ರೈತರ ಕಸುವು–ಕನಸುಗಳ ಸಂಕಲನದ ಯೋಗೇಂದ್ರರ ಗಣಿತ- ಆನಂದತೀರ್ಥ ಪ್ಯಾಟಿ

                

 

 

ಅತ್ತ ರಾಜಕಾರಣದಲ್ಲೂ ಇತ್ತ ಜನಪರ ಹೋರಾಟದಲ್ಲೂ ನಿರತರಾಗಿರುವ ಯೋಗೇಂದ್ರ ಯಾದವ್ ಅವರ ದೃಷ್ಟಿ ಈಗ ‘ಕಿಸಾನ್‌’ ಸಮುದಾಯದೆಡೆ ಹೆಚ್ಚು ವಾಲಿದೆ. ಅವರು ಪಾಲ್ಗೊಳ್ಳುತ್ತಿರುವ ಕಾರ್ಯಕ್ರಮ, ಚರ್ಚಾಗೋಷ್ಠಿ, ವಿಚಾರಸಂಕಿರಣಗಳನ್ನು ಗಮನಿಸಿದರೆ, ರೈತಪರ ವಿಚಾರಗಳಿಗೆ ಅವರು ಹೆಚ್ಚು ಒತ್ತು ಕೊಡುತ್ತಿರುವಂತೆ ಗೋಚರಿಸುತ್ತಿದೆ.

‘‘ಅದರಲ್ಲಿ ಅಚ್ಚರಿಯೇನಿಲ್ಲ. ನಾನು ಎರಡೂವರೆ ದಶಕಗಳ ಹಿಂದೆಯೇ ಕೃಷಿಕನಾಗಬೇಕೆಂದು ಹಳ್ಳಿಗೆ ಹೋಗಿದ್ದವನು. ಅಲ್ಲಿಗೆ ಹೋದ ಕೆಲವೇ ದಿನಗಳಲ್ಲಿ ಅನಿರೀಕ್ಷಿತ ತಿರುವುಗಳಿಂದಾಗಿ ಅದನ್ನೆಲ್ಲ ತೊರೆದು ಬಂದೆ. ಈಗಲೂ ನನ್ನ ಹೃದಯ ಮಿಡಿಯುತ್ತಿರುವುದು ರೈತರಿಗಾಗಿ’’ ಎನ್ನುವ ಯೋಗೇಂದ್ರ ಯಾದವ್, ರೈತಪರ ರಾಜಕಾರಣವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನದಲ್ಲಿದ್ದಾರೆ.

ಹೈದರಾಬಾದಿನಲ್ಲಿ ಕಳೆದ ವಾರ ‘ಸುಸ್ಥಿರ ಮತ್ತು ಸಮಗ್ರ ಕೃಷಿ ಮೈತ್ರಿಕೂಟ’ (ಆಶಾ) ಆಯೋಜಿಸಿದ್ದ ‘ಕಿಸಾನ್ ಸ್ವರಾಜ್ ಸಮ್ಮೇಳನ’ವು ರೈತ ಮುಖಂಡರ ಹಲವು ವಿಚಾರಲಹರಿಗಳಿಗೆ ನಿರ್ದಿಷ್ಟ ದಿಕ್ಕು ತೋರಿಸುವಂತಿತ್ತು. ಇಪ್ಪತ್ತಕ್ಕೂ ಹೆಚ್ಚು ರಾಜ್ಯಗಳ ರೈತರು, ತಮ್ಮ ನಾಡಿನ ಕೃಷಿ ವೈವಿಧ್ಯವನ್ನು ಪ್ರದರ್ಶಿಸಿ ‘ಸುಸ್ಥಿರ ಕೃಷಿಯನ್ನು ಮತ್ತೆ ರೈತರ ಜಮೀನಿಗೆ ತರಬೇಕು’ ಎಂದು ಒತ್ತಾಯಿಸಲು ಅಲ್ಲಿಗೆ ಬಂದಿದ್ದರು.

ಸುಸ್ಥಿರ ಬೇಸಾಯದ ಹತ್ತು ಹಲವು ಆಯಾಮಗಳು ಒಂದೇ ಕಡೆ ಸಿಗುವ ತಾಣಕ್ಕೆ ಯೋಗೇಂದ್ರ ಯಾದವ್ ಹೆಚ್ಚು ಆಸಕ್ತಿಯಿಂದ ಬಂದಿದ್ದರು. ಸಮಾನಾಸಕ್ತರು, ರೈತ ಮುಖಂಡರು, ಪರಿಸರವಾದಿಗಳ ಜತೆ ಚರ್ಚೆಯಲ್ಲಿ ನಿರತವಾಗಿದ್ದ ಯಾದವ್, ತಮ್ಮ ಮುಂದಿನ ನಡೆಗಳ ಕುರಿತು ಹಂಚಿಕೊಳ್ಳಲು ‘ಮುಕ್ತಛಂದ’ದ ಜತೆ ಮಾತಿಗೆ ಕುಳಿತರು.

