ಮಹಿಳೆ, ಮಹಿಳಾ ವಾದ ಮತ್ತು ಅಂಬೇಡ್ಕರ್-ಡಾ. ಎಚ್. ಎಸ್. ಅನುಪಮಾ

ಜೈ ಭೀಮ್, ಜೈ ಶ್ರೀರಾಂ

  • ಕರ್ನಾಟಕದ ಪ್ರಭಾವಿ ಮೇಲ್ಜಾತಿ ಮಠದ ರೇಪಿಸ್ಟ್ ಸ್ವಾಮಿಯನ್ನು ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲು ಸಿಐಡಿ ಪೋಲೀಸರು ಮಠಕ್ಕೆ ತೆರಳಿದರು. ಬಾಗಿಲಲ್ಲಿ ನಿಂತು ಅವರನ್ನು ಒಳಬರದಂತೆ ಅಡ್ಡಗಟ್ಟಿದವರು ನಾರಿ ಹಿತರಕ್ಷಣಾ ಸಮಿತಿಯಲ್ಲಿದ್ದ ದಲಿತ ಮಹಿಳೆಯರು! ತಲೆತಲಾಂತರದಿಂದ ತಮ್ಮನ್ನು ಹೊರಗಿಟ್ಟಿದ್ದ ಮಠದೊಳಗೆ ಬಿಟ್ಟುಕೊಂಡ ಸ್ವಾಮಿಯನ್ನು ರಕ್ಷಿಸಿ ಕೃತಕೃತಾರ್ಥರಾದ ಅವರು ಒಳಗೆ ಹೆಜ್ಜೆಯಿಡದಂತೆ ಪೋಲೀಸರನ್ನು ತಡೆದರು. ಜೈ ಭೀಮ್, ಜೈ ಶ್ರೀರಾಮ್ ಎಂದು ಒಟ್ಟೊಟ್ಟಿಗೆ ಕೂಗಿದರು!
  • ಎರಡು ತಿಂಗಳ ಕೆಳಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಆಡಳಿತ ಮಂಡಳಿಯ ಮುಖ್ಯಸ್ಥರಾದ ಗೋಪಾಲಕೃಷ್ಣನ್ ಎಂಬುವವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, ‘ಹೆಂಗಸರ ಮುಟ್ಟನ್ನು ಪತ್ತೆ ಹಚ್ಚುವ ಡಿಟೆಕ್ಟಿಂಗ್ ಮಶೀನುಗಳನ್ನು ಅಭಿವೃದ್ಧಿಪಡಿಸಿದರೆ ಅವರನ್ನು ದೇವಳದ ಒಳಗೆ ಬಿಡಬಹುದು’ ಎಂದು ಹೇಳಿದರು. ಅದೇವೇಳೆ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಶನಿ ಸಿಂಗ್ನಾಪುರ ಎಂಬ ಊರಿನ ಶನಿದೇವಾಲಯವನ್ನು ಒಬ್ಬ ಮಹಿಳೆ ಪ್ರವೇಶಿಸಿ ತನ್ನ ಸಂಕಷ್ಟ ಪರಿಹಾರಾರ್ಥ ಶನಿ ದೇವರನ್ನು ಮುಟ್ಟಿ, ಎಣ್ಣೆ ಎರೆದು ಬಂದಳು. ಶನಿಯನ್ನು ಹೆಂಗಸರು ಮುಟ್ಟುವಂತಿಲ್ಲ, ಅವರು ಮುಟ್ಟಿದರೆ ಶನಿಯ ಶಕ್ತಿ ಕಡಿಮೆಯಾಗುತ್ತದೆ ಎಂದು ಹಾಹಾಕಾರ ಎದ್ದಿತು! ಕೊನೆಗೆ ಶನಿಯ ಕಳೆಯೇರಿಸಲು ಶುದ್ಧೀಕರಣದ ಪೂಜೆ-ಹೋಮಗಳು ನಡೆದವು. ಮಹಿಳೆಯರ ದೇವಾಲಯ ಪ್ರವೇಶ ಕುರಿತು ಮಹಿಳಾ ಸಂಘಟನೆಗಳು ಪ್ರತಿಭಟನೆ ಶುರುಮಾಡಿದಾಗ ಧಾರ್ಮಿಕ ವಿಷಯಗಳಲ್ಲಿ ಸ್ತ್ರೀವಾದ ಮೂಗು ತೂರಿಸಬಾರದೆಂದು ಮಂತ್ರಿಣಿಯೊಬ್ಬರು ಹೇಳಿದರು.
  • ಮಹಾರಾಷ್ಟ್ರ ಅಂಬೇಡ್ಕರ್ ಹುಟ್ಟಿದ ರಾಜ್ಯ. ಅದರಲ್ಲೂ ಸತಾರಾ ಜಿಲ್ಲೆ ಮಹಿಳಾ ಶಿಕ್ಷಣ ಮತ್ತು ಸಮಾನತೆ ಪ್ರತಿಪಾದಿಸಿದ ಸಾವಿತ್ರಿಬಾಯಿ ಹಾಗೂ ಜ್ಯೋತಿಬಾ ಫುಲೆಯವರ ಜನ್ಮಸ್ಥಳ. ಆ ಜಿಲ್ಲೆಯಲ್ಲಿ ೨೦೧೦-೧೧ರಲ್ಲಿ ಜಿಲ್ಲಾಡಳಿತ ೧-೪೦ ವರ್ಷ ವಯೋಮಾನದೊಳಗಿನ ೨೮೫ ಹೆಣ್ಮಕ್ಕಳನ್ನು ಗುರುತಿಸಿ ಹೆಸರು ಬದಲಿಸುವ ಅಭಿಯಾನ ನಡೆಸಿತು. ಏಕೆ ಗೊತ್ತೆ? ಅವರೆಲ್ಲರ ಹೆಸರು ನಕೂಸ, ನಕುಶಿ ಎಂದಿತ್ತು. ಆ ಹೆಸರಿನರ್ಥ ‘ಬೇಡದವಳು’. ಅವರೆಲ್ಲ ಮೂರನೆಯ ಅಥವಾ ನಾಲ್ಕನೆಯ ಹೆಣ್ಣುಮಕ್ಕಳು, ಬೇಡದವರು. ಅವರಿಗೆ ನಾಮಕರಣವಿಲ್ಲ, ಬಣ್ಣಬಂಗಾರವಿಲ್ಲ. ಆ ಹೆಣ್ಣು ನೋಯಬೇಕು, ಆಗ ದೇವರಿಗೆ ತನ್ನ ಸೃಷ್ಟಿಯ ಬಗೆಗೆ ಮರುಕವೆನಿಸಿ ಅವರ ನಂತರ ಗಂಡು ಹುಟ್ಟಿಸುತ್ತಾನೆ ಎಂಬ ನಂಬಿಕೆ ಈಗಲೂ ಅಲ್ಲಿ ಚಾಲ್ತಿಯಲ್ಲಿದೆ.
  • ದಲಿತ ಮಹಿಳೆ ಮುಖ್ಯಮಂತ್ರಿಯಾಗಿ ರಾಜ್ಯವಾಳಿದ ಏಕೈಕ ರಾಜ್ಯ ಉತ್ತರ ಪ್ರದೇಶ. ಅಲ್ಲಿ ಕಳೆದ ವರ್ಷ ಗಣೇಶಪುರ ಎಂಬ ಹಳ್ಳಿಯಲ್ಲಿ ದಲಿತ ಹೆಣ್ಣುಮಗಳ ನೆರಳು ಮೇಲ್ಜಾತಿ ವ್ಯಕ್ತಿಯೊಬ್ಬರ ಬಿದ್ದು ಮಡಿ ಹಾಳುಮಾಡಿತು ಎಂಬ ಕಾರಣಕ್ಕೆ ಮಾರಣಾಂತಿಕವಾಗಿ ಅವಳನ್ನು ಹೊಡೆದರು. ಅದೇ ರಾಜ್ಯದ ಕುಶೀನಗರದ ದಿವಾನ್ ತೋಲಾದಲ್ಲಿ ಉತ್ತಮ ಅಂಕ ಗಳಿಸುತ್ತಿದ್ದ, ಮೆಟ್ರಿಕ್ ಪರೀಕ್ಷೆ ಕಟ್ಟಿದ್ದ ದಲಿತ ಹುಡುಗಿಯನ್ನು ರೊಟ್ಟಿ ಬೇಯಿಸುತ್ತ ಕುಳಿತ ಒಲೆಯೆದುರೇ ಮೇಲ್ಜಾತಿ ಹುಡುಗರು ಸುಟ್ಟು ಹಾಕಿದರು. ಬದಾವೂಂ ಎಂಬ ಹಳ್ಳಿಯಲ್ಲಿ ಇಬ್ಬರು ದಲಿತ ಬಾಲಕಿಯರ ಅತ್ಯಾಚಾರಗೈದು, ಕೊಂದು ಮರಕ್ಕೆ ನೇತುಹಾಕಿದರು.
  • ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ‘ಕೊಡುಗೆ’ಯೊಂದು ಘೋಷಿಸಲ್ಪಟ್ಟಿದೆ. ಮಹಿಳೆಯರನ್ನು ಸನಾತನ ಮೌಲ್ಯಗಳಿಗೆ ಕಟ್ಟಿಹಾಕುತ್ತ, ವ್ಯವಸ್ಥೆಯ ರಕ್ಷಕರಾಗಿ ಬಳಸಿಕೊಳ್ಳುವ ಸಂಘಪರಿವಾರವು ಅವರಿಗೆ ದೇವಸ್ಥಾನ ಪ್ರವೇಶ ಕಲ್ಪಿಸಬೇಕೆನ್ನುತ್ತಿದೆ! ಮಹಿಳಾ ದಿನಾಚರಣೆಯ ದಿನ ಮಹಿಳೆಯರಷ್ಟೇ ಸಂಸತ್ತಿನಲ್ಲಿ ಮಾತನಾಡುವ ಅವಕಾಶವನ್ನು ಆ ಪಕ್ಷ ಒದಗಿಸಿಕೊಟ್ಟಿದೆ. ಹೆಣ್ಣುಮಕ್ಕಳಿಗೆ ವಸ್ತ್ರಸಂಹಿತೆ, ನೀತಿಸಂಹಿತೆ, ಆಚಾರಸಂಹಿತೆಗಳ ವಿಧಿಸುವ ಪಕ್ಷವು ಅತಿ ಹೆಚ್ಚು ಮಹಿಳೆಯರನ್ನು ಸಂಸತ್ತಿಗೆ ಕಳಿಸಿದ್ದು ಮಹಿಳಾ ಮಂತ್ರಿ, ಸ್ಪೀಕರುಗಳನ್ನು ಹೊಂದಿದೆ.

