ಮಾತೃಭಾಷೆಯಲ್ಲಿ ಶಿಕ್ಷಣ- ಹೆಚ್.ಎನ್.ನಾಗಮೋಹನದಾಸ್, ನಿವೃತ್ತ ನ್ಯಾಯಮೂರ್ತಿಗಳು

kannada

ಮಾನವ ಇತಿಹಾಸದ ಬೆಳವಣಿಗೆಯ ಒಂದು ಹಂತದಲ್ಲಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು. ಜಗತ್ತಿನ ವಿವಿಧೆಡೆ ನಾಗರಿಕತೆಗಳು ಸ್ಥಳೀಯ ಸ್ಥಿತಿ-ಗತಿಗೆ ಅನುಗುಣವಾಗಿ ರೂಪುಗೊಂಡಂತೆ ವಿವಿಧ ಭಾಷೆಗಳೂ ವಿಕಸನಗೊಂಡವು. ವಿಶ್ವಸಂಸ್ಥೆಯ ಒಂದು ಅಧ್ಯಯನದ ಪ್ರಕಾರ 1900 ರಲ್ಲಿ 10,000 ಭಾಷೆಗಳು ಬಳಕೆಯಲ್ಲಿದ್ದವಂತೆ. ಆದರೆ ಇಂದು 6700 ಭಾಷೆಗಳು ಮಾತ್ರ ಉಳಿದಿವೆ. ಉಳಿದಿರುವ ಭಾಷೆಗಳ ಪೈಕಿ ಶೇಕಡ. 50 ರಷ್ಟು ಭಾಷೆಗಳನ್ನು ಮಾತ್ರ ಮಕ್ಕಳಿಗೆ ಕಲಿಸಲಾಗುತ್ತಿದೆ. ಮಿಕ್ಕ ಭಾಷೆಗಳು ನಶಿಸಿ ಹೊಗುವ ಅಂಚಿನಲ್ಲಿವೆ. 2001 ರ ಜನಗಣತಿಯ ಪ್ರಕಾರ ಭಾರತ ದೇಶದಲ್ಲಿ 122 ಪ್ರಮುಖ ಭಾಷೆಗಳು ಮತ್ತು 1599 ಇತರೆ ಭಾಷೆಗಳು ಇವೆಯೆಂದು ಹೇಳಿದೆ. ಜಾಗತೀಕರಣದ ಪ್ರಭಾವಕ್ಕೆ ಕನ್ನಡವೂ ಸೇರಿದಂತೆ ಅನೇಕ ಭಾಷೆಗಳು ಬಲಿಯಾಗಿ ಸಂಕಷ್ಟದಲ್ಲಿವೆ. ಭಾಷೆ ಸತ್ತರೆ ಸಮಾಜದಲ್ಲಿ ಅಲ್ಲೊಲ ಕಲ್ಲೋಲ ಉಂಟಾಗುತ್ತದೆ. ಒಂದು ಭಾಷೆಯನ್ನು ನಾವು ಕಳೆದುಕೊಂಡರೆ ಒಂದು ಜ್ಞಾನವನ್ನು, ಅನುಭವವನ್ನು, ಮೌಲ್ಯಗಳನ್ನು, ಔಷಧಿಗಳನ್ನು, ಅಡುಗೆಗಳನ್ನು, ಅನೇಕ ವಿಷಯಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ನಾವು ಕಳೆದುಕೊಂಡಂತೆ. ಹಾಗಾಗಿ ಜಗತ್ತಿನ ಎಲ್ಲಾ ಭಾಷೆಗಳನ್ನು ಉಳಿಸಿ ಬೆಳೆಸುವ ಕಾರ್ಯ ತುರ್ತಾಗಿ ನಡೆಯಬೇಕಾಗಿದೆ.
