ಮಾತೃಭಾಷಾ ಮಾಧ್ಯಮದ ವಿವಾದದ ಹಿನ್ನೆಲೆಯಲ್ಲಿ – ಡಾ. ವಿ.ಪಿ. ನಿರಂಜನಾರಾಧ್ಯ ಲೇಖನ

ಡಾ.ನಿರಂಜನಾರಾಧ್ಯ.ವಿ.ಪಿ

  ಮಾತೃಭಾಷಾ ಶಿಕ್ಷಣ: ಸರ್ಕಾರದ ಮುಂದಿರುವ ಆಯ್ಕೆಗಳು

‘ಸಮಸ್ಯೆಯನ್ನು ಸೃಷ್ಠಿಸಿರುವ ಪ್ರಜ್ಞೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಲಾಗದು. ಸಮಸ್ಯೆಯನ್ನು ಬಗೆಹರಿಸಲು ನಾವು ಹೊಸದಾಗಿ ಚಿಂತಿಸಬೇಕಾಗುತ್ತದೆ’ ಎಂಬ ಆಲ್ಬರ್ಟ್ ಐನ್‍ಸ್ಟೀನ್‍ರವರ ಮಾತು ಭಾಷಾಮಾಧ್ಯಮದ ಬಗ್ಗೆ ನಮಗಿರುವ ಗೊಂದಲಗಳನ್ನು ಪರಿಹರಿಸಿ ಸಮಸ್ಯೆಗೆ ಹೊಸ ಪರಿಹಾರವನ್ನು ಕಂಡುಕೊಳ್ಳಲು ಸ್ಪೂರ್ತಿಯಾಗುತ್ತದೆ.
ಕರ್ನಾಟಕ ಸರ್ಕಾರ ಜನತೆಯ ಆಶಯಕ್ಕೆ ಮಣಿದು ಕನಿಷ್ಠ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಮಗುವಿನ ಮಾತೃಭಾಷೆಯಲ್ಲಿ ಶಿಕ್ಷಣ ಕಡ್ಡಾಯಗೊಳಿಸಲು ಕಾನೂನಿನ ಅವಕಾಶಗಳನ್ನು ಬಳಸಿ ಸಂವಿಧಾನ ಮತ್ತು ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009ಕ್ಕೆ ಅಗತ್ಯ ತಿದ್ದುಪಡಿಗಳನ್ನು ತರಲು ಮುಂದಾಗಿದೆ. ಈ ಬಗ್ಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ವ್ಯಾಪಾರಿಗಳು, ಸಾಮಾಜಿಕ ಕಳಕಳಿಗಿಂತ ಆಂಗ್ಲರು ರೂಪಿಸಿದ ‘ಬ್ಲಾಕ್ ಲೆಟರ್ ಲಾ’ ಗೆ ಅಂಟಿಕೊಂಡಿರುವ ನ್ಯಾಯವಾದಿಗಳು ಮತ್ತು ಸರ್ಕಾರಕ್ಕೆ ಪರ್ಯಾಯವೆಂಬಂತೆ ಬಿಂಬಿಸಿಕೊಳ್ಳುವ ಕೆಲವು ಸರ್ಕಾರೇತರ ಸಂಘಟನೆಗಳು ಸರ್ಕಾರದ ಈ ಕ್ರಮಕ್ಕೆ ಅಪಸ್ವರ ಎನ್ನುವ ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ .
ಈ ಸಂದರ್ಭದಲ್ಲಿ, ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆಯನ್ನು ಜಾರಿಗೊಳಿಸಲು ಸಾಧ್ಯವಾಗಬಹುದಾದ ಕಾನೂನಿನ ಅವಕಾಶಗಳನ್ನು ಅವಲೋಕಿಸುವಾಗ ಕೇವಲ ‘ಕಾನೂನಿನ ಮಸೂರ” ದಿಂದ ಮಾತ್ರ ತೀರ್ಮಾನಿಸಲಾಗದು. ಸಮಸ್ಯೆಯನ್ನು ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕøತಿಕ ಆಯಾಮಗಳಿಂದಲೂ ಪರಿಶೀಲಿಸಬೇಕಾಗುತ್ತದೆ. ಜೊತೆಗೆ, ಭಾಷಾಕಲಿಕೆಗೆ ಸಂಬಂಧಿಸಿದ ಸಂಶೋಧನೆ ಮತ್ತು ಭಾಷಾಕಲಿಕೆಯ ಮನೋವಿಜ್ಞಾನದ ಆಯಾಮಗಳಿಂದಲೂ ವಿಮರ್ಶಿಸಬೇಕಿದೆ. ಈ ವಿಧಾನವನ್ನು ಬಹುಶಾಸ್ತ್ರೀಯ [Multidisciplinary approach] ವಿಧಾನವೆಂದು ಕರೆಯಲಾಗುತ್ತದೆ.
ಮೊದಲಿಗೆ, ಮಾತೃಭಾಷೆಯೆಂದರೆ ಮಗು ತನ್ನ ಕುಟುಂಬದ ಪರಿಸರದಲ್ಲಿ ಮಾತನಾಡುವ ಭಾಷೆ ಅಥವಾ ಸ್ಥಳೀಯ ಭಾಷೆಯಾಗಿರುತ್ತದೆ. ಒಬ್ಬ ವ್ಯಕ್ತಿಯು ಮಾತನಾಡಲು ಬಳಸುವ ಮೊದಲ ಭಾಷೆಯನ್ನು ಮಾತೃಭಾಷೆ ಎನ್ನಬಹುದಾಗಿದೆ. ಹುಟ್ಟಿನಿಂದ ಸಹಜವಾಗಿ ಬಂದ ಮತ್ತು ಬೆಳವಣಿಗೆಯ ಪ್ರಾರಂಭಿಕ ಹಂತದಲ್ಲಿ ಮಗು ಸಹಜವಾಗಿ ಅಷ್ಟೇ ಸರಳವಾಗಿ ಬಳಸಬಹುದಾದ ಭಾಷೆಯೇ ಮಾತೃಭಾಷೆ. ಅದು ಸಮುದಾಯದ ಭಾಷೆಯೂ ಹೌದು .