ಇವೆಲ್ಲ ಈ ಕಾಲದ ವಿಪರ್ಯಾಸವನ್ನು ಹಾಗೂ ಪ್ರಗತಿಪರ ಚಳುವಳಿಗಳು ಜನಸಾಮಾನ್ಯರ ಜಾಗೃತಿಯಾಗಿ ಮರುಹುಟ್ಟು ಪಡೆಯಲಾಗದಿರುವುದನ್ನು ಸೂಚಿಸುತ್ತವೆ. ಧರ್ಮಾಧಾರಿತ ಧೃವೀಕರಣದ ತಂತ್ರವಾಗಿ ದಲಿತರನ್ನು, ಮಹಿಳೆಯರನ್ನು ಕೋಮುವಾದ ದಿಕ್ಕು ತಪ್ಪಿಸುತ್ತಿದೆ. ಜನಸಾಮಾನ್ಯರ ಮಾತಂತಿರಲಿ, ದಲಿತ – ಮಹಿಳಾ ನಾಯಕಿಯರನ್ನೂ ಸಹಾ ಹಿಂದೂತ್ವದ ಜಾಲದೊಳಗೆ ಸೆಳೆಯಲಾಗಿದೆ. ತಮಗರಿವಿಲ್ಲದೆ ಜಾತಿ, ಧರ್ಮ ಮತ್ತು ರಾಜಕಾರಣಗಳು ಒಡ್ಡುವ ಭಾವುಕ ಹಾಗೂ ಲೌಕಿಕ ಬಲೆಯೊಳಗೆ ಮಹಿಳೆಯರು ಬೀಳುತ್ತ ಲಿಂಗಪ್ರಶ್ನೆ ಮರೆಗೆ ಸರಿಯುತ್ತಿದೆ. ಇದಕ್ಕೆ ಕಾರಣ ವಿಸ್ತೃತ ಮಹಿಳಾ ಜಾಗೃತಿಯ ಕೊರತೆ ಹಾಗೂ ಪ್ರಮುಖ ಸ್ಥಾನಗಳಲ್ಲಿ ಮಹಿಳೆಯರ ‘ಇಲ್ಲದಿರುವಿಕೆ.’

ಆದ್ದರಿಂದ ಜಾತಿ, ವರ್ಗ ಹಾಗೂ ಲಿಂಗ ಎಂಬ ಸಂರಚನೆಗಳನ್ನು ಇವತ್ತಿನ ಸಾಮಾಜಿಕ, ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿಶ್ಲೇಷಿಸಬೇಕಾದ ತುರ್ತು ಭಾರತದ ಮಾನವಹಕ್ಕು ಹೋರಾಟಗಾರರಿಗಿದೆ. ಭಾರತದ ಮಾನವಹಕ್ಕು ಹೋರಾಟದ ತಾತ್ವಿಕತೆಯನ್ನು ಸಮರ್ಥವಾಗಿ ರೂಪಿಸಿಕೊಳ್ಳಲು, ಜಾತ್ಯತೀತ ನೆಲೆಯ ಸಂಘಟನೆ ಮತ್ತು ಹೋರಾಟ ಕಟ್ಟಲು ಅವರಿಗೆ ಅಂಬೇಡ್ಕರ್ ಮಾದರಿ ಸೂಕ್ತವಾಗಿದೆ. ಮದರಾಸು ಐಐಎಂ-ಹೈದರಾಬಾದ್ ವಿವಿ-ಜೆಎನ್‌ಯು ಹೋರಾಟ ಸಾಕ್ಷಿಯಾಗಿ ದಮನಿತ, ಹತ್ತಿಕ್ಕಲ್ಪಟ್ಟ ದನಿಗಳ ಸಂಘರ್ಷಕ್ಕೆ ಅಂಬೇಡ್ಕರ್ ಚಿಂತನೆಗಳು ಸಶಕ್ತ ಮಾರ್ಗದರ್ಶಕ ನೀತಿಯಾಗಿವೆ. ಅಂಬೇಡ್ಕರರು ಇಂಥದೇ ಕಷ್ಟ ಕಾಲದಲ್ಲಿ, ರಾಷ್ಟ್ರೀಯ ಹೋರಾಟದಿಂದ ಭಿನ್ನವಾಗಿ ಸಿಡಿದು ನಿಂತು ಶೋಷಿತರ ಹೋರಾಟ ಕಟ್ಟಿದವರು. ತಮ್ಮ ಎಲ್ಲ ಹೋರಾಟಗಳಲ್ಲೂ ಮಹಿಳೆಯರನ್ನು ಸಹಭಾಗಿಗಳನ್ನಾಗಿ ಪರಿಗಣಿಸಿದವರು. ಜಾತಿಪದ್ಧತಿ, ಹಿಂದೂ ಕುಟುಂಬ ವ್ಯವಸ್ಥೆ, ಹೆಣ್ಣಿನ ಜೈವಿಕ ಜವಾಬ್ದಾರಿಗಳು ಇವನ್ನೆಲ್ಲ ತಳಮಟ್ಟ ಅರಿತು ವಿಶ್ಲೇಷಿಸಿದವರು.

ಈ ಹಿನ್ನೆಲೆಯಿಂದ ಎಲ್ಲ ಚಳುವಳಿಗಳು ಮಹಿಳೆಯರನ್ನೊಳಗೊಳ್ಳುವುದು ಮತ್ತು ಮಹಿಳೆಯರು ಎಲ್ಲ ಹೋರಾಟಗಳಲ್ಲಿ ಭಾಗಿಯಾಗುವುದು ಈ ಕಾಲದ ಅವಶ್ಯಕತೆಯಾಗಿದೆ. ಎಂದೇ ಅಂಬೇಡ್ಕರರ ಹೋರಾಟ ಮತ್ತು ಚಿಂತನೆಗಳನ್ನು ಪುನರ್ಮನನ ಮಾಡಿಕೊಳ್ಳಲು ‘ಅಂಬೇಡ್ಕರ್ ಮತ್ತು ಭಾರತೀಯ ಮಹಿಳೆ’ಯ ದೃಷ್ಟಿಯಿಂದ ಕೆಲ ಸಂಗತಿಗಳನ್ನಿಲ್ಲಿ ಚರ್ಚಿಸಲಾಗಿದೆ.