ಜಗತ್ತಿನ ಭಾಷಾ ತಜ್ಞರು, ಮಾನವಶಾಸ್ತ್ರಜ್ಞರು ಹಾಗೂ ಸಾಮಾಜಿಕ ಚಿಂತಕರು ಮಗುವಿನ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣವನ್ನು ನೀಡಬೇಕೆಂದು ಪ್ರತಿಪಾದಿಸಿದ್ದಾರೆ. ಮಾತೃಭಾಷೆಯಲ್ಲಿ ಶಿಕ್ಷಣವನ್ನು ನೀಡಿದಾಗ ಮಗು ಬಹುಬೇಗ ವಿಷಯವನ್ನು ಗ್ರಹಿಸುವುದಲ್ಲದೆ ಕಲಿಕೆಯಲ್ಲಿ ಮುಂದಿರುತ್ತದೆ. ಮಗುವಿನ ಚಿಂತನಾ ಕ್ರಮ, ಕ್ರಿಯಾಶೀಲತೆ, ವಾಕ್‍ಚಾತುರ್ಯ, ಅರಿವು ಉತ್ತಮಗೊಳ್ಳುತ್ತದೆ. ಭಾವನಾತ್ಮಕ ಗುಣಗಳು ಹಾಗೂ ವ್ಯಕ್ತಿತ್ವದ ವಿಕಸನಕ್ಕೆ ಸಹಾಯವಾಗುತ್ತದೆ. ತಂದೆ ತಾಯಿಗಳು ತಮ್ಮ ಮಗುವಿನ ಶಿಕ್ಷಣಾ ಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ. ಮಾತೃಭಾಷೆಯ ಮಹತ್ವವನ್ನು ಅರಿತು 2000 ರಲ್ಲಿ ವಿಶ್ವಸಂಸ್ಥೆ ಪ್ರತಿವರ್ಷ ಫೆಬ್ರವರಿ ತಿಂಗಳು 21 ರಂದು ಅಂತರಾಷ್ಟ್ರೀಯ ಮಾತೃಭಾಷ ದಿನವನ್ನಾಗಿ ಆಚರಿಸಲು ಸದಸ್ಯ ರಾಷ್ಟ್ರಗಳಿಗೆ ಕರೆಯನ್ನು ನೀಡಿದೆ.
ಕರ್ನಾಟಕದಲ್ಲಿ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಕುರಿತು ಚರ್ಚೆಯು ಸುಮಾರು ಮೂರು ದಶಕಗಳಿಂದ ನಡೆಯುತ್ತಿದೆ. ಸರ್ಕಾರವು ಮಾತೃಭಾಷಾ ಶಿಕ್ಷಣದ ಪರವಾಗಿ ವಾದ ಮಂಡಿಸಿದರೆ, ಖಾಸಗಿ ಶಿಕ್ಷಣ ಸಂಸ್ಥೆಗಳು ಇಂಗ್ಲಿಷ್ ಮಾಧ್ಯಮದ ಪರವಾಗಿ ವಾದ ಮಂಡಿಸುತ್ತಾ ಇದ್ದಾರೆ. 1989 ರಲ್ಲಿ ಕರ್ನಾಟಕ ಸರ್ಕಾರ ಒಂದು ಆದೇಶವನ್ನು ಹೊರಡಿಸಿ ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಮಾತೃಭಾಷೆ ಮಾಧ್ಯಮದಲ್ಲಿ ಶಿಕ್ಷಣ ಇರಬೇಕೆಂದು ಹೇಳಿತು. ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳ ಪೋಷಕರ ಸಂಘ ಸರ್ಕಾರದ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿತು. 1993 ರಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯ ಸರ್ಕಾರದ ಆದೇಶವನ್ನು ಎತ್ತಿ ಹಿಡಿಯಿತು (1994 (1) SCC 550).
