ ಕೆಳಕ್ಕೆ ಸಾಗುವಾಗ ಅದು ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತದೆ. ಕೆಳಗಿನ ನಿಲ್ದಾಣದಿಂದ ಮೇಲಕ್ಕೆ ಬರುವಾಗ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಇದರ ಪ್ರಾಯೋಗಿಕ ಓಡಾಟಕ್ಕೆ ಸಿದ್ಧತೆಗಳು ನಡೆದಿದ್ದು, ಶಕ್ತಿ ಸಂಚಲನದ ವಿಚಾರದಲ್ಲಿ ಜಗತ್ತಿಗೆ ಹೊಸ ಬೆಳಕನ್ನು ನೀಡಲಿದೆ.

ನಮಗೆಲ್ಲ ಗೊತ್ತೇ ಇದೆ, ನೀರು ನಮ್ಮೆಲ್ಲರ ಮೊಟ್ಟ ಮೊದಲಿನ ಬೇಡಿಕೆಯಾದರೆ, ಶಕ್ತಿ ಎರಡನೆಯ ಮೂಲಭೂತ ಅಗತ್ಯ ಎನ್ನಿಸಿದೆ. ಎರಡಕ್ಕೂ ಪರಸ್ಪರ ಸಂಬಂಧವೂ ಇದೆ. ನೀರು ಲಭ್ಯವಿದ್ದರೂ ಅದನ್ನು ಮೇಲಕ್ಕೆತ್ತಲು ಶಕ್ತಿ ಸಿಗದಿದ್ದರೆ ನೀರಿದ್ದೂ ನಿರರ್ಥಕವೇ ತಾನೆ? ನಮ್ಮಲ್ಲಂತೂ ಈ ಎರಡರ ಸಂಬಂಧ ಇನ್ನೂ ಗಾಢವಾಗಿದೆ. ತುಂಗಭದ್ರೆಯಲ್ಲಿ ಸಾಕಷ್ಟು ನೀರು ಇಲ್ಲವೆಂದು ಈ ವರ್ಷ ರಾಯಚೂರಿನ ಕಲ್ಲಿದ್ದಲ ಉಷ್ಣ ಸ್ಥಾವರದಲ್ಲಿ ವಿದ್ಯುತ್ ಉತ್ಪಾದನೆಗೆ ಕಂಟಕ ಬಂದಿತ್ತು. ವಿದ್ಯುತ್ತಿಗೆಂದೇ ದೊಡ್ಡ ದೊಡ್ಡ ಅಣೆಕಟ್ಟು ಕಟ್ಟಿದ್ದರೂ ಅಂಥ ಜಲಾಶಯಗಳು ಬರಿದಾದಾಗ ಆಕಾಶ ನೋಡುವ ಸ್ಥಿತಿ ನಮ್ಮದು. ಕೆಲವು ವರ್ಷಗಳ ಹಿಂದೆ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಸಲೆಂದು ಹೋಮ ಹವನ ಮಾಡಿ ಕಾಷ್ಠಸಂಪತ್ತಿನ ಹೊಗೆ ಹಾಯಿಸಿದ್ದರು.

ನೀರಿನ ಅಭಾವವಿದ್ದರಂತೂ ವಿದ್ಯುತ್ತಿಗೆ ಕಂಟಕ; ಮೋಡ ದಟ್ಟಣಿಸಿ ಮಳೆ ಗಾಳಿಯ ರಭಸ ಹೆಚ್ಚಾದರೆ ಆಗಲೂ ವಿದ್ಯುತ್ ಪೂರೈಕೆಗೆ ಕಂಟಕ ಒದಗುತ್ತದೆ. ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಈಗಾಗಲೇ ಈ ಅತಿರೇಕ ಕಾಣತೊಡಗಿದೆ. ಅಂತೂ ‘ಬರ ನಿರೋಧಕ’ ಎಂದರೆ ಕೇವಲ ನೀರಿನ ಬರವಷ್ಟೇ ಅಲ್ಲ, ಶಕ್ತಿಯ ಬರವೂ ನಮಗೆ ತಾಗದಂತೆ ಹೊಸ ಹೊಸ ತಂತ್ರಜ್ಞಾನವನ್ನು ರೂಢಿಸಿಕೊಳ್ಳಬೇಕಾಗಿದೆ.