ಭಾರತೀಯ ಮಹಿಳೆ ಮತ್ತು ಅಂಬೇಡ್ಕರ್ 

‘ನಾನೊಂದು ಬಂಡೆಯ ತರಹ. ಅದು ಕರಗದಿರಬಹುದು. ಆದರೆ ನದಿ ಪಾತ್ರ ಬದಲಿಸಬಲ್ಲದು..’
– ಅಂಬೇಡ್ಕರ್

ಭಕ್ತಿ ಚಳುವಳಿಯ ಕಾಲದಿಂದಲೂ ಮಹಿಳೆ ಧಾರ್ಮಿಕ ಸಮಾನತೆ ಕೇಳಲು ಶಕ್ತಳಾಗಿದ್ದಳೇ ಹೊರತು ಸಾಮಾಜಿಕ ಸ್ಥಾನಮಾನಗಳಲ್ಲಿ ಯಾವ ಬದಲಾವಣೆಯೂ ಸಾಧ್ಯವಾಗಿರಲಿಲ್ಲ. ಬ್ರಿಟಿಷರ ಆಗಮನವಾದ ನಂತರ ಸಮಾಜ ಸುಧಾರಕರು ಸ್ತ್ರೀ ಶೋಷಣೆಯ ವಿರುದ್ಧ ಜನಜಾಗೃತಿಗೆ ಶ್ರಮಿಸಿದರು. ೧೮೪೮ರಲ್ಲಿ ಜ್ಯೋತಿಬಾ ಫುಲೆಯವರು ವಿದ್ಯೆಯಿಂದ ವಂಚಿತರಾಗಿದ್ದ ಅಸ್ಪೃಶ್ಯರಿಗೆ ಮತ್ತು ಹೆಣ್ಣುಮಕ್ಕಳಿಗೆ ಶಾಲೆ ಶುರು ಮಾಡಿದರು. ಬಾಲ್ಯವಿವಾಹ, ವಿಧವಾ ಪದ್ಧತಿ, ಸತಿ ಪದ್ಧತಿ, ಶಿಕ್ಷಣ ಹಕ್ಕು ನಿರಾಕರಣೆ, ಆಸ್ತಿ ಹಕ್ಕು ನಿರಾಕರಣೆಯಂತಹ ವಿಷಯಗಳನ್ನು ಸಮಾಜ ಸುಧಾರಕರು ಪರಿಗಣಿಸಿದರು. ಆದರೆ ಮಹಿಳಾ ಶೋಷಣೆಯ ವಿವಿಧ ಮಗ್ಗುಲುಗಳ ಬಗ್ಗೆ ಆಳವಾಗಿ ಚಿಂತಿಸಿ, ಧಾರ್ಮಿಕ-ಸಾಮಾಜಿಕ-ರಾಜಕೀಯ ಹಕ್ಕುಗಳನ್ನು ಸಂವಿಧಾನದತ್ತವಾಗಿ ನೀಡಲು ಶ್ರಮಿಸಿದ ಮೊದಲ ವ್ಯಕ್ತಿ ಅಂಬೇಡ್ಕರ್. ‘ಯಾವುದೇ ಸಮುದಾಯದ ಏಳ್ಗೆಯನ್ನು ಅಳೆಯಬೇಕಾದರೆ ಆ ಸಮುದಾಯದ ಸ್ತ್ರೀಯರ ಏಳ್ಗೆಯನ್ನು ಪರಿಗಣಿಸಬೇಕು’ ಎಂದು ಮಹಿಳೆಯರ ಸ್ಥಿತಿಗತಿಯನ್ನು ಸಮಾಜದ ಏಳ್ಗೆಯ ಸೂಚ್ಯಂಕವಾಗಿ ಪರಿಗಣಿಸಿದ ಅಂಬೇಡ್ಕರ್ ಭಾರತದಲ್ಲಿ ಮಾನವ ಹಕ್ಕು ಹಾಗೂ ಮಹಿಳಾ ಹಕ್ಕು ಹೋರಾಟಗಳಿಗೆ ಕಾನೂನಿನ ಚೌಕಟ್ಟು ನೀಡಿದ ಮೊದಲ ನಾಯಕರಾಗಿದ್ದಾರೆ.

‘ಹೆಣ್ಣು ಹಿಂದೂ ಸಮಾಜದ ಅತ್ಯಂತ ಶೋಷಿತಳು. ದಲಿತರು ಮತ್ತು ಮಹಿಳೆಯರ ಸ್ಥಿತಿಗತಿ ಒಂದೇ. ಭಾರತೀಯ ಸಮಾಜ ಒಂದು ಕೈಯಲ್ಲಿ ಅವಳನ್ನು ಪೂಜಿಸುತ್ತ, ಮತ್ತೊಂದು ಕೈಯಲ್ಲಿ ಬೆತ್ತ ಹಿಡಿದು ಲಕ್ಷ್ಮಣರೇಖೆಗಳನ್ನು ದಾಟದಂತೆ ನಿರ್ಬಂಧ ವಿಧಿಸಿದೆ’ ಎಂಬುದನ್ನು ಅಂಬೇಡ್ಕರ್ ಅರಿತಿದ್ದರು. ವಿದೇಶೀ ವಿದ್ಯಾಭ್ಯಾಸ, ಅದರಲ್ಲೂ ಜರ್ಮನಿಯ ಬಾನ್‌ನಲ್ಲಿ ಕಳೆದ ದಿನಗಳು ಪಾಶ್ಚಾತ್ಯ ಸ್ತ್ರೀವಾದಿ ಚಿಂತನೆಗೆ ಅವರನ್ನು ಹತ್ತಿರ ತಂದವು. ಮೊದಲ ಅಲೆಯ ಮಹಿಳಾ ಚಳುವಳಿಯ ಪ್ರತಿಫಲವಾಗಿ ೧೯೧೮ರ ಹೊತ್ತಿಗೆ ಬ್ರಿಟನ್ ಹಾಗೂ ೧೯೨೦ರ ವೇಳೆಗೆ ಅಮೆರಿಕಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಕೊಡಲಾಯಿತು. ಸಮಾನ ವೇತನ, ಮಹಿಳೆಯರಿಗೆ ಸಮಾನ ಆಸ್ತಿ ಹಕ್ಕು ಮೊದಲಾದವು ಅಲ್ಲಿ ಬಹುಚರ್ಚಿತ ವಿಷಯಗಳಾಗಿದ್ದವು. ಸಹಜವಾಗಿಯೇ ಮುಕ್ತ ಚಿಂತನೆಯ ಅಂಬೇಡ್ಕರರನ್ನು ಮಹಿಳಾಪರ ಚಿಂತನೆಗಳು ಸೆಳೆದವು. ರಾಜಕೀಯ ಅಧಿಕಾರ ಸಿಗದೇ ಯಾವುದೂ ಬದಲಾಗುವುದು ಅಷ್ಟು ಸುಲಭವಲ್ಲ ಎಂಬುದನ್ನವರು ಗುರುತಿಸಿದರು. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಓದುವಾಗ ತಮ್ಮ ಗೆಳೆಯನಿಗೆ ಬರೆದ ಪತ್ರವೊಂದರಲ್ಲಿ ಹಿಂದುಳಿದ ವರ್ಗಗಳ ವಿದ್ಯಾಭ್ಯಾಸ, ಅದರಲ್ಲೂ ಹೆಣ್ಣುಮಕ್ಕಳ ವಿದ್ಯಾಭ್ಯಾಸ ಬಹುಮುಖ್ಯವೆಂದು, ‘ಸದ್ಯದಲ್ಲಿಯೇ ಒಳ್ಳೆಯ ದಿನಗಳನ್ನು ಕಾಣುತ್ತೇವೆ. ಆದರೆ ಅದಕ್ಕಾಗಿ ಪುರುಷರ ಜೊತೆಗೆ ಮಹಿಳೆಯರೂ ಒಟ್ಟೊಟ್ಟಿಗೇ ಶಿಕ್ಷಣ ಪಡೆಯುವುದು ಅವಶ್ಯವಿದೆ’ ಎಂದೂ ಹೇಳಿದ್ದರು.

ಅವರು ಹೊರತರುತ್ತಿದ್ದ ‘ಮೂಕನಾಯಕ’ ಹಾಗೂ ‘ಬಹಿಷ್ಕೃತ ಭಾರತ’ ಪತ್ರಿಕೆಗಳಲ್ಲಿ ಮಹಿಳಾ ಸಮಸ್ಯೆ ಮುಖ್ಯವಾಗಿ ಚರ್ಚಿತವಾಗುತ್ತಿತ್ತು. ಮಹಾಡ್ ಸತ್ಯಾಗ್ರಹ ಮೆರವಣಿಗೆಯಲ್ಲಿ ೫೦೦ ಸ್ತ್ರೀಯರು ಪಾಲ್ಗೊಂಡಿದ್ದರು. ಕಾಳಾರಾಮ್ ದೇವಾಲಯ ಪ್ರವೇಶ ಸಂದರ್ಭದಲ್ಲಿ ಕೂಡಾ ಮಹಿಳೆಯರಿದ್ದರು ೧೯೨೭ರಲ್ಲಿ ಡಿಪ್ರೆಸ್ಡ್ ಕ್ಲಾಸ್ ವಿಮೆನ್ಸ್ ಅಸೋಸಿಯೇಷನ್ ಶುರುವಾಯಿತು. ಅದರ ಸಮಾವೇಶದಲ್ಲಿ ೩೦೦೦ ಹಿಂದುಳಿದ ಮಹಿಳೆಯರನ್ನುದ್ದೇಶಿಸಿ ಮಾತನಾಡುತ್ತಾ, ‘ನಿಮ್ಮ ಬಟ್ಟೆ ತೇಪೆಯಿಂದ ಕೂಡಿದ್ದರೇನಾಯಿತು? ಸ್ವಚ್ಛವಾಗಿರಿ. ನಿಮ್ಮನ್ನು ನೀವೇ ಮುಟ್ಟಿಸಿಕೊಳ್ಳದವರೆಂದು ಭಾವಿಸಬೇಡಿ. ನಿಮ್ಮ ಮಕ್ಕಳನ್ನು ಅದರಲ್ಲೂ ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸಿ. ಮಕ್ಕಳ ಮನಸ್ಸಿನ ಕೀಳರಿಮೆ ತೆಗೆದು ಅವರಲ್ಲಿ ಆತ್ಮಗೌರವ ತುಂಬಿ. ಮಹಾನ್ ವ್ಯಕ್ತಿಗಳಾಗಲು ಹುಟ್ಟಿದ್ದಾರೆಂದು ಅವರನ್ನು ನಂಬಿಸಿ’ ಎಂದು ಕಿವಿಮಾತು ಹೇಳಿದ್ದರು.