ಉದಾಹರಣೆಗೆ, ಮನೆಯಲ್ಲಿ ಮತ್ತು ತನ್ನ ತಕ್ಷಣದ ಪರಿಸರದಲ್ಲಿ ಕನ್ನಡ ಭಾಷೆಯನ್ನು ಮಾತನಾಡುವ ಮಗುವಿನ ತಂದೆ-ತಾಯಿ ಅಥವಾ ಪೋಷಕರು ಮಗುವಿನ ಮಾತೃಭಾಷೆಯನ್ನು ಗೌರವಿಸಿ ಎತ್ತಿಹಿಡಿಯಬೇಕಾಗುತ್ತದೆ. ಬದಲಿಗೆ, ಮಗುವಿನ ಮಾತೃಭಾಷೆಯಲ್ಲದ ಬೇರೊಂದು ಭಾಷೆಯನ್ನು (ಈಗಿನ ಸಂದರ್ಭದಲ್ಲಿ ‘ಇಂಗ್ಲಿಷ್’) ಮಾತೃಭಾಷೆಯೆಂದು ಹೇಳಿ ಆ ಭಾಷೆಯಲ್ಲಿ ಶಿಕ್ಷಣ ಕೊಡಿಸಲು ಮುಂದಾದರೆ, ಅದು ಆತ್ಮವಂಚನೆ ಮಾತ್ರವಲ್ಲದೆ ಮಗುವಿನ ಸಹಜ ಮಾನವ ಹಕ್ಕಿನ ಉಲ್ಲಂಘನೆಯೂ ಆಗುತ್ತದೆ. ಮಕ್ಕಳ ಹಕ್ಕುಗಳ ಈ ಸ್ಪಷ್ಟ ಉಲ್ಲಂಘನೆಯನ್ನು ನ್ಯಾಯಾಲಯ ‘ಪೋಷಕರ ಕಾನೂನು ಬದ್ಧ ಆಯ್ಕೆ’ ಎಂದು ಸಾರುವುದಾದರೆ ನ್ಯಾಯಾಲಯದ ಗ್ರಹಿಕೆ ಮತ್ತು ತಿಳಿವಳಿಕೆಯಲ್ಲಿ ಬಲವಾದ ದೋಷವಿದೆಯೆಂದು ತಿಳಿಯಬೇಕಾಗುತ್ತದೆ. ಭಾಷಾಮಾಧ್ಯಮದ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕಾಂಗ ನಿರ್ಧಿಷ್ಟ ಧೋರಣೆಗೆ ಮುಂದಾಗಿರುವುದು ಇದೇ ಮೊದಲಿನದಲ್ಲ. 1949ರಲ್ಲಿ ಪ್ರಾಂತೀಯ ಶಿಕ್ಷಣ ಸಚಿವರ ಸಮ್ಮೇಳನದಲ್ಲಿ ಈ ಕುರಿತಂತೆ ಚರ್ಚಿಸಿ ‘ಜೂನಿಯರ್ ಬೇಸಿಕ್ ಹಂತದಲ್ಲಿ ಶಿಕ್ಷಣ ಮಾಧ್ಯಮ ಮತ್ತು ಪರೀಕ್ಷೆಗಳು ಮಗುವಿನ ಮಾತೃಭಾಷೆಯಲ್ಲಿಯೇ ಇರಬೇಕು. ಮಕ್ಕಳ ಮಾತೃಭಾಷೆ ಪ್ರಾಂತೀಯ ಅಥವಾ ರಾಜ್ಯಭಾಷೆಗಿಂತ ಭಿನ್ನವಿದ್ದು ಇಡೀ ಶಾಲೆಯಲ್ಲಿ ನಲವತ್ತು ಮತ್ತು ಅದಕ್ಕಿಂತ ಹೆಚ್ಚು ಮಕ್ಕಳು ಅಥವಾ ಒಂದು ತರಗತಿಯಲ್ಲಿ 10ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಕನಿಷ್ಠ ಒಬ್ಬ ಶಿಕ್ಷಕರನ್ನು ನೇಮಿಸಿ ಆ ಮಕ್ಕಳ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಲು ಕ್ರಮ ವಹಿಸಬೇಕೆಂದು’ ತೀರ್ಮಾನಿಸಲಾಗಿತು ್ತ. ಈ ಸಮ್ಮೇಳನದ ಮುಂದುವರಿದ ಭಾಗವಾಗಿ ಸಂವಿಧಾನದ 7ನೇ ತಿದ್ದುಪಡಿ ಕಾಯಿದೆ ಅನ್ವಯ 1956ರಲ್ಲಿ ಸಂವಿಧಾನಕ್ಕೆ 350ನ್ನು ಸೇರಿಸಲಾಯಿತು. ಸಂವಿಧಾನದಲ್ಲಿ ಮಾತೃಭಾಷೆ ಎನ್ನುವ ಪದವನ್ನು ಹೊಂದಿರುವ ಒಂದೇ ಪರಿಚ್ಛೇದವೆಂದರೆ 350ಎ .
