ಮಾದಪ್ಪ ಹರಕೆ ಒಪ್ಪಿಸಿಕೊಂಡ!- ಪ್ರೊ.ಕೆ.ಸುಮಿತ್ರಾಬಾಯಿ

 

ಮದುವೆಯಾದ ಹೊಸತರಲ್ಲಿ ಪರಸ್ಪರರ ಬಗ್ಗೆ ತಿಳಿವಳಿಕೆ ಕಡಿಮೆ ಇರುವುದು ಸಹಜವೆ. ಸಾಂಸಾರಿಕ ವಿಷಯಗಳಲ್ಲಿ ದೇಮಾನ ಅಮಾಯಕತನವನ್ನು ಕಂಡು ಆಶ್ಚರ್ಯವಾಗುತ್ತಿತ್ತು. ಒಬ್ಬ ಮನುಷ್ಯ ಹೀಗೂ ಬೆಳೆದು ದೊಡ್ಡವನಾಗಲು ಸಾಧ್ಯವೇ ಎಂದು ಅಚ್ಚರಿ ಆಗುತ್ತಿತ್ತು. ಮನೆಯ ಜವಾಬ್ದಾರಿಗಳನ್ನು ನಿರ್ವಹಿಸುವ ಛಾತಿ ಇವನಿಗೆ ಸೊನ್ನೆ ಎಂದೇ ಹೇಳಬಹುದು. ಆದರೆ ಯಾರದೇ ಯಾವುದೇ ಸಮಸ್ಯೆ ತಲೆದೋರಿದರೂ ಅದನ್ನು ಅವನು ಲೀಲಾಜಾಲವಾಗಿ ನಿವಾರಿಸುವ ಛಾತಿ ಕಂಡು ಆಶ್ಚರ್ಯಗೊಳ್ಳುತ್ತಿದ್ದೆ. ಬೆಕ್ಕಸ ಬೆರಗಾಗುತ್ತಿದ್ದೆ. ಇದೆಲ್ಲಾ ಗೊತ್ತಿದ್ದೂ ಒಂದು ದಿನ ಇವನ ಮರೆವಿಂದ ಆದ ಎಡವಟ್ಟಿಗೆ ಕುಪಿತಳಾಗಿ ನನ್ನ ಕೋಪವನ್ನು ನಿಯಂತ್ರಿಸಿಕೊಳ್ಳಲಾರದೆ ದೇಮಾನ ಹಣೆಯ ಮಧ್ಯಕ್ಕೆ ಸರಿಯಾಗಿ ಮುಂಗೈ ಮುಷ್ಠಿಯಿಂದ ಗುದ್ದಿಬಿಟ್ಟೆನು. ಆಗ ದೇಮಾ ಅಯ್ಯಪ್ಪಾ ಎಂದು ನೋವಿನಿಂದ ನರಳಿದ್ದನ್ನು ಕೇಳಿದ ಕೂಡಲೇ ನನ್ನ ಕೋಪ ಜರ್ರನೆ ಇಳಿದು ಹೋಗಿ, ನನ್ನ ಕೋಪದ ಬಗ್ಗೆ ನನಗೇ ಅಸಹ್ಯ ಹುಟ್ಟಿತು. ಪಾಪ ದೇಮಾ ಆಗ ನನಗೂ ಎರಡು ತದುಕಬಹುದಿತ್ತು. ಅದೇನನ್ನೂ ಮಾಡದೆ ಸುಮ್ಮನಿದ್ದನು! ಇಂದಿಗೂ ಆ ಬಗ್ಗೆ ದೇಮಾ ಒಂದು ಕೋಪದ ಬೇಜಾರಿನ ನುಡಿಯನ್ನು ಹೇಳಿಲ್ಲ. ಆರೋಪ ಮಾಡುವುದು ಇವನ ನಿಘಂಟಿನಲ್ಲೆ ಇಲ್ಲ. ನಿದ್ದೆಮಾಡಿ ಎದ್ದ ಮೇಲೆ ಮರೆತುಬಿಟ್ಟಿರುತ್ತಾನೆ. ಆದರೆ ಮರೆತ್ತಿದ್ದಾನೆಂದುಕೊಂಡರೂ ಕೆಟ್ಟೆವು. ಸಂದರ್ಭ ಉಂಟಾದರೆ ಆ ಕಾಲದಲ್ಲೆ ಇದ್ದವನಂತೆ ಹೇಳುವುದೂ ಉಂಟು!. ಆಗಲಿಂದ ಸ್ವಭಾವತಃ ವಾರಿಯರ್ ಆದ ನಾನು, ನನ್ನ ಕೋಪವನ್ನು ನಿಧಾನಕ್ಕೆ ತಗ್ಗಿಸಿಕೊಂಡು ನನ್ನನ್ನೆ ಪಳಗಿಸಿಕೊಂಡೆನು. ಈ ಇವನ ಮರೆವಿಗೆ ಮಗುವಾಗಿದ್ದಾಗ ನೆತ್ತಿ ಓಪನ್ ಆಗಿ ಆಕಾಶ ನೋಡುತ್ತಿದ್ದುದು ಕಾರಣ ಎಂದು ಹೇಳುತ್ತ ಇವನ ಪ್ರೀತಿಯ ದೊಡ್ಡವ್ವ `ಮಾದೇವನ ತಲ ಒಳ್ಗ ಮಿದ್ಲು ಇಲ್ಲಕವ್ವ’ ಎಂದಿದ್ದರು!
