ಮುತ್ತುಗಳೊಡನೆ ನೆನಪಾಗುವ ಬೆಸಗರಹಳ್ಳಿ…ದೇವನೂರ ಮಹಾದೇವ

                    besagarahalli
            ಬೆಸಗರಹಳ್ಳಿ ರಾಮಣ್ಣ,ಚಿಕ್ಕವರಾದ ನಮ್ಮನ್ನೆಲ್ಲ ಅಯಸ್ಕಾಂತದಂತೆ ಸೆಳೆದುಕೊಳ್ಳುತ್ತಿದ್ದರು. ಅವರೊಳಗೆ ಈ ಲೌಕಿಕ ಬಂಧುತ್ವಕ್ಕಿಂತ ಅವರು ಅರಳುವ ಅವರದೇ ಆದ ಒಂದು ಭಾವಕೋಶದ ಬಾಂಧವ್ಯ ತೀವ್ರವಾಗಿತ್ತು. ಅದರೊಳಗೆ ನಾನೂ ಒಬ್ಬ. ರಾಮಣ್ಣ ಜೊತೆಗಿದ್ದರೆ ನಮ್ಮ ಕಷ್ಟಗಳು-ನೋವುಗಳು ಪರಿಹಾರ ಆಗಿಬಿಡುತ್ತಿದ್ದವು. ಡಾಕ್ಟರ್‍ ಆದ ಅವರು ನಮಗೆ ಔಷಧಿ ಕೊಡುತ್ತಿದ್ದರು ಅಂತ ಅಲ್ಲ; ಅವರು ಹೇಳುತ್ತಿದ್ದ ಕತೆಗಳು ಅನುಭವಗಳು ಬೈದಾಟ ಆಕ್ರೋಶ ಎಲ್ಲವೂ ನಮ್ಮನ್ನೇ ಮರೆಸಿಬಿಡುತ್ತಿದ್ದವು. ಆಗ ನೋವು-ಕಷ್ಟಗಳು ಮಂಗರಮಾಯವಾಗುತ್ತಿದ್ದವು. ಇರಲಿ. ಅವರ ಕಣಕಣವೂ ಜೀವ ತುಂಬಿಕೊಂಡಂತೆ ಅನುಭವವಾಗುತ್ತಿತ್ತು. ಆಲನಹಳ್ಳಿ ಕೂಡ ಹೀಗೆ ಇದ್ದರು. ಅವರಿಬ್ಬರೂ ಸೇರಿದರೆ ಒಂದು ಸಮುದಾಯ ಅನಿಸಿಬಿಡುತ್ತಿದ್ದರು. ರಾಮಣ್ಣ ತನ್ನ ಅನುಭವಗಳನ್ನು ಸಾಕಾಗುವಷ್ಟು ಹೇಳಿ ಉದಾರವಾಗಿ “ನೀವು ಏನಾದರೂ ಹೇಳ್ರೋ’ ಅಂದರೆ ಅದಕ್ಕೆ ನಾವು ‘ನೀವಾದರೆ ರಾಮಣ್ಣ ಅನುಭವದ ಲ್ಯಾಂಡ್ ಲಾರ್ಡ್‍ತರ. ನಮ್ಮದೇನಿದ್ದರೂ ಸಣ್ಣ ಹಿಡುವಳಿದಾರರ ಸ್ಥಿತಿ’ಅಂದರೆ ಸಾಕು ರಾಮಣ್ಣ ಒಂದು ಮಗುವಿನಂತೆ ಮತ್ತೆ ಹೇಳತೊಡಗುತ್ತಿದ್ದರು. ತಾನು ಅಭಿವ್ಯಕ್ತಿಸಿಕೊಳ್ಳಬಹುದಾದ ಇಂಥ ಸಖ್ಯದ ವಾತಾವರಣದಲ್ಲಿ ತನ್ನನ್ನು ಮರೆಯಲುರಾಮಣ್ಣ ಅಲೆದಾಡುತ್ತಿದ್ದರು. ನನಗೆ ಗ್ಯಾರಂಟಿ ಇದೆ-ರಾಮಣ್ಣ ಬದುಕಿದ್ದರೆ ಮಂಡ್ಯ ಜಿಲ್ಲೆಯಲ್ಲಿ ತಿಥಿ ಸಿನಿಮಾ ಶೂಟಿಂಗ್ ಆಗುವಾಗ ಎಲ್ಲರಿಗಿಂತ ಮೊದಲೇ ಹೋಗಿ “ನಂಗೂ ಒಂದು ಪಾರ್ಟ್‍ಕೊಡೋ ಮೊಗಾ” ಅಂತ ಕೇಳಿ ಒಂದು ಪಾರ್ಟ್ ಮಾಡೇಬಿಡುತ್ತಿದ್ದರು. ಅಥವಾ ಅಲ್ಲೇ ಸಿನಿಮಾ ಮುಗಿಯುವವರೆಗೂ ಟೆಂಟ್ ಹಾಕಿಬಿಡುತ್ತಿದ್ದರು.  