ಮಹಿಳಾ ದಿನದ ಹೊಸ್ತಿಲಲ್ಲಿ ಒಂದಿಷ್ಟು ಅಂಕಿಅಂಶ- ಆಕಾರ್‌ ಪಟೇಲ್

ಮೀಸಲಾತಿಯ ಅನುಷ್ಠಾನಕ್ಕೆ ವಿದ್ಯಾರ್ಥಿ ಸಂಘ ಒಗ್ಗೂಡಿ ಒತ್ತಾಯಿಸಿದ್ದು ಜೆಎನ್‌ಯುನಲ್ಲಿ ಮಾತ್ರ. ಅಲ್ಲದೇ, ಜೆಎನ್‌ಯು ವಿದ್ಯಾರ್ಥಿಗಳ ಪೈಕಿ ಶೇಕಡ 60ರಷ್ಟು ಜನ ಮಹಿಳೆಯರು ಎಂಬ ಸಂಗತಿಗಳನ್ನು ಅವರು ಹೇಳಿದರು. ಜೆಎನ್‌ಯು ವಿದ್ಯಾರ್ಥಿಗಳು ಯಾರ ಪರವಾಗಿ ಚಳವಳಿ ನಡೆಸುತ್ತಿದ್ದಾರೆ ಎಂಬುದನ್ನು ಹೇಳುವಾಗ ಕನ್ಹಯ್ಯಾ ಅವರು ದಲಿತರು, ಆದಿವಾಸಿಗಳು ಮತ್ತು ಮಹಿಳೆಯರ ಉಲ್ಲೇಖ ಮಾಡಿದ್ದನ್ನು ನಾನು ಗುರುತಿಸಿದೆ.

ವಿದ್ಯಾರ್ಥಿಗಳು ಕೂಗಿದ ‘ಸ್ವಾತಂತ್ರ್ಯ’ದ ಘೋಷಣೆಯು ಪುರುಷ ಪ್ರಧಾನ ವ್ಯವಸ್ಥೆಯಿಂದ ಬಿಡುಗಡೆ ಬೇಕು ಎಂಬ ಆಗ್ರಹವನ್ನು ಎಲ್ಲಾ ಸಂದರ್ಭಗಳಲ್ಲೂ ಒಳಗೊಂಡಿದೆ. ಇದು ಸಾಮಾನ್ಯವಾದ ಆಗ್ರಹ ಅಲ್ಲ, ಇದನ್ನು ನಾವೆಲ್ಲರೂ ಬೆಂಬಲಿಸಬೇಕು. ಭಾರತದಲ್ಲಿ ಮಧ್ಯಮ ವರ್ಗದ ಪುರುಷ ಆಗಿರುವುದು ಆರಾಮದ ಸಂಗತಿ. ಏಕೆಂದರೆ ಅದರ ಜೊತೆ ಕೆಲವು ಅನುಕೂಲಗಳೂ ಸಿಗುತ್ತವೆ.

ಆದರೆ, ಭಾರತೀಯ ಮಹಿಳೆ ಯಾವ ವರ್ಗಕ್ಕೇ ಸೇರಿದ್ದರೂ, ಪಿತೃ ಪ್ರಧಾನ ವ್ಯವಸ್ಥೆಯ ಪೂರ್ವಗ್ರಹಗಳಿಗೆ ತುತ್ತಾಗಬೇಕಾಗುತ್ತದೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ಭಾರತದಲ್ಲಿ ಮಾತ್ರ ಅಲ್ಲ. ಆದರೆ, ಭಾರತದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆ, ಇನ್ನೂ ಹಲವು ‘ಭಾರ’ಗಳನ್ನು ಹೊರಬೇಕಾಗುತ್ತದೆ. ಮೊದಲು ಇದ್ದ ‘ಗೌರವ’, ದೌರ್ಜನ್ಯದ ನಂತರ  ಇಲ್ಲವಾಗುತ್ತದೆ ಎಂಬ ಭಾವ ಕೂಡ ಇಲ್ಲಿದೆ.

ದೌರ್ಜನ್ಯಕ್ಕೆ ತುತ್ತಾದ ನಂತರವೂ ಮಹಿಳೆಯರು ಸಂಕಷ್ಟ ಅನುಭವಿಸುವ ಭಯಾನಕ ವರದಿಗಳು ಯಾವತ್ತೂ ಇರುತ್ತವೆ. ನಾನು ಈ ಬರಹ ಬರೆಯುತ್ತಿದ್ದ ಹೊತ್ತಿನಲ್ಲಿ, 13 ವರ್ಷ ವಯಸ್ಸಿನ ಬಾಲೆಯೊಬ್ಬಳಿಗೆ ಸಾರ್ವಜನಿಕವಾಗಿ ಚಾಟಿ ಏಟು ನೀಡಿದ ಸುದ್ದಿ ಬಂತು. ಇದಕ್ಕೆ ಕಾರಣ, ಆಕೆ ತನ್ನ ತಂದೆಯಿಂದಲೇ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿದ್ದು! ಲೈಂಗಿಕ ದೌರ್ಜನ್ಯದ ವಿಚಾರಕ್ಕೆ ಬಂದಾಗ ಮಹಿಳೆಯರು ಸಮಾಜ ಮತ್ತು ಪ್ರಭುತ್ವವನ್ನು ನಂಬದೆ ಇರುವುದು ಆಶ್ಚರ್ಯದ ಸಂಗತಿಯೇನೂ ಅಲ್ಲ, ಅಲ್ಲವೇ?

ಇದಕ್ಕೆ ಸಂಬಂಧಿಸಿದ ಕೆಲವು ಅಂಕಿ–ಅಂಶಗಳು ಓದುಗರಲ್ಲಿ ಕುತೂಹಲ ಮೂಡಿಸಬಲ್ಲವು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಬಳಕೆಗಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ನಡೆಸುತ್ತದೆ. ತಾಯಿ ಮತ್ತು ಮಗುವಿನ ಆರೋಗ್ಯವನ್ನು ಈ ಸಮೀಕ್ಷೆ ಮೂಲಕ ತಿಳಿಯಲಾಗುತ್ತದೆ. ಸಮೀಕ್ಷೆಯಲ್ಲಿ ಕಂಡುಕೊಂಡ ವಿಚಾರಗಳನ್ನು ಸಚಿವಾಲಯವು ನೀತಿ ನಿರೂಪಣೆ ವೇಳೆ ಬಳಸಿಕೊಳ್ಳುತ್ತದೆ. ದೌರ್ಜನ್ಯಕ್ಕೆ ಸಂಬಂಧಿಸಿದ ಮಾಹಿತಿಯೂ ಈ ಸಮೀಕ್ಷೆಯಲ್ಲಿ ಇರುತ್ತದೆ.

ಇಲ್ಲಿ ಒಂದು ಸಂಕೀರ್ಣ ವಿಚಾರ ಇದೆ. ಪತಿ ತನ್ನ ಪತ್ನಿಯ ಮೇಲೆ ನಡೆಸುವ ಲೈಂಗಿಕ ದೌರ್ಜನ್ಯ  ಎಂದರೆ ವಿವಾಹದೊಳಗಿನ ಅತ್ಯಾಚಾರ ಭಾರತದಲ್ಲಿ ಅಪರಾಧ ಅಲ್ಲ. ಹಾಗಾಗಿ, ಸಮೀಕ್ಷೆಯು ಈ ಮಾಹಿತಿಯನ್ನು ಪಡೆಯುವುದಿಲ್ಲ. ಸಮೀಕ್ಷೆ ವೇಳೆ, 15ರಿಂದ 49 ವರ್ಷ ವಯಸ್ಸಿನೊಳಗಿನ 83,703 ಮಹಿಳೆಯರಿಂದ ಮಾಹಿತಿ ಪಡೆಯಲಾಗಿದೆ. ಸಮೀಕ್ಷೆಯಲ್ಲಿ ಕಂಡುಕೊಂಡ ಅಂಶಗಳು ಹೀಗಿವೆ:

* ಲೈಂಗಿಕ ದೌಜ್ಯನ್ಯಕ್ಕೆ ಗುರಿಯಾಗುವ ಪ್ರತಿ ನೂರು ಮಹಿಳೆಯರ ಪೈಕಿ ಒಬ್ಬ ಮಹಿಳೆ ಮಾತ್ರ ಅದರ ಬಗ್ಗೆ ಪೊಲೀಸರಿಗೆ ದೂರು ನೀಡುತ್ತಾಳೆ.