ಅಂಬೇಡ್ಕರರ ತಾತ್ವಿಕ ಬೆಂಬಲ ಹಾಗೂ ಸಂಘಟನೆಗಳ ಬಲದೊಂದಿಗೆ ಮಹಿಳಾ ಜಾಗೃತಿಯ ಹೊಸ ಅಧ್ಯಾಯವೇ ಶುರುವಾಯಿತು. ೧೯೨೮ರಲ್ಲಿ ಹಿಂದುಳಿದ ಮಹಿಳೆಯರ ಸಂಘಟನೆ ಆರಂಭವಾಯಿತು. ಅನೇಕ ಕಡೆಗಳಲ್ಲಿ ದಲಿತ ಮಹಿಳಾ ಸಮಾವೇಶಗಳು ಜರುಗಿದವು. ತುಳಸೀಬಾಯಿ ಬಣಸೋಡೆ ‘ಚೊಕ್ಕಮೇಲ’ ಎಂಬ ಪತ್ರಿಕೆ ಶುರುಮಾಡಿದರು. ಮಹಿಳಾ ಹಾಸ್ಟೆಲ್ಲುಗಳು, ಶಾಲೆಗಳನ್ನು ತೆರೆಯಲಾಯಿತು. ಹೆಣ್ಣುಮಕ್ಕಳು ಆತ್ಮಕತೆ, ನಾಟಕಗಳನ್ನು ಬರೆದರು. ಧರ್ಮಪ್ರಸಾರಕರಾದರು. ೧೯೩೧ರಲ್ಲಿ ರಾಧಾಬಾಯಿ ವಢಾಳೆ ಎಂಬಾಕೆ, ‘ಹಿಂದೂ ದೇವಸ್ಥಾನ ಪ್ರವೇಶಿಸಲು ಹಾಗೂ ಕುಡಿಯುವ ನೀರಿಗಾಗಿ ಸಾರ್ವಜನಿಕ ಜಲಮೂಲಗಳಿಗೆ ಹೋಗಲು ನಮಗೆ ಹಕ್ಕು ಬೇಕು. ಅಷ್ಟೇ ಅಲ್ಲ ವೈಸರಾಯ್ ಅವರೇ, ಸಾಮಾಜಿಕ ಹಕ್ಕುಗಳ ಜೊತೆ ನಮಗೆ ರಾಜಕೀಯ ಹಕ್ಕುಗಳೂ ಬೇಕು. ಕಠಿಣ ಶಿಕ್ಷೆಗೆಲ್ಲ ನಾವು ಹೆದರುವವರಲ್ಲ. ದೇಶದ ಎಲ್ಲ ಜೈಲುಗಳನ್ನೂ ಬೇಕಾದರೆ ತುಂಬಲು ಸಿದ್ಧರಿದ್ದೇವೆ. ಅವಮಾನಕರವಾಗಿ ಬದುಕುವುದಕ್ಕಿಂತ ನೂರು ಸಲವಾದರೂ ಹೋರಾಡಿ ಸಾಯಲು ನಾವು ಸಿದ್ಧರಿದ್ದೇವೆ’ ಎಂದು ಹೇಳಿದಳು.

ಮಹಿಳೆಯರು ಎದುರಿಸುವ ಜೈವಿಕ, ದೈಹಿಕ ಕಷ್ಟಗಳ ಕುರಿತು; ನಿಭಾಯಿಸಬೇಕಾದ ವಿಶೇಷ ಜವಾಬ್ದಾರಿಯ ಕುರಿತು ಅಂಬೇಡ್ಕರ್ ಮಾತನಾಡಿದರು. ೧೯೩೮ರಷ್ಟು ಹಿಂದೆಯೇ ಕುಟುಂಬ ಯೋಜನಾ ವಿಧಾನವನ್ನು ಸರ್ಕಾರ ಜನಪ್ರಿಯಗೊಳಿಸಬೇಕೆಂದು ಮುಂಬಯಿಯ ಶಾಸನಸಭೆಯಲ್ಲಿ ವಾದಿಸಿದರು. ಹೆತ್ತುಹೆತ್ತು ಮಕ್ಕಳನ್ನು ಸಾಕುವುದರಲ್ಲೇ ಹೆಣ್ಣುಮಕ್ಕಳು ಹೈರಾಣಾಗುತ್ತಿದ್ದಾರೆಂದೂ, ಅವರ ಶಕ್ತಿಸಾಮರ್ಥ್ಯವನ್ನು ಸಮಾಜ ಉಪಯೋಗಿಸಿಕೊಳ್ಳಬೇಕೆಂದರೆ ಕುಟುಂಬ ಯೋಜನೆ ಅವಶ್ಯವೆಂದೂ ಪ್ರತಿಪಾದಿಸಿದರು. ೧೯೪೨ರಲ್ಲಿ ದೆಹಲಿ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದಾಗ ಹೆರಿಗೆ ಭತ್ಯೆ ನೀಡುವ ಬಗ್ಗೆ ಪ್ರಸ್ತಾಪಿಸಿದರು. ವೇತನ ಸಹಿತ ಹೆರಿಗೆ ಭತ್ಯೆ ರಜೆ ನೀಡುವುದು ಸರ್ಕಾರಕ್ಕೆ ಆರ್ಥಿಕ ಹೊರೆಯೆನಿಸಿದರೂ ಸಹ ಮನುಷ್ಯ ಸಮಾಜದ ನಾಳಿನ ಸಂತತಿಯನ್ನು ಹೆತ್ತು ಸಾಕುವ ಹೆಣ್ಣುಮಕ್ಕಳನ್ನು ಅಷ್ಟಾದರೂ ಗೌರವಿಸುವುದು, ಅವರಿಗೆ ಅವಶ್ಯವಿರುವಷ್ಟು ವಿರಾಮ ನೀಡುವುದು ಉಳಿದ ಸಮಾಜದ ಕರ್ತವ್ಯ ಎಂದೂ, ಅದಕ್ಕೆ ಸರ್ಕಾರ ಸಿದ್ಧತೆ ಮಾಡಿಕೊಳ್ಳಬೇಕೆಂದೂ ಸೂಚಿಸಿದರು.

ಒಂದು ಸಭೆಯಲ್ಲಿ ಮಾತನಾಡುತ್ತ, ‘ಮದುವೆಗೆ ಅವಸರಪಡಬೇಡಿ. ಮದುವೆ ಒಂದು ಬಂಧನ. ಮದುವೆಯ ನಂತರದ ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವಷ್ಟು ಶಕ್ತಿಶಾಲಿಯಲ್ಲದಿದ್ದರೆ ಮದುವೆಯಾಗಬೇಡಿ. ಮದುವೆಯಾದ ಹೆಣ್ಣು ಗಂಡನ ಪಕ್ಕ ಸರಿಸಮಾನಳಾಗಿ ನಿಲ್ಲಬೇಕು, ದಾಸಿಯಂತಲ್ಲ. ಮದುವೆಯಾದವರು ನೆನಪಿಡಿ: ತುಂಬ ಮಕ್ಕಳನ್ನು ಹೆರುವುದು ಅಪರಾಧ. ಏಕೆಂದರೆ ನಮ್ಮ ಪಾಲಕರು ನೀಡಿದ್ದಕ್ಕಿಂತ ಹೆಚ್ಚಿನದನ್ನು ನಾವು ನಮ್ಮ ಮಕ್ಕಳಿಗೆ ನೀಡಲು ಶಕ್ತರಾಗಿರಬೇಕು’ ಎಂದು ಹೇಳಿದರು. ಇಂಥ ತಾಯ್ತನದ ಅಂತಃಕರಣದ ಮಾತುಗಳ ಕಾರಣವಾಗಿಯೇ ಜನಪದರ ಭಾವಕೋಶದಲ್ಲಿ ಅಂಬೇಡ್ಕರ್ ಬಾಬಾ ಎಂದು ಚಿರಸ್ಥಾಯಿಯಾದರು.