ಈಗಲೂ ದೇಮಾನ ನೆತ್ತಿಚಿಪ್ಪಲ್ಲಿ ಕೂದಲಿಲ್ಲ. ದೇಮಾ ಐದು ತಿಂಗಳ ಕೂಸಾಗಿದ್ದಾಗ ನೆತ್ತಿಯಲ್ಲಿ ಗಾಯವಾಗಿ ಮೆದುಳು ಕಾಣುತ್ತಿತ್ತಂತೆ! ಇಂತಹ ಸ್ಥಿತಿಯಲ್ಲಿ ಮಗನನ್ನು ಉಳಿಸಿಕೊಳ್ಳಲು ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ಔಷಧೋಪಚಾರವನ್ನು ನನ್ನ ಮಾವನವರು ಮಾಡಿಸಿದರಂತೆ. ಆ ಗಾಯ ಹೇಗಾಯಿತೆಂದು ಅತ್ತೆಯವರನ್ನು ಕೇಳಿದರೆ ಸರಿಯಾಗಿ ಉತ್ತರಿಸಲಿಲ್ಲ. ಅವರೇ ಏನೋ ಎಡವಟ್ಟು ಮಾಡಿರಬೇಕು ಅನ್ನಿಸಿತು. ಒಂದು ಚಿಕ್ಕಗಾಯ ಅಷ್ಟು ದೊಡ್ಡ ರಣಗಾಯವಾಗಬೇಕಾದರೆ, ಹಳ್ಳಿಯ ಕಡೆ ರೂಢಿಯಲ್ಲಿರುವ ಗಾಯಕ್ಕೆ ಕಾಫಿಪುಡಿ ಹಾಕುವುದು, ಸೆಗಣಿ ಮೆತ್ತುವುದು ಬಹುಶಃ ಈ ರೀತಿಯ ಅವಿವೇಕವೇನೋ ಆಗಿದೆ ಎಂದು ಊಹಿಸಿದೆ. ಮಾವನವರಿಗೆ ಮೂವರು ಹೆಂಡಿರಿದ್ದರು. ಮೊದಲಿಬ್ಬರು ಅಕ್ಕ ತಂಗಿಯರು. ನಮ್ಮತ್ತೆ ಎರಡನೆಯ ಹೆಂಡತಿ. ಸುಮ್ಮನೆ ಚುಡಾಯಿಸುವುದಕ್ಕೆ ಯಾರು ಮೊದಲನೆ ಹೆಂಡ್ತಿ ಎಂದು ಕೇಳಿದರೆ ನಮ್ಮತ್ತೆ ಗುಟ್ಟು ಬಿಟ್ಟುಕೊಡುತ್ತಿರಲಿಲ್ಲ. ಮೊದಲ ಹೆಂಡತಿ ಸುಬ್ಬಮ್ಮನವರಿಗೆ ದೇಮಾನನ್ನು ಕಂಡರೆ ತುಂಬಾನೆ ಅಕ್ಕರೆ. ಬೆಣ್ಣೆ ತಿನ್ನಿಸಿ ಬೆಳೆಸಿದರಂತೆ. ಈ ಸುಬ್ಬಮ್ಮನವರು ಕೂಸಿನ ತಲೆ ತೂತಾಗಿ ಮೆದುಳು ಕಂಡಿದ್ದರಿಂದ ಮಗು ಬೆಳಿತಾ ಸಾಧುವಾಗಿ ಋಷಿ ಥರ ಆಗ್ಬುಡ್ತಾನೆ ಎಂದು ಪರಿತಾಪ ಪಡುತ್ತಿದ್ದರಂತೆ. ಆಶ್ಚರ್ಯವೆಂದರೆ ಈ ವಿಷಯ ಸ್ನೇಹಿತರಾದ ಕೆ.ಎಂ.ಶಂಕರಪ್ಪರ ಬಳಿ ಪ್ರಸ್ತಾಪಕ್ಕೆ ಬಂದಾಗ- ಅವರು ಓ… ಓ… ‘ಏನೋ ನಿಂಗೆ ಆಗ್ಲೇ ಸಹಸ್ರಾರ ಓಪನ್ ಆಗಿ ಬಿಟ್ಟಿದಿಯಲ್ಲೋ’ ಎಂದು ಉದ್ಗರಿಸಿದ್ದರು. ಹಾಗಂದ್ರೆ ಏನು ಸಾರ್? ಎಂದು ಕೇಳಿದೆ. ಅದೂ ಟಿಬೆಟಿಯನ್ ಬೌದ್ಧ ಸಂನ್ಯಾಸಿಗಳು ಉನ್ನತ ಅಟ್ಯೂನ್‍ಮೆಂಟ್‍ಗಾಗಿ ನೆತ್ತಿ ತೂತಾಗಿಸಿಕೊಂಡು ಸಹಸ್ರಾರವನ್ನು ಒಪೆನ್‍ಅಪ್ ಮಾಡಿಕೊಳ್ಳುವ ಒಂದು ಕ್ರಿಯೆ ಎಂದು ವಿವರಿಸಿದರು. ಏನೊ ಎತ್ತೊ ಈಗಲೂ ದೇಮಾನ ನೆತ್ತಿಯಲ್ಲಿ ಎದ್ದುಕಾಣುವಂತೆ ತಗ್ಗು ಇದೆ.