1998 ರಲ್ಲಿ ಕರ್ನಾಟಕ ಸರ್ಕಾರ 1989 ರ ಆದೇಶವನ್ನು ರದ್ದುಪಡಿಸಿ ಹೊಸ ಆದೇಶವನ್ನು ಹೊರಡಿಸಿತು. ಈ ಹೊಸ ಆದೇಶದ ಪ್ರಕಾರ ಕರ್ನಾಟಕದ ಎಲ್ಲಾ ಶಾಲೆಗಳಲ್ಲಿ ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಶಿಕ್ಷಣವನ್ನು ಮಾತೃಭಾಷೆ ಅಥವಾ ಕನ್ನಡದ ಮಾಧ್ಯಮದಲ್ಲಿ ನೀಡಬೇಕೆಂದು ಹೇಳಿತು. ಇಂಗ್ಲಿಷ್ ಮಾತೃಭಾಷೆ ವಿದ್ಯಾರ್ಥಿಗಳನ್ನು ಮಾತ್ರ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸಿಕೊಳ್ಳಬಹುದು. ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಇತರೆ ಎಲ್ಲಾ ಶಾಲೆಗಳು ಸರ್ಕಾರದ ಆದೇಶವನ್ನು ಪಾಲಿಸಬೇಕು ತಪ್ಪಿದಲ್ಲಿ ಅಂತಹ ಶಾಲೆಗಳನ್ನು ಮುಚ್ಚಿಸಲಾಗುತ್ತೆ ಎಂದು ಹೇಳಿತು. ಇಂಗ್ಲಿಷ್ ಮಾಧ್ಯಮದ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ 1999 ರಲ್ಲಿ ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿ ಸರ್ಕಾರದ ಆದೇಶವನ್ನು ಪ್ರಶ್ನಿಸಿತು. 14 ವರ್ಷಗಳ ನಂತರ ಕರ್ನಾಟಕದ ಉಚ್ಚನ್ಯಾಯಾಲಯದ ಮೂರು ನ್ಯಾಯಾಮೂರ್ತಿಗಳ ಪೂರ್ಣ ಪೀಠ 2008 ರಲ್ಲಿ ತೀರ್ಪನ್ನು ನೀಡಿ ಸರ್ಕಾರದ ಆದೇಶ ಸಂವಿಧಾನದ ಬಾಹರಿಯಂದು ರದ್ದುಗೊಳಿಸಿತು (ILR 2008 Kar 2895). ಈ ತೀರ್ಪಿನ ವಿರುದ್ಧ ಕರ್ನಾಟಕ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತು. 2014 ರಲ್ಲಿ ಸವೋಚ್ಚ ನ್ಯಾಯಾಲಯ ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿ ಉಚ್ಚನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಿತು (2014 (9) SCC 485). ನಂತರ ನ್ಯಾಯಾಲಯವು ತನ್ನ ತೀರ್ಪನ್ನು ಪುನರ್‍ಪರಿಶೀಲಿಸಬೇಕೆಂದು ಸಲ್ಲಿಸಿದ ರಿವ್ಯೂ ಅರ್ಜಿ ಮತ್ತು ಕೊರಿಟೈವ್ ಅರ್ಜಿಯು ಸಹ ವಜಾಗೊಂಡಿದೆ. ಸರ್ವೋಚ್ಚನ್ಯಾಯಾಲಯದ ತೀರ್ಪು ಅಂತಿಮ ಮತ್ತು ನಾವೆಲ್ಲರು ಅದಕ್ಕೆ ಬದ್ಧರಾಗಿರಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ.
ಆದರೆ ದೇಶದ ಸಾರ್ವಜನಿಕರು ನ್ಯಾಯಾಂಗದ ತೀರ್ಪುಗಳನ್ನು ವಿಮರ್ಶಿಸುವ ಸ್ವಾತಂತ್ರ್ಯವಿದೆ. ವಿಮರ್ಶೆ ಅನಾರೋಗ್ಯಕರ ಮತ್ತು ವಿನಾಶಕಾರಿಯಾಗಿರಬಾರದು. ವೈಯಕ್ತಿಕವಾಗಿ ಒಬ್ಬ ನ್ಯಾಯಾಧೀಶನನ್ನು ಅವಮಾನಪಡಿಸುವ ಉದ್ದೇಶ ಹೊಂದಿರಬಾರದು. ನ್ಯಾಯಾಂಗದ ವ್ಯವಸ್ಥೆಯ ಮೇಲೆ ಜನತೆ ಇಟ್ಟಿರುವ ನಂಬಿಕೆಯನ್ನು ಬುಡಮೇಲು ಮಾಡುವಂತಿರಬಾರದು. ನ್ಯಾಯಾಂಗದ ತಪ್ಪುಗಳನ್ನು ಸರಿಪಡಿಸಿ ಉತ್ತಮ ಸ್ಥಿತಿಗೆ ಕೊಂಡೊಯ್ಯುವಂತೆ ವಿಮರ್ಶೆ ಇರಬೇಕು.
ಈ ಚೌಕಟ್ಟಿನ ಒಳಗೆ 2008 ರಲ್ಲಿ ಕರ್ನಾಟಕ ಉಚ್ಚನ್ಯಾಯಾಲಯ ನೀಡಿದ ತೀರ್ಪನ್ನು ಮತ್ತು 2014 ರಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ವಿಮರ್ಶಿಗೆ ಒಳಪಡಿಸಿ ನೋಡಬೇಕಾಗಿದೆ.