* ಲೈಂಗಿಕ ಸುಖ ನೀಡಲು ಪತ್ನಿ ನಿರಾಕರಿಸಿದಾಗ, ಶೇಕಡ 5.7ರಷ್ಟು ಪುರುಷರು ಬಲವಂತವಾಗಿ ಅದನ್ನು ಪಡೆಯುತ್ತಾರೆ. ಶೇಕಡ 19.8ರಷ್ಟು ಪುರುಷರು ಪತ್ನಿಯ ಮೇಲೆ ಕೋಪಗೊಂಡು ಆಕೆಯನ್ನು ನಿಂದಿಸುತ್ತಾರೆ. ಶೇಕಡ 6ರಷ್ಟು ಪುರುಷರು ಪತ್ನಿಗೆ ಹಣಕಾಸಿನ ಸಹಾಯ ನಿರಾಕರಿಸುತ್ತಾರೆ. ಶೇಕಡ 4.2ರಷ್ಟು ಪುರುಷರು ಅನ್ಯ ಮಹಿಳೆ ಜೊತೆ ಲೈಂಗಿಕ ಸಂಪರ್ಕ ಹೊಂದುತ್ತಾರೆ.

* ಶಿಕ್ಷಣ ಪಡೆಯದ ಶೇಕಡ 44ರಷ್ಟು ಮಹಿಳೆಯರು ತಮಗೆ 15 ವರ್ಷ ವಯಸ್ಸು ತುಂಬಿದ ನಂತರ ಒಂದಲ್ಲ ಒಂದು ಸಂದರ್ಭದಲ್ಲಿ ಹಿಂಸೆಗೆ ಗುರಿಯಾಗಿದ್ದಾರೆ. ಶೇಕಡ 26ರಷ್ಟು ಮಹಿಳೆಯರು ಕಳೆದ 12 ತಿಂಗಳ ಅವಧಿಯಲ್ಲಿ ಹಿಂಸೆ ಅನುಭವಿಸಿದ್ದಾರೆ. ಮಹಿಳೆ ಶಿಕ್ಷಣ ಪಡೆದಿದ್ದಾಳೆ ಎಂದಾದರೆ, ಹಿಂಸೆಗೆ ಈಡಾಗುವ ಪ್ರಮಾಣ ಕಡಿಮೆಯಾಗುತ್ತದೆ.

* ಹಿಂಸೆಗೆ ಗುರಿಯಾದ ಪ್ರತಿ ಮೂರು ಮಹಿಳೆಯಲ್ಲಿ ಇಬ್ಬರು ಯಾರಿಂದಲೂ ನೆರವು ಯಾಚಿಸಿಲ್ಲ, ಆ ಬಗ್ಗೆ ಯಾರ ಬಳಿಯೂ ಹೇಳಿಕೊಂಡಿಲ್ಲ.
* ಲೈಂಗಿಕ ಹಿಂಸೆಯನ್ನು ಮಾತ್ರ ಎದುರಿಸಿದ ಮಹಿಳೆಯರ ಪೈಕಿ ಶೇಕಡ 85ರಷ್ಟು ಜನ ಆ ಬಗ್ಗೆ ಯಾರ ಬಳಿಯೂ ಹೇಳಿಕೊಂಡಿಲ್ಲ. ಅವರಲ್ಲಿ ಶೇಕಡ 8ರಷ್ಟು ಮಹಿಳೆಯರು ಮಾತ್ರ ಬೇರೆಯವರಿಂದ ನೆರವು ಯಾಚಿಸಿದ್ದಾರೆ.

* ದೈಹಿಕ ಮತ್ತು ಲೈಂಗಿಕ ದೌರ್ಜನ್ಯಗಳೆರಡನ್ನೂ ಎದುರಿಸಿದ ಮಹಿಳೆಯರಲ್ಲಿ ಶೇಕಡ 37ರಷ್ಟು ಜನ, ದೈಹಿಕ ಹಿಂಸೆ ಅನುಭವಿಸಿದವರಲ್ಲಿ ಶೇಕಡ 22ರಷ್ಟು ಮಹಿಳೆಯರು ಬೇರೆಯವರಿಂದ ಸಹಾಯ ಕೇಳಿದ್ದಾರೆ. ಅಪರಾಧ ಎಸಗಿದವ ಎಂಥ ವ್ಯಕ್ತಿ ಎಂಬುದನ್ನು ಆಧರಿಸಿ, ಸಹಾಯ ಯಾಚಿಸುವುದು ನಿರ್ಧಾರವಾಗುತ್ತದೆ.

