ಮತ್ತೆ ಗಾಂಧಿ, ರಾಯಚೂರಲ್ಲಿ-ಕೆ ಪಿ ಸುರೇಶ

sarai nishedha

 

ಮತ್ತೊಂದು ಗಾಂಧಿ ಜಯಂತಿ ಆಚರಿಸಿಯಾಯಿತು. ಬಾಪು ಆದರ್ಶಗಳನ್ನು ಪಾಲಿಸುವುದು ಹೋಗಲಿ, ಅವರ ಮಾತುಗಳನ್ನು ಮಾನದಂಡವಾಗಿ ಇಟ್ಟುಕೊಂಡು ವರ್ತಮಾನವನ್ನು ಟೀಕಿಸುವುದಾದರೂ ನಡೆಯುತ್ತಿತ್ತು. ಈಗೀಗ ಅದು ಇಲ್ಲದೇ ಶಾಲಾ ಮಕ್ಕಳ ಗಿಣಿ ಪಾಠದಷ್ಟು ಮಾತುಗಳು ಯಾಂತ್ರಿಕವಾಗಿ ಹೋಗಿದೆ. ಪುಣ್ಯವಶಾತ್ ಈ ದೇಶದ ಸಮಸ್ಯೆಗಳು ಮತ್ತೆ ಮತ್ತೆ ಗೋರಿಯಿಂದೆದ್ದು ಪ್ರತ್ಯಕ್ಷವಾಗುವ ಕಾರಣ ಗಾಂಧಿ ಮತ್ತೆ ಮತ್ತೆ ರಕ್ಷಾ ತಾಯಿತದಂತೆ ನೆನಪಾಗುತ್ತಾರೆ. ಜೊತೆಗೆ ಸಮುದಾಯಗಳು ಹೋರಾಟಗಳ ಹಾದಿ ತುಳಿಯುವುದರ ಮೂಲಕ ಗಾಂಧಿಯನ್ನು ಮತ್ತೆ ನೆನಪಿಸುತ್ತಿದ್ದಾರೆ.

ಕಣ್ಣೆದುರು ನಡೆಯುತ್ತಿರುವ ಮೂರು ಘಟನಾವಳಿಗಳನ್ನು ನೋಡಿ. ಮೊದಲನೆಯದು ಪಾಕಿಸ್ತಾನದ ಉಗ್ರರ ಟೆಂಟುಗಳ ಮೇಲೆ ಭಾರತ ಧಾಳಿ ಮಾಡಿದ್ದು. ಎರಡನೆಯದು, ನಮ್ಮ ಕಾವೇರಿಯ ಬಗೆಹರಿಯದ ಸಮಸ್ಯೆ. ಮೂರನೆಯದು, ರಾಯಚೂರಿನಲ್ಲಿ ಸಾವಿರಾರು ಹೆಣ್ಣುಮಕ್ಕಳು ಸಾರಾಯಿ ನಿಷೇದವನ್ನು ಆಗ್ರಹಿಸಿ ಪ್ರತಿಭಟನೆ ಮಾಡಿದ್ದು.
ಮೊದಲ ಎರಡು ನಮ್ಮ ಕಣ್ಣಿಗೆ ಗಿಡಿದು ಕಣ್ಣೇ ಸೋತಿದೆ. ಮೂರನೆಯದು? ಯಾರ ಕಣ್ಣಿಗೂ ಬಿದ್ದಿಲ್ಲ!! ಯಾಕೆ ಹೀಗೆ? ನಮ್ಮ ಎಲ್ಲ ಕ್ರಿಯೆ ಪ್ರತಿಕ್ರಿಯೆಗಳೂ ಪುರುಷ ಪ್ರಧಾನ ನೆಲೆಯಿಂದಲೇ ಹೊರಡುವುದು. ಇದರ ವರದಿ, ಪ್ರತಿಕ್ರಿಯೆ ಎಲ್ಲವೂ ಪುರುಷ ನೆಲೆಗಟ್ಟಿನದೇ. ಬಳಸುವ ಪದಗುಚ್ಛಗಳೂ ಅಂಥಾದ್ದೇ. ಈ ಪೌರುಷ ಪ್ರಧಾನ ಗತ್ತಿಗೆ ಗೆಲುವು ಸೋಲು ಎಂಬ ಗುರಿ ಬೇರೆ.
