ರೈತರ ಪರಾವಲಂಬನೆಯೇ ಅಭಿವೃದ್ಧಿಯಾದ ಚೋದ್ಯ-ಕೆ.ಪಿ.ಸುರೇಶ

agriculture

ಇತ್ತೀಚೆಗೆ ಕೃಷಿ ಬಿಕ್ಕಟ್ಟಿನ ಕುರಿತು ನಡೆದ ಎರಡು ಕಾರ್ಯಾಗಾರಗಳಲ್ಲೂ ರೈತರಿಗೆ ಆರ್ಥಿಕ ನಿರ್ವಹಣೆಯ ಕುರಿತು ಅರಿವು ಮೂಡಿಸಬೇಕಾದ ವಿಚಾರವೇ ಪ್ರಮುಖವಾಗಿತ್ತು. ಇದನ್ನು ಬ್ಯಾಂಕಿಂಗ್ ಸಾಕ್ಷರತೆ ಅನ್ನುವ ರೀತಿಯಲ್ಲಿ ಒಂದಿಬ್ಬರು ಹೇಳಿದ್ದೂ ಇದೆ. ರೈತರೊಂದಿಗೆ ಮಾತಾಡುತ್ತಾ ಹೋದಷ್ಟು ಹೊರಬಂದ ಸಂಗತಿ ಎಂದರೆ, ಈ ಕೃಷಿ ವಿಜ್ಞಾನಿಗಳ ಕೈಗೆ ಕೃಷಿ ರಂಗವನ್ನು ಹಾಕಿ ಏನೂ ಉದ್ಧಾರವಾಗಿಲ್ಲ; ಉತ್ಪಾದಕತೆ, ರೋಗ, ಪೋಷಕಾಂಶ ನಿರ್ವಹಣೆ ಬಗ್ಗೆ ಮಾತಾಡಿ ಮೂರು ದಶಕ ಕಳೆದಾಗಿದೆ. ಈ ಅವಧಿಯಲ್ಲಿ ರೈತ ಸಮುದಾಯದ ಅರಿವಿಗೆ ಅನ್ಯವಾದ ತಳಿ, ಗೊಬ್ಬರ, ರಾಸಾಯನಿಕಗಳನ್ನು ಪರಿಚಯಿಸಿ ನೆಲಜಲ ಕೃಷಿ ಆರ್ಥಿಕತೆ ಇನ್ನಷ್ಟು ಹದಗೆಟ್ಟಿದೆ ಎಂಬ ಮಾತು ಸರ್ವೇ ಸಾಧಾರಣವಾಗಿದೆ.
ಊರು ತಿರುಗುತ್ತಾ ರೈತಾಪಿ ಜೊತೆ ಮಾತಾಡುತ್ತಿದ್ದರೆ, ಎಲ್ಲೆಡೆಯೂ ಅದೇ ಪಿಚ್ಚೆನ್ನಿಸುವ ದುಗುಡ ವ್ಯಾಕುಲದ ಪುನರಾವರ್ತನೆ. ಮೊದಲು ಮಳೆ ಮತ್ತು ಆಯುಸ್ಸು ಮಾತ್ರಾ ನಮ್ಮ ಕೈಯಲ್ಲಿಲ್ಲ ಎಂಬಂತೆ ಜನ ಅಳುಕಿಂದ ಬದುಕಿದ್ದರು. ಸರ್ಕಾರಗಳು ಕೃಷಿ ಅಭಿವೃದ್ಧಿಗೆ ನೀರಾವರಿ, ರಾಸಾಯನಿಕ ಗೊಬ್ಬರ, ಕೀಟನಾಶಕ, ಬೀಜ, ಯಂತ್ರೋಪಕರಣ- ಹೀಗೆ ಆಧುನಿಕವಾದದ್ದನ್ನೆಲ್ಲಾ ಕೊಟ್ಟು ‘ಈಗ ಪ್ರಕೃತಿಯ ಹಂಗಿಂದ ನಿನಗೆ ಬಿಡುಗಡೆಯಾಗಿದೆ, ಇದೀಗ ನನ್ನನ್ನು ನೆಚ್ಚಿಕೋ; ನಾನು ನಿನ್ನನ್ನು ಉದ್ಧರಿಸುತ್ತೇನೆ’ ಎಂದು ಹೇಳಿ ದಶಕಗಳೇ ಕಳೆದಿವೆ. ಈ ಆಧುನಿಕ ಗೀತೋಪದೇಶದ ವಿಶ್ವರೂಪ ಹೇಗಿದೆಯೆಂದರೆ ಇಂದು ಸರ್ಕಾರದ ವಿವಿಧ ಅವತಾರಗಳನ್ನು ನೆಚ್ಚಿಕೊಳ್ಳದೇ ರೈತ ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬಂಥಾ ಪರಾವಲಂಬನೆಯ ಸ್ಥಿತಿ ನಿರ್ಮಾಣವಾಗಿದೆ.