ಈಗ ‘ಸಂಕಥನ’ ಪತ್ರಿಕೆ ಮಂಡ್ಯದಿಂದ ಪ್ರಕಟವಾಗುತ್ತಿದೆ. ರಾಮಣ್ಣ ಇದ್ದಿದ್ದರೆ ಸಂಭ್ರಮಿಸಿ ಅದನ್ನು ತಲೆ ಮೇಲೆ ಹೊತ್ತು ಮೆರವಣಿಗೆ ಮಾಡಿಬಿಡುತ್ತಿದ್ದರು- ಇದು ರಾಮಣ್ಣ. ಸ್ವಾರ್ಥವಿಲ್ಲ, ಅಹಂಕಾರ ಇಲ್ಲ, ಆಕ್ರೋಶ ಇತ್ತು, ಆದರೆ ಅದೂ ಕೂಡ ಪ್ರೀತಿಯ ಇನ್ನೊಂದು ರೂಪದಂತೆ- ಹೀಗೆ, ರಾಮಣ್ಣ ನೆನಪಾದಾಗ ಅನಿಸತೊಡಗುತ್ತದೆ, ಆತ ಗಂಡು ಹೆಣ್ಣು ಚಿಕ್ಕವರು ದೊಡ್ಡವರು ಅನ್ನದೆ ಪ್ರಾಣಿ-ಪಕ್ಷಿಗಳೂ ಸೇರಿದಂತೆ, ಉಲ್ಲಸಿತನಾದರೆ ಮೆಚ್ಚಿಗೆ ಬಂದರೆ ಕೊಡುವ ಮುತ್ತುಗಳೊಡನೆ,
ಕನ್ನಡ ಸಾಹಿತ್ಯದಲ್ಲಿ ರಾಮಣ್ಣ ತನ್ನ ಕಥೆಗಳ ಮೂಲಕ ತನ್ನ ಹೆಜ್ಜೆ ಗುರುತುಗಳನ್ನು ಉಳಿಸಿಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮಣ್ಣ ನೆನಪಿನ ಪ್ರಶಸ್ತಿಯನ್ನು ಸಣ್ಣಕಥೆಗಳಿಗೆ ನೀಡಿದರೆ ಹೆಚ್ಚು ಸಲ್ಲುತ್ತದೆ ಅನಿಸುತ್ತದೆ. ಪುಸ್ತಕಕ್ಕೆ ನೀಡುವುದರ ಬದಲಾಗಿ ಕಥೆಗಾರರ ಹುಟ್ಟುವಿಕೆಗೆ ವಾತಾವರಣ ಉಂಟಾಗುವಂತೆ ಒಂದು ಕಥಾಸ್ಪರ್ಧೆಯನ್ನು ಏರ್ಪಡಿಸಿ ಅದಕ್ಕೆ ಮೂರು ಬಹುಮಾನ, ಹಾಗೆ ಮಂಡ್ಯ ಜಿಲ್ಲೆ ಕಥೆಗಾರರಿಗೆ ಮತ್ತು ರಾಜ್ಯಮಟ್ಟದ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನ ಹೀಗೆ – ಈ ಸ್ಥೂಲ ಸಲಹೆಯನ್ನು ನೀಡುತ್ತಿರುವೆ. ‘ಸಂಕಥನ’ದಂಥಹ ಪತ್ರಿಕೆಯ ಸಹಯೋಗ ಪಡೆಯಬಹುದು. ವರ್ಷಕ್ಕೊಮ್ಮೆ ಬೆಸಗರಹಳ್ಳಿ ರಾಮಣ್ಣ ನೆನಪಿನ ಕಥಾ ವಿಶೇಷ ಸಂಚಿಕೆಯೊಂದೂ ರೂಪುಗೊಂಡಂತಾಗುತ್ತದೆ. ಹೀಗೇನೇ ಅಂತಲ್ಲ, ನಿಮಗೂ ಸರಿ ಎನಿಸಿದರೆ ಇಂಥದೊಂದನ್ನು ಸಮಾಲೋಚಿಸಿ ರೂಪಿಸಿ ಎಂದು ವಿನಂತಿಸುವೆ.