ರಾಷ್ಟ್ರಭಕ್ತಿಯ ಲಾಂಛನದಂತೆ ಇರುವ “ನಮ್ಮ ಸೈನ್ಯ- ಯುದ್ಧ”ವನ್ನು ಹೆಣ್ಣಿನ ದೃಷ್ಟಿಕೋನದಿಂದ ನೋಡಿದರೆ? ಸೈನಿಕರಿರುವುದು ನಮ್ಮ ದೇಶದ ಒಳಬಾಳು ನೆಮ್ಮೆದಿಯಲ್ಲಿರುವಂತೆ ಮಾಡಲು. ಅವರು ಒಳಗೆ ಹಸ್ತಕ್ಷೇಪ ಮಾಡುವುದಿಲ್ಲ,. ಹೊರಗಿನಿಂದ ಯಾವುದೇ ಅಪಾಯ ತಟ್ಟದಂತೆ ನೋಡಿಕೊಳ್ಳುವ ಸ್ತುತ್ಯರ್ಹ ಕೆಲಸ ಅದು. ಪ್ರಾಣ ಒತ್ತೆ ಇಟ್ಟು ನಮ್ಮ ಸಮುದಾಯಗಳ ಸೌಖ್ಯ ಖಚಿತಪಡಿಸುವ ಕೆಲಸ ಅದು. ಆ ಸೈನಿಕರ ಮನೆಯವರು ಡವಗುಡುವ ಎದೆಯಲ್ಲಿ ಶಾಂತಿ ನೆಲೆಸಲಿ, ನಮ್ಮವನು ಸುರಕ್ಷಿತವಾಗಿ ವಾಪಾಸು ಬರಲಿ ಎಂದು ಹಾರೈಸುತ್ತಿರುತ್ತಾರೆ. ಆ ಸೈನಿಕನ ಕಣ್ಣೆದುರು ತಾಯ್ನಾಡು ಅಷ್ಟೇ ಅಲ್ಲ, ಅಪ್ಪ, ಅಮ್ಮ, ಮಡದಿ ಮಕ್ಕಳು ಸದಾ ಇರುತ್ತಾರೆ.
ಈ ದೇಶ ಭಯವಿಲ್ಲದೇ ಬಡತನವಿಲ್ಲದೇ ದುಃಖ ರೋಗರುಜಿನಗಳಿಲ್ಲದೇ ಬದುಕಲಿ ಎಂದು ಅವನೂ ಪ್ರಾರ್ಥಿಸುತ್ತಿರುತ್ತಾನೆ. ಈ ದೇಶದಲ್ಲಿ ಅವನ ತಾಯಿ, ಮಡದಿ ಮಕ್ಕಳಿರುತ್ತಾರೆ
ಆದರೆ ಇಲ್ಲಿ; ಬಾಹ್ಯ ಶತ್ರುಗಳಿಂದ ಅವನು ರಕ್ಷಿಸಿಕೊಟ್ಟ ದೇಶದಲ್ಲಿ ಬದುಕು ಹೇಗಿದೆ? ನಿವೃತ್ತ ಸೈನಿಕರು ನಾಗರಿಕ ಬದುಕಿಗೆ ಮರಳಿದಾಗ ಇಲ್ಲಿ ಕಾಣುವ ಭೃಷ್ಟಾಚಾರ ಕಂಡು ಅವರ ಹತಾಶೆ ಮೇರೆ ಮೀರಿರುತ್ತದೆ. ಒಬ್ಬ ನಿವೃತ್ತ ಸೈನಿಕನನ್ನು ಮಾತಾಡಿಸಿ ನೋಡಿ! ನಾನು ಗಡಿ ಕಾಯುವಾಗ ಇವರು ದೇಶ ಜತನ ಮಾಡಿದ ರೀತಿ ಇದೇನಾ ಎಂಬ ವಿಷಾದ, ಆಕ್ರೋಶ ಸ್ಫೋಟಿಸುತ್ತಿರುತ್ತದೆ.
