ಮಲೆಗಳಲ್ಲಿ ಮದುಮಗಳಿಗೆ ಕಣ್ಹಾಕಿ-ದೇವನೂರ ಮಹಾದೇವಕನ್ನಡದ ಮೊದಲ ಕಾದಂಬರಿ `ಇಂದಿರಾ ಬಾಯಿ’ಗೆ ನೂರು ವರ್ಷ ತುಂಬಿದ ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಅಲ್ಲಿ `ಮಲೆಗಳಲ್ಲಿ ಮದುಮಗಳು’ ಶತಮಾನದ ಕಾದಂಬರಿ ಎಂದೆ. ಈ ಅನ್ನಿಸಿಕೆ ಕನ್ನಡಕ್ಕೆ ಮಾತ್ರ ಅಲ್ಲ ಭಾರತದ ವ್ಯಾಪ್ತಿಗೂ ಈಗಲೂ ನಿಜ ಅನ್ನಿಸುತ್ತಿದೆ.
ಮಲೆಗಳಲ್ಲಿ ಮದುಮಗಳನ್ನು ನಾನು ಮೊದಲು ಓದಿದಾಗ ಬಿಎ ಓದುತ್ತಿದ್ದೆ. ಆಗ ನನ್ನ ಸುತ್ತಮುತ್ತ ಇದ್ದ ವಿಮರ್ಶಕರು ಮಲೆಗಳಲ್ಲಿ ಮದುಮಗಳನ್ನು ಕತ್ತರಿಸಿ ತುಂಡು ಹಾಕುತ್ತಿದ್ದರು. ಆಗ ಅವರು ನನ್ನನ್ನು ಪ್ರಭಾವಿಸುತ್ತಿದ್ದವರೆ. ಆದರೂ ಅವರ ಮುಂದೆ ಒಂದು ಪ್ರಶ್ನೆ ಮುಂದಿಡುತ್ತಿದ್ದೆ. “ಇದುವರೆಗೆ ಕನ್ನಡದಲ್ಲಿ ಉತ್ತಮ ಕಾದಂಬರಿಗಳೆಂದು ಪರಿಗಣಿಸಲ್ಪಟ್ಟ ನಾಕಾರು ಕಾದಂಬರಿಗಳನ್ನು ತಕ್ಕಡಿಯ ಒಂದು ತಟ್ಟೆಯಲ್ಲಿಟ್ಟು, ಇನ್ನೊಂದು ತಟ್ಟೆಯಲ್ಲಿ ಮಲೆಗಳಲ್ಲಿ ಮದುಮಗಳನ್ನು ಇಟ್ಟರೂ ಗಾತ್ರದಲ್ಲೂ ಗುಣದಲ್ಲೂ ಮಲೆಗಳಲ್ಲಿ ಮದುಮಗಳು ಹೆಚ್ಚು ತೂಗುತ್ತದೆ. ತಕ್ಕಡಿಗೆ ಏನಾಗಿದೆ?’’ ಆಗ ಮುಗ್ಧವಾಗಿ ಕೇಳುತ್ತಿದ್ದೆ. ಈಗ ನನ್ನನ್ನು ನಾನು ಸ್ವಲ್ಪ ಪ್ರಬುದ್ಧ ಅಂದುಕೊಳ್ಳುವುದಾದರೆ, ನೀವೂ ಉದಾರವಾಗಿ ಪ್ರಬುದ್ಧ ಎಂದು ಪರಿಗಣಿಸುವುದಾದರೆ- ಈಗಲೂ ನನ್ನ ಪ್ರಶ್ನೆ ಇಷ್ಟೆ: `ತಕ್ಕಡಿಗೆ ಏನಾಗಿದೆ?’
ಕ್ಷಮೆ ಇರಲಿ, ವಿಮರ್ಶೆ ನನಗೆ ಆಗಲೂ ಬರುತ್ತಿರಲಿಲ್ಲ; ಈಗಲೂ ಬರುವುದಿಲ್ಲ. ಅದಕ್ಕಾಗಿ ಈ ಕಾರ್ಯಕ್ರಮಕ್ಕೆ ಒಪ್ಪಿಕೊಂಡಾಗ ಯಾವ ಕೆಲಸವನ್ನೂ ಮಾಡದೆ `ಮಲೆಗಳಲ್ಲಿ ಮದುಮಗಳು’ ಓದಿ ಮುಗಿಸಿದೆ. ವಿಯಟ್ನಾಂ ಯುದ್ಧದ ಕ್ಷೋಭೆಗೆ ಅಮೇರಿಕಾದ ಪ್ರಜ್ಞಾವಂತ ಆಕಾಶವಾಣಿಯೊಂದು ಟಾಲ್‍ಸ್ಟಾಯ್‍ನ ಜಗತ್ಕೃತಿ`ವಾರ್ ಅಂಡ್ ಪೀಸ್’ಅನ್ನು ನಿರಂತರವಾಗಿ ಓದಿದಂತೆ, ಓದಿ ಸಂವೇದನೆ ಪಡೆದುಕೊಂಡಂತೆ, ಮಾತಿಲ್ಲದಂತೆ. ಅಂತೆಯೇ `ಮಲೆಗಳಲ್ಲಿ ಮದುಮಗಳು’ ಓದಿದೆ. ಮಲೆಗಳಲ್ಲಿ ಮದುಮಗಳು ಮೇಲೆ ಈ ವಯಸ್ಸಲ್ಲೂ ಕಣ್ಹಾಕಿ ಕಣ್ಹಾಕಿ ನನ್ನ ಕಣ್ಣು ಈಗ ನೋಯುತ್ತಿದೆ.