ಒಂದು ದಿನ ನಮ್ಮತ್ತೆ ಅದೂ ಇದೂ ಮಾತಾಡ್ತ- ಮಾದೇವ ಕೂಸಾಗಿದ್ದಾಗ ತಲೆಯಲ್ಲಿ ಗಾಯವಾಗಿ `ಮೆದ್ಲು’ (ಮಿದುಳು) ಕಾಣ್ತಿತ್ತಲ್ಲವ್ವ, ಆಗ ಮಾದಪ್ಪಂಗೆ ಅರಿಕೆ (ಹರಕೆ) ಕಟ್ಟಿಕೊಂಡಿದ್ದಿ ಎಂದರು. ಅದೇನೋ ಸರಿ… ಆಮೇಲೆ ಆ ಹರಕೆಯನ್ನು ಒಪ್ಪಿಸಿದಿರಾ? ಎಂದು ಕೇಳಿದೆ. ಅಯ್ಯೋ ಅದೆಲ್ಲಾದ್ದು… ಮಾದೇವ ಬರ್‍ಬೇಕಲ್ಲವ್ವ! ಅವ್ನುನ್ನೂ ಕರ್ಕ ಬತ್ತೀನಂತ ಹೇಳ್ಕಂಡಿದ್ದೆ ಎಂದರು. ಮಾತು ಅಲ್ಲಿಗೇ ನಿಂತಿತು. ಆದರೆ ನನ್ನ ಕನಸಲ್ಲಿ ಹಾವಿನ ಮೈನಂತಿರುವ ಮೆಟ್ಟಿಲುಗಳು ಆಗಾಗ್ಗೆ ಕಾಣಿಸಲು ಪ್ರಾರಂಭವಾಯಿತು. ಜೊತೆಗೆ ಒಂದು ಶಿವಲಿಂಗ, ಅದರ ತಲೆಯ ಮೇಲೆ ಒಂದು ಬಿಳಿಯ ದಾಸವಾಳದ ಹೂ ಇರುವುದು ಕನಸಲ್ಲಿ ಬರುತ್ತಿತ್ತು. ಇದನ್ನು ಏನೋ ಕನಸು ಎಂದು ಅಂದುಕೊಂಡು ನನ್ನಷ್ಟಕ್ಕೆ ನಾನಿರಬೇಕಾದರೆ ಮತ್ತೆ ಹಾವಿನ ಮೈನಂತೆ ಮೆಟ್ಟಿಲುಗಳು, ಆ ಮೆಟ್ಟಿಲನ್ನು ನಾನು ಹತ್ತಿಹೋಗಬೇಕೆಂದು ಅನ್ನಿಸುವಂತಿದ್ದ ದೃಶ್ಯವನ್ನು ಕನಸಲ್ಲಿ ಕಂಡೆನು. ಇದೇನಿದು ಕೆಂಪು ಸರ್ಪದ ಮೈನಂತೆ ಮೆಟ್ಟಿಲುಗಳಿರಲು ಸಾಧ್ಯವೇ ಎಂದು ಆಶ್ಚರ್ಯ ಪಟ್ಟು ಯಾವುದಕ್ಕೂ ಇರಲಿ ಎಂದು ಅಮ್ಮನ ಬಳಿ ಈ ಸಂಗತಿಯನ್ನು ಹೇಳಿದೆ. ಆಗ ಅವರು- ಮಾದೇಶ್ವರನ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೋಗಲು ಸರ್ಪದ ಮೆಟ್ಟಿಲುಗಳಿವೆ, ಶಿವಲಿಂಗ ಕೂಡ ಕಾಣ್ತಿದೆ ಅಂದ ಮೇಲೆ ಅದು ನಿನ್ನ ಗಂಡನ ಮನೆಯವರು ಒಪ್ಪಿಸಬೇಕಾಗಿರುವ ಯಾವುದೋ ಹಳೆ ಹರಕೆ ಇರಲೇಬೇಕು ಎಂದರು!