ಸಹಿಷ್ಣುತೆಗಾಗಿ ಒಂದಿಷ್ಟು ಕೋಪ-ತಾಪ
ಇಂದು ಸಹಿಷ್ಣುತೆ-ಅಸಹಿಷ್ಣುತೆಪದವೇ ಮುಟ್ಟಿದರೆ ಮುನಿ ಅಂತಾಗಿಬಿಟ್ಟಿವೆ.ಭಾರತ ಅಂದರೆ ಮುಟ್ಟದೆ ಮಡಿಯಾದ ಅರೆ-ಜೀವ ಅಥವಾ ಅರೆ-ಸತ್ತ ದೇಶ. ಹಾಗಾಗಿ ಈ ಬಗ್ಗೆ ಸ್ವಲ್ಪ ಮಾತ್ರ ಮಾತಾಡಿದರೆ ಕ್ಷೇಮವೇನೊ. ಜೊತೆಗೆ, ನಾನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವೆ.
ಇಲ್ಲಿರುವ ಅಸಹಿಷ್ಣುತೆಯ ಸ್ವಭಾವ ಅರ್ಥವಾಗದೆ-ಸಹಿಷ್ಣುತೆಯೂ ಅರ್ಥವಾಗದು. ಉದಾಹರಣೆಗೆ- ಒಂದು ಸುದ್ದಿ- ಜೂನ್ 8, 2016ರಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ.  ಮೈಸೂರಿನ ಮಾನಸಗಂಗೋತ್ರಿಯ ದಲಿತ ವಿದ್ಯಾರ್ಥಿಗಳು ರಾವ್ ಬಹುದ್ದೂರ್‍ರಾಯ್‍ ಎಂಬಾತನ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು. ಆರ್‍ಎಸ್‍ಎಸ್ ಮೂಲದ ಪತ್ರಕರ್ತ ಈ ರಾವ್ ಬಹದ್ದೂರ್‍ರಾಯ್‍ ಎಂಬಾತ ಔಟ್‍ಲುಕ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ- “ಅಂಬೇಡ್ಕರ್ ಸಂವಿಧಾನ ಬರೆದಿಲ್ಲ. ಕರಡು ತಿದ್ದಿ ಇಂಗ್ಲಿಷ್‍ಗೆ ಅನುವಾದಿಸಿ ಸಂವಿಧಾನದ ಪ್ರತಿಯನ್ನು ಸಿದ್ಧಪಡಿಸಿಕೊಟ್ಟಿದ್ದಾರೆ, ಅಷ್ಟೆ” ಎಂದು ಹೇಳಿದ ಮಾತು ದಲಿತ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವಾಗಿತ್ತು. ಇದರಲ್ಲಿ ಯಾವುದು ಸಹಿಷ್ಣುತೆ? ಯಾವುದು ಅಸಹಿಷ್ಣುತೆ? ಮನುಧರ್ಮಶಾಸ್ತ್ರವೇ ಭಾರತದ ನಿಜವಾದ ಸಂವಿಧಾನ ಎಂದುಕೊಂಡು ಅಂಬೇಡ್ಕರ್ ಸಂವಿಧಾನ ರಚಿಸಿದರು ಎಂಬುದನ್ನು ನೆನಪಿಸಿಕೊಳ್ಳಲೂ ಕಸಿವಿಸಿಗೊಳ್ಳುವ ಮನಃಸ್ಥಿತಿ ಅಸಹಿಷ್ಣುತೆಯೇ? ಅಥವ ಅಂಬೇಡ್ಕರ್ ಅಸ್ತಿತ್ವವನ್ನೆ ಅಲ್ಲೆಗೆಳೆಯುವ ಆ ರಾವ್ ಬಹುದ್ದೂರ್‍ರಾಯ್ ಮಾತಿಗೆರೊಚ್ಚಿಗೆದ್ದ ದಲಿತ ವಿದ್ಯಾರ್ಥಿಗಳ ಪ್ರತಿಭಟನೆ ಅಸಹಿಷ್ಣತೆಯೊ? ನನಗೆ ಅನ್ನಿಸುತ್ತದೆ- ಆರ್‍ಎಸ್‍ಎಸ್‍ನ ರಾವ್ ಬಹುದ್ದೂರ್‍ರಾಯ್‍ದು ಅಸಹಿಷ್ಣುತೆ. ದಲಿತ ವಿದ್ಯಾರ್ಥಿಗಳದು ಆಕ್ರೋಶ.