ಈ ಮೊದಲು ಮಳೆಗಷ್ಟೇ ಅವಲಂಬಿತರಾಗಿದ್ದ ರೈತರು ಈಗ ಬೀಜದಿಂದ ಹಿಡಿದು ಎಲ್ಲದಕ್ಕೂ ಅವಲಂಬಿತರಾಗಿದ್ದಾರೆ!. ತನ್ನ ಸ್ಥಳೀಯ ಕೃಷಿ ಜ್ಞಾನ, ಸಂಪನ್ಮೂಲಕ್ಕೂ ವಿದಾಯ ಹೇಳಿ, ಆಧುನಿಕ ಕೃಷಿಯ ಜ್ಞಾನ-ಪರಿಕರಗಳೂ ನೆಟ್ಟಗೆ ಎಟುಕದೇ ತ್ರಿಶಂಕು ಸ್ಥಿತಿಯಲ್ಲಿ ರೈತ ಇದ್ದಾನೆ. ಈ ಪರಾವಲಂಬನೆಯನ್ನು ಸರ್ಕಾರವೂ ಅಭಿವೃದ್ಧಿ ಎಂದು ಘೋಷಿಸುತ್ತಿದೆ!
ಇದರೊಂದಿಗೆ ಖಾಸಗಿ ಬಂಡವಾಳಶಾಹಿಗಳನ್ನೂ ಆಟಕ್ಕೆ ಸೇರಿಸಿಕೊಂಡಿರುವ ಸರ್ಕಾರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವಂತೆ ನೋಡಿಕೊಂಡಿದೆ. ನಮ್ಮ ಕೃಷಿ ಜಗತ್ತಿನ ನಡವಳಿಕೆ, ಋತುಮಾನ, ಕೊಡು-ಕೊಳು ಪ್ರಕ್ರಿಯೆಗಳ ಹೆಣಿಗೆಯೇ ಗೊತ್ತಿಲ್ಲದಂತೆ ಸರ್ಕಾರ ಕೃಷಿ ಲೋಕವನ್ನು ತನ್ಮೂಲಕ ಗ್ರಾಮೀಣ ಲೋಕವನ್ನು ಸಂಕಷ್ಟಕ್ಕೆ ದೂಡಿದೆ
ನಮ್ಮ ಸರ್ಕಾರ ರೈತರನ್ನು ಇಂಥಾ ದುಸ್ಥಿತಿಗೆ ದೂಡಿದ್ದನ್ನು ನಮ್ಮವರೇ ಆದ ಸುವಿಖ್ಯಾತ ಸಮಾಜ ವಿಜ್ಞಾನಿ ಎ.ಆರ್ ವಾಸವಿಯವರು ತಮ್ಮ ‘ಶಾಡೋ ಸ್ಪೇಸ್” ಎಂಬ ರೈತರ ಆತ್ಮಹತ್ಯೆ ಕುರಿತಾದ ಪುಸ್ತಕದಲ್ಲಿ ವಿವರಿಸಿದ್ದಾರೆ. ರೈತ ಪಕ್ಕಾಗಿರುವ ಐದು ರೀತಿಯ ಆಧುನಿಕ ಅಪಾಯಗಳನ್ನು ಅವರು ಪಟ್ಟಿ ಮಾಡುತ್ತಾರೆ.
