ಮಹಾದೇವರ ಸಮಗ್ರ ಕೃತಿಗಳ ಕುರಿತು- ಪಿ.ಲಂಕೇಶ್

lankesh2

 

 

 

 

 

 

ನಾನು ಕಳೆದ ಇಪ್ಪತ್ತೈದು ವರ್ಷದಿಂದ ಬಲ್ಲಂತೆ ದೇವನೂರು ಮಹಾದೇವ ಸೋಮಾರಿತನದ ಡೋಲಾಯಮಾನದ ಹಿಂಜರಿಕೆಯ ವ್ಯಕ್ತಿ; ಇದೆಲ್ಲದರ ಆಳದಲ್ಲಿ ಹರಿತವಾದ ಸೂಕ್ಷ್ಮ ಮನಸ್ಸಿನ ನ್ಯಾಯವಂತ ಮನುಷ್ಯ ಕೂಡ, ಇವೆರಡೂ ಗುಂಪಿನ ಗುಣಗಳನ್ನು ಮೀರಿದ್ದು ಅವರ ಸಹಜ ಪ್ರೀತಿ ಮತ್ತು ಜೀವನ ಪ್ರೇಮ. ಸಾಹಿತಿಯಾದವನು ಎಲ್ಲರಂತೆ ನೋಡಬಯಸುತ್ತಾನೆ. ಮನುಷ್ಯ, ಮರ, ಪ್ರಾಣಿ, ಆಕಾಶ, ಮಣ್ಣು ಇದೆಲ್ಲದರ ಖಚಿತ ಗುಣ ಮತ್ತು ಗಾತ್ರ ಅವನಿಗೆ ತಿಳಿಯುವುದೇ ಹೀಗೆ. ಆದರೆ ಎಲ್ಲರಂತೆ ನೋಡುತ್ತಿರುವಾಗಲೇ ಅವನಿಗೆ ವಿಶೇಷವಾದದ್ದು ಕಾಣುತ್ತದೆ. ಅದು ವಿಶೇಷವಾದದ್ದು ಎಂಬ ವಿಶ್ವಾಸ ಅವನಲ್ಲಿದ್ದರೆ ಮಾತ್ರ ಅವನು ಅದನ್ನು ಆದಷ್ಟೂ ಸಮರ್ಪಕವಾಗಿ ಹೇಳುವ ವಿಧಾನಗಳನ್ನು ಕಂಡುಕೊಳ್ಳುತ್ತಾನೆ. ಪ್ರೀತಿ, ಔದಾರ್ಯವಿಲ್ಲದಿದ್ದರೆ, ತನ್ನ ಬಗ್ಗೆ ನಿಷ್ಠುರತೆ ಮತ್ತು ಇತರರ ಬಗ್ಗೆ ಸಹಾನುಭೂತಿ ಇಲ್ಲದಿದ್ದರೆ ಜೀವನದ ಬಾಗಿಲು ಲೇಖಕನಿಗೆ ತೆರೆಯುವುದೇ ಇಲ್ಲ. ಮಹಾದೇವರ ‘ಡಾಂಬರು ಬಂದುದು’ ಕತೆಯ ಪಟೇಲರು ಮತ್ತು ಆಧುನಿಕ ಹುಡುಗರಾದ ಲಕುಮ, ರಾಜಪ್ಪ, ಶಂಭು, ಮಾದು ಇವರ ನಡುವಿನ ಮನಸ್ತಾಪ ನೋಡಿ, ಊರಿಗೆ ರಸ್ತೆ ಮಾಡಿಸಿ ಅದರಲ್ಲಿ ಬಂದ ಲಾಭದಲ್ಲಿ ದೇವಸ್ಥಾನ ಕಟ್ಟಿಸುವುದಾಗಿ ಹೇಳುವ ಪಟೇಲರು ಆ ಹುಡುಗರಿಗೆ ಪಾಳೇಗಾರರ ಪ್ರತಿನಿಧಿಯಂತೆ ಕಾಣುತ್ತಾರೆ. ಆ ಹುಡುಗರ ಸಿಟ್ಟು ಪಟೇಲರಿಗೆ ಅರ್ಥವಾಗುವುದಿಲ್ಲ; ಪಟೇಲರ ಮೌಲ್ಯ ಅವರಿಗೆ ತಿಳಿಯುವುದಿಲ್ಲ. ಓದುಗರ ನಿರೀಕ್ಷೆ ಮೀರಿ ಪಟೇಲರು ಮೌನÀ ತಾಳುತ್ತಾರೆ. ಅವರ ನೊವಿನ ಎದುರು ಹುಡುಗರ ಪ್ರತಿಭಟನೆ ಕಾವು ಕಳೆದುಕೊಳ್ಳುತ್ತದೆ. ಪಟೇಲರ ಮೌನ ಇಲ್ಲಿ ವಿಶೇಷ.