1) ಭಾರತದ ಗಣರಾಜ್ಯದಲ್ಲಿ ಭಾಷಾವಾರು ರಾಜ್ಯಗಳನ್ನು ವಿಂಗಡಿಸಲಾಗಿದೆ. ಒಂದೊಂದು ರಾಜ್ಯದಲ್ಲಿ ತನ್ನದೆ ಪ್ರಾದೇಶಿಕ ಭಾಷೆ ಇದೆ. ರಾಜ್ಯಗಳಲ್ಲಿ ಶಾಲಾ ಶಿಕ್ಷಣದ ಮಾಧ್ಯಮ ಯಾವ ಭಾಷೆಯಲ್ಲಿ ಇರಬೇಕು ಎನ್ನುವ ಪ್ರಶ್ನೆ ಬಂದಾಗ ದೇಶದ ಎಲ್ಲಾ ರಾಜ್ಯಗಳ ಅಭಿಪ್ರಾಯವನ್ನು ಪಡೆಯುವ ಅಗತ್ಯತೆ ಇದೆ. ಆದರೆ ಸರ್ವೋಚ್ಚ ನ್ಯಾಯಾಲಯ ಕರ್ನಾಟಕ ರಾಜ್ಯವನ್ನು ಹೊರತುಪಡಿಸಿ ಬೇರೆ ರಾಜ್ಯಗಳ ಅಭಿಪ್ರಾಯವನ್ನು ಪಡೆಯದೆ ಎಲ್ಲಾ ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾದ ಭಾಷಾ ಮಾಧ್ಯಮದ ಬಗ್ಗೆ ತೀರ್ಪು ನೀಡಿರುವುದು ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾದದ್ದು.

2) ನಮ್ಮ ಸಂವಿಧಾನದಲ್ಲಿ ನಮಗೆ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಅನುಚ್ಛೇದ 19(1)(a) ರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಮತ್ತು ಅನುಚ್ಛೇದ 19(1)(g) ರಲ್ಲಿ ಯಾವುದೇ ವ್ಯಕ್ತಿ, ಕಸಬು, ವ್ಯವಹಾರ ಅಥವಾ ವ್ಯಾಪಾರವನ್ನು ಮಾಡುವ ಹಕ್ಕನ್ನು ನೀಡಲಾಗಿದೆ. ನ್ಯಾಯಾಲಯ ಅನುಚ್ಛೇದ 19(1)(a) ನ್ನು ವ್ಯಾಖ್ಯಾನ ಮಾಡುತ್ತಾ ಪೋಷಕರು ಅಥವಾ ವಿದ್ಯಾರ್ಥಿಗಳ ಯಾವ ಭಾಷೆಯಲ್ಲಿ ಶಿಕ್ಷಣ ಮಾಧ್ಯಮ ಇರಬೇಕೆಂದು ತೀರ್ಮಾನಿಸುವ ಹಕ್ಕು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಒಳಗೊಂಡಿದೆ ಎಂದು ಹೇಳಿದೆ. ಇದೇ ರೀತಿ ಅನುಚ್ಛೇದ 19(1)(g) ನ್ನು ವ್ಯಾಖ್ಯಾನ ಮಾಡುತ್ತಾ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಖಾಸಗಿ ಆಡಳಿತ ವರ್ಗಕ್ಕೆ ಶಿಕ್ಷಣ ಮಾಧ್ಯಮ ಯಾವ ಭಾಷೆಯಲ್ಲಿ ಇರಬೇಕೆಂದು ತೀರ್ಮಾನಿಸುವ ಹಕ್ಕು ಇದೆ ಎಂದು ಹೇಳಿದೆ. ಈ ಹಿಂದೆ ಸರ್ವೋಚ್ಚ ನ್ಯಾಯಾಲಯ ಅನೇಕ ತೀರ್ಪುಗಳಲ್ಲಿ ಸಂವಿಧಾನದಲ್ಲಿ ನೀಡಿರುವ ಮೂಲಭೂತ ಹಕ್ಕುಗಳನ್ನು ಪೂರ್ಣಹಕ್ಕುಗಳಲ್ಲ, ಬದಲಾಗಿ ಅವುಗಳು ವಿವೇಚನೆಯುಳ್ಳ ನಿರ್ಬಂಧಕ್ಕೆ ಒಳಪಟ್ಟಿವೆಯೆಂದು ವ್ಯಾಖ್ಯಾನಿಸಿದೆ. ಸರ್ಕಾರ ಸಮಾಜದ ಹಿತದೃಷ್ಟಿಯಿಂದ, ಮಕ್ಕಳ ಹಿತದೃಷ್ಟಿಯಿಂದ ಅನುಚ್ಛೇದ 19(1)(a) ಮತ್ತು 19(1)(g) ರಲ್ಲಿ ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧವನ್ನು ವಿಧಿಸುವ ಹಕ್ಕು ಸರ್ಕಾರ ಹೊಂದಿದೆಯೆಂಬ ಅಂಶವನ್ನು ನ್ಯಾಯಾಲಯಗಳು ಗಣನೆಗೆ ತೆಗೆದುಕೊಳ್ಳದೆ ಇರುವುದು ಒಂದು ದುರಂತವೇ ಸರಿ.