ಈ ಸಂದರ್ಭದಲ್ಲಿ ಭಾಷಾಮಾಧ್ಯಮಕ್ಕೆ ಸಂಬಂಧಿದಂತೆ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ವಸ್ತುನಿಷ್ಠವಾಗಿ ವಿಮರ್ಶಿಸುವುದು ಅತ್ಯಗತ್ಯವೆಂದು ಭಾವಿಸುತ್ತೇನೆ. ಕರ್ನಾಟಕದ ಭಾಷಾಮಾಧ್ಯಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂವಿಧಾನ ಪೀಠವು ತೀರ್ಪನ್ನು ನೀಡುವಾಗ ಪರಿಚ್ಛೇದ 350ಎ ಗೆ ಹೆಚ್ಚಿನ ಒತ್ತನ್ನು ನೀಡಿತಲ್ಲದೆ ಮಾತೃಭಾಷೆಯೆಂದರೆ ರಾಜ್ಯದಲ್ಲಿನ ಭಾಷಾ ಅಲ್ಪಸಂಖ್ಯಾತರ ಭಾಷೆ ಎಂದು ವ್ಯಾಖ್ಯಾನಿಸಿತು. ಮುಂದುವರಿದು, ಮಗುವಿನ ಮಾತೃಭಾಷೆ ಯಾವುದೆಂಬುದನ್ನು ಪಾಲಕರು ಅಥವಾ ಪೋಷಕರು ನಿರ್ಧರಿಸುತ್ತಾರೆ ಎಂದು ತೀರ್ಪು ನೀಡಿತು. ಇದೊಂದು ಅಪೂರ್ಣ ಮತ್ತು ಸಮಗ್ರ ದೃಷ್ಟಿಕೋನರಹಿತ ತೀರ್ಪು. ಮಾತೃಭಾಷೆಯೆಂದರೆ ರಾಜ್ಯದಲ್ಲಿನ ಭಾಷಾ ಅಲ್ಪಸಂಖ್ಯಾತರ ಭಾಷೆ ಎಂದು ವ್ಯಾಖ್ಯಾನಿಸುವ ಮೂಲಕ ಮಾತೃಭಾಷಾ ವಿಷಯದಲ್ಲಿ ನ್ಯಾಯಾಲಯ ಅತ್ಯಂತ ಸಂಕುಚಿತ ಮತ್ತು ವಿವೇಚನಾರಹಿತ ಚೌಕಟ್ಟಿಗೆ ತನ್ನನ್ನು ತಾನು ಮಿತಿಗೊಳಿಸಿಕೊಂಡಿದೆ.
ಸರ್ವೋಚ್ಛ ನ್ಯಾಯಾಲಯವು ಭಾಷಾ ಬಹುಸಂಖ್ಯಾತರನ್ನು ಗಣನೆಗೆ ತೆಗೆದುಕೊಳ್ಳದೆ ಏಕಪಕ್ಷೀಯ ತೀರ್ಪು ನೀಡಿದೆ. ಉದಾಹರಣೆಗೆ, ಕರ್ನಾಟಕ ರಾಜ್ಯದಲ್ಲಿ ಖಂಡಿತವಾಗಿ ಬಹುಸಂಖ್ಯಾತರ ಭಾಷೆ ಕನ್ನಡ ಮತ್ತು ಅದು ಬಹುಸಂಖ್ಯಾತ ಜನಸಂಖ್ಯೆಯ ಮಾತೃಭಾಷೆಯೂ ಹೌದು. ಮಾತೃಭಾಷೆಯ ಈ ದೃಷ್ಟಿಕೋನವನ್ನು ನ್ಯಾಯಾಲಯ ಪೂರ್ಣವಾಗಿ ಮರೆತಂತಿದೆ. ಉದಾಹರಣೆಗೆ, ಕನ್ನಡಿಗ ತಂದೆ-ತಾಯಿ ಜನ್ಮ ನೀಡಿದ ಮಗುವೊಂದು ಕರ್ನಾಕದಲ್ಲಿ ಬೆಳೆಯುತ್ತಿದ್ದರೆ ಆ ಮಗುವಿನ ಮಾತೃಭಾಷೆ/ಮೊದಲ ಭಾಷೆ ಸ್ವಾಭಾವಿಕವಾಗಿ ಕನ್ನಡವಾಗಿರುತ್ತದೆ. ಮಗು ದಿನನಿತ್ಯ ತನ್ನ ಮಾತೃಭಾಷೆಯಲ್ಲಿ ನಿರಾತಂಕವಾಗಿ ಮಾತನಾಡುವುದರ ಮೂಲಕ ನೆಮ್ಮದಿಯ ಬಾಲ್ಯವನ್ನು ಅನುಭವಿಸುತ್ತಾ ಸಾಮಾಜಿಕರಣಗೊಳ್ಳುತ್ತದೆ. ಮಗುವಿಗೆ ತನ್ನ ಶಿಕ್ಷಣ ಮಾಧ್ಯಮವನ್ನು ಆಯ್ಕೆಮಾಡಲು ಅವಕಾಶ ಕೊಟ್ಟರೆ, ನಿಸ್ಸಂದೇಹವಾಗಿ ಎಳ್ಳಷ್ಟೂ ಸಂಶಯವಿಲ್ಲದೆ ಕನ್ನಡವನ್ನು ತನ್ನ ಶಿಕ್ಷಣ ಮಾಧ್ಯಮವನ್ನಾಗಿ ಆಯ್ಕೆ ಮಾಡಿಕೊಳ್ಳುತ್ತದೆ. ಆದರೆ, ಈ ಕಟು ಸತ್ಯವನ್ನು ಮರೆಮಾಚಿ ಮಗುವಿನ ಹಿತಾಸಕ್ತಿಗೆ ಮಾರಕವಾದ ಮತ್ತು ಮಗುವಿನ ಮೂಲಭೂತ ಹಕ್ಕಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೂಲಕ ಮಗುವಿನ ಹಕ್ಕನ್ನು ಕಸಿದುಕೊಳ್ಳುವ ಮತ್ತು ಅದನ್ನು ಪಾಲಕರಿಗೆ ವರ್ಗಾಯಿಸುವ ಮಕ್ಕಳ ಹಕ್ಕು ವಿರೋಧಿ ತೀರ್ಪನ್ನು ಸರ್ವೋಚ್ಛ ನ್ಯಾಯಾಲಯ ನೀಡಿದೆ. ಮಗುವಿನ ಮಾತೃಭಾಷೆಯನ್ನು ಪಾಲಕರು ಅಥವಾ ಪೋಷಕರು ಆಯ್ಕೆ ಮಾಡುತ್ತಾರೆನ್ನುವ ನ್ಯಾಯಾಲಯ ವಯಸ್ಕರ ಮಾತೃಭಾಷೆಯನ್ನು ಯಾರು ನಿರ್ಧಾರ ಮಾಡಬೇಕೆಂಬುದರ ಬಗ್ಗೆ ಮೌನವಹಿಸಿದೆ. ಅಲ್ಲಿ ಪಾಲಕರಿಗೆ ವಿನಾಯಿತಿ ನೀಡಲಾಗಿದೆ. ಒಟ್ಟಾರೆ, ಸಂವಿಧಾನ ಪೀಠದ ಈ ತೀರ್ಪು ಅವೈಜ್ಞಾನಿಕವಾಗಿದ್ದು ಮಗುವಿನ ಮಾತೃಭಾಷೆ ಮತ್ತು ಕಲಿಕೆಗೆ ಸಂಬಂಧಿಸಿದ ಜಗತ್ತಿನ ಎಲ್ಲ ಸಂಶೋಧನೆಗಳ ಮೂಲ ಆಶಯ ಮತ್ತು ಸಂಶೋಧನಾತ್ಮಕವಾಗಿ ಕಂಡುಕೊಂಡಿರುವ ಎಲ್ಲ ಸತ್ಯಗಳನ್ನು ಬುಡಮೇಲು ಮಾಡಿದೆ. ಅಂತರಾಷ್ಟ್ರೀಯ ಭಾಷಾ ಹಕ್ಕುಗಳ ಘೋಷಣೆ ಮತ್ತು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಮೂಲ ತತ್ವವಾದ ‘ಮಗುವಿನ ಸರ್ವೋತ್ಕøಷ್ಟ ಹಿತಾಸಕ್ತಿ’ ತತ್ವಕ್ಕೆ ತಿಲಾಂಜಲಿ ನೀಡಿದೆ.