2
`ಗ್ರಸ್ತರು’ ಎಂಬ ಇನ್ನೊಂದು ಕತೆ. ಅದೇಕೋ ಈ ಕತೆ ಮತ್ತು `ಮಾರಿಕೊಂಡವರು’ ಎಂಬ ಇನ್ನೊಂದು ಪುಟ್ಟಕತೆ ಅಷ್ಟು ಹೆಸರು ಗಳಿಸಿಲ್ಲ. ಇವು ಒಳ್ಳೆಯ ಕತೆಗಳು. `ಗ್ರಸ್ತರು’ ಕತೆಯ ನಾಯಕನ ಸಮಸ್ಯೆ ಮಹಾದೇವರ ಎಲ್ಲ ಮುಖ್ಯ ಕತೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಪಟ್ಟಣದಿಂದ ಈಗ ತಾನೇ ಊರಿಗೆ ಬಂದ ಹುಡುಗ ಎಲ್ಲರನ್ನೂ ಬೆಚ್ಚಿಬೀಳಿಸಿದ್ದಾನೆ. ಅವನು ಗೌಡರನ್ನು ನೋಡಲು ಹೋಗುತ್ತಾನೆ. ಹುಡುಗ ದಲಿತ; ಗೌಡರು ಮೇಲುಜಾತಿಯವರು. ಈ ಕತೆಗೆ ಅದು ಮುಖ್ಯವಾಗುವುದಿಲ್ಲ. ಗೌಡರು ಕೆಟ್ಟವರಲ್ಲ, ಒಳ್ಳೆಯ ಆಶಯಗಳುಳ್ಳವರು. ಅವನಿಗೆ ಓದಲು ಸಾಲ ಕೊಟ್ಟು ಕೆಲಸ ಕೊಡಿಸಿದವರು ಗೌಡರು. ಈ ಬಡ ಹುಡುಗನ ತಾಯಿ ಲಕ್ವಾ ಹೊಡೆದು ಮಲಗಿದ್ದಾಳೆ, ಬಡತನ ಕಿತ್ತು ತಿನ್ನುತ್ತಿದೆ, ಅವನ ಪ್ರೇಯಸಿ ಕಾರಣವೇ ಇಲ್ಲದೆ ದೂರವಾಗಿದ್ದಾಳೆ. ಹುಡುಗ ನೋಡಲು ಬಂದಾಗ ಗೌಡರು ಅವನ ಲೆಕ್ಕಪತ್ರ ನೋಡುತ್ತಿದ್ದಾರೆ. ಹುಡುಗ ಗೌಡರ ಮೇಲೆ ಸಿಟ್ಟಿನಿಂದ ಎಗರಲಾರ. ತನ್ನನ್ನು ಸಮರ್ಥಿಸಿಕೊಳ್ಳಲಾರ.
ಹುಡುಗ, ಅವನ ತಾಯಿ ಮತ್ತು ಗೌಡರ ಸದ್ಯದ ಸ್ಥಿತಿ ವರ್ಣಿಸುವ ಎರಡು ತುಣುಕು ಕೊಡುತ್ತಿದ್ದೇನೆ. ಪೂರ್ತಿ ಪರಿಸ್ಥಿತಿ ಹೀಗಿದೆ: “ಈಗೆಲ್ಲಿಂದ ತರ್ಲಿ ಹೇಳಿ, ಕೆಲ್ಸ ಬಿಟ್ಟು ಬಂದುದು ಗೊತ್ತೆ ಇದೆ.” ಗೌಡರು ಗುರುಗಾಯಿಸುವ ಥರ ನೋಡಿದರು. ಆಡುವ ಮಾತುಗಳಿಗೆ ಭಾರ ಹಾಕುತ್ತ, “ಸರಿ ಮತ್ತೆ ನೀಯೇನೋ ಕೆಲಸ ಬಿಟ್ಟೆ, ಕೆಲ್ಸ ಕೊಡಿಸಿದವರ ಮಾನ ಏನಾಗಬೇಕು” ಎಂದು ಅವರದೇ ನಗು ತಂದುಕೊಂಡಾಗ ಹೇಗೆ ಹೇಳಬೇಕೋ ಗೊಂದಲಿಸಿಕೊಂಡಿತು. “ಹಾಗಲ್ಲ. ಅದು ನಿಮಗೆ ಗೊತ್ತಾಗಲ್ಲ” ಅಂದೆ. ತಗುಲಿದ ಹಾಗೆ ಎಗರಿ ಕುಳಿತರು. “ಏನಂದೆ?” ಎಂದು ಜೋರಾಗಿ ಅಂದು ದನಿ ಏರಿಸಿ “ನಂಗೆಲ್ಲಯ್ಯ ಗೊತ್ತಾಗುತ್ತೆ? ಸ್ವಾಮಿಗಳ ಮುಂದೆ ಎಷ್ಟರವ್ನು ನೀನು? ಸ್ವಾಮಿಗಳೆಲ್ಲ ಹಾಗೆ ಹೀಗೆ ಅಂತ ಭಾಷಣ ಬೇರೆ ನಿಂಗೆ. ಈಗ್ಯಾಕೆ ಪಂಚಾಯ್ತಿ. ನಂದೂ ನಿಂದೂ ವ್ಯವಹಾರ ಮುಗೀತು. ಅಸ್ಲು ಬಡ್ಡಿ ತಂದೊಪ್ಪಿಸು. ಮುಂದಕ್ಕೆ ನೀನು ನಿನ್ನ ಹಾದಿ.” ದುಮುಗುಡುತ್ತಾ ಕುಳಿತುಬಿಟ್ಟರು. ಸುಮ್ಮನೆ ಕೂರಲು ಆಗಲಿಲ್ಲ. “ಹಾಗಲ್ಲ ಗೌಡರೆ” ಅಂದೆ, ನೋಡಿದರು. “ಹೇಳಿದ್ರೆ ನಿಮ್ಗೆ ಗೊತ್ತಾಗಲ್ಲ” ಎಂದು ಮುಂದೆ ಹೇಳಹೊರಟೆ. ಗೌಡರು ಕತ್ತರಿಸಿದ ಹಾಗೆ “ಈಗ ಗೊತ್ತಾಗುತ್ತೆ ತಕ್ಕೊ” ಎಂದು ಸೀಳುವ ಥರ ನೋಡಿದರು…..