3) ಅನುಚ್ಛೇದ 30 ರಲ್ಲಿ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳುವ ಹಕ್ಕನ್ನು ನೀಡಿದೆ. ಈ ಅನುಚ್ಛೇದವನು ವ್ಯಾಖ್ಯಾನ ಮಾಡುತ್ತಾ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರು ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಮಾಧ್ಯಮದ ಯಾವ ಭಾಷೆಯಲ್ಲಿ ಇರಬೇಕೆಂದು ತೀರ್ಮಾನಿಸುವ ಹಕ್ಕು ಹೊಂದಿದೆ ಎಂದು ಹೇಳಿದೆ. ಈ ಹಕ್ಕಿನ ಮೇಲೆ ನಿರ್ಬಂಧ ಹೇರುವುದು ಸಂವಿಧಾನದ ಬಾಹರಿಯಂದು ವ್ಯಾಖ್ಯಾನ ಮಾಡಿದೆ. ಆದರೆ ವಾಸ್ತವವಾಗಿ ಈ ಸಂಸ್ಥೆಗಳು ಅಲ್ಪಸಂಖ್ಯಾತರನ್ನು ವಂಚಿಸುತ್ತಿವೆ. ಕೆಲವು ಉರ್ದು ಮಾಧ್ಯಮದ ಪ್ರಾಥಮಿಕ ಶಾಲೆಗಳನ್ನು ಬಿಟ್ಟರೆ ಉಳಿದಂತೆ ಎಲ್ಲಾ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳು ಇಂಗ್ಲೀಷಿನಲ್ಲಿ ನಡೆಯುತ್ತಿವೆ. ಈ ಸಂಸ್ಥೆಗಳು ಇಂಗ್ಲೀಷ್ ಶಿಕ್ಷಣವನ್ನು ಮಾರುವ ವ್ಯಾಪಾರದ ಅಂಗಡಿಗಳಾಗಿವೆ. ಭಾಷಾ ಅಲ್ಪಸಂಖ್ಯಾತರಾಗಲಿ ಅಥವಾ ಧಾರ್ಮಿಕ ಅಲ್ಪಸಂಖ್ಯಾತರಾಗಲಿ ತಮ್ಮ ಭಾಷೆಗಳ ಮೂಲಕ ಶಿಕ್ಷಣವನ್ನು ನೀಡದೆ ಅವರ ಧಾರ್ಮಿಕ, ಭಾಷಿಕ ಮತ್ತು ಸಾಂಸ್ಕೃತಿಕ  ಹಿತವನ್ನು ಕಾಪಾಡುವಲ್ಲಿ ವಿಫಲಗೊಂಡಿವೆ ಎಂಬ ಕಟುಸತ್ಯವನ್ನು ನ್ಯಾಯಾಲಯಗಳು ಗಣನೆಗೆ ತೆಗೆದುಕೊಳ್ಳಲೇ ಇಲ್ಲ.