ನಮ್ಮ ಕಾವೇರಿ ನೋಡಿ, ನೀರೆಂಬ ಜೀವಜಲದ ಬಗ್ಗೆ ಅದೊಂದು ತಾನು ಬಳಸುವಷ್ಟು ದಕ್ಕುವ ಅಕ್ಷಯಪಾತ್ರೆ ಎಂಬಂತೆ ನಾವು ನಡೆದುಕೊಳ್ಳುತ್ತಿದ್ದೇವೆ. ನದಿಯೇ ಬತ್ತಿ ನೆಲ ಬೆಂಗಾಡಾದರೂ ಅದರ ಪರಿವೆ ಇಲ್ಲದಂತೆ ವರ್ತಿಸುತ್ತಿದ್ದೇವೆ. ಕಾವೇರಿ ನದಿಯ ಲಭ್ಯ ನೀರು ಎಷ್ಟು ಎಂಬ ಲೆಕ್ಕಾಚಾರ ಮಾಡಿದ್ದಾರೋ ಅದರ ಎರಡು ಪಾಲು ಬೇಡಿಕೆ ಈ ನದಿಯ ಮೇಲಿದೆ. ಈ ನದಿ ನೀರು ಪಡೆವ ಪಶ್ಚಿಮ ಘಟ್ಟಗಳ ಕಾಡು ಸವರುತ್ತಾ ಬಂದಿದ್ದೇವೆ. ಅದರ ಪಾತ್ರದಲ್ಲಿ ಆಟಕ್ಕೆ ಗೂಡು ಕಟ್ಟಲು ಸಿಗದಂತೆ ಮರಳು ಅಗೆಯುತ್ತಿದ್ದೇವೆ. ಕಟ್ಟೆ ತುಂಬಿದರೆ ಆ ನೀರನ್ನೂ ಕಿಂಚಿತ್ತೂ ವಿವೇಚನೆ ಇಲ್ಲದೇ ಬೇಕಾಬೆಟ್ಟಿ ಬಳಸುತ್ತಿದ್ದೇವೆ.
ಈ ನೀರಿನ ವಿಚಾರದಲ್ಲೂ ಅಷ್ಟೇ. ಹೆಣ್ಣು ಮಗಳಲ್ಲಿ ಕೇಳಿದರೆ, ‘ಉಣ್ಣುವುದನ್ನು ಬೆಳೆಯಬೇಕು, ಮೈಲು ನಡೆದು ನೀರು ತರುವ ಕಷ್ಟ ಬೇಡ,’. ಎಂದು ಬದುಕುವ ದಾರಿಯ ಒಂದು ನೀಲಿನಕಾಶೆಯನ್ನೇ ನೀಡಬಲ್ಲರು; ನೀಡಿದ್ದಾರೆ.
ಆದರೆ ಇಲ್ಲೂ ಪೌರುಷದ ಮಾತಿಗೇ ಮಣೆ. ‘ಹೋರಾಟ, ಯುದ್ಧ, ರಕ್ತ’ ಇತ್ಯಾದಿ ಮೂಲಕವೇ ವಾದ ಮಂಡನೆ. ಇದೊಂದು ಸೋಲು ಗೆಲುವಿನ ಪಣವೆಂಬಂತೆ ಮಾತಾಡುತ್ತಾ ಮೃದು ಮಾತುಗಳನ್ನೆಲ್ಲಾ ಹೇಡಿಗಳ ಮಾತು ಎಂಬಂತೆ ಜರಿಯಲಾಗುತ್ತದೆ, ಅದಕ್ಕೆ ಬಳಸುವ ಪದಗಳೋ? “ ಬಳೆ ತೊಟ್ಟು ಕೂತಿಲ್ಲ” ಇತ್ಯಾದಿ. ಮೀಸೆ ಹೊತ್ತ ಗಂಡಸು ನೀರಿನ ಕೊಡ ಹೊತ್ತಿಲ್ಲ.