ಇನ್ನೂ ಸ್ಪಷ್ಟಪಡಿಸಬೇಕುಎಂದರೆ-ಪ್ರೊ.ಎಸ್.ಎನ್. ಬಾಲಗಂಗಾಧರ್‍ ಅವರ “ಭಾರತದಲ್ಲಿ ಯಾವ ರೀತಿಯು ಅಸಹಿಷ್ಣುತೆ ಬೆಳೆಯುತ್ತದೆ?” ಎಂಬ ಲೇಖನ ಓದಿದರೂ ಸಾಕು.ಅವರುಕೊಡುವಉದಾಹರಣೆಗಳನ್ನು ಅವರ ಮಾತುಗಳಲ್ಲೇ ಹೇಳುವುದಾದರೆ-
“ಮೊದಲನೆಯದು, ಮಾನಸಿಕ ಅಸ್ಥಿರತೆ ಇರುವ ವ್ಯಕ್ತಿಯೊಬ್ಬ (ಹುಚ್ಚ ವೆಂಕಟ್), ಯಾವುದೋ ಟಿವಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್‍ ಅವರನ್ನು ವಿರೋಧಿಸಿದ. ಆತ ಅಂಬೇಡ್ಕರ್‍ ಅವರನ್ನು ‘ಎಕ್ಕಡ’ ಎಂದ. ಆದರೆಯಾವ ದಿನಪತ್ರಿಗೆಗಳೂ ಕೂಡಆತ ಹೇಳಿದ್ದೇನು? ಎಂಬುದನ್ನು ತಮ್ಮ ಪತ್ರಿಕೆಯಲ್ಲಿ ವರದಿ ಮಾಡದೇ, ಕೇವಲ ಆತ ಅಂಬೇಡ್ಕರ್‍ ಅವರನ್ನು ಕೆಟ್ಟ ಶಬ್ದಗಳಿಂದ ಅವಮಾನಿಸಿದ ಎಂದಷ್ಟೇ ಹೇಳಿದರು. ಯಾವುದೇ ವ್ಯಕ್ತಿಯ ವಿಷಯವಾಗಿ ಅವಹೇಳನಾತ್ಮಕ ಮತ್ತು ಹೀಯಾಳಿಸುವ ಪದಗಳನ್ನೇಕೆ ಬಳಸಬಾರದು? ಎಂಬ ಸ್ಪಷ್ಟತೆಯೇ ಯಾರಿಗೂ ಕೂಡ ಇಲ್ಲ. ಭಾರತದ ಆಡುಭಾಷೆಗಳಲ್ಲಿ ಬೈಗುಳದ ಪದಗಳು ಸರ್ವೇಸಾಮಾನ್ಯವಾಗಿ ಎಲ್ಲರನ್ನೂ ಉದ್ದೇಶಿಸಿ ದೇವರನ್ನು ಕೂಡ ಒಳಪಡಿಸಿ ಬಳಸಲ್ಪಡುತ್ತವೆ. ಹಾಗಿದ್ದರೆ ಅಂಬೇಡ್ಕರ್‍ ಅವರು ದೇವರಿಗಿಂತ ಶ್ರೇಷ್ಟವಾದರೆ? ಬೆಂಗಳೂರಿನಲ್ಲಿರುವ ಅಂಬೇಡ್ಕರ್‍ವಾದಿಗಳು ಈ ವೆಂಕಟ್‍ ಕಾರಿನಲ್ಲಿ ಹೋಗುತ್ತಿದ್ದಾಗ, ಆತನನ್ನು ಅಶ್ಲೀಲ ಪದಗಳಿಂದ ಹೀಗಳೆದು, ಥಳಿಸಿ, ಆತನ ಮುಖಕ್ಕೆ ಕಪ್ಪುಟಾರ್ ಮೆತ್ತಿ ಕಳಿಸಿದ್ದರು”ಎಂದು ಹೇಳಿ ಬಾಲಗಂಗಾಧರ್‍ ಇನ್ನೂ ಒಂದು ಉದಾಹರಣೆ ಕೊಡುತ್ತಾರೆ. ಅವರು ಮುಂದೆ ಬರೆಯುತ್ತಾರೆ-“ಇತ್ತೀಚೆಗೆ ಹೈದರಬಾದಿನಲ್ಲಿ ನಡೆದ ಒಂದು ಅಂತರರಾಷ್ಟ್ರೀಯ ಸಮ್ಮೇಳನವೊಂದರಲ್ಲಿ. ನಾನು(ಅಂದರೆ ಬಾಲಗಂಗಾಧರ್)ಬೌದ್ಧಿಕ ವಿಷಯವೊಂದರಲ್ಲಿ ಅಂಬೇಡ್ಕರ್‍ ಅವರೊಡನೆ ಭಿನ್ನಾಭಿಪ್ರಾಯ ಹೊಂದಿದ್ದೆ. ಹಾಗಾಗಿ ಅದರ ಬಗ್ಗೆ ಮಾತಾಡುತ್ತಾ ಅಂಬೇಡ್ಕರ್‍ಗೆ ‘ಈಡಿಯಟ್’ ಎಂದು ಹೇಳಿದೆ. ಈ ಬಯ್ಗಳ (ಅವರ ಪ್ರಕಾರ)ವನ್ನು ನನ್ನ ವಿರುದ್ಧ ಪ್ರಚಾರ ಮಾಡಲು ಅಂಬೇಡ್ಕರ್ ಅನುಯಾಯಿಗಳು ಬಳಸಿಕೊಂಡರು” ಎಂದು ಹೇಳಿದ ಆತ ಮುಂದುವರಿದು ಹೇಳುತ್ತಾನೆ- “ಈ ಎರಡು ಘಟನೆಗಳು ಅಂಬೇಡ್ಕರ್‍ವಾದಿಗಳ ಬಗ್ಗೆ ಏನನ್ನು ಸೂಚಿಸುತ್ತವೆ? ಅಂಬೇಡ್ಕರ್ ವಿರುದ್ಧ ಮಾತಾಡುವವರ ಬಗ್ಗೆ ಇವರು ಅಸಹಿಷ್ಣುತೆ ಹೊಂದಿದ್ದಾರೆ ಎಂಬುದನ್ನು ಸೂಚಿಸುತ್ತಿಲ್ಲವೇ?”- ಹೀಗೆ ಬಾಲಗಂಗಾಧರ ಎಂಬ ‘ಬಯ್ಯುವ ಭಾರಧ್ವಜ’ನ ವಾಗ್ಜರಿ ಮುಂದುವರಿಯುತ್ತದೆ, ಇರಲಿ.
