ಮತ್ತೆ ಹರಿಯಿತು ನಾಂಡೂವಾಲಿ ನದಿ-ಡಿ.ಉಮಾಪತಿ

 

ನವದೆಹಲಿ: ದಶಕದ ಹಿಂದೆ ಅವಸಾನ ಹೊಂದಿದ ನದಿಯೊಂದು ಮತ್ತೆ ಮೈದುಂಬಿ ಹರಿಯಲು ಏನೇನು ಬೇಕು? ಮೂವತ್ತು ಲಕ್ಷ ರೂಪಾಯಿ, ಸ್ಥಳೀಯರ ಶ್ರಮ- ಸಂಕಲ್ಪ-ಯೋಜನೆ-ಅದ್ಭುತ ಆತ್ಮವಿಶ್ವಾಸ ಹಾಗೂ ಸಂಭಾವ್ ಎಂಬ ಸಂಸ್ಥೆಯ ಒತ್ತಾಸೆಗಳೇ ಸಾಕು.

ರಾಜಸ್ತಾನದ ಆಲ್ವರ್ ಶಹರದಿಂದ 65 ಕಿ.ಮೀ. ದೂರದಲ್ಲಿರುವ ಸಾಧಾರಣ ಗ್ರಾಮ ನಾಂಡೂ. ಪಶುಸಂಗೋಪನೆ ಮತ್ತು ಕೃಷಿಯೇ ಪ್ರಧಾನ ಜೀವನಾಧಾರ. ಇಂತಹ ಗ್ರಾಮದ ಜನ ದಶಕಗಳ ಹಿಂದೆ ಬತ್ತಿ ಹೋದ ನದಿಯೊಂದನ್ನು ಸದ್ದುಗದ್ದಲವಿಲ್ಲದೆ ಪುನರುಜ್ಜೀವಿತಗೊಳಿಸಿದ ಯಶಸ್ಸಿನ ಕತೆಯಿದು. ಸರ್ಕಾರವನ್ನು ನೆಚ್ಚದೆ ಗ್ರಾಮಸ್ಥರು ತಮ್ಮದೇ ಶ್ರಮ ಶ್ರದ್ಧೆ ಸಮರ್ಪಣೆಯಿಂದ ಈ ಕೆಲಸ ಮಾಡಿದ್ದು ಈ ಯಶಸ್ಸಿನ ಮುಡಿಯಲ್ಲಿ ಹೊಳೆಯುವ ಗರಿ.

160 ಚದರ ಕಿ.ಮೀ. ವ್ಯಾಪ್ತಿಯ 20 ಗ್ರಾಮಗಳ ಬದುಕು ಮತ್ತೆ ಬಂಗಾರ. ದೂರದ ಪೇಟೆ ಪಟ್ಟಣಗಳಲ್ಲಿ ಅಜ್ಞಾತ ಕೂಲಿಗಳಾಗಿದ್ದವರು ಸ್ವಂತ ಮಣ್ಣಿಗೆ ಮರಳಿದ್ದಾರೆ. ಕಳೆದುಕೊಂಡಿದ್ದ ವಿಳಾಸವನ್ನು ಮತ್ತೆ ಗಳಿಸಿಕೊಂಡಿದ್ದಾರೆ. ನೂರಾರು ಬಾವಿಗಳಲ್ಲಿ ಸಮೃದ್ಧ ನೀರು. ಮೇವು ಹಾಲು ಧಾನ್ಯ ಈಗ ಧಾರಾಳ. ದೂರದ ಊರುಗಳಿಗೆ ವಲಸೆ ಮತ್ತು ರೈತರ ಆತ್ಮಹತ್ಯೆಯ ದುರಂತಗಳು ಈ ಹಳ್ಳಿಗಳಿಗೆ ಅಪರಿಚಿತ ನುಡಿಗಟ್ಟುಗಳು.
ಎಡೆಬಿಡದೆ ಕಾಡು ಕಡಿದು ಅರಣ್ಯ ಅಳಿದ ಮೇಲೆ ನದಿ ಹೇಗೆ ಉಳಿದೀತು? ತುಂಬಿ ಹರಿಯುತ್ತಿದ್ದ ನಾಂಡೂವಾಲೀ ನದಿ ಕಣ್ಮರೆಯಾಯಿತು.

