ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪಡೆದ ಸಂದರ್ಭದ ಮಾತುಗಳು

ತಮ್ಮ ಮನೋಭೂಮಿಕೆಯಲ್ಲಿ ಭಾರತದ ಹಳ್ಳಿಗಾಡನ್ನು ಹೊತ್ತು ಕೊಂಡಿರುವವರಿಗೆ ಮೈಸೂರು ವಿಶ್ವವಿದ್ಯಾನಿಲಯ ಇಂದು ಗೌರವ ಡಾಕ್ಟರೇಟ್ ನೀಡುತ್ತಿದೆ. ಇಲ್ಲಿನ ವಿದ್ಯಾರ್ಥಿಯಾದ ನಾನೂ ಪಡೆಯುವ ಗೌರವ ಸಿಕ್ಕಿದೆ. ನಮ್ಮೊಡನೆ ಸಾವಿರಾರು ಎಳೆಯರೂ ಪದವಿ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಒಳಿತು ಆಶಿಸುತ್ತ ಒಂದೆರಡು ಮಾತುಗಳು :

೧೯೯೦ರ ದಶಕದಲ್ಲಿ Iಒಈ ಮತ್ತು ವರ್ಲ್ಡ್‌ಬ್ಯಾಂಕ್‌ಗಳು ಸ್ಟ್ರಕ್ಚರಲ್ ಅಡ್ಜಸ್ಟ್‌ಮೆಂಟ್ ನೀತಿಯಡಿಯಲ್ಲಿ, ಶಿಕ್ಷಣದ ಮೇಲೆ ಮಾಡುವಂತಹ ಖರ್ಚುವೆಚ್ಚಗಳನ್ನು ಕಡಿಮೆ ಮಾಡಬೇಕೆಂದು ಸಾಲದ ಮಕ್ಕಳಾದ ನಮ್ಮ ಸರ್ಕಾರಗಳಿಗೆ ನಿರ್ದೇಶನ ನೀಡುತ್ತವೆ! ಮನುಷ್ಯತ್ವ ಇಲ್ಲದ ದುಡ್ಡಿಗೆ, ಬಂಡವಾಳಶಾಹಿಗೆ ಶಿಕ್ಷಣ ಕ್ಷೇತ್ರವು ಲಾಭರಹಿತ ಅನುತ್ಪಾದಕ ಕ್ಷೇತ್ರವಾಗಿ ಕಾಣಿಸುತ್ತದೆ!! ಇದಕ್ಕನುಗುಣವಾಗಿ ನಮ್ಮ ಸರ್ಕಾರಗಳು ಶಿಕ್ಷಣಕ್ಷೇತ್ರವನ್ನೂ ಕೂಡ ಖಾಸಗಿಯ ಬಾಯಿಗೆ ಹಾಕುತ್ತ, ದುಡ್ಡು ಮಾಡುವ ದಂಧೆಯನ್ನಾಗಿಸಿಬಿಟ್ಟಿದೆ. ಇದು ಉದ್ಧಾರವೆ? ಅಥವಾ ಅಧಃಪತನವೆ? ಇದಕ್ಕೆ ನಾವು ವಿದ್ಯಾವಂತ ಸಮುದಾಯ ಉತ್ತರಿಸಬೇಕಾಗಿದೆ.

ಹಾಗೇನೇ, ಇಂದು ಪ್ರಾಥಮಿಕ ಶಿಕ್ಷಣದಲ್ಲಾದರೂ ಸಮೀಪ ಮತ್ತು ಸಮಾನ ಶಿಕ್ಷಣ ಪದ್ಧತಿ ಇಲ್ಲ. ಎಳೆಯ ಮಕ್ಕಳಲ್ಲೇ ಭಿನ್ನಭಾವ ಅಂತಸ್ತು ತಾರತಮ್ಯಗಳನ್ನು ಉಂಟುಮಾಡುವ ಚಾತುರ್ವರ್ಣದ ಸೋಂಕಿನಂತಿರುವ ಪಂಚವರ್ಣ ಶಿಕ್ಷಣ ಪದ್ಧತಿ ಇದೆ. ಇದೇ ನಾಳಿನ ಅಸಮಾನ ಭಾರತಕ್ಕೆ ಕಾರಣವಾಗುತ್ತದೆ. ನಮ್ಮ ಸಾಮಾಜಿಕ ವ್ಯವಸ್ಥೆಗೆ ಎಲ್ಲಾ ಜಾತಿಮತವರ್ಗಗಳ ಮಕ್ಕಳು ಜೊತೆಗೂಡಿ ಒಡನಾಡುವುದೇ ಭಾರತಕ್ಕೆ ಬಲು ದೊಡ್ಡ ಶಿಕ್ಷಣ ಎಂಬ ಕನಿಷ್ಠ ತಿಳಿವಳಿಕೆಯಾದರೂ ನಮಗಿರಬೇಕಾಗಿತ್ತು. ಸಮೀಪ ಮತ್ತು ಸಮಾನಶಿಕ್ಷಣ ಪದ್ಧತಿಯಲ್ಲಿ ಉಂಟಾಗುವ ಸ್ಥಳೀಯ ಎಚ್ಚರದಿಂದಾಗಿ ಯಾವುದೇ ಕಳಪೆ ಸರ್ಕಾರಿ ಶಾಲೆಯೂ ತಂತಾನೇ ಉನ್ನತೀಕರಣಗೊಳ್ಳುತ್ತದೆ ಎಂಬುದಕ್ಕೆ ನಾವು ಕುರುಡಾಗಬಾರದಿತ್ತು. ಯಾಕೆಂದರೆ ಈ ಹಿಂದೆ ಇದನ್ನು ನಾವು ಕಂಡಿದ್ದೇವೆ. ನಮ್ಮ ಸರ್ಕಾರಗಳು ಕಷ್ಟವಾದರೂ ಧೈರ್ಯಮಾಡಿ ಕನಿಷ್ಠ ೮ನೇ ತರಗತಿಯವರೆಗಾದರೂ ಖಾಸಗಿ ದಂಧೆಗೆ ಅವಕಾಶ ಇಲ್ಲದ ಸಾರ್ವಜನಿಕ ಸಮೀಪ ಸಮಾನ ಶಾಲಾ ಶಿಕ್ಷಣಪದ್ಧತಿ ಮೂಲಕ ನಾಳಿನ ಭಾರತದ ಪ್ರಜೆಗಳನ್ನು ನಮ್ಮ ಸಂವಿಧಾನದ ಪ್ರಸ್ತಾವನೆಯ ಕನಸಾದ ಸ್ವಾತಂತ್ರ್ಯ, ಸಮಾನತೆ, ಸೋದರತೆ, ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ರೂಪಿಸಬೇಕಾಗಿದೆ. ಈಗಾಗಲೇ ವಿಳಂಬವಾಗಿಬಿಟ್ಟಿದೆ.