ಅತ್ತೆಯವರು ನನ್ನ ಕಿವಿಯಲ್ಲಿ ಬಿಟ್ಟ ಈ ಹರಕೆಯ ಗುಂಗಾರಿ ನನ್ನನ್ನು ಮತ್ತೂ ಮತ್ತೂ ಕಾಡಲು ಶುರುವಾಯ್ತು. ಹೆತ್ತ ತಾಯಿ ಹೊತ್ತ ಹರಕೆ ನನ್ನನ್ನೇಕೆ ಕಾಡಬೇಕು ಎಂಬುದು ನನ್ನ ಕ್ಯಾತೆ. ಕಿಲಾಡಿ ಅತ್ತೆ ಹರಕೆಯನ್ನು ತೀರಿಸದೆ ನನ್ನ ಕಿವಿಯೊಳಗೆ ಬಿಟ್ಟು ತನ್ನ ಜವಾಬ್ದಾರಿಯನ್ನು ನನ್ನ ಹೆಗಲಿಗೆ ಜಾರಿಸಿದ್ದರು. ಹಾಗೇ ಬದುಕಿನ ಓಟದಲ್ಲಿ ಓಡಾಡುತ್ತಾ ನನ್ನ ಎರಡನೆಯ ಮಗಳು ಮಿತಾಳ ವಿವಾಹವಾದ ಕೆಲವು ದಿನಗಳ ನಂತರ ಮತ್ತೆ ಆ ಸರ್ಪದ ಮೆಟ್ಟಿಲುಗಳು ಸ್ವಪ್ನದಲ್ಲಿ ಕಾಣಿಸಲು ಶುರುವಾಯ್ತು. ಆದ್ದರಿಂದ ಇದು ಅಮ್ಮ ಹೇಳಿದ ಹರಕೆಯ ಸಂಗತಿಯೇ ಕಾರಣವಿರಬೇಕೆಂದು ಅನ್ನಿಸಿತು. ಮಾದಪ್ಪನ ಬೆಟ್ಟಕ್ಕೆ ನಾನು ಎಂದೂ ಹೋಗಿರಲಿಲ್ಲ, ಹೋಗುವ ಸಂದರ್ಭ ಬಂದಾಗ ಬೇಕೆಂದೇ ತಪ್ಪಿಸಿಕೊಂಡಿದ್ದೆ. ಈಗ ಒಂದು ಸಲ ಹೋಗಿ ಬಂದು ಬಿಡಬೇಕೆಂದು ನಿಶ್ಚಯಿಸಿದೆನಾದರೂ, ದೇಮಾನನ್ನು ಕರೆದುಕೊಂಡು ಹೋಗಬೇಕಾದ್ದು ಮುಖ್ಯವಾಗಿತ್ತು. ಯಾವ ತಂತ್ರದಿಂದ ದೇಮಾನನ್ನು ಬೋನಿಗೆ ಬೀಳಿಸಬೇಕೆಂದು ನನ್ನ ಮನಸ್ಸು ಲೆಕ್ಕಾಚಾರ ಹಾಕುತ್ತಿತ್ತು.            ಕುಸುಮಬಾಲೆ ಕಾದಂಬರಿಯನ್ನು ಮಲೆ ಮಾದೇಶ್ವರನಿಗೆ ಅರ್ಪಿಸಿರುವುದನ್ನು ದೇಮಾಗೆ ನೆನಪಿಸಿ, ಒಮ್ಮೆ ಇಬ್ಬರೂ ಬೆಟ್ಟಕ್ಕೆ ಹೋಗಿ ಬರೋಣವೆಂದು ಪೀಠಿಕೆ ಹಾಕಿದೆ. ಆ ಕೂಡ್ಲೆ ದೇಮಾ ‘ಓ ಯಸ್ ಮಿತ್ರೀ, ನಿಂಗಿಷ್ಟ ಆದ್ರೆ ಹೋಗೋಣ’ ಎಂದನು. ಸಧ್ಯ ಯಾವ ರಗಳೆ, ವಾದ-ವಿವಾದಗಳಿಲ್ಲದೆ ಸಲೀಸಾಗಿ ನನ್ನ ತಂತ್ರ ಫಲಿಸಿತ್ತು. ಆಳದಲ್ಲಿ ದೇಮಾನೊಳಗೆ ಮಲೆಯ ಮಹದೇಶ್ವರ ಕಾವ್ಯ ಮಡುಗಟ್ಟಿತ್ತು. ಪಿ.