ಪ್ರಸ್ತುತ ಸೃಷ್ಟಿಯಾಗಿರುವ ರೈತ ಬಿಕ್ಕಟ್ಟು ಇದೇ ರೀತಿ ಮುಂದುವರಿದರೆ, ಹಳ್ಳಿಗಳು ಕರಗಿ ಹೋಗಲಿವೆ ಎಂಬ ಆತಂಕ ಅವರದಾಗಿತ್ತು. ಗ್ರಾಮೀಣ ಭಾರತ ಉಳಿಸಲು ಅನುಸರಿಸಬೇಕಾದ ದಾರಿಯ ಕುರಿತು ಅವರಲ್ಲಿ ಸ್ಪಷ್ಟ ಯೋಚನೆ– ಯೋಜನೆಗಳು ಇದ್ದವು.

ಒಂದೂವರೆ ದಶಕಗಳ ಅವಧಿಯಲ್ಲಿ ಭಾರತದ ಕೃಷಿ ವಲಯ ಎಂದೂ ಕಂಡರಿಯದಂಥ ದುಸ್ಥಿತಿಗೆ ತಲುಪಿಬಿಟ್ಟಿದೆ. ಈ ಅವನತಿಯನ್ನು ಕೇಂದ್ರೀಕರಿಸಿ, ರೈತರ ಸಂಕಟ ಪರಿಹಾರಕ್ಕೆ ಯತ್ನಿಸಲು ಯೋಗೇಂದ್ರ ಯಾದವ್ ಮತ್ತವರ ತಂಡ ಕಳೆದ ವರ್ಷ ‘ಜೈ ಕಿಸಾನ್ ಆಂದೋಲನ್’ ಆರಂಭಿಸಿದೆ. ‘‘ನಮಗೆಲ್ಲ ಗೊತ್ತಿರುವಂತೆ ಬರ, ಪ್ರಾಕೃತಿಕ ವಿಕೋಪ, ಬೆಳೆ ಹಾನಿ, ಆತ್ಮಹತ್ಯೆ, ಮರೀಚಿಕೆಯಾದ ವೈಜ್ಞಾನಿಕ ಬೆಲೆ, ಇವೆಲ್ಲದರ ಪರಿಣಾಮವೇ ಈಗ ನಾವು ಕಾಣುತ್ತಿರುವ ಕೃಷಿ ಬಿಕ್ಕಟ್ಟು. ಈಗಿನ ಸ್ಥಿತಿಯನ್ನು ಗಮನಿಸಿದರೆ ಭಾರತೀಯ ಕೃಷಿಗೆ ಉಳಿಗಾಲವಿಲ್ಲ; ರೈತ ಬದುಕಲು ಆಗುತ್ತಿಲ್ಲ. ಹೀಗಾಗಿ, ರೈತರ ಭವಿಷ್ಯ ಏನು ಎಂಬ ಬಹು ಮುಖ್ಯ ಪ್ರಶ್ನೆಯು ನಮ್ಮೆದುರು ನಿಂತಿದೆ’’ ಎನ್ನುವುದು ಯಾದವ್ ಅವರ ವಿಶ್ಲೇಷಣೆ.

ಭಾರತದ ಮೂಲಬೇರು ಇರುವುದು ಹಳ್ಳಿಗಳಲ್ಲಿ ನಡೆಯುವ ಸಾಂಪ್ರದಾಯಿಕ ಕೃಷಿ ವ್ಯವಸ್ಥೆಯಲ್ಲಿ. ಈ ಶೈಲಿಯನ್ನು ಪಲ್ಲಟಗೊಳಿಸಿರುವ ಕಾರ್ಪೊರೇಟ್ ಮಾದರಿ ವ್ಯವಸಾಯವು ಹಳ್ಳಿಗಳಲ್ಲಿದ್ದ ಸ್ವಾವಲಂಬನೆಯ ಪರಿಕಲ್ಪನೆಗೆ ಬಹು ದೊಡ್ಡ ಪೆಟ್ಟು ನೀಡಿದೆ ಎಂದು ಯಾದವ್ ಆಕ್ರೋಶ ವ್ಯಕ್ತಪಡಿಸುತ್ತಾರೆ. ಈಗ ಚಾಲ್ತಿಯಲ್ಲಿರುವ ನೀತಿ, ಕಾಯ್ದೆಗಳು ಹಾಗೂ ಆರ್ಥಿಕ ಸಂರಚನೆಯನ್ನು ಗಮನಿಸಿದರೆ ರೈತ ಬರೀ ಕಾರ್ಮಿಕನಾಗಿಯೇ ಉಳಿಯಲಿದ್ದಾನೆ.