ಹೊಸ ತಂತ್ರಜ್ಞಾನ ನಮ್ಮ ಹಿತ್ತಿಲಿಗೂ ಬರುತ್ತಿದೆ. ದೊಡ್ಡ ಪ್ರಮಾಣದಲ್ಲೇ ಬರುತ್ತಿದೆ. ಪಾವಗಡ ತಾಲ್ಲೂಕಿನಲ್ಲಿ 12 ಸಾವಿರ ಎಕರೆ ಪ್ರದೇಶದಲ್ಲಿ ಬಿಸಿಲನ್ನೇ ಹೀರಿಕೊಂಡು ಎರಡು ಸಾವಿರ ಮೆಗಾವಾಟ್ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವ ಯೋಜನೆಯ ಆರಂಭವನ್ನು ನಿನ್ನೆಯಷ್ಟೆ ಸಚಿವ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ. ದೇಶದ ಅತಿ ದೊಡ್ಡ ವಿದ್ಯುತ್ ಸ್ಥಾವರ ಅದಾಗಲಿದೆಯಂತೆ. ಅಂದರೆ, ಲಿಂಗನಮಕ್ಕಿ ಜಲಾಶಯದ ಮೂಲಕ ಲಭಿಸುವ ಗರಿಷ್ಠ ವಿದ್ಯುತ್ತಿಗಿಂತ ಹೆಚ್ಚಿನ ಪ್ರಮಾಣದ ಶಕ್ತಿ ಇಲ್ಲಿ ಬಿಸಿಲಿನ ಮೂಲಕ ಉತ್ಪಾದನೆ ಆಗಲಿದೆ; ಅದೂ ಕೇವಲ ಎರಡೇ ವರ್ಷಗಳಲ್ಲಿ. ಈ ಯೋಜನೆಗೆ ಮಳೆಯೂ ಬೇಕಾಗಿಲ್ಲ, ನೀರೂ ಬೇಕಾಗಿಲ್ಲ. ಮೋಡಗಟ್ಟಿದಾಗ ವಿದ್ಯುತ್ ಉತ್ಪಾದನೆ ಕೊಂಚ ಕಮ್ಮಿ ಆಗುತ್ತದಾದರೂ ಪಾವಗಡದಂಥ ಪ್ರದೇಶದಲ್ಲಿ ಮೋಡಕ್ಕೇ ಬರಗಾಲ ಇರುವಾಗ ಮತ್ತಿನ್ನೇನು, ಅದನ್ನೇ ವರದಾನ ಎಂದು ಪರಿಗಣಿಸಬೇಕು.

ಸೌರ ವಿದ್ಯುತ್ತನ್ನು ರೈತರು ತಮ್ಮ ಹೊಲದಲ್ಲಿ, ಮನೆವಾಸಿಗಳು ತಮ್ಮ ಛಾವಣಿಯಲ್ಲಿ ಉತ್ಪಾದಿಸಲೆಂದು  ಕರ್ನಾಟಕ ಸರ್ಕಾರ ಖಾಸಗಿ ಜನರಿಗೆ ಉತ್ತೇಜನ ನೀಡುತ್ತಿದ್ದು, ಅಂಥ ಹೆಚ್ಚುವರಿ ವಿದ್ಯುತ್ತನ್ನು ಗ್ರಿಡ್‌ಗೆ ಮಾರುವ ಅವಕಾಶವನ್ನೂ ನೀಡಲಾಗಿದೆ. ಜನರ ಉತ್ಸಾಹವನ್ನು ನೋಡಿ ಸರ್ಕಾರ ದಂಗಾಯಿತೊ ಏನೊ, ಗಡಬಡಿಸಿ ವಿದ್ಯುತ್ ಖರೀದಿ ದರವನ್ನು ಇದೀಗ ತಗ್ಗಿಸಿದೆ. ಅದೇನೇ ಇರಲಿ, ಸೌರಶಕ್ತಿಗೆ ಹಿಂದೆಂದೂ ಕಾಣದ ಆದ್ಯತೆ ಸಿಕ್ಕಿರುವುದಂತೂ ನಿಜ. ಎಷ್ಟೆಂದರೆ, ಬಳ್ಳಾರಿಯಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಸ್ಥಾಪಿಸಲೆಂದು ಎರಡೂವರೆ ಸಾವಿರ ಎಕರೆ ಜಮೀನನ್ನು ಪಡೆದ ಆರ್ಸೆಲಾರ್ ಮಿತ್ತಲ್ ಕಂಪನಿ ಈಗ ಉಕ್ಕನ್ನು ಕೈಬಿಟ್ಟು ಇಲ್ಲಿ ಸೌರ ವಿದ್ಯುತ್ತಿಗೇ ನೆಲ ಬಳಕೆ ಮಾಡಲು ಇತ್ತೀಚೆಗೆ ಸರ್ಕಾರದ ಅನುಮತಿ ಕೋರಿದೆ.

