ಮತದಾರರ ನೈತಿಕತೆ ಪ್ರಜಾಪ್ರಭುತ್ವದ ಶಕ್ತಿ-ಸುದೇಶ್ ದೊಡ್ಡಪಾಳ್ಯ

ನನ್ನಲ್ಲಿದ್ದ ಆತಂಕ ಇನ್ನೂ ಹೆಚ್ಚಾಯಿತು. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಜನರಿಗೆ ಸಿಗಬೇಕು ಎನ್ನುವ ಸದುದ್ದೇಶದಿಂದಲೇ ಮೂರು ದಶಕಗಳ ಹಿಂದೆ ರಾಜ್ಯದಲ್ಲಿ ಪಂಚಾಯತ್‌ರಾಜ್‌ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.

ಅಧಿಕಾರ ವಿಕೇಂದ್ರೀಕರಣದಿಂದಾಗಿ ಬಂದಿರುವ ಜಿಲ್ಲಾ ಪಂಚಾಯಿತಿ ಉತ್ತಮವಾದದು. ಈ ವ್ಯವಸ್ಥೆಗೆ ಪ್ರಾಮಾಣಿಕರು, ಬದ್ಧತೆ ಇರುವವರು, ಕನಸುಗಳನ್ನು ಹೊಂದಿರುವವರು ಬಂದರೆ ಬದಲಾವಣೆ ಸಾಧ್ಯ. ಒಂದು ವೇಳೆ ಅಪ್ರಾಮಾಣಿಕರು, ಭ್ರಷ್ಟರು, ಸಂಪತ್ತನ್ನು ವೃದ್ಧಿ ಮಾಡಿಕೊಳ್ಳುವವರ ಕೈಗೆ ಅಧಿಕಾರ ನೀಡಿದರೆ ಅಪಾಯ ತಪ್ಪಿದಲ್ಲ.

ನನಗೆ ಚೆನ್ನಾಗಿ ಗೊತ್ತಿರುವ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರೊಬ್ಬರು ಹೇಳುತ್ತಿದ್ದರು: ‘ಯಾವುದಾದರೂ ಕಾಮಗಾರಿಗೆ ಗುದ್ದಲಿಪೂಜೆ ನಡೆಯಿತು ಎಂದರೆ ಸಂಬಂಧಿಸಿದ ಸದಸ್ಯರ ಜೇಬಿಗೆ ಕಮಿಷನ್‌ ಹಣ ಹೋಗಿದೆ ಎಂದರ್ಥ. ಹೆಚ್ಚಿನ ಸದಸ್ಯರ ಬಳಿ ಭ್ರಷ್ಟ ಅಧಿಕಾರಿಗಳ ಮೊಬೈಲ್‌ ನಂಬರ್‌ ಇರುತ್ತದೆ. ಏಕೆಂದರೆ ಅವರು ಇವರಿಗೆ ಕಾಮಧೇನು’ ಎಂದು ನಕ್ಕರು.

‘ಅರ್ಧ ಕೋಟಿ, ಒಂದು ಕೋಟಿ ಖರ್ಚು ಮಾಡಿ ಗೆಲ್ಲುವವರು ಅಷ್ಟು ಹಣವನ್ನು ಸಂಪಾದಿಸಲು ಸಾಧ್ಯವೇ?’ ಕುತೂಹಲದಿಂದ ಕೇಳಿದೆ. ‘ಖಂಡಿತ ಸಾಧ್ಯವಿಲ್ಲ. ಆದರೆ, ಹಣ ಖರ್ಚು ಮಾಡಿದವರು ಅದನ್ನು ದುಪ್ಪಟ್ಟು ಗಳಿಸುವುದು ಹೇಗೆ ಎನ್ನುವ ಕುರಿತಾಗಿಯೇ ವಿಚಾರ ಮಾಡುತ್ತಿರುತ್ತಾರೆ. ವಾಮಮಾರ್ಗಗಳನ್ನು ಕಂಡು ಹಿಡಿಯುತ್ತಾರೆ. ಎಷ್ಟೋ ವೇಳೆ ಕಾಮಗಾರಿಗಳು ಕಾಗದದ ಮೇಲಷ್ಟೇ ಇರುತ್ತವೆ. ಅನುದಾನ ಅಧಿಕಾರಿಗಳು ಮತ್ತು ಸದಸ್ಯರ ಅಕೌಂಟ್‌ಗೆ ಜಮಾ ಆಗಿರುತ್ತದೆ’ ಎಂದು ಹೇಳಿದರು.