4) ಸರ್ಕಾರದ ಭಾಷಾ ನೀತಿಯನ್ನು ಅದು ನಡೆಸುವ ಮತ್ತು ಅದರಿಂದ ಅನುದಾನವನ್ನು ಪಡೆಯುವ ಶಾಲೆಗಳು ಕಡ್ಡಾಯವಾಗಿ ಪಾಲಿಸುವಂತೆ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ. ಆದರೆ ಖಾಸಗಿ ಅನುದಾನರಹಿತ, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ಶಾಲೆಗಳ ಮೇಲೆ ಸರ್ಕಾರ ತನ್ನ ಭಾಷಾ ನೀತಿಯನ್ನು ಹೇರಲು ಯಾವ ಅಧಿಕಾರ ಇಲ್ಲ ಎಂದಿದೆ. ಈ ರೀತಿಯ ಸರ್ಕಾರಿ ಶಾಲೆಗಳಿಗೆ ಒಂದು ನೀತಿ, ಖಾಸಗಿ ಶಾಲೆಗಳಿಗೆ ಮತ್ತೊಂದು ನೀತಿ ಸಮಾಜದಲ್ಲಿ ಅಸಮಾನತೆಯನ್ನು ಹೆಚ್ಚಿಸುತ್ತದೆ. ನಗರ ಮತ್ತು ಗ್ರಾಮೀಣ ಇಂಗ್ಲೀಷ್ ಭಾಷೆ ಬಲ್ಲವರ, ಬಲ್ಲದವರ, ಗಣಕಿಕರಣ ಗೊತ್ತಿರುವವರ, ಗೊತ್ತಿಲ್ಲದವರ, ತಂತ್ರಜ್ಞಾನ ಹೊಂದಿದವರ ಹೊಂದಿಲ್ಲದವರ ಮಧ್ಯೆ ಅಂತರ ಹೆಚ್ಚುವುದಕ್ಕೆ ಅಸಮಾನ ಶಿಕ್ಷಣ ಭಾಷಾ ನೀತಿಯು ಕಾರಣವಾಗುತ್ತದೆ. ಗುಣಾತ್ಮಕ ಶಿಕ್ಷಣ ಮತ್ತು ಸಮಾನ ಶಿಕ್ಷಣ ಎಂಬ ಜನತೆಯ ಕೂಗನ್ನು ನ್ಯಾಯಾಲಯ ಪರಿಗಣಿಸಲೇ ಇಲ್ಲಾ, ಸಂವಿಧಾನದ ಮೂಲತತ್ವವಾದ ಸಮಾನತೆಗೆ ವಿರುದ್ಧವಾದ ವ್ಯಾಖ್ಯಾನ ನ್ಯಾಯಾಲಯಗಳು ನೀಡಿರುವುದು ಆಶ್ಚರ್ಯದ ಸಂಗತಿ.

5) ಜಾಗತಿಕರಣ ನಮ್ಮ ದೇಶದ ಎಲ್ಲಾ ಕ್ಷೇತ್ರಗಳ ಮೇಲೆ ಪ್ರಭಾವವನ್ನು ಬೀರಿದೆ. ನ್ಯಾಯಾಂಗ ಈ ಪ್ರಭಾವದಿಂದ ಹೊರತಲ್ಲ, ಜಾಗತೀಕರಣ ನಮ್ಮ ಸಂವಿಧಾನ ಮತ್ತು ಕಾನೂನುಗಳ ಮೇಲೆ ದಾಳಿ ಮಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕಾನೂನುಗಳ ರಚನೆ ಮತ್ತು ಕಾನೂನುಗಳ ವ್ಯಾಖ್ಯಾನ ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿದೆ. ಈ ತೀರ್ಪುಗಳಲ್ಲಿ ವೈಯಕ್ತಿಕ ಹಕ್ಕುಗಳಿಗೆ ಮತ್ತು ಖಾಸಗಿಯವರ ಹಕ್ಕುಗಳಿಗೆ ಮಹತ್ವವನ್ನು ನೀಡಲಾಗಿದೆ. ವೈಯಕ್ತಿಕ ಹಿತ ಸಮಾಜದ ಹಿತಕ್ಕೆ ಶರಣಾಗಬೇಕೆಂಬ ತತ್ವಕ್ಕೆ ಮಾನ್ಯತೆ ಸಿಗಲೇ ಇಲ್ಲ. ಸಂವಿಧಾನದ ಆಶಯಗಳಾದ ಬಹುಜನರ ಕಲ್ಯಾಣ, ಸಮತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯ ಇತ್ಯಾದಿಗಳನ್ನು ಕಡೆಗಣಿಸಲಾಗಿದೆ.