ಕಾದಂಬರಿಯನ್ನು ಓದಲು ಆರಂಭಿಸಿದೊಡನೆ ಅಲ್ಲಿ ಬದುಕು ಬದುಕತೊಡಗುತ್ತದೆ. ಇಲ್ಲಿ ಕತೆ ಹೇಳುತ್ತಿಲ್ಲ; ಕತೆ ಕಟ್ಟುತ್ತಿಲ್ಲ; ಇಲ್ಲೆ ವರ್ತಮಾನದಲ್ಲೆ ಜೀವನ ಹುಟ್ಟಿ ಚಲಿಸುತ್ತಿದೆ ಅನ್ನಿಸತೊಡಗುತ್ತದೆ, ನಿಧಾನಗತಿಯಲ್ಲಿ, ಸಾವಧಾನವಾಗಿ. ಇಲ್ಲಿ ಇದಾಗುತ್ತಿದ್ದರೆ ಅದೇ ಕಾಲದಲ್ಲಿ ಅಲ್ಲಿ ಇನ್ನೊಂದು ಜರುಗುತ್ತ ಆಗಲೇ ಅದೇ ವರ್ತಮಾನದಲ್ಲೇ ಮತ್ತೊಂದೂ ಆಗುತ್ತಾ ಆ ಆಗುವಿಕೆಯಲ್ಲಿ ನಡೆಯುವ ನಮಗೆ ಎಲ್ಲವೂ ಕೂಡಿಕೊಂಡ ಜೀವಜಾಲ ಎದುರಾಗುತ್ತದೆ. ಕಾದಂಬರಿಯ ಆರಂಭದಲ್ಲಿ ಕೃತಿಕಾರ- `ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ!’ ಎಂದು ಹೇಳಿರುವ ಮಾತು ಮಾತಾಗಿ ಉಳಿಯುವುದಿಲ್ಲ. ಈ ನೋಟವೇ ಕೃತಿಯ ಸಂವೇದನಾಶೀಲತೆಗೂ ಸೂಕ್ಷ್ಮತೆಗೂ ಕಾರಣವೇನೊ ಎಂಬಷ್ಟು. ಕಾದಂಬರಿಯಲ್ಲಿ ಒಂದು ಕಡೆ ಮಾತ್ರ ಸಾವಧಾನ ಮೈ ಮರೆಯುತ್ತದೆ. ಅದೇ ಉಂಗುರದ ಪ್ರಸಂಗ. ಸಾವಧಾನವು ಮೈಮರೆತ ಈ ಗಳಿಗೆಯನ್ನು ಹಿಡಿದುಕೊಂಡು, ಅಳವಡದ ಕಾದಂಬರಿಯನ್ನು ನಾಟಕ ಪ್ರಕಾರಕ್ಕೆ ಅಳವಡಿಸಲು ಎಪಿಕ್ ಹಿಡಿಯುವ ಸಾಮರ್ಥ್ಯದ ಪ್ರತಿಭಾವಂತರಾದ ಬಸವಲಿಂಗಯ್ಯ, ಕೆ.ವೈ. ನಾರಾಯಣಸ್ವಾಮಿ ಸಾಹಸ ಮಾಡಿದ್ದಾರೆ. ಮೈಮರೆತ ಕ್ಷಣದಲ್ಲಿ ಮೂಗುದಾರ ಹಾಕಿದ್ದಾರೆ. ನಾನಿಲ್ಲಿ ಹೇಳಲು ಕಷ್ಟಪಡುತ್ತಿರುವುದು ಇಷ್ಟೆ: `ಮಲೆಗಳಲ್ಲಿ ಮದುಮಗಳು’ ಕೃತಿಯ ಆಳ ಅಗಲ ಅಳತೆಗೆ ಅಳವಡದು ಎಂಬುದನ್ನಷ್ಟೆ.