ಅಲ್ಲಿಂದ ಬಂದವನು ಮನೆಯಲ್ಲಿ ಸುಮ್ಮನೇ ಕೂರುತ್ತಾನೆ. ಕಾಯಿಲೆಯ ತಾಯಿ ಸುಮ್ಮನೇ ಬಿಡುವುದಿಲ್ಲ. ಗೌಡರ ಮನೆಯಲ್ಲಿ ಏನಾಯಿತು ಎಂದು ಅವಳಿಗೆ ಕುತೂಹಲ.
“ಹೇಳು” ಅಂದು ನೋಡಿದಳು. ಎಷ್ಟೋ ಹೊತ್ತು ಸುಮ್ಮನಿದ್ದು ಹಾಗೂ ಇರಲು ಆಗದೆ “ನಂಗೆ ಸರಿ ಅನ್ಸಿದ್ದನ್ನ ಹೇಳೋದು ತಪ್ಪಾ” ಅಂದೆ. `ಸರಿ’ ಅಂದಳು. “ನಂಗೆ ಸರಿ ಕಾಣ್ತು. ಧರ್ಮಕರ್ಮಮಠ ಸ್ವಾಮಿಗಳೆಲ್ಲ ಸೋಗು ಅಂತ ಹೇಳ್ದೆ”. ಅವ್ವ ದುರುದುರು ನೋಡತೊಡಗಿದಳು. “ಯಾವುದೂ ಬೇಡ. ಹೊಲಮನೆ ಅಂತ ಇರೋದು ಅಂತ ಬಂದ್ರೆ ಈಗ ಗೌಡ್ರಿಗೆ ಚುಚ್ಕೊಟ್ಟವರೆ…..” ಎಂದು ಅಂದು ನೋಡಿದೆ. ತುಂಬ ನೋವು ತಿನ್ನುತ್ತಿದ್ದಳು. ಸುಮ್ಮನೆ ನೋಡಿದ ಅವ್ವ ಜೋರು ಉಸಿರು ಎಳೆದು ಹಣೆ ಚಚ್ಚಿಕೊಂಡಳು. ಬಹಳ ಕಷ್ಟಪಟ್ಟು ಕಣ್ಣು ತೆಗೆದು ಸೂರಿಗೆ ನೆಟ್ಟು ಆಗದೆ ಮತ್ತೆ ನೋಡಿದಾಗ ಬಿರಿಯುವ ತುಟಿಗಳು, ಕಣ್ಣಿಂದ ದೊಳ ದೊಳ ನೀರು, ದಿಮುಗುಡುತ್ತಿದ್ದ ಅವ್ವ ಕೆಟ್ಟ ದನಿಯಲ್ಲಿ “ಈಗ್ಲೆ ಹೋಗಿ ತಪ್ಪಾಯ್ತು ಅಂತ ಕೇಳ್ಕೋ. ದೇವರಂಥವರತ್ರ ನಿಂದು ನಿಷ್ಠುರ. ಇಷ್ಟಕ್ಕೂ ನಾ ಮಾಡಿದ ಕರ್ಮ. ಈಗ್ಲೇ ಹೋಗು” ತವಕಿಸತೊಡಗಿದಳು.
-ಮೇಲಿನ ಎರಡು ತುಣುಕುಗಳನ್ನು ಇಲ್ಲಿ ಸಾಹಿತಿಯ ಮನಸ್ಸು ಹೇಗೆ ಕೆಲಸ ಮಾಡುತ್ತಿದೆ ಎಂದು ತೋರಲು ಕೊಟ್ಟಿದ್ದೇನೆ. ಸಮಾಜದ ಕಟ್ಟಳೆ, ಮುಲಾಜು, ಸಹನೆ ಮತ್ತು ಅವಮಾನಗಳನ್ನು ಈ ಬರವಣಿಗೆ ಹೇಗೆ ಒಟ್ಟಿಗೇ ಕೊಡುತ್ತದೆ ಎಂಬುದನ್ನು ಗಮನಿಸಿ. ಗೌಡರಿಗೆ ನಿಜಕ್ಕೂ `ಗೊತ್ತಿರುವುದಿಲ್ಲ’, ಏಕೆಂದರೆ ಅವರ ಮನಸ್ಸು ಕೆಲಸ ಮಾಡುತ್ತಿರುವುದೇ ಬೇರೆ ಸ್ತರದಲ್ಲಿ. ಅವ್ವನಿಗೆ `ಗೊತ್ತಾಗುವುದಿಲ್ಲ’, ಏಕೆಂದರೆ ತನ್ನ ಮಗ ಅವಮಾನ ಅನುಭವಿಸಲು ಕಾರಣಗಳೇ ಅವಳಿಗೆ ಹೊಳೆಯುವುದಿಲ್ಲ. ಇದರಷ್ಟೇ ಮುಖ್ಯ ಇಲ್ಲಿಯ ಹುಡುಗನ ಅನುಮಾನ ಮತ್ತು ಅದರಿಂದ ಬಂದ ಆತಂಕ. ಯಾಕೆಂದರೆ ಅವನಿಗೆ ತನ್ನ ಮಾತಿನ ಅರ್ಥ ಗೊತ್ತಿದ್ದರೂ ತನ್ನ ಮನಸ್ಸಿನ ದಿಗಿಲು ಗೊತ್ತಾಗುವುದಿಲ್ಲ. ಮಹಾದೇವ ಇಲ್ಲಿ ಕಪ್ಪು-ಬಿಳುಪು ಪಾತ್ರ ಸೃಷ್ಟಿಸುವುದಿಲ್ಲ ಅಂದರೆ ಸಾಲದು; ಈ ಕತೆಯ ಎಲ್ಲ ಪಾತ್ರಗಳಿಗೆ ಆತ್ಮಗೌರವದ ಮತ್ತು ಅವಮಾನದ ನೀತಿಯ ಗೆರೆಗಳಿವೆ.
