‘ರಾಜಕಾರಣದಲ್ಲಿ ಮೂರನೇ ಶಕ್ತಿಯ ಅಗತ್ಯ ಇದೆ’-ಯೋಗೇಂದ್ರ ಯಾದವ್‌ ಪ್ರತಿಪಾದನೆ

                                              ಸ್ವರಾಜ್‌ ಇಂಡಿಯಾದಲ್ಲಿ ಸರ್ವೋದಯ ಕರ್ನಾಟಕ ವಿಲೀನ

ಸರ್ವೋದಯ ಕರ್ನಾಟಕ– ಸ್ವರಾಜ್‌ ಇಂಡಿಯಾ ಸಮ್ಮಿಲನ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ತಲೆಗೆ ಹಳದಿ ಪಟ್ಟಿಕಟ್ಟಿಕೊಂಡು, ಕೈಯಲ್ಲಿ ಹಸಿರು ಟವೆಲ್‌ ಬೀಸಿದರು
ಬೆಂಗಳೂರು:  ‘ಸಂವಿಧಾನದ ಆಶಯಗಳೊಂದಿಗೆ ರಾಜಕಾರಣ ಮಾಡುವ ಮೂರನೇ ಶಕ್ತಿಯ ಅಗತ್ಯ ದೇಶಕ್ಕಿದೆ’ ಎಂದು ಸ್ವರಾಜ್‌ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್‌ ಪ್ರತಿಪಾದಿಸಿದರು. ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ನಡೆದ ಸರ್ವೋದಯ ಕರ್ನಾಟಕ ಮತ್ತು ಸ್ವರಾಜ್‌ ಇಂಡಿಯಾ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಾತ್ಯತೀತ ಭಾರತದ ಮೇಲೆ ದಾಳಿ ನಡೆಯುತ್ತಿದೆ. ಸಂಪ್ರದಾಯವಾದಿಗಳ ಹೆಸರಿನಲ್ಲಿ ಕೆಲವರು ವಿಜೃಂಭಿಸುತ್ತಿದ್ದಾರೆ. ಜಾತ್ಯತೀತರು ಎಂದು ಹೇಳಿಕೊಳ್ಳುವವರು ಈ ನೆಲದ ಜೊತೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ನೆಲ, ಭಾಷೆ ಮತ್ತು ಜನರ ಮನಸ್ಥಿತಿ ಅರಿತು ರಾಜಕಾರಣ ಮಾಡುವ 3ನೇ ಪರ್ಯಾಯದ ಅವಶ್ಯಕತೆ ಇದ್ದು, ಅದನ್ನು ಸ್ವರಾಜ್‌ ಇಂಡಿಯಾ ಸಾಧಿಸಲಿದೆ ಎಂದು ಹೇಳಿದರು.
‘ಇಂದು ರಾಷ್ಟ್ರೀಯತೆಯ ಮಾತುಗಳನ್ನು ಆಡುತ್ತಿರುವವರು ಭಾರತದ ಸ್ವಾತಂತ್ರ್ಯಕ್ಕೆ ಯಾವುದೇ ಕೊಡುಗೆ ನೀಡಿದವರಲ್ಲ. ಆರ್‌ಎಸ್‌ಎಸ್‌ನಲ್ಲಿರುವ ನನ್ನ ಅನೇಕ ಸ್ನೇಹಿತರಿಗೆ ಹೇಳಿದ್ದೇನೆ, ಜರ್ಮನ್‌ನಿಂದ ಎರವಲು ಪಡೆದ ರಾಷ್ಟ್ರೀಯವಾದವನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿದ್ದೀರಿ. ಅದು ಭಾರತದಲ್ಲಿ ಯಶಸ್ವಿ ಆಗುವುದಿಲ್ಲ. ಈಗಲೂ ಆತ್ಮಾವಲೋಕನ ಮಾಡಿಕೊಳ್ಳಲು ನಿಮಗೆ ಅವಕಾಶ ಇದೆ ಎಂದು ತಿಳಿಸಿದ್ದೇನೆ’ ಎಂದರು. ‘ರಾಜಕೀಯ ಎಂಬುದು ಯುಗಧರ್ಮ. ಕೇವಲ ಚುನಾವಣೆಗೆ ಸ್ಪರ್ಧಿಸುವುದಷ್ಟೇ ಸ್ವರಾಜ್‌ ಇಂಡಿಯಾ ಉದ್ದೇಶ ಅಲ್ಲ. ದೇಶದಲ್ಲಿ ಶುದ್ಧ ರಾಜಕಾರಣ ಮಾಡಬೇಕು ಎಂಬ ಆಶಯ ಹೊಂದಿದ್ದೇವೆ. ಇದಕ್ಕಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು’ ಎಂದು ಆಹ್ವಾನ ನೀಡಿದರು.