ಪ್ರಜಾಪ್ರಭುತ್ವ ಮತ್ತು ಆಡಳಿತ ವ್ಯವಸ್ಥೆ ಕೆಟ್ಟ ಜನಪ್ರತಿನಿಧಿಗಳು ಮತ್ತು ಭ್ರಷ್ಟ ಅಧಿಕಾರಿಗಳ ಹೊಂದಾಣಿಕೆಯ ಕೂಟವಾದರೆ ಆಗುವುದು ಹೀಗೆಯೆ.
ಮತದಾರರು ಎಂಥವರನ್ನು ಆಯ್ಕೆ ಮಾಡುತ್ತಾರೆ ಎನ್ನುವುದರ ಮೇಲೆ ಒಳ್ಳೆಯ ಅಥವಾ ಕೆಟ್ಟ ಆಡಳಿತ ನಿರ್ಧಾರವಾಗುತ್ತದೆ.
ಜನರ ಸೇವೆ ಮಾಡುತ್ತೇವೆ ಎಂದು ಹೇಳುವವರು ನೀರಿನಂತೆ ಹಣ ಚೆಲ್ಲಿದರೆ ಅವರ ಉದ್ದೇಶ ಪ್ರಾಮಾಣಿಕವಾಗಿ ಇರುವುದಿಲ್ಲ. ಅದನ್ನು ‘ಬಂಡವಾಳ’ ಎಂದೇ ಪರಿಗಣಿಸುತ್ತಾರೆ. ಇಂಥವರಿಗೆ ‘ರಾಜಕೀಯ’ ಕೂಡ ಹಣ ‘ಹೂಡುವ’ ಮತ್ತು ‘ಲಾಭ’ ಗಳಿಸುವ ‘ಉದ್ಯಮ’ದಂತೆಯೇ ಕಾಣಿಸುತ್ತದೆ.
ಅವರಿಗೆ ತಮ್ಮನ್ನು ಆಯ್ಕೆ ಮಾಡಿದ ಮತದಾರರ ಬಗ್ಗೆ ಅಕ್ಕರೆ, ಗೌರವ, ಕಾಳಜಿ ಖಂಡಿತ ಇರುವುದಿಲ್ಲ. ಏಕೆಂದರೆ ತಾವು ಗೆದ್ದಿದ್ದೇ ಹಣ ಬಲದಿಂದ ಎಂದು ನಂಬಿಕೊಂಡಿರುತ್ತಾರೆ.

ಇವುಗಳ ನಡುವೆಯೂ ಮತದಾರರ ಬಗ್ಗೆ ಅಭಿಮಾನ ಪಡುವಂತಹ ಸಕಾರಾತ್ಮಕ ಬದಲಾವಣೆಗಳು ಇದೇ ವ್ಯವಸ್ಥೆಯಲ್ಲಿ ನಡೆದಿರುವುದು ಗಮನಾರ್ಹ.
ಎಂಬತ್ತರ ದಶಕದಲ್ಲಿ ರೈತ ಚಳವಳಿ ಉತ್ತುಂಗದಲ್ಲಿತ್ತು. ರೈತಸಂಘ ಚುನಾವಣಾ ರಾಜಕೀಯಕ್ಕೆ ಇಳಿಯಬೇಕು ಎನ್ನುವ ಉದ್ದೇಶದಿಂದ ಮೊದಲ ಬಾರಿಗೆ ಮಂಡ್ಯ ಸಮೀಪದ ಬೂದನೂರು ಜಿಲ್ಲಾ ಪರಿಷತ್‌ ಕ್ಷೇತ್ರದಲ್ಲಿ ‘ಪ್ರಯೋಗ’ಕ್ಕೆ ಮುಂದಾಯಿತು. ಕೆ.ಬೋರಯ್ಯ ಅವರನ್ನು ‘ಮತದಾರರ ಅಭ್ಯರ್ಥಿ’ಯನ್ನಾಗಿ ಕಣಕ್ಕೆ ಇಳಿಸಿತು. ಇವರ ಎದುರಾಳಿಯಾಗಿದ್ದ ಜನತಾ ಪಕ್ಷದ ಅಭ್ಯರ್ಥಿ ಹಣಕಾಸಿನಲ್ಲಿ ಪ್ರಬಲರಾಗಿದ್ದರು. ರೈತಸಂಘದ ಕಾರ್ಯಕರ್ತರು ಸ್ವಾಭಿಮಾನದ ಮತವನ್ನು ಕೊಡುವಂತೆ ಕೋರಿದರು. ಮತದಾರರು ‘ಓಟು’ ಮತ್ತು ‘ನೋಟು’ ಎರಡನ್ನೂ ನೀಡಿದರು. ಬೋರಯ್ಯ ಅಭೂತಪೂರ್ವವಾಗಿಯೇ ಜಯಿಸಿದರು.