ನನ್ನ ಭಾವಕೋಶದೊಳಗೆ ಇರುವ ರಾಮಾಯಣದ ಅರಣ್ಯವನ್ನು ಬಿಟ್ಟರೆ ಬಹುಶಃ `ಮಲೆಗಳಲ್ಲಿ ಮದುಮಗಳು’ವಿನಲ್ಲೆ ಅರಣ್ಯ ಬೃಹತ್ ಆಗಿ ಮೈ ತಳೆದಿರುವುದು ಅನ್ನಿಸುತ್ತದೆ. ಈ ಅರಣ್ಯದೊಳಗೆ ಅರಣ್ಯವನ್ನೂ ಒಳಗೊಂಡ ಜೀವ ಸಂಕುಲದ ಪ್ರವಾಹವು ಏರಿಳಿತಗಳಲ್ಲಿ ಹರಿಯುತ್ತದೆ. ಇದರೊಳಗೆ ಕಗ್ಗಂಟಾಗಿರುವ ಮನುಷ್ಯನ ಕತೆಯೂ ಬರುತ್ತದೆ. ಹೀರೋ ಹುಲಿಯ ಎಂಬ ನಾಯಿಯ ಕತೆಯೂ ಬರುತ್ತದೆ. ಜಡವಾದ ಹುಲಿಕಲ್ಲು ನೆತ್ತಿಯೂ ಕೂಡ ಕಂಪನಗಳಿಂದ ಜೀವಂತವಾಗಿದೆ. ಪ್ರಕೃತಿಯ ಜೀವಂತಿಕೆ ಹೇಗಿದೆ ಎಂಬುದಕ್ಕೆ ಕಾದಂಬರಿಯ ಪುಟ 472ರಿಂದ ಕೆಲವು ವಾಕ್ಯಗಳನ್ನು ಆಯ್ದು ಇಡುತ್ತಿರುವೆ. “ಯಾರು ಬದುಕಲಿ, ಯಾರು ಸಾಯಲಿ, ಯಾರು ಹುಟ್ಟಲಿ, ಹುಟ್ಟದೆ ಹೋಗಲಿ, ಮಳೆಗಾಲ ನಿಲ್ಲುತ್ತದೆಯೆ? ಮಳೆ ಹಿಡಿದು ಕೂತಿತ್ತು. ನಾಲ್ಕು ಪಾದಗಳನ್ನೂ ಬಲವಾಗಿ ಊರಿ!… ಆ ಪ್ರಕೃತಿಯ ಪ್ರತಿರೂಪದ ಸಹ್ಯಾದ್ರಿ ಪರ್ವತ ಕಾನನ ಶ್ರೇಣಿ ಮನುಷ್ಯನ ಅಲ್ಪ ಸುಖದುಃಖಗಳಿಗೆ ಸಂಪೂರ್ಣ ನಿಸ್ಸಂಗಿಯಾಗಿ…’’ ಎಂದು ಬರುತ್ತದೆ. ಮನುಷ್ಯ ಬದುಕಿನ ಆಸೆ ನಿರಾಸೆ ಕಷ್ಟ ಸುಖ ಶೋಕ ತಾಪಾದಿಗಳು ಯಃಕಶ್ಚಿತಗಳಾಗಿದ್ದುದರಲ್ಲಿ ಆಶ್ಚರ್ಯವೇನು? ಇವೆಲ್ಲಾ ಪ್ರಕೃತಿಯ ಕಡೆಗಣ್ಣಿನ ನೋಟಕ್ಕೂ ಬರಲಾರದೇನೊ ಎಂಬಂತೆ ಬರೆಯುತ್ತಾರೆ. ಈ ಗ್ರಹಿಕೆ ಈ ನೋಟ ಯಾರಿಗೆ ದಕ್ಕಲು ಸಾಧ್ಯ? ತಪ್ಪಸ್ಸು ಮಾಡಿ ಪ್ರಕೃತಿಯನ್ನು ಸಾಕ್ಷಾತ್ಕರಿಸಿಕೊಂಡು ವರ ಪಡೆದವನಿಗೆ ಸಾಧ್ಯ ಅನ್ನಿಸಿಬಿಡುತ್ತದೆ. ಹರಿಯುತ್ತಿರುವ, ನಿಲುಕದ ಬದುಕಿನಂತೆ ಕೃತಿ ಚಲಿಸುತ್ತದೆ. ಸ್ಪರ್ಶ, ವಾಸನಾ, ಶಬ್ಧ, ರುಚಿ- ಇವು ಭಾಷೆಯಲ್ಲಿ ಚಿಗುರೊಡೆಯುವಂತೆ ರೂಪ ತಳೆಯುತ್ತದೆ. ಹೀಗೆ ಇರುವುದರಿಂದಲೇ ಏನೋ, `ಮಲೆಗಳಲ್ಲಿ ಮದುಮಗಳು’ಗೆ ಐವತ್ತೊಂದನೆ ವರ್ಷ ನಡೆಯುತ್ತಿದ್ದರೂ ಮಕ್ಕಳು ಮೊಮ್ಮಕ್ಕಳು ಆಗಿದ್ದರೂ ಕನ್ಯೆಯಂತೆ ಕಂಗೊಳಿಸುತ್ತಿದೆ, ನಿತ್ಯತ್ವದಲ್ಲಿ.