ಈಗ ರಾಯಚೂರಿನ ಮಹಿಳೆಯರು ಆರಂಭಿಸಿರುವ ಸಾರಾಯಿ ನಿಷೇದದ ಹೋರಾಟ ನೋಡಿ. ಕಾವೇರಿ ವಿವಾದದ ಅಗ್ನಿಕುಂಡವಾಗಿರುವ ಮಂಡ್ಯ, ಬೆಂಗಳೂರಿನ ಹೆಂಡದಂಗಡಿಗಳನ್ನು ನೋಡಿದರೆ ನೀರಿಲ್ಲದಿದ್ದರೂ ಪರವಾಗಿಲ್ಲ ಹೆಂಡ ಕುಡಿದೇ ಬದುಕುವ ಜನ ಇವರು ಅನ್ನಿಸಿದರೆ ಆಶ್ಚರ್ಯವಿಲ್ಲ. ಬೆಂಗಳೂರು ಮತ್ತು ಅದರ ಸುಮಾರು ನೂರು ಮೈಲು ಫಾಸಲೆಯಲ್ಲಿರುವಷ್ಟು ಲಿಕರ್ ಶಾಪ್‍ಗಳು ದೇಶದ ಯಾವ ಭಾಗದಲ್ಲೂ ಇಲ್ಲ ಅನಿಸುತ್ತೆ. ‘ರೈತನ ಬದುಕು ಸಂಕಷ್ಟದಲ್ಲಿದೆ, ನೀರಿಲ್ಲ, ಬರಗಾಲ, ಸಾಲ ಮನ್ನಾ, ಪರಿಹಾರ’ ಎಂದು ಸಕಾರಣವಾಗಿಯೇ ವಾದಿಸುವಾಗಲು, ಬಿಡಿಬಿಡಿಯಾಗಿ ವ್ಯಕ್ತಿ ನೆಲೆಯಲ್ಲಿ ಇಲ್ಲಿನ ಬಹು ಅಮೂಲ್ಯ ಆದಾಯ ಹೆಂಡದಂಗಡಿಗೆ ಸುರಿಯುವ ಸತ್ಯ ಕಣ್ಣಿಗೆ ರಾಚುತ್ತೆ. ನೀರಿಗೆ ಉಪವಾಸ ಕೂರುವ ಧರ್ಮಾಧೀಶರಾದರೂ ಹೆಂಡದ ವಿರುದ್ಧ ಇಷ್ಟೇ ಉತ್ಕಟವಾಗಿ ಹೋರಾಡಿದರೆ ರೈತ ಕುಟುಂಬದ ಸಂಕಷ್ಟ ನೀಗುತ್ತದೆ. ಎರಡು ವರ್ಷ ಮೊದಲು ತಮಿಳುನಾಡಿನ ಒಟ್ಟು ರಾಜಸ್ವದಲ್ಲಿ ಶೇ. 20 ಸಾರಾಯಿ ಮಾರಾಟದಿಂದ ಬರುತ್ತಿತ್ತು. ತೂರಾಡದೇ ಮನೆಗೆ ಬರುವ ಗಂಡಸು ನಾಲಾಯಕ್ಕು ಅನ್ನಿಸೋ ಮಟ್ಟಿಗೆ ಇದು ಪೌರುಷದ ಸಂಕೇತವಾಗಿತ್ತು. ಕರ್ನಾಟಕದಲ್ಲೂ ಈ ಆದಾಯದ ಪ್ರಮಾಣ ಇಷ್ಟೇ ಇದೆ.