ಮಿತ್ತಲ್ ಬರಲಿ, ಬಿಲ್ ಗೇಟ್ಸ್ ಬರಲಿ, ಸೌರ ವಿದ್ಯುತ್ತಿನ ಹಣೆಬರಹ ಏನೆಂದರೆ ಅದು ಕಚೇರಿ ವೇಳೆಯಲ್ಲೇ ಕೆಲಸ ಮಾಡುತ್ತದೆ. ನೈನ್ ಟು ಫೈವ್ ಡ್ಯೂಟಿ ಅದರದ್ದು. ಅದಕ್ಕೆ ಪರ್ಯಾಯವಾಗಿ ಚಿತ್ರದುರ್ಗ, ದಾವಣಗೆರೆ ಬಳ್ಳಾರಿಯುದ್ದಕ್ಕೂ ಗಾಳಿಯಂತ್ರಗಳು ತಲೆಯೆತ್ತಿವೆ. ಅಂಥ ಗಿರಗಿಟ್ಟೆಗಳೂ ಗಾಳಿ ಇದ್ದಾಗಲಷ್ಟೇ ಕೆಲಸ ಮಾಡುತ್ತವೆ. ಈ ಯಂತ್ರಗಳು ಅದೆಷ್ಟೇ ವೇಗವಾಗಿ ಸುತ್ತಿದರೂ, ನಮಗೆ ಬೇಕೆಂದಾಗ ವಿದ್ಯುತ್ ಸಿಗುತ್ತದೆಂಬ ಖಾತ್ರಿ ಇಲ್ಲ. ಬೇಡವೆಂದಾಗ ಹಾಗೆಲ್ಲ ಅತಿ ದೊಡ್ಡ ಪ್ರಮಾಣದಲ್ಲಿ ಸೌರ ವಿದ್ಯುತ್ ಅಥವಾ ಗಾಳಿ ವಿದ್ಯುತ್ ಉತ್ಪಾದನೆ ಆಗುತ್ತಿದ್ದರೆ ಜರ್ಮನಿಯಲ್ಲಿ ಆದಂತೆ ಗ್ರಿಡ್ ಕುಸಿತ ಉಂಟಾಗಿ ಭಾರೀ ಕೋಲಾಹಲವಾಗುತ್ತದೆ.