ಈ ಸೋಜಿಗಕ್ಕೆ, ಕೃತಿ ಬರೆಯುವ ಸಂದರ್ಭದಲ್ಲಿ ಕೃತಿಕಾರನ ಮನಸ್ಥಿತಿಯ ಬಗ್ಗೆ ಏನಾರು ಎವಿಡೆನ್ಸ್ ಸಿಗಬಹುದಾ ಎಂದು ಹುಡುಕಿದೆ. Eye witness ಮಗಳು ತಾರಿಣಿ ಚಿದಾನಂದ ಅವರು `ಮಗಳು ಕಂಡ ಕುವೆಂಪು’ ವಿನಲ್ಲಿ ಬರೆಯುತ್ತಾರೆ: `ಮಲೆಗಳಲ್ಲಿ ಮದುಮಗಳು’ನಲ್ಲಿ ಮುಳುಗಿದ ಕುವೆಂಪು ಅವರಿಗೆ, ಕಾಫಿ ಕುಡಿಯಲು ಬನ್ನಿ ಎಂದರೆ, `ತಾಳು, ತಾಳು ಚಿನ್ನಮ್ಮ ತಪ್ಪಿಸಿಕೊಂಡು ಹೋಗಬೇಕು. ಹಂಡೆ ಸದ್ದಾಗುತ್ತಿದೆ’ ಅನ್ನುತ್ತಾರೆ. ಮದುವೆ ಮನೆ ಗದ್ದಲದಲ್ಲಿ ಹಂಡೆ ಶಬ್ದವಾದಾಗ ಚಿನ್ನಮ್ಮ ಪೀಂಚಲು ಜೊತೆ ರಾತ್ರೋರಾತ್ರಿ ಪರಾರಿಯಾಗುವ ಸಂಚು ರೂಪಿತವಾಗಿರುತ್ತದೆ. ಕಾದಂಬರಿ ಬರೆಯುತ್ತಿರುವ ಕುವೆಂಪು ಕೂಡ ಹಂಡೆ ಸದ್ದಿಗಾಗಿ ಆತಂಕದಿಂದ ಆಲಿಸುತ್ತಿದ್ದರು ಅನಿಸುತ್ತದೆ. ಮುಂದೆ ಕುವೆಂಪು “ಅಂತಕ್ಕನ ಮಗಳು ಕಾವೇರಿಯ ದುರಂತ ಸಾವನ್ನು ತಪ್ಪಿಸಲು ಎಷ್ಟು ಪ್ರಯತ್ನಿಸಿದರೂ ಆಗಲಿಲ್ಲ’’ ಅನ್ನುತ್ತಾರೆ. ಇಲ್ಲಿ ಕೃತಿಕಾರ ಕೃತಿಯನ್ನು ಸೃಷ್ಟಿಸುತ್ತಿದ್ದಾನೋ, ಕೃತಿಯೇ ಕೃತಿಕಾರನನ್ನು ಸೃಷ್ಟಿಸುತ್ತದೆಯೊ?