ಬದುಕುಗಳು ಬುಡಮೇಲಾದವು. ಹೊಟ್ಟೆ ಬಟ್ಟೆಗಾಗಿ ಜನ ಗುಳೆ ಹೋದರು. ಮೇವಿಲ್ಲದ ಅಂದಿನ ದುರ್ದಿನಗಳಲ್ಲಿ ಒಂದೆಮ್ಮೆಗೆ ಒಂದು ಆಡು ವಿನಿಮಯ ಆದದ್ದುಂಟು. ಇಡೀ ಸಮುದಾಯದ ಸಾಮೂಹಿಕ ಸ್ಥೈರ್ಯವೇ ಉಡುಗಿ ಹೋದ ದುಃಸ್ಥಿತಿ. ನಿರಾಶೆಯ ಈ ವಾತಾವರಣದಲ್ಲಿ ಇಬ್ಬರು ಸೋದರರು ಧೈರ್ಯ ಮಾಡಿದರು. ಕುಂಜಬಿಹಾರಿ ಮತ್ತು ಸತೀಶ್ ಶರ್ಮ.

ಇವರಿಗೆ ಪ್ರೇರಣೆ ದೊರೆತದ್ದು ಗಾಂಧೀ ಶಾಂತಿ ಪ್ರತಿಷ್ಠಾನ ಮೂಲದ ಪರಿಸರವಾದಿ ಅನುಪಮ ಮಿಶ್ರ ಅವರಿಂದ. ಜೊತೆ ಸಿಕ್ಕಿದ್ದು ಅಹಮದಾಬಾದ್ ನ ‘ಸಂಭಾವ್‌’ ಸಂಸ್ಥೆಯ ಸಹಕಾರ. ಈ ಸ್ವಯಂಸೇವಾ ಸಂಸ್ಥೆಯ ‘ಜಲಯೋಧ’ ಫರ್ಹಾದ್ ಕಾಂಟ್ರ್ಯಾಕ್ಟರ್ ಅವರು ಅನುಪಮ ಮಿಶ್ರರ ಅನುಯಾಯಿ.

ಬತ್ತಿದ ನದಿಯನ್ನು ಪುನರ್ಜೀವಿತಗೊಳಿಸಿ ಮತ್ತೆ ಹರಿಸುವುದು ದೊಡ್ಡ ಸಂಗತಿ. ಆದರೆ ಹಳ್ಳಿಯ ನಾಯಕತ್ವವನ್ನು ಪೋಷಿಸಿ ಪುನಶ್ಚೇತನಗೊಳಿಸುವುದು ಅಷ್ಟೇ ಮಹತ್ವದ ಮತ್ತೊಂದು ಸಂಗತಿ. ಹಳ್ಳಿಯ ಜನಕ್ಕೆ ಇದು ತಮ್ಮ ಕೆಲಸ ಎಂಬ ಭಾವನೆ ಬಂದರೆ ಕಡಿಮೆ ವೆಚ್ಚ ಮತ್ತು ಗುಣಮಟ್ಟ ಎರಡೂ ಕೈಗೂಡುತ್ತದೆ. ದೇಶಕ್ಕೇ ಬೆಳಕಾಗುವ ಸಾಧನೆಗಳಿವು. ನಾವು ಜನರಿಗಾಗಿ ಕೆಲಸ ಮಾಡುತ್ತಿಲ್ಲ. ಜನರೊಂದಿಗೆ ಕೂಡಿ ಕೆಲಸ ಮಾಡುತ್ತೇವೆ ಎನ್ನುತ್ತಾರೆ ಫರ್ಹಾದ್.

ಇಲ್ಲಿಯವರೆಗೆ 9000 ಕೆರೆಗಳಿಗೆ ಮರು ಜೀವ ನೀಡಲು ಶ್ರಮಿಸಿದ್ದಾರೆ. ಕಳೆದು ಹೋದದ್ದು ಮರಳಿ ಬರುತ್ತದೆ. ಮರಳಿ ಪಡೆವ ಮನಸ್ಸು ನಮಗಿರಬೇಕು ಅಷ್ಟೆ ಎನ್ನುವ ಫರ್ಹಾದ್ ಅತ್ಯಂತ ಆಶಾವಾದಿ. ಒಂದು ಪೀಳಿಗೆಯನ್ನೇ ಅಳಿಸಿ ಹಾಕಿಯೇ ಅಭಿವೃದ್ಧಿ ಸಾಧಿಸಬೇಕೆಂದು ಹೊರಟರೆ ಅದರ ಪರಿಣಾಮಗಳೊಂದಿಗೇ ಬದುಕಬೇಕಾಗುತ್ತದೆ ಎಂಬುದು ಅವರ ನಿಷ್ಠುರ ನಿಲುವು. ಪಾರಂಪರಿಕ ಜಲಸಂರಕ್ಷಣಾ ವ್ಯವಸ್ಥೆ- ಸ್ಥಳೀಯರ ಸಹಭಾಗಿತ್ವ ಸಂಭಾವ್ಯದ ಮೂಲತತ್ವಗಳು. ಯಂತ್ರಗಳ ಬಳಕೆಯೂ ನಿಷಿದ್ಧ.