ಹುಚ್ಚ ವೆಂಕಟ್‍ ಯಾವುದೋ ಭಾವವೇಶಕ್ಕೊಳಗಾಗಿ ಆತನ ರೂಢಿಗತ ಭಾಷೆ ಮಾತಾಡಿಬಿಟ್ಟ. ಆತ ಹೃದಯವಿರುವ ಮನುಷ್ಯ, ಅದಕ್ಕೆ ಕ್ಷಮೆಯನ್ನೂ ಕೇಳಿದ. ಆದರೆ ಈ ಪ್ರೊ.ಹುಚ್ಚ ಬಾಲಗಂಗಾಧರ್? ಆತನ ಮಾತನ್ನೇ ಕೇಳಿಸಿಕೊಳ್ಳೋಣ- “ನಾನು (ಅಂಬೇಡ್ಕರ್‍ರನ್ನು) ಪೆದ್ದ ಬೆಪ್ಪಎಂದು ಕರೆದುದಕ್ಕೆ ನಿಜವಾಗೂ ವಿಷಾದಿಸುತ್ತೇನೆ. ಪ್ರಾಯಶಃ ಅಂಬೇಡ್ಕರ್‍ ಅವರು ಆಲಿಯಾ ಭಟ್ (ದಡ್ಡಿ ಎಂದು ಗೇಲಿಗೊಳಗಾದ ನಟಿ)ಗಿಂತ ಕೊಂಚ ಹೆಚ್ಚಿನ ಪ್ರತಿಭೆ ಹೊಂದಿದ್ದರು ಎಂದು ಹೇಳಬೇಕಿತ್ತು” ಎಂದು ಮತ್ತೂ ಲೇವಡಿ ಮಾಡುತ್ತಾನೆ. ಈ ಮೊದಲು ಈತ ಹೈದರಾಬಾದ್‍ನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ- ಕೊಲಂಬಿಯಾ ವಿಶ್ವವಿದ್ಯಾನಿಲಯ ಅಂಬೇಡ್ಕರ್‍ನಂಥ ಪೆದ್ದನಿಗೆ ಹೇಗೆ ಪಿಎಚ್‍ಡಿ ಕೊಟ್ಟಿತೊ ಅರ್ಥವಾಗುವುದಿಲ್ಲ ಎಂದೂ ಹೇಳಿರುತ್ತಾನೆ.
ಇದನ್ನು ಹೇಗೆ ಅರ್ಥಮಾಡಿಕೊಳ್ಳೋಣ? ಯಾವುದು ಅಸಹಿಷ್ಣುತೆ? ಮತ್ತೂ ಒಂದು ಉದಾಹರಣೆ- ಮೈಸೂರಿನ ಪಕ್ಕ ಉದ್ಬೂರು ಗ್ರಾಮದಲ್ಲಿ ಆ ಊರಿನ ದಲಿತರಿಗೂ ಹಿಂದುಳಿದ ಜಾತಿಗೂ ಗಲಾಟೆ ನಡೆಯುತ್ತದೆ. ಬಹುಶಃ ದಲಿತರ ಹುಡುಗಇನ್ನೊಂದು ಜಾತಿಯ ಹುಡುಗಿಯನ್ನು ಪ್ರೀತಿಸಿದ್ದೋ ಚುಡಾಯಿಸಿದ್ದೋ ಕಾರಣವಿರಬೇಕು. ಗಲಾಟೆ ಆದಾಗ ಹಿಂದುಳಿದ ವರ್ಗದವರು ದಲಿತರ ಮನೆಯ ಟಿ.ವಿ, ಸ್ಕೂಟರ್, ಗಡಿಯಾರ ಇತ್ಯಾದಿ ಇತ್ಯಾದಿಗಳಿಗೆ ಅಂದರೆ ಕಣ್ಣಿಗೆ ಹೊಳೆಯುವಂತಹ ವಸ್ತುಗಳನ್ನೇ ಹುಡುಕೀ ಹುಡುಕಿ ಧ್ವಂಸ ಮಾಡುತ್ತಾರೆ. ಇಲ್ಲಿ ದಲಿತ ಹುಡುಗ ಅವರ ಹುಡುಗಿಯನ್ನು ಪ್ರೀತಿಸಿದ್ದು ಅಸಹಿಷ್ಣುತೆಯೋ ಅಥವಾ ದಲಿತರು ತಮ್ಮ ಸಮಾನವಾಗಿ ಅಥವಾ ಮಿಗಿಲಾಗಿ ಬದುಕುತ್ತಿದ್ದಾರೆ ಎಂಬುದು ಅಸಹಿಷ್ಣುತೆಯೋ? ಈ ರಾವ್ ಬಹದ್ದೂರ್‍ರಾಯ್ ಆಗಲೀ ಅಥವಾ ಆ ಪ್ರೊ.ಹುಚ್ಚ ಬಾಲಗಂಗಾಧರ್ ಆಗಲೀ ಇದೇ ಮನಸ್ಥಿತಿಯವರಲ್ಲವೇ?