ಇದನ್ನು ಅರ್ಥ ಮಾಡಿಕೊಳ್ಳುವುದಕ್ಕಾಗಿ ಒಂದು ತದ್ವಿರುದ್ಧದ ಪ್ರಸಂಗ ಹೇಳುವೆ. ಕೆಲವು ವರ್ಷಗಳ ಹಿಂದೆ ನನ್ನ ಗೆಳೆಯರೊಬ್ಬರು- `ನೀವು ಯಾರೂ ಯಂಡಮೂರಿ ವೀರೇಂದ್ರನಾಥ್‍ರನ್ನು ಓದುವುದೇ ಇಲ್ಲ, ತುಂಬಾ ಚೆನ್ನಾಗಿ ಬರೆಯುತ್ತಾರೆ’ ಎಂದರು. (ಬಹುಶಃ ಡಿ.ಎಸ್.ನಾಗಭೂಷಣ). ನನಗೆ ತಲೆ ಕೆಟ್ಟುಹೋಯ್ತು. ಯಂಡಮೂರಿಯವರ ಒಂದು ಪುಸ್ತಕವನ್ನು ರಾತ್ರಿ ಹನ್ನೊಂದು ಗಂಟೆಗೆ ಓದಲು ಶುರು ಮಾಡಿದವನು ಬೆಳಗಿನ ಜಾವ ಮೂರರವರೆಗೆ ಓದಿ ಮುಗಿಸಿ ನಿದ್ದೆಗೆಟ್ಟೆ. ಇದನ್ನು ಬರೆದಾತ, ಬರೆಯಬೇಕಾದ ಮಾಹಿತಿಯನ್ನು ಸಂಗ್ರಹಿಸಿದ್ದನು. ಅದನ್ನು ಭಾಷೆಯ ಮೂಲಕ ಸೀರಿಯಲ್ ಸಸ್ಪೆನ್ಸ್ ಗೆ ತನ್ನ ಬುದ್ಧಿಯನ್ನೆಲ್ಲಾ ಧಾರೆ ಎರೆದು ಕಟ್ಟಿದ್ದನು. ಗೂಡ್ಸ್ ರೈಲಲ್ಲಿ ಸರಕು ಸಾಗಾಣಿಕೆ ಮಾಡಿದಂತೆ. ಆ ಸರಕು- ಧರ್ಮವೂ ಆಗಿರಬಹುದು, ತತ್ತ್ವಶಾಸ್ತ್ರವೂ ಆಗಿರಬಹುದು, ಹಾಗೆಯೇ ಪ್ರಗತಿಪರವೂ, ಪ್ರಗತಿವಿರೋಧಿಯೂ ಆಗಿರಬಹುದು. ಅದು ಏನೇ ಆಗಿದ್ದರೂ ಸರಕು ಸಾಗಾಣಿಕೆಯಷ್ಟೆ; ಸೃಜನಾತ್ಮಕ ಕೃತಿಯಲ್ಲ. ಈ ಸೂಕ್ಷ್ಮತೆಯನ್ನು ಸಾಹಿತ್ಯಲೋಕ ಪಡೆದುಕೊಳ್ಳದಿದ್ದರೆ ಯಂಡಮೂರಿಯನ್ನೇ ಸ್ವಲ್ಪ ಸ್ಟ್ಯಾಂಡರ್ಡ್ ಮಾಡಿಕೊಂಡು ಬರೆದ ಕೃತಿಗಳು ಸಾಹಿತ್ಯ ಕೃತಿಗಳೆಂದು ಪ್ರಸಿದ್ಧಿ ಪಡೆಯಲೂಬಹುದು. ಯಂಡಮೂರಿ ಓದಿದ ಮೇಲೆ ಆ ಪ್ರಕಾರಕ್ಕೆ ಸೇರಿದ ಬರವಣಿಗೆಯ ಬಗ್ಗೆ ಒಂದು ಉಪಮೆ ಮೂಲಕ ಆಗ ಏನೋ ಹೇಳಿದ ನೆನಪು. ಕೃತಿಯೊಂದು, ಕೃತಿಕಾರನನ್ನೂ ಸೃಜಿಸುವ ಪರಿಯನ್ನು ಗ್ರಹಿಸುವುದಕ್ಕಾಗಿ ಇಷ್ಟೆಲ್ಲಾ ಹೇಳಬೇಕಾಯ್ತು. ಸೃಜನಶೀಲತೆಯ ಚಿಲುಮೆ ನೆಲ ಸೀಳಿಕೊಂಡು ಬಂದಂತೆ ಲಿಯೋ ಟಾಲ್‍ಸ್ಟಾಯ್‍ನಲ್ಲಿ ಎದ್ದು ಕಾಣುತ್ತದೆ. ಎಷ್ಟೆಂದರೆ, ಬರೆದಾದ ಮೇಲೆ ಟಾಲ್‍ಸ್ಟಾಯ್ ತಾನು ಬರೆಯಬೇಕೆಂದಿದ್ದುದು ಇದಲ್ಲ ಎಂದು ಬಹಳ ಸಲ ಅತೀವವಾಗಿ ಪರಿತಪಿಸುತ್ತಾನೆ. ಚಿಲುಮೆಯಂಥ ಸೃಜನಶೀಲತೆಯಲ್ಲಿ ಈ ಬೆರಗು ಸಂಭವಿಸಬಹುದು.