ಅನುಪಮ ಮಿಶ್ರ ಅವರ ಮಾತುಗಳಲ್ಲಿ ಹೇಳುವುದಾದರೆ ನದಿಗೆ ಎರಡು ಬಗೆಯ ನೀರು ದೊರೆಯುತ್ತವೆ. ಒಂದನೆಯದು ನಾಲ್ಕು ತಿಂಗಳ ಕಾಲ ಸಿಗುವ ಮಳೆಗಾಲದ ನೀರು. ಸರಳ ಉದಾಹರಣೆಯ ಪ್ರಕಾರ ಇಂತಹ ನೀರು ನೂರು ಕೊಡಪಾನಗಳಷ್ಟು ಸುರಿದರೆ ಅದರಲ್ಲಿ 60- 70 ಕೊಡಪಾನಗಳಷ್ಟು ನೀರು ನದಿಯನ್ನು ಸೇರಬೇಕು. ಉಳಿದ ನೀರು ನದಿಯ ಎರಡೂ ದಂಡೆಗಳಲ್ಲಿರುವ ಕೆರೆಗಳಲ್ಲಿ ನಿಲ್ಲಬೇಕು. ಮಳೆಗಾಲ ಮುಗಿದ ಮೇಲೆ ಕೆರೆ ನೀರು ನದಿಗೆ ಬಸಿಯುತ್ತದೆ. ಹನಿ ಹನಿಯಾಗಿ ಧಾರೆ ನಿರ್ಮಿಸಿ ನದಾ ಹರಿವ ನದಿಯ ಜಲ ಮೂಲಗಳಾಗುತ್ತವೆ ಕೆರೆಗಳು. ಇದೊಂದು ಆವರ್ತ ಕ್ರಿಯೆ. ಪ್ರಕೃತಿ ಮಾತೆಯ ಈ ಸುಂದರ ಆಟ ನಮ್ಮ ಕಣ್ಣಿಗೆ ಬೀಳುವುದಿಲ್ಲ. ಈ ಮರುಪೂರಣದಿಂದ ಯಾವುದೇ ನದಿ ವರ್ಷವಿಡೀ ಬತ್ತದೆ ಹರಿಯುತ್ತದೆ.

ನಾಂಡೂ ಗ್ರಾಮದ ಜನ ನದಿಗೆ ಜೀವ ಕೊಡಲು ಹನಿ ಹನಿಯಾಗಿ ಸೇರಿ ಕಡೆಗೆ ಹಳ್ಳವಾದರು. ಸಮಾಜವೇ ಮೈಕೊಡವಿ ಮೇಲೆದ್ದು ಹೊರಟಿತು.
ಸರ್ಕಾರದ ಭರವಸೆಯನ್ನು ಬದಿಗಿರಿಸಿ ಹಳ್ಳಿಗರು ಜನ- ಜಲ- ಜಂಗಲ್- ಜಾನ್ವರ್- ಹಾಗೂ ಜಮೀನು ಎಂಬ ಪಂಚ ‘ಜ’ ಆಧರಿತ ಪರಂಪರಾಗತ ಪದ್ಧತಿಯನ್ನು ಅನುಸರಿಸಿದರು. ಎಲ್ಲ ದೃಷ್ಟಿಯಲ್ಲೂ ಉತ್ಕೃಷ್ಟ, ಸ್ವಾವಲಂಬಿ, ಸ್ವಾಭಿಮಾನಿ ಸಮಾಜ ನಿರ್ಮಾಣ, ಜಲಶೇಖರಣೆ ಮತ್ತು ಜಲಬಳಕೆಯಲ್ಲಿ ಅನುಶಾಸನ, ವನಗಳ ನಿರ್ವಹಣೆ ಮತ್ತು ಪುನಶ್ಚೇತನ, ಪಶುಧನದ ಅರ್ಥವ್ಯವಸ್ಥೆ ಹಾಗೂ ಪರಂಪರಾಗತ ವಿಧಾನಗಳಿಂದ ಭೂಮಿಯ ಉರ್ವರಶಕ್ತಿಯ ಹೆಚ್ಚಳ ಈ ಪದ್ಧತಿಯ ಸಾರ. ನಾಂಡೂವಾಲಿಯ ಪುನಶ್ಚೇತನದ ಮೊದಲ ಹೆಜ್ಜೆ ಗ್ರಾಮದ ಸುತ್ತಮುತ್ತಲ ಅರಣ್ಯದ ಸಂರಕ್ಷಣೆ ಮತ್ತು ಸಂವರ್ಧನೆಯದು.