1. ಮಾರುಕಟ್ಟೆಯ ಅಪಾಯ.
2. ಪರಿಸರ ಸಂಬಂಧೀ ಅಪಾಯ
3. ಉತ್ಪಾದನಾ ಅಪಾಯ
4. ಬಂಡವಾಳದ ಅಪಾಯ
5. ಜ್ಞಾನ ಪ್ರಸರಣದ ಗೈರು
ಈ ಐದು ಅಪಾಯಗಳೂ ನಮ್ಮ ರೈತರ ಪಾಲಿಗೆ ನಿಜವಾಗಿದೆ. ಅವರ ಒಳನೋಟಗಳನ್ನು ಇಲ್ಲಿ ಸಾಂದರ್ಭಿಕ ಅನುಭವದ ಮೂಲಕ ವಿವರಿಸಲು ಯತ್ನಿಸಿದ್ದೇನೆ:
ಮಾರುಕಟ್ಟೆಯ ಅಪಾಯ: ಮೂಲತಃ ಎಲ್ಲಾ ಒಳಸುರಿಗಳನ್ನೂ ಹೊರಗಿಂದ ತರಬೇಕಾದ ಅನಿವಾರ್ಯ ಸ್ಥಿತಿಯನ್ನು ಸರ್ಕಾರ ಕೃಷಿ ಪ್ರಗತಿಯ ಹೆಸರಲ್ಲಿ ಸ್ಥಾಪಿಸಿದೆ. ಬೀಜದಿಂದ ಈ ಅವಲಂಬನೆ ಆರಂಭವಾಗುತ್ತದೆ. ಗೊಬ್ಬರ, ಕೀಟನಾಶಕ.. ಹೀಗೆ ಇದು ವ್ಯಾಪಿಸುತ್ತದೆ. ಕೊನೆಗೆ ಬೆಳೆದ ಉತ್ಪನ್ನವೂ ಮಾರುಕಟ್ಟೆಯ ಕಪಿಮುಷ್ಠಿಯಲ್ಲಿರುತ್ತದೆ. ಈ ಏರಿಳಿತದ ಆಟವನ್ನು ಉಳಿದೆಲ್ಲಾ ಬೆಳೆಗಳಲ್ಲೂ ನಾವು ನೋಡಿದ್ದೇವೆ. ಅಂಥಾ ಸಂದರ್ಭಗಳಲ್ಲೆಲ್ಲಾ ಸರ್ಕಾರ ಜಾಣ ಕುರುಡುತನ ತೋರುತ್ತಾ ರೈತರು ಕಿರುಚಿ ಬಸವಳಿಯುವವರೆಗೂ ಕಾಲಹರಣ ಮಾಡಿ ಸಮಸ್ಯೆ ಮರೆತು ಹೋಗುವವರೆಗೂ ದಿನ ತಳ್ಳಿದೆ.