ಸಂವಿಧಾನ ಆಶಯದ ಮಾತು ಬಂತು. ಭಾರತದ ಸಂವಿಧಾನ ಸಮರ್ಪಣೆ ಸಂದರ್ಭದಲ್ಲಿನ ಡಾ.ಬಾಬಾಸಾಹೇಬ್ ಅಂಬೇಡ್ಕರ್‌ರ ಮಾತುಗಳು ನೆನಪಾಗುತ್ತಿದೆ: ’೧೯೫೦ರ ಜನವರಿ ೨೬ರಂದು ನಾವು ವೈರುಧ್ಯಗಳಿಂದ ಕೂಡಿದ ಬದುಕಿಗೆ ಪ್ರವೇಶಿಸುತ್ತಿದ್ದೇವೆ. ರಾಜಕೀಯದಲ್ಲಿ ನಾವು ಸಮಾನತೆಯನ್ನು ಪಡೆದಿರುತ್ತೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅಸಮಾನತೆ ಮುಂದುವರೆದಿರುತ್ತದೆ…. ಮುಂದುವರೆಸುತ್ತಾ ಹೋದರೆ ನಮ್ಮ ರಾಜಕೀಯ ಪ್ರಜಾಸತ್ತೆಗೆ ಆಪತ್ತು ಬರುತ್ತದೆ’ ಎನ್ನುತ್ತಾರೆ. ಇಂದು ನಾವು ಆ ಆಪತ್ತಿನ ತುದಿ ತಲುಪಿದ್ದೇವೆ, ಯಮಪಾಶ ಎದುರಿಗಿದೆ. ಯಾಕೆಂದರೆ ಸಾಮಾಜಿಕ ಪ್ರತ್ಯೇಕತೆಯನ್ನು ಹೆಚ್ಚಿಸುವ ಜಾತಿ ಟೌನ್‌ಷಿಪ್ ಕ್ಯಾನ್ಸರ್‌ನಂತೆ ಹೆಚ್ಚುತ್ತಿವೆ. ಜೊತೆಗೆ, ರಾಷ್ಟ್ರದ ಅರ್ಧದಷ್ಟು ಆಸ್ತಿ ಸಂಪತ್ತು ಕೇವಲ ನೂರು ಕುಟುಂಬಗಳ ವಶದಲ್ಲಿದೆಯಂತೆ! ನೂರು ಕೋಟಿಗೆ ಅರ್ಧವಾದರೆ ನೂರು ಜನಕ್ಕೆ ಇನ್ನರ್ಧ! ಹೇಳಿ -ಚುನಾವಣಾ ವ್ಯವಸ್ಥೆಯೂ ಮಾರಾಟದ ಸರಕಾಗುವುದಿಲ್ಲವೇ? ಆಗ ಪ್ರಜಾಸತ್ತೆ ಉಳಿಯುವುದೆ? ನಾವು ಪಡೆದ ಸ್ವಾತಂತ್ರ್ಯದ ಗತಿ ಏನು?

ವಿದ್ಯಾವಂತ ಸಮುದಾಯವಾದರೂ, ರಾತ್ರಿ ಮಲಗುವಾಗ ಒಂದು ಸಲ, ಬೆಳಿಗ್ಗೆ ಎದ್ದಾಗ ಒಂದು ಸಲ, ಡಾ.ಅಂಬೇಡ್ಕರ್‌ರ ಆ ಕರುಳ ನುಡಿಗಳನ್ನು ನೆನಸಿಕೊಂಡರೆ, ಬೆಚ್ಚಿ ಎಚ್ಚ್ಚೆತ್ತರೆ – ಪ್ರಜಾಸತ್ತೆ ಉಳಿಯಲೂಬಹುದು.. ಹಾಗೇ ನಾವೂ ಕೂಡ.
-ದೇವನೂರ ಮಹಾದೇವ.