ಈ ಕುಡಿತದ ದುಷ್ಪರಿಣಾಮ ಅನ್ನುವುದು ‘ಇಲ್ಲಿ ಕಸ ಹಾಕಬೇಡಿ’ ಎಂಬ ಬರಹದಷ್ಟೇ ತಾತ್ಸಾರಕ್ಕೊಳಗಾಗಿದೆ. ನಮ್ಮ ಮುಖ್ಯಮಂತ್ರಿಗಳು ‘ಅಯ್ಯೊ ಕುಡಿಯೊರು ಕುಡೀಲಿ ಕಣ್ರೀ’ ಎಂಬ ಉಡಾಫೆ ಉತ್ತರ ಕೊಡುತ್ತಾರೆ. ಏನಿದರ ಅರ್ಥ? ಸಾಂಸಾರಿಕ ಮಟ್ಟದ ಪುರುಷ ಪ್ರಧಾನ ಉಡಾಫೆಯೇ ರಾಜ್ಯವಾಳುವವರದ್ದೂ.
ಮೊನ್ನೆ ಎರಡು ದುರಂತದ ಘಟನೆಗಳು ವರದಿಯಾದವು. ಎರಡೂ ಪ್ರಕರಣಗಳಲ್ಲಿ ತಾಯಿಗೆ ತಂದೆ ಹಿಂಸೆ ಕೊಡುತ್ತಿರುವುದನ್ನು ಸಹಿಸಲಾರದೇ ಸ್ವತಃ ಮಗನೇ ತಂದೆಯನ್ನು ಕೊಂದ ಘಟನೆ. ಎರಡರಲ್ಲೂ ಇದ್ದ ಸಾಮಾನ್ಯ ಅಂಶವೆಂದರೆ ಈ ಇಬ್ಬರೂ ಸತ್ತ ಮಹಾತ್ಮರು ಕುಡುಕರೇ. ಒಬ್ಬ ಅಧಿಕಾರಿಯ ಸಾವು, ಇನ್ಯಾವುದೊ ಕೊಲೆ ಗಮನ ಸೆಳೆಯುತ್ತದೆ. ಆದರೆ ಈ ಘಟನೆ? ಇದು ರೋಗ ಲಕ್ಷಣವೆಂದು ಬಗೆದರೆ ಮಾಧ್ಯಮಗಳು ಹಾಹಾಕಾರ ಮಾಡಬೇಕಿತ್ತು. ನೂರಾರು ಮನೆಗಳಲ್ಲಿ ಇಂಥಾ ಕೊಲೆ ನಡೆಯದಿರುವುದು ಆಕಸ್ಮಿಕ ಅದೃಷ್ಟ ಅಷ್ಟೇ. ಆದರೆ ಮತ್ತದೇ ಪುರುಷ ಪ್ರಧಾನ ಉಡಾಫೆ. ಹೆಂಡದ ನಿಷೇದದ ಬಗ್ಗೆ ಮಾತಾಡುವಾಗೆಲ್ಲಾ ದಪ್ಪ ಗಂಟಲಿನಲ್ಲಿ ಕುಡುಕರ ಹಕ್ಕಿನ ಬಗ್ಗೆ; ಹೆಂಡ ನಿಷೇಧಿಸಿದರೆ ಕಳ್ಳಭಟ್ಟಿ ಕುಡಿದು ಸಾಯುವ ಬಗ್ಗೆ ಇನ್ನಿಲ್ಲದ ಮಾತು ಬರುತ್ತದೆ.
ನಮ್ಮ ಸ್ತ್ರೀ ವಾದದ ಮುಖ್ಯ ಧ್ಯಾನವೂ ಹಕ್ಕುಗಳ ಬಗ್ಗೆಯೇ ಇದೆ. ಪ್ರಾತಿನಿಧ್ಯ, ಪ್ರವೇಶ, ಬಟ್ಟೆಬರೆ ಹೀಗೆ. ಆದರೆ ಇಡೀ ಅಭಿವೃದ್ಧಿಯ ಪರಿಕಲ್ಪನೆಯನ್ನು ಹೆಣ್ಣಿನ ದೃಷ್ಟಿಕೋನದಿಂದ ನೋಡಿ ಒತ್ತಾಯಿಸುವ ಕೆಲಸ ಆಗಿಯೇ ಇಲ್ಲ
ಅಭಿವೃದ್ಧಿ ದೊಡ್ಡ ಪದವಾಯಿತು, ಕೃಷಿ, ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳನ್ನು ಹೆಣ್ಣಿನ ದೃಷ್ಟಿಕೋನದಿಂದ ನೋಡಿದರೆ ಈಗಿನ ಆದ್ಯತೆಗಳೆಲ್ಲಾ ತಲೆಕೆಳಗಾಗಿ ಬಿಡುತ್ತದೆ. ಸರ್ಕಾರಗಳೂ ಈಗ ತಿಳಿಸಾರಿಗೆ ಕರಿಬೇವಿನ ತರ ಬಳಸುತ್ತಿರುವ ಸುಸ್ಥಿರ ಅಭಿವೃದ್ಧಿಯೂ ಕಣ್ಣೆದುರಿನ ನಿಜವಾಗಿ ಬಿಡುತ್ತದೆ.