ಕರೆಯಲಾದ ಗ್ರಾಮಸಭೆಯಲ್ಲಿ ದಲಿತರು ಸೇರಿದಂತೆ ಎಲ್ಲರೂ ಕಲೆತರು. ಈ ಸಭೆಗಳ ಕಾರಣದಿಂದಾಗಿಯೇ ಅಸ್ಪೃಶ್ಯತೆಯ ಅನಿಷ್ಟ ಕೂಡ ಮರೆಯಾಯಿತು. ಹಳ್ಳಿಯನ್ನು ನೆರೆಯ ಹಳ್ಳಿಯಿಂದ ಪ್ರತ್ಯೇಕಿಸುವ ಗಡಿ ಭಾಗದಲ್ಲಿ ಅಡವಿ ಬೆಳೆಸಲಾಯಿತು. ಜಲಸಂರಕ್ಷಣೆಯಲ್ಲಿ ಅರಣ್ಯದ ಪಾತ್ರ ಅತಿ ಮಹತ್ವದ್ದು. ಹಳ್ಳಿಗರು ಅರಣ್ಯ ಸಂರಕ್ಷಣೆಯ ಎಲ್ಲ ಪರಂಪರಾಗತ ಕ್ರಮಗಳ ಕಟ್ಟು ನಿಟ್ಟು ಪಾಲನೆಯ ಸಂಕಲ್ಪ. ಉಲ್ಲಂಘಿಸಿದವರಿಗೆ ಜುಲ್ಮಾನೆ-ಬಹಿಷ್ಕಾರದ ಶಿಕ್ಷೆ. ಭಗವಂತನ ಭಯದ ಬಳಕೆ.

ಜಂಗಲಿನ ಹತ್ತು ಹದಿನೈದು ಬಿಘಾ ಪ್ರದೇಶಕ್ಕೆ ದೇವರ ಕಾಡೆಂದು ನಾಮಕರಣ. ದೇವರ ಕಾಡಿನ ಮರಗಳನ್ನು ಎಂತಹ ದುರ್ಭಿಕ್ಷ ಬಂದರೂ ಕಡಿಯಬಾರದೆಂಬ ಕಟ್ಟಳೆ. ಬರಗಾಲ ಬಿದ್ದಾಗಷ್ಟೇ ಸೊಪ್ಪು ಹುಲ್ಲು ಬಳಕೆಗೆ ಅವಕಾಶ. ಇಲ್ಲವಾದರೆ ಒಂದೇ ಒಂದು ಒಣ ಎಲೆಯನ್ನೂ ಕದಲಿಸುವಂತಿಲ್ಲ. ಗೋಮಾಳದಲ್ಲಿ ಮರಗಳನ್ನು ಬೆಳೆಸಲಾಯಿತು. ವನ ಸುರಕ್ಷಾ ಸಮಿತಿ ನಿಯಮಗಳನ್ನು ರಚಿಸಿತು. ಕಾಡಿನೊಳಕ್ಕೆ ಕೊಡಲಿ ಒಯ್ಯುವಂತಿಲ್ಲ. ಒಯ್ದರೆ ₹ 101 ಜುಲ್ಮಾನೆ. ಮರ ಕಡಿದವನ ನೋಡಿಯೂ ಸಮಿತಿಗೆ ತಿಳಿಸದಿದ್ದರೆ ₹151ದಂಡ. ವ್ಯವಸಾಯದಲ್ಲೂ ಅನುಶಾಸನ. ಕಡಿಮೆ ನೀರು ಬೇಡುವ ಎಳ್ಳು, ಸಜ್ಜೆ, ಸಾಸಿವೆ, ಜೀರಿಗೆಯಂತಹ ಬೆಳೆಗಳ ಬಿತ್ತನೆ.