ಮಹಾದೇವರ ಎಲ್ಲ ಕತೆಗಳನ್ನು ಓದುತ್ತಾ ಹೋದಂತೆ ಅವರು ಬದುಕಿನ ಬಾಗಿಲು ತೆರೆಯಲು ಬಳಸುವ ಅನುಮಾನದ, ಯಾರನ್ನೂ ಕೂಡಲೇ ತಿರಸ್ಕರಿಸದ ಒಳ್ಳೆಯತನದ ನಿಲುವು ಗೊತ್ತಾಗುತ್ತಾ ಹೋಗುತ್ತದೆ. ಇವರ `ಮಾರಿಕೊಂಡವರು’ ಎಂಬ ಪುಟ್ಟ ಕತೆಯಲ್ಲಿ `ಮಾರಿಕೊಂಡ’ ವಸ್ತುವಿಗಿಂತ ಲಕ್ಷ್ಮಿಯ ವ್ಯಾಮೋಹವುಳ್ಳ ತಮಾಷೆ ಮತ್ತು ಬೀರನ ಕುಡಿಯುವ ತೆವಲು ಮುಖ್ಯವಾಗುತ್ತದೆ. ಗೌಡರ ಮಗ ಕಿಟ್ಟಪ್ಪನನ್ನು ಬೈದು ಇನ್ನೊಂದೂರಿಗೆ ಅವರಿಬ್ಬರೂ ಹೋಗಬಹುದಿತ್ತು. ಯಾಕೆಂದರೆ ಅವರು ಜೀತದಾಳುಗಳಲ್ಲ. ಆದರೆ ಲಕ್ಷ್ಮಿ ಕಿಟ್ಟಪ್ಪನಿಗೆ ಮೈ ಕೊಡುತ್ತಾಳೆ. ಇಲ್ಲಿ ಐರಿಶ್ ಲೇಖಕರ ನೀತಿ ಮೀರಿದ ಜೀವನಗ್ರಹಿಕೆ ಇದೆ. `ಮಾರಿಕೊಂಡವರು’ ಎಂಬ ಶೀರ್ಷಿಕೆ ಸ್ವಲ್ಪ ಜಡ ಅನ್ನಿಸಿದರೆ, “ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ” ಎಂಬುದರ ಶೀರ್ಷಿಕೆ (ಕತೆಯಲ್ಲಿ ಅಂಥ `ಕೊಲೆಗಿಲೆ’ಯೇ ಇಲ್ಲದೆ) ತನ್ನ ವ್ಯಂಗ್ಯದಿಂದಲೇ ಚೆನ್ನಾಗಿದೆ. `ಮಾರಿಕೊಂಡವರು’ ಕತೆಯ ಗೌಡರ ಮಗ ರಾಕ್ಷಸನೇನೂ ಅಲ್ಲ, ಸರ್ವೇಸಾಮಾನ್ಯ ಅಪಾಪೋಲಿ ಹುಡುಗ.
3
ಇಪ್ಪತ್ತನೇ ಶತಮಾನದ ಪ್ರತಿಭಟನೆಗಳು ಅನೇಕ ರೀತಿಯಲ್ಲಿ ನಡೆದಿವೆ. ಪ್ರತಿಭಟನೆಗೂ ಸಾಹಿತ್ಯಕ್ಕೂ ಸಂಬಂಧವಿದೆಯೇ ಎಂಬ ಪ್ರಶ್ನೆ ಕೂಡ ಏಳುವಷ್ಟು ವೈವಿಧ್ಯಮಯವಾಗಿದೆ. ಇಲ್ಲಿ ಗಾರ್ಕಿಯ `ತಾಯಿ’ಯ ಪ್ರತಿಭಟನೆ, ಬ್ರೆಕ್ಟ್‍ನ `ಮದರ್ ಕರೇಜ್’ ನಾಟಕದ ಬಂಡಾಯ, ಮುಲ್ಕ್‍ರಾಜ್ ಆನಂದ್ ಅವರ ‘ಅನ್‍ಟಚಬಲ್ಸ್’ ಕೃತಿಯ ಜಡತ್ವ- ಇತ್ಯಾದಿಗಳನ್ನು ಚರ್ಚಿಸದೆ ಆಲ್ಬರ್ಟ್ ಕ್ಯಾಮು ಮತ್ತು ಸಾರ್ತರ್ ಪ್ರತಿನಿಧಿಸಿದ ಚಿಂತನೆಗಳತ್ತ ಕ್ಷಣ ನೋಡಬಹುದು. ಅನೇಕ ಕೃತಿಗಳ ಪ್ರತಿಭಟನೆ ಎಡಪಂಥೀಯ ನಿಲುವಿನಿಂದ ಬಂದದ್ದು. ಬಲಪಂಥೀಯರು, ಸಂಪ್ರದಾಯವಾದಿಗಳು ಯಾಕೆ ತಮ್ಮ ಜೀವನಕ್ರಮಕ್ಕೆ ತೊಂದರೆಯ ವಿರುದ್ಧ ಪ್ರತಿಭಟಿಸಲಿಲ್ಲ ಎಂಬುದು ಕುತೂಹಲಕರ. ಆದರೆ ಕ್ಯಾಮು ತನ್ನ ಕೃತಿಗಳಲ್ಲಿ ತನ್ನ ರಾಜಕೀಯ ನಿಲುವನ್ನು ಕರಗಿಸಿಬಿಟ್ಟ; ಸಾರ್ತರ್ ತನ್ನ ರಾಜಕೀಯ, ಸಾಮಾಜಿಕ ನೋಟವನ್ನು ಎಲ್ಲರ ಕಣ್ಣಿಗೆ ಕಟ್ಟುವಂತೆ ಹೇಳಿದ. ಮೊನ್ನೆ ಇವರಿಬ್ಬರ ಬಗ್ಗೆ ಹೇಳಿದ ಲ್ಯಾಟಿನ ಲೇಖಕ ಗೇಬ್ರಿಯಲ್ ಮಾಕ್ರ್ವಿಸ್, “ಕ್ಯಾಮುನ ರಾಜಕೀಯ ಕೂಡ ಸಾರ್ತರ್‍ನ ರಾಜಕೀಯಕ್ಕಿಂತ ಉತ್ತಮ.” ಅಂದರೆ, ಅರ್ಥ, ಸಾರ್ತರ್ ಮೂಲದಲ್ಲಿ ಬೋಧಕ, ಕ್ಯಾಮು ಮುಖ್ಯವಾಗಿ ಕಲಾವಿದ.