ಈಗಾಗಲೇ ಗುಜರಾತ್ ಬಿಹಾರಗಳಲ್ಲಿ ಸಾರಾಯಿ ನಿಷೇದ ಇದೆ. ತಮಿಳುನಾಡು,ಕೇರಳ ಈ ಹಾದಿಯಲ್ಲಿವೆ. ಇಲ್ಲೇನೂ ಆಕಾಶ ಕಳಚಿ ಬಿದ್ದಿಲ್ಲ. ಆದರೆ ಸಂತುಷ್ಟಿಯ ಪರಿಕಲ್ಪನೆ ನೋಡಿದರೆ ಇದು ಸಾಧಿತವಾಗಿದೆ. ಮಧ್ಯಪ್ರದೇಶ ಸರ್ಕಾರ ‘ಸಂತುಷ್ಟಿಯ ಇಲಾಖೆ’ ಮಾಡುತ್ತೇನೆ ಎಂದಿತ್ತು. ಜನಸಮುದಾಯ ನೆಮ್ಮೆದಿಯಲ್ಲಿರಲು ಕಾಸು, ಸವಲತ್ತುಗಳು ಬೇಕು ಅನ್ನುವುದು ಪುರುಷ ಪ್ರಧಾನ ಕಲ್ಪನೆ. ಹೆಣ್ಮಕ್ಕಳನ್ನು ಕೇಳಿದರೆ ಕುಡಿಯಲು ನೀರು ಕೊಡದಿದ್ದರೂ ಪರವಾಗಿಲ್ಲ, ಹೆಂಡ ಬಂದ್ ಮಾಡಿ ಅನ್ನುತ್ತಾರೆ. ಹೆಣ್ಣುಮಕ್ಕಳ ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಕುಟುಂಬವೆಂಬ ಪುಟ್ಟ ಘಟಕದ ಸಮೀಕರಣವೇ ಸಮಷ್ಟಿ ಸುಖದ ಆಧಾರ.
ಗಾಂಧಿ ಮತ್ತೆ ಮತ್ತೆ ಪ್ರತ್ಯಕ್ಷವಾಗುವುದು ಮಹಿಳೆಯರ ಬೇಡಿಕೆಗಳಲ್ಲಿ. ಯುದ್ಧ, ಹಠ, ಸೋಲಿಸುವುದು, ಇವೆಲ್ಲಾ ಮಹಿಳೆಯ ಕಣ್ಣಲ್ಲಿ ಗಂಡಸರ ಅಹಂನ ವ್ಯಕ್ತರೂಪ. ಮಹಾಭಾರತದಲ್ಲೂ ಇದೇ. ಇಂದಿಗೂ ಇದೇ.