ಕೆ.ರಾಜಶೇಖರ್ ಅವರು ಜನಪದ ಮಹಾಕಾವ್ಯ `ಮಲೆಯ ಮಾದೇಶ್ವರದ ಒಂದು ಪ್ರತಿಯನ್ನು ದೇಮಾಗೆ ಕಳುಹಿಸಿದ್ದರು. ಈ ಕಾವ್ಯವನ್ನು ಮಹಾದೇವ ಹಗಲೆನ್ನದೆ ರಾತ್ರಿ ಎನ್ನದೆ ಒಂದೇ ಸಮನೆ ಎಷ್ಟೋ ದಿನಗಳ ಕಾಲ ಲಯಬದ್ಧವಾಗಿ ಮೆಲುಕು ಹಾಕುತ್ತ ಆನಂದವನ್ನು ಸಂಕಟವನ್ನೂ ಅನುಭವಿಸುತ್ತಿದ್ದನು. ಈ ಗುಂಗು ಹೇಗಿತ್ತೆಂದರೆ, ನಿದ್ದೆ ಮಾಡುವಾಗ ಕೂಡ ಯಾವುದೋ ಸಾಲಿನ ರಾಗ ಕನವರಿಸುತ್ತಿದ್ದನು. ಈ ಮಾದೇವನನ್ನು ಮೋಡಿ ಮಾಡಿರುವ ಈ ಕಾವ್ಯದ ಗುಟ್ಟೇನು ಎಂಬ ಕುತೂಹಲಕ್ಕೆ ನಾನೂ ಒಮ್ಮೆ ಮಾದೇಶ್ವರ ಕಾವ್ಯವನ್ನು ಓದಿ ಬಿಡಲು ನಿರ್ಧರಿಸಿ, ಪುಟಗಳನ್ನು ತಿರುವಿ ಹಾಕಲು ಶುರು ಮಾಡಿದೆ. ಆಗ ಕಂಡ ಬೇವಿನ ಹಟ್ಟಿ ಕಾಳಿ ಎಂಬ ತಲೆಬರಹ ನನ್ನನ್ನು ಬಹುವಾಗಿ ಆಕರ್ಷಿಸಿತು. ಬಾಲ್ಯದಲ್ಲಿ ಅಪ್ಪ, ಕೆಲವು ಸಲ ಅಮ್ಮನ ಜೊತೆ- `ಈ ಬೇವ್‍ನಟ್ಟಿಕಾಳಿ ಹತ್ತಿರ ನೀನೇ ಕೇಳಿ ದುಡ್ಡೀಸ್ಕೋ’ ಎಂದು ನನ್ನ ಕುರಿತು ಹೇಳುತ್ತಿದ್ದರು. ಕಾರಣ ನನ್ನ ಹತ್ರ ದುಡ್ಡಿರುತ್ತಿತ್ತು (ಅದು ಅಪ್ಪ ಕೊಟ್ಟದ್ದೇ), ಒಮ್ಮೊಮ್ಮೆ ಅರ್ಜೆಂಟ್‍ಗೇಂತ ಹಣವನ್ನು ಅಮ್ಮನಿಗೆ ಕೊಡುತ್ತಿದ್ದೆ, ಅಷ್ಟೆ. ಆದ್ರೆ ಸುಲಭದಲ್ಲಿ ಕೊಡುತ್ತಿರಲಿಲ್ಲವಾದ್ದರಿಂದ ಮನೆಯವರಿಗೆ ನಾನೊಬ್ಬ ಬೇವ್‍ನಟ್ಟಿ ಕಾಳಿಯಾಗಿದ್ದೆ.
