ರೈತರ ಬೇಡಿಕೆಯೊಳಗೆ ದೇಶದ ಉಳಿವೂ ಇದೆ -ದೇವನೂರ ಮಹಾದೇವ

[ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ 8.12.2020ರಂದು, ದೇಶಾದ್ಯಂತ ಲಕ್ಷಾಂತರ ರೈತರು ಪ್ರತಿಭಟನೆ ನಡೆಸುತ್ತಾ ‘ಭಾರತ್ ಬಂದ್’ ಆಚರಿಸಿದ ಸಮಯದಲ್ಲಿ ಮೈಸೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ದೇವನೂರ ಮಹಾದೇವ ಅವರು ಆಡಿದ ಮಾತಗಳ ಬರಹ ರೂಪ]
           
ಇವತ್ತು ನಾನು ರಮಾವಿಲಾಸ್ ರಸ್ತೆ ಮುಖಾಂತರ, ಕೆ.ಆರ್.ಸರ್ಕಲ್ ಮತ್ತು ಅರಸು ರೋಡ್ ಸುತ್ಕೊಂಡ್ ಬಂದೆ ಇಲ್ಲಿಗೆ. ಅಲ್ಲೆಲ್ಲಾ ಅಂಗಡಿ ಮುಂಗಟ್ಟು ಬಂದ್ ಆಗಿದೆ. ಇಲ್ಲಿ ಹೆಚ್ಗೇನೂ ಬಲಾತ್ಕಾರ ಇಲ್ಲದೇ, ಒತ್ತಡ ಇಲ್ದೆನೇ ಬಂದ್ ಆಗಿದೆ. ಇದು ನಿಜಕ್ಕೂ ಅಭಿನಂದನೀಯ. ಸ್ವಯಂ ಬಂದ್ ಮಾಡಿದ ನಾಗರೀಕರಿಗೆ ವಂದನೆ ಸಲ್ಲಿಸಬೇಕು.
ಇಲ್ಲಿ ನಾವು ಯೋಚ್ನೆ ಮಾಡ್ಬೇಕಾಗಿರೋದು ಏನಪ್ಪಾ ಅಂತಂದ್ರೆ, ಕೃಷಿ ಸಂವಿಧಾನಾತ್ಮಕವಾಗಿ ರಾಜ್ಯದ ವ್ಯಾಪ್ತಿಗೆ ಬರೋವಂತದ್ದು. ರಾಜ್ಯಗಳನ್ನ ನಮ್ಮ ಕೇಂದ್ರ ಅಥವಾ ಯೂನಿಯನ್ ಗೌರ್ನಮೆಂಟು ಲೆಕ್ಕಕ್ಕೇ ತೊಗೊಂಡಿಲ್ಲ. ಕಾಲ್ ಕಸ ಮಾಡಿದೆ. ಇದಕ್ಕೆ ಕಾರಣ ಜಿಎಸ್ಟಿ ತಂದ್ಬಿಟ್ಟು ರಾಜ್ಯಗಳ ಜುಟ್ಟನ್ನ ತಾನು ಹಿಡ್ಕಂಡಿದೆ. ಯಾವ ರಾಜ್ಯವೂ ಕೇಂದ್ರಕ್ಕೆ ‘ಇದು ನನ್ನ ಹಕ್ಕಿದು, ನನ್ನ ವ್ಯಾಪ್ತಿಗೆ ಬರುತ್ತೆ ನೀನ್ಯಾಕ್ ಅದನ್ನ ಕಾನೂನು ಮಾಡ್ತಾ ಇದ್ದೀಯ’ ಅಂತ ಕೇಳ್ತಾ ಇಲ್ಲ. ಅಂದ್ರೆ ರಾಜ್ಯಗಳು ಹೆಚ್ಚುಕಮ್ಮಿ ನರಸತ್ತ ತರಹ ಇದ್ದಾವೆ. ಭಯಂಕರವಾದ ಭಯದಲ್ಲಿ ಬಿದ್ದಿದ್ದಾವೆ ರಾಜ್ಯಗಳು. ಆ ಥರದ ಒಂದು ಭಯದ ವಾತಾವರಣ ಇಡೀ ದೇಶದ ತುಂಬಾ ಇದೆ. ಇದೇನಾಯ್ತು? ಸಂವಿಧಾನದ ಪ್ರಕಾರ ಕೃಷಿ ರಾಜ್ಯದ ಹಕ್ಕು. ಇದನ್ನು ಕೇಂದ್ರ ರಾಜ್ಯದಿಂದ ಕಿತ್ಕಳ್ತು. ಹಂಗಾಗಿ ಸಂವಿಧಾನವನ್ನ ಕಾಲ್ ಕಸ ಮಾಡ್ದಂಗ್ ಆಯ್ತು ಇದರಿಂದ. ಆಮೇಲೆ ಇದಕ್ಕೆ ಸಂಬಂಧಪಟ್ಟ ರೈತರನ್ನೇನಾದ್ರೂ ಕೇಳಿದ್ರಾ? ಕೇಳಲಿಲ್ಲ. ಅಂದರೆ ಪ್ರಜಾಪ್ರಭುತ್ವವನ್ನ ನಗೆಪಾಟಲು ಮಾಡಿಬಿಟ್ಟರು. ಏನ್ ಮಾಡುದ್ರೂ, ಸಂವಿಧಾನ, ದೇಶದ ಒಕ್ಕೂಟದ ಸ್ವರೂಪ, ಪ್ರಜಾಪ್ರಭುತ್ವ… ಇವುಗಳೆಲ್ಲವಕ್ಕೂ ಸೂತ್ರ ಕಿತ್ ಹಾಕ್ಬಿಟ್ರು. ಇದು ಅತ್ಯಂತ ಕೆಟ್ಟ ಬೆಳವಣಿಗೆ.
ಮತ್ತು ಇನ್ನೊಂದು ತಾವು ನೋಡಿರ್ಬಹುದು, ಪ್ರತಿಭಟನಾಕಾರರು ಬರಬಾರದು ಅಂತ ರಸ್ತೆನ ಕತ್ತರಿಸಿದ್ದಾರೆ. ರಸ್ತೆಗೆ ಮಣ್ಣು ತಂದು ಹಾಕಿದ್ದಾರೆ. ಇದನ್ನ ಸರ್ಕಾರವೇ ಮಾಡ್ತು. ಇದನ್ನ ಜನರೇ ಮಾಡಿದ್ರೆ ಏನ್ ಮಾಡ್ತಿದ್ರು ಅವ್ರನ್ನ? ಮತ್ತು ಲಕ್ಷ ಲಕ್ಷ ಜನ ಪ್ರತಿಭಟನೆಗೆ ಬರೋವ್ರಿಗೆ ದೇಶದ್ರೋಹಿಗಳು ಅಂತಿದ್ದಾರೆ ಅವ್ರು. ತಮ್ಮನ್ಯಾರು ಪ್ರತಿಭಟಿಸ್ತಾರೋ, ಯಾರು ವಿರುದ್ಧವಾಗಿ ಮಾತಾಡ್ತಾರೋ ಅವರಿಗೆ ದೇಶದ್ರೋಹಿಗಳು ಅಂತಿದ್ದಾರೆ. ಈ ಪರಿಪಾಠ ಬೆಳಸ್ಕೊಂತಿದ್ದರೆ, ಇದು ಖಂಡಿತ ಒಳ್ಳೆಯ ಆಳ್ವಿಕೆ ಅಲ್ಲ. ಇದು ದೇಶಕ್ಕೂ ಒಳ್ಳೇದಲ್ಲ.. ಒಳ್ಳೇದಲ್ಲಾ.