ಪರಿಸರ ಅಪಾಯಗಳು: ರಾಸಾಯನಿಕ ಬಳಕೆಯ ಕೃಷಿ ಮಣ್ಣು, ಪರಿಸರ ಮತ್ತು ಸಹಜೀವಿಗಳ ಮೇಲೆ ತೀವ್ರ ದುಷ್ಟರಿಣಾಮ ಬೀರುತ್ತಿರವುದನ್ನು ಈಗಾಗಲೇ ವಿಜ್ಞಾನಿಗಳು ದಾಖಲಿಸಿದ್ದಾರೆ. ಉತ್ಪಾದಕತೆ ಇಳಿಮುಖವಾಗುತ್ತಿರುವುದೂ ದಾಖಲಾಗಿದೆ. ಪ್ರಾಕೃತಿಕ ಸಂಪನ್ಮೂಲಗಳೂ ಮಾಯವಾಗುತ್ತಿರುವುದು ನಮ್ಮ ಕಣ್ಣೆದುರೇ ಜರುಗಿರುವ ಸಂಗತಿ. ಹೀಗಿದ್ದರೂ ಸರ್ಕಾರ ಇದೇನು ಗಂಭೀರ ವಿಷಯವಲ್ಲ ಎಂಬಂತೆ ನಟಿಸುತ್ತಾ ಸಮಸ್ಯೆಯ ಪರಿಹಾರಕ್ಕೆ ಇದೇ ಔಷಧಿಗಳನ್ನು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಉಪಯೋಗಿಸಲು ಪ್ರೇರೇಪಿಸುತ್ತಿದೆ. ನಮ್ಮ ರೈತರೂ ಮತಿ ಕಳಕೊಂಡವರಂತೆ ಆ ಕ್ಷಣ, ಆ ಹಂಗಾಮಿನ ತುರ್ತಿಗೆ ಇನ್ನಷ್ಟು ರಾಸಾಯನಿಕಗಳನ್ನು ಬಳಸುತ್ತಾ ನಮಗೊಂದು ಪರಿಸರ ಸ್ನೇಹೀ ಬೆಳೆ ವೈವಿಧ್ಯತೆಯ ಕೃಷಿ ಇತ್ತು ಎಂಬುದನ್ನು ಮರೆತವರಂತೆ ವರ್ತಿಸುತ್ತಿದ್ದಾರೆ. ಯಾರೂ ಈ ಗಿರಗಿರ ತಿರುಗುವ ವರ್ತುಲದಿಂದ ಹೊರಗೆ ಬರುವ ಸ್ಥಿತಿಯಲ್ಲಿಲ್ಲ. ದೊಡ್ಡ ಮಟ್ಟದ ಸಮುದಾಯ ಮತ್ತು ಸರ್ಕಾರದ ಪ್ರಯತ್ನದಿಂದಷ್ಟೇ ಇದು ಸಾಧ್ಯ.
ಉತ್ಪಾದಕ ಅಪಾಯಗಳು: ಇನ್ನೂ ಪಾರಂಪರಿಕ ಮಳೆ ನಕ್ಷತ್ರ ಮತ್ತು ಬಿತ್ತನೆಯ ಋತುಮಾನದಲ್ಲಿರುವ ರೈತರ ಕೈಗೆ ಅಲ್ಪ ಕಾಲಾವಧಿ ತಳಿ ನೀಡಲಾಗಿದೆ. ಇನ್ನೊಂದೆಡೆ ಏಕಬೆಳೆಗೆ ಪ್ರೋತ್ಸಾಹ ನೀಡಿ ಪೀಡೆ ಬಾಧೆ ಎಲ್ಲಿಂದ ಬಂತು ಎಂದು ಗೊತ್ತಾಗದಷ್ಟು ಬೇಗ ಪಸರಿಸುವ ಸ್ಥಿತಿ ನಿರ್ಮಾಣವಾಗಿದೆ. ರಾಸಾಯನಿಕ ಗೊಬ್ಬರ ಬಳಕೆಯಲ್ಲಿ ಅಗ್ಗವಾಗಿರುವ ಸಾರಜನಕ ಬಳಕೆ ಹೆಚ್ಚಾಗಿದೆ. ಬೆಳೆ ವೈವಿಧ್ಯತೆ ಮಾಯವಾಗಿದೆ. ಹೀಗೆ ಈ ಪಟ್ಟಿಯನ್ನು ಮುಂದುವರಿಸಬಹುದು