ರೈತರ ಜಮೀನು ಖಾಸಗಿ ಕಂಪೆನಿಗಳಿಗೆ ಹೋಗಲಿದೆ. ಹಳ್ಳಿಗಳು ಕರಗಿ ಹೋಗಲಿವೆ ಎನ್ನುವ ಆತಂಕ ಅವರದು. ‘‘ಯಾರೊಬ್ಬರೂ ಹಳ್ಳಿಯಲ್ಲಿ ಬದುಕಲು ಇಷ್ಟಪಡುತ್ತಿಲ್ಲ. ಇದನ್ನು ಹೊರತುಪಡಿಸಿ ಬೇರೆ ಯಾವುದಾದರೂ ಭವಿಷ್ಯ ನಮಗೆ ಕಾಣುತ್ತಿದೆಯೇ? ಇದು ನಮ್ಮ ಎದುರಿಗಿರುವ ಸವಾಲು’‘ ಎನ್ನುತ್ತಾರೆ.

 

ರೈತ ರಾಜಕೀಯ
* ರೈತರು ಹಾಗೂ ಕೃಷಿ ವಿಷಯಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವ ಪಕ್ಷಗಳಿಗೆ ಕೊರತೆಯಿಲ್ಲ. ಅದರ ಬದಲಿಗೆ ರೈತರೇ ಸಕ್ರಿಯ ರಾಜಕಾರಣಕ್ಕೆ ಇಳಿದರೆ?

 

 

ಇಂಥದೊಂದು ಸಾಧ್ಯತೆಯು ಕೃಷಿ ಬಿಕ್ಕಟ್ಟಿಗೆ ಸಮರ್ಥವಾದ ಪರಿಹಾರ ಕೊಡಬಲ್ಲದು ಎಂದು ಪ್ರತಿಪಾದಿಸುತ್ತಾರೆ ಯೋಗೇಂದ್ರ ಯಾದವ್. ‘‘ರೈತರು, ರೈತ ಸಂಘಟನೆಗಳು ರಾಜಕೀಯಕ್ಕೆ ಬರಬಾರದು ಎಂದು ಬಹುತೇಕ ಜನರು ಹೇಳುತ್ತಾರೆ. ಆದರೆ, ರೈತರನ್ನು ಉಳಿಸಬೇಕೆಂದರೆ ಅವರು ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಯಾಕೆಂದರೆ, ರೈತರ ಸಂಕಟ ಪರಿಹರಿಸಲು ಯಾವ ರಾಜಕೀಯ ಪಕ್ಷಗಳಿಗೂ ಆಸಕ್ತಿ ಇಲ್ಲ; ಪ್ರಬಲ ರಾಜಕೀಯ ಇಚ್ಛಾಶಕ್ತಿಯಂತೂ ಮೊದಲೇ ಇಲ್ಲ’’ ಎಂಬುದು ಅವರ ಅಭಿಮತ.

ಯಾದವ್ ಅವರ ಪ್ರಕಾರ, ಶ್ರೀಮಂತರು ಹಾಗೂ ಪ್ರಭಾವಶಾಲಿಗಳು ರಾಜಕೀಯ ಮಾಡುವ ಅಗತ್ಯವಿಲ್ಲ! ‘‘ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪೆನಿಗಳು ತಮ್ಮ ಸಾಲ ಅಥವಾ ತೆರಿಗೆ ಮನ್ನಾ ಮಾಡಿಸಿಕೊಳ್ಳಬೇಕು ಎಂದಾದಾಗ ಅವರು ರಾಜಕೀಯ ಮಾಡಬೇಕಿಲ್ಲ. ಬರೀ ಒಂದು ಫೋನ್ ಕರೆ ಮಾಡಿದರೆ ಸಾಕು! ಸರ್ಕಾರಿ ಉದ್ಯೋಗಿಗಳ ಪ್ರಭಾವಿ ಸಂಘಟನೆಗಳು ತಮ್ಮ ಕೆಲಸಕ್ಕೆ ರಾಜಕೀಯ ಮಾಡಬೇಕಿಲ್ಲ.