ಹೊರಗಿನ ನೆರವು ನೆಚ್ಚದೆ ಸ್ವಾವಲಂಬನೆಯೇ ಸರಿ ಎಂದರು ಗ್ರಾಮಸ್ಥರು. ಮಳೆಗಾಲಕ್ಕೆ ಮುನ್ನ ಎಲ್ಲರೂ ಕಲೆತು ಜೋಹಡ್ (ಮದಕಗಳನ್ನು) ಕಟ್ಟಿದರು. ಬಾವಿಗಳ ನೀರಿನ ಮಟ್ಟ ಹೆಚ್ಚಿತು. ವರ್ಷಗಳಿಂದ ಬತ್ತಿದ್ದ ಸಾರ್ವಜನಿಕ ಬಾವಿಯಲ್ಲಿ 15 ಅಡಿ ನೀರು ನಿಂತಿತು. ಇದಿಷ್ಟು ಪೂರ್ವಭೂಮಿಕೆ ಸಿದ್ಧವಾದ ನಂತರವೇ ನದಿಯನ್ನು ಮತ್ತೆ ಹರಿಸುವ ಯೋಜನೆಯನ್ನು ಹಳ್ಳಿಗರೇ ರೂಪಿಸಿದರು. ಹಿರಿಯರ ಸಲಹೆ ಸೂಚನೆಗಳ ಜೊತೆ ನೀರಿನ ಸ್ವಭಾವದ ಅಭ್ಯಾಸ. ಜಲಾನಯನ ಪ್ರದೇಶದಲ್ಲಿ ನೀರು ಹರಿದು ಬರಲು ಇದ್ದ ಅಡಚಣೆಗಳ ನಿವಾರಣೆ. ಗುಡ್ಡದ ಮೇಲಿಂದ ಕೆಳ ಹರಿವ ನೀರನ್ನು ಹಿಡಿದಿಡಲು ಕೊಳಗಳು ಮತ್ತು ಒಡ್ಡುಗಳ ನಿರ್ಮಾಣ. ಮೇಲಿನ ಕೊಳದಿಂದ ಕೆಳಗಿನ ಕೊಳಕ್ಕೆ, ಕೆಳಗಿನ ಕೊಳದಿಂದ ಇನ್ನೂ ಕೆಳಗಿನ ಕೊಳಕ್ಕೆ ಮತ್ತೂ ಕೆಳಗಿನ ಕೊಳಕ್ಕೆ…ಹರಿಯುತ್ತ ಹರಿಯುತ್ತ ಕಡೆಗೆ ಸೇರಿದ್ದು ನದಿ ಪಾತ್ರ. ನಿರ್ಜೀವ ನದಿ ಸಜೀವ ಆಯಿತು.

ಕಾಡನ್ನು ಬಿಟ್ಟರೆ ಕೊಳಗಳೇ ನದಿಯ ಜೀವನರೇಖೆಗಳು. ಎತ್ತರದಿಂದ ಕೆಳಕ್ಕೆ ಹರಿವ ಮಳೆ ನೀರು ಶೇಖರಿಸಲು ಹಳ್ಳಿಗರು ತೋಡಿದ ಅಗಲ ಆಳದ ಗುಂಡಿಗಳಿವು. ಈ ಕೊಳಗಳು ಒಂಟಿ ನಿರ್ಮಿತಿಗಳಲ್ಲ…ಇವುಗಳ ಸರಣಿಯೇ ಇರುತ್ತದೆ. ಒಂದು ಕೊಳದಿಂದ ತಗ್ಗಿನ ಪ್ರದೇಶದ ಇನ್ನೊಂದು ಕೊಳಕ್ಕೆ ನೀರು ನೆಲದಡಿಯಿಂದಲೂ ನೆಲದ ಮೇಲ್ಮೈನಿಂದಲೂ ಹರಿಯುತ್ತದೆ. ಮೊದಲ ಕೊಳದ ನೀರು ಎರಡು ಅಡಿ ಕೆಳಗೆ ಹರಿಯುತ್ತದೆ..ಎರಡನೆಯ ಕೊಳದ ನೀರು ಒಂದು ಅಡಿ, ಮೂರನೆಯ ಮತ್ತು ನಾಲ್ಕನೆಯ ಕೊಳದ ನೀರು ಝರಿಯಂತೆ ಗೋಚರಿಸಿ ಹರಿಯುತ್ತದೆ.