`ಮಲೆಯ ಮಾದೇಶ್ವರ’ ಕಾವ್ಯದ ಸಂಪಾದಕ ನನ್ನ ಆತ್ಮೀಯ ಪಿ.ಕೆ.ರಾಜಶೇಖರ ಅವರು ಸಿಕ್ಕಾಗ, ಮಹಾಕಾವ್ಯ ಮಲೆಯ ಮಾದೇಶ್ವರ ಅದ್ವಿತೀಯವಾಗಿ ಚೆನ್ನಾಗಿದೆ ಎಂದೆ. ಅವರು ಬಾಳ ಖಿನ್ನರಾಗಿ `ಅಯ್ಯೋ ಬಿಡಿ ಆ ಸುದ್ದಿ ಯಾಕೆ?… ನೀವು ಚೆನ್ನಾಗಿದೆ ಅಂದರಲ್ಲ, ಅಷ್ಟೇ ಸಾಕು’ ಎಂದು ನಿರಾಶಾದನಿಯಲ್ಲಿ ಹೇಳಿದರು! ಪಟ್ಟು ಬಿಡದ ನಾನು `ಯಾಕೆ ಹೀಗೆ ಹೇಳ್ತಿದ್ದೀರಿ’ ಎನ್ನುತ್ತಾ ದೇವನೂರರ ವರ್ತನೆಯನನ್ನು ತಿಳಿಸಿದೆನು. `ಅಯ್ಯೋ ಬಿಡಿ, ಬೇರೆಯವರು ಇರಲಿ… ಮಹಾದೇವರೂ ಕೂಡ ಒಂದು ಪ್ರತಿಕ್ರಿಯೆ ಇದುವರೆಗೂ ಬರೆಯಲಿಲ್ಲ. ಪ್ರಯೋಜನವೇನು?’ ಎಂದು ಸಪ್ಪೆಯಾಗಿ ಹೇಳಿದರು. ಈ ಬಗ್ಗೆ ದೇಮಗೆ ಹೇಳ್ತೀನಿ ಎಂಬ ಭರವಸೆ ನೀಡಿದೆ. ಹೇಳಿಯೂ ಆಯ್ತು, ಆದರೆ ಈ ಸೋಮಾರಿ ಸುಬ್ಬ ಈ ತನಕ ಬರೆಯಲಿಲ್ಲವೆಂಬ ಕೊರಗು ನನ್ನಲ್ಲಿ ಇಂದಿಗೂ ಉಳಿದುಬಿಟ್ಟಿದೆ. ಅನಂತರ ಡಾ ಪಿ.ಕೆ.ಆರ್ ಅವರು ಈ ಕಾವ್ಯದ ಪ್ರತಿಗಳು ಗ್ರಂಥಾಲಯದಿಂದಲೂ ನಾಪತ್ತೆಯಾಗುತ್ತಿವೆ ಎಂದರು. ಇದನ್ನು ಕೇಳಿ ಆಶ್ಚರ್ಯವಾಯಿತು. ಯಾಕೆ? ಮಹದೇಶ್ವರ ಮಾದಿಗರವನು ಎಂದು ಸಾಬೀತು ಆಗಿರುವುದೇ ಕಾರಣ ಇರಬಹುದಾ? ಎಂದೆನು. ಊಂ ಇರಬಹುದು ಎಂದು ಗೋಣಾಡಿಸುತ್ತಾ `ನೀವು ಸೋಸಿಯಾಲಜಿಯವರಿಗೆ ತಿಳಿಯದ್ದೇನಿದೆ’ ಎಂದು ಸೈಕಲ್ ಏರಿದರು.
ಇರಲಿ, ಮಾದಪ್ಪ ಮನಸ್ಸು ಕೊಟ್ಟಿದ್ದನೇನೋ ಅಂತೂ ದೇಮಾ, ನಾನು ಮತ್ತು ಅವಿನಾಶ್ (ಅಳಿಯ) ಬೆಟ್ಟಕ್ಕೆ ಹೊರಟೆವು, ಆದರೆ ಆ ಬೆಟ್ಟಕ್ಕೆ ಹೋಗುವ ಮಾರ್ಗ ತಿಳಿಯದೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪಾಡುಪಟ್ಟೆವು. ಎದುರಿಗೆ ಬೆಟ್ಟ ಕಾಣುತ್ತಿದ್ದರೂ ಸಹ ಹಾವಿನ ರೀತಿ ಸುತ್ತಿಸುತ್ತಿ ಸುಸ್ತಾದೆವು. ಬೆಟ್ಟ ಮಾತ್ರ ತನಗೆ ತಾನೇ ಸಾಟಿ ಎಂಬಂತೆ ಮುಂದೆ ಗೋಚರಿಸುತ್ತಿತ್ತು. ಆಕಾಶ ಪೂರ್ತಿ ನೀಲಿಗಟ್ಟಿ ಇನ್ನೇನು ಮಳೆ ಸುರಿದೇಬಿಡುವುದೆಂಬ ಆತಂಕ ಬೇರೆ. ಅವಿನಾಶ್ ಅವರ ತಾಳ್ಮೆಯಿಂದ ಒಂದು ಸರಿಯಾದ ದಾರಿ ಕಾಣಿಸಿತು. ಉಸ್ಸಪ್ಪಾ ಎಂದು ಬೆಟ್ಟವನ್ನು ತಲುಪಿದೆವು.