ರಾಯಚೂರಿನಲ್ಲಿ ಗಾಂಧೀ ಜಯಂತಿಯಂದು ಸಾವಿರಾರು ಮಹಿಳೆಯರು ಸರ್ಕಾರವನ್ನು ಒತ್ತಾಯಿಸಿದ್ದರ ಹಿಂದೆ ಈ ಭೂಮಿಕೆಯಿದೆ. ರಾಯಚೂರು ನಮಗೆ ದೂರ, ಹೆಣ್ಣುಮಕ್ಕಳ ಬೇಡಿಕೆ ಅದೂ ತಾತ್ಸಾರದ ವಸ್ತು. ಗಾಂಧಿ ಬಯಸಿದ ಈ ಕನಸು ಅದು ಇನ್ನಷ್ಟು ಉಡಾಫೆಗೆ ಗುರಿಯಾಗುವ ವಿಚಾರ. ಆದರೆ ಗಡಿ ಬಗ್ಗೆ ನಿರ್ಲಕ್ಷಿಸಿದರೆ ಸೈನಿಕರ ಸಾವು ಹೇಗೆ ಶಾಪವಾಗಿ ಕಾಡುತ್ತೊ ನೀರನ್ನು ತೊತ್ತೆಂಬಂತೆ ಭಾವಿಸಿ ಜಲ ಬತ್ತುವ ಶಾಪ ಹೇಗೆ ಖಚಿತವೋ ಈ ಸಾರಾಯಿ ಮಾರಾಟದ ಹುಂಬತನಕ್ಕೆ ಸರ್ಕಾರ ಬೆಲೆ ತೆರಬೇಕಾಗುತ್ತದೆ. ಅಜ್ಜಿ ನೂತದ್ದೆಲ್ಲಾ ಅಜ್ಜನ ಉಡಿದಾರಕ್ಕೆಂಬಂತೆ ಸಾರಾಯಿಯ ಆದಾಯ ಮತ್ತು ಆರೋಗ್ಯಕ್ಕೆ ಖರ್ಚು ಮಾಡುವ ಅನುದಾನ ನೋಡಿದರೆ ಇವೆರಡರ ತಕ್ಕಡಿ ಸರಿ ಸಮ..!! ಗಂಡಸೊಬ್ಬ ಮಾತ್ರಾ ಇದನ್ನು ಅಭಿವೃದ್ಧಿ ಅರ್ಥಶಾಸ್ತ್ರ ಎಂದು ಕರೆಯಬಲ್ಲ. ಹೆಣ್ಣುಮಗಳಿಗೆ ಇದೊಂದು ಅನರ್ಥಕಾರೀ ವ್ಯವಹಾರ. ಗಾಂಧಿಗೆ ಇದೊಂದು ವಿರೋಧಾಭಾಸದ ಅಸಂಬದ್ಧ ಆರ್ಥಿಕ ನೀತಿ.
ಗಾಂಧೀ ಪಾನ ನಿಷೇದವನ್ನು ಗ್ರಾಮ ಸ್ವರಾಜ್ಯದ ಅಡಿಪಾಯವಾಗಿ ಗ್ರಹಿಸಿದ್ದರು. ಸಾಂಸಾರಿಕ ಸಂಕಷ್ಟ ಅರ್ಥವಾಗದ ಮಂದಿಗೆ ಅದರ ಆರ್ಥಿಕ ಆಯಾಮವಾದರೂ ಅರ್ಥವಾಗಬೇಕು. ನಮ್ಮ ಹಕ್ಕಿನ ಪ್ರಶ್ನೆಗಳು ಎಷ್ಟು ಕಿರಿದು ಎಂದರೆ ಸಾಂಸಾರಿಕ ಹಿಂಸೆಯನ್ನು ದೊಡ್ಡ ವಿಷಯ ಮಾಡಿ ಕಾನೂನು ಮಾಡುವಷ್ಟು ಒತ್ತಡ ಹೇರಲು ಸಾಧ್ಯವಾಗುತ್ತದೆ. ಆದರೆ ಗ್ರಾಮೀಣ ಪ್ರದೇಶದ ಮತ್ತು ಎಲ್ಲ ಬಡವರ ಸಂಸಾರದ ನೆಮ್ಮೆದಿ ಕಸಿಯುವ ಹೆಂಡದ ಬಗ್ಗೆ ಮಾತ್ರಾ ಅಸೀಮ ನಿಷ್ಕಾಳಜಿ!.