ಬಂಡವಾಳದ ಅಭಾವ: ಆಧುನಿಕ ಕೃಷಿ ವಿಜ್ಞಾನ ಮತ್ತು ಮಾರುಕಟ್ಟೆ ಛೂ ಬಿಟ್ಟಿರುವ ಈ ಕೃಷಿಪದ್ಧತಿಯನ್ನು ಚಾಲೂ ಮಾಡಲು ಬೇಕಾಗಿರುವ ಬಂಡವಾಳ ನಮ್ಮ ರೈತರ ಸಾಮಾಜಿಕ ಹಿನ್ನೆಲೆಯಿಂದಾಗಿ ಅವರಿಗೆ ದೊರಕುತ್ತಲೇ ಇಲ್ಲ. ಈ ಬಗ್ಗೆ ವರ್ಷ ವರ್ಷವೂ ಅಧ್ಯಯನ ಹೇಳಿಕೆಗಳು ಬರುತ್ತಲೇ ಇದ್ದರೂ ಪರಿಸ್ಥಿತಿಯಲ್ಲಿ ಯಾವ ಸುಧಾರಣೆಯೂ ಆಗಿಲ್ಲ. ಲಾವಣಿಯಂಥಾ ಉಪಕ್ರಮದ ಮೇಲೆ ಕೃಷಿ ಮಾಡುವ ರೈತರು ಬಿಡಿ; ಭೂಮಿ ಇರುವ ರೈತರಿಗೇ ಸಾಲ ದೊರಕುತ್ತಿಲ್ಲ. ರಾಯಚೂರಿನ ರೈತರ ಆತ್ಮಹತ್ಯೆಯ ಕುರಿತಾದ ಸರ್ಕಾರೀ ದಾಖಲೆ ಪ್ರಕಾರ ಅರ್ಧಕ್ಕರ್ಧ ರೈತರಿಗೆ ಭೂಮಿ ಹೊಂದಿದ ದಾಖಲೆ ಇಲ್ಲದಿರುವ ಕಾರಣ ಪರಿಹಾರ ನಿರಾಕರಿಸಲಾಗಿದೆ!!. ಚಿತ್ರದುರ್ಗ, ಮಂಡ್ಯದಲ್ಲೂ ಇದೇ ಸ್ಥಿತಿ. ಹತ್ತಿ ಬೆಳೆಗಾರರ ಕಥೆಗಳನ್ನು ನೋಡಿದರೆ, ಸಾಲಕ್ಕೆ ಮಂಡಿಯವರನ್ನು ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆ ಪದೇ ಪದೇ ದಾಖಲಾಗಿದೆ. ಲಾವಣಿ( ಲೀಸ್) ಗೆ ಭೂಮಿ ಪಡೆದು ಕೃಷಿ ಮಾಡುವ ರೈತರ ಪಾಡು ಇನ್ನೇನಿರಬೇಕು. ಆಂಧ್ರದಲ್ಲಿ ಸ್ವಸಹಾಯ ಸಂಘಗಳಿಗೆ ಲೀಸ್ ಮೇಲೆ ಕೃಷಿ ಭೂಮಿ ಪಡೆದು ಕೃಷಿ ಮಾಡುವ ಅನುಕೂಲವನ್ನು ಸರ್ಕಾರ ಮಾಡಿದೆ. ಇಲ್ಲೂ ರೈತರ ಗುಂಪುಗಳಿಗೆ ಇಂಥಾ ಅನುಕೂಲ ಮಾಡಿಕೊಡುವುದು ಕಷ್ಟವೇನಲ್ಲ.