ಭಾರತೀಯ ಮಹಿಳೆ ಮತ್ತು ಹಿಂದೂ ಕೋಡ್ ಬಿಲ್

ಯಾವುದೇ ಸಾಮಾಜಿಕ ಬದಲಾವಣೆ ಬಯಸುವುದಾದರೂ ಅದಕ್ಕೆ ಪೂರಕವಾಗಿ ಕಾನೂನು ಚೌಕಟ್ಟು ಒದಗಿಸಬೇಕು ಎನ್ನುವುದು ಅಂಬೇಡ್ಕರ್ ನಿಲುವು. ಮಹಿಳಾ ಹಕ್ಕುಗಳ ಪರವಾಗಿ ಖಚಿತ ನಿಲುವು ಹೊಂದಿದ್ದ ಅಂಬೇಡ್ಕರರ ಸಂವಿಧಾನವು ಮಹಿಳೆಯರಿಗೆ ಪುರುಷರಿಗಿರುವ ಎಲ್ಲ ಸವಲತ್ತುಗಳನ್ನೂ ನೀಡಿತು. ಜೊತೆಗೆ ೧೫(೩), ೫೧(ಎ) ಕಲಮುಗಳು ವಿಶೇಷ ಸವಲತ್ತುಗಳನ್ನು ನೀಡಲು ಅವಕಾಶ ಕಲ್ಪಿಸಿದವು. ಅದಕ್ಕೆ ಪೂರಕವಾಗಿ ಅಂಬೇಡ್ಕರ್ ಬಹಳ ಪ್ರಯತ್ನಪಟ್ಟು ತರಲೆತ್ನಿಸಿದ್ದು ಹಿಂದೂ ಕೋಡ್ ಬಿಲ್.

ಭಾರತೀಯ ಹಿಂದೂ ವಿವಾಹಪದ್ಧತಿ ಮಹಿಳೆಗೆ ಸ್ವಾತಂತ್ರ್ಯವನ್ನೂ, ಸಮಾನತೆಯನ್ನೂ ನೀಡುವಂಥದಲ್ಲ. ಅದು ಮಹಿಳೆಗೆ ದಾಸ್ಯ ಹೇರುವುದಲ್ಲದೇ ವಿಚ್ಛೇದನಕ್ಕೆ ಅವಕಾಶ ನಿರಾಕರಿಸಿ, ಪುರುಷರ ಬಹುಪತ್ನಿತ್ವವನ್ನು ಮಾನ್ಯ ಮಾಡುತ್ತದೆ. ಹಿಂದೂ ವೈಯಕ್ತಿಕ ಕಾನೂನಿಗೆ ಏಕರೂಪ ಸಂಹಿತೆಯೊಂದನ್ನು ತರಬೇಕೆಂಬುದು ಬ್ರಿಟಿಷ್ ಆಡಳಿತ ಕಾಲದಿಂದಲೂ ನಡೆದ ಪ್ರಯತ್ನವಾಗಿತ್ತು. ೧೯೪೪ರಲ್ಲಿ ತಯಾರಾದ ಹಿಂದೂ ಕೋಡ್ ಬಿಲ್ ಹಲವು ವಿರೋಧಗಳ ನಡುವೆ ಮೂಲೆಗುಂಪಾಗಿತ್ತು. ನೆಹರೂ ಮೊದಲಿನಿಂದಲೂ ಹಿಂದೂ ವೈಯುಕ್ತಿಕ ಕಾನೂನು ಸುಧಾರಣೆ ತನ್ನ ಪ್ರಥಮ ಆದ್ಯತೆ ಎಂದೇ ಹೇಳುತ್ತಿದ್ದರು. ಸ್ವಾತಂತ್ರ್ಯಾನಂತರ ೧೯೪೪ರ ಹಿಂದೂ ಕೋಡ್ ಬಿಲ್ ಅನ್ನು ಪರಿಷ್ಕರಣೆಗಾಗಿ ಕಾನೂನು ಮಂತ್ರಾಲಯಕ್ಕೆ ಕಳಿಸಿದರು. ಆಗ ಕಾನೂನು ಮಂತ್ರಿಯಾಗಿದ್ದ ಅಂಬೇಡ್ಕರ್ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾದರು. ಹಿಂದೂ ಸಾಮಾಜಿಕ ಬದುಕಿನಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಅಂಬೇಡ್ಕರ್ ಪರಿಷ್ಕೃತ ಹಿಂದೂ ಕೋಡ್ ಬಿಲ್ ಅನ್ನು ಮಂಡಿಸಿದರು. ಅದರಲ್ಲಿ ಮೂರು ಮುಖ್ಯ ಬದಲಾವಣೆಗಳು ಪ್ರಸ್ತಾಪಿಸಲ್ಪಟ್ಟಿದ್ದವು:

  • ಹಿಂದೂಗಳಲ್ಲಿ ಪ್ರಚಲಿತವಿದ್ದ ಹಲವು ತೆರನ ಮದುವೆ ಪದ್ಧತಿಗಳನ್ನು ರದ್ದುಗೊಳಿಸಿ ಒಂದೇ ವಿಧದ ಮದುವೆಯನ್ನು ಊರ್ಜಿತಗೊಳಿಸುವುದು.
  • ಮಹಿಳೆಗೆ ಆಸ್ತಿ ಹಕ್ಕು ಮತ್ತು ದತ್ತು ತೆಗೆದುಕೊಳ್ಳುವ ಹಕ್ಕು ಕೊಡುವುದು.
  • ಮಹಿಳೆಗೆ ವಿಚ್ಛೇದನದ ಹಕ್ಕು ನೀಡುವುದು.

ಈ ಮಸೂದೆಯು ಎಂಟು ಭಾಗಗಳನ್ನೊಳಗೊಂಡಿತ್ತು. ಹಿಂದೂ ಯಾರು/ಮದುವೆ/ದತ್ತು ಸ್ವೀಕಾರ/ಪೋಷಕತ್ವ/ಅವಿಭಕ್ತ ಕುಟುಂಬದ ಆಸ್ತಿ ಕಾನೂನು/ಹೆಣ್ಣುಮಕ್ಕಳ ಆಸ್ತಿ ಹಕ್ಕು/ವಾರಸುದಾರಿಕೆ ಹಾಗೂ ಜೀವನಾಂಶಗಳ ಕುರಿತ ಕಾನೂನುಗಳನ್ನು ಅದರಲ್ಲಿ ರೂಪಿಸಲಾಗಿತ್ತು. ಈ ಪರಿಷ್ಕರಿತ ಆವೃತ್ತಿಯಲ್ಲಿ ಮಹಿಳೆಗೆ ವಿಚ್ಛೇದನಕ್ಕೆ ಅವಕಾಶವಿತ್ತು. ವಿಧವೆಗೆ ಗಂಡನ ಆಸ್ತಿಯ ಪೂರಾ ಹಕ್ಕು ಹಾಗೂ ಮದುವೆಯಾದ ಹೆಣ್ಣುಮಕ್ಕಳಿಗೆ ತವರಿನ ಆಸ್ತಿ ಹಕ್ಕುಗಳು ಪ್ರಸ್ತಾಪಿಸಲ್ಪಟ್ಟಿದ್ದವು. ಅಲ್ಲದೇ ಯಾರು ಹಿಂದೂ ಎಂದು ವಿವರಿಸುವಾಗ ಎಲ್ಲ ಜಾತಿಗಳೂ ಏಕರೂಪ ಸಂಹಿತೆಗೆ ಒಳಪಡುತ್ತಿದ್ದುದರಿಂದ ಅದು ಜಾತಿವ್ಯವಸ್ಥೆಯನ್ನು ಭಗ್ನಗೊಳಿಸುವಂತಿತ್ತು.