ಇರಲಿ, ಇದರ ಕಾರಣಕ್ಕೆ ಒಳಹೊಕ್ಕು ನೋಡಿದರೆ, ನಮ್ಮ ಜಾತಿಪದ್ಧತಿಯೊಳಗೇನೆ ಅಸಹಿಷ್ಣುತೆಯ ಭೂತ ಅಡಗಿಕೂತಿದೆ. ಸನಾತನ ವಸಹಾತುಶಾಯಿಯ ಈ ಭೂತವು ಅಸಮಾನತೆಯ ಅಸಹ್ಯವನ್ನು ಸಹ್ಯಗೊಳಿಸಿ ಎಚ್ಚರ ತಪ್ಪಿದ ಒಂದು ಸಾಮಾಜಿಕ ವ್ಯವಸ್ಥೆಯನ್ನಾಗಿಸಿಬಿಟ್ಟಿದೆ. ಭಾರತದ ಜಾತಿಪದ್ಧತಿ ಅಂದರೆ ಬಚ್ಚಿಟ್ಟುಕೊಂಡ ಅಸಹಿಷ್ಣುತೆ. ಯಾವಾಗ ಬಲಿಪಶುಗಳು ಎಚ್ಚರಗೊಳ್ಳುತ್ತಾರೊ ಆಗ ಆಕ್ರೋಶ ಕಾಣಿಸಿಕೊಳ್ಳುತ್ತದೆ. ಭಾರತದ ಜಾತಿಪದ್ಧತಿಯೊಳಗಿನ ಸಾಂಪ್ರದಾಯಿಕ ಸಂಬಂಧ ಹೇಗಿದೆ ಅಂದರೆ ಅದು- ಸಾಕುಪ್ರಾಣಿ ಮತ್ತು‘ಅಮಾನವೀಯ ಮನುಷ್ಯ’ರ ನಡುವೆ ಇರುವ ಸಂಬಂಧದಂತೆ.ಅದು ಅನ್ಯೋನ್ಯ  ಎಂಬಂತೆ ಕಾಣಿಸುತ್ತದೆ. ಅದೇ ಜಾತಿಪದ್ಧತಿಯೊಳಗಿನ ಬಲಿಪಶುಗಳು ಎಚ್ಚರಗೊಂಡರೆ ಆ ಸಂಬಂಧವು -ಚಿರತೆ ಮತ್ತು ‘ಅಮಾನವೀಯ ಮನುಷ್ಯ’ರ ನಡುವೆಇರುವ ಸಂಬಂಧದಂತಾಗಿಬಿಡುತ್ತದೆ.ಆಗ ಆಕ್ರೋಶ, ಘರ್ಷಣೆಗಳು ಉಂಟಾಗುತ್ತದೆ.ಆದರಿದು ಅಸಹಿಷ್ಣುತೆ ಅಲ್ಲ. ಅಸಹಿಷ್ಣುತೆಯು ಅಂತರ್ಗತವಾಗಿ ನಾಜೋಕಾದ ಸಾಮಾಜಿಕ ವ್ಯವಸ್ಥೆ ಆಗಿರುವುದರ ವಿರುದ್ಧ ಬಂಡಾಯ. ನಮಗೆ ಬೇಕಾಗಿರುವುದು ಇಲ್ಲಿ ಮನುಷ್ಯ-ಮನುಷ್ಯ ಸಂಬಂಧ; ಸಮಾನತೆ ಘನತೆಯ ಸಂಬಂಧ.ಅದಕ್ಕಾಗಿ ದಿನಕ್ಕೆ ಐದು ನಿಮಿಷ- ನಾವು ನಮ್ಮದಲ್ಲದಜಾತಿ/ಮತಗಳಲ್ಲ್ಲಿ ಹುಟ್ಟಿದಂತೆ ಭಾವಿಸಿ ಆವಾಹಿಸಿಕೊಳ್ಳುವ ಧ್ಯಾನ ಮಾಡಿದರೆ ಸಾಕು. ಅಸ್ಪ್ರಶ್ಯರಾಗಿಯೋ ಮಹಿಳೆಯರಾಗಿಯೋ ಧ್ಯಾನಿಸಿದರೆ ನಿಜವಾದ ಸಹಿಷ್ಣುಗಳು ಯಾರು ಎಂಬುದು ಅರಿವಾಗತೊಡಗುತ್ತದೆ; ಸಹಿಷ್ಣುತೆ ಚಿಗುರತೊಡಗುತ್ತದೆ.