ಜ್ಞಾನ ಪ್ರಸರಣದ ಗೈರುಹಾಜರು: ರಾಜ್ಯದಾದ್ಯಂತ ಆಧುನಿಕ ಕೃಷಿಯ ಕುರಿತಾದ ಜ್ಞಾನ ಪ್ರಸರಣ ಹಾಸ್ಯಾಸ್ಪದ ಮಟ್ಟದಲ್ಲಿದೆ. ರೈತರು ತಮಗೆ ತೋಚಿದಂತೆ, ತಾವು ಅರ್ಥ ಮಾಡಿಕೊಂಡಂತೆ ಗೊಬ್ಬರ ಪೀಡೆನಾಶಕ ಸುರಿಯುತ್ತಿದ್ದಾರೇ ಹೊರತು ವಿಜ್ಞಾನಿಗಳ ಶಿಫಾರಸ್ಸು ಅರ್ಥ ಮಾಡಿಕೊಂಡಲ್ಲ! ವಿಜ್ಞಾನಿಗಳು-ಕೃಷಿ ಇಲಾಖೆ ರೈತರಿಗೆ ಅರ್ಥವಾಗುವ ನುಡಿಗಟ್ಟಲ್ಲಿ ವಿವರಿಸುವ ಕೌಶಲ್ಯವನ್ನು ರೂಢಿಸಿಕೊಂಡಿಲ್ಲ.. ಇದರಿಂದಾಗಿ ವೈದ್ಯಕೀಯ ರಂಗದಲ್ಲಿ ನಕಲಿ ವೈದ್ಯರು ಆರೋಗ್ಯ ಭಾಗ್ಯ ನೀಡುತ್ತಿರುವಂತೆ ಇಲ್ಲೂ ಗೊಬ್ಬರ, ಬೀಜದ ಅಂಗಡಿಯವರು ಆಪ್ತ ಸಮಾಲೋಚಕರೂ ಸರಬರಾಜುದಾರರೂ ಆಗಿದ್ದಾರೆ. ಇದರ ವೈಪರೀತ್ಯಕ್ಕೆ ಹತ್ತಿ ಬೆಳೆಗಾರರು ಬಳಸಿದ ಕೀಟನಾಶಕಗಳ ಪಟ್ಟಿಯನ್ನು ಉದಾಹರಣೆಯಾಗಿ ನೋಡಿದರೆ ಸಾಕು. ಕೇಂದ್ರ ಸರ್ಕಾರದ ವರದಿಯಲ್ಲಿ ಉಲ್ಲೇಖವಾಗಿರುವ ಹೆಸರುಗಳನ್ನು ನೋಡಿದರೇ ತಲೆ ತಿರುಗುತ್ತದೆ. ಇಂಥಾ ವಿಷಕಾರೀ ರಾಸಾಯನಿಕಗಳ ಬಳಕೆ ಬಗ್ಗೆ ಸರ್ಕಾರ ತೀವ್ರ ನಿಗಾ ಇಡುವ ವ್ಯವಸ್ಥೆ ನಿರ್ಮಿಸಿದೆಯೇ ಎಂದರೆ ಅದೂ ಇಲ್ಲ. ಎಗ್ಗಿಲ್ಲದ ಮಾರಾಟ, ಬಳಕೆ ನಡೆಯುತ್ತಿದೆ.
ಕಳೆದ 4 ದಶಕಗಳಿಂದ ಕೃಷಿ ವಿಜ್ಞಾನಿಗಳ ಕೈಯ್ಯಲ್ಲಿ ನಮ್ಮ ಕೃಷಿಯನ್ನು ಕೊಟ್ಟಿದ್ದರಿಂದ ಪರಿಸ್ಥಿತಿ ಸುಧಾರಿಸಿದಂತೆ ಕಾಣುತ್ತಿಲ್ಲ. ‘90ರ ದಶಕದಲ್ಲಿ ತೇಜಸ್ವಿ ಒಮ್ಮೆ ಕೃಷಿ ವಿಜ್ಞಾನಿಗಳನ್ನು ಉದ್ದೇಶಿಸಿ ಹೇಳಿದ್ದರು, “ ನಿಮಗೆ ನೂರು ಕೋಟಿ, ಇನ್ನೂರು ಕೋಟಿ ಎಷ್ಟು ಬೇಕೋ ತೆಗೊಳ್ಳಿ; ಬಿಲ್ಡಿಂಗ್, ಮೈಕ್ರೋಸ್ಕೋಪ್, ವೆಹಿಕಲ್, ಎಲ್ಲಾ ತೆಗೊಳ್ಳಿ; ಬೇಕಾದ ಸಂಶೋಧನೆ ಮಾಡಿ, ಆದ್ರೆ, ದಮ್ಮಯ್ಯಾ ನಮ್ಮ ಉಸಾಬರಿಗೆ ಬರಬೇಡಿ” ಅಂತ.!