ನ್ಯಾಯಾಲಯದ ಈ ತೀರ್ಪನ್ನು ಇಂದಿನ ಭಾಷಾಮಾಧ್ಯಮದ ಬಿಕ್ಕಟಿನ ಪರಿಸ್ಥಿತಿಯಲ್ಲಿ ಅರ್ಥೈಸುವುದಾದರೆ, ಭಾಷಾಮಾಧ್ಯಮದ ಆಯ್ಕೆಯನ್ನು ಮಕ್ಕಳು ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ಗೌರವಿಸದೆ ಏಕಪಕ್ಷೀಯವಾಗಿ ತೀರ್ಮಾನಿಸುವ ಪಾಲಕರ ಮತ್ತು ಲಾಭವನ್ನೇ ಮೂಲ ಉದ್ದೇಶವನ್ನಾಗಿರಿಸಿಕೊಂಡಿರುವ ಖಾಸಗೀ ಸಂಸ್ಥೆಗಳ ವಿವೇಚನೆಗೆ ಬಿಟ್ಟರೆ ನಮ್ಮ ಭಾಷೆ, ಬದುಕು, ಸಂಸ್ಕøತಿ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ನಮ್ಮತನಕ್ಕೆ ಧಕ್ಕೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಜೊತೆಗೆ ಶಿಕ್ಷಣವು ಒಂದು ಮಾರಾಟದ ಸರಕಾಗುವುದರ ಮೂಲಕ ಶಿಕ್ಷಣದಲ್ಲಿನ ಅಸಮಾನತೆ ಮತ್ತು ಶ್ರೇಣಿಕೃತ ವ್ಯವಸ್ಥೆ ಮತ್ತಷ್ಟು ವಿಸ್ತøತಗೊಳ್ಳುವುದರಲ್ಲಿ ಎರಡು ಮಾತಿಲ್ಲ.
ಈ ಎಲ್ಲ ಗೊಂದಲಗಳ ನಡುವೆ ನಾವು ಶಿಕ್ಷಣದಲ್ಲಿ ಭಾಷಾಮಾಧ್ಯಮದ ಗೊಂದಲಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ. ಇಂದು ಶಿಕ್ಷಣದಲ್ಲಿ ಒಂದು ಭಾಷೆ ಅಥವಾ ದ್ವಿಭಾಷಾ ಸೂತ್ರ ಎನ್ನುವ ಬದಲು ಬಹುಭಾಷಾ ಸೂತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮಗು ತನ್ನ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವ ಹಕ್ಕನ್ನು ಎಲ್ಲರೂ ಎತ್ತಿ ಹಿಡಿಯಬೇಕಿದೆ. ನ್ಯಾಯಾಲಯದ ತೀರ್ಪಿನ ಪರಿಣಾಮವಾಗಿ, ಈ ಆಯ್ಕೆ ವೈಯುಕ್ತಿಕವಾದದ್ದೇ ಅಥವಾ ಸಾಮುದಾಯಿಕವಾದದ್ದೇ ಎಂಬ ಪ್ರಶ್ನೆ ಉದ್ಬವಿಸುತ್ತದೆ?
ಆದರೆ, ಈ ರೀತಿಯ ಆಯ್ಕೆಗಳು ಸಾಂಸ್ಥಿಕ ಮತ್ತು ನೀತಿ ನಿರೂಪಣೆಯ ಪ್ರಶ್ನೆಗಳಾಗಿದ್ದು ಸರ್ಕಾರ ಈ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ನೀತಿಯನ್ನು ರೂಪಿಸುವ ಹೊಣೆಗಾರಿಕೆ ಹೊರಬೇಕಾಗುತ್ತದೆ. ಭಾರತದಂತಹ ಭಾಷಾ ವೈವಿಧ್ಯ ದೇಶದಲ್ಲಿ ರಾಷ್ಟ್ರೀಯವಾಗಿ ಗುರುತಿಸಲ್ಪಟ್ಟಿರುವ ಎಲ್ಲ ಭಾಷೆಗಳನ್ನು ಶಿಕ್ಷಣದ ಭಾಷೆಗಳನ್ನಾಗಿ ಬೆಸೆಯುವ ಮೂಲಕ ರಾಷ್ಟ್ರೀಯ ಐಕ್ಯತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯ ಬೇಕಿದೆ.