ನಮ್ಮ ಗಮನದ ಆದ್ಯತೆಗಳೇ ಬದಲಾಗಿವೆ. ಗ್ರಾಮೀಣ ವಿಷಯಗಳು, ಹೆಣ್ಣಿನ ಸಂಕಷ್ಟಗಳು, ಆಹಾರದ ಅತಂತ್ರತೆ ಇವೆಲ್ಲಾ ಅಂಚಿನ ವಿಷಯಗಳಾಗಿವೆ. ಇವನ್ನು ಮುನ್ನೆಲೆಗೆ ತರುವ ಪ್ರಯತ್ನ ಆಗದಿದ್ದರೆ ಎಲ್ಲ ಸರ್ಕಾರಗಳೂ ಇದಕ್ಕೆ ಬೆಲೆ ತೆರುತ್ತಲೇ ಇರಬೇಕಾಗುತ್ತೆ. ಸರ್ಕಾರದ ವ್ಯಾವಹಾರಿಕ ಚೌಕಟ್ಟು ಸೀಮಿತವಾಗಿರುತ್ತೆ. ಅದಕ್ಕೆ ವಾಸ್ತವವನ್ನು ಗ್ರಹಿಸುವ ಶಕ್ತಿ ಇರುವುದಿಲ್ಲ; ಹೊಸತನ್ನು ಗುರುತಿಸುವ ಶಕ್ತಿಯೂ ಇರುವುದಿಲ್ಲ. ಆದರೆ ನಾಯಕರಿಗೆ ಇಂಥಾ ಹೊಳಹುಗಳಿರಬೇಕು. ನೈತಿಕ ಒಳನೋಟವನ್ನು ಅನುಷ್ಠಾನ ಯೋಗ್ಯವಾಗಿ ಮಾಡುವುದೇ ರಾಜಕೀಯದ ಪಾತ್ರ. ಅದು ಸಾಧ್ಯವಾಗದಿರುವವರೆಲ್ಲಾ ಕಡತ ತಳ್ಳುವ ಗುಮಾಸ್ತರಷ್ಟೇ. ನಮ್ಮ ನಾಯಕರೂ ಈ ಮಟ್ಟದಿಂದ ಮೇಲೇಳುವ ಹಾಗೆ ಕಾಣಿಸುತ್ತಿಲ್ಲ. “ಇದು ಸಾಧ್ಯ!” ಎನ್ನುವ ಇಚ್ಛಾಶಕ್ತಿಯ ಬದಲು “ಇದು ಕಷ್ಟ!” ಎನ್ನುವ ರಾಜಕೀಯ ನಾಯಕತ್ವ ರುಬ್ಬುಗುಂಡಿನ ಹಾಗೆ ಅಲ್ಲೇ ಹೊರಳುತ್ತಿರುತ್ತೆ. ಚಕ್ರದ ಹಾಗೆ ಮುಂದೆ ಹೋಗುವುದಿಲ್ಲ. ಇತಿಹಾಸದ ಚಕ್ರ ತಿರುಗಿಸಲು ಬೇಕಾದ ಒಳನೋಟ, ಸೂಚಿಗಳು ಹಾದಿಗುಂಟ ಇವೆ. ನೋಡಿ ನಡೆವ ವಿವೇಕ?
ರಾಯಚೂರಿನ ಹೋರಾಟ, ಪ್ರತಿಭಟನೆ, ಹಕ್ಕೊತ್ತಾಯ ನಮ್ಮೆಲ್ಲರದೂ ಆಗಬೇಕು. ಉಳಿದ ಅಬ್ಬರದ ಕೋಲಾಹಲದ ಮಧ್ಯೆ ಇದು ಮುಖ್ಯವಾಗುವಂತೆ ಸ್ಪಂದಿಸಬೇಕಾಗಿದೆ. ಈ ಬಾರಿಯ ಕಡುಬರದ ವಾಸ್ತವದಲ್ಲಿ ವಲಸೆಯೊಂದಿಗೇ ಈ ಸಾರಾಯಿ ಸಂಸಾರಗಳನ್ನು ಬರ್ಬಾದ್ ಮಾಡಲಿದೆ.