‘ಸರ್ವೋದಯ ಕರ್ನಾಟಕ ಒಂದು ಧಾರೆ ಇದ್ದಂತೆ. ದೆಹಲಿಯಲ್ಲಿದ್ದೇ ಇದನ್ನು ಗಮನಿಸುತ್ತಿದ್ದೆ. ಎರಡೂ ಪಕ್ಷಗಳ ಆತ್ಮ ಒಂದೆ. ಈಗ ಶರೀರಗಳು ಬೆಸೆದುಕೊಂಡಿವೆ’ ಎಂದು ಯಾದವ್‌  ಬಣ್ಣಿಸಿದರು. ದೆಹಲಿ ಮುನ್ಸಿಪಲ್‌ ಕಾರ್ಪೊರೇಷನ್‌ಗೆ ಮುಂದಿನ ತಿಂಗಳು ನಡೆಯುವ ಚುನಾವಣೆಯಲ್ಲಿ ಎಲ್ಲ 272 ವಾರ್ಡ್‌ಗಳಲ್ಲೂ ಸ್ವರಾಜ್‌ ಇಂಡಿಯಾ ಸ್ಪರ್ಧಿಸಿದೆ. ಇದು ಪಕ್ಷದ ಮೊದಲ ಚುನಾವಣೆ. ಇಲ್ಲಿನ ಕಾರ್ಯಕರ್ತರು ದೆಹಲಿಗೆ ಬಂದು ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ವಿಲೀನ ಸಹಜ ಪ್ರಕ್ರಿಯೆ:  ಸರ್ವೋದಯ ಕರ್ನಾಟಕ ಅಧ್ಯಕ್ಷ ದೇವನೂರು ಮಹಾದೇವ ಮಾತನಾಡಿ, ‘ಸರ್ವೋದಯ ಕರ್ನಾಟಕ ಮತ್ತು ಸ್ವರಾಜ್‌ ಇಂಡಿಯಾ ವಿಲೀನ ಆಗುತ್ತಿರುವುದು ಹೊಸತಲ್ಲ, ಆಶ್ಚರ್ಯವೂ ಅಲ್ಲ.ಯಾಕೆಂದರೆ ನಾವು ಮತ್ತು ಯೋಗೇಂದ್ರ ಯಾದವ್‌ ಹಾಗು ಅವರ ಸಂಗಾತಿಗಳು ಆರೋಗ್ಯಕರ ಭಾರತ ಕಟ್ಟುವ ಕನಸಿನೊಂದಿಗೆ ಮೊದಲಿನಿಂದಲೂ ಜೊತೆಯಾಗಿ ಓಡಾಡುತ್ತಿದ್ದವರು. ಇದು ಸಹಜ ಪ್ರಕ್ರಿಯೆ’ ಎಂದರು.