ಈ ಸಂದರ್ಭದಲ್ಲಿ, ಭಾಷಾಮಾಧ್ಯಮ ಮತ್ತು ನೀತಿಗೆ ಸಂಬಂಧಿಸಿದಂತೆ ಇರುವ ಚೌಕಟ್ಟುಗಳನ್ನು ಒಮ್ಮೆ ಅವಲೋಕಿಸುವುದು ಸೂಕ್ತವೆನಿಸುತ್ತದೆ. ಭಾಷಾಮಾಧ್ಯಮ ಕಲಿಕೆಗೆ ಇರುವ ಕಾನೂನಿನ ಅವಕಾಶಗಳನ್ನು ವಿಮರ್ಶಿಸುವಾಗ, ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವಸಂಸ್ಥೆಯು ವಿಶೇಷ ಗಮನ ಹರಿಸಿ ಹೊರತಂದಿರುವ ಹಲವು ಮಾನವ ಹಕ್ಕುಗಳ ಘೋಷಣೆ/ಒಡಂಬಡಿಕೆ/ಒಪ್ಪಂದಗಳನ್ನು ನಾವೂ ಪರಿಶೀಲಿಸಬೇಕಾಗುತ್ತದೆ. ಅಂಥಹ ಘೋಷಣೆಗಳಲ್ಲಿ ಒಂದಾಗಿರುವ ವಿಶ್ವಸಂಸ್ಥೆಯ ಭಾಷಾಧ್ಯಯನ ಹಕ್ಕುಗಳ ಸಾರ್ವತ್ರಿಕ ಘೋಷಣೆ ( Universal Declaration on Linguistic Rights   )1996 ರ ಕೆಲವು ಪರಿಚ್ಛೇದಗಳನ್ನು ಈ ಸಂದರ್ಭದಲ್ಲಿ ಪರಿಶೀಲಿಸಬೇಕಾಗಿದೆ.
ಘೋಷಣೆಯ ಭಾಗ ಮೂರರಲ್ಲಿ ಪರಿಚ್ಛೇದ 23 ರಿಂದ 30 ರವರೆಗೆ ಶಿಕ್ಷಣದ ವಿವಿಧ ಹಂತದಲ್ಲಿ ಸಮುದಾಯ/ಮಾತೃಭಾಷೆಯನ್ನು ಅಳವಡಿಸಿಕೊಳ್ಳುವ ಬಗ್ಗೆ ವಿವರವಾಗಿ ತಿಳಿಸುತ್ತದೆ. ಘೋಷಣೆಯ ಪರಿಚ್ಛೇದ 24ರ ಅನ್ವಯ ‘ಪ್ರತಿಯೊಂದು ಭಾಷಾ ಸಮುದಾಯಕ್ಕೂ ತನ್ನ ಪ್ರಾಂತ್ಯ/ನಾಡಿನಲ್ಲಿ ಶಿಕ್ಷಣದ ವಿವಿಧ ಹಂತಗಳಲ್ಲಿ; ಪೂರ್ವ-ಪ್ರಾಥಮಿಕ, ಪ್ರಾಥಮಿಕ, ಪ್ರೌಢ, ತಾಂತ್ರಿಕ ಮತ್ತು ವೃತ್ತಿಶಿಕ್ಷಣ, ವಿಶ್ವವಿದ್ಯಾಲಯ ಮತ್ತು ವಯಸ್ಕರ ಶಿಕ್ಷಣ ಯಾವ ಭಾಷೆಯಲ್ಲಿ ಕಲಿಯಬೇಕೆಂದು ತೀರ್ಮಾನಿಸುವ ಹಕ್ಕಿರುತ್ತದೆ’.
ಇದು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಯೊಂದು ಸಮುದಾಯಕ್ಕು ಇರುವ ಹಕ್ಕು . ನಮ್ಮ ದೇಶದ ನ್ಯಾಯಾಲಯಗಳು ಮತ್ತು ಕಾನೂನು ಪರಿಣಿತರು ಸಮುದಾಯದ ಭಾಷಾ ವಿಷಯಗಳ ಬಗ್ಗೆ ಚರ್ಚಿಸುವಾಗ ಹಾಗೂ ತೀರ್ಮಾನಿಸುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪಾಲಿಸಬೇಕಾಗುತ್ತದೆ.
ಇನ್ನು ನಮ್ಮ ದೇಶದ ಮಟ್ಟಿಗೆ ಯೋಚಿಸುವಾಗ ನಮ್ಮೆಲ್ಲರಿಗೂ ತಿಳಿದಿರುವಂತೆ ಒಂದು ಆರೋಗ್ಯಕರ ಅಭಿವೃದ್ಧಿ ಸಮಾಜವನ್ನು ಕಟ್ಟಿಕೊಳ್ಳುವ ವಿಷಯದಲ್ಲಿ ಶಿಕ್ಷಣದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಅನಿವಾರ್ಯ ಮತ್ತು ಅವಶ್ಯಕ ಎಂಬುದು ಸಾರ್ವತ್ರಿಕ ಸತ್ಯ. ಶಿಕ್ಷಣ ಮತ್ತು ಸಂವಿಧಾನದ ಆಶಯಗಳಾದ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಇವುಗಳಿಗೆ ಅನಿರ್ಬಂಧ ಸಂಬಂಧವಿದೆ. ಈ ವಿಷಯಗಳನ್ನು ಬೇರ್ಪಡಿಸಿ ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಇನ್ನು ಮೂಲ ಶಿಕ್ಷಣದ ವಿಷಯ ಬಂದಾಗ ಭಾಷೆ ಮತ್ತು ಶಿಕ್ಷಣದ ಮಾಧ್ಯಮ ಒಂದು ಬಲಿಷ್ಠ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸಿಸುತ್ತದೆಯೆಂಬುದರಲ್ಲಿ ಎರಡು ಮಾತಿಲ್ಲ.