ಆದ್ರೆ ಈ ರೈತರು ಎಷ್ಟು ಮಾನವೀಯವಾದವರು ಅಂದ್ರೆ,… ತಮಗೆ ಯಾರು ಹೊಡೆದ್ರೋ ಆ ಪೊಲೀಸ್ನವರಿಗೆ ಊಟ ಹಾಕ್ತಿದ್ದಾರೆ. ಅಂತಹ ಹೃದಯವಂತರವರು ರೈತರು. ಮತ್ತೆ ಎಷ್ಟು ಡಿಗ್ರಿ ಚಳಿ ಇದೆ? 9 ಡಿಗ್ರಿ ಚಳಿ ಇರ್ಬೇಕು ದೆಹಲಿನಲ್ಲಿ. ವಯಸ್ಸಾದವರಿದ್ದಾರೆ, ಮಕ್ಳಿದ್ದಾರೆ… ಆ ಚಳಿನಲ್ಲಿ ಜಲಫಿರಂಗಿ ಪ್ರಯೋಗಿಸಿದ್ರು. ಮನುಷ್ಯರು ಮಾಡುವ ಕೆಲಸವಾ ಇದು? ಈ ಸರ್ಕಾರ ವಂಚಿಸೋದಕ್ ನೋಡ್ತಿದ್ದಾರೆ ಅವರನ್ನ. ಹಂಗೂ ಹಿಂಗೂ ಮಾತಾಡ್ತಾ ತಳ್ಳದು. ಅಲ್ಲೇ ಗುಂಪ್ ಕಟ್ಟಕ್ ಸಾಧ್ಯವಾ ನೋಡದು, ಹಿಂಗೆ ಥರಾವರಿ. ದಂಡಂ ದಶಗುಣಂ ಅಂತ ಏನೋ ಅಂತಾರಲ್ಲಾ ಅದನ್ನೆಲ್ಲಾ ಪ್ರಯೋಗಿಸ್ತಾ ಇದ್ದಾರೆ. ಇದು ಸಾಮಾನ್ಯವಾಗಿ ಸಂಘಪರಿವಾರ ಅಂಥೇನಿದೆ, ಅದಕ್ಕೆ ವಂಚನೆ, ದ್ರೋಹ ಮತ್ತು ಕ್ರೌರ್ಯ, ತಾನು ಹೇಗಾದ್ರೂ ಸರಿ ಅಧಿಕಾರ ಮಾಡಬೇಕು ಎನ್ನೋ ದಗಲ್ಬಾಜಿತನ ಇದೆ. ಆದರೆ ಇವನ್ನ ಬಿಡಿ ಅಂತ ಕೇಳ್ಕೊಂತೀನಿ. ಇದರಿಂದ ಅವರೂ ಮನುಷ್ಯರಾಗ್ತಾರೆ. ಇದು ಅವರಿಗೂ ಒಳ್ಳೆಯದು, ನಮ್ಗೂ ಒಳ್ಳೆಯದು ಮತ್ತು ದೇಶಕ್ಕೂ ಒಳ್ಳೆಯದು. ಕೇಂದ್ರ ಸರ್ಕಾರಕ್ಕೆ, ಸಂಘಪರಿವಾರದವರಿಗೆ ಪ್ರಾರ್ಥನೆ ಮಾಡ್ತೀನಿ, ಆ ಗುಣಗಳು ನಿಮಗೆ ರಕ್ತಗತ ಆಗಿರ್ಬಹುದು, ಆದರೆ ದಯವಿಟ್ಟು…. ದಯವಿಟ್ಟು ನೀವು ನಿಮ್ಮ ಜಾತಿ ಮತ ಪಂಗಡ ಮೀರಿ ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಬದ್ಧರಾಗಿ ರಾಜಧರ್ಮ ಪಾಲಿಸಿ. ಯಾರಾದರೂ ಸಂಘಪರಿವಾರದಲ್ಲೂ ಒಳ್ಳೆಯವರಿರೋರು ಚಿಂತಿಸಬೇಕು ಈಗ. ಎಳೀಬಾರದು ಇದನ್ನ. ಯಾಕಂದ್ರೆ ಕೃಷಿ ಕಾನೂನುಗಳನ್ನು ತಂದ ಬಗೆ ಸಂವಿಧಾನ ವಿರೋಧಿ ನಮ್ಮ ಪ್ರಜಾಪ್ರಭುತ್ವಕ್ಕೆ ವಿರೋಧಿ ಇದು. ದೇಶದ ಒಕ್ಕೂಟ ಸ್ವರೂಪವನ್ನೇ ನಾಶ ಮಾಡುವಂತದು. ದೇಶವನ್ನ ಕೇಡಿನ ಕಡೆಗೆ, ಅವನತಿ ಕಡೆಗೆ ಕರ್ಕೊಂಡು ಹೋಗ್ತಾ ಇರುವಂತಹ ಈ ಕ್ರೌರ್ಯ ದಯವಿಟ್ಟು ಬೇಡ. ಕ್ರೌರ್ಯ ದುರ್ಬಲ ಆಡಳಿತದ ಲಕ್ಷಣ.
ನೆನಪಿಟ್ಟುಕೊಳ್ಳೋಣ-ರೈತರ ಹೋರಾಟದ ಒಳಗೆ ಪ್ರಜಾಪ್ರಭುತ್ವ, ಸಂವಿಧಾನ, ದೇಶದ ಒಕ್ಕೂಟ ವ್ಯವಸ್ಥೆ ಕಾಪಾಡುವ ಧ್ವನಿಯೂ ಇದೆ ಎಂಬುದನ್ನ.