ಮಾಜಿ ಪತಿಯಿಂದ ಹಿಂಸೆಗೆ ಒಳಗಾದ ಮಹಿಳೆಯರು ಸಹಾಯ ಕೇಳುವ ಸಾಧ್ಯತೆ ಹೆಚ್ಚು. ದೌರ್ಜನ್ಯ ಎಸಗುವ ಪತಿಯಿಂದ ಪಾರಾಗಲು ಸಹಾಯ ಕೇಳುವುದು, ಆತನನ್ನು ತೊರೆಯಲು, ದಾಂಪತ್ಯ ಮುರಿಯಲು ಇಡುವ ಮೊದಲ ಹೆಜ್ಜೆ.

* ಒಟ್ಟಾರೆ, ಹಿಂಸೆಯಿಂದ ಪಾರಾಗಲು ಮಹಿಳೆ ಸಹಾಯ ಕೇಳುವ ಸಾಧ್ಯತೆ ಹೆಚ್ಚಾಗುವುದು ಶಿಕ್ಷಣದಿಂದಲೂ ಅಲ್ಲ, ಆರ್ಥಿಕ ಸದೃಢತೆಯಿಂದಲೂ ಅಲ್ಲ ಎಂಬುದನ್ನು ಸಮೀಕ್ಷೆ ಹೇಳುತ್ತದೆ. ಅತ್ಯಂತ ಹೆಚ್ಚು ಶಿಕ್ಷಣ ಪಡೆದ ಮತ್ತು ಆರ್ಥಿಕವಾಗಿ ಬಲಾಢ್ಯರಾಗಿರುವ ಮಹಿಳೆಯರು ಸಹಾಯ ಕೇಳುವ ಪ್ರಮಾಣ ಕಡಿಮೆ ಶಿಕ್ಷಣ ಹೊಂದಿರುವ, ಆರ್ಥಿಕವಾಗಿ ಅಷ್ಟೇನೂ ಬಲಿಷ್ಠರಲ್ಲದ ಮಹಿಳೆಯರಿಗಿಂತ ಕಡಿಮೆ ಎಂಬ ಸೂಚನೆ ಇದೆ.

* ದೌರ್ಜನ್ಯಕ್ಕೆ ಒಳಗಾದ ಮಹಿಳೆ ಬಹುಪಾಲು ಸಂದರ್ಭಗಳಲ್ಲಿ ತಮ್ಮ ಕುಟುಂಬದ ಸದಸ್ಯರಿಂದಲೇ ಸಹಾಯ ಯಾಚಿಸುತ್ತಾಳೆ.

* ದೈಹಿಕ ಹಿಂಸೆಯನ್ನು ಮಾತ್ರ ಎದುರಿಸಿದ ಶೇಕಡ 72ರಷ್ಟು, ಲೈಂಗಿಕ ಹಿಂಸೆಯನ್ನು ಮಾತ್ರ ಎದುರಿಸಿದ ಶೇಕಡ 58ರಷ್ಟು ಮಹಿಳೆಯರು ತಮಗೆ ಸಹಾಯ ದೊರೆತಿದ್ದು ಕುಟುಂಬದಿಂದ ಎಂದು ಉಲ್ಲೇಖಿಸಿದ್ದಾರೆ.

* ಗ್ರಾಮೀಣ ಭಾಗದ ಮಹಿಳೆಯರಿಗೆ ಹೋಲಿಸಿದರೆ ಲೈಂಗಿಕ ಹಿಂಸೆಗೆ ತುತ್ತಾಗುವ ನಗರವಾಸಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ, ದೈಹಿಕ ಹಿಂಸೆಗೆ ತುತ್ತಾಗುವ ನಗರವಾಸಿ ಮಹಿಳೆಯರು ಕಡಿಮೆ ಪ್ರಮಾಣದಲ್ಲಿ ದೂರು ನೀಡುತ್ತಾರೆ.

* ಪೊಲೀಸರು, ವೈದ್ಯರು ಅಥವಾ ಸಮಾಜ ಸೇವಾ ಸಂಘಟನೆಗಳಿಂದ ನೆರವು ಕೇಳುವ ಮಹಿಳೆಯರ ಸಂಖ್ಯೆ ಕಡಿಮೆ.