ಈ ನಿಲುಕಲಾಗದ, ತುಂಬಿತುಳುಕುವ, ತಬ್ಬಿಗೆ ಸಿಗದ ವಿಸ್ಮಯವೆ ಕಾರಣವಾಗಿ `ಮಲೆಗಳಲ್ಲಿ ಮದುಮಗಳು’ ಅವಜ್ಞೆಗೂ ಉಪೇಕ್ಷೆಗೂ ಒಳಗಾಗಲು ಕಾರಣವಾಗಿರಬಹುದೇ? `ವಾರ್ ಅಂಡ್ ಪೀಸ್’ ಧಾರಾವಾಹಿಯಾಗಿ ಪ್ರಕಟವಾಗುತ್ತಿದ್ದ ಕಾಲಮಾನದಲ್ಲಿ ಅದರ ಬಗ್ಗೆ ಬರುತ್ತಿದ್ದ ವಿಮರ್ಶೆಗಳಂತೆಯೇ ಕನ್ನಡದಲ್ಲಿ ಮಲೆಗಳಲ್ಲಿ ಮದುಮಗಳಿಗೂ ಆಗುತ್ತದೆ. ಇವಾನ್ ಟರ್ಗೀನೇವ್ ರಷ್ಯಾದ ಮಹಾನ್ ಲೇಖಕ. ಟಾಲ್‍ಸ್ಟಾಯ್‍ಗಿಂತ ವಯಸ್ಸಲ್ಲಿ ಹತ್ತು ವರ್ಷ ದೊಡ್ಡವನು. ತನ್ನ ಜೀವಿತ ಕಾಲದಲ್ಲೆ ವಿಶ್ವಖ್ಯಾತಿ ಗಳಿಸಿದಾತ. ಆಂಗ್ಲರು ಅವನನ್ನು ಡಿಕೆನ್ಸ್ ಗೆ ಹೋಲಿಸಿದರೆ ಜರ್ಮನರು ಗಯಟೆಗೂ ಫ್ರೆಂಚರು ಬಾಲ್ಜಾಕ್‍ಗೂ ಹೋಲಿಸುತ್ತಿದ್ದರು. ಜಗತ್ತಿನ ಅನೇಕಾನೇಕ ಪ್ರತಿಭಾವಂತರು ಟರ್ಗೀನೇವ್‍ನನ್ನು ತಮ್ಮ ಸಾಹಿತ್ಯದ ಗುರು ಎಂದು ಪರಿಗಣಿಸಿದ್ದರು. ಇಂಥ ಇವಾನ್ ಟರ್ಗೀನೇವ್ `ವಾರ್ ಅಂಡ್ ಪೀಸ್’ ಬಗ್ಗೆ ಬರೆಯುತ್ತ “ಟಾಲ್‍ಸ್ಟಾಯ್‍ನ ಗಹನವಾದ ಸ್ವೋಪಜ್ಞತೆ, ಅದರ ಅಪಾರವಾದ ಶಕ್ತಿ ಇವೇ ವಿದೇಶಿ ಓದುಗರು ಕಾದಂಬರಿಯನ್ನು ಶೀಘ್ರವಾಗಿ ಓದಿ ಮೆಚ್ಚಲಾಗದಂತೆ ಮಾಡಿವೆ’’ ಎನ್ನುತ್ತಾನೆ. ಈ ದೊಡ್ಡ ಲೇಖಕ ಟರ್ಗೀನೇವ್ ಯಾರನ್ನು ಮೆಚ್ಚಿಸಬೇಕೆಂದಿದ್ದಾನೆ? ಆದರೆ ಟಾಲ್‍ಸ್ಟಾಯ್ ನೋಟ ಹೀಗಿದೆ- `ಯುರೋಪಿನಲ್ಲಿ ಯಾವ ಅರ್ಥದಲ್ಲಿ ಕಾದಂಬರಿ ಅನ್ನುತ್ತಾರೋ ಅಂಥದನ್ನು ಬರೆಯುವುದಕ್ಕೆ ನಮಗೆ ರಷಿಯನ್ನರಿಗೆ ಒಪ್ಪವಲ್ಲ. ಇದು ಕಥೆಯಲ್ಲ; ಇಲ್ಲಿ ಯಾವುದೇ ಐಡಿಯಾವನ್ನು ಮುಂದು ಮಾಡಿಲ್ಲ; ಏನನ್ನೂ ಸಾಧಿಸುವುದಕ್ಕೆ ಹೋಗಿಲ್ಲ’ ಅನ್ನುತ್ತಾನೆ. ರಷ್ಯಾ ಎಂದಿರುವುದನ್ನು ಏಷ್ಯಾ ಎಂದು ವಿಸ್ತರಿಸಿಕೊಂಡು ಮಲೆಗಳಲ್ಲಿ ಮದುಮಗಳನ್ನು ಹೀಗೆಯೇ ನೋಡಬೇಕೆನಿಸುತ್ತದೆ. `ಮಲೆಗಳಲ್ಲಿ ಮದುಮಗಳು’ ಬಗ್ಗೆ ಪಾಶ್ಚಾತ್ಯಕ್ಕೆ ತುತ್ತಾದ ಕನ್ನಡ ಬುದ್ಧಿವಂತರ ಕೊಂಕಿಗೆ, ಪಾಶ್ಚಾತ್ಯ ಮೋಹಿತ ಟರ್ಗೀನೇವ್ ಥರದವರ ಮಾದರಿ ಕಾರಣವಾಗಿ ಇರಬಹುದೆನ್ನಿಸುತ್ತದೆ.