ಅವುಗಳಿಗೂ ಸುಲಭದ ದಾರಿ ಇರುತ್ತದೆ. ಇನ್ನು ಮಧ್ಯಮ ವರ್ಗದ ಜನರು ಎಷ್ಟು ಪ್ರಭಾವಿಗಳೆಂದರೆ, ಅವರು ಹಲವು ಮಾರ್ಗ ಹಾಗೂ ಹೋರಾಟದ ಮೂಲಕ ತಮ್ಮ  ಇಪಿಎಫ್ ಹಿಂತೆಗೆತದ ಪ್ರತಿಬಂಧಕವನ್ನು ರದ್ದುಪಡಿಸಿಕೊಳ್ಳಬಲ್ಲರು. ರೈತರಿಗೆ ಅಂಥ ಯಾವ ಅವಕಾಶಗಳೇ ಇಲ್ಲ ಎಂಬುದು ದುರಂತ. ಅವರ ಸಾಮರ್ಥ್ಯ ಎಂದರೆ ಬಹು ದೊಡ್ಡ ಸಂಖ್ಯೆ. ಭಾರತದ ಜನಸಂಖ್ಯೆಯಲ್ಲಿ 60 ಕೋಟಿ ರೈತರು ಇದ್ದಾರೆ ಎಂದ ಮೇಲೆ ಅದೇ ದೊಡ್ಡ ಶಕ್ತಿ’’ ಎಂಬ ವಿಶ್ಲೇಷಣೆ ಅವರದು.

* ಹಾಗಿದ್ದರೆ ರೈತ ರಾಜಕೀಯದ ಸಾಕಾರ ಸುಲಭವಲ್ಲವೇ?
‘‘ಅದು ತೀರಾ ಕಷ್ಟ ಅನಿಸುತ್ತಿದೆ. ಯಾಕೆಂದರೆ, ತಮ್ಮ ಸಾಮರ್ಥ್ಯದ ಬಗ್ಗೆ ರೈತ ಸಮುದಾಯದಲ್ಲಿ ಅರಿವೇ ಇಲ್ಲ. ತನ್ನ ಬಗ್ಗೆ ತಾನೇ ಕೀಳರಿಮೆ ಬೆಳೆಸಿಕೊಂಡಿರುವ ರೈತ, ನಿರಾಶೆಯಲ್ಲಿ ಕಾಲ ನೂಕುತ್ತಿದ್ದಾನೆ.

ಯಾವ ರೈತನೂ ತನ್ನ ಮಗ ರೈತನಾಗಲು ಬಯಸುತ್ತಿಲ್ಲ. ರೈತರ ಬಳಿ ಒಂದು ವೋಟ್ ಜತೆಗೆ ಬರೀ ಒಂದು ತುಂಡು ನೆಲ ಇದೆ, ಅಷ್ಟೇ. ತಮ್ಮ ಮತವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳದೇ ಹೋದರೆ ತಮ್ಮ ಕಾಲಡಿ ಇರುವ ತುಂಡು ನೆಲವನ್ನೂ ಕಳೆದುಕೊಳ್ಳುವ ದಿನ ದೂರವಿಲ್ಲ. ಹೀಗಾಗಿ ರೈತರಿಗೆ ರಾಜಕೀಯ ಬೇಕೇ ಬೇಕು.

ರಾಜಕೀಯ ಎಂದಾಕ್ಷಣ ಮತದಾನ, ಪಕ್ಷ ಕಟ್ಟುವುದು ಇಷ್ಟೇ ಅಲ್ಲ. ಅವರು ಒಟ್ಟಾಗಿ, ಪ್ರತಿಭಟನೆ ಮಾಡಿ, ತಮ್ಮನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎಂಬುದನ್ನು ಪ್ರಶ್ನಿಸಬೇಕು. ಆಡಳಿತ ಯಂತ್ರ ಹೇಗೆ ನಡೆಸಬೇಕು ಎಂಬ ಬಗ್ಗೆ ಅವರು ಸಲಹೆ ಮಾಡಬೇಕು. ಅದು ರೈತ ರಾಜಕೀಯ’’ ಎಂದು ವಿವರಿಸುತ್ತಾರೆ.

ಕೃಷಿಕರನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ರಾಜಕೀಯ ಪಕ್ಷಗಳ ಬಗ್ಗೆ ಯೋಗೇಂದ್ರ ಯಾದವ್ ಕಿಡಿ ಕಾರುತ್ತಾರೆ. ‘‘ರೈತರೆಂದರೆ ಘೋಷಣೆ ಕೂಗುವವರು, ಮೃದು ಮಾತುಗಳಿಗೆ ಒಲಿಯುವವರು ಎಂದಷ್ಟೇ ಪಕ್ಷಗಳು ಭಾವಿಸಿವೆ. ಒಂದಷ್ಟು ಜನಪ್ರಿಯ ಕಾರ್ಯಕ್ರಮಗಳ ಮೂಲಕ ರೈತರಿಗೆ ಪುಡಿಗಾಸು ಕೊಡುತ್ತಾರೆ.

ವಾಸ್ತವವಾಗಿ ಅವರಿಗೆ ನೆರವಾಗುವ ಗಟ್ಟಿ ಯೋಜನೆಗಳನ್ನು ರೂಪಿಸುತ್ತಿಲ್ಲ. ಚುನಾವಣೆ ಸಮಯದಲ್ಲಿ ರೈತರು ಒಕ್ಕಲಿಗ ಅಥವಾ ಲಿಂಗಾಯತ ಅಥವಾ ಕುರುಬ ಎಂದಷ್ಟೇ ಪರಿಗಣಿತವಾಗುತ್ತಾನೆ. ಅದೇ ಆ ಪಕ್ಷಗಳಿಗೆ ಲಾಭ ಕೊಡುತ್ತದೆ. ವಿಪರ್ಯಾಸದ ಸಂಗತಿ ಎಂದರೆ, ಈಗ ರೈತರು ಎಂದೂ ಕಂಡರಿಯದಂಥ ಸಂಕಟದಲ್ಲಿದ್ದಾರೆ, ರೈತಪರ ರಾಜಕೀಯ ವಿಘಟನೆಗೊಂಡಿದೆ’’ ಎಂದು ವಿಷಾದಿಸುವ ಯಾದವ್, ‘‘ಈ ಸಂದರ್ಭದಲ್ಲಿ ಮಾರ್ಗದರ್ಶನ ಮಾಡಲು ಪ್ರೊ. ಎಂ.ಡಿ. ನಂಜುಂಡಸ್ವಾಮಿ, ಮಹೇಂದ್ರ ಸಿಂಗ್ ಟಿಕಾಯತ್, ಶರದ್ ಜೋಶಿ ಅವರಂಥ ದೊಡ್ಡ ದೊಡ್ಡ ನಾಯಕರೇ ಇಲ್ಲ. ಅವರ ಎಲ್ಲ ನಿಲುವುಗಳಿಗೆ ತಮ್ಮ ಸಹಮತವಿಲ್ಲದಿದ್ದರೂ ಆ ನಾಯಕರ ರೈತಪರ ಕಾಳಜಿ ಪ್ರಶ್ನಾತೀತ’’ ಎಂದು ನೆನಪಿಸಿಕೊಳ್ಳುತ್ತಾರೆ.

ಸ್ವರಾಜ್ ಅಭಿಯಾನ್
ಗ್ರಾಮೀಣ ಭಾರತ ಪುನಶ್ಚೇತನ ಗುರಿಯನ್ನು ಮುಂದಿಟ್ಟುಕೊಂಡು ಯೋಗೇಂದ್ರ ಯಾದವ್ ಹಾಗೂ ಸಮಾನ ಮನಸ್ಕರ ತಂಡವು ‘ಸ್ವರಾಜ್ ಅಭಿಯಾನ್’ ಆರಂಭಿಸಿದೆ. ಅದರ ಒಂದು ಭಾಗವಾಗಿ ‘ಜೈಕಿಸಾನ್ ಆಂದೋಲನ’ ರೂಪುಗೊಂಡಿದೆ. ಭೂಸ್ವಾಧೀನ ಮಸೂದೆ ವಿರೋಧಿಸಿ ಪಂಜಾಬ್‌ನಿಂದ ದೆಹಲಿವರೆಗೆ ರೈತರ ಜಾಥಾ ನಡೆಸಲಾಗಿದೆ.

ಬರಗಾಲದ ಬವಣೆಯನ್ನು ಮನವರಿಕೆ ಮಾಡಿಕೊಡಲು ಕರ್ನಾಟಕದಿಂದ ದೆಹಲಿವರೆಗೆ ಜಾಥಾ ನಡೆದಿದೆ. ‘‘ಇದೆಲ್ಲದರ ಉದ್ದೇಶವೊಂದೇ– ಹಳ್ಳಿಗಳನ್ನು ಸ್ವಾಭಿಮಾನದ ತಾಣಗಳನ್ನಾಗಿ ಮಾಡುವುದು. ರೈತರು ಅಲ್ಲೇ ಉಳಿಯುವಂತೆ ಮಾಡುವುದು. ಹಳ್ಳಿಗಳು ರೈತರ ಹೆಮ್ಮೆಯ ವಾಸಸ್ಥಾನವಾಗುವಂತೆ ಪರಿವರ್ತಿಸುವುದು’’ ಎನ್ನುತ್ತಾರೆ ಯಾದವ್.