ದೇವಸ್ಥಾನದ ಪಕ್ಕ ಇರುವ ಕೆರೆಯು ಹನಿ ನೀರಿಲ್ಲದೆ ಒಣಗಿ ನಿಂತಿತ್ತು. ಮಾರ್ಗ ಮಧ್ಯದಲ್ಲಿ ಒಂದು ಬೋರ್‍ವೆಲ್ ಕೊರೆದಿದ್ದರು, ಆ ನೀರಲ್ಲಿ ಕೈ ಕಾಲು ಮುಖ ತೊಳೆದುಕೊಂಡು ನೀರು ಕುಡಿದೆವು. ಆ ನೀರು ಅಮೃತ ಕುಡಿದಂತೆ ರುಚಿಯಾಗಿತ್ತು. ಮಳೆಸುರಿಯುವ ಸೂಚನೆ ನೀಡಿದ್ದ ಮೋಡಗಳು ಮರೆಯಾಗಿ ಹೋಗಿದ್ದವು. ಚುರುಚುರನೆ ಬಿಸಿಲು ನಮ್ಮನ್ನು ಸುಡುತ್ತಿತ್ತು. ನಮ್ಮ ಚಪ್ಪಲಿಗಳನ್ನು ಬಿಡಲು ಒಂದು ಶೆಡ್ ಬಳಿ ಬಂದೆವು. ಆಗ ಅದೆಲ್ಲಿಂದಲೋ ರೂಪಾಯಿ ಬಣ್ಣದ ಕಡಸುಗರುವೊಂದು ಸೀದಾ ದೇಮಾನ ಬಳಿ ಬಂದು ಅವನ ಮೊಣಕೈಯನ್ನು ಮೂಸುತ್ತಾ ನೆಕ್ಕಲು ಶುರು ಮಾಡಿತು. ಆ ಮುದ್ದಾಗಿದ್ದ ಕರುವಿನಿಂದ ಇವ ತಪ್ಪಿಸಿಕೊಳ್ಳಲು ಯತ್ನಿಸಿದರೂ ಬಿಡುತ್ತಿರಲಿಲ್ಲ. ಅದು ತನ್ನೆರಡು ಕಣ್ಣುಗಳನ್ನು ಮುಚ್ಚುತ್ತಾ ಬಿಡುತ್ತಾ ಮತ್ತೆ ಮತ್ತೆ ನೆಕ್ಕಲು ಹವಣಿಸುತ್ತಿತ್ತು. ‘ಬಂದ್ಯಾ ಕೂಸೂ… ಈಗ ಬಂದ್ಯಾ… ಬಾ ಬಾ ನನ ಕಂದಾ’ ಎಂದು ಇವನ ಮೈದಡವಿ ಕರೆಯುವಂತೆ ನನಗೆ ಭಾಸವಾಗ್ತಿತ್ತು. ಆದ್ರೆ ದೇಮಾ ಮಾತ್ರ ಅದರ ಚೂಪಾದ ಕೊಂಬುಗಳಿಗೆ ಗಾಬರಿಯಾಗಿ ಅದರ ಸ್ಪರ್ಶದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದನು. ಅದು ಮಾತ್ರ ಇವನ ಗದರುವಿಕೆಯನ್ನೂ ಲೆಕ್ಕಿಸದೆ ಮೊಣಕೈ ನೆಕ್ಕುವುದರಲ್ಲಿ ತಲ್ಲೀನವಾಗಿತ್ತು. ಆಗ ನಾನೂ ಕೂಡ ಒಂದೆರಡು ಸಲ ದೂರ ಓಡಿಸಲು ಪ್ರಯತ್ನಿಸಿ ಸೋತೆ. ಅಲ್ಲಿಗೆ ಬಂದ ಯಾರೊ ಒಂದಿಬ್ಬರು ಆ ಕಡಸನ್ನು ಕಷ್ಟಪಟ್ಟು ಓಡಿಸಿದರು! ಇದು ನನಗೆ ತುಂಬ ವಿಚಿತ್ರವಾಗಿ ಕಂಡಿತು. ಆ ಕಡಸು ಮತ್ಯಾರ ಬಳಿಯೂ ಹೋಗಲಿಲ್ಲ, ದೇಮಾನತ್ತಲೇ ನೋಡುತ್ತಿತ್ತು. ಕೈಯಲ್ಲಿ ಕೆಮರಾ ಇದ್ದಿದ್ದರೆ ಕ್ಲಿಕ್ಕಿಸಬಹುದಿತ್ತು. ಆಮೇಲೆ ದೇಮಾನನ್ನು ರೇಗಿಸಲು- ‘ನೋಡ್ದಾ ಮಾದೇವಾ… ಇಷ್ಟು ವರ್ಷ ನೀ ಬರದೇ ಇದ್ದದ್ದಕ್ಕೆ… ಈಗ ಮಾದಪ್ಪ ನಿನ್ನನ್ನು ಸ್ವಾಗತಿಸಿ ಮುದ್ದು ಮಾಡಿದ್ದಾನೆ’ ಎಂದು ಚುಡಾಯಿಸಿದೆ. ನನ್ನ ಮಾತುಗಳನ್ನು ದೇಮಾ ಮಳ್ಳನಂತೆ ಒಳಗೊಳಗೇ ಎಂಜಾಯ್ ಮಾಡುತ್ತಿದ್ದನು.