ನ್ಯಾಯಾಲಯ ಮತ್ತು ಕೆಲವು ಕಾನೂನು ತಜ್ಞರು ವ್ಯಾಖ್ಯಾನಿಸುವಂತೆ ಮಕ್ಕಳ ಶಿಕ್ಷಣ ಮಾಧ್ಯಮ ಯಾವುದಾಗಿರಬೇಕೆಂದು ಆಯ್ಕೆ ಮಾಡುವ ಸ್ವಾತಂತ್ರ್ಯ ಮಕ್ಕಳ ಪಾಲಕರಿಗೆ ಮತ್ತು ಪೋಷಕರಿಗಿದೆಯೆಂದು ನಿಖರವಾಗಿ ಸಂವಿಧಾನ ಎಲ್ಲಿಯೂ ಹೇಳಿಲ್ಲ. ಬದಲಿಗೆ, ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿಯುವ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯು ಪರಿಚ್ಛೇದ 12 ರಲ್ಲಿ ತಮಗೆ ಸಂಬಂಧಿಸಿದ ವಿಷಯಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಳ್ಳಲು ಸಮರ್ಥರಾದ ಮಕ್ಕಳಿಗೆ ಅವರ ವಯಸ್ಸು ಮತ್ತು ಪ್ರಬುದ್ಧತೆಯನ್ನು ಗಮನಿಸಿ ಮುಕ್ತ ಅವಕಾಶ ಕಲ್ಪಿಸಿಕೊಡಬೇಕೆಂದು ತಿಳಿಸುತ್ತದೆ .
ಇನ್ನು ಶಾಲಾ ಶಿಕ್ಷಣದಲ್ಲಿ ಶೈಕ್ಷಣಿಕ ಪ್ರಾಧಿಕಾರ ಎಂದು ಗುರುತಿಸಲ್ಪಟ್ಟಿರುವ ರಾಷ್ಟ್ರೀಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಸಂಸ್ಥೆಯು ಭಾಷಾಮಾಧ್ಯಮ ಮತ್ತು ಭಾಷಾ ಕಲಿಕೆಯ ಬಗ್ಗೆ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ ವಿಷದವಾಗಿ ಚರ್ಚಿಸಲಾಗಿದೆ. ಇದು ನಮ್ಮ ರಾಷ್ಟ್ರೀಯ ನೀತಿ ನಿರೂಪಣಾ ಚೌಕಟ್ಟು. ಈ ನೀತಿ ನಿರೂಪಣಾ ಚೌಕಟ್ಟಿನ ಪ್ಯಾರಾ 3.1.2 ರಲ್ಲಿ ಹೇಳಿರುವಂತೆ “ಮಕ್ಕಳು ಹುಟ್ಟಿನಿಂದ ಸಹಜವಾಗಿ ಬಂದ ಅದ್ಭುತ ಭಾಷಾ ಸಾಮಥ್ರ್ಯವನ್ನು ಮತ್ತು ತನ್ನ ಕುಟುಂಬ ಮತ್ತು ತನ್ನ ಸುತ್ತ-ಮುತ್ತಲಿನ ಜನಸಮುದಾಯದೊಂದಿಗೆ ಸಂಭಾಷಿಸುವ ಕೌಶಲದೊಂದಿಗೆ ಪೂರ್ಣವಾಗಿ ಅರಳಿದ ಭಾಷಾ ಸಂವಹನ ಸಾಮಥ್ರ್ಯದೊಂದಿಗೆ ಶಾಲೆಗೆ ಬಂದಿರುತ್ತಾರೆ. ಅವರು ಸಾವಿರಾರು ಪದಗಳ ಸಾಮಥ್ರ್ಯ ಮಾತ್ರವಲ್ಲದೆ, ಭಾಷಾ ವಿಷಯಕ್ಕೆ ಸಂಬಂಧಿಸಿದ ಸಂಕೀರ್ಣವಾದ ಪದ, ಶಬ್ದ ಮತ್ತು ವಾಕ್ಯಗಳ ರಚನೆಯ ನಿಯಮ, ಸಂರಚನೆ ಮತ್ತು ಬಳಕೆಯ ಮೇಲೆ ಪೂರ್ಣ ಪ್ರಭುತ್ವತೆ ಪಡೆದೆ ಶಾಲೆಗೆ ಬರುತ್ತಾರೆ. ಮಗುವಿಗೆ ತನ್ನ ಭಾಷೆಯಲ್ಲಿ ಹೇಗೆ ಸರಿಯಾಗಿ ತಿಳಿಯಬೇಕು ಮತ್ತು ಮಾತನಾಡಬೇಕು ಎಂಬುದು ಮಾತ್ರವಲ್ಲದೆ ಎಲ್ಲಿ? ಹೇಗೆ? ಸೂಕ್ತವಾಗಿ ಬಳಸಬೇಕೆಂಬುದರ ಬಗ್ಗೆಯೂ ಅರಿವಿರುತ್ತದೆ. ………….. ಹೀಗಾಗಿ, ಅತ್ಯಗತ್ಯವಾಗಿ ನಾವು ಮಾಡಬೇಕಾದ ಕೆಲಸವೆಂದರೆ ಶಾಲೆಗಳಲ್ಲಿ ಭಾರತೀಯ ಭಾಷೆಗಳಲ್ಲಿ ಸುಸ್ಥಿರವಾಗಿ ಕಲಿಸಲು ಅಗತ್ಯವಾದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡು ಅದನ್ನು ಬಲಪಡಿಸಬೇಕಿದೆ”
ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಾತೃಭಾಷಾ ಮಾಧ್ಯಮವನ್ನು ಶಿಕ್ಷಣದಲ್ಲಿ ಕಡ್ಡಾಯಗೊಳಿಸಲು ಹೊರಟಿರುವುದು ಎಲ್ಲಾ ರೀತಿಯಲ್ಲು ಸಮಂಜಸವಾಗಿದೆ. ಮೇಲಿನ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನೀತಿ ನಿರೂಪಣಾ ಚೌಕಟ್ಟುಗಳು ಅದಕ್ಕೆ ಪೂರಕವಾಗಿವೆ. ಈ ನಿಟ್ಟಿನಲ್ಲಿ ಸರ್ಕಾರದ ಮುಂದೆ ಎರಡು ನಿರ್ಧಿಷ್ಟ ಅವಕಾಶಗಳಿವೆ. ಮೊದಲನೆಯದಾಗಿ, ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿರುವುದರಿಂದ ರಾಜ್ಯ ಮತ್ತು ಕೇಂದ್ರ ಆ ವಿಷಯಗಳಲ್ಲಿ ನೀತಿ ಮತ್ತು ಕಾನೂನು ರೂಪಿಸುವ ಸಮಾನ ಹಕ್ಕನ್ನು ಹೊಂದಿರುತ್ತವೆ. ಈ ಅವಕಾಶವನ್ನು ಬಳಸಿ, ರಾಜ್ಯ ಸರ್ಕಾರವು ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009 ಪ್ರಕರಣ 29(2) ರಲ್ಲಿ ಗೊತ್ತುಪಡಿಸಿರುವ ಮೌಲ್ಯಗಳಿಗನುಗುಣವಾಗಿ ಭಾಷಾ ನೀತಿಯನ್ನು ರೂಪಿಸಿ ಜಾರಿಗೊಳಿಸುವ ಕ್ರಮಕ್ಕೆ ಮುಂದಾಗಬೇಕಿದೆ. ಪ್ರಕರಣ 29(2)ರ ಅನ್ವಯ ಅಂಥಹ ನೀತಿಯು ಸಂವಿಧಾನದಲ್ಲಿನ ಮೌಲ್ಯಗಳು; ಮಕ್ಕಳ ಸರ್ವಾಂಗೀಣ ಅಭಿವೃದ್ಧಿ; ಮಕ್ಕಳ ಜ್ಞಾನ, ಸಾಮಥ್ರ್ಯ ಮತ್ತು ಪ್ರತಿಭೆಯ ವರ್ಧನೆ; ಪೂರ್ಣ ಪ್ರಮಾಣದಲ್ಲಿ ದೈಹಿಕ ಮತ್ತು ಮಾನಸಿಕ ಸಾಮಥ್ರ್ಯಗಳ ವಿಕಸನ; ಶಿಶು ಸ್ನೇಹಿ ಮತ್ತು ಶಿಶು ಕೇಂದ್ರೀಕೃತ ವಾತಾವರಣದಲ್ಲಿ ಚಟುವಟಿಕೆಗಳು, ಅನ್ವೇಷಣೆ ಮತ್ತು ಸಾಹಸ ಶೋಧನೆ ಮೂಲಕ ಮಕ್ಕಳು ಕಲಿಯುವುದು ಮತ್ತು ಮಗುವಿನ ಭಯ, ಆಘಾತ ಹಾಗೂ ಆತಂಕ ಹೋಗಲಾಡಿಸುವುದು ಮತ್ತು ಮಗು ಮುಕ್ತವಾಗಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವುದಕ್ಕೆ ನೆರವಾಗುವುದು.
ಇದೆಲ್ಲವೂ ಸಾಧ್ಯವಾಗಬೇಕಾದರೆ ಕಾನೂನಿನಲ್ಲಿ ಹೇಳಿರುವಂತೆ ಶಿಕ್ಷಣ ಮಾಧ್ಯಮವು ಸಾಧ್ಯವಾಗಬಹುದಾದಷ್ಟು ಮಟ್ಟಿಗೆ ಮಕ್ಕಳ ಮಾತೃಭಾಷೆಯಲ್ಲಿಬೇಕು. ಇಲ್ಲಿ ‘ಸಾಧ್ಯವಾಗಬಹುದಾದಷ್ಟು ಮಟ್ಟಿಗೆ’ ಎಂಬ ವಾಕ್ಯವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಒಂದು ರಾಜ್ಯದಲ್ಲಿ ಒಂದಕ್ಕಿಂತ ಹೆಚ್ಚು ಮಾತೃಭಾಷೆಗಳಿರುವ ಸಾಧ್ಯತೆಯಿರುತ್ತದೆ. ಅಂಥಹ ಸಂದರ್ಭಗಳಲ್ಲಿ, ಮಾತೃಭಾಷೆಯಲ್ಲಿ ಶಿಕ್ಷಣ ಒದಗಿಸುವ ಹೊಣೆ ಹೊತ್ತಿರುವ ರಾಜ್ಯ ಸರ್ಕಾರವು ಸಾಧ್ಯವಾದಷ್ಟು ಮಟ್ಟಿಗೆ ಆ ಮಕ್ಕಳ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಬೇಕಾಗುತ್ತದೆ. ಅಂಥಹ ಸಂದರ್ಭದಲ್ಲಿ ಆ ಭಾಷೆಗೆ ಸೇರಿದ ಜನಸಂಖ್ಯೆ ಮತ್ತು ಮಕ್ಕಳ ಸಂಖ್ಯೆಯನ್ನು ಗಮನಿಸಿ ಸರ್ಕಾರ ತೀರ್ಮಾನಿಸಬೇಕಾಗುತ್ತದೆ. ಸರ್ಕಾರದ ಅಂಥಹ ತೀರ್ಮಾನಗಳಿಗೆ ಸಹಾಯಕವಾಗುವ ರೀತಿಯಲ್ಲಿ ಶಿಕ್ಷಣ ಹಕ್ಕು ಕಾಯಿದೆಯಲ್ಲಿ 29(2) (ಎಫ್)ನ್ನು ಸೇರಿಸಲಾಗಿದೆಯೇ ಹೊರತು ಬಹುಸಂಖ್ಯಾತರ ಮಾತೃಭಾಷೆಯನ್ನು ಕಡೆಗಣಿಸುವ ದೃಷ್ಟಿಯಿಂದಲ್ಲ. ಕಾಯ್ದೆಯ ಈ ಅವಕಾಶವನ್ನು ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
ಎರಡನೆಯದಾಗಿ, ಸರ್ಕಾರವು ಇತರೆ ರಾಜ್ಯಗಳ ಬೆಂಬಲದೊಂದಿಗೆ ಸಂವಿಧಾನದ ಪರಿಚ್ಛೇಧ 21ಎ ಗೆ ಅಗತ್ಯ ತಿದ್ದುಪಡಿ ತರುವ ಮೂಲಕ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಎಲೆಮೆಂಟರಿ ಶಿಕ್ಷಣದವರೆಗೆ ಕಡ್ಡಾಯವಾಗಿ ಮಗುವಿನ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಲು ರಾಜ್ಯ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ. ಈ ವಿಷಯದಲ್ಲಿ, ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಸಕ್ರಿಯ ಪಾತ್ರವಹಿಸಬೇಕಿದೆ.