ಮದ್ದೂರು ತಾಲ್ಲೂಕು ಚಾಮನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಸಂಬಂಧಿ ವಿರುದ್ಧ ರೈತ ನಾಯಕಿ ಸುನಂದಾ ಜಯರಾಂ, ಕ್ಯಾತನಹಳ್ಳಿ ಕ್ಷೇತ್ರ (ರೈತ ನಾಯಕ ಕೆ.ಎಸ್‌.ಪುಟ್ಟಣ್ಣಯ್ಯನವರ ಊರು)ದಿಂದ ಕೆ.ಟಿ.ಗೋವಿಂದೇಗೌಡ ದಿಗ್ವಿಜಯ ಸಾಧಿಸಿದರು. ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕು ಶಿರೋಳ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಹಣಬಲ ಮತ್ತು ತೋಳ್ಬಲ ಇದ್ದವರ ವಿರುದ್ಧ ರೈತ ಮುಖಂಡ ರಮೇಶ್‌ ಗಡದಣ್ಣವರ್‌ ಸ್ಪರ್ಧಿಸಿದರು. ರೈತಸಂಘದ ಕಾರ್ಯಕರ್ತರು ‘ಒಂದು ರೊಟ್ಟಿ, ಒಂದು ರೂಪಾಯಿ’ ಎನ್ನುವ ಘೋಷಣೆಯೊಂದಿಗೆ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದರು. ಗಡದಣ್ಣವರ್‌ ಗೆದ್ದರು. ಇವರೆಲ್ಲರದೂ ಮತದಾರರ ಗೆಲುವು; ಬದ್ಧತೆಯ ಗೆಲುವು.

ಇವರು ಜಿಲ್ಲಾ ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಒಂಟಿಯಾದರೂ ಬಹುಧ್ವನಿಯನ್ನು ಮೀರಿಸುವ ಹಾಗೆ ಜನರ ಸಮಸ್ಯೆಗಳನ್ನು ಮಂಡಿಸುವಲ್ಲಿ ಯಶಸ್ವಿಯಾದರು.

ಮತದಾರರು ಪಕ್ಷ, ಹಣ, ಜಾತಿ, ಇತ್ಯಾದಿ ಆಮಿಷಗಳನ್ನು ಬದಿಗಿರಿಸಬೇಕು. ಕೆಲಸ ಮಾಡುವವರನ್ನು ಮಾತ್ರ ಆಯ್ಕೆ ಮಾಡಬೇಕು. ಏಕೆಂದರೆ ಪ್ರಜಾಪ್ರಭುತ್ವದ ಬುನಾದಿ ಅಧಿಕಾರ ವಿಕೇಂದ್ರೀಕರಣ. ಜನರೇ ಭಾಗವಹಿಸಬಹುದಾದ, ಆಡಳಿತದಲ್ಲಿ ಪಾಲ್ಗೊಳ್ಳಬಹುದಾದ ವ್ಯವಸ್ಥೆ. ಇದು ಅಡ್ಡದಾರಿ ಹಿಡಿಯಲು ಬಿಟ್ಟರೆ ಪ್ರಜಾಪ್ರಭುತ್ವ ವೃತ್ತಿಪರ ರಾಜಕಾರಣಿಗಳು, ಹಣವಂತರು, ಅಧಿಕಾರದಾಹಿಗಳು ಮತ್ತು ಸಂಪತ್ತಿನ ಮೋಹಿಗಳ ವಶವಾಗುತ್ತದೆ. ಪ್ರಜಾಪ್ರಭುತ್ವದ ಆಶಯಕ್ಕೆ ಸೋಲಾಗುತ್ತದೆ.

ಇಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ನಡೆದ ಘಟನೆಯೊಂದು ನೆನಪಾಗುತ್ತದೆ.

ಅಭ್ಯರ್ಥಿಯೊಬ್ಬರ ಬೆಂಬಲಿಗರು ಮತದಾರರ ಮನೆಗಳಿಗೆ ಹಣ ಮತ್ತು ಮಾಂಸವನ್ನು ತಲುಪಿಸಿದರು. ಆ ಬೀದಿಯಲ್ಲಿ ಹಲವರು ಅದನ್ನು ‘ಒಪ್ಪಿಸಿ’ಕೊಂಡರು. ಆದರೆ ಮಹಿಳೆಯೊಬ್ಬರು ತಿರಸ್ಕರಿಸಿದರು. ಆದರೂ ಅಭ್ಯರ್ಥಿ ಬೆಂಬಲಿಗರು ಹಣ ಮತ್ತು ಮಾಂಸವನ್ನು ಬಲವಂತವಾಗಿ ಮನೆಯಲ್ಲಿ ಇಟ್ಟು ಹೋದರು. ಇದರಿಂದ ಕೆರಳಿದ ಆ ಮಹಿಳೆ ಹಣ ಮತ್ತು ಮಾಂಸವನ್ನು ತಂದು ಬೀದಿಗೆ ಬಿಸಾಡಿ ‘ನಾನು ಹಣ ಮತ್ತು ಮಾಂಸಕ್ಕಾಗಿ ಸ್ವಾಭಿಮಾನವನ್ನು ಮಾರಿಕೊಳ್ಳಲಾರೆ’ ಎಂದು ಗುಡುಗಿದರು.

ರಾಜಕೀಯ ಪಕ್ಷಗಳು ಜನರು ಬೇಡುವುದನ್ನು ಕಲಿಸುತ್ತವೆ. ಈ ಮೂಲಕ ಮತದಾರರನ್ನು ಸ್ವಾಭಿಮಾನಹೀನರನ್ನಾಗಿಸಿ ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುತ್ತವೆ. ಹೀಗಾಗಿ ಏನೇನೋ ಆಮಿಷಗಳನ್ನು ತಿರಸ್ಕರಿಸುವ ‘ದೊಡ್ಡ ಗುಣ’ ಮತದಾರರಿಗೆ ಬಂದರೆ ಹಣ ಬಲದಿಂದಲೇ ರಾಜಕೀಯ ಮಾಡುವವರು ಪಕ್ಕಕ್ಕೆ ಸರಿದು ನಿಲ್ಲುವುದು ಅನಿವಾರ್ಯವಾಗುತ್ತದೆ. ಪ್ರಾಮಾಣಿಕರು, ಕಾಳಜಿಯುಳ್ಳ ಜನಸಾಮಾನ್ಯರಿಗೆ ದಾರಿ ಸಿಗುತ್ತದೆ.

ಇವೆಲ್ಲ ಕಾರಣದಿಂದಾಗಿ ಮತದಾರರದು ಜಾಗೃತಿಯ ಆಯ್ಕೆಯಾಗಬೇಕು. ಪ್ರಜಾಪ್ರಭುತ್ವದ ಉಳಿವು ಮತ್ತು ಸಬಲತೆಯ ಆಯ್ಕೆಯಾಗಬೇಕು. ಪ್ರಜೆಗಳ ನಾಡಿಮಿಡಿತವನ್ನು ಅರಿತವರ ಆಯ್ಕೆಯಾಗಬೇಕು. ಇವುಗಳನ್ನು ನಿಜವಾಗಿಸುವ ನೈತಿಕತೆ ಪ್ರಜ್ಞಾವಂತ ಮತದಾರರ ಮೇಲಿದೆ. ಇಂಥ ಮಹತ್ವದ ನಿರ್ಧಾರವನ್ನು ಕೈಗೊಳ್ಳಲು ದೃಢ ಮನಸ್ಸು ಹಾಗೂ ಭವಿಷ್ಯದ ಜನಾಂಗದ ಬಗೆಗೆ ಸುಂದರ ಕನಸುಗಳು ಇರಬೇಕಾಗುತ್ತದೆ.