6) ಗುಣಮಟ್ಟದ ಶಿಕ್ಷಣವೆಂದರೆ ಕೇವಲ ಶಾಲಾ ಕಟ್ಟಡಗಳು, ಪೀಠೋಪಕರಣಗಳು, ಮೂಲಸೌಕರ್ಯಗಳು, ಶಿಕ್ಷಕರ ನೇಮಕಾತಿ ಇತ್ಯಾದಿಗಳು ಮಾತ್ರವಲ್ಲ. ಗುಣಮಟ್ಟದ ಶಿಕ್ಷಣ ಪಠ್ಯವಿಷಯಗಳು ಮತ್ತು ಅವುಗಳನ್ನು ಬೋಧಿಸುವ ಭಾಷಾ ಮಾಧ್ಯಮದ ಮೇಲೆ ಅವಲಂಬಿತವಾಗಿರುತ್ತದೆ. ಪಠ್ಯವಿಷಯವು ಮತ್ತು ಭಾಷಾ ಮಾಧ್ಯಮ ಮಗುವಿನ, ಪೋಷಕರ ಹಾಗೂ ಸರ್ಕಾರದ ನಡುವಿನ ಸಂಬಂಧಗಳನ್ನು ಉತ್ತಮಪಡಿಸುವಂತೆ ಇರಬೇಕು. ಪಠ್ಯವಿಷಯವು ಮಗುವನ್ನು ಉತ್ತಮ ಕುಟುಂಬ ಸದಸ್ಯನನ್ನಾಗಿ, ದೇಶದ ಉತ್ತಮ ಪ್ರಜೆಯಾಗಿಯೂ ಮತ್ತು ವಿಶ್ವ ಮಾನವನನ್ನಾಗಿ ರೂಪಿಸಬೇಕು. ಅತ್ಯಂತ ಪ್ರಾಮುಖ್ಯ ವಿಷಯಗಳಾದ ಪಠ್ಯವಿಷಯ ಮತ್ತು ಭಾಷಾ ಮಾಧ್ಯಮ ಖಾಸಗಿ ಶಾಲೆಗಳ ಮರ್ಜಿಗೆ ಬಿಡುವಂತಿಲ್ಲ. ಸಂವಿಧಾನದ ಶಾಲೆಗಳ ಮರ್ಜಿಗೆ ಬಿಡುವಂತಿಲ್ಲ. ಸಂವಿಧಾನದ ಮೂಲತತ್ವಗಳನ್ನು ಸಾಧಿಸುವಂತ ಪಠ್ಯ ಮತ್ತು ಭಾಷಾ ವಿಷಯಗಳನ್ನು ಸರ್ಕಾರವೇ ಮಾಡಬೇಕಾದದ್ದು ಸಂವಿಧಾನಾತ್ಮಕ ಕರ್ತವ್ಯ. ಭಾಷಾತಜ್ಞರು, ಮಾನವ ಶಾಸ್ತ್ರಜ್ಞರು ಮತ್ತು ಸಮಾಜ ಚಿಂತಕರು ಸಹ ಮಾತೃಭಾಷೆಯಲ್ಲಿ ಶಿಕ್ಷಣದ ಮಾಧ್ಯಮ ಇರಬೇಕೆಂದು ಆಭಿಪ್ರಾಯಪಟ್ಟಿದ್ದಾರೆ. ನ್ಯಾಯಾಲಯಗಳು ಇದನ್ನು ಗಮನಿಸಿದರು ಗಣನೆಗೆ ತೆಗೆದುಕೊಳ್ಳದೆ ಇರುವುದು ವಿಷಾದನೀಯ.

                                                                                         ಪರಿಹಾರ
1) ಮಕ್ಕಳ ಉನ್ನತ ಶಿಕ್ಷಣ, ವಿದೇಶಿ ಓದು, ವಿದೇಶಿ ಉದ್ಯೋಗ ಮತ್ತು ಆನಂತರದ ಅದರ ಆರ್ಥಿಕಾಭಿವೃದ್ಧಿ ಇತ್ಯಾದಿಗಳು ಪೋಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್ ಬಗ್ಗೆ ವ್ಯಾಮೋಹ ಬೆಳೆಸಿಕೊಳ್ಳಲು ಕಾರಣವಾಗಿವೆ. ಆದ್ದರಿಂದ ಭಾಷಾ ಸಮಸ್ಯೆಯ ಹಿಂದೆ ಉದ್ಯೋಗ ಮತ್ತು ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಪುನರ್ ಸಂಘಟಿಸಿ ಎಲ್ಲರಿಗೂ ಶಿಕ್ಷಣ, ಎಲ್ಲರಿಗೂ ಉದ್ಯೋಗ ಮತ್ತು ಸೂಕ್ತವಾದ ಆರ್ಥಿಕ ವರಮಾನ ಸಿಗುವಂತೆ ಮಾಡಬೇಕಾಗಿದೆ.