ಇದನ್ನೆಲ್ಲ ಹೇಳಿದ್ದು ದೇವನೂರ ಮಹಾದೇವ ತಮ್ಮ ಚಿಕ್ಕ ಚೌಕಟ್ಟಿನಲ್ಲಿ ಪ್ರತಿಭಟನೆ ಮತ್ತು ಯಥಾಸ್ಥಿತಿ, ಪ್ರಶ್ನೆ ಮತ್ತು ಪ್ರೀತಿ. ಇದನ್ನು ಕೃತಿಯಲ್ಲಿ ಕರಗಿಸುವ ರೀತಿಯನ್ನು ವಿವರಿಸಲು, ಈ ಹೇಳಿಕೆ ಓದುವವರಿಗೆ ಜಟಿಲ ಅನ್ನಿಸಿದರೆ ಅವರ `ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ’ ಮತ್ತು `ಒಡಲಾಳ’ ಕತೆಗಳನ್ನು ನೊಡಿ ವಿವರಿಸಬಹುದು. `ಮೂಡಲ ಸೀಮೇಲಿ ಕೊಲೆಗಿಲೆ ಮುಂತಾಗಿ’ ಕತೆಗೆ ರಂಗಪ್ಪನ ಅಲೆದಾಟವೇ ಕೇಂದ್ರ, ತನ್ನ ಹೆಂಡತಿ, ತನ್ನ ಮಗ ಮತ್ತು ಜೋಪಡಿ-ಇಷ್ಟೇ ರಂಗಪ್ಪನ ಆಸ್ತಿ. ಮುಂದಿನ ಊಟಕ್ಕೆ ಗತಿ ಇಲ್ಲ. ನೆರವಾಗಲು ಗೌಡರಿದ್ದಾರೆ. ಆದರೆ ಅವರು ಒಂದು ದಿನ ಊರಲ್ಲಿದ್ದರೆ ಇನ್ನೊಂದು ದಿನ ಇರುವುದಿಲ್ಲ. `ವಸಿ ಗೌಡರ್ನಾರು ನೋಡ್ಕಂಡು ಬತ್ತೀನಿ’ ಎಂದು ಹೊರಡುವ ಆತನಿಗೇ ಗೌಡರಿರುವ ಬಗ್ಗೆ ಅನುಮಾನವಿದೆ. ಅನೇಕರಿಗೆ ದೇವರಿದ್ದಾನೋ ಇಲ್ಲವೋ ಎಂಬ ಅನುಮಾನವಿದ್ದಂತೆ. ಆದರೂ ಹೋಗುತ್ತಾನೆ. ಗೌಡರು ದೊಡ್ಡವರು, ಗೌಡರು ಊರಿಗೆ ಒಬ್ಬಳು ನರ್ಸ್ ನೇಮಕ ಮಾಡಿಸಿ ತಮ್ಮ ಜಗುಲಿಯ ಮೇಲೇ ಅವಳಿಗೆ ಪ್ರತ್ಯೇಕ ಮನೆ ಮಾಡಿಕೊಟ್ಟಿದ್ದಾರೆ. ಊರ ಹುಡುಗರಿಗೆ ಈ ನರ್ಸಮ್ಮನನ್ನು ಕಂಡರೆ ಕುತೂಹಲ, ಪೋಲಿಭಾವನೆ, ಹಾಗೆಯೇ ಊರಿಗೆ ದಲಿತ ಅಧ್ಯಾಪಕನೊಬ್ಬ ಬಂದಿದ್ದಾನೆ. ಆತ ದಲಿತನೆಂದು ಯಾರೂ ಕೀಳು ಬಗೆಯುವುದಿಲ್ಲ. ರಂಗಪ್ಪ ದಾರಿಯಲ್ಲಿ ಎಲ್ಲ ಅನುಭವಿಸಿ ಗೌಡರ ಮನೆಗೆ ಹೋದರೆ ನರ್ಸಮ್ಮ ಮತ್ತು ಗೌಡತಿ ಗೌರವ್ವ ಹರಟೆ ಹೊಡೆಯುತ್ತಿದ್ದಾರೆ. ಗೌರವ್ವರ ಹೊಸ ಸೀರೆಯ ಸದ್ದು, ಬಳೆಗಳ ಗಲಾಟೆ….