‘ನಮ್ಮ ಎದುರಿಗೆ ಭಾರತದ ದುರಂತ ರಾಜಕಾರಣ ಇದೆ. ಆಡಳಿತ– ವಿರೋಧ ಪಕ್ಷ ಎಂಬ ಒಂದೇ ನಾಟಕ ಕಂಪೆನಿಯ ಅದಲು– ಬದಲು ರಾಜಕಾರಣ  ಮಾಡುತ್ತಿವೆ. ಆದರೆ, ಅಂಥ ರಾಜಕಾರಣ ನಮ್ಮದಲ್ಲ.  ದ್ವೇಷ, ಒಡಕುಗಳನ್ನು ಬಡಿದೆಬ್ಬಿಸದೆ, ಪ್ರೀತಿ– ಐಕ್ಯತೆ ಉದ್ದೀಪಿಸುವ ಸೌಹಾರ್ದ ರಾಜಕಾರಣ ನಮ್ಮ ಆಶಯ’ ಎಂದು ಹೇಳಿದರು. ಭ್ರಷ್ಟತೆಯೇ ಸಾರ್ವತ್ರೀಕರಣಗೊಂಡು ಅದೇ ಸಹಜ ಎನಿಸಿರುವ ಈ ಭೂಗತ ಜಗತ್ತಿನ ರಾಜಕಾರಣದಲ್ಲಿ ಗೆಲ್ಲುವುದು ಹೇಗೆ ಎಂಬ ಪ್ರಶ್ನೆ ಬರುತ್ತದೆ. ನಾವು ಮೂರನೇ ಸ್ಥಾನದಲ್ಲಿದ್ದೇವೆ ಎಂಬುದು ಮತದಾರನಿಗೆ ಗೊತ್ತಾದಾಗ ಮಾಂತ್ರಿಕ ಗೆಲುವು ತಂದುಕೊಡುತ್ತಾನೆ. ಅದಕ್ಕೆ ಪೂರಕವಾಗಿ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ನಮ್ಮ ಅಸ್ತಿತ್ವವನ್ನು ವ್ಯಾಪಕವಾಗಿ ಸ್ಥಾಪಿಸಬೇಕಾಗಿದೆ’ ಎಂದು ಹೇಳಿದರು.
ಪದಾಧಿಕಾರಿಗಳ ಆಯ್ಕೆ:
ಕರ್ನಾಟಕ ಸರ್ವೋದಯ ಪಕ್ಷದ ಅಧ್ಯಕ್ಷ ದೇವನೂರು ಮಹಾದೇವ ಮತ್ತು ಕಾರ್ಯಾಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ ಅವರನ್ನು ಕ್ರಮವಾಗಿ ಸ್ವರಾಜ್‌ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷೀಯ ಮಂಡಳಿ ಸದಸ್ಯ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಕಾಯಂ ಆಹ್ವಾನಿತ ಸದಸ್ಯರನ್ನಾಗಿ ನೇಮಿಸಲಾಗಿದೆ. ಸ್ವರಾಜ್‌ ಇಂಡಿಯಾ– ಕರ್ನಾಟಕ ಸಂಘಟನಾ ಸಮಿತಿಗೆ ಬಿ. ಕರುಣಾಕರ್, ಚಾಮರಸ ಮಾಲಿಪಾಟೀಲ, ಎನ್‌.ಡಿ. ವಸಂತಕುಮಾರ್‌ ಸದಸ್ಯರಾಗಿ ಮತ್ತು ಚುಕ್ಕಿ ನಂಜುಂಡಸ್ವಾಮಿ ಖಜಾಂಚಿಯಾಗಿ ನೇಮಕಗೊಂಡಿದ್ದಾರೆ.
**
ದೇವನೂರು ಮಹಾದೇವ ಮೈಸೂರಿಗೆ ಸೀಮಿತವಾದರೆ ನನ್ನಂಥವರಿಗೆ, ದೇಶಕ್ಕೆ ಆಗುವ ಅನ್ಯಾಯ. ಅವರು ಎಲ್ಲೆಡೆ ಸುತ್ತಾಡಿ ಯುವಕರಲ್ಲಿ ಜಾಗೃತಿ ಮೂಡಿಸಬೇಕು
ಯೋಗೇಂದ್ರ ಯಾದವ್‌, ಸ್ವರಾಜ್‌ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ
**
ಸರ್ವೋದಯ ಕರ್ನಾಟಕ ಪಕ್ಷವನ್ನು ವಿಸ್ತರಿಸಲು ಸಾಧ್ಯವಾಗಲಿಲ್ಲ. ಅನಿವಾರ್ಯವಾಗಿ ಸ್ವರಾಜ್‌ ಇಂಡಿಯಾ ಜೊತೆ ವಿಲೀನ ಆಗಿದ್ದೇವೆ
ಕೆ.ಎಸ್. ಪುಟ್ಟಣ್ಣಯ್ಯ, ಶಾಸಕ