ಈ ವರ್ಷದ ರೈತ ಆತ್ಮಹತ್ಯೆ ಮತ್ತು ಕೃಷಿ ಬಿಕ್ಕಟ್ಟನ್ನು ನೋಡುತ್ತಿದ್ದರೆ, ತುರ್ತಾಗಿ ನಮ್ಮ ಕೃಷಿಯನ್ನು ಪಾರು ಮಾಡಲು ನಮಗೆ ಬೇಕಾಗಿರುವುದು ಸಂವೇದನಾ ಶೀಲ ಸಮಾಜ ವಿಜ್ಞಾನಿಗಳು, ಅರ್ಥಶಾಸ್ತ್ರಜ್ಞರು ಮತ್ತು ಸಾಮಾಜಿಕ ಹೋರಾಟಗಾರರು.. ಸದ್ಯದ ಬಿಕ್ಕಟ್ಟು ಕೃಷಿಯ ತಾಂತ್ರಿಕ ಕೌಶಲ್ಯದ ಪ್ರಶ್ನೆಯಾಗಿ ಉಳಿದಿಲ್ಲ. ಅದೀಗ ಒಂದು ರಾಜಕೀಯ ಸಾಮಾಜಿಕ ಆರ್ಥಿಕತೆಯ ಸವಾಲಾಗಿದೆ. ಒಂದರ್ಥದಲ್ಲಿ ನಾಗರಿಕತೆಯ ಉಳಿವಿನ ಪ್ರಶ್ನೆ.
ಇದೀಗ ಇಡೀ ಕೃಷಿ ಲೋಕವನ್ನು ಒಂದು ಸಾಮಾಜಿಕ, ಆರ್ಥಿಕ ಸುಧಾರಣೆಯ ಪ್ರಶ್ನೆಯಾಗಿ ನಾವು ಕೈಗೆತ್ತಿಕೊಳ್ಳಬೇಕು. ಜೀವನೋಪಾಯಗಳು ಬದುಕಿಗೆ ಸಂತುಷ್ಟಿಯನ್ನು ನೀಡಬೇಕೇ ಹೊರತು ಸ್ಪರ್ಧಾತ್ಮಕ ಓಟವನ್ನಲ್ಲ. ಅಷ್ಟಕ್ಕೂ ಈ ಕಾಸು ಮಾಡುವ ಓಟದಲ್ಲಿ ರೈತ ಗೆದ್ದ ಉದಾಹರಣೆ ಇಲ್ಲ. ಸಂತುಲಿತ, ಒತ್ತಡ ರಹಿತ ಬಾಳುವೆ ಮಾತ್ರಾ ರೈತ ಗಳಿಸಬಹುದಾದ್ದು, ಅದಕ್ಕೆ ಈಗಿನ ಅಧಿಕ ಬಳಕೆ, ಸಾಂದ್ರ ಬೇಸಾಯ, ಮಾರುಕಟ್ಟೆ ಓಟದ ಕೃಷಿ ಸಹಾಯ ಮಾಡದು. ಅದಕ್ಕೆ ಬೇಕಾಗಿರುವುದು ಪರಸ್ಪರ ಕೊಡು-ಕೊಳು ಪರಂಪರೆ. ಬೆಳೆ, ಬೀಜ, ಗೊಬ್ಬರ, ಕೂಲಿ ಎಲ್ಲದರಲ್ಲೂ ಪರಸ್ಪರ ಕಲಿತು ಕಲಿಸಿ ಹಂಚಿ ಉಣ್ಣುವ ನಕಾಶೆಯೊಂದನ್ನು ಸರ್ಕಾರ ಸಮುದಾಯದೆದುರು ಸಾದರಪಡಿಸದಿದ್ದರೆ, ಹೆಣಗಳ ಸಾಲಿಗೆ ಗಾಂಭೀರ್ಯ ನಟಿಸಿ ಹಾರ ಹಾಕಿ ಕಾಸು ಕೊಡುವ ಆಚರಣೆ ಮುಂದುವರಿಯುತ್ತದೆ.