2) ಇಂದು ಇಂಗ್ಲೀಷ್ ಭಾಷೆ ಅಂತರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಬೆಳೆದು ವ್ಯವಹಾರ, ವಿಜ್ಞಾನ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಇತ್ಯಾದಿಗಳ ವಿಸ್ತರಣೆಗೆ ಹೆದ್ದಾರಿಯಾಗಿದೆ. ಆದ್ದರಿಂದ ಇಂಗ್ಲೀಷ್ ಭಾಷೆಗೆ ಪ್ರಾಮುಖ್ಯತೆಯನ್ನು ಕೊಡಲೇಬೇಕು. ಆದ್ರೆ ಕನ್ನಡಕ್ಕೆ ಬದಲಿಯಾಗಿ ಇಂಗ್ಲೀಷ್ ಆಗಕೂಡದು. ಕನ್ನಡತನದ ಮೂಲಕವೇ ಇಂಗ್ಲಿಷ್‍ಗೆ ಹೋಗೋಣ.

3) ಸ್ವಾತಂತ್ರ್ಯದ ನಂತರ ನಾವು ಸಾಕ್ಷರತೆಯಲ್ಲಿ ಗಣನೀಯ ಸಾಧನೆಯನ್ನು ಮಾಡಿದ್ದೇವೆ. ಆದರೆ ಇಂದು ಗುಣಾತ್ಮಕ ಮತ್ತು ಸಾಮಾನ ಶಿಕ್ಷಣ ಎಂಬ ಎರಡು ಸವಾಲುಗಳು ಶಿಕ್ಷಣ ಕ್ಷೇತ್ರ ಎದುರಿಸುತ್ತಿದೆ. ಸಮಗ್ರ ಶಿಕ್ಷಣ ನೀತಿಯನ್ನು ರೂಪಿಸುವಲ್ಲಿ ನಮ್ಮ ಸರ್ಕಾರಗಳು ವಿಫಲವಾಗಿವೆ. ಭಾಷಾ ಸಮಸ್ಯೆಯನ್ನು ಒಳಗೊಂಡಂತೆ, ಗುಣಾತ್ಮಕ ಮತ್ತು ಸಮಾನ ಶಿಕ್ಷಣವನ್ನು ಸಾಧಿಸಲು ಹೊಸ ಶಿಕ್ಷಣ ನೀತಿಯನ್ನು ರೂಪಿಸಬೇಕಾಗಿದೆ.

4) ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯ ಕರಡನ್ನು ಪ್ರಕಟಿಸಿದೆ. ಈ ಕರಡು ಶಿಕ್ಷಣ ನೀತಿಯಲ್ಲಿ ಅನೇಕ ಲೋಪದೋಷಗಳಿವೆ. ಇವುಗಳನ್ನು ಸರಿಪಡಿಸಲು ಈಗಾಗಲೇ ಶಿಕ್ಷಣ ತಜ್ಞರು ಕೇಂದ್ರ ಸರ್ಕಾರಕ್ಕೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆಂದು ಸಹ ಈ ಕರಡು ಶಿಕ್ಷಣ ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಮಾತೃಭಾಷೆ ಮತ್ತು ಪ್ರಾದೇಶಿಕ ಭಾಷೆಯ ಬಗ್ಗೆ ಇರುವ ಗೊಂದಲವನ್ನು ಸಹ ಕರಡು ಶಿಕ್ಷಣ ನೀತಿಯಲ್ಲಿ ಸ್ಪಷ್ಟೀಕರಿಸಬೇಕಾಗಿದೆ. ಈ ನೆಲೆಯಲ್ಲಿ ಹೊಸ ಶಿಕ್ಷಣ ನೀತಿ ಜಾರಿಗೆ ಬರಬೇಕಾಗಿದೆ.

5) ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮದ ಬಗ್ಗೆ ಬಂದಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪು ಇತರೆ ರಾಜ್ಯಗಳ ಭಾಷಾ ನೀತಿಗಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಪರಿಸ್ಥಿಯ ತೀವ್ರತೆಯನ್ನು ಗಂಭೀರವಾಗಿ ಪರಿಗಣಿಸಿ ಭಾಷಾಂಧತೆ ಬೆಳೆಯುವ ಮುನ್ನಾ ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಸೂಕ್ತ ಕಾನೂನುಗಳನ್ನು ರಚಿಸಬೇಕಾಗಿದೆ.