ಇದು ವಿಜ್ಞಾನಕ್ಕೆ ಎದುರಾಗಿರುವ ಬಹುದೊಡ್ಡ ಸವಾಲು: ಬಿಸಿಲನ್ನಾಗಲೀ ಗಾಳಿಯನ್ನಾಗಲೀ ದುಡಿಸಿಕೊಂಡು ಅದರಿಂದ ವಿದ್ಯುತ್ ಶಕ್ತಿಯನ್ನು ಹೊಮ್ಮಿಸಿದರೆ ಸಾಲದು; ಅದನ್ನು ಶೇಖರಿಸಿ ನಮಗೆ ಬೇಕಿದ್ದಾಗ ಅಥವಾ ಬೇಡಿಕೆ ತೀರಾ ಹೆಚ್ಚಾದಾಗ (ಪೀಕ್ ವೇಳೆಯಲ್ಲಿ) ಅದು ಸಿಗುವಂತಾಗಬೇಕು. ಈ ಸವಾಲನ್ನು ಕೈಗೆತ್ತಿಕೊಂಡು ಪರಿಹಾರ ಹುಡುಕುವವರಿಗೆ ಬಹುದೊಡ್ಡ ಬಿಸಿನೆಸ್ ಅವಕಾಶವೂ ಲಭಿಸಿದಂತಾಗುತ್ತದೆ. ಆದ್ದರಿಂದಲೇ ನೆವಾಡಾ ಮರುಭೂಮಿಯಲ್ಲಿ ಇದೀಗ ಟ್ರೇನ್ ಪರೀಕ್ಷೆಯಲ್ಲಿ ತೊಡಗಿರುವ ಏಸಿಸ್ ಕಂಪನಿಯು ರೈಲು ಬಿಡುತ್ತಿದೆ ಎಂದು ಯಾರೂ ಭಾವಿಸುತ್ತಿಲ್ಲ. ಅದರ ಪ್ರಯೋಗಗಳನ್ನು ಶಕ್ತಿ ತಂತ್ರಜ್ಞರು ಆಸಕ್ತಿಯಿಂದ ನೋಡುತ್ತಿದ್ದಾರೆ. ಸೌರಫಲಕ ಮತ್ತು ಗಾಳಿಯಂತ್ರಗಳಿಂದ ಹಗಲು ವೇಳೆ ಉತ್ಪಾದನೆಯಾಗುವ ವಿದ್ಯುತ್ ಶಕ್ತಿಯನ್ನು ಬಳಸಿಕೊಂಡು ರೈಲು ಘಟ್ಟದ ತಳದಿಂದ ಮೇಲಕ್ಕೆ ಬರುತ್ತದೆ. ರಾತ್ರಿ ಅಥವಾ ಬೆಳಿಗ್ಗೆ ವಿದ್ಯುತ್ತಿಗೆ ಬೇಡಿಕೆ ಹೆಚ್ಚಿದ್ದಾಗ ಸರ್ರೆಂದು ಇಳಿಜಾರಿನಲ್ಲಿ ತನ್ನಷ್ಟಕ್ಕೆ ಓಡುತ್ತ ಕರೆಂಟ್ ಉತ್ಪಾದನೆ ಮಾಡುತ್ತದೆ.

ಒಂದರ್ಥದಲ್ಲಿ ಇದು ಲಿಂಗನಮಕ್ಕಿ ಜಲಾಶಯದ ನೀರಿನ ಹಾಗೆಯೇ ಕೆಲಸ ಮಾಡುತ್ತದೆ. ನೀರು ಕೆಳಕ್ಕೆ ಧುಮುಕುವಾಗ ವಿದ್ಯುತ್ ಉತ್ಪಾದನೆ ಮಾಡುವ ತಂತ್ರಕ್ಕೆ ನಾವು ಜಲವಿದ್ಯುತ್ ಎನ್ನುತ್ತೇವೆ. ಆದರೆ ನಿಜಕ್ಕೂ ಅದು ಗುರುತ್ವ ಬಲವನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಎತ್ತರದಿಂದ ನೀರೊಂದೇ ಅಲ್ಲ, ಏನನ್ನೇ ಬೀಳಿಸಿದರೂ ಅಪಾರ ಶಕ್ತಿಯೊಂದಿಗೆ ಅದು ಬೀಳುತ್ತದೆ. ನೀರಿನ ಬದಲು ಒಣ ಮರಳನ್ನು ಬೀಳಿಸಿದರೂ ಅಂಥ ಧಾರೆಗೆ ಅಡ್ಡಲಾಗಿ ಚಕ್ರವನ್ನು ಇಟ್ಟರೆ ಅದು ತಿರುಗುತ್ತ ವಿದ್ಯುತ್ ಉತ್ಪಾದನೆ ಸಾಧ್ಯವಿದೆ.