ಅಂತೆಯೇ `ವಾರ್ ಅಂಡ್ ಪೀಸ್’ ಬಗ್ಗೆ ಹೆನ್ರಿ ಜೇಮ್ಸ್ ನ ಆಕ್ಷೇಪಣೆಗಳ ನಡುವೆ ಇರುವ ಹೊಳಹುಗಳನ್ನು ಗಮನಿಸಬೇಕಾಗಿದೆ. “ಸಂಯೋಜನೆಯ ತತ್ವವನ್ನು ಧಿಕ್ಕರಿಸುವ ಚಿತ್ರವು ಸೌಂದರ್ಯವನ್ನು ಪಡೆಯಲಾರದು. ಕಲೆಯಾಗಬೇಕೆಂದು ಚಿತ್ರಕಾರ ಉದ್ದೇಶಪೂರ್ವಕವಾಗಿ ಬಯಸದೇ ಇರುವಾಗ ಅದು ರಚನೆಗೊಂಡ ಚಿತ್ರವೇ ಆಗಿರುವುದಿಲ್ಲ. ಕಲೆಯ ಬದಲಿಗೆ ಅದರಲ್ಲಿ ಜೀವನ ಇರಬಹುದು. ಆದರೆ ಆಕಸ್ಮಿಕ ಯಾದೃಚ್ಛಿಕ ಅಂಶಗಳನ್ನು ಒಳಗೊಂಡಿರುವ ಇಂಥ ಅಸಡ್ಢಾಳ (baggie)ದೈತ್ಯ ಕೃತಿಗಳು ಕಲಾತ್ಮಕವಾಗಿ ಯಾವ ಅರ್ಥವನ್ನು ಪ್ರಕಟಿಸುತ್ತವೆ? ಇಂಥ ಕೃತಿಗಳು `ಕಲೆಗಿಂತ ಮಿಗಿಲು, ಕಲೆಗಿಂತ ಶ್ರೇಷ್ಠ’ ಎಂದೆನ್ನುವ ಮಾತುಗಳಿವೆ. ಆದರೆ ಈ ಕೃತಿಗಳ ಅರ್ಥವೇನು?” ಎಂದು ಪ್ರಶ್ನಿಸಿ, ಆಮೇಲೆ- “ಟಾಲ್‍ಸ್ಟಾಯ್‍ನನ್ನು ನೋಡಿದರೆ, ಅದೊಂದು ಬದುಕಿನ ಅಚ್ಚರಿಯ ಮೊತ್ತ, ಅಗಾಧವಾದ ಸಂಭವ, ಅಭೂತಪೂರ್ವ ಆಕಸ್ಮಿಕ, ನೈಸರ್ಗಿಕವಾದ ವಿಶಾಲ ಸರೋವರದಂಥವನು. ಸುಮ್ಮನೆ ಪ್ರತಿಫಲಿಸುತ್ತಾನೆ… ಇಲ್ಲಿ ನಮ್ಮ ಸಹಾಯಕ್ಕೆ ಬರುವ, ಬದುಕನ್ನು ವಿವರಿಸುವ ದೈವೀ ಪ್ರತಿಭೆಯ ಕಲಾವಿದ ಹುಡುಕಿದರೂ ಸಿಗುವುದಿಲ್ಲ” ಅನ್ನುತ್ತಾನೆ. ಆಯ್ತು, ದೈವಕ್ಕೆ ರೆಸ್ಟ್ ತೆಗೆದುಕೊಳ್ಳುವ ಆಸೆಯಾಗಿ ತನ್ನ ಕೆಲಸವನ್ನು ಮನುಷ್ಯ ರೂಪವೊಂದಕ್ಕೆ ವಹಿಸಿಕೊಟ್ಟಿದ್ದರ ದೆಸೆಯಿಂದಾಗಿ ಆಗ ವಾರ್ ಅಂಡ್ ಪೀಸ್ ಹುಟ್ಟಿತು ಅಂತಲೂ ಹೇಳಬಹುದಲ್ಲ! ಇಷ್ಟು ಸಾಕು. ಗೊತ್ತಿದ್ದೋ ಗೊತ್ತಿಲ್ಲದೆಯೋ ಹೆನ್ರಿ ಜೇಮ್ಸ್ ನ ಮಾತುಗಳು ಒಂದು ಎಪಿಕ್ ಬಗ್ಗೆ ಹೇಳಿದಂತಿದೆ.