ಇದರ ಜತೆಗೆ ಭ್ರಷ್ಟಾಚಾರ ವಿರೋಧ, ಶಿಕ್ಷಣ ಹಾಗೂ ಕೋಮುಸೌಹಾರ್ದ ಸ್ಥಾಪನೆ ಎಂಬ ಇತರ ಮೂರು ಗುರಿಗಳನ್ನೂ ಇಟ್ಟುಕೊಳ್ಳಲಾಗಿದೆ. ಹಿರಿಯ ವಕೀಲ ಪ್ರಶಾಂತ್ ಭೂಷಣ್ ನೇತೃತ್ವದಲ್ಲಿ ಭ್ರಷ್ಟಾಚಾರ ವಿರೋಧಿ ತಂಡ ರಚಿಸಲಾಗಿದೆ. ಎಲ್ಲ ನಗರ– ಪಟ್ಟಣಗಳಲ್ಲಿ ಇದರ ಶಾಖೆ ಆರಂಭಿಸಲಾಗುತ್ತಿದ್ದು, ಆರ್‌ಟಿಐ ಕಾರ್ಯಕರ್ತರು, ವಕೀಲರು ಇರಲಿದ್ದಾರೆ.

ಶಿಕ್ಷಣ ಹಾಗೂ ಯುವಪೀಳಿಗೆಯನ್ನು ಗಮನದಲ್ಲಿ ಇಟ್ಟುಕೊಂಡು, ಕಾರ್ಯಕ್ರಮ ರೂಪಿಸಲಾಗುತ್ತಿದೆ. ‘‘ಅರ್ಥಪೂರ್ಣ ಹಾಗೂ ಪ್ರಸ್ತುತ ಅಗತ್ಯಕ್ಕೆ ನೆರವಾಗುವ ಶಿಕ್ಷಣವನ್ನು ಸ್ಥಳೀಯ ಭಾಷೆಯಲ್ಲೇ ಕೊಡಿ ಎಂದು ಒತ್ತಾಯಿಸಲಾಗುವುದು. ಕೋಮುವಾದ ಹಾಗೂ ಜಾತಿವಾದವನ್ನು ಹಿಮ್ಮೆಟ್ಟಿಸುವುದು ಸ್ವರಾಜ್ ಅಭಿಯಾನದ ಇನ್ನೊಂದು ಮುಖ್ಯ ಕಾರ್ಯಕ್ರಮ’’ ಎಂಬ ವಿವರವನ್ನು ಕೊಡುತ್ತಾರೆ.

‘ಆಪ್’ ಸ್ಫೂರ್ತಿ
ಭ್ರಷ್ಟಾಚಾರದ ವಿಷಯವನ್ನು ಪ್ರಮುಖವಾಗಿ ಮುಂದಿಟ್ಟುಕೊಂಡು ‘ಆಮ್ ಆದ್ಮಿ ಪಾರ್ಟಿ’ (ಆಪ್) ರೂಪಿಸಿದ ಹೋರಾಟ, ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನರನ್ನು ಆಕರ್ಷಿಸಿದ ಆಂದೋಲನ. ಅದರಲ್ಲೂ ಯುವಜನತೆ ಸ್ವಯಂಪ್ರೇರಿತವಾಗಿ ದೊಡ್ಡ ಪ್ರಮಾಣದಲ್ಲಿ ಈ ಚಳವಳಿಯಲ್ಲಿ ಪಾಲ್ಗೊಂಡಿದ್ದು ‘ಆಪ್’ನ ಮುಂಚೂಣಿ ನಾಯಕರಾಗಿದ್ದ ಯೋಗೇಂದ್ರ ಯಾದವ್‌ ಅವರಿಗೆ ಖುಷಿ ಕೊಟ್ಟಿದೆ.