ಹೀಗೆ ಪುರುಷ ಪ್ರಧಾನ ಸಮಾಜಕ್ಕೂ, ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಗೂ ಬದಲಾವಣೆ ತರಬಯಸಿದ್ದ ಹಿಂದೂ ಕೋಡ್ ಬಿಲ್ ಮಹಿಳಾ ಸಮಾನತೆ ಮತ್ತು ಹಕ್ಕುಗಳನ್ನು ಎತ್ತಿ ಹಿಡಿಯುವಂತಿತ್ತು. ಆದರೆ ಅದು ಮೂರ‍್ನಾಲ್ಕು ವರ್ಷ ಸಂಸತ್ತಿನಲ್ಲಿ ಹಲವು ವಿವಾದ, ಚರ್ಚೆಗೊಳಗಾಯಿತು. ಕಾಂಗ್ರೆಸ್ಸಿನ ಕೆಲವು ಧುರೀಣರೇ ಅದನ್ನು ವಿರೋಧಿಸಿದರು.  ನೆಹರೂ ಅದನ್ನು ಭಾಗಶಃ ಚರ್ಚೆಗಾದರೂ ಪರಿಗಣಿಸಬೇಕೆಂದು ಯತ್ನಿಸಿದರು. ಆದರೆ ಅದೂ ಸಾಧ್ಯವಾಗದೇ ಕೊನೆಗೆ ಮತಕ್ಕೆ ಹಾಕಿದಾಗ ೨೮/೨೩ ಮತಗಳ ಅಂತರದಲ್ಲಿ ತಿರಸ್ಕೃತವಾಯಿತು. ಇದರಿಂದ ಅತೀವ ನೊಂದ ಅಂಬೇಡ್ಕರ್ ‘ಅಳುವವರಿಲ್ಲದೇ ಶೋಕಿಸುವವರಿಲ್ಲದೇ ಹಿಂದೂ ಕೋಡ್ ಬಿಲ್ ಕೊಲೆಯಾಯಿತು’ ಎಂದೇ ಪ್ರತಿಕ್ರಿಯಿಸಿ ಕಾನೂನು ಮಂತ್ರಿ ಪದವಿಗೆ ರಾಜೀನಾಮೆ ನೀಡಿದರು.

ಬದ್ಧತೆ ಎಂದರೆ ಅದು. ಆತ್ಮಗೌರವ ಗಳಿಸಿಕೊಳ್ಳುವ ಹಾದಿಯಲ್ಲಿ ಜನಪರ ಹೋರಾಟಗಾರರು ಆಮಿಷಗಳಿಂದ ದೂರವುಳಿಯುವುದು ತುಂಬ ಮುಖ್ಯವಾಗಿದೆ. ಅವರ ವ್ಯಕ್ತಿತ್ವದಿಂದ ನಾವು ಕೆಲ ಸಂಗತಿಗಳನ್ನು ಅವಶ್ಯವಾಗಿ ಕಲಿಯಬೇಕಿದೆ.

ಒಂದಿಡೀ ಸಮುದಾಯದ ಪ್ರತಿನಿಧಿಯಾಗಿ ಮುಂಚೂಣಿ ಹೋರಾಟಗಾರರಾಗಿದ್ದ ಅಂಬೇಡ್ಕರ್ ಜನಸಂಪರ್ಕದ ಧಾವಂತ, ಖ್ಯಾತಿಯಿಂದಾಚೆ ತಮ್ಮ ನೇರನಡೆನುಡಿಯ ವ್ಯಕ್ತಿತ್ವವನ್ನು ಕಾಯ್ದುಕೊಂಡರು. ಆರೋಗ್ಯ, ವೈಯಕ್ತಿಕ ಸುಖಗಳನ್ನು ಗಮನಿಸದೆ ಸತತ ಸಂಘಟನೆ-ಹೋರಾಟ-ಅಧ್ಯಯನ-ಬರವಣಿಗೆಯಲ್ಲಿ ತೊಡಗಿದ ಅವರ ಶಕ್ತಿಮೂಲ ಅವರ ಬದ್ಧತೆಯೇ ಆಗಿತ್ತು. ತಮ್ಮ ಜೀವಮಾನದುದ್ದಕ್ಕೂ ಅಂಬೇಡ್ಕರ್ ರಾಜಿ ಆಮಿಷಗಳಿಗೆ ಬಲಿಯಾಗದಂತೆ ನೈತಿಕತೆಯ ಕಾವಲಿಗೆ ನಿಷ್ಠುರತೆಯನ್ನು ಉಳಿಸಿಕೊಂಡುಬಂದರು. ವ್ಯಕ್ತಿಪೂಜೆಯನ್ನು ಅವರು ಒಪ್ಪುತ್ತಿರಲಿಲ್ಲ. ತಮ್ಮ ಬರಹ-ಭಾಷಣಗಳಲ್ಲಿ ಯಾವುದೇ ವ್ಯಕ್ತಿ-ಸಿದ್ಧಾಂತವನ್ನು ಪ್ರಶ್ನೆಗಳಿಲ್ಲದೇ ಅವರು ಒಪ್ಪಿಕೊಂಡಿದ್ದೇ ಇಲ್ಲ. ಈ ವಿಷಯದಲ್ಲಿ ಬುದ್ಧನೂ, ಬೌದ್ಧಧರ್ಮವೂ ಹೊರತಾಗಿರಲಿಲ್ಲ. ಜೊತೆಗೆ ಅಂಬೇಡ್ಕರರದು ಆತ್ಮಮರುಕದ ಛಾಯೆಯಿಲ್ಲದ ಚಿಂತನೆ. ಕೌಟುಂಬಿಕ, ಆರ್ಥಿಕ ಸಂಕಷ್ಟದಲ್ಲಿದ್ದಾಗಲೂ, ಒಂಟಿಯಿರುವಾಗಲೂ ಅವರ ವ್ಯಕ್ತಿತ್ವದಲ್ಲಿ ಆತ್ಮಮರುಕದ ಛಾಯೆ ಸುಳಿಯಲಿಲ್ಲ. ಅತಿಭಾವುಕರೆನಿಸಿಕೊಂಡ, ಆ ಕಾರಣಕ್ಕೇ ‘ಸೋಲುವ’ ಹೆಣ್ಣುಮಕ್ಕಳು ಈ ಗುಣಗಳನ್ನು ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ. ಅಲ್ಲದೆ ಇವು ಪ್ರಶ್ನಿಸದೇ ಏನನ್ನೂ ಒಪ್ಪಿಕೊಳ್ಳದ ವೈಜ್ಞಾನಿಕ ಮನೋಭಾವವನ್ನೂ, ದೂರದೃಷ್ಟಿಯನ್ನೂ, ಮುಕ್ತಮನಸ್ಥಿತಿಯನ್ನೂ ಬೆಳೆಸುತ್ತವೆ.

ಭಾರತೀಯ ಮಹಿಳಾವಾದ ಮತ್ತು ಅಂಬೇಡ್ಕರ್

ಸರ್ವಸಮಾನತೆ ಸಾರುವ ಸಂವಿಧಾನ ಬಂದು ೬೫ ವರ್ಷಗಳಾದ ನಂತರವೂ ಹಿಂದೂ ದೇವಾಲಯದೊಳಗೆ ಮಹಿಳೆಗೆ ಪ್ರವೇಶ ನೀಡಬೇಕೋ ಬೇಡವೋ ಎಂಬ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಮಹಿಳಾ ಮೀಸಲಾತಿ ಕುರಿತು ದಶಕಗಳಿಂದ ಮಾತು ಕೇಳಿಬರುತ್ತಿದ್ದರೂ ಬೆರಳೆಣಿಕೆಯಷ್ಟು ಮಹಿಳಾ ರಾಜಕಾರಣಿಗಳಿದ್ದಾರೆ. ಕಾನೂನಿನ ಒತ್ತಾಯವಿಲ್ಲದಿದ್ದರೆ ರಾಜಕೀಯ ಪಕ್ಷಗಳಾಗಲೀ, ಸಮಾಜವಾಗಲೀ ಅವಕಾಶವಂಚಿತರಿಗೆ ಯಾವ ಅವಕಾಶವನ್ನೂ ಮೀಸಲಿಡುವುದಿಲ್ಲ ಎನ್ನುವುದು ಮತ್ತೆಮತ್ತೆ ಸಾಬೀತಾಗುತ್ತಿದೆ. ಕಾನೂನಿನ ಬೆಂಬಲವಿದ್ದರೂ ಅದನ್ನು ನಿರುಪಯೋಗಿಯಾಗಿಸುವ ರಾಜಕೀಯ ಹುನ್ನಾರಗಳೂ ದಿನನಿತ್ಯ ಸಂಭವಿಸುತ್ತಿವೆ.

ಈ ಎಲ್ಲ ತಾರತಮ್ಯಕ್ಕೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣವಾಗಿರುವುದು ಜಾತಿಪದ್ಧತಿ. ಅದು ಭಾರತದಲ್ಲಿ ಹೇಗೆ ಹುಟ್ಟಿತು ಎಂಬ ಬಗ್ಗೆ ಅತ್ಯಂತ ವೈಜ್ಞಾನಿಕ ವಿವರಣೆ ನೀಡಿದವರು ಅಂಬೇಡ್ಕರ್. ಜಾತಿ ವಿನಾಶವಾದ ಹೊರತು ಹೆಣ್ಣಿಗೆ ಪರಿಪೂರ್ಣ ಬಿಡುಗಡೆ ಒದಗಲಾರದೆಂದು ಭಾರತದ ಇವತ್ತಿನ ಸ್ತ್ರೀವಾದಿಗಳು, ಮಹಿಳೆಯರು ಅರ್ಥ ಮಾಡಿಕೊಂಡದ್ದು ಅಂಬೇಡ್ಕರರ ಜಾತಿ ವಿಶ್ಲೇಷಣೆಯನ್ನು ಓದಿದ ಬಳಿಕ. ಜಾತಿವ್ಯವಸ್ಥೆಯ ಉಪಉತ್ಪನ್ನವಾದ ಪಿತೃಪ್ರಾಧಾನ್ಯತೆಯ ಆಳವಿಸ್ತಾರಗಳನ್ನರಿಯಲು ಸಾಧ್ಯವಾಗಿಸಿದ್ದೂ ಅಂಬೇಡ್ಕರರ ಚಿಂತನೆಗಳೇ.