ಒಂದು ಬಂಡೆಯನ್ನೇ ಎತ್ತರದಿಂದ ಕೆಳಕ್ಕೆ ತಳ್ಳಿದರೂ ಗುರುತ್ವ ಬಲದಿಂದಾಗಿ ಹೆಚ್ಚು ಹೆಚ್ಚು ಶಕ್ತಿಯನ್ನು ಸಂಚಯಿಸಿಕೊಳ್ಳುತ್ತ ಸಾಗುತ್ತಿರುತ್ತದೆ. ಎತ್ತರ ಹೆಚ್ಚಿದ್ದಷ್ಟೂ ಬೀಳುವ ರಭಸ ಹೆಚ್ಚಿಗೆ ಇರುತ್ತದೆ (ಈ ತತ್ವವನ್ನು ತಮಿಳುನಾಡಿನ ಅಮ್ಮಾವ್ರಿಗೆ ಅನ್ವಯಿಸಲು ಈಗಲೇ ಹೋಗಬೇಡಿ. ಆಲದ ಮರ ಬಿದ್ದಾಗ ಅದರ ಕೆಳಗಿನ ಚಿಕ್ಕಪುಟ್ಟ ಜೀವಿಗಳು ಅಪ್ಪಚ್ಚಿಯಾಗುವುದು ಸಹಜವೆಂದು ಇಂದಿರಾ ಗಾಂಧಿಯ ಹತ್ಯೆಯ ತರುವಾಯದ ಸಿಖ್ ಮಾರಣ ಹೋಮದ ಸಂದರ್ಭದಲ್ಲಿ ಹೇಳಿದ್ದನ್ನೂ ಸದ್ಯಕ್ಕೆ ಬದಿಗಿಡೋಣ). ತಿರುಳು ಏನೆಂದರೆ, ಹೀಗೆ ಕೆಳಮುಖಕ್ಕೆ ಸಾಗುವ ವಸ್ತುವಿನಿಂದ ಶಕ್ತಿ ಹೊಮ್ಮುತ್ತದೆ. ನೆವಾಡಾದ ಟ್ರೇನು ಹೆಚ್ಚು ಹೆಚ್ಚು ಶಕ್ತಿಯನ್ನು ಹೊಮ್ಮಿಸಲೆಂದು ಅದರ ಡಬ್ಬಿಗಳಲ್ಲಿ ಗ್ರಾನೈಟ್ ತೊಲೆಗಳನ್ನು, ಕಾಂಕ್ರೀಟ್ ಕಂಬಗಳನ್ನು ತುಂಬಿರುತ್ತಾರೆ.

ಹಾಗಿದ್ದರೆ ಅದೇ ಟ್ರೇನು ಘಟ್ಟದ ತಳದಿಂದ ಹಿಮ್ಮೊಗವಾಗಿ ಮೇಲಕ್ಕೆ ಬರುವಾಗ ಶಕ್ತಿಯ ವ್ಯಯವಾಗುತ್ತದಲ್ಲ? ಆಗಲಿ, ಅಲ್ಲೂ ಜಲವಿದ್ಯುತ್ತಿನ ತತ್ವವನ್ನೇ ಅನ್ವಯಿಸಬಹುದು. ಅನೇಕ ದೇಶಗಳಲ್ಲಿ ಧುಮ್ಮಿಕ್ಕುವ ನೀರಿನಿಂದ ವಿದ್ಯುತ್ ಉತ್ಪಾದನೆ ಮಾಡಿ, ಅದೇ ವಿದ್ಯುತ್ ಶಕ್ತಿಯಿಂದ ಅದೇ ಟರ್ಬೈನನ್ನು ಹಿಮ್ಮೊಗ ತಿರುಗಿಸಿ ನೀರನ್ನು ಮೇಲಕ್ಕೆತ್ತಿ ಸಂಗ್ರಹಿಸುತ್ತಾರೆ. ಇದಕ್ಕೆ ‘ರಿವರ್ಸ್ ಪಂಪಿಂಗ್’ ಎನ್ನುತ್ತಾರೆ. ನಡುಹಗಲಲ್ಲಿ ಅಥವಾ ನಡುರಾತ್ರಿಯಲ್ಲಿ ವಿದ್ಯುತ್ತಿಗೆ ಬೇಡಿಕೆ ಕಮ್ಮಿ ಇದ್ದಾಗ ನೀರನ್ನು ಮೇಲಕ್ಕೆತ್ತಿ ಜಲಾಶಯವನ್ನು ತುಂಬುವ ಕೆಲಸ ಅಲ್ಲಿ ನಡೆಯುತ್ತದೆ; ಬೆಳಿಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ಆ ನೀರನ್ನು ಮತ್ತೆ ಧುಮ್ಮಿಕ್ಕಿಸಿ ವಿದ್ಯುತ್ತಿನ ಹೆಚ್ಚಿನ ಬೇಡಿಕೆಯನ್ನು ಪೂರೈಸುತ್ತಾರೆ.