‘‘ಇಂಥದೊಂದು ಮಹತ್ವದ ಬದಲಾವಣೆಗೆ ದೇಶ ಸಾಕ್ಷಿಯಾಗಿದ್ದನ್ನು ನೋಡಿ ನನಗೆ ಸಂತಸವಾಗಿದೆ. ಇದರ ಪರಿಣಾಮದಿಂದಾಗಿ, ಪಕ್ಷವು ನೇರವಾಗಿ ರಾಜಕೀಯಕ್ಕೆ ಪ್ರವೇಶ ಪಡೆಯುವಂತಾಗಿದ್ದನ್ನೂ ಖುಷಿಯಿಂದ ನೋಡುತ್ತಿದ್ದೇನೆ’’ ಎನ್ನುತ್ತಾರೆ ಯಾದವ್.

‘ಆಪ್‌’ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದ ಯಾದವ್, ಪಕ್ಷವಿರೋಧಿ ಚಟುವಟಿಕೆಗಳ ಆರೋಪದ ಮೇರೆಗೆ ಕಳೆದ ವರ್ಷ ಉಚ್ಚಾಟಿತರಾದರು. ಹಾಗೆಂದು ಅವರಿಗೆ ಪಕ್ಷದ ಮುಖಂಡರ ಮೇಲೆ ಕೋಪವೇನೂ ಕಾಣಿಸುವುದಿಲ್ಲ; ಬದಲಾಗಿ ಯಾವುದೋ ಒಂದು ಬಗೆಯ ನಿರಾಶೆಯಿದೆ! ‘‘ದೆಹಲಿ ವಿಧಾನಸಭೆಯಲ್ಲಿ ಸಿಕ್ಕ ಗೆಲುವಿನಿಂದ ನನಗೆ ನಿರಾಶೆ ಆಯಿತು ಎಂದೇನೂ ಅಲ್ಲ. ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಿಕ್ಕ ಪಾಸಿಟಿವ್ ಸಂದೇಶ.

ಚುನಾವಣೆಯಲ್ಲಿ ಗೆಲುವು ಸಾಧಿಸಲು ಆಪ್‌ ಚಳವಳಿ ನಡೆಸಲಿಲ್ಲ. ಮುಖ್ಯಮಂತ್ರಿ ಪಟ್ಟ ಗಿಟ್ಟಿಸುವುದೇ ಅದರ ಗುರಿಯಾಗಿರಲಿಲ್ಲ. ನಾವು ರಾಜಕೀಯಕ್ಕೆ ಬಂದಿದ್ದು ರಾಜಕೀಯವನ್ನು ಬದಲಾಯಿಸಲು. ದುರದೃಷ್ಟಕರ ಸಂಗತಿ ಎಂದರೆ, ರಾಜಕೀಯವನ್ನು ಬದಲಾಯಿಸಬೇಕಾದವರು ಬದಲಾಗುತ್ತಿದ್ದಾರೆ. ಆದರೆ ಇದು ಅಂತಿಮವೇನಲ್ಲ.

ಅದೇನೇ ಇದ್ದರೂ ಆಪ್‌ನಿಂದ ಬಿಡುಗಡೆಯಾದ ಶಕ್ತಿ ಹಾಗೂ ಸ್ಫೂರ್ತಿಯು, ಪಕ್ಷಕ್ಕಿಂತ ದೊಡ್ಡದು. ಹಾಗೆಂದು ನಾನು ಭ್ರಮನಿರಸನಗೊಂಡಿಲ್ಲ. ಮುಂದಿನ ದಿನಗಳಲ್ಲಿ ಅತ್ಯುತ್ತಮ ನಿರ್ಧಾರಗಳನ್ನು ದೆಹಲಿ ಸರ್ಕಾರ ತೆಗೆದುಕೊಳ್ಳಬಹುದೆಂಬ ಆಶಾವಾದ ನನ್ನದು. ಇನ್ನು ದೀರ್ಘಾವಧಿಯಲ್ಲಿ ಗಮನಿಸಬಹುದಾದರೆ, ದೆಹಲಿ ವಿಧಾನಸಭೆಯಲ್ಲಿ ಕಾಣಿಸಿದ ಫಲಿತಾಂಶವು ಬೇರೊಂದು ದಿಕ್ಸೂಚಿಗೆ ನೆರವಾಗಬಹುದು’’ ಎಂದು ಹೇಳುತ್ತಾರೆ.