ಇಲ್ಲಿ ಎಲ್ಲಿದೆ ಪ್ರತಿಭಟನೆ, ಸಿಟ್ಟು? ಅದು ಆತ್ಮಗೌರವದಲ್ಲಿ, ರಂಗಪ್ಪನ ಹಸಿವು ಮತ್ತು ಎಲ್ಲದಕ್ಕೆ ತಲೆಯಾಡಿಸುತ್ತಾ ನಡೆಯುವ ಸಜ್ಜನಿಕೆಯಲ್ಲಿ ಇದೆ.
ಹಾಗೆಯೇ `ಒಡಲಾಳ’ದಲ್ಲಿ. ಈ ದೃಷ್ಟಿಯಿಂದ `ಒಡಲಾಳ’ ಕುತೂಹಲಕರ ಕತೆ. ಈ ಕತೆ ನಡೆಯುವುದು ಮೂರು ಹೆಜ್ಜೆ ಇಟ್ಟು. (ಇದನ್ನು ಸಾಹಿತ್ಯದ ವಿದ್ಯಾರ್ಥಿಗಳು ಯಾರಾದರೂ ಮಾಸ್ತಿಯವರ `ಜೋಗ್ಯೋರ ಅಂಜಪ್ಪ’, `ವೆಂಕಟಸಾಮಿ ಪ್ರಣಯ’ ಕತೆಗಳಿಗೆ ಹೋಲಿಸಿ ಅಭ್ಯಸಿಸಿದರೆ ಚೆನ್ನಾಗಿರುತ್ತದೆ.) ಮುದುಕಿ ಸಾಕವ್ವನ ಹುಂಜ ತಪ್ಪಿಸಿಕೊಂಡು ಹೋಗಿದೆ- ಇದು ಆಕೆಗೆ ಸಾವು ಬದುಕಿನ ಪ್ರಶ್ನೆಯಾದರೂ ಬೇರೆಯವರಿಗೆ ಆಕೆ ಹುಡುಕುವುದು ಐಲಾಟದಂತೆ ಕಾಣುತ್ತದೆ. ದೇವರಿಗೆ ಬಿಟ್ಟ ಕೋಳಿ ನಿಜಕ್ಕೂ ಕಳೆದುಹೋದರೆ ಅದು ಆಕೆಗಾದ ನಷ್ಟದಂತೆಯೇ ದೇವರ ನಿರ್ಲಕ್ಷ್ಯವನ್ನು ತೋರುತ್ತದೆ. ದೇವರ ಬಗ್ಗೆ ಧೈರ್ಯವಾಗಿ ಮಾತಾಡಬಲ್ಲ ಆಕೆ ಯಮನನ್ನು ಪ್ರಶ್ನಿಸಿ ಹಿಮ್ಮೆಟ್ಟಿಸಬಲ್ಲಳು. ಆಕೆಗೆ ಈ ಜೀವನವೇ ಎಲ್ಲ ಸಾವು, ನರಕಕ್ಕಿಂತ ಕೆಟ್ಟದೆಂದು ಗೊತ್ತು. ಆಕೆಯ ದಿಟ್ಟತನ ಪೊಲೀಸರು ಕಳ್ಳಮಾಲಿಗಾಗಿ ಹುಡುಕಿಕೊಂಡು ಬಂದಾಗ ಮಾಯವಾಗುತ್ತದೆ. ಈ ವಾಸ್ತವದ ಗೋರಸತ್ಯದೆದುರು ದೇವರು, ಯಮ ಕೇವಲ ಊಹೆಗಳಂತಾಗುತ್ತಾರೆ.
ಇನ್ನೊಂದು ಹೆಜ್ಜೆಯಲ್ಲಿ ಸಾಕವ್ವ ತನ್ನ ಹುಂಜದ ಬಗ್ಗೆ ತಲೆಕೆಡಿಸಿಕೊಂಡಿರುವಂತೆಯೇ ಆಕೆಯ ಮಕ್ಕಳು, ಮೊಮ್ಮಕ್ಕಳು ಬಡತನದಿಂದಾಗಿ ಕಚ್ಚಾಡುತ್ತಿದ್ದಾರೆ. ಬಡತನದಿಂದಾಗಿ ತಾಯಿ ಸಾಕವ್ವ ತಾಯಿಯ ಸ್ಥಾನ ಪಡೆದಿಲ್ಲ. ಆಕೆಯ ಹಿರಿಯ ಮಗ ಕಾಳಣ್ಣ ಹಿರಿಯನ ಅಧಿಕಾರ ಹೊಂದಿಲ್ಲ. ಸಾಕವ್ವ ತನ್ನ ಮಕ್ಕಳೊಂದಿಗೆ ‘ಆಸ್ತಿ’ಯ ಬಗ್ಗೆ ಜಗಳವಾಡುತ್ತಾಳೆ- ಈ ಜಗಳ ಸೊಸೆಯರ ಜಗಳಕ್ಕೆ ದಾರಿಮಾಡಿಕೊಟ್ಟು ಆಕೆಯ ಮಕ್ಕಳು ಹಾಸ್ಯಾಸ್ಪದರಾಗುತ್ತಾರೆ. ಹೀಗಿದ್ದಾಗ ಕಾಳಣ್ಣ ಒಂದು ಚೀಲ ಕಳ್ಳೇಕಾಯಿ ತರುತ್ತಾನೆ. ಅವರೆಲ್ಲರ ಮನಸ್ತಾಪ ಕೊನೆಗೊಂಡು ಪ್ರೀತಿ, ಸ್ನೇಹ ಉಕ್ಕತೊಡಗುತ್ತದೆ. ಸಾಕವ್ವನ ಮೊಮ್ಮಗಳು ಪುಟಗೌರಿ ಗುಡಿಗೆ ಹೋಗಿ ನಾಟಕ ಪ್ರಾಕ್ಟೀಸ್ ನಡೆಸುತ್ತಿರುವ ನಂಟನನ್ನು ಕರೆತರುತ್ತಾಳೆ. ಈ ಕಳ್ಳೇಕಾಯಿ ಕರಗಿಸುವ ಸಂಭ್ರಮದಲ್ಲಿ ಅವರೆಲ್ಲ ಸಾಹುಕಾರ ಎತ್ತಪ್ಪನ ಭವ್ಯಮನೆ, ಆಸ್ತಿಯ ಬಗ್ಗೆ ಮಾತನಾಡುತ್ತಾರೆ; ಆತನ ಮನೆಯ ಹಬ್ಬ ತಮ್ಮ ಮನೆಯ ಹಬ್ಬವೆಂಬಂತೆ ಮಾತಾಡಿಕೊಂಡು ನಲಿಯುತ್ತಾರೆ.