ಬೇಡಿಕೆ ಹಠಾತ್ ಹೆಚ್ಚಾದಾಗ ಅತ್ಯಂತ ಸಲೀಸಾಗಿ ಹತ್ತಿಪ್ಪತ್ತು ನಿಮಿಷಗಳಲ್ಲೇ ಭಾರೀ ಪ್ರಮಾಣದ ವಿದ್ಯುತ್ತನ್ನು ಧಾರೆಯಾಗಿ ಹರಿಸುವ ತಾಕತ್ತು ಜಲವಿದ್ಯುತ್ ತಂತ್ರಜ್ಞಾನಕ್ಕೆ ಮಾತ್ರ ಸಾಧ್ಯವಿದೆ. ಕಲ್ಲಿದ್ದಲಿನ ಉರಿ ಉಗಿಯಿಂದ ಚಕ್ರ ತಿರುಗಿಸುವ ಉಷ್ಣ ಸ್ಥಾವರಗಳು ಹೆಚ್ಚುವರಿ ವಿದ್ಯುತ್ ಪೂರೈಕೆ ಮಾಡಬೇಕೆಂದರೆ ದಿನಗಟ್ಟಲೆ ಸಿದ್ಧತೆ ನಡೆಸಬೇಕು. ಅಣು ಸ್ಥಾವರಗಳಿಗೆ ವಾರವೋ ತಿಂಗಳೋ ಬೇಕಾಗುತ್ತದೆ. ಆದ್ದರಿಂದಲೇ ಜಲಾಶಯಕ್ಕೆ ನೀರನ್ನು ಪಂಪ್ ಮಾಡಿ ತುಂಬಿಸಿ ಇಡುವ ತಂತ್ರ  ಜಪಾನ್, ಚೀನಾ, ಯುರೋಪ್, ಅಮೆರಿಕಗಳಲ್ಲಿ ಜಾರಿಯಲ್ಲಿದೆ. ನಮ್ಮ ಜೋಗದಲ್ಲೂ ಹೀಗೆ ರಿವರ್ಸ್ ಪಂಪಿಂಗ್ ಮಾಡುತ್ತ ಎಂಥ ಬಿರುಬೇಸಿಗೆಯಲ್ಲೂ ಹಗಲು ವೇಳೆ ಜಲಪಾತದ ವೈಭವ ಕಾಣುವಂತೆ ಮಾಡಬಲ್ಲ ಯೋಜನೆ ಬಗ್ಗೆ ಕಳೆದ ವರ್ಷ (26 ಮಾರ್ಚ್ 2015ರಂದು) ಈ ಅಂಕಣದಲ್ಲಿ ಚರ್ಚಿಸಲಾಗಿತ್ತು. ಆ ಯೋಜನೆಗೆ ಇದೀಗ ಮಂಜೂರಾತಿ ಸಿಕ್ಕಿದೆಯೆಂದು ಹೇಳಲಾಗಿದೆ, ಅದಿರಲಿ.