ಭ್ರಷ್ಟಾಚಾರ ಪಿಡುಗನ್ನು ಪ್ರಮುಖ ಸಮಸ್ಯೆಯನ್ನಾಗಿಸಿಕೊಂಡು ಸ್ಥಾಪನೆಗೊಂಡ ‘ಆಮ್ ಆದ್ಮಿ ಪಾರ್ಟಿ’, ಚಳವಳಿ ಮಟ್ಟದಿಂದ ರಾಜಕೀಯ ಪಕ್ಷದವರೆಗೆ ಬೆಳೆಯಿತು. ಕೆಲವೇ ವರ್ಷಗಳಲ್ಲಿ ದೆಹಲಿ ವಿಧಾನಸಭೆಯ ಗದ್ದುಗೆಯನ್ನೂ ಹಿಡಿದುಕೊಂಡಿತು. ಆಪ್‌ನ ಪ್ರಮುಖ ಆಧಾರಸ್ತಂಭಗಳಲ್ಲಿ ಒಬ್ಬರಾಗಿದ್ದ ಯೋಗೇಂದ್ರ ಯಾದವ್, ಈಗ ಅದರಿಂದ ಆಚೆ ನಿಂತು ‘ಸ್ವರಾಜ್ ಅಭಿಯಾನ್‌’ ಕಟ್ಟುತ್ತಿದ್ದಾರೆ. ಸಾಕಷ್ಟು ರಾಜ್ಯಗಳಲ್ಲಿ ಅದಕ್ಕೆ ಉತ್ತಮ ಪ್ರತಿಕ್ರಿಯೆಯೂ ಸಿಗುತ್ತಿದೆ. ಖ್ಯಾತ ವಕೀಲರು, ಸಾಮಾಜಿಕ ಹೋರಾಟಗಾರರು ‘ಸ್ವರಾಜ್ ಅಭಿಯಾನ್’ಗೆ ಬೆಂಬಲ ನೀಡುತ್ತಿದ್ದಾರೆ.

ಜನಪರ ಹೋರಾಟವನ್ನು ಪ್ರಮುಖ ಅಸ್ತ್ರವಾಗಿ ಮಾಡಿಕೊಂಡ ಈ ವೇದಿಕೆಯೂ ರಾಜಕೀಯ ಪಕ್ಷವೊಂದಕ್ಕೆ ಜನ್ಮ ನೀಡಬಹುದೇ..?
ಈ ಪ್ರಶ್ನೆಯನ್ನು ಯೋಗೇಂದ್ರ ಯಾದವ್ ಅವರ ಮುಂದಿಟ್ಟಾಗ, ಅವರು ತಕ್ಷಣ ಯಾವ ಪ್ರತಿಕ್ರಿಯೆಯನ್ನೂ ಕೊಡಲಿಲ್ಲ. ಕೆಲ ಕ್ಷಣ ಗಂಭೀರವಾಗಿ ಯೋಚಿಸಿದ ಬಳಿಕ– ‘‘ರಾಜಕೀಯದಲ್ಲಿ ಎಲ್ಲ ವರ್ಗದ ಜನರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬುದನ್ನು ಯಾವಾಗಲೂ ಒತ್ತಿ ಹೇಳುತ್ತಿದ್ದೇವೆ.

ಪರ್ಯಾಯ ರಾಜಕೀಯ ಸಂರಚನೆಗೆ ಸ್ವರಾಜ್ ಅಭಿಯಾನ್ ಮುಂದಾಗುವುದು ನಿಶ್ಚಿತ. ಆದರೆ ಅದೇ ಸಮಯದಲ್ಲಿ, ಸ್ವರಾಜ್ ಅಭಿಯಾನ್ ಮೂಲಸ್ವರೂಪದಲ್ಲಿ ಉಳಿಯಲಿದೆ. ಅದಕ್ಕಾಗಿ ಜನರನ್ನು ಒಗ್ಗೂಡಿಸುತ್ತೇವೆ. ಬೇರೆಯವರನ್ನು ಟೀಕಿಸುವ ಬದಲಿಗೆ ಮೊದಲು ನಮ್ಮನ್ನು ನಾವು ವಿಮರ್ಶಿಸಿಕೊಂಡು, ತಪ್ಪುಗಳಿದ್ದರೆ ಸರಿಪಡಿಸಿಕೊಂಡು ಮುನ್ನಡೆಯಬೇಕು’’ ಎಂದು ಉತ್ತರ ಕೊಟ್ಟರು.

ಪ್ರಶ್ನೆಗೆ ಯಾವುದೇ ಬಗೆಯ ಸ್ಪಷ್ಟ ಉತ್ತರ ಸಿಗಲಿಲ್ಲ. ಆದರೆ ಮುಂದೊಂದು ದಿನ ‘ಸ್ವರಾಜ್‌ ಅಭಿಯಾನ್’ನಿಂದ ಇನ್ನೊಂದು ರಾಜಕೀಯ ಪಕ್ಷ ಜನಿಸಲಾರದು ಎಂಬುದನ್ನಂತೂ ನಂಬುವಂತಿಲ್ಲ!