ಟಾಲ್‍ಸ್ಟಾಯ್ ಪ್ರಾಸಂಗಿಕವಾಗಿ `ವಾರ್ ಅಂಡ್ ಪೀಸ್’ನ್ನು ಹೋಮರ್‍ ನ ಎಪಿಕ್ ಇದ್ದಂತೆ ಎಂದು ಮ್ಯಾಕ್ಸಿಂಗಾರ್ಕಿಗೆ ಹೇಳಿದ್ದಿದೆ. ರಷ್ಯಾ ಮಣ್ಣಿಗೆ ಸಹಜವಾದ ಮಹಾಕಾವ್ಯ ಸೃಷ್ಟಿ ಟಾಲ್‍ಸ್ಟಾಯ್‍ನ ಭೂಮಿಕೆಗಿದೆ. ಜಗತ್ತಿನ ಪ್ರತಿಭೆಯ ಸೃಷ್ಟಿಯಲ್ಲಿ ಏಷ್ಯಾಖಂಡದ ಮಣ್ಣಲ್ಲಿ ಸಂಭವಿಸಿದ ಮಹಾಕಾವ್ಯ ಮಹಾಭಾರತದ ನಂತರದಲ್ಲಿ ನಿಲ್ಲುವ ಕೃತಿ `ವಾರ್ ಅಂಡ್ ಪೀಸ್’ ಎಂದು ನನಗನ್ನಿಸುತ್ತಿರುತ್ತದೆ. ಈ ಪರಂಪರೆಯಲ್ಲಿ ಬರುವ ಕೃತಿಯೇ `ಮಲೆಗಳಲ್ಲಿ ಮದುಮಗಳು’. ಈ ನೋಟ ಪಡೆದಾಗ ಅಗಾಧವಾದ ಸೃಷ್ಟಿಯೊಂದನ್ನು ಸ್ವೀಕರಿಸುವ ಅರ್ಹತೆ ಪಡೆಯುತ್ತೇವೆ. ಇಂದು ಕಾದಂಬರಿ ಕ್ಷೇತ್ರದಲ್ಲಿ ಅನೇಕ ಪ್ರಯೋಗಗಳಾಗಿವೆ, ಆಗುತ್ತಲೂ ಇವೆ. ಒಂದಕ್ಕೊಂದು ಕ್ರಾಸ್ ಆಗಿ ವಿನೂತನ ಕೃತಿಗಳೂ ಹುಟ್ಟುತ್ತಿವೆ. ಎಲ್ಲವೂ ಇರಲಿ ಎಲ್ಲವೂ ಬರಲಿ. ಜೊತೆಗೆ ಏಷ್ಯಾದ ಮಣ್ಣಲ್ಲಿ ಸಹಜವಾದ ಮಹಾಕಾವ್ಯಗಳು ಇದ್ದಿರಬಹುದು. ಯಾರಿಗೆ ಗೊತ್ತು? ಎಲ್ಲೋ ಯಾರಿಂದಲೋ ಯಾರಿಗೆ ಗೊತ್ತು? ಕಾಲೋಸ್ಮಿ!
ನನ್ನ ಮಿತವಾದ ಓದಿನ ಹಿನ್ನೆಲೆಯಲ್ಲಿ ಹೇಳಬಹುದಾದಷ್ಟನ್ನು ಹೇಳಿದ್ದೇನೆ. ಇದನ್ನು ವಿಸ್ತಾರವಾದ ಹಾಗೂ ಆಳವಾದ ಓದಿನ ಪ್ರಜ್ಞೆಯವರು ಪರೀಕ್ಷಿಸಬೇಕಾಗಿದೆ, ಬೆಳೆಸಬೇಕಾಗಿದೆ. ಇದಕ್ಕಾಗಿ ಎರಡು ಬಿತ್ತನೆ ಬೀಜಗಳನ್ನು ಹೆಸರಿಸುವೆ. ಒಂದು- ಡಿ.ಎಸ್.ನಾಗಭೂಷಣ್ ಅವರ `ಕುವೆಂಪು ಅವರ ಕಥನ ಪ್ರತಿಭೆಯ ದಾರ್ಶನಿಕ ನೆಲೆಗಳು’ ಹಾಗೂ ಇನ್ನೊಂದು- ಪ್ರೀತಿ ಶುಭಚಂದ್ರ ಅವರ `ಕನ್ನಡ ಕಾವ್ಯಮೀಮಾಂಸೆ : ಕುವೆಂಪು ಕೊಡುಗೆ’. ಈ ಎರಡೂ ಲೇಖನಗಳನ್ನು ಬಿತ್ತಿ ಬೆಳೆಯಬಹುದೇನೋ. ನನ್ನಿಂದ ಉರುಳುಸೇವೆ ಮಾಡಿಸಿಕೊಂಡು ಇಷ್ಟನ್ನು ಹೇಳಲು ಕಾರಣವಾದ `ಮಲೆಗಳಲ್ಲಿ ಮದುಮಗಳು’ಗೆ ಕೃತಜ್ಞತೆ ಸಲ್ಲಿಸುವೆ.