ಭಾರೀ ಪ್ರಮಾಣದ ಬಿಸಿಲು ಬೀಳುವಲ್ಲಿ ಸೌರವಿದ್ಯುತ್ ಎಷ್ಟೇ ಸಿಕ್ಕರೂ ಅದನ್ನು ರಾತ್ರಿಯ ಬಳಕೆಗೆಂದು ರಿವರ್ಸ್ ಪಂಪಿಂಗ್ ಮಾಡೋಣವೆಂದರೆ ಜಲಾಶಯವೂ ಇರುವುದಿಲ್ಲ, ನೀರೂ ಇರುವುದಿಲ್ಲ. ಅದಕ್ಕೇ ಹಗಲು ವೇಳೆಯಲ್ಲಿ ಅಪಾರ ವಿದ್ಯುತ್ ಉತ್ಪಾದನೆಯಾಗುವ ನೆವಾಡಾ ಮರುಭೂಮಿಯ ಪಾರಂಪ್ (Pahrump) ಎಂಬ ಊರಲ್ಲಿ ನೀರಿನ ಬದಲಿಗೆ ಟ್ರೇನನ್ನೇ ಕೆಳಮುಖ ಓಡಿಸಿ ಶಕ್ತಿಯ ರಿವರ್ಸ್ ಪಂಪಿಂಗ್ ಮಾಡಲು ಸಿದ್ಧತೆ ನಡೆದಿದೆ. ಜೂಜುಕಟ್ಟೆಗಳ ನಗರವೆಂದೇ ಕುಖ್ಯಾತಿ ಪಡೆದ ಲಾಸ್ ವೆಗಾಸ್‌ನಿಂದ ನೂರು ಕಿ.ಮೀ. ದೂರದಲ್ಲಿರುವ ಪಾರಂಪ್ ಪಟ್ಟಣ ಭಣಗುಡುವ ಮರುಭೂಮಿಯ ಮಧ್ಯೆ, ಡೆತ್ ವ್ಯಾಲಿಯ ಸಮೀಪದಲ್ಲೇ ಇದ್ದರೂ ತನ್ನ ದುರ್ಗಮ ಚೆಹರೆಯನ್ನೇ ಪ್ರವಾಸೀ ತಾಣವನ್ನಾಗಿ ಪರಿವರ್ತಿಸಿಕೊಂಡು ಅನೇಕ ಆಕರ್ಷಣೆಗಳನ್ನು ಸೃಷ್ಟಿ ಮಾಡಿಕೊಂಡಿದೆ.

ಅವುಗಳ ಜೊತೆಗೆ ಇದೀಗ ‘21ನೇ ಶತಮಾನದ ಸವಾಲಿಗೆ 19ನೇ ಶತಮಾನದ ಉತ್ತರ’ ಎನ್ನುತ್ತ (ಪಾರಂಪ-ರಿಕ ವಿಧಾನದಲ್ಲಿ) ಈ ಶಕ್ತಿಬಂಡಿಯೂ ಸಜ್ಜಾಗುತ್ತಿದ್ದು ಅದರಲ್ಲಿ 9,600 ಟನ್‌ಗಳಷ್ಟು ಭಾರೀ ತೂಕದ ಕಲ್ಲುಬಂಡೆ ಮತ್ತು ಕಾಂಕ್ರೀಟ್ ಬ್ಲಾಕ್‌ಗಳನ್ನು ತುಂಬಲಾಗುತ್ತಿದೆ. ಪಾರಂಪ್‌ನ ಸುತ್ತೆಲ್ಲ ಸಾವಿರಾರು ಗಾಳಿಯಂತ್ರ ಮತ್ತು ಸೌರ ಫಲಕಗಳನ್ನು ಹಾಕಿಕೊಂಡಿರುವ ಇತರ ಕಂಪನಿಗಳು ತಾವು ಹಗಲೆಲ್ಲ ಉತ್ಪಾದಿಸುವ ಹೆಚ್ಚುವರಿ ವಿದ್ಯುತ್ ಶಕ್ತಿಯನ್ನು ಊಡಿಸಿ ಈ ರೈಲುಬಂಡಿಗಳನ್ನು ಕೆಳಗಿನಿಂದ ಮೇಲಕ್ಕೆ ಎಳೆದು ತರುತ್ತವೆ. ಮೇಲಕ್ಕೆ ಬಂದ ರೈಲುಬಂಡಿ ಈಗ ಶಕ್ತಿಯ ಬ್ಯಾಂಕ್ ಆಗುತ್ತದೆ. ಕರೆಂಟ್ ಬೇಕೆಂದಾಗ ಬಂಡಿ 600 ಮೀಟರ್ ಇಳಿಜಾರಿನಲ್ಲಿ ಸಾಗುತ್ತದೆ. ಹಾಗೆ ಸಾಗುವಾಗ ಬ್ರೇಕ್ ಒತ್ತುತ್ತ ಹೋದಂತೆ ವಿದ್ಯುತ್ ಉತ್ಪಾದನೆಯಾಗಿ ಗ್ರಿಡ್‌ಗೆ ಸೇರುತ್ತದೆ. ಬ್ಯಾಂಕಿನಿಂದ ಹಣವನ್ನು ಬೇಕೆಂದಾಗ ವಾಪಸ್ ಪಡೆದಂತೆ.