ಆಮೇಲೆ ದೇವಸ್ಥಾನದ ಹೆಬ್ಬಾಗಿಲಿನ ಕಡೆ ಹೊರಟೆವು. ಅಲ್ಲಿ ಧೂಪವನ್ನು ಕೊಂಡು ಕೆಂಡದ ಮೇಲೆ ಹಾಕಿದ ನಂತರ ದೇವಸ್ಥಾನದೊಳಗೆ ಪ್ರವೇಶಿಸಿದೆವು. ಮಾದಪ್ಪನ ದರ್ಶನ ಅಂತ ಮನಸ್ಸು ನಿರಾಳವಾಯಿತು. ಒಳಗಡೆ ಹೋದರೆ, ಎರಡು ಕಡೆ ಮಾದೇಶ್ವರನನ್ನು ಪೂಜಿಸಬೇಕಾಗಿತ್ತು. ನಾನು ಒಂದೇ ಹೂವಿನಹಾರ ಕೊಂಡಿದ್ದೆ. ಯಾವ ಮಾದಪ್ಪನಿಗೆ ನೀಡಬೇಕೆಂದು ಗೊಂದಲವಾಯ್ತು. ಆಗ ಯಾರೋ ಒಬ್ಬರು, ಇಲ್ಲಿ ಫಸ್ಟ್ ಹೋಗಿ ಎಂದರು. ಅದು ಮಾದಪ್ಪನ ಮೂಲ ವಿಗ್ರಹವಾಗಿತ್ತು. ಅದೊಂದು ಮಾದಪ್ಪನ ಪುಟ್ಟ ಗುಡಿಯಂತೆ ಇತ್ತು. ಇಲ್ಲಿ ಹೂವಿನ ಹಾರವನ್ನು ನೀಡಿ ಪೂಜೆ ಮಾಡಿಸಿದೆ. ಆನಂತರ ಭವ್ಯವಾದ ರೀತಿಯಲ್ಲಿ ಪ್ರತಿಷ್ಟಾನಗೊಂಡಿದ್ದ ಶಿವಲಿಂಗ ರೂಪದಲ್ಲಿದ್ದ ಮಾದೇಶ್ವರನನ್ನು ದರ್ಶಿಸಿ ಮಂಗಳಾರತಿಗೆ ಕಾಣಿಕೆ ಹಾಕಿದೆ. ನಮ್ಮತ್ತೆ ಎಷ್ಟು ದುಡ್ಡು ಏನು ಹರಕೆ ಹೊತ್ತಿದ್ದರೆಂಬುದನ್ನು ತಿಳಿಸಿರಲಿಲ್ಲವಾಗಿ ನನಗೆ ತೋಚಿದಷ್ಟು ಕಾಣಿಕೆಯನ್ನು ಹರಕೆ ಎಂದು ಮನಸ್ಸಿನಲ್ಲಿ ಹೇಳಿಕೊಂಡು ಒಪ್ಪಿಸಿದೆ. ಹೊರಗೆ ಅಷ್ಟೊಂದು ಸುಡು ಬಿಸಿಲಿನ ಝಳವಿದ್ದರೂ ದೇವಸ್ಥಾನದೊಳಗೆ ತಂಪಾಗಿತ್ತು. ಹೊರಗೆ ಬಂದ ಮೇಲೆ ದೇಮಾನಿಗೆ ಅಂತೂ ನಿನ್ನ ಅವ್ವನ ಹರಕೆ ತೀರಿತು ಅಂದೆ!