ತಮ್ಮ ಜಾತಿವಿನಾಶ ಪ್ರಬಂಧದಲ್ಲಿ ಅಂಬೇಡ್ಕರ್ ಹೇಳಿರುವಂತೆ ಪ್ರಾಚೀನ ಕಾಲದ ಭಾರತೀಯ ಸಮಾಜ ವರ್ಣ, ಜಾತಿಗಳಾಗಿ ಶ್ರೇಣೀಕರಣಗೊಳ್ಳಲು ಪ್ರಾರಂಭಿಸಿದ ದಿನವೇ ಹೆಣ್ಣಿನ ಹಕ್ಕು, ಅಧಿಕಾರಗಳು ಮೊಟಕುಗೊಳ್ಳಲೂ ಶುರುವಾದವು. ಜಾತಿಪದ್ಧತಿ ಹುಟ್ಟಿದ್ದು ಹೆಣ್ಣಿನ ಲೈಂಗಿಕತೆಯನ್ನು ಚೌಕಟ್ಟಿಗೊಳಪಡಿಸಿ ನಿರ್ಬಂಧಿಸುವ ಮೂಲಕ. ಜಾತಿಪದ್ಧತಿ ಬೆಳೆದಿದ್ದು ಒಳವಿವಾಹ ಚಾಲ್ತಿಗೆ ತರುವ ಮೂಲಕ. ಜಾತಿಪದ್ಧತಿ ಉಳಿದಿದ್ದು ತನಗೆ ಲಭ್ಯವಿರುವ ಹೆರುವ ಹೆಣ್ಣುಗಳನ್ನು ತನಗೆಂದೇ ಕಾಯ್ದಿಟ್ಟುಕೊಳ್ಳುವ ಮೂಲಕ. ಒಟ್ಟಾರೆ ಜಾತಿ ವ್ಯವಸ್ಥೆಯೆನ್ನುವುದು ಹೆಣ್ಣಿನ ಲೈಂಗಿಕತೆ, ಆಯ್ಕೆಯನ್ನಷ್ಟೆ ನಿರ್ಬಂಧಗೊಳಿಸಲಿಲ್ಲ; ಅವಳನ್ನು ಶಾಶ್ವತವಾಗಿ ನಿರ್ಬಂಧಿತ ಸ್ಥಿತಿಯಲ್ಲಿಡಲು ಅನುಕೂಲವಾಗುವ ಆಚರಣೆ, ರೂಢಿ, ಪರಿಕಲ್ಪನೆಗಳನ್ನು ಜಾರಿ ಮಾಡಿತು. ಜ್ಞಾನ, ಅವಕಾಶ, ಆರ್ಥಿಕ ಸಂಪನ್ಮೂಲ, ಅಧಿಕಾರ ಈ ಎಲ್ಲ ನೆಲೆಗಳಿಂದಲೂ ಹೆಣ್ಣನ್ನು ವಂಚಿಸಿ ಅಂಚಿಗೆ ತಳ್ಳಲಾಯಿತು. ಭಾರತೀಯ ಸಮಾಜದ ಸಾಮಾಜಿಕ, ಆರ್ಥಿಕ ಅಸಮಾನ ರಚನೆಗಳೇ ಲಿಂಗತಾರತಮ್ಯದ ಮೂಲ ಕಾರಣವಾಗಿ ಇವತ್ತಿಗೂ ಮುಂದುವರೆದಿವೆ. ಅವಮರ್ಯಾದಾ ಹತ್ಯೆ-ಖಾಪ್ ಪಂಚಾಯ್ತಿಗಳು ಸಂಭವಿಸುತ್ತಿವೆ.

ವಾಸ್ತವ ಹೀಗಿದ್ದರೂ ‘ಸ್ತ್ರೀವಾದವೆಂಬುದೇ ಪಾಶ್ಚಾತ್ಯ ಪರಿಕಲ್ಪನೆ. ಭಾರತದಲ್ಲಿ ಲಿಂಗವಿಶಿಷ್ಟ ಜವಾಬ್ದಾರಿಗಳಿವೆ; ಲಿಂಗ ಅನನ್ಯತೆಯ ಕುರುಹಾದ ಆಚರಣೆಗಳಿವೆಯೇ ಹೊರತು ಲಿಂಗತಾರತಮ್ಯ ಇಲ್ಲ’ ಎನ್ನುವುದು ಸನಾತನ ಭಾರತ ಸಂಸ್ಕೃತಿಯ ಪ್ರತಿಪಾದಕರ ಆರೋಪ. ಆದರೆ ಭಾರತದಲ್ಲಿ ಅನಾದಿಯಿಂದ ರೂಪುಗೊಂಡಿದ್ದ ಮುಕ್ತ ಚಿಂತನೆಯ ಫಲವೋ ಎನ್ನುವಂತಿರುವ ಅಂಬೇಡ್ಕರ್ ಚಿಂತನೆಗಳು ಇಲ್ಲಿನ ಸ್ತ್ರೀವಾದಿ ಹೋರಾಟಗಳ ತಾತ್ವಿಕತೆಯಾಗುವಷ್ಟು ಗಟ್ಟಿತನ ಪಡೆದಿವೆ. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮೂರು ಮಾರ್ಗಗಳ ಅವರ ದೇಶೀ ಮಾದರಿಯು ಮಹಿಳಾ ಹಕ್ಕು ಜಾಗೃತಿ ಮೂಡಿಸಲು ಕ್ರಾಂತಿಕಾರಕ ಮಾದರಿಯಾಗಿದೆ.

ಭಾರತದಲ್ಲಿ ಮೊದಲ ಹಂತದ ಮಹಿಳಾ ಚಳುವಳಿ ಜಾತಿಪ್ರಶ್ನೆಯನ್ನು, ಅಂಬೇಡ್ಕರ್ ಚಿಂತನೆಗಳನ್ನೂ ಗಂಭೀರವಾಗಿ ಪರಿಗಣಿಸಲಿಲ್ಲ. ಅದು ವರ್ಗ-ಅಧಿಕಾರ-ಕುಟುಂಬ ರಚನೆಗೆ ಸಂಬಂಧಿಸಿದ ಪ್ರಶ್ನೆಗಳನ್ನೇ ಕೈಗೆತ್ತಿಕೊಂಡಿತ್ತು. ಆದರೆ ನಂತರ ಜಾತಿಯೆಂಬ ವಾಸ್ತವವನ್ನುದ್ದೇಶಿಸದ ಹೊರತು ಇಲ್ಲಿ ಯಾವ ಹೋರಾಟವೂ ಅರ್ಥಪೂರ್ಣವಾಗದೆಂಬ ಅರಿವಾಗಿ ಉಮಾ ಚಕ್ರವರ್ತಿ, ವಿ. ಗೀತಾ, ಶರ್ಮಿಳಾ ರೇಗೆ ಮೊದಲಾದ ಮಹಿಳಾ ಚಿಂತಕರು ಜಾತಿ ಮತ್ತು ಲಿಂಗಪ್ರಶ್ನೆಯನ್ನು ಒಟ್ಟೊಟ್ಟಿಗೆ ನೋಡತೊಡಗಿದರು. ಅದಕ್ಕೆ ಆಧಾರವಾಗಿ ಅಂಬೇಡ್ಕರರ ಚಿಂತನೆಗಳನ್ನು ಬಳಸಿಕೊಂಡರು. ಆದರೂ ಭಾರತದ ಮಹಿಳೆಯರಿಗೆ ಜಾತಿ-ಧರ್ಮ-ಕುಟುಂಬಗಳು ಒಂದರೊಳಗೊಂದು ಹೆಣೆದುಕೊಂಡಿರುವ ಕಾರಣವಾಗಿ ಪರಿಣಾಮಕಾರಿ ಜಾತ್ಯತೀತ ಹೋರಾಟ ಕಟ್ಟುವುದು ಕಷ್ಟಸಾಧ್ಯವಾಗಿದೆ.