ಈ ಮಾತುಗಳು ಕೊಂಚ ಬೀಸು ಹೇಳಿಕೆಯಂತೆ ಕಂಡರೆ ಓಕೆ. ವಸ್ತು ಸ್ಥಿತಿಯನ್ನು ಹತ್ತಿರದಿಂದ ನೋಡಿದರೆ, ಇದನ್ನೆಲ್ಲಾ ಹೇಳಬೇಕಾಗಿರುವ ಪ್ರಜಾ ಪ್ರತಿನಿಧಿಗಳ ಬಗ್ಗೆಯೂ ನಿರಾಸೆಯಾಗುತ್ತದೆ.
ಆಧುನಿಕ ಕೃಷಿ ಕಾಲಿಟ್ಟ ಮೇಲೆ ಎಲ್ಲವೂ ಸಾಂಗೋಪಾಂಗವಾಗಿ ಅನುಷ್ಠಾನವಾಗಿದ್ದರೆ, ಅತ್ತ ಶಿಕ್ಷಣ, ಆರೋಗ್ಯವೂ ದಕ್ಕದೇ ಇತ್ತ ಕೃಷಿಯಲ್ಲಿ ದಿಕ್ಕು ದಕ್ಕದೇ ಬೇಸಿಗೆಯಲ್ಲಿ ಗುಳೆ ಹೋಗುವ; ಮಳೆ ಬಿದ್ದ ತಕ್ಷಣ ಬೀಜ ಗೊಬ್ಬರ, ಟ್ರಾಕ್ಟರ್ ಅಂತ ಹುಚ್ಚು ಹಿಡಿದಂತೆ ಅಲೆವ ರೈತ ಸಮುದಾಯ ಸೃಷ್ಟಿಯಾಗುತ್ತಿರಲಿಲ್ಲ.
ಅಂದ ಹಾಗೆ ಈ ಬಗ್ಗೆ ಆಳವಾದ ಅಧ್ಯಯನ ಮಾಡಿರುವ ನಮ್ಮ ಕೃಷಿ-ಸಾಂಸ್ಕೃತಿಕ ಲೋಕದಲ್ಲಿ ಒಡನಾಟ ಹೊಂದಿರುವ ಎ.ಆರ್.ವಾಸವಿ, ಎಮ್.ಎಸ್. ಶ್ರೀರಾಮ್ ಅಂಥವರ ಕಡೆಗೆ ನಮ್ಮ ಸರ್ಕಾರದ ಗಮನಹೋದಂತಿಲ್ಲ. ಸರ್ಕಾರ ಇನ್ನೂ ಸ್ವಾಮಿನಾಥನ್… ಅಂತ ಕಮಿಟಿ ಮಾಡುವ ಪ್ರಯತ್ನ ನೋಡಿದರೆ, ಕಣ್ಣು ವಾಸ್ತವದಲ್ಲಿ ನೆಟ್ಟಿರುವ ಬದಲು ಕಮಿಟಿ ಕೊಠಡಿಗಳ ಇಮೇಜಿನ ಕಡೆ ಇದೆ ಅನ್ನಿಸುತ್ತೆ.