ಚಲಿಸುವ ಗಾಡಿಯ ಬ್ರೇಕ್ ಒತ್ತುವ ಮೂಲಕ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತ ಬ್ಯಾಟರಿಗೆ ಜೀವ ತುಂಬುವ ತಂತ್ರ ಈಗಿನ ಅನೇಕ ಹೈಬ್ರಿಡ್ ಕಾರುಗಳಲ್ಲೂ ಬಳಕೆಯಲ್ಲಿದೆ. ಕೆಲವಷ್ಟು ದೂರ ಡೀಸೆಲ್ ಅಥವಾ ಪೆಟ್ರೋಲ್ ಮೂಲಕ ಚಲಿಸುವ ಕಾರು ಅಲ್ಲಿಂದ ಮುಂದಕ್ಕೆ ಬ್ಯಾಟರಿ ಶಕ್ತಿಯ ಮೂಲಕ ನಿಶ್ಶಬ್ದವಾಗಿ, ಹೊಗೆ ಹೊಮ್ಮಿಸದೆ ಚಲಿಸುತ್ತದೆ. ‘ಕೊಪೆನ್‌ಹೇಗನ್’ ಬೈಸಿಕಲ್ ಕೂಡ ಹೀಗೇ ಇಳುಕಲಿನಲ್ಲಿ ಬ್ರೇಕ್ ಮೂಲಕ ಸಂಚಯವಾಗುವ ಶಕ್ತಿಯನ್ನು ಬ್ಯಾಟರಿಗೆ ಊಡಿಸುತ್ತ ಏರುರಸ್ತೆಯಲ್ಲಿ ಸಲೀಸಾಗಿ ಸಾಗುತ್ತದೆ. ‘ಹುಲ್ಲು ಕುಯ್ದಲ್ಲೇ ಹಗ್ಗ ಹೊಸೀಬೇಕು’ ಎಂಬ ಗ್ರಾಮೀಣ ಜಾಣ್ಮೆಯ ತಂತ್ರಗಳು ಹೈಟೆಕ್ ರಂಗದಲ್ಲೂ ಚಾಲ್ತಿಗೆ ಬರುತ್ತಿವೆ.

ನಮ್ಮ ಪಶ್ಚಿಮ ಘಟ್ಟಗಳ ಮೂಲಕ ಇಳಿಯುತ್ತ ಕರಾವಳಿಗೆ ಸಾಗುವ ರೈಲುಮಾರ್ಗ ಮತ್ತು ರಸ್ತೆ ಮಾರ್ಗಗಳು ಎಷ್ಟೊಂದು ಪ್ರಮಾಣದಲ್ಲಿ ಹೀಗೇ ಶಕ್ತಿ ಉತ್ಪಾದನೆ ಮಾಡಲು ಸಾಧ್ಯವಿದೆ. ಮುಂದೊಂದು ದಿನ ಬ್ಯಾಟರಿಚಾಲಿತ ವಾಹನಗಳೇ ಎಲ್ಲೆಡೆ ಓಡಾಡುವಾಗ ಈ ಘಟ್ಟಗಳ ಗುರುತ್ವ ಬಲಕ್ಕೂ ಬೆಲೆ ಬರಬಹುದು.