ಮೂರನೆಯ ಹೆಜ್ಜೆಯಲ್ಲಿ, ಈ ಬದುಕಿನ ತುಯ್ದಾಟದಲ್ಲಿ, ಮನಸ್ತಾಪ ಮತ್ತು ಅನ್ಯೋನ್ಯತೆಯಲ್ಲಿ ಯಾವುದು ಸಹಜ, ಯಾವುದು ಕಳ್ಳತನ ಎಂದು ಅರಿಯದ ಪೊಲೀಸರು ಮತ್ತು ಸಾಹುಕಾರ ಎತ್ತಪ್ಪ ಹಟ್ಟಿಗೆ ಕಳ್ಳೇಕಾಯಿ ಮೂಟೆಗಾಗಿ ಹುಡುಕಿಕೊಂಡು ಬರುತ್ತಾರೆ.
ಈ ಮೂರು ಹೆಜ್ಜೆಗಳ ನಡುವೆ ಮನಸ್ಸಿನಲ್ಲಿ ನಿಲ್ಲುವ ಕೆಲವು ವಿಷಯಗಳಿವೆ. ಕೆಳಸ್ತರದ ಹಟ್ಟಿಯ ಬಡತನದ ಬದುಕು ಮತ್ತು ಅವರ ಆಶೆ, ಅದರ ಈಡೇರಿಕೆಯ ಭ್ರಮೆ; ಸಾಕವ್ವನ ಅನ್ವೇಷಣೆ ಮತ್ತು ಆಕೆಯ ದೇವರ ಕತೆ. ಇದಕ್ಕಿಂತ ಕುತೂಹಲಕರವಾದದ್ದು ಮೇಲಿನ ಎಲ್ಲದರ ಪರಿವೆಯೇ ಇಲ್ಲದೆ ಸಾಕವ್ವನ ಕಿರಿಮಗಳು ಪುಟಗೌರಿ ನಡುಮನೆಯ ಗೋಡೆಯ ಮೇಲೆ ಕಾಲಿನಿಂದ ಆರಂಭಿಸಿ ಸುಂದರ ನೀಲಿ ನವಿಲು ಬರೆಯುವುದು, ಅದು ಹೇಗಿದೆ ಎಂದು ಕೇಳಿದರೆ ಸಾಕವ್ವ ಅನ್ನುತ್ತಾಳೆ, “ತಗಾ ಅದ್ಯಾರೋ ಒಬ್ಬಳು ಕುಟ್ಟೊ ಬತ್ತ ಬುಟ್ಟು ಹುಟ್ಟೋ ಶ್ಯಾಟ ನೋಡ್ಕಂತಿದ್ಲಂತೆ.”
ಈ ಬಡತನ, ಅಸಹಾಯಕತೆ ಸಣ್ಣತನಗಳ ನಡುವೆ ಹರಿಯುವ ಜೀವನ ಸಂತೋಷ ಮತ್ತು ಮುಗ್ಧ ನಂಬಿಕೆಗಳು.
ಇಲ್ಲಿ ಚಿಗುರುವ ಪುಟಗೌರಿಯ ನೀಲಿ ನವಿಲಿನ ಚಿತ್ರ.
ಪ್ಯಾದೆ ರೇವಣ್ಣನ ಸಾಹಸ…. ಆತ ಹಟ್ಟಿಗೆ ಪೊಲೀಸರೊಂದಿಗೆ ಬಂದು `ಕಳ್ಳ’ರನ್ನು ಹಿಡಿದು ಕಳ್ಳೇಕಾಯಿ ಎಂಬ ಮಾಲಿಗಾಗಿ ಹುಡುಕುತ್ತಾನೆ. ಇಡೀ ಮೂಟೆ ಸಾಕವ್ವನ ಕುಟುಂಬದ ಹೊಟ್ಟೆ ಸೇರಿದೆ.
ಪ್ರತಿಭಟನೆಯ ಅರ್ಥಪೂರ್ಣ ರೂಪ `ಒಡಲಾಳ’.