ಕೊಳ ನಿರ್ಮಿಸಿದರೆ ಸಾಲದು. ಅದರ ವೈಜ್ಞಾನಿಕ ನಿರ್ವಹಣೆ ಮತ್ತು ದುರಸ್ತಿಯೂ ಆಗುತ್ತಿರಬೇಕು. ಮೇರೆಯಲ್ಲಿ ಬೆಳೆಸಿದ ಬಬೂಲ್ ಮರಗಳು. ಒಂದು ಮರದ ಸೊಪ್ಪು ಕಡಿದುಕೊಂಡರೆ ಐದು ಚಕ್ಕಡಿ ಹೂಳನ್ನು ಮೇಲೆತ್ತಿ ಒಡ್ಡಿಗೆ ಹಾಕಿ ಬಲಪಡಿಸಬೇಕು. ಕೊಳಗಳ ನಂತರ ಖಾಸಗಿ ಜಮೀನುಗಳಲ್ಲಿ ಮಣ್ಣಿನ ಒಡ್ಡುಗಳ ನಿರ್ಮಾಣ. ಪರಿಣಾಮವಾಗಿ ಹೊಲಗಳಲ್ಲಿ ತೇವಾಂಶ ಹೆಚ್ಚಳ. ಭೂಸಾರ ಕೊಚ್ಚಿ ಹೋಗುವುದು ನಿಂತಿತು. ಫಸಲು-ಇಳುವರಿ ಸುಧಾರಣೆ. ಗುಳೆ ಹೋಗುತ್ತಿದ್ದವರು ಹಳ್ಳಿಯಲ್ಲೇ ನೆಲೆ ನಿಂತರು. ಇತರೆ ಕಸುಬುಗಳೂ ಅರಳಿದವು. ಪಶು ಸಂಪತ್ತು ವರ್ಧಿಸಿತು. ಜನರ. ಮಕ್ಕಳು ಮಹಿಳೆಯರು ದೂರದಿಂದ ನೀರು ಹೊರುವುದು ತಪ್ಪಿತು. ಉತ್ಸಾಹ ಹೆಚ್ಚಿತು. ಅಣೆಕಟ್ಟು ಕಟ್ಟಿದರು. ಉತ್ಸಾಹ ನೂರ್ಮಡಿಸಿತು. ಮಂದಹಾಸ ಮರಳಿತು. ಶಾಲೆಗಳಲ್ಲಿ ಹಾಜರಾತಿ ಹೆಚ್ಚಿತು. ಫಲಿತಾಂಶದ ಪ್ರಮಾಣ ನೂರಕ್ಕೆ ನೂರು.

ನಾಂಡೂ ಗ್ರಾಮ ನೆರೆ ಹೊರೆಯ ಹಳ್ಳಿಗಳಷ್ಟೇ ಅಲ್ಲದೆ ದೇಶಕ್ಕೇ ಪ್ರೇರಣೆಯಾಯಿತು. ದೌಸಾ ಗ್ರಾಮದ ಬಾಡಗಂಗಾ ಕೂಡ ಡೂವಾಲಿಯಂತೆ ಬತ್ತಿದೆ. ಅದರ ಪುನಶ್ಚೇತನಕ್ಕೆ 35 ಗ್ರಾಮಗಳ ಜನ ಕಂಕಣಬದ್ಧರು. ಪ್ರೇರಣೆ ನಾಂಡೂವಾಲಿಯದೆ. ರಾಜಸ್ತಾನದ ಮತ್ತೊಂದು ನದಿ ಸಕಟ್ ವಾಲಿಯದೂ ಇದೇ ಯಶೋಗಾಥೆ. 18 ಕಿ.ಮೀ.ಉದ್ದದ ಸಕಟ್ ವಾಲಿಯನ್ನು ₹ 20 ಲಕ್ಷ ವೆಚ್ಚದಲ್ಲಿ ಸಜೀವಗೊಳಿಸಲಾಗಿದೆ. ಕೇವಲ 350-400 ಮಿ.ಮೀ. ಮಳೆ ಬೀಳುವ ಈ ಸೀಮೆಯ ಜನ ಒಪ್ಪೊತ್ತು ಉಣ್ಣುವ ನಿರ್ಗತಿಕ ಸ್ಥಿತಿಗೆ ಕುಸಿದಿದ್ದರು. ಅನ್ನದ ಹುಡುಕಾಟದ ದಾರಿ ಈ ಸೀಮೆಯ ಕುಟುಂಬಗಳನ್ನು ದೂರದ ಕರ್ನಾಟಕಕ್ಕೂ ಕರೆ ತಂದದ್ದು ಉಂಟು.