ಅದಕ್ಕೆ ಕಾರಣ ಜಾತಿ-ಧರ್ಮಗಳೆಂಬ ಸಂಸ್ಥೆಗಳು ತಮ್ಮ ರಚನೆಯಲ್ಲಿಯೇ ಮಹಿಳಾ ವಿರೋಧಿಗಳೆಂದು ಜನರಿಗೆ ಅರ್ಥ ಮಾಡಿಸಲು ಚಳುವಳಿಗೆ ಸಾಧ್ಯವಾಗದೇ ಇರುವುದು. ಒಂದು ಕಡೆ ಜಾತಿಧರ್ಮದ ಆಧಾರದ ಮೇಲೆ ಮನುಷ್ಯರನ್ನು ಒಡೆಯುವ, ಅಸಹನೆ ಹುಟ್ಟಿಸುವ ಕೋಮುವಾದವು ಮಹಿಳೆಯರನ್ನು ದಾಳವಾಗಿ ಬಳಸಿಕೊಳ್ಳುತ್ತಿದೆ. ಕೋಮುವಾದವು ಅರಿವಿನ ಬೆಳಕಿನೆಡೆಗೆ ಒಯ್ಯಬಹುದಾದ ಧರ್ಮ ಎಂಬ ಸಂಸ್ಥೆಯನ್ನು ಸಂಪೂರ್ಣ ಢಾಂಭಿಕ ಆಚರಣೆಗಳಿಗಷ್ಟೆ ಸೀಮಿತಗೊಳಿಸಿಬಿಟ್ಟಿದೆ. ಭಾರತ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ, ಹಿಂದೂತ್ವವನ್ನು ತನ್ನೆಲ್ಲ ಅಜೆಂಡಾಗಳ ಕಾರ್ಯಸೂಚಿಯಾಗಿಸಿಕೊಂಡಿರುವ ರಾಜಕಾರಣವು ಭಾರತೀಯ ಸಂಸ್ಕೃತಿಯನ್ನು ವೈಭವೀಕರಿಸುತ್ತ ಅದರ ಮುಖ್ಯ ವಕ್ತಾರಳಾಗಿ, ವಾಹಕಳಾಗಿ ಹೆಣ್ಣನ್ನು ಕಾಣಿಸುತ್ತಿದೆ. ಎಲ್ಲ ಧಾರ್ಮಿಕ, ಸಾಂಸ್ಕೃತಿಕ ಸಂಕೇತಗಳಲ್ಲಿ ಹೆಣ್ಣನ್ನು ಯಥೇಚ್ಛವಾಗಿ ಬಳಸಿಕೊಳ್ಳುತ್ತಿದೆ. ಭಾರತದ ಬಹುಪಾಲು ಹೆಣ್ಮಕ್ಕಳು ಧರ್ಮ ಮತ್ತದು ವಿಧಿಸಿರುವ ಕೌಟುಂಬಿಕ-ನೈತಿಕ ಚೌಕಟ್ಟಿನಿಂದ ಹೊರಬರಲಾರದವರಾಗಿ ಉಸಿರು ಕಟ್ಟಿಸುವ ಬಿಗಿಯನ್ನು ಸುರಕ್ಷೆಯೆಂದು ನಂಬಿದ್ದಾರೆ.

ಇನ್ನೊಂದು ಕಡೆ ಮಾರುಕಟ್ಟೆಯು ಸೃಷ್ಟಿಸಿರುವ ಭ್ರಮಾತ್ಮಕ ಜಗತ್ತಿನಲ್ಲಿ, ಬಂಡವಾಳ ಹಾಕಿರುವ ಉದ್ದಿಮೆಪತಿಗಳ ಲಾಭಕೋರ ನಡೆಗಳಲ್ಲಿ ಕೊನೆಯ ಬಲಿಪಶು ಹೆಣ್ಣು ಮತ್ತವಳ ದೇಹವೇ ಆಗಿದೆ. ಎಲ್ಲವೂ ಸರಕಾಗಿರುವ ಕಾಲದಲ್ಲಿ ಹೆಣ್ಣು, ಹೆಣ್ತನ, ಗರ್ಭಕೋಶ ಎಲ್ಲವೂ ಕಚ್ಛಾವಸ್ತುಗಳಾಗಿವೆ. ಸರಕೀಕರಣ ಸೃಷ್ಟಿಸಿರುವ ಕೊಳ್ಳುಬಾಕತನಕ್ಕೆ ಹಣವೇ ಮೌಲ್ಯ. ಅಲಂಕರಣವೇ ಸೌಂದರ್ಯ. ಆರೋಗ್ಯ, ನೈತಿಕತೆ, ಸಹಬಾಳ್ವೆ, ಚಿಂತನೆಗಳಿಗೆ ಸಮಯವೇ ಇಲ್ಲವಾಗಿದೆ.

ಹೀಗೆ ಧರ್ಮರಾಜಕಾರಣ ಮತ್ತು ಮಾರುಕಟ್ಟೆ ಹುಟ್ಟುಹಾಕಿರುವ ಅನೂಹ್ಯ ಸಾಮಾಜಿಕ ಬದಲಾವಣೆಗಳು ಮಹಿಳೆಯರ ಮತ್ತು ಶೋಷಿತರ ಚಳುವಳಿ ಕಟ್ಟಲು ಇರುವ ದೊಡ್ಡ ತೊಡಕುಗಳಾಗಿವೆ. ಅಷ್ಟೇ ಅಲ್ಲ, ಧರ್ಮ ಮತ್ತು ಮಾರುಕಟ್ಟೆಗಳು ರಾಜಕಾರಣದೊಂದಿಗೆ ಹಸ್ತಕ್ಷೇಪ ಮಾಡುತ್ತಿರುವುದರಿಂದಲೇ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಜನತಂತ್ರ ದುರ್ಬಲಗೊಳ್ಳುತ್ತ, ಸಾಂಕೇತಿಕಗೊಳ್ಳುತ್ತ ಸಾಗುತ್ತಿದೆ. ಹೀಗಿರುತ್ತ ಡೆಮಾಕ್ರಸಿ, ಧರ್ಮ, ರಾಷ್ಟ್ರೀಯತೆ, ಮಾರುಕಟ್ಟೆ ಮತ್ತಿತರ ‘ಒಪ್ಪಿತ’ ವ್ಯವಸ್ಥೆಗಳನ್ನು ಪ್ರಶ್ನಿಸುತ್ತಲೇ ಅವನ್ನು ಅರ್ಥಪೂರ್ಣಗೊಳಿಸುವ ಜವಾಬ್ದಾರಿ ಮಹಿಳೆಯರ ಮೇಲಿದೆ. ಜೊತೆಗೆ ಮದುವೆ ಮತ್ತು ಕುಟುಂಬ ಎಂಬ ಸಾಮಾಜಿಕ ರಚನೆಗಳನ್ನು ಹಾಗೂ ಧರ್ಮ/ ರಾಜಕಾರಣಗಳನ್ನು ಚಲನಶೀಲಗೊಳಿಸುವ ಜವಾಬ್ದಾರಿಯೂ ಹೆಣ್ಮಕ್ಕಳ ಮೇಲಿದೆ.

ಎಂದೇ ಭಾರತೀಯರ ಕೌಟುಂಬಿಕ ಹಾಗೂ ವೈಯಕ್ತಿಕ ಬದುಕಿನಲ್ಲಿ ಬದಲಾವಣೆ ತರುವತ್ತ ಜನಚಳುವಳಿಗಳು ಗಮನ ಹರಿಸಬೇಕಿದೆ. ಅದರಲ್ಲೂ ಮಹಿಳೆಗೆ ಈಗ ಎರಡೆರಡು ಗಹನ ಜವಾಬ್ದಾರಿಗಳಿವೆ: ಒಂದು ಸೆಲ್ಫಿ ಮತ್ತು ಇನ್ನೊಂದು ಗ್ರೂಪಿ. ಕುಟುಂಬ ಮತ್ತು ಸಮಾಜ. ಈ ಎರಡನ್ನೂ ನಿಭಾಯಿಸುವ ಶಕ್ತಿಯನ್ನೂ, ಬೆಸೆಯುವ ಪ್ರೀತಿಯನ್ನೂ ಮಹಿಳೆ ಬೆಳೆಸಿಕೊಳ್ಳಬೇಕು. ಗೂಡುಗಳ ಬೆಳಗುವ ಜೋತಮ್ಮನಾಗುತ್ತಲೆ ಲೋಕ ಬೆಳಗುವ ದೀವಟಿಗೆಯೂ ಆಗಬೇಕು. ಅದು ಮಹಿಳಾ ರಾಜಕಾರಣ. ಅಂಬೇಡ್ಕರ್ ದಿನಾಚರಣೆಯ ಹೊತ್ತಿಗೆ, ಬಾಬಾ ಅವರ ನೆನಪಿಗೆ ಹೆಣ್ಣುಮಕ್ಕಳು ಈ ದಿಕ್ಕಿನತ್ತ ಚಲಿಸುವರೆಂದು ನಂಬಬಹುದೆ?