4
ಜೀವನವನ್ನು ಜೀವನವನ್ನಾಗಿ ನೋಡಲು, ತನಗನ್ನಿಸಿದ್ದನ್ನು – ಪುಟಗೌರಿಯ ನವಿಲಿನಂತೆ- ಕಲೆಯಾಗಿ ರೂಪಿಸಲು ದೇವನೂರ ಮಹಾದೇವ ವಿಶಿಷ್ಟ ಶೈಲಿ ದಕ್ಕಿಸಿಕೊಂಡಿದ್ದಾರೆ. ನಂಜನಗೂಡಿನ ಕಡೆಯ ಮಾತುಗಳನ್ನು ಅವುಗಳ ಬೇರೆ ಬೇರೆ ರೂಪದಲ್ಲೇ ಬಳಸಿ ಕತೆಗೆ ಬೇಕಾದ ಲಯಬದ್ಧತೆ ಸಾಧಿಸಿರುವುದು ಇಲ್ಲಿಯ ವಿಶೇಷ. ಇಲ್ಲಿಯ ನಿರೂಪಕನ ಮಾತಿಗೂ ಸುತ್ತಣ ಜನರ ಭಾಷೆಗೂ ವ್ಯತ್ಯಾಸವಿಲ್ಲ. ಹೀಗಿರುವುದರಿಂದಲೇ ಕತೆಗಳ ಮೂಲಭೂತ ತೀವ್ರತೆ ಮತ್ತು ಗಾಂಭೀರ್ಯ ನಮ್ಮನ್ನು ಮುಟ್ಟುತ್ತವೆ. ಇದು ನಿರೂಪಣಾ ಕಲೆಯ ನಿಜವಾದ ಕಾಣಿಕೆ. “ಕೆಲವೊಮ್ಮೆ `ಊರಿಗೆ ಒಬ್ಬೊಬ್ಬರಾಗಿ ಇಳಿಯುವುದು ಏರತೊಡಗಿತು.’ `ಅಷ್ಟೇಯ ನಾ ಹೇಳೋದು’ ಎಂದು ಇಪ್ಪತ್ತು ಸಲ ಹೇಳುದ್ದನ್ನು ಹೇಳುತ್ತ ಹೇಳತೊಡಗಿದಳು.” `ಮಿಕ್ಕದ್ದ ಉಳುಕೆ ಅಂಬಲಿಗೆ ನಾಲಗೆ ಅರ್ಪಿಸಿತ್ತು’ ಎಂಬಂಥ ಮಾತುಗಳು ಸ್ವಲ್ಪ ವಿಚಿತ್ರವಾಗಿ ಕಂಡರೂ ಈ ವೈಚಿತ್ರವೇ ಇಲ್ಲಿಯ ವೈಶಿಷ್ಟ್ಯ ಕೂಡ. `ಮಿಕ್ಕದ್ದ’ ಎಂಬುದರ ವಿವರಣೆ `ಉಳುಕೆ ಅಂಬಲಿ’ ಎಂಬುದರ ಆ ಉಳಿದ ಅಂಬಲಿಯ ನಿತ್ಯದ ನುಡಿಗಟ್ಟು.
ಮಹಾದೇವರ ಈ ಆಡುಮಾತಿನ ನಿರೂಪಣಾ ಶೈಲಿಯನ್ನು ಅನುಕರಿಸಲು ಕೆಲವರು ಯತ್ನಿಸಿ ಸೋತಿದ್ದಾರೆ. ಅದು ಜೆ.ಎಂ. ಸಿಂಜ್‍ನಂತೆ ಬರೆಯಲು ಹೋಗುವಂತಾಗುತ್ತದೆ. ಸಿಂಜ್‍ನ ಸಾಧನೆ ಇರುವುದು ಆತ ಆ ಮಾತುಗಳನ್ನು ಕೇಳಿ ದಾಖಲಿಸಿಕೊಂಡು ವಸ್ತು ಸಿಕ್ಕಾಗ ಬಳಸಿದ್ದು; ಆತನ ಪಾತ್ರಗಳ ಆಳದಲ್ಲಿ ಆ ನುಡಿಗಟ್ಟು ಹೊಂದಿಕೊಂಡದ್ದು, ಮಹಾದೇವರ ಮಾತೂ ಅಷ್ಟೆ. ಅವರ ಕಿವಿಯ ಮೇಲೆ ಬಿದ್ದ ಮಾತು ಚಿತ್ತದ ಮೇಲೆ ಸುಳಿದ ಜನ ಇಲ್ಲಿ ಕತೆಯಾಗುತ್ತಾರೆ.
ಇದನ್ನು ಬರೆಯಲು ಒತ್ತಾಯಿಸಿ ಗೆಳೆಯ ಮಹಾದೇವ ನಾನು ಮತ್ತೊಮ್ಮೆ ಅವರ ಕೃತಿಗಳನ್ನು ಓದುವಂತೆ ಮಾಡಿ ನನಗೆ ಒಳ್ಳೆಯದು ಮಾಡಿದ್ದಾರೆ. ಇಲ್ಲಿಯ ಅನೇಕ ಕತೆಗಳು (ಎಲ್ಲ ಕತೆಗಳ ಹಿಂದಿನ ಮನಸ್ಸು) ಅವರ ಬಗೆಗಿನ ನನ್ನ ಹೆಮ್ಮೆ ಹೆಚ್ಚಿಸಿವೆ. `ಕುಸುಮಬಾಲೆ’ಯನ್ನು ಮತ್ತೆ ಓದಿದರೂ ನನ್ನ ಚಿಂತನೆಯ ಆಳಕ್ಕೆ ಇಳಿಯದ ಅದನ್ನು ಚರ್ಚಿಸಲು ಹೋಗಿಲ್ಲ. ಈ ಬಗ್ಗೆ ಅವರು ನನ್ನನ್ನು ತಪ್ಪು ತಿಳಿದುಕೊಳ್ಳಬಾರದು.

ಬೆಂಗಳೂರು                                                                                                                                                                                                  02.07.1992