ಕೊನೆಯದಾಗಿ, ಭಾಷಾಮಾಧ್ಯಮ ಕೇವಲ ಶಿಕ್ಷಣದ ವಿಷಯ ಮಾತ್ರವಾಗದೆ ಎಲ್ಲ ಹಂತಗಳಲ್ಲಿ ಜಾರಿಗೊಳ್ಳಬೇಕಿದೆ. ನಾಡಿನ ಜನಮನದ ಭಾಷೆಯಾಗಿರುವ ಕನ್ನಡ ಭಾಷೆ ಆಡಳಿತದ ಎಲ್ಲಾ ಹಂತದಲ್ಲಿ ಪ್ರಾಮಾಣಿಕವಾಗಿ ಜಾರಿಯಾಗಬೇಕಾಗಿದೆ. ಮುಂದುವರಿದು, ಭಾಷೆ ಮತ್ತು ನಾಡಿನ ಹಿತದೃಷ್ಟಿಯಿಂದ ಕನ್ನಡವನ್ನು ಉಳಿಸಿ ಬೆಳೆಸಲು ಸರ್ಕಾರಕ್ಕಿರುವ ಒಂದೇ ಒಂದು ದಾರಿಯೆಂದರೆ ಶಿಕ್ಷಣವನ್ನು ರಾಜ್ಯದ ಸಮಗ್ರ ಅಭಿವೃದ್ಧಿಗೆ ಏಕೈಕ ಭದ್ರ ಬುನಾದಿಯೆಂದು ಪರಿಗಣಿಸಿ ಕೂಡಲೇ ರಾಜ್ಯದ ಎಲ್ಲಾ ಮಕ್ಕಳಿಗೆ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯ ಆಧಾರದ ಮೇಲೆ ಒಂದೇ ಗುಣಮಟ್ಟದ ಶಿಕ್ಷಣ ಒದಗಿಸಬಲ್ಲ ಸಮಗ್ರ ಶಿಕ್ಷಣ ನೀತಿ ಹಾಗೂ ಭಾಷಾ ನೀತಿಯನ್ನು ರೂಪಿಸಿ ಅನುಷ್ಠಾನಗೊಳಿಸಬೇಕಾಗಿದೆ. ತಾರತಮ್ಯಗಳನ್ನು ಹುಟ್ಟುಹಾಕುತ್ತಿರುವ ಇಂದಿನ ಶೈಕ್ಷಣಿಕ ವ್ಯವಸ್ಥೆಗೆ ಅಂತ್ಯವಾಡುವುದರ ಮೂಲಕ ಸಮಸ್ಯೆಯ ಮೂಲವನ್ನು ಅರಿತು ದೀರ್ಘಕಾಲಿಕ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಮಾತೃಭಾಷಾ ಮಾಧ್ಯಮದಲ್ಲಿ ಸಮಾನ ಶಾಲಾ ಶಿಕ್ಷಣವನ್ನು ನೀಡಲು ಸಾಧ್ಯವಾಗಬಹುದಾದ ಸಮಗ್ರ ಶಿಕ್ಷಣ ನೀತಿಯೊಂದು ಮಾತ್ರ ಇಂತಹ ಸಂಕೀರ್ಣ ಮತ್ತು ಸೂಕ್ಷ್ಮತೆಯಿಂದ ಕೂಡಿದ ವಿಚಾರಗಳಿಗೆ ಪರಿಹಾರವನ್ನು ಒದಗಿಸಬಲ್ಲದು.

1.ವಿಜಯ ಕರ್ನಾಟಕ ಮಾರ್ಚ್ 8,2015 (ಬೆಂಗಳೂರು ಆವೃತ್ತಿ)
2 http:/www.unesco.org/education.uie/pdf/  ದಿನಾಂಕ 9.3.2015 ರಂದು ಅವಲೋಕಿಸಲಾಗಿದೆ
http://www.teindia.nic.in/mhrd/50yrsedu/u/47/3X/473X0H01.htm.
4ಪರಿಚ್ಛೇಧ 350ಎ ಅನ್ವಯ ‘ ಪ್ರತಿಯೊಂದು ರಾಜ್ಯ ಮತ್ತು ರಾಜ್ಯದೊಳಗಿನ ಪ್ರತಿಯೊಂದು ಸ್ಥಳೀಯ ಪ್ರಾಧಿಕಾರವು ಭಾಷಾ ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಅವರ ಮಾತೃ ಭಾಷೆಯಲ್ಲಿ ಶಿಕ್ಷಣ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು;ಯಾವುದೇ ರಾಜ್ಯದಲ್ಲಿ ಅಗತ್ಯವೆನಿಸಿದಲ್ಲಿ ಅಂಥಹ ಸೌಲಭ್ಯದ ಅವಕಾಶ ಕಲ್ಪಿಸಲು ರಾಷ್ಟ್ರಪತಿಯವರು ಅಗತ್ಯ ನಿರ್ದೇಶನ ನೀಡಬಹುದು’

5.State of Karnataka &Anr  v. Associated Management of(Government Recognised –Unaided –English Medium)Primary &Secondary Schools &Ors (Civil Appeals Nos.5166-5190 of 2013)
6ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಚೇಧ 3ನ್ನು ನೋಡಿ
7ಭಾರತ ಸಂವಿಧಾನದ ಪ್ರಸ್ತಾವನೆಯನ್ನು ನೋಡಿ

8 www.unesco.org/cpp/uk/declarations/linguistic.pdf
9 ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯು ಪರಿಚ್ಛೇದ 12ನ್ನು